ಸಂಪಾದಕೀಯ ಸದ್ಯಶೋಧನೆ
ಬೇಸ್‌ಬಾಲ್ ಅಥವಾ ಯಾವುದೇ ಕ್ರೀಡೆಯು ನಿಯಮಗಳಿಂದ ಬದ್ಧವಾಗಿದೆ. ಬೇಸ್ ಬಾಲ್ ನಲ್ಲಿ ನೀವು ಎಷ್ಟೇ ಬಲಿಷ್ಠವಾಗಿ ಚೆಂಡನ್ನು ಹೊಡೆದರೂ, ಗರಿಷ್ಠ ಎಂದರೆ ಒಂದು ‘ಹೋಮ್ ರನ್’ ಮೂಲಕ ನಾಲ್ಕು ರನ್ ಗಳಿಸಬಹುದು. ಅಂದರೆ, ಅಲ್ಲಿ ಯಶಸ್ಸಿಗೆ ಒಂದು ಮೇಲ್ಮಿತಿ (Cap) ಇದೆ. ಆದರೆ ವ್ಯವಹಾರದಲ್ಲಿ ಪರಿಸ್ಥಿತಿ ಹಾಗಿಲ್ಲ.
ಇಲ್ಲಿ ‘ಹೋಮ್ ರನ್’ ಎಂದರೆ ಕೇವಲ ಲಾಭವಲ್ಲ, ಅದು ಒಂದು ಕ್ರಾಂತಿ. ನೀವು ಒಂದು ಸರಿಯಾದ ನಿರ್ಧಾರ ತೆಗೆದುಕೊಂಡರೆ, ಒಂದು ಹೊಸ ಆವಿಷ್ಕಾರ ಮಾಡಿದರೆ, ಅದರ ಪ್ರತಿಫಲವು ಸಾವಿರ ಪಟ್ಟು ಇರಬಹುದು.
ಅಮೆಜಾನ್ ಆರಂಭದಲ್ಲಿ ಕೇವಲ ಪುಸ್ತಕ ಮಾರಾಟದ ಮಳಿಗೆಯಾಗಿತ್ತು. ಆದರೆ ಅವರು ’ Cloud Computing’ ಎಂಬ ಹೊಸ ಕ್ಷೇತ್ರಕ್ಕೆ ಕೈಹಾಕಿದಾಗ, ಅದು ಅವರಿಗೆ ತಂದು ಕೊಟ್ಟದ್ದು ‘ಸಾವಿರ ರನ್’ಗಳ ಯಶಸ್ಸನ್ನು’ ಎಂದು ಇತ್ತೀಚೆಗೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಹೇಳಿದ್ದನ್ನು ಕೇಳಿದೆ.
ಇದನ್ನೂ ಓದಿ: Vishweshwar Bhat Column: ಸೋಲೋ ಟೇಬಲ್ ಥಿಯರಿ
ವ್ಯವಹಾರದಲ್ಲಿ ಸಾವಿರ ರನ್ ಗಳಿಸಬೇಕೆಂದರೆ ನೀವು ಪದೇ ಪದೆ ಬ್ಯಾಟ್ ಬೀಸಲು ಸಿದ್ಧರಿ ರಬೇಕು. ಬೆಜೋಸ್ ಅವರ ಈ ತತ್ವದ ಹಿಂದೆ ಒಂದು ಪ್ರಮುಖ ಸಂದೇಶವಿದೆ - ನೀವು ಹೆಚ್ಚು ಬಾರಿ ಸೋಲಲು ಸಿದ್ಧರಿರಬೇಕು ಎಂಬುದು. ನೀವು ಹತ್ತು ಬಾರಿ ಪ್ರಯತ್ನಿಸಿ ಒಂಬತ್ತು ಬಾರಿ ಸೋತರೂ ಪರವಾಗಿಲ್ಲ. ಆ ಒಂಬತ್ತು ಸೋಲುಗಳಿಂದ ಆಗುವ ನಷ್ಟ ಸೀಮಿತವಾಗಿರುತ್ತದೆ.
ಆದರೆ ಆ ಹತ್ತನೆಯ ಪ್ರಯತ್ನ ‘ಸಾವಿರ ರನ್’ ತಂದುಕೊಟ್ಟರೆ, ಅದು ಹಿಂದಿನ ಒಂಬತ್ತು ಸೋಲುಗಳನ್ನಷ್ಟೇ ಅಲ್ಲ, ನಿಮ್ಮ ಇಡೀ ಕಂಪನಿಯ ಭವಿಷ್ಯವನ್ನೇ ಬದಲಿಸುತ್ತದೆ. ಇದನ್ನೇ ಹೂಡಿಕೆದಾರರು ’Optionality’ ಎಂದು ಕರೆಯುತ್ತಾರೆ. ಇಲ್ಲಿ ಸೋಲಿನ ನಷ್ಟ ಕೇವಲ ಒಂದು ಪಟ್ಟು ಇರುತ್ತದೆ, ಆದರೆ ಗೆಲುವಿನ ಲಾಭ ಅನಂತವಾಗಿರುತ್ತದೆ.
ಬೆಜೋಸ್ ಈ ಮಾತುಗಳನ್ನು ಕೇವಲ ಪ್ರವಚನಕ್ಕಾಗಿ ಹೇಳಲಿಲ್ಲ, ಅವರು ಅದನ್ನು ಅಮೆಜಾನ್‌ನಲ್ಲಿ ಜಾರಿಗೆ ತಂದರು. ಅಮೆಜಾನ್ ಫೋನ್ ತಯಾರಿಸಿ ಭಾರಿ ಸೋಲು ಕಂಡಿತು. ನೂರಾರು ಕೋಟಿ ನಷ್ಟವಾಯಿತು. ಇದು ಬೇಸ್‌ಬಾಲ್‌ನಲ್ಲಿ ‘ಔಟ್’ ಆದಂತೆ. ಅಮೆಜಾನ್ ಪ್ರೈಮ್ ಆರಂಭದಲ್ಲಿ ಹುಚ್ಚುತನದ ನಿರ್ಧಾರದಂತೆ ಕಂಡಿತು. ಆದರೆ ಇದು ಸಾವಿರ ರನ್ ಹೊಡೆದ ಆಟವಾಯಿತು.
ಇಂದು ಅಮೆಜಾನ್‌ನ ಯಶಸ್ಸಿಗೆ ಇದು ಪ್ರಮುಖ ಆಧಾರಸ್ತಂಭ. ವ್ಯವಹಾರದಲ್ಲಿ ಬಲಿಷ್ಠ ರಾಗಲು ನಮಗೆ ಬೇಕಿರುವುದು ಹೆಚ್ಚಿನ ‘ಬ್ಯಾಟಿಂಗ್ ಸರಾಸರಿ’ ಅಲ್ಲ, ಬದಲಿಗೆ ಹೆಚ್ಚಿನ ‘ಸ್ಲಗಿಂಗ್ ಪರ್ಸೆಂಟೇಜ್’ (Slugging Percentage). ಅಂದರೆ ಎಷ್ಟು ಬಾರಿ ಗೆಲ್ಲುತ್ತೇವೆ ಎನ್ನುವುದಕ್ಕಿಂತ, ಗೆದ್ದಾಗ ಎಷ್ಟು ದೊಡ್ಡ ಮಟ್ಟದಲ್ಲಿ ಗೆಲ್ಲುತ್ತೇವೆ ಎಂಬುದು ಮುಖ್ಯ.
ಕ್ರೀಡೆಯಲ್ಲಿ ನೀವು ಆಡುವ ಮೈದಾನ ಸಣ್ಣದು. ಆದರೆ ವ್ಯವಹಾರದಲ್ಲಿ ಇಡೀ ಜಗತ್ತೇ ಮೈದಾನ. ಅಂತರ್ಜಾಲದ ಯುಗದಲ್ಲಿ ಒಂದು ಸಣ್ಣ ಐಡಿಯಾವನ್ನು ಕೋಟ್ಯಂತರ ಜನರಿಗೆ ತಲುಪಿಸಬಹುದು. ಒಂದು ಸಾಫ್ಟ್ʼವೇರ್ ತಯಾರಿಸಲು ತಗಲುವ ಶ್ರಮ ಒಂದೇ, ಆದರೆ ಅದನ್ನು ಒಬ್ಬರಿಗೆ ಮಾರಬಹುದು ಅಥವಾ ನೂರು ಕೋಟಿ ಜನರಿಗೆ ಮಾರಬಹುದು.
ಇದೇ ‘ಒಂದು ಸಾವಿರ ರನ್’ಗಳ ರಹಸ್ಯ. ಒಮ್ಮೆ ಯಶಸ್ವಿಯಾದ ಮಾದರಿಯನ್ನು ಜಗತ್ತಿ ನಾದ್ಯಂತ ವಿಸ್ತರಿಸಿದಾಗ ಯಶಸ್ಸು exponential ಆಗಿ ಬೆಳೆಯುತ್ತದೆ. ಬೆಜೋಸ್ ಅವರ ಈ ಮಾತು ನಮಗೆ ಮೂರು ಪ್ರಮುಖ ಪಾಠಗಳನ್ನು ಒಳಗೊಂಡಿವೆ.
ಮೊದಲನೆಯದು, ಪ್ರಯೋಗ ಮಾಡಲು ಹೆದರಬೇಡಿ. ಅಂದರೆ ಸಣ್ಣ ಸಣ್ಣ ಸೋಲುಗಳು ವ್ಯವಹಾರದ ಭಾಗ. ಅವು ನಿಮ್ಮನ್ನು ದೊಡ್ಡ ಗೆಲುವಿಗೆ ಸಜ್ಜುಗೊಳಿಸುತ್ತವೆ. ಎರಡನೆ ಯದು, ದೊಡ್ಡದಾಗಿ ಯೋಚಿಸಿ. ನಿಮ್ಮ ಗುರಿ ಕೇವಲ ನಾಲ್ಕು ರನ್ ಗಳಿಸುವುದಾಗಿದ್ದರೆ, ನೀವು ಎಂದಿಗೂ ಒಂದು ಸಾವಿರ ರನ್ ಹೊಡೆಯಲಾರಿರಿ.
ನಿಮ್ಮ ವ್ಯವಹಾರದ ಮಾದರಿ ಅಸೀಮಿತವಾಗಿ ಬೆಳೆಯುವಂತಿರಲಿ. ಮೂರನೆಯದು, ಸೋಲಿನ ವೆಚ್ಚ ಮತ್ತು ಗೆಲುವಿನ ಮೌಲ್ಯ. ಸೋತಾಗ ಕಳೆದುಕೊಳ್ಳುವುದು ಕೇವಲ ಹಣ ಮತ್ತು ಸಮಯ, ಆದರೆ ಗೆದ್ದಾಗ ಗಳಿಸುವುದು ಇತಿಹಾಸ. ‘ಒಂದು ಸಾವಿರ ರನ್’ ಎಂಬುದು ಕೇವಲ ಹಣದ ಸಂಕೇತವಲ್ಲ. ಅದು ಪ್ರಭಾವ (Impact) ಮತ್ತು ನಾವೀನ್ಯದ (Innovation) ಸಂಕೇತ.
ನೀವು ವ್ಯವಹಾರದಲ್ಲಿರುವಾಗ, ನೀವು ಕೇವಲ ಬದುಕುಳಿಯಲು ಆಡುತ್ತಿಲ್ಲ, ಬದಲಿಗೆ ಕ್ರೀಡೆಯ ನಿಯಮಗಳನ್ನೇ ಬದಲಾಯಿಸುವ ಒಂದು ‘ಮಾಸ್ಟರ್ ಸ್ಟ್ರೋಕ್’ಗಾಗಿ ಕಾಯು ತ್ತಿದ್ದೀರಿ. ಆದ್ದರಿಂದ, ಬ್ಯಾಟ್ ಬೀಸುತ್ತಲೇ ಇರಿ. ಒಂದು ಸಣ್ಣ ಹೊಡೆತವೂ ಇಡೀ ಕ್ರೀಡಾಂ ಗಣವನ್ನೇ ಬೆಚ್ಚಿಬೀಳಿಸುವಂಥ ಯಶಸ್ಸನ್ನು ತಂದುಕೊಡಬಹುದು.