ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vinayaka M Bhat Column: ಸನ್ಯಾಸಿಯಷ್ಟೇ ಆತನ ಜನ್ಮದಾತರ ತ್ಯಾಗವೂ ದೊಡ್ಡದು

ವಾಸ್ತವವಾಗಿ, ಈ ಕೆಲಸವನ್ನು ನಾವು ಸಮಾಜ ಬಾಂಧವರು ಮಾಡಬೇಕಾಗಿತ್ತು, ಬದಲಿಗೆ ಸ್ವಾಮೀಜಿಯವರು ಮಾಡುವ ಮೂಲಕ ನಮಗೆ ಮುಜುಗುರವಾಗುವಂತಾಯ್ತು, ಆಗಿದ್ದು ಆಗಿ ಹೋಯ್ತು. ಆದರೆ ಇನ್ನು ಮುಂದೆ ಇದು ನಮ್ಮ ಕೆಲಸವಾಗಲಿದೆ ಎನ್ನುವ ಮಾತನ್ನು ಲಿಂಬಾವಳಿಯವರು ಆಡಿದರು.

ವಿದ್ಯಮಾನ

ಯತಿಯಾಗಿ ಶಂಕರರು ನಡೆದು ತೋರಿಸಿದ ‘ತಾಯಿಗಿಂತ ಹೆಚ್ಚು ಯಾವುದೂ ಇಲ್ಲ’ ಎನ್ನುವ ಕ್ರಾಂತಿಕಾರಿ ಹೆಜ್ಜೆ ಆದರ್ಶವಾಗಿದೆ. ಪ್ರಾಯಶಃ ಅಲ್ಲಿಂದ ಮುಂದೆ ಯತಿ ಯಾದವನು ತಾಯಿಗೆ ಮಾತ್ರ ನಮಸ್ಕರಿಸಬಹುದು, ತಾಯಿಯ ಸೇವೆ ಮಾಡಬಹುದು ಎನ್ನುವ ರಿಯಾಯಿತಿ ದೊರೆತಿರಲಿಕ್ಕೆ ಸಾಕು. ಈಗ ಶಂಕರ, ಮಧ್ವ ಹಾಗೂ ರಾಮಾನುಜ ಸಂಪ್ರದಾಯಗಳಲ್ಲೂ ತಾಯಿಯಾದವಳು ಯತಿಯೊಬ್ಬ ರಿಂದ ನಮಸ್ಕಾರಕ್ಕೆ ಅರ್ಹಳು ಎನ್ನುವುದು ಸ್ವೀಕಾರಾರ್ಹ.

ಕೆಲವೊಮ್ಮೆ ಸಮಾಜದಲ್ಲಿ ಜರುಗುವ ಅತ್ಯಂತ ಮೌಲ್ಯಯುತವಾದ ವಿಷಯಗಳು ಸುದ್ದಿಯಾಗುವುದೇ ಇಲ್ಲ, ಹಾಗೆ ನೋಡಿದರೆ ಇಂಥಾ ಮೌಲ್ಯಯುತವಾದ ಸುದ್ದಿ ಗಳಿಂದಲೇ ಸಮಾಜದಲ್ಲಿ ಪರಿವರ್ತನೆಯನ್ನು ನಿರೀಕ್ಷೆ ಮಾಡಲು ಸಾಧ್ಯ ಕೂಡಾ. ಮೊನ್ನೆ ದಾವಣಗೆರೆಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿಯವರು ಒಂದು ಮಾತು ಹೇಳುತ್ತಾರೆ, ಎಲ್ಲ ಮಠಾಧೀಶರ/ಸನ್ಯಾಸಿಗಳ ಪೂರ್ವಾಶ್ರಮದ ತಂದೆ-ತಾಯಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದು, ಅಂದರೆ ಸಮಾಜದ್ದು ಎನ್ನುತ್ತಾರೆ.

ಇದು ಅತ್ಯಂತ ಅದ್ಭುತ ಪರಿಕಲ್ಪನೆ. ಈ ಸುದ್ದಿ ಎಷ್ಟು ಜನಜನಿತವಾಗಬೇಕಿತ್ತೋ ಅಷ್ಟು ಆಗಲೇ ಇಲ್ಲ. ಕುಂಚಿಟಿಗ ಸಮೂದಾಯದ ವತಿಯಿಂದ ಭೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ಪೂರ್ವಾಶ್ರಮದ ಪಾಲಕರಿಗೆ ಕುಟೀರ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಇತರ ಸ್ವಾಮೀಜಿಯವರ ಜತೆ ಭಾಗವಹಿಸಿ ಮಾತನಾಡು ತ್ತಿದ್ದರು.

ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಯಾವುದೇ ಪೀಠಾಧಿ ಪತಿಗಳ ಪೂರ್ವಾಶ್ರಮದವರು ಅನುಕೂಲವಂತರಾದರೂ ಗುರು ಪೀಠಕ್ಕೆ ಅಪವಾದ ತಪ್ಪಿದ್ದಲ್ಲ, ಹಾಗಾಗಿಯೇ ಸಾರ್ವಜನಿಕವಾಗಿ ದೊಡ್ಡ ಕಾರ್ಯಕ್ರಮದ ಮೂಲಕ ಪಾರ ದರ್ಶಕವಾಗಿ ಈ ಕುಟೀರ ಸಮರ್ಪಣೆಯ ಕೆಲಸ ಮಾಡುತ್ತಿದ್ದೇವೆ ಎಂದರು. ಎಲ್ಲವನ್ನೂ ತ್ಯಾಗ ಮಾಡಿ ಜೀವನವನ್ನು ಸಮೂದಾಯಕ್ಕೆ ಮುಡಿಪಾಗಿಟ್ಟ ಸ್ವಾಮೀಜಿಗಳ ಪೂರ್ವಾ ಶ್ರಮದ ಪಾಲಕರಿಗೆ ಮನೆ ನೀಡಿರುವ ಕಾರ್ಯ ಸ್ತುತ್ಯರ್ಹ ಎಂದು ಪತ್ರಕರ್ತ ರವಿ ಹೆಗಡೆಯವರು ಮಾತನಾಡಿದರು.

ಇದನ್ನೂ ಓದಿ: Vinayaka M Bhat Column: ಕರುಣಾಶರಧಿ ಶ್ರೀ ರಾಮಾನಂದ ಅವಧೂತರು

ವಾಸ್ತವವಾಗಿ, ಈ ಕೆಲಸವನ್ನು ನಾವು ಸಮಾಜ ಬಾಂಧವರು ಮಾಡಬೇಕಾಗಿತ್ತು, ಬದಲಿಗೆ ಸ್ವಾಮೀಜಿಯವರು ಮಾಡುವ ಮೂಲಕ ನಮಗೆ ಮುಜುಗುರವಾಗುವಂತಾಯ್ತು, ಆಗಿದ್ದು ಆಗಿ ಹೋಯ್ತು. ಆದರೆ ಇನ್ನು ಮುಂದೆ ಇದು ನಮ್ಮ ಕೆಲಸವಾಗಲಿದೆ ಎನ್ನುವ ಮಾತನ್ನು ಲಿಂಬಾವಳಿಯವರು ಆಡಿದರು.

ರಾಜಕಾರಣಿಗಳಾದರೂ ಒಮ್ಮೊಮ್ಮೆ ಇಂಥಾ ಒಳ್ಳೊಳ್ಳೆ ಮಾತನಾಡುವುದು ಅಥವಾ ಕೆಲಸ ಮಾಡುವುದಿದೆ, ಹಿಂದೆ ಕೋವಿಡ್ ಸಂದರ್ಭದಲ್ಲಿ ಮೃತರಾದ ಅನಾಥರುಗಳಿಗೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಪಿಂಡಪ್ರದಾನ ಮಾಡಿರುವುದು ನನಗಿನ್ನೂ ನೆಪಿನಲ್ಲಿದೆ. ಇಂಥವರು ಇವೆಲ್ಲವನ್ನೂ ಕೇವಲ ವೋಟಿಗಾಗಿ ಮಾಡುತ್ತಾರೆ ಎಂದು ನನಗಂತೂ ಅನ್ನಿಸುವುದಿಲ್ಲ.

ಇರಲಿ, ವ್ಯಕ್ತಿಗತವಾದ ಜೀವನವನ್ನು ತ್ಯಾಗಮಾಡಿ ಆಧ್ಯಾತ್ಮಿಕವಾಗಿ ಸಮಾಜದ ಆರೋಗ್ಯ ಕಾಪಾಡುತ್ತಿರುವ ಸಂತ ಸನ್ಯಾಸಿಗಳ ಪಾಲಕರನ್ನು ಸಮಾಜ ನೋಡಿಕೊಳ್ಳಬೇಕು ಎನ್ನುವ ಕಲ್ಪನೆಯೇ ಅದ್ಭುತ ಹಾಗೂ ಸರ್ವಸಮಂಜಸವೂ ಆಗಿದೆ. ನನ್ನ ಪ್ರಕಾರ ಅರವಿಂದ ಲಿಂಬಾವಳಿಯವರು ಅಭಿನಂದನಾರ್ಹರು.

ಸಮುದಾಯ ಯಾವುದೇ ಇರಲಿ, ಸನ್ಯಾಸ ಎನ್ನುವುದು ಸುಲಭದ ಮಾರ್ಗವಲ್ಲ. ಸನ್ಯಾಸ ಸ್ವೀಕರಿಸುವವರು ತಮ್ಮ ಪೂರ್ವ ಸಂಬಂಧಗಳನ್ನೆಲ್ಲ ತೊರೆದು, ನಾಮರೂಪಗಳಿಂದ ಕೂಡಿರುವ ತನ್ನತನವನ್ನೂ ಬಿಟ್ಟು ಆತ್ಮಶ್ರಾದ್ಧ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ, ಸತ್ತ ನಂತರ ಮಕ್ಕಳು ಮಾಡಬೇಕಾದ ಉತ್ತರ ಕ್ರಿಯಾದಿ ಕರ್ಮಗಳನ್ನು ತನಗೆ ತಾನೇ ಮಾಡಿ ಕೊಳ್ಳುವ ಕೆಲಸವದು.

ತನಗೆ ತಾನೇ ಅಂತ್ಯಸಂಸ್ಕಾರ ಮಾಡಿಕೊಳ್ಳುವ ಮೂಲಕ, ತನ್ನ ಜನ್ಮ ಸಂಬಂಧಿಯಾದ ಎಲ್ಲವನ್ನೂ ಕಡಿದು ಕೊಳ್ಳುವ ಅತ್ಯಂತ ಅಪರೂಪದ ಪದ್ಧತಿ ಇದು. ಭಾರತೀಯ ಮೂಲದ ಜೈನ ಹಾಗೂ ಬೌದ್ಧ ಧರ್ಮಗಳನ್ನು ಹೊರತುಪಡಿಸಿ ಇನ್ನಾವ ಧರ್ಮ ದಲ್ಲಿಯೂ ಈ ಮಟ್ಟದ ತ್ಯಾಗದ ಪರಿಕಲ್ಪನೆ ಇದ್ದ ಹಾಗಿಲ್ಲ.

Screenshot_5

ಸನ್ಯಾಸ ದೀಕ್ಷೆಯ ನಂತರ ಗುರುಗಳಾದವರು ಹೊಸ ಹೆಸರಿನಿಂದ ಅವರನ್ನು ಸಮಾಜಕ್ಕೆ ಪರಿಚಯಿಸಬೇಕಾಗುತ್ತದೆ. ಅದಕ್ಕಾಗಿಯೇ, ದೀಕ್ಷೆ ಕೊಡುವ ಸಂದರ್ಭವನ್ನು ಹೊಸ ಸನ್ಯಾಸಿಗೆ ಪುನರ್‌ ಜನ್ಮವೆಂತಲೂ ಹಾಗೂ ಅಂಥಾ ಶಿಷ್ಯರನ್ನು ಇಂಥವರ ಮಗ ಎಂದು ಗುರುತಿಸದೇ, ಇಂಥಾ ಗುರುಗಳ ಕರಕಮಲ ಸಂಜಾತರು, ಶಿಷ್ಯರು ಎನ್ನುವುದು.

ಅಲ್ಲಿಂದ ಮುಂದೆ ಆತನಿಗೆ ದೀಕ್ಷೆ ಕೊಟ್ಟ ಗುರುಗಳೇ ತಂದೆಯೂ ತಾಯಿಯೂ ಆಗಿರು ತ್ತಾನೆ. ಸನ್ಯಾಸ ದೀಕ್ಷೆಯ ಸಂದರ್ಭದಲ್ಲಿ ಸನ್ಯಾಸ ಸ್ವೀಕಾರ ಮಾಡಬೇಕಾದವನು ಉಟ್ಟ ಬಟ್ಟೆಯನ್ನೂ ಜಲಮೂಲದಲ್ಲಿ ತ್ಯಾಗಮಾಡಿ ಮೇಲೆದ್ದು ಬರೇಕಾಗುತ್ತೆ, ಆಮೇಲೆ ಆತನ ಗುರುಗಳು ಕೊಡುವ ಹೊಸ ಕಾಶಾಯ ಅಂದರೆ ಕಾವಿ ವಸ್ತ್ರವನ್ನು ಮಾತ್ರ ಧರಿಸ ಬೇಕಾಗುತ್ತದೆ. ಈ ಕಾಶಾಯ ವಸ್ತ್ರವನ್ನು ಹೊರತು ಪಡಿಸಿದರೆ ಆತನ ಆಸ್ತಿಯೆಂದರೆ ಅದು ದಂಡ ಹಾಗೂ ಕಮಂಡಲು ಮಾತ್ರವಾಗಿರುತ್ತದೆ.

ಗೃಹಸ್ಥಾಶ್ರಮಿಗಳು ಭಿಕ್ಷ ನೀಡಿದರೆ ಆಹಾರ, ಇಲ್ಲವಾದರೆ ಇಲ್ಲ. ಸನ್ಯಾಸಿಗಳಿಗೆ ಆಹಾರ ವಿಹಾರಗಳನ್ನೂ ಸೇರಿ ಎಲ್ಲದಕ್ಕೂ ಇನ್ನಿಲ್ಲದ ನಿಯಮಗಳಿವೆ. ಆತ ಜೀವನ ಪೂರ್ತಿ ಊರ್ಧ್ವರೇತಸ್ಕನಾಗಿದ್ದುಕೊಂಡು ಕಷ್ಟದ ಬ್ರಹ್ಮಚರ್ಯವನ್ನು ಪಾಲನೆ ಮಾಡಬೇಕಾಗು ತ್ತದೆ.

ಇನ್ನು ಪೂರ್ವಾಶ್ರಮದ, ಅಂದರೆ ತಮ್ಮ ತಾಯಿ-ತಂದೆಯರ ಅಥವಾ ಮೂಲ ಸಂಬಂಧಿಕ ರನ್ನೂ ಶಿಷ್ಯ-ಭಕ್ತರುಗಳನ್ನಾಗಿ ಮಾತ್ರ ನೋಡಬಹುದೇ ವಿನಃ, ಅವರ ಕುರಿತು ಪಕ್ಷಪಾತ ಧೋರಣೆಯನ್ನು ತಾಳುವ ಹಾಗಿಲ್ಲ. ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ಪ್ರಸಿದ್ಧ ಮಠವೊಂದರಲ್ಲಿ, ಅಲ್ಲಿನ ಕಿರಿಯ ಸ್ವಾಮೀಜಿಗಳು ಮಠಕ್ಕೆ ಬಂದವರಲ್ಲಿ ತಮ್ಮ ಪೂರ್ವಾ ಶ್ರಮದವರ ಯೋಗಕ್ಷೇಮವನ್ನು ವಿಚಾರಿಸಿದರು ಎನ್ನುವ ಒಂದೇ ಕಾರಣಕ್ಕೆ ಹಿರಿಯ ಸ್ವಾಮೀಜಿಗಳು ಅವರನ್ನು ತಮ್ಮ ಉತ್ತರಾಧಿಕಾರತ್ವದಿಂದ ಪದಚ್ಯುತಗೊಳಿಸುವ ಮಟ್ಟಕ್ಕೂ ಬಂದಿತ್ತು ಎನ್ನುವುದನ್ನು ನೆನಪು ಮಾಡಿಕೊಳ್ಳಬಹುದು. ಈಗೆಲ್ಲ ದೊಡ್ಡ ದೊಡ್ಡ ಮಠಮಾನ್ಯಗಳಲ್ಲಿ ಅಲ್ಲಿನ ಪೀಠಾಧಿಪತಿಗಳ ಹತ್ತಿರದ ಸಂಬಂಧಿಕರೇ ಮಠದ ಪಾರುಪತ್ಯ ನಡೆಸುತ್ತಿದ್ದಾರೆ ಎನ್ನುವುದು ಅಪವಾದವಷ್ಟೇ.

ಶಂಕರಾಚಾರ್ಯ ಪರಂಪರೆಯ ಯತಿಗಳಿಗಂತೂ ಮಠಾಮಾನ್ಯ ಎನ್ನುವ ಕಟ್ಟುನಿಟ್ಟಾದ ನೀತಿ-ನಿಯಮಗಳ ಸಂಗ್ರಹವನ್ನೇ ಭಗವತ್ಪಾದರು ರಚಿಸಿ ಇಟ್ಟಿದ್ದಾರಂತೆ. ಹಾಗೆ ಒಂದೊಂದು ಸಂಪ್ರದಾಯದ ಮಠಗಳಿಗೆ ಒಂದೊಂದು ನಿಯಮವಿರಲಿಕ್ಕೆ ಸಾಕು. ಒಂದು ಹೊತ್ತಿನ ಭಿಕ್ಷಾನ್ನ (ಭಿಕ್ಷೌಷಧಂ ಭುಜ್ಯತಾಂ- ಔಷಧಿಯ ಪ್ರಮಾಣದ ಆಹಾರ), ಅಧ್ಯ ಯನ-ಅಧ್ಯಾಪನ, ಧರ್ಮಪ್ರಸಾರ, ಸನಾತನ ವೇದ ಸಂಸ್ಕೃತಿಯ ರಕ್ಷಣೆ, ಜಾತಿಮತಗಳನ್ನು ಮೀರಿ ನಿಂತು, ಭೇದ-ಭಾವವೆಣಿಸದೇ ಎಲ್ಲರಲ್ಲೂ ಸಮಭಾವ ಹೊಂದಿರುವುದು ಇವೆಲ್ಲ ಒಬ್ಬ ಯತಿಯಾದವನಿಗೆ ಕರ್ತವ್ಯವೆಂದು ಹೇಳಲಾಗಿದೆ.

ಯತಿಯ ಧರ್ಮಕ್ಕಿಂತ ತಾಯಿ ದೊಡ್ದವಳು ಎನ್ನುವುದನ್ನು ಸಾರುವ ಶಂಕರರು ತಮ್ಮ ತಾಯಿಯ ಅಂತ್ಯಸಂಸ್ಕಾರದ ಸಮಯದಲ್ಲಿ ಸಮಾಜದಿಂದ ಅನುಭವಿಸಿದ ಕೋಟಲೆ ಗಳನ್ನು ನಾವು ಕೇಳಿಯೇ ಇದ್ದೇವೆ. ಒಂದು ದಿನ ಶಂಕರರು ಪೂರ್ಣಾನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ, ಮೊಸಳೆ ಅವರ ಕಾಲನ್ನು ಹಿಡಿದು ಎಳೆದುಕೊಂಡು ಹೋಗಲು ಪ್ರಾರಂಭಿಸಿತು. ಅವರು ತನ್ನ ತಾಯಿಯನ್ನು ಬೇಡಿಕೊಂಡು ಸನ್ಯಾಸತ್ವಕ್ಕೆ ಅನುಮತಿ ಯಿತ್ತು ಪುನರ್‌ಜನ್ಮವಾದರೆ ಮೊಸಳೆ ತನ್ನನ್ನು ಬಿಡಬಹುದು ಹಾಗಾಗಿ ಅನುಮತಿ ನೀಡುವಂತೆ ಬೇಡಿಕೊಂಡರು.

ಸನ್ಯಾಸಿಯಾದರೂ ಸಹ, ಕನಿಷ್ಠ ತನ್ನ ಮಗನನ್ನು ಜೀವಂತವಾಗಿ ಉಳಿಸಿಕೊಂಡಿರುವ ತೃಪ್ತಿ ತನಗೆ ಇರುತ್ತದೆ ಎಂದು ಆರ್ಯಾಂಬೆ ಭಾವಿಸಿದಳು. ಮತ್ತೊಂದೆಡೆ, ಮೊಸಳೆ ತನ್ನ ಮಗನನ್ನು ಬಿಡುಗಡೆ ಮಾಡದಿದ್ದರೆ, ತನ್ನ ಮಗ ತನ್ನ ದೇಹವನ್ನು ತಪಸ್ವಿಯಾಗಿ ಯಾದರೂ ತ್ಯಜಿಸುತ್ತಾನೆ ಎಂಬ ಅಂಶದಿಂದ ಅವಳು ಸಮಾಧಾನಗೊಂಡು ಆರ್ಯಾಂಬೆ ಶಂಕರರ ಕೋರಿಕೆಗೆ ಸಮ್ಮತಿಸಿದಳು.

ಮೊಸಳೆ ಶಂಕರನ ಮೇಲಿನ ತನ್ನ ಹಿಡಿತವನ್ನು ಸಡಿಲ ಮಾಡಿತು. ಶಂಕರರು ಈಗ ಸನ್ಯಾಸ ನನ್ನು ಅಪ್ಪಿಕೊಳ್ಳಲು ಮುಕ್ತನಾದರು ಮತ್ತು ಅವರ ತಾಯಿಯನ್ನು ಅವನ ಸಂಬಂಧಿಕರ ಆರೈಕೆಗೆ ಒಪ್ಪಿಸಿದನು. ಶಂಕರರ ನಿರ್ಧಾರದಿಂದ ಇನ್ನೂ ದುಃಖಿಸುತ್ತಿದ್ದ ಆರ್ಯಾಂಬೆ, ಶಂಕರರ ಕೋರಿಕೆಯ ಮೇರೆಗೆ ತನ್ನ ಒಪ್ಪಿಗೆ ಸನ್ಯಾಸ ಸ್ವೀಕರಿಸಲು ಮಾತ್ರ, ಆದರೆ ಸಂಬಂಧಿಕರು ಅವಳ ಅಂತ್ಯಕ್ರಿಯೆಗಳನ್ನು ಮಾಡಲು ಅನುಮತಿಸುವುದಿಲ್ಲ ಎಂದು ಹೇಳಿದಳು.

ಆದ್ದರಿಂದ, ತನ್ನ ತಾಯಿಯನ್ನು ಸಮಾಧಾನಪಡಿಸುವ ಸಲುವಾಗಿ, ಶಂಕರರು ತಾಯಿ! ನೀನು ನನ್ನ ಬಗ್ಗೆ ಯೋಚಿಸುವಾಗ, ನನ್ನ ಎಲ್ಲ ಕೆಲಸಗಳನ್ನು ತ್ಯಜಿಸಿ ನಿನ್ನ ಬಳಿಗೆ ಬರುತ್ತೇನೆ, ನೀನು ಹಗಲು, ರಾತ್ರಿ ಅಥವಾ ಅವುಗಳ ನಡುವೆ ನನ್ನ ಬಗ್ಗೆ ಯೋಚಿಸಿದಾಗ ನೀವು ಪ್ರಜ್ಞೆ ಹೊಂದಿದ್ದರೂ, ಪ್ರಜ್ಞಾಹೀನರಾಗಿದ್ದರೂ ನಿನ್ನಲ್ಲಿಗೆ ನಾನು ಬರುತ್ತೇನೆ ಹಾಗೂ ನೀವು ಮರಣಿಸಿದರೆ ನಿಮ್ಮ ಅಂತ್ಯಕ್ರಿಯೆಯನ್ನು ನಾನೇ ಮಾಡುತ್ತೇನೆ ಎಂದು ಭರವಸೆ ನೀಡಿ ಮುನ್ನಡೆದರು.

ಒಂದು ಸಮಯದಲ್ಲಿ ಆಚಾರ್ಯರಿಗೆ ತಮ್ಮ ತಾಯಿ ತನ್ನ ಕೊನೆಯ ದಿನಗಳನ್ನು ಕಳೆಯು ತ್ತಿದ್ದಾಳೆ ಎಂಬ ಅಂತಃಪ್ರಜ್ಞೆ ಬಂದು ತಮ್ಮ ಶಿಷ್ಯರಿಗೆ ತಿಳಿಸಿ ಅವರು ತಕ್ಷಣವೇ ಕಾಲಾಡಿಗೆ ತೆರಳಿದರು. ಅವರು ಸನ್ಯಾಸಿಯಾಗಿದ್ದರೂ, ಅನಾಸಕ್ತಿಗೆ ಹೆಸರುವಾಸಿ ಯಾಗಿದ್ದರೂ, ಅವರ ತಾಯಿಯ ಪಾರ್ಥಿವ ಶರೀರವನ್ನು ನೋಡಿ ಅವರ ಹೃದಯ ಕುಗ್ಗಿತು.

ಆಚಾರ್ಯರು ತಮ್ಮ ನೆರೆಹೊರೆಯವರನ್ನು ಮತ್ತು ಹಿಂದಿನ ಸಂಬಂಧಿಕರನ್ನು ಅಂತ್ಯ ಸಂಸ್ಕಾರಕ್ಕೆ ಸಹಾಯಕ್ಕಾಗಿ ಕರೆದಾಗ, ಅವರು ಅವರನ್ನು ಅವಹೇಳನ ಮಾಡಿದರು, ನೀನೊಬ್ಬ ಸನ್ಯಾಸಿ, ಅಂತಹ ವಿಧಿಗಳನ್ನು ಮಾಡಲು ನಿನಗೆ ಯಾವ ಹಕ್ಕಿದೆ? ಎನ್ನುತ್ತಾ ಮೃತ ದೇಹವನ್ನು ಸುಡಲು ಬೆಂಕಿಯನ್ನು ನೀಡಲು ಸಹ ನಿರಾಕರಿಸಿದರು.

ಅವರ ನಿಲುವಿನಿಂದ ವಿಚಲಿತರಾಗದೆ, ಆಚಾರ್ಯರು ಸ್ವತಃ ತಮ್ಮ ಬಲಗೈಯಿಂದ ಬೆಂಕಿಯನ್ನು ಉತ್ಪಾದಿಸಿ ದಹನ ಕ್ರಿಯೆಯನ್ನು ಪೂರ್ಣಗೊಳಿಸಿದರು ಎಂದು ಮಾಧವೀಯ ಶಂಕರ ದಿಗ್ವಿಜಯ ತಿಳಿಸುತ್ತದೆ. ಯತಿಯಾಗಿಯೂ ಶಂಕರರು ನಡೆದು ತೋರಿಸಿದ ‘ತಾಯಿಗಿಂತ ಹೆಚ್ಚು ಯಾವುದೂ ಇಲ್ಲ’ ಎನ್ನುವ ಕ್ರಾಂತಿಕಾರಿ ಹೆಜ್ಜೆ ಆದರ್ಶ ವಾಯಿತು.

ಪ್ರಾಯಶಃ ಅಲ್ಲಿಂದ ಮುಂದೆ ಯತಿಯಾದವನು ತಾಯಿಗೆ ಮಾತ್ರ ನಮಸ್ಕರಿಸಬಹುದು, ತಾಯಿಯ ಸೇವೆ ಮಾಡಬಹುದು ಎನ್ನುವ ರಿಯಾಯಿತಿ ದೊರೆತಿರಲಿಕ್ಕೆ ಸಾಕು. ಈಗ ಶಂಕರ, ಮಧ್ವ ಹಾಗೂ ರಾಮಾನುಜ ಸಂಪ್ರದಾಯಗಳಲ್ಲೂ ತಾಯಿಯಾದವಳು ಯತಿಯೊಬ್ಬರಿಂದ ನಮಸ್ಕಾರಕ್ಕೆ ಅರ್ಹಳು ಎನ್ನುವುದು ಸ್ವೀಕಾರಾರ್ಹವಾಯಿತು.

ಹಾಗಂತ ಈ ರಿಯಾಯಿತಿ ತಂದೆ, ಅಣ್ಣ ಅಕ್ಕಂದಿರಿಗಿಲ್ಲ, ಅವರೇ ಯತಿಗಳಿಗೆ ನಮಸ್ಕಾರ ಮಾಡಬೇಕು ಎನ್ನುವ ನಿಯಮವಿದೆ. ಸನ್ಯಾಸಿಗಳಲ್ಲೂ ಅನೇಕ ವಿಧವಿದೆ. ಪೀಠಾಧಿಪತಿ ಗಳನ್ನು ಹಾಗೂ ಇತರ ಸನ್ಯಾಸಿಗಳನ್ನೂ ಬೇರೆ ಬೇರೆಯಾಗಿಯೇ ನೋಡುವುದಿದೆ.

ಯಾವುದಾದರೂ ಪೀಠಕ್ಕೆ ಅಧಿಪತಿಯನ್ನಾಗಿ ಅಥವಾ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡುವಲ್ಲಿಯೂ ಅನೇಕ ವಿಧಾನಗಳನ್ನು ಅನುಸರಿಸುವ ಪದ್ಧತಿಯಿದೆ. ಅಲ್ಲಿ ಸಾಮಾನ್ಯ ವಾಗಿ ಹಿರಿಯ ಗುರುಗಳ ಆಯ್ಕೆಯೇ ಅಂತಿಮವಾಗುತ್ತದೆ. ಹಾಗೊಮ್ಮೆ ಹಿರಿಯ ಗುರುಗಳು ದೇಹತ್ಯಾಗ ಮಾಡಿದ ಮೇಲಾದರೆ, ಆ ಸಂಸ್ಥಾನದ ಆಡಳಿದ ನಡೆಸುವವರು, ವೇದಾಂತಾದಿ ಶಾಸ್ತ್ರಗಳನ್ನು ಅಧ್ಯಯನ ಮಾಡಿದವರ ಜಾತಕದಲ್ಲಿ ವೈರಾಗ್ಯಯೋಗ ಇದೆಯೋ ಎನ್ನುವುದನ್ನು ಪರಿಶೀಲಿಸಿ ಅಂತವರನ್ನು ಮುಂದಿನ ಪೀಠಾಧಿಪತಿಗಳನ್ನು ಆಯ್ಕೆ ಮಾಡುವ ಕ್ರಮವೂ ಇದೆ.

ಇಲ್ಲಿ ವೈರಾಗ್ಯ ವಿರಕ್ತಿಗಳೇ ಪ್ರಧಾನವಾಗುತ್ತದೆಯೇ ವಿನಃ ಯಾವ ವಶೀಲಿಯೂ ಕೆಲಸಕ್ಕೆ ಬರಲಾರದು. ವೈರಾಗ್ಯವನ್ನು ಯಾರೂ ತಂದು ಕೊಡುವುದಲ್ಲ, ಅದೊಂದು ಭಾವ, ಸ್ಥಿತಿ. ಅದು ತನ್ನಿಂದ ತಾನೇ ಜಾಗ್ರತವಾಗಬೇಕು. ಆಗ ಮಾತ್ರ ಅದು ಸ್ಥಿರವಾಗಿ ನಿಲ್ಲಲಿಕ್ಕೆ ಸಾಧ್ಯ ವಾಗುತ್ತದೆ.

ಅದಲ್ಲದಿದ್ದರೆ, ಕ್ಷಣಿಕವಾಗಿಬಿಡುತ್ತದೆ. ಈ ಥರದ ಕ್ಷಣಿಕ ವೈರಾಗ್ಯ ನಮ್ಮಂಥಾ ಸಾಮಾನ್ಯ ರಿಗೂ ಒಮ್ಮೊಮ್ಮೆ ಅನುಭವಕ್ಕೆ ಬರುತ್ತೆ. ಅಭಾವ ವೈರಾಗ್ಯ ಅಂದರೆ ನಮಗೆ ಯಾವುದೋ ಒಂದು ವಸ್ತು ಸಿಗದಿದ್ದಾಗ ಬೇಡಾ ಎನಿಸುವುದು, ಪ್ರಸೂತಿ ವೈರಾಗ್ಯ, ಅಂದರೆ ಹೆರಿಗೆಯ ಸಮಯದಲ್ಲಿ ಜೀವಕ್ಕೆ ಇಷ್ಟೊಂದು ನೋವು ತಿನ್ನುವುದಕ್ಕಿಂತ ಮಕ್ಕಳು ಬೇಡವೇಬೇಡಾ ಎನ್ನುವ ಭಾವ. ಇನ್ನೂ ಒಂದು ಥರಹದ ವೈರಾಗ್ಯವಿದೆ ಅದನ್ನು ಸ್ಮಶಾನ ವೈರಾಗ್ಯ ಎನ್ನುತ್ತಾರೆ.

ಯಾರದ್ದಾದರೂ ಅಂತ್ಯಕ್ರಿಯೆಗೆ ಹೋದಾಗ ಜೀವನ ಇಷ್ಟೇ, ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗಲೇಬೇಕಾಗುತ್ತದೆ, ಇನ್ನಾದರೂ ಜೀವನದಲ್ಲಿ ಸ್ವಾರ್ಥಕ್ಕಾಗಿ ಹೊಡೆದಾಡದೇ ಪರೋಪಕಾರಕ್ಕೆ ಮೀಸಲಿಡೋಣ ಎಂದೆನಿಸುವ ಭಾವ ಅದು. ಆದರೆ, ದಿನಕಳೆದಂತೆ ಮತ್ತೆ ಮಾಮೂಲಿನ ಸ್ವಾರ್ಥಪರವಾದ ಚಿಂತನೆಯಲ್ಲಿ ತೊಡಗುವುದು. ಹಾಗಾಗಿ ಈ ಕ್ಷಣಿಕ ಭಾವವನ್ನು ತಿಳಿದವರು ವೈರಾಗ್ಯದ ಆಭಾಸ ಎಂದಷ್ಟೇ ಗುರುತಿಸುತ್ತಾರೆ. ಆದರೆ ಸನ್ಯಾಸಿಗೆ ಹಾಗಲ್ಲ, ವಿಷಯಗಳಲ್ಲಿನ ವಿರಕ್ತಿ ಎನ್ನುವಂಥಾದ್ದು ನಿತ್ಯವೂ ಇರಬೇಕಾಗುತ್ತದೆ.

ಸಾಮಾನ್ಯವಾಗಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥಗಳೆಂಬ ಮೂರು ಪ್ರಾಥಮಿಕ ಆಶ್ರಮ ಗಳನ್ನು ಯಶಸ್ವಿಯಾಗಿ ದಾಟಿ ಆದ ಮೇಲೆ ಸನ್ಯಾಸಾಶ್ರಮ ಎನ್ನುದು ಶಾಸ್ತ್ರಗಳ ಮಾತು. ಆದರೆ, ನಮ್ಮ ಅನೇಕ ಗುರು ಪರಂಪರೆಗಳಲ್ಲಿ ಬಾಲ ವಟುಗಳನ್ನು ಗುರುಗಳನ್ನಾಗಿಸುವ ಪದ್ಧತಿಯೂ ಇದೆ, ಇನ್ನೂ ಏನೂ ಅರಿಯದ ಮುಗ್ಧ ಬಾಲಕರನ್ನು ಪೀಠಕ್ಕೆ ಆಯ್ಕೆ ಮಾಡಿದ ಉದಾಹರಣೆ ನಮ್ಮ ಮುಂದೆ ಸಾಕಷ್ಟಿದೆ.

ಅದು ತಪ್ಪೋ ಸರಿಯೋ ಎನ್ನುವುದು ಇಲ್ಲಿ ಈಗ ಅಪ್ರಸ್ತುತ. ತಂದೆ-ತಾಯಿಗಳಿಗೆ ಅದೊಂದು ವೇದನೆಯ ಸಂದರ್ಭ ಇದು ಎನ್ನುವುದಂತೂ ಸತ್ಯ. ನನ್ನ ಪ್ರಕಾರ ಸನ್ಯಾಸಿ ಯಾದವನ ತ್ಯಾಗದಷ್ಟೇ ಅಥವಾ ಅದಕ್ಕಿಂತ ಒಂದು ತೊಲೆ ಹೆಚ್ಚು ತ್ಯಾಗ ಅವರ ಪಾಲಕ ರದ್ದಾಗಿರುತ್ತದೆ. ದೇಶ ರಕ್ಷಣೆಗಾಗಿ ಮಕ್ಕಳನ್ನು ಸೈನ್ಯಕ್ಕೆ ಸೇರಿಸುವಾಗ ಆಗುವ ನೋವೇ ಈ ಸಂದರ್ಭದಲ್ಲೂ ತಂದೆ-ತಾಯಿಗಳಿಗೆ ಆಗಲಿಕ್ಕೆ ಸಾಕು.

ಸೈನ್ಯಕ್ಕೆ ಸೇರಿಸಿದರೂ ಆತ ತಮ್ಮ ಮಗನಾಗೇ ಇರುತ್ತಾನೆ, ವಿವಾಹ ಮಾಡಿಕೊಡುವಾಗಲೂ ಅಷ್ಟೇ, ಮಗಳು ಗಂಡನ ಮನೆಗೇ ಹೋದರೂ ಸಂಬಂಧ ಮಾತ್ರ ಹಾಗೆಯೇ ಉಳಿಯುತ್ತದೆ.

ಆದರೆ ಮಕ್ಕಳನ್ನು ಸನ್ಯಾಸಕ್ಕೆ ಕಳುಹಿಸುವಾಗ ಹಾಗಲ್ಲ, ಕರುಳ ಬಳ್ಳಿಯ ಸಂಬಂಧವನ್ನು ಕಡಿದುಕೊಳ್ಳುವ ಸಂದರ್ಭ. ಮಗ ತಮ್ಮ ಮುಂದೇ ಜೀವಂತವಾಗಿದ್ದರೂ, ಆತ ನಮ್ಮವ ನಲ್ಲ, ಅವನ ಮೇಲೆ ನಮಗೆ ಅಧಿಕಾರವಿಲ್ಲದ ಸ್ಥಿತಿ ಅದು, ಹಾಗಾಗಿ ತಂದೆ-ತಾಯಿಯ ರದ್ದೂ ಒಂದು ರೀತಿಯ ತ್ಯಾಗವೇ ಆಗುತ್ತದೆ.

ಹಾಗಾಗಿ, ತನ್ನ ಸಂತಾನವನ್ನು ಸಮಾಜದ ಉದ್ಧಾರಕ್ಕೆ ತ್ಯಾಗಮಾಡಿದವರ ಅನು-ಆಪತ್ತಿ ನಲ್ಲಿ, ಆರ್ಥಿಕ ಅವಶ್ಯಕತೆಗಳಲ್ಲಿ ಭಾಗಿಯಾಗ ಬೇಕಾದ್ದು ಉಪಾಕಾರ ಸ್ಮರಣೆ ಯಾಗುವು ದರಿಂದ ಸಮಾಜದ ಆದ್ಯಕರ್ತವ್ಯವಾಗುತ್ತದೆ. ಆ ಭಾಗ್ಯ, ಈ ಭಾಗ್ಯ ಎಂದು ವೋಟು ಗಳಿಸುವ ತಂತ್ರ ಮಾಡುವ ರಾಜಕಾರಣಿಗಳ ನಡುವೆ, ಈ ಥರದ ಸಮ್ಯಕ್ ಚಿಂತನೆ ಗಳಿಂದಾಗಿ ನಮಗೆ ಅರವಿಂದ ಲಿಂಬಾವಳಿಯವರು ವಿಶಿಷ್ಟ ಹಾಗೂ ವಿಭಿನ್ನವಾಗಿ ಕಾಣುತ್ತಾರೆ.

ವಿನಾಯಕ ವೆಂ ಭಟ್ಟ

View all posts by this author