ಒಂದೊಳ್ಳೆ ಮಾತು
ಈ ಭೂಮಿಯ ಮೇಲೆ ಸಾವಿರಾರು ಪುಣ್ಯಕ್ಷೇತ್ರಗಳಿವೆ. ಕಾಶಿ, ರಾಮೇಶ್ವರ, ಬದರಿನಾಥ ಹೀಗೆ ಪ್ರತಿಯೊಂದು ಕ್ಷೇತ್ರವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಆದರೆ, ಸ್ವತಃ ಭೂ ದೇವಿಗೆ ಒಂದು ಸಂದೇಹವಿತ್ತು. ‘ಈ ಸಮಸ್ತ ಪವಿತ್ರ ಸ್ಥಳಗಳ ಪೈಕಿ ಮಥುರಾ ಮತ್ತು ವೃಂದಾವನಕ್ಕೆ ಮಾತ್ರ ಅಂಥ ವಿಶೇಷ ಸ್ಥಾನ ಏಕೆ? ಇವನ್ನು ಪರಮ ಪವಿತ್ರ ಎಂದು ಕರೆಯುವುದೇಕೆ?’ ಎಂದು ಅವಳು ಆಲೋಚಿಸುತ್ತಿದ್ದಳು.
ಅವಳ ಈ ಜಿಜ್ಞಾಸೆಗೆ ಉತ್ತರ ನೀಡಲು ಭಗವಂತನೇ ಒಂದು ಲೀಲೆಯನ್ನು ನಡೆಸಿದನು. ಹಿರಣ್ಯಾಕ್ಷನೆಂಬ ರಾಕ್ಷಸನು ಭೂಮಿಯನ್ನು ಅಪಹರಿಸಿ ವಿಶ್ವದ ಪಾತಾಳಕ್ಕೆ ಎಸೆದಾಗ, ಭಗವಂತನು ‘ವರಾಹ’ ಅವತಾರವನ್ನು ತಳೆದು ಭೂಮಿಯನ್ನು ಉದ್ಧರಿಸಲು ಮುಂದಾ ದನು. ತನ್ನ ದಂಷ್ಟ್ರದ (ಕೋರೆಹಲ್ಲು) ಮೇಲೆ ಭೂದೇವಿಯನ್ನು ಹೊತ್ತು ತರುವಾಗ, ಭಗವಂತನು ಆಕಾಶದ ಮಧ್ಯದಲ್ಲಿ ಕ್ಷಣಕಾಲ ನಿಂತು ಅವಳಿಗೆ ಒಂದು ಅದ್ಭುತ ದೃಶ್ಯ ವನ್ನು ತೋರಿಸಿದನು.
ಸುತ್ತಲೂ ಪ್ರಳಯಕಾಲದ ಮಹಾಪ್ರವಾಹ, ಇಡೀ ವಿಶ್ವವೇ ಜಲಾವೃತವಾಗಿತ್ತು. ಆದರೆ ಆ ಜಲರಾಶಿಯ ಮಧ್ಯೆ ಒಂದು ತಾಣ ಮಾತ್ರ ಕಿಂಚಿತ್ತೂ ಅಲುಗಾಡದೆ, ಅತ್ಯಂತ ತೇಜೋ ಮಯವಾಗಿ ಕಂಗೊಳಿಸುತ್ತಿತ್ತು. ಅದೇ ಮಥುರಾ ಮಂಡಲ!
ಇದನ್ನೂ ಓದಿ: Roopa Gururaj Column: ಬತ್ತಿದ ಕೆರೆಗಳಿಗೆ ಜೀವ ತುಂಬಿದ ಭಗೀರಥ: ಆನಂದ ಮಲ್ಲಿಗವಾಡ
ಪ್ರಳಯದ ನೀರು ಅದನ್ನು ಸ್ಪರ್ಶಿಸಲೂ ಸಾಧ್ಯವಾಗುತ್ತಿರಲಿಲ್ಲ. ಆಗ ವರಾಹ ರೂಪಿ ಭಗವಂತನು ಭೂದೇವಿಗೆ ಹೀಗೆ ವಿವರಿಸಿದನು: “ದೇವೀ, ಮಥುರೆಯು ಕೇವಲ ಮಣ್ಣು-ಕಲ್ಲುಗಳಿಂದಾದ ಭೌತಿಕ ಪ್ರದೇಶವಲ್ಲ. ಅದು ನನ್ನ ನಿತ್ಯಧಾಮ. ಪ್ರಕೃತಿಯ ವಿಕೋಪ ಗಳಿಗೂ ಮೀರಿದ ಆಧ್ಯಾತ್ಮಿಕ ಶಕ್ತಿಯ ನೆಲೆವೀಡು ಅದು". ಈ ದರ್ಶನದಿಂದ ಭೂದೇವಿಯ ಅಹಂಕಾರ ಮತ್ತು ಸಂದೇಹಗಳು ಕರಗಿಹೋದವು.
ಮಥುರಾ ಎಂದರೆ ಅದು ಭಗವಂತನ ಜನ್ಮಸ್ಥಳ ಮಾತ್ರವಲ್ಲ, ಅದು ನಮ್ಮೊಳಗಿನ ಭಕ್ತಿಯ ಜಾಗೃತಿಯ ಸಂಕೇತ. ಲೌಕಿಕ ಜಗತ್ತಿನ ಕಷ್ಟಗಳೆಂಬ ಪ್ರವಾಹ ನಮ್ಮನ್ನು ಸುತ್ತುವರಿದಾಗ, ಮಥುರೆಯಂಥ ಕ್ಷೇತ್ರದಲ್ಲಿ ಹೊಮ್ಮುವ ಆಧ್ಯಾತ್ಮಿಕ ಚಿಂತನೆ ಮಾತ್ರ ನಮಗೆ ರಕ್ಷಣೆ ನೀಡಬಲ್ಲದು. ವಿನಮ್ರತೆ, ಶರಣಾಗತಿ ಮತ್ತು ಪ್ರೇಮದ ಸಂಕೇತವಾಗಿ ಮಥುರೆ ನಿಂತಿದೆ.
“ಯತ್ ಪಾದ ಪಂಕಜ ಪಲಸ, ವಿಳಾಸ ಭಕ್ತ್ಯ ತಮ್ ಅರನಂ, ಭಜ ವಾಸುದೇವಂ‘’ ಎನ್ನುತ್ತದೆ ಭಾಗವತದ ಒಂದು ಶ್ಲೋಕ. ಅಂದರೆ, ಯಾರು ಭಗವಂತನ ಪಾದಕಮಲಗಳಲ್ಲಿ ನಿರಂತರ ಭಕ್ತಿಯನ್ನು ಇಟ್ಟಿರುತ್ತಾರೋ, ಅವರು ಕರ್ಮದ ಬಂಧನಗಳಿಂದ ಮುಕ್ತರಾಗು ತ್ತಾರೆ.
ಸಂಸಾರದ ಸುಳಿಯಲ್ಲಿ ಸಿಲುಕಿದ ನಮಗೆ, ವಾಸುದೇವನ ಭಕ್ತಿಯೇ ಪರಮ ಔಷಧ ಎಂದರ್ಥ. ನಮ್ಮ ಪುರಾಣಗಳು ಕೇವಲ ಕಥೆಗಳಲ್ಲ, ಅವು ಜೀವನದ ಪರಮಸತ್ಯವನ್ನು ಅರಿಯಲು ನಮಗೆ ಹಿರಿಯರು ನೀಡಿದ ದಾರಿದೀಪಗಳು. ಮಥುರಾ ಮತ್ತು ವೃಂದಾವನದ ಪವಿತ್ರತೆಯ ಬಗೆಗಿನ ಒಂದು ಅಪರೂಪದ ಕಥೆಯಿದು.
ಕೆಲವೊಮ್ಮೆ ಜೀವನದಲ್ಲಿ ಅನೇಕ ಅಡೆತಡೆಗಳು ಬರುತ್ತಿರುತ್ತವೆ. ಇನ್ನೇನು ಎಲ್ಲ ಸರಿ ಹೋಯಿತು ಎನ್ನುವಷ್ಟರಲ್ಲಿ ಮತ್ತೆ ತೊಂದರೆಗಳು ಎದುರಾಗುತ್ತವೆ. ಆದರೆ ಕೆಲವೊಮ್ಮೆ ಬಂದಷ್ಟೇ ಸುಲಭವಾಗಿ ಆ ತೊಂದರೆಗಳು ಪರಿಹಾರ ಕೂಡ ಆಗುತ್ತವೆ. ಅದಕ್ಕಾಗಿ ನಾವು ವಿಶೇಷ ಶ್ರಮವನ್ನೇನೂ ಪಟ್ಟಿರುವುದಿಲ್ಲ. ಇದು ಹೇಗೆ ಸಾಧ್ಯವಾಯಿತು ಎನ್ನುವ ಜಿಜ್ಞಾಸೆ ಮನಸ್ಸಿನಲ್ಲಿ ಮೂಡುತ್ತದೆ. ಇದಕ್ಕೆ ಕಾರಣ ನಮ್ಮ ಹಿರಿಯರ ಆಶೀರ್ವಾದ ಮತ್ತು ನಮ್ಮ ಮನೆಯ ಭಕ್ತಿಯ ವಾತಾವರಣ.
ಯಾವ ಮನೆಯಲ್ಲಿ ನಿತ್ಯ ದೇವರ ಪೂಜೆ ಮಂತ್ರ ಪಠಣ, ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಇರುತ್ತದೋ ಅಲ್ಲಿ ಎದುರಾದ ಕಷ್ಟಗಳು ಕೂಡ ಅದೇ ದೇವರ, ಗುರು-ಹಿರಿಯರ ಕೃಪೆ, ಆಶೀರ್ವಾದದಿಂದ ಸುಲಭವಾಗಿ ಪರಿಹಾರವಾಗುತ್ತಾ ಹೋಗುತ್ತವೆ. ಕೆಲವೊಮ್ಮೆ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ನಮಗೆ ಹಣಕ್ಕಿಂತ ಆಶೀರ್ವಾದ ಬಹಳ ಮುಖ್ಯವಾ ಗುತ್ತದೆ. ಆದ್ದರಿಂದಲೇ ಅದನ್ನು ನಿರಂತರವಾಗಿ ಕಾಯ್ದಿರಿಸಿಕೊಳ್ಳಬೇಕು. ನಮ್ಮ ಒಳ್ಳೆಯ ಗುಣ, ವಿನಮ್ರತೆ ಮತ್ತು ಭಕ್ತಿ ಎಂದಿಗೂ ನಮ್ಮ ಕೈಬಿಡುವುದಿಲ್ಲ.