ಒಡಲಾಳ
ಸುರೇಂದ್ರ ಪೈ, ಭಟ್ಕಳ
ಇತ್ತೀಚೆಗಷ್ಟೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (ಓಖಉಅಆ) 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನು ಪ್ರಕಟಿಸಿದ್ದು ತಿಳಿದ ಸಂಗತಿ. ಈ ಬಾರಿ ದಾಖಲೆಯ ಶೇ.86.48ರಷ್ಟು ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದು, ಶಿಕ್ಷಣ ಸಚಿವರು ಸೇರಿದಂತೆ ಶಿಕ್ಷಣ ಇಲಾಖೆಗೆ ನಿರೀಕ್ಷೆಯಂತೆ ಫಲಿತಾಂಶ ದಕ್ಕಿಸಿಕೊಂಡಿದ್ದು ಗಮನಿಸಬೇಕಾದ ಅಂಶ. ಇದಲ್ಲದೇ ಬಹುತೇಕ ಮಕ್ಕಳು ನೂರಕ್ಕೆ ನೂರು ಅಂಕಗಳನ್ನು, ಶೇಕಡಾವಾರು ಅತ್ಯುತ್ತಮ ಶ್ರೇಣಿಯ ಅಂಕಗಳನ್ನು ಗಳಿಸಿದ್ದಾರೆ.
ಮಕ್ಕಳ ವರ್ಷವಿಡೀ ಪ್ರಯತ್ನಕ್ಕೆ ಸಂದ ಯಶಸ್ಸನ್ನು ನಾವೆಲ್ಲಾ ಶ್ಲಾಘಿಸಲೇಬೇಕು. ಈ ಸಂಭ್ರಮದ ನಡುವೆಯೇ ಒಬ್ಬ ವಿದ್ಯಾರ್ಥಿಯನ್ನು ನಿಮ್ಮ ಸಾಧನೆಯ ಗುಟ್ಟು ಏನು? ಯಾವ ರೀತಿ ಪರೀಕ್ಷಾ ತಯಾರಿ ಮಾಡಿಕೊಂಡಿದ್ದೀರಿ? ಎಂದು ಕೇಳಿದೆ. ನಮಗೆ ಬೋರ್ಡ್ ಪರೀಕ್ಷಾ ತಯಾರಿಗಾಗಿ ಮೂರು ಮಾದರಿ ಪರೀಕ್ಷೆ ಮಾಡಲಾಗಿತ್ತು. ಜತಗೆ ಪ್ರಶ್ನಾಕೋಶವನ್ನು ಸಿದ್ಧಪಡಿಸಿ ನೀಡಲಾಗಿತ್ತು.
ಪರೀಕ್ಷೆಗೆ ಇವೆರಡರಿಂದಲೇ 70-80ರಷ್ಟು ಪ್ರಶ್ನೆಗಳು ಬರುತ್ತವೆ ಓದಿಕೊಳ್ಳಿ ಎಂದು ಹೇಳಲಾಗಿತ್ತು. ಹಾಗಾಗಿ ಅದಕ್ಕೆ ಹೆಚ್ಚು ಒತ್ತು ನೀಡಿದೆ. ಅವರು ಹೇಳಿದಂತೆ ಪರೀಕ್ಷೆಯಲ್ಲಿ ಇದರಿಂದಲೇ ಅತಿ ಹೆಚ್ಚು ಪ್ರಶ್ನೆಗಳು ಬಂದಿವೆ. ಅನುಕೂಲವಾಯಿತು ಎಂದು ಹೇಳಿದರು. ಇದನ್ನು ಹೇಳುತಲೇ ಒಮ್ಮೆಲೇ ತಬ್ಬಿಬ್ಬಾದೆ.
ಆ ವಿದ್ಯಾರ್ಥಿನಿ ಹೇಳಿದ್ದು ನಿಜವೇ ಎಂದು ತಿಳಿಯಲು ಪಿಯು ಪ್ರಾಧ್ಯಾಪಕರ ಬಳಿ ಒಂದಿಷ್ಟು ವಿಚಾರಿಸಿದೆ. ಆ ವಿದ್ಯಾರ್ಥಿನಿ ಹೇಳಿದ್ದು ಅಕ್ಷರಶಃ ಸತ್ಯವಾಗಿತ್ತು. ಇದರರ್ಥ ಉತ್ತಮ ಫಲಿತಾಂಶ ಕ್ಕಾಗಿ ಪರೀಕ್ಷೆಗೂ ಮುನ್ನ ಇಲಾಖೆಯೇ ಪರೋಕ್ಷವಾಗಿ ಪ್ರಶ್ನೆಪತ್ರಿಕೆಯನ್ನು ಲೀಕ್ ಮಾಡಿದಂತೆ ಆಯಿತ್ತಲ್ಲ. ಇನ್ನೂ ಉತ್ತಮ ಫಲಿತಾಂಶ ಬಾರದೇ ಏನು? ಎಂದೆನಿಸಿತು.
ಇದನ್ನೂ ಓದಿ: Surendra Pai Column: ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಪ್ರಥಮ ಭಾಷೆ ಕನ್ನಡ !
ನಮ್ಮಲ್ಲಿ ಬಹುತೇಕ ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ಪಾಲಕರ ಬಳಿ, ಆಡಳಿತ ಮಂಡಳಿಯವರ ಬಳಿ ಭೇಷ್ ಎಂದೆನಿಸಿಕೊಳ್ಳಲು, ಪರೀಕ್ಷೆಗೂ ಮುನ್ನ ಪೂರ್ವತಯಾರಿಯಾಗಿ ವಿಷಯವಾರು, ಪಾಠವಾರು ಒಂದಿಷ್ಟು ‘ಮುಖ್ಯ ಪ್ರಶ್ನೆಗಳು’ ಎಂದು ಪಠ್ಯಪುಸ್ತಕದಲ್ಲಿ ಮಾರ್ಕ್ ಮಾಡಿಕೊಡುವ ಪದ್ಧತಿ ಇದೆ. ಅದೇ ಪದ್ಧತಿಯನ್ನು ಶಿಕ್ಷಣ ಇಲಾಖೆ ಈ ಬಾರಿ ಅಳವಡಿಸಿದ್ದು ಪರೀಕ್ಷಾ ಗುಣಮಟ್ಟದ ಬಗ್ಗೆ ಚಿಂತಿಸುವಂತೆ ಮಾಡಿದೆ.
ಈ ಪದ್ಧತಿಯಿಂದ ಮಕ್ಕಳು ಒಂದರಿಂದ ಒಂಭತ್ತನೇ ತರಗತಿಯ ತನಕ ಟಾಪ್ ಕ್ಲಾಸ್‌ನಲ್ಲಿ ಪಾಸ್ ಆಗುತ್ತಾರೆ ನಿಜ. 10ನೇ ತರಗತಿ ಬಂದಾಗಲೇ ಅಸಲಿಯತ್ತು ಬಯಲಾಗುವುದು. ಪಾಪಾ ಆಗ ಮಕ್ಕಳು ತಮ್ಮ ಜತೆ ಇಷ್ಟು ವರ್ಷ ಅನ್ಯಾಯವಾಗಿದೆ ಎಂದು ತಿಳಿದುಕೊಳ್ಳುವಷ್ಟರೊಳಗೆ ಬೋರ್ಡ್ ಪರೀಕ್ಷೆ ಎದುರಿಗಿರುತ್ತದೆ.
ಪಾಲಕರು ಸಹ ಒಂಭತ್ತನೇ ತರಗತಿಯ ತನಕ ತಮ್ಮ ಮಕ್ಕಳು ಅತ್ಯುತ್ತಮ ಅಂಕವನ್ನು ಹೇಗೆ ಪಡೆದರೂ ಎಂದು ವಾಸ್ತವತೆ ಅರಿಯಲು ಮುಂದಾಗುವುದಿಲ್ಲ. ಅವರಿಗೆ ಬೇಕಾಗಿರುವುದು ಮಕ್ಕಳ ಅಂಕಗಳೇ ಹೊರತು ಯಾವ ಮಾರ್ಗದಿಂದ ಪಡೆದಿದ್ದಾರೆ, ಅಂಕಕ್ಕೆ ತಕ್ಕಂತೆ ಜ್ಞಾನ ಪಡೆದಿದ್ದಾ ರೆಯೇ ಎಂಬಿತ್ಯಾದಿ ಅಂಶಗಳತ್ತ ಗಮನ ಹರಿಸುವುದಿಲ್ಲ.
ಈಗಲೂ ಹಾಗೇ ಆಗುತ್ತಿದೆ. ಪಿಯುಸಿ ಪರೀಕ್ಷೆ -1 ರಲ್ಲಿ ತಮ್ಮ ಮಕ್ಕಳು ನೂರಕ್ಕೆ ನೂರು ಅಂಕ ಪಡೆದರು ಎಂದು ಪಾಲಕರು ತಮ್ಮ ಮಕ್ಕಳ ಸಾಧನೆಯನ್ನು ಸಂಭ್ರಮಿಸುತ್ತಿದ್ದಾರೆ. ಮಕ್ಕಳು ಸಹ ಇದೆಲ್ಲವೂ ತಮ್ಮ ಸ್ವ-ಅಧ್ಯಯನದ ಫಲಶೃತಿ ಎಂದೇ ನಂಬಿಕೊಂಡಿದ್ದಾರೆ.
ಹೌದು ಮಕ್ಕಳ ಶ್ರಮ ಇರುವುದು ನಿಜ. ಆದರೆ ಸಾಧನೆಯ ಹಿಂದಿರುವ ಶ್ರಮಕ್ಕಿಂತಲೂ ಇಲಾಖೆಯ ಪ್ರಶ್ನಾಕೋಶ ಹಾಗೂ ಕಳಪೆ ಮೌಲ್ಯಮಾಪನ ನೀತಿಯ ಪಾತ್ರವೇ ಹಿರಿದು ಎಂಬ ಸತ್ಯ ಯಾರೂ ಗಮನಿಸಿದಂತಿಲ್ಲ. ಹಾಗಂತ ಮಕ್ಕಳು ನೂರಕ್ಕೆ ನೂರು ಅಂಕ ಪಡೆಯುವ ಸಾಮರ್ಥ್ಯ ಹೊಂದಿಲ್ಲ ಎಂದಲ್ಲ.
ಖಂಡಿತವಾಗಿಯೂ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯವಿದೆ. ಒಂದೊಮ್ಮೆ 80-90ರ ದಶಕದಲ್ಲಿದ್ದ ಗುಣಮಟ್ಟದ ಶಿಕ್ಷಣ ಹಾಗೂ ಪರೀಕ್ಷಾ ನೀತಿಯನ್ನು ಪಾಲಿಸಿದರೆ ನೂರಕ್ಕೆ ನೂರು ಅಂಕ ಗಳಿಸುವ, ಒಟ್ಟಾರೆ ಶೇ.90ಕ್ಕಿಂತ ಹೆಚ್ಚು ಅಂಕ ಪಡೆಯುವವರ ಸಂಖ್ಯೆ ಕಡಿಮೆಯಾಗಿತ್ತು. ಏಕೆಂದರೆ ಆಗ ಅಂಕ ಸಾಧನೆಯ ಮೌಲ್ಯಾಂಕನವಾಗಿರಲಿಲ್ಲ.
ಇನ್ನೂ ಮಕ್ಕಳಿಗೆ ಒಂದು ವಿಷಯದ ಸಂಪೂರ್ಣ ಭಾಗ ಪಠ್ಯಕ್ರಮದಲ್ಲಿ ಇರುವುದಿಲ್ಲ. ಬದಲಾಗಿ ಒಂದು ವಿಷಯದಲ್ಲಿನ ಕೆಲವು ನಿರ್ದಿಷ್ಟ ಭಾಗವನ್ನು(ಆಯ್ದ) ಮಾತ್ರ ಕಲಿಕೆಯ ವಿಷಯ ವಾಗಿರುತ್ತದೆ. ನಂತರ ಕಲಿತ ಒಂದಂಶದಲ್ಲಿ ಕೆಲವೇ ಭಾಗ ಮಾತ್ರ ಪರೀಕ್ಷೆಯಲ್ಲಿ ಕೇಳಲಾಗುತ್ತದೆ. ಹಾಗಾಗಿ ಎಲ್ಲಿಯೂ ಸಹ ಸಮಗ್ರ ಜ್ಞಾನದ ಕುರಿತ ಮೌಲ್ಯಮಾಪನ ನಡೆಯುವುದಿಲ್ಲ. ಇದರ ಜತೆಗೆ ಫಲಿತಾಂಶ ಹೆಚ್ಚಳಕ್ಕಾಗಿ ಇಲಾಖೆಯೇ ನೀಡುವ ಪ್ರಶ್ನೆಕೋಶ, ಮಾದರಿ ಪರೀಕ್ಷೆ ವ್ಯವಸ್ಥೆ ನೋಡು ವಾಗ ಬೋರ್ಡ್ ಪರೀಕ್ಷೆ ಎದುರಿಸಲು ವರ್ಷಪೂರ್ತಿ ಓದಬೇಕಿಲ್ಲ ಎಂದೆನಿಸುತ್ತಿದೆ.
ಇಂದು ಕೇವಲ ಪಿಯುಸಿ ಫಲಿತಾಂಶ ಹೆಚ್ಚಳಕ್ಕಾಗಿ ಶಿಕ್ಷಣ ಇಲಾಖೆ ಈ ಮಾರ್ಗ ಅನುಸರಿಸಿಲ್ಲ. ಬದಲಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಇದು ಮುಂದುವರಿದಿರುವುದು ಕಾಣಬಹುದು. ಈ ಬಾರಿ ಅತ್ಯುತ್ತಮ ಫಲಿತಾಂಶದ ಸಾಧನೆಗಾಗಿ ಈಗಾಗಲೇ 33 ಪಾಸ್ ಅಂಕ ಘೋಷಣೆ ಆಗಿದ್ದರೂ ಕೂಡ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳು ಕಾಣಸಿಗುತ್ತವೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಗೆ ನಿಯೋಜನೆಗೊಳ್ಳಲು ವಿಷಯ ಶಿಕ್ಷಕರು ಕನಿಷ್ಠ ಮೂರು ವರ್ಷ ಹತ್ತನೇ ತರಗತಿಗೆ ಬೋಧನೆ ಮಾಡಿದ ಅನುಭವ ಹೊಂದಿರಬೇಕೆಂಬ ನಿಯಮವಿದೆ. ಆದರೆ ಇತ್ತೀಚಿನ ಮೌಲ್ಯಮಾಪನದಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಪಾಲನೆ ಯಾಗುತ್ತಿಲ್ಲ ಎಂಬುದೇ ಆತಂಕದ ಸಂಗತಿ. ಈ ಬಾರಿ ಹಲವು ಶಾಲೆಗಳು ತಮ್ಮ ಶಾಲೆಯ ಶಿಕ್ಷಕ ರಲ್ಲದ, 6-8ನೇ ತರಗತಿ ಪಾಠ ಮಾಡುವ, ಅನುಭವವಿಲ್ಲದ ಶಿಕ್ಷಕರ ಹೆಸರನ್ನು ತಮ್ಮ ಶಾಲೆಯ ಸ್ಯಾಟ್ಸ್ ತಂತ್ರಾಂಶದಲ್ಲಿ ದಾಖಲಿಸಿ, ಅವರ ಹೆಸರನ್ನೇ ಮೌಲ್ಯಮಾಪಕರನ್ನು ಸೂಚಿಸಿರುತ್ತಾರೆ.
ಸಂಬಂಧಿಸಿದ ಬಿಇಓಗಳು ಇದ್ಯಾವುದನ್ನು ಪರಿಶೀಲಿಸದೆ ಅಂತಹವರನ್ನು ಮೌಲ್ಯಮಾಪನಕ್ಕೆ ನಿಯುಕ್ತಿಗೊಳಿಸುತ್ತಿದ್ದಾರೆ. ಅನುಭವ ಇಲ್ಲದಿದ್ದರೂ ಮೌಲ್ಯಮಾಪನ ಹೇಗೆ ಮಾಡಿದ್ದೀರಿ ಎಂದು ಕೇಳಿದರೆ ‘ಕೀ ಉತ್ತರ ನೋಡಿ’ ಎನ್ನುತ್ತಾರೆ. ಕೀ ಉತ್ತರ ನೋಡಿ ಮೌಲ್ಯಮಾಪನ ಮಾಡುವುದು ತಪ್ಪಲ್ಲ, ಹಾಗಂತ ಕೀ ಉತ್ತರ ನೋಡಿ ಮೌಲ್ಯಮಾಪನ ಮಾಡಲು ಶಿಕ್ಷಕರೇ ಆಗಬೇಕಿಂದಿಲ್ಲ, ಆ ಕೆಲಸವನ್ನು ಬ್ಯಾಂಕ್ ನೌಕರನೋ, ಪೊಲೀಸ್ ಅಧಿಕಾರಿಗಳೋ ಮಾಡಬಹುದಲ್ಲವೇ? ಈ ಹಿಂದೆ ದರ ಪರಿಷ್ಕರಣೆ ವಿಷಯದಲ್ಲಿ ಮೌಲ್ಯಮಾಪಕರು ಬಹಿಷ್ಕರಿಸುವ ಹೋರಾಟ ಮಾಡಿದಾಗಲೂ ಕೀ ಉತ್ತರ ನೀಡಿ ಬೇರೆಯವರಿಂದ ಮಾಡಿಸುತ್ತೇವೆ ಎಂಬ ಉಢಾಪೆಯ ಮಾತುಗಳು ಕೇಳಿ ಬಂದಿದ್ದವು.
ಅದುವೇ ಮೌಲ್ಯಮಾಪಕರಾಗಿ ಆಯ್ಕೆ ಆಗುವವರು ವಿಷಯದ ಮೇಲೆ ಹಿಡಿತ ಹೊಂದಿದವ ರಾಗಿದ್ದರೆ, ಮಕ್ಕಳಿಗೆ ಸೂಕ್ತ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಖಾಸಗಿ ಶಾಲೆಯಲ್ಲಿ ವರ್ಷ ವರ್ಷವೂ ಶಿಕ್ಷಕರು ಬದಲಾಗುತ್ತಲೇ ಇರುತ್ತಾರೆ. ಒಂದೆಡೆ ಗುಣಮಟ್ಟದ ಶಿಕ್ಷಕರ ಅಭಾವ ಇರುವಾಗ, ಮೊದಲ ಬಾರಿಗೆ ಹತ್ತನೇ ತರಗತಿಗೆ ಪಾಠ ಮಾಡುವ ಶಿಕ್ಷಕರು ಹೇಗೆ ಯೋಗ್ಯ ಮೌಲ್ಯಮಾಪನ ಮಾಡಲು ಸಾಧ್ಯ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೊದಲ ಬಾರಿಗೆ ಹತ್ತನೇ ತರಗತಿ ಪಾಠ ಮಾಡುವುದು ಬೇರೆ, ಮೊದಲ ಬಾರಿಗೆ ಮೌಲ್ಯಮಾಪನ ಮಾಡಲು ಆಯ್ಕೆ ಆಗುವುದು ಬೇರೆ. ಇವೆರಡರ ನಡುವೆ ಮೂರು ವರ್ಷಗಳ ಅನುಭವದ ವ್ಯತ್ಯಾಸವಿದೆ.
ಪ್ರಸ್ತುತ ದಿನಕ್ಕೆ 20 ಉತ್ತರ ಪತ್ರಿಕೆ ಅಷ್ಟೇ ಮೌಲ್ಯಮಾಪನ ಮಾಡಲು ನೀಡುತ್ತಿದ್ದಾರೆ. ಕನ್ನಡ ಭಾಷಾ ಉತ್ತರ ಪತ್ರಿಕೆ ಮೌಲ್ಯಮಾಪನ ವೆಚ್ಚ ರು.27 ಹಾಗೂ ಇತರ ವಿಷಯಕ್ಕೆ ರು.25 ಪ್ರತಿ ಉತ್ತರ ಪತ್ರಿಕೆಗೆ ನೀಡುತ್ತಾರೆ. ಒಬ್ಬ ಮೌಲ್ಯಮಾಪಕರಿಗೆ 100 ಉತ್ತರ ಪತ್ರಿಕೆ ನೀಡುತ್ತಾರೆ. ಒಂದೊಮ್ಮೆ ಫಲಿತಾಂಶದ ಬಳಿಕ ವಿದ್ಯಾರ್ಥಿ ಮರು ಮೌಲ್ಯಮಾಪನದಲ್ಲಿ 6ಕ್ಕಿಂತ ಹೆಚ್ಚು ಅಂಕ ಪಡೆದರೆ ಆ ಉತ್ತರ ಪತ್ರಿಕೆ ಮೌಲ್ಯಮಾಪಕರಿಗೆ ಒಂದು ಸಾವಿರ ದಂಡ ವಿಧಿಸಲಾಗುತ್ತದೆ.
ಪ್ರತಿ ಬಾರಿಯೂ ದಂಡ ತುಂಬಿದ ಹಲವು ನಿದರ್ಶನಗಳಿವೆ. ಹಾಗಾಗಿ ದಂಡದಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು 6 ರಿಂದ 8 ಅಂಕಗಳನ್ನು ಒಟ್ಟಾರೆಯಾಗಿ ಹೆಚ್ಚಿಗೆ ನೀಡುವ ಶಿಕ್ಷಕರು ಇದ್ದಾರೆ. ಇನ್ನೂ ಮೌಲ್ಯಮಾಪನ ಕೇಂದ್ರದಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಮೇಲ್ವಿಚಾರಕರ ಕಣ್ಣು ತಪ್ಪಿಸಿ ಮೊಬೈಲ್ ಬಳಕೆಯೂ ನಡೆಯುತ್ತದೆ. ಈ ರೀತಿಯ ಕಳಪೆ ಮೌಲ್ಯಮಾಪನದಿಂದ ಪಡೆದ ಅಂಕಗಳು ಉತ್ತಮ ಸಾಧನೆ ಹೇಗಾಗುತ್ತದೆ? ಒಂದೊಮ್ಮೆ ನಿಜವಾಗಿಯೂ ರಾಜ್ಯ ಶಿಕ್ಷಣ ಇಲಾಖೆ ಯು ಗುಣಮಟ್ಟ ಪ್ರಶ್ನಾಪತ್ರಿಕೆ, ಮೌಲ್ಯಾಮಾಪನ ವ್ಯವಸ್ಥೆಯ ಮೂಲಕ ಫಲಿತಾಂಶ ಪಡೆದಿದ್ದರೆ ಅಥವಾ ದಾಖಲಿಸಿದ್ದರೆ, ಪಿಯುಸಿ 99 ಪ್ರತಿಶತ ಪಡೆದ ವಿದ್ಯಾರ್ಥಿಗಳು ನೀಟ್, ಜೆಇಇ, ಐಐಟಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಏಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಸೀಟು ಪಡೆಯುತ್ತಿಲ್ಲ.
ಈ ವಿಷಯದಲ್ಲಿ ಸಿಬಿಎಸ್‌ಇ ಹಾಗೂ ಇತರ ಶಿಕ್ಷಣ ಇಲಾಖೆಯ ಮಕ್ಕಳೇ ಏಕೆ ಮೇಲುಗೈ? ನಮ್ಮಲ್ಲಿ ಕಟ್ಟಡಗಳ ನಿರ್ಮಾಣವೇ ಅಭಿವೃದ್ಧಿಯ ಸಂಕೇತ ವೆಂಬಂತೆ ಬಿಂಬಿಸಲಾಗುತ್ತದೆ. ಅದೇ ರೀತಿ ಶಿಕ್ಷಣ ಇಲಾಖೆ ಹಾಗೂ ಸಚಿವರು ತಮ್ಮ ಸರಕಾರದ ಅವಧಿಯಲ್ಲಿ ದಾಖಲೆಯ ಫಲಿತಾಂಶದ ಏರಿಕೆ ಹಾಗೂ ಅತಿ ಹೆಚ್ಚು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸುವಂತೆ ಮಾಡಿರುವುದೇ ಶಿಕ್ಷಣದ ಅಭಿವೃದ್ಧಿ ಎಂದುಕೊಂಡಿರುವ ಮನೋಭಾವನೆ ಬದಲಾಗಬೇಕಿದೆ. ಕೇವಲ ಅಂಕ ಏರಿಕೆಯಿಂದ ಪ್ರಯೋಜನವಿಲ್ಲ, ಬದಲಾಗಿ ಅಂಕಗಳ ಹಿಂದೆ ಜ್ಞಾನಾಧಾರಿತ ಕಲಿಕೆಯಾಗಬೇಕಾದ ಅಗತ್ಯವಿದೆ.