ವಿದ್ಯಮಾನ
vinayakavbhat@autoaxle.com
ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು 75 ವರ್ಷಗಳನ್ನು ಪೂರೈಸಿದ್ದಾರಂತೆ ಹೌದಾ? ಅವರ ಉತ್ಸಾಹ, ಜೀವನಪ್ರೀತಿ, ಶಾರೀರಿಕ ದೃಢತೆ, ಮಾನಸಿಕ ಸಮತೋಲನ, ಸಿಂಹದಂಥ ಸ್ಥಿರ ಗಂಭೀರ ನಡಿಗೆ ಹಾಗೂ ದಣಿವಿಲ್ಲದ ಅವರ ದಿನಚರಿಗಳನ್ನು ನೋಡುವಾಗ ಹಾಗನಿಸು ವುದಿಲ್ಲವಲ್ಲ!
75 ವಯಸ್ಸಿನವರು ಹೀಗಿರಲು ಸಾಧ್ಯವಿದೆಯಾ? ಎಂದೆನಿಸಿದರೆ ತಪ್ಪಲ್ಲ. ಆದರೆ, ಈ ವಯಸ್ಸಿ ನಲ್ಲೂ ಹೀಗಿರಲು, ಜೀವನ ಪೂರ್ತಿ ಅವರು ಪಾಲಿಸಿಕೊಂಡು ಬಂದ ಆಹಾರ ವಿಹಾರಗಳಲ್ಲಿನ ಶಿಸ್ತು, ಬಾಲ್ಯದಿಂದಲೇ ರೂಢಿಸಿಕೊಂಡು ಬಂದ ನಿಯತ ವ್ಯಾಯಾಮ ಹಾಗೂ ವರ್ತಮಾನದಲ್ಲಿ ಮಾತ್ರ ಬದುಕುವ ಮನಃಸ್ಥಿತಿಗಳೇ ಕಾರಣವಾಗಿವೆಯೇನೊ. ಇಂದು ಅವರ ಯಶಸ್ವಿ ಜೀವನ ಮಾತ್ರ ನಮ್ಮ ಕಣ್ಣು ಕುಕ್ಕುತ್ತಿದೆಯೇ ಹೊರತು, ಅದರ ಹಿಂದಿನ ಶಿಸ್ತು, ಶ್ರಮ, ತ್ಯಾಗ, ಸಮರ್ಪಣೆ ಹಾಗೂ ಪ್ರಯತ್ನಗಳು ಕಾಣುವುದಿಲ್ಲ.
ಇತಿಹಾಸ ಸೃಷ್ಟಿಸಿದ ಇಬ್ಬರು ನರೇಂದ್ರರನ್ನು ಭಾರತ ಎಂದೂ ಮರೆಯುವಂತಿಲ್ಲ. ಒಬ್ಬರು ವೀರಸನ್ಯಾಸಿ ವಿವೇಕಾನಂದರಾಗಿ ಭಾರತವನ್ನು ಬೆಳಗಿದರೆ, ಇನ್ನೊಬ್ಬರು ಭಾರತೀಯ ಅಸ್ಮಿತೆ ಯನ್ನು ಬಡಿದೆಬ್ಬಿಸಿ ಮತ್ತೆ ವಿಶ್ವಗುರುವನ್ನಾಗಿಸಲು ಹೊರಟವರಾಗಿದ್ದಾರೆ.

ಗುಜರಾತಿನಲ್ಲಿ ಬಡತಾಯಿಯ ಮಗನಾಗಿ ಜನಿಸಿ, ಭಾರತದ ಅತ್ಯುನ್ನತ ರಾಜಕೀಯ ಹುದ್ದೆಗೆ ಏರುವುದು ವೈಯಕ್ತಿಕ ಯಶಸ್ಸಿನ ಕಥೆಗಿಂತ ಹೆಚ್ಚಾಗಿ, ಭಾರತೀಯ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ, ನಿಖರವಾಗಿ ನಿರ್ಮಿಸಲಾದ ರಾಜಕೀಯ ವ್ಯಕ್ತಿತ್ವವೊಂದರ ವಿಕಸನವಾದ ಕಥೆಯಾಗಿದೆ. ಇದೆಲ್ಲ ರಾತ್ರಿ ಬೆಳಗಾಗುವುದರೊಳಗೆ ಆಗಿದ್ದಲ್ಲ, ದಶಕಗಳ ಹೋರಾಟ, ತ್ಯಾಗಗಳಿಂದ ನಿರ್ಮಿಸ ಲಾದ ಬ್ರ್ಯಾಂಡ್ ಆಗಿದ್ದು, ಮೋದಿಯವರ ಜೀವನದ ಪ್ರತಿಯೊಂದು ಹಂತವೂ ಅವರ ಇಂದಿನ ರಾಜಕೀಯ ಗುರುತಿಗೆ ಒಂದೊಂದು ಪುಟಗಳನ್ನು ಸೇರಿಸಿವೆ.
ಪ್ರಧಾನಿ ಮೋದಿಯವರ ರಾಜಕೀಯ ಪ್ರಯಾಣವು, ಅವರ ಇಪ್ಪತ್ತರ ವಯಸ್ಸಿನ ಆರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮಾನ್ಯ ಪ್ರಚಾರಕರಾಗಿ ಸೇರುವಲ್ಲಿಯಿಂದ ಆರಂಭ ವಾಯಿತು. ಶಿಸ್ತು, ಸಂಯಮ ಮತ್ತು ಸೈದ್ಧಾಂತಿಕ ಬದ್ಧತೆಯ ಸಂಸ್ಕೃತಿಯನ್ನು ಕಲಿಯುವುದರ ಮೂಲಕ ಸಂಘದೊಂದಿಗಿನ ಅವರ ಜೀವನ ರಚನಾತ್ಮಕವಾಗಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ, ಸಂಘದೊಂದಿಗಿನ ಸಹಜೀವನ ಅವರಿಗೆ ಸಾಮಾಜಿಕ ಹಾಗೂ ರಾಜಕೀಯ ಸಂಘಟನೆ ಮತ್ತು ಸೈದ್ಧಾಂತಿಕ ಸ್ಪಷ್ಟತೆಯ ಬಗ್ಗೆ ಆಳವಾದ ಒಳನೋಟಗಳನ್ನು ನೀಡಿದಂತೆ ಕಾಣುತ್ತದೆ.
ಭಾರತದಲ್ಲಿ ತುರ್ತು ಪರಿಸ್ಥಿತಿಯಿದ್ದ ಅವಧಿಯಲ್ಲಿ, ಗುಜರಾತ್‌ನಲ್ಲಿ ಅದನ್ನು ವಿರೋಧಿಸುವವ ರನ್ನು ಸಂಘಟಿಸಲು ಆರೆಸ್ಸೆಸ್‌ನಿಂದ ರಚಿಸಲಾದ ‘ಗುಜರಾತ್ ಲೋಕ ಸಂಘರ್ಷ ಸಮಿತಿ’ಯ ಪ್ರಧಾನ ಕಾರ್ಯದರ್ಶಿಯಾಗಿ ಮೋದಿಯವರನ್ನು ನೇಮಿಸಲಾಯಿತು. ಇದಾದ ಕೆಲವೇ ದಿನಗಳಲ್ಲಿ ಆರೆಸ್ಸೆಸ್ ಅನ್ನು ನಿಷೇಧಿಸಲಾಯಿತು. ಮೋದಿಯವರು ಗುಜರಾತ್‌ನಲ್ಲಿ ಭೂಗತರಾಗುವಂತಾ ಯಿತು.
ಇದನ್ನೂ ಓದಿ: Vinayaka V Bhat Column: ಅಭಂಗವಾರಿ: ಭಾರತೀಯ ಭಜನಾ ಸಂಸ್ಖೃತಿಯ ಪುನರುತ್ಥಾನ
1978ರಲ್ಲಿ ಮೋದಿ ಆರೆಸ್ಸೆಸ್‌ನ ಪ್ರಾದೇಶಿಕ ಸಂಘಟಕರಾದರು ಮತ್ತು 1979ರ ಹೊತ್ತಿಗೆ ದೆಹಲಿಗೆ ವರ್ಗಾಯಿತರಾದರು. ಮುಂದೆ, ಪಕ್ಷದ ಸಂಘಟನೆಗಾಗಿ ಸಂಘವು ಅವರನ್ನು ಬಿಜೆಪಿಗೆ ನೇಮಿಸಿತು. 1987ರಲ್ಲಿ, ಅಹಮದಾಬಾದ್ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರವನ್ನು ಸಂಘಟಿಸುವ ಹೊಣೆಯನ್ನು ಮೋದಿಯವರಿಗೆ ವಹಿಸಲಾಯಿತು.
ಅದನ್ನು ಪಕ್ಷವು ಸುಲಭವಾಗಿ ಗೆದ್ದಿತು ಕೂಡಾ. ಆಗ, ಮೋದಿಯವರ ಯೋಜನೆಯೇ ಈ ಗೆಲುವಿಗೆ ಕಾರಣವಾಗಿದೆ ಎನ್ನಲಾಯಿತು. ಎಲ್.ಕೆ. ಅಡ್ವಾಣಿ ಬಿಜೆಪಿಯ ಅಧ್ಯಕ್ಷರಾದ ನಂತರ, ಆರೆಸ್ಸೆಸ್ ತನ್ನ ಸದಸ್ಯರನ್ನು ಪಕ್ಷದೊಳಗೆ ಪ್ರಮುಖ ಸ್ಥಾನಗಳಲ್ಲಿ ಇರಿಸಲು ನಿರ್ಧರಿಸಿತು. ಹಾಗಾಗಿ, ಮೋದಿ ಬಿಜೆಪಿಯ ಗುಜರಾತ್ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದರು.
1990ರ ಹೊತ್ತಿಗೆ ಪಕ್ಷದೊಳಗೆ ಬೆಳೆಯುತ್ತಾ ಸಾಗಿದ ಮೋದಿಯವರು, ಅದರ ರಾಷ್ಟ್ರೀಯ ಚುನಾ ವಣಾ ಸಮಿತಿಯ ಸದಸ್ಯರಾಗಿ ನೇಮಕಗೊಂಡು ಆಡ್ವಾಣಿ ಅವರ ಸಂಘಟನೆಗಳಿಗೆ ಬೆನ್ನೆಲುಬಾಗಿ ನಿಂತರು. ರಾಮ ರಥಯಾತ್ರೆ ಮತ್ತು ಮುರಳಿ ಮನೋಹರ್ ಜೋಶಿಯವರ ಏಕತಾ ಯಾತ್ರೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡರು.
1992ರಲ್ಲಿ ಮೋದಿ ರಾಜಕೀಯದಿಂದ ಸ್ವಲ್ಪ ವಿರಾಮ ತೆಗೆದುಕೊಂಡಂತೆ ಕಾಣುತ್ತದೆ. 1994ರಲ್ಲಿ ಆಡ್ವಾಣಿ ಅವರ ಒತ್ತಾಯದ ಮೇರೆಗೆ ಮೋದಿ ಚುನಾವಣಾ ರಾಜಕೀಯಕ್ಕೆ ಮರಳಿದರು. 1995ರಲ್ಲಿ ಮೋದಿಯವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಮುಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ಒಟ್ಟಾರೆ ಬಹುಮತ ಗಳಿಸುವಲ್ಲಿನ ಅವರ ಕಾರ್ಯತಂತ್ರ ಎಲ್ಲರ ಗಮನ ಸೆಳೆಯಿತು.
ಹಾಗಾಗಿ, ಅದೇ ವರ್ಷ ಮೋದಿಯವರಿಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ನೀಡಲಾಯಿತು. ಬಿಜೆಪಿಯಲ್ಲಿನ ಅವರ ಆರಂಭಿಕ ವರ್ಷಗಳು ಹೆಚ್ಚಾಗಿ ಸಾರ್ವಜನಿಕರ ದೃಷ್ಟಿಗೆ ಬೀಳದೆಯೇ ಕಳೆದವು. ಅಲ್ಲಿ ಅವರು ಚುರುಕಾದ ರಾಜಕೀಯ ಸಂಘಟಕರಾಗಿ ಮಾತ್ರ ಖ್ಯಾತಿಯನ್ನು ಗಳಿಸಿದರು. ಆಗಲೂ ಅವರು ಪಕ್ಷಕ್ಕೆ ಮತ ತಂದುಕೊಡಬಲ್ಲ ಜನಪ್ರಿಯ ಜನನಾಯಕರಾಗಿರಲಿಲ್ಲ, ಆದರೆ ಅವರು ಬಿಜೆಪಿಯ ಚುನಾವಣಾ ಯಂತ್ರಕ್ಕೆ ಅನಿವಾರ್ಯವಾದ ತೈಲದಂತೆ ಕೆಲಸ ಮಾಡು ತ್ತಿದ್ದರು.
2001ರಲ್ಲಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಅಚ್ಚರಿಯ ಬಡ್ತಿ ಪಡೆದಿದ್ದು ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಯ ಕ್ಷಣದಲ್ಲಿ. ಅವರ ನೇಮಕಾತಿಯು ಪಕ್ಷದೊಳಗೆ ಸಂದೇಹ ಮತ್ತು ಪ್ರತಿರೋಧವನ್ನೂ ಎದುರಿಸಿತು. ಆದರೆ, ನಂತರದ ಘಟನೆಗಳು ರಾಷ್ಟ್ರೀಯ ವೇದಿಕೆಯಲ್ಲಿ ಅವರ ರಾಜಕೀಯ ಹೆಜ್ಜೆ ಗುರುತನ್ನು ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದವು.
ಅವರು ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ನಡೆದ ಗುಜರಾತ್ ಗಲಭೆಗಳು ಮತ್ತು ಅವರು ಅದನ್ನು ನಿರ್ವಹಿಸಿದ ರೀತಿ ಅವರ ವ್ಯಕ್ತಿತ್ವವನ್ನು ದೇಶಕ್ಕೆ ಪರಿಚಯಿಸುವುದರಲ್ಲಿ ನಿರ್ಣಾಯಕವಾಯಿತು. ಆಡಳಿತಾತ್ಮಕ ನಿಷ್ಕ್ರಿಯತೆ ಅಥವಾ ಗಲಭೆಯಲ್ಲಿ ಶಾಮೀಲಾಗಿರುವ ಆರೋಪಗಳೊಂದಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಗಳನ್ನು ಅವರು ಎದುರಿಸುವಂತಾಯ್ತು.
ಆದರೆ, ಮತದಾರರ ಕೆಲವು ವಲಯಗಳಲ್ಲಿ, ವಿಶೇಷವಾಗಿ ಹಿಂದೂ ರಾಷ್ಟ್ರೀಯವಾದಿ ಬೆಂಬಲಿಗ ರಲ್ಲಿ, ಉದಾರವಾದಿ ಅಥವಾ ಜಾತ್ಯತೀತ ಒತ್ತಡಗಳಿಗೆ ತಲೆಬಾಗದ ಪ್ರಬಲ, ಕ್ಷಮೆ ಯಾಚಿಸದ ನಾಯಕನಾಗಿ ಅವರ ವರ್ಚಸ್ಸನ್ನು ಬಲಪಡಿಸಿತು.
2002ರ ನಂತರ, ಮೋದಿ ಗುಜರಾತಿನ ಆರ್ಥಿಕ ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣೆಯತ್ತ ಗಮನ ವಹಿಸಿದರು. ಅವರು ಹೂಡಿಕೆದಾರರ ಶೃಂಗಸಭೆಗಳಿಗೆ ಚಾಲನೆ ನೀಡಿದರು, ಅಧಿಕಾರಶಾಹಿ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸಿದರು ಮತ್ತು ರಾಜ್ಯದಲ್ಲಿ ಮೂಲಸೌಕರ್ಯದ ಅಭಿವೃದ್ಧಿಗೆ ಒತ್ತುನೀಡಿದರು. ಅವರು ತಮ್ಮನ್ನು ಆರ್ಥಿಕ ಫಲಿತಾಂಶಗಳನ್ನು ನೀಡಬಲ್ಲ ‘ವ್ಯಾಪಾರ-ಪರ’ ಸುಧಾರಕ ಎಂದು ಬಿಂಬಿಸಿಕೊಳ್ಳಲು ಪ್ರಾರಂಭಿಸಿದರು, ಗುಜರಾತ್ ಅನ್ನು ಬೆಳವಣಿಗೆ ಮತ್ತು ದಕ್ಷತೆಯ ಮಾದರಿಯಾಗಿ ಜಗತ್ತಿನ ಮುಂದೆ ಬಿಂಬಿಸಿದರು.
ಅವರ ವೃತ್ತಿಜೀವನದ ಈ ಹಂತವು ಅವರ ‘ಬ್ರ್ಯಾಂಡ್’ಗೆ ಹೊಸ ಆಯಾಮವನ್ನೇ ನೀಡಿತು. ಅಲ್ಲಿಂದ ಮುಂದೆ, ಕೇವಲ ಸಿದ್ಧಾಂತ ಅಥವಾ ಸಾಂಸ್ಥಿಕ ನಿಷ್ಠೆಯಿಂದ ಮಾತ್ರ ವ್ಯಾಖ್ಯಾನಿತರಾಗದ ಮೋದಿ, ಉತ್ತಮ ತಾಂತ್ರಿಕ-ನಿರ್ವಾಹಕರಾಗಿ ಹೊರಹೊಮ್ಮಿದರು.
ವ್ಯವಹಾರಸ್ನೇಹಿ, ನಿರ್ಣಾಯಕ ಮತ್ತು ಫಲಿತಾಂಶ-ಆಧಾರಿತ ವ್ಯಕ್ತಿಯಾಗಿ ಅವರು ಗುರುತಿಸಿ ಕೊಂಡರು. ಅವರು ತಮ್ಮನ್ನು ಹಿಂದೂ ನಾಯಕರಾಗಿ ಮಾತ್ರವಲ್ಲದೆ, ಗುಜರಾತ್ ಅನ್ನು ಭಾರತದ ಅಭಿವೃದ್ಧಿ ಆಕಾಂಕ್ಷೆಗಳ ಪ್ರದರ್ಶನವಾಗಿ ಪರಿವರ್ತಿಸಿದ ಪುರೋಗಾಮಿ/ಆಧುನಿಕವಾದಿ ಎಂದೂ ಕರೆಸಿಕೊಂಡರು.
2014ರ ಸಾರ್ವತ್ರಿಕ ಚುನಾವಣೆಯು ಭಾರತೀಯ ರಾಜಕೀಯದಲ್ಲಿ ಒಂದು ಮಹತ್ವದ ಕ್ಷಣವಾಗಿತ್ತು. ಗುಜರಾತ್ ಮುಖ್ಯಮಂತ್ರಿ ಮೋದಿಯವರು ರಾಷ್ಟ್ರೀಯ ರಾಜಕೀಯ ಬ್ರ್ಯಾಂಡ್ ಆಗಿ ರೂಪಾಂತರ ಗೊಂಡ ಕಾಲವದು. ಬಿಜೆಪಿಯು ಮೋದಿಯವರನ್ನು ತನ್ನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವು ದರೊಂದಿಗೆ ಸಂಪೂರ್ಣವಾಗಿ ಅವರ ವ್ಯಕ್ತಿತ್ವ, ದೂರದೃಷ್ಟಿ ಮತ್ತು ರಾಷ್ಟ್ರೀಯ ನಾಯಕತ್ವದ ಮೇಲೆ ಕೇಂದ್ರಿತವಾಯಿತು.
ಸತತವಾಗಿ ಹತ್ತು ವರ್ಷಗಳ ಅಧಿಕಾರ ನಡೆಸಿದ್ದ ಕಾಂಗ್ರೆಸ್ಸಿನ ಸರಕಾರ, ಹಗರಣಗಳಿಂದ ಹೈರಾಣಾಗಿ ಹೋಗಿ ಜನಪ್ರಿಯತೆ ಕಳೆದುಕೊಂಡಿತ್ತು. ಹಾಗಿದ್ದೂ, 2014ರ ಚುನಾವಣೆಯಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ ತಂದುಕೊಡಬಲ್ಲವರು ಬಿಜೆಪಿಯಲ್ಲಿ ಯಾರೂ ಇರಲಿಲ್ಲವೆಂತಲೇ ಹೇಳಬೇಕು.
ಆಡ್ವಾಣಿಯವರಂಥ ಹಿರಿಯರಿದ್ದರೂ, ಪಕ್ಷವನ್ನು ಅಧಿಕಾರಕ್ಕೆ ತರುವ ಹುಮ್ಮಸ್ಸು-ಕ್ಷಮತೆಗಳು ಆಗ ವಯಸ್ಸಿನ ಕಾರಣದಿಂದ ಅವರಿಗಿರಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಅನೇಕ ಹಿರಿಯರ ವಿರೋಧದ ನಡುವೆಯೂ ಪಕ್ಷದ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಅವರು ಮೋದಿ ಯವರ ಬೆಂಬಲಕ್ಕೆ ನಿಂತರು.
ಬಡತನದ ಹಿನ್ನೆಲೆಯಿಂದ ಬಂದ ಸ್ವಯಂನಿರ್ಮಿತ ವ್ಯಕ್ತಿ, ಅರ್ಹತೆ ಮತ್ತು ದೃಢತೆಯಿಂದ ಮೇಲೇರಿದ ಚಾಯ್‌ವಾಲಾ ಮೋದಿ, ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕಾರಣಕ್ಕೆ ಸೆಡ್ಡು ಹೊಡೆದು ನಿಂತರು. ಅವರ ಭಾಷಣಗಳು, ರಾಷ್ಟ್ರೀಯತೆ, ಭರವಸೆಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಸ್ವಚ್ಛ ಆಡಳಿತದ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿತ್ತು.
‘ಅಬ್ ಕಿ ಬಾರ್, ಮೋದಿ ಸರ್ಕಾರ್’ ಎಂಬ ಪ್ರಚಾರ ಘೋಷಣೆಯು ಬದಲಾವಣೆಯ ಮನಸ್ಥಿತಿ, ಯುಪಿಎ ಸರಕಾರದ ಬಗೆಗಿನ ಹತಾಶೆ ಮತ್ತು ಪ್ರಬಲ, ನಿರ್ಣಾಯಕ ನಾಯಕನ ಮೇಲಿನ ನಂಬಿಕೆಯ ಮೂಲಕ ಮತದಾರನನ್ನು ಸೆರೆ ಹಿಡಿಯಿತು. ಸಾಮಾಜಿಕ ಮಾಧ್ಯಮಗಳು, ನೂರಾರು ಸಾರ್ವಜನಿಕ ಸಭೆಗಳು ಮತ್ತು ಸಾಮೂಹಿಕ ಜನಸಂಪರ್ಕ ಕಾರ್ಯಕ್ರಮಗಳ ಮೂಲಕ ಅವರು ಭಾರತದ ಮತದಾರನನ್ನು ಸರ್ವವ್ಯಾಪಿಯಾಗಿ ಆವರಿಸಿದರು.
ಬಿಜೆಪಿ ಈ ಚುನಾವಣೆಯನ್ನು ಮೋದಿಯವರ ವ್ಯಕ್ತಿತ್ವದ ಆಧಾರದ ಗೆದ್ದಿತ್ತು. ಪ್ರಧಾನಿಯಾಗಿ ಮೋದಿಯವರ ಅಧಿಕಾರಾವಧಿಯನ್ನು ಅವರ ಆಮೂಲಾಗ್ರ ಸುಧಾರಣೆಗಳು, ಅಧಿಕಾರದ ಕೇಂದ್ರೀಕರಣ ಮತ್ತು ಕಾರ್ಯಕ್ಷಮತೆಯ ರಾಜಕೀಯವೆಂದು ವ್ಯಾಖ್ಯಾನಿಸಲಾಗಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ ಜಾರಿ, ಆರ್ಥಿಕತೆಯ ಡಿಜಿಟಲೀಕರಣ, 370ನೇ ವಿಧಿಯನ್ನು ರದ್ದು ಗೊಳಿಸುವುದು, ತ್ರಿವಳಿ ತಲಾಖ್ ರದ್ದು, ಆತ್ಮನಿರ್ಭರ ಭಾರತ, ರಾಮ ಮಂದಿರ ಉದ್ಘಾಟನೆ ಮತ್ತು ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಮುಂತಾದ ಪ್ರಮುಖ ನಿರ್ಧಾರಗಳು, ಅವರನ್ನು ರಾಜಕೀಯ ಪರಿಣಾಮಗಳಿಗೆ ಹೆದರದ ದಿಟ್ಟ, ನವೀನ ಚಿಂತನೆಯ ಮತ್ತು ಅಪಾಯವನ್ನು ತೆಗೆದುಕೊಳ್ಳುವ-ತಡೆದುಕೊಳ್ಳುವ ನಾಯಕ ಎಂದು ಸಾಬೀತುಪಡಿಸಿದವು.
ಹೊಸ ಹೊಸ ಹೆದ್ದಾರಿಗಳು, ಸುರಂಗಗಳು, ಸೇತುವೆಗಳು, ರೈಲ್ವೆ ಮತ್ತು ವಿಮಾನ ನಿಲ್ದಾಣಗಳು ಸೇರಿದಂತೆ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಗುರಿಯನ್ನು ಸಾಧಿಸಿರುವುದರಿಂದ, ಮೋದಿಯವರನ್ನು ರಾಷ್ಟ್ರದ ‘ಮಾಸ್ಟರ್ ಬಿಲ್ಡರ್’ ಎಂದು ಗುರುತಿಸಲಾಯಿತು.
ಮುಂದೆ, ತಮ್ಮ ಶುದ್ಧ ಚಾರಿತ್ರ್ಯದ ಮೂಲಕ ಜನಪ್ರಿಯತೆಯನ್ನು ಉಳಿಸಿಕೊಂಡು, ಮತ್ತೆರಡು ಬಾರಿ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದಿದ್ದು, ರಾಜ್ಯಗಳ ನಂತರ ರಾಜ್ಯಗಳನ್ನು ಗೆದ್ದಿದ್ದು ಹಾಗೂ ಇಂದಿಗೂ ದೇಶದಲ್ಲಿ ಸಾಟಿಯಿಲ್ಲದ ಪ್ರಶ್ನಾತೀತ ನಾಯಕನಾಗಿ ಉಳಿದುಕೊಂಡಿದ್ದು ಒಂದು ಇತಿಹಾಸವೇ ಆಗಿದೆ. ಜತೆಗೆ, ಅವರು ಸಾಕಾರಗೊಳಿಸಿದ ವಿವಿಧ ಕಲ್ಯಾಣ ಯೋಜನೆಗಳು ಬಡತನದ ಅಂಚಿನಲ್ಲಿರುವವರಲ್ಲಿ ಹೊಸ ಭರವಸೆಯನ್ನು ಮೂಡಿಸಿವೆ.
ಅವರು ಕೋವಿಡ್ ಕಾಲದಲ್ಲಿ ದೇಶಕ್ಕೆ ಧೈರ್ಯ ತುಂಬುತ್ತಾ ಮುನ್ನಡೆಸಿದ ಪರಿಯನ್ನಂತೂ ಮರೆಯುವಂತೆಯೇ ಇಲ್ಲ. ಅದೇ ಸಮಯದಲ್ಲಿ ಅವರು ತಮ್ಮನ್ನು ಜಾಗತಿಕವಾಗಿ ಚಾಣಾಕ್ಷ ರಾಜನೀತಿಜ್ಞನಾಗಿಯೂ ತೋರ್ಪಡಿಸಿದರು. ವಿಶ್ವನಾಯಕರೊಂದಿಗೆ ಉತ್ತಮ ವೈಯಕ್ತಿಕ ಸಮೀಕರಣಗಳನ್ನು ರೂಪಿಸಿಕೊಂಡರು ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪುನರು ತ್ಥಾನಗೊಂಡ ನಾಗರಿಕ ಶಕ್ತಿಯಾಗಿ ಪ್ರಸ್ತುತಪಡಿಸಿದರು.
ಒಂದು ಕಾಲದಲ್ಲಿ ಅಮೆರಿಕಕ್ಕೆ ಹೋಗಲು ವೀಸಾ ನಿರಾಕರಿಸಲ್ಪಟ್ಟ ಮೋದಿ, ಇಂದು ಅಮೆರಿಕಕ್ಕೆ ಅತ್ಯಾಪ್ತರಾದರು. ಇಂದು ಅನೇಕ ಅಂತಾರಾಷ್ಟ್ರೀಯ ಸಂಧಾನಗಳಲ್ಲಿ ದೊಡ್ಡ ದೊಡ್ಡ ದೇಶಗಳ ನಾಯಕರನ್ನು ಬದಿಗಿಟ್ಟು, ಮೋದಿಯವರಿಗೆ ಮಣೆ ಹಾಕುವಂತಾಯ್ತು.
ಇವೆಲ್ಲದರ ನಡುವೆ ಹಿಂದೂ ಅಸ್ಮಿತೆಯ ರಕ್ಷಕನಾಗಿ ಕಾಣುವ ಅವರ ಗಾಢವಾದ ‘ಇಮೇಜ್’, ಪ್ರಧಾನಿಯಾಗಿಯೂ ಬದಲಾಗದ ಅವರ ನಡವಳಿಕೆಗಳಿಂದಾಗಿ ಹಾಗೆಯೇ ಉಳಿಯಿತು. ಯೋಗ ದಿನಾಚರಣೆಯಿಂದ ಹಿಡಿದು ದೇವಾಲಯಗಳಿಗೆ ಹಾಗೂ ಧಾರ್ಮಿಕ ಸಮಾರಂಭಗಳಿಗೆ ಇತ್ತ ಅವರ ಭೇಟಿಗಳು, ಮೋದಿ ಅವರನ್ನು ಹಿಂದಿನ ಯಾವುದೇ ಪ್ರಧಾನಿ ನಡೆದುಕೊಳ್ಳದ ರೀತಿಯಲ್ಲಿ ನಡೆದು ತೋರಿಸಿ, ಆಡಳಿತವನ್ನು ಸಾಂಸ್ಕೃತಿಕ ರಾಷ್ಟ್ರೀಯತೆಯೊಂದಿಗೆ ಜೋಡಿಸಿದ ಪ್ರಧಾನಿ ಎನ್ನುವಂತೆ ಮಾಡಿದವು.
ಪ್ರಧಾನಿಯಾಗಿ, ಮೋದಿ ಅವರು ನಾಗರಿಕರ ಜತೆಗಿನ ಸಂವಹನದಲ್ಲೂ ಕ್ರಾಂತಿ ಯನ್ನುಂಟು ಮಾಡಿದ್ದಾರೆ. ತಮ್ಮ ರೇಡಿಯೋ ಭಾಷಣ ಕಾರ್ಯಕ್ರಮವಾದ ‘ಮನ್ ಕಿ ಬಾತ್’ ಮತ್ತು ನಿರಂತರ ಡಿಜಿಟಲ್ ಸಂಪರ್ಕದ ಮೂಲಕ, ಅವರು ಸಾರ್ವಜನಿಕರೊಂದಿಗೆ ನೇರ ಸಂಪರ್ಕವನ್ನು ಸಾಧಿಸಿ ದ್ದಾರೆ. ಹಾಗೆ ಮಾಡುವ ಮೂಲಕ, ಅವರು ರಾಜಕೀಯ ನಾಯಕ ಮತ್ತು ನಾಗರಿಕರ ನಡುವಿನ ಸಂಬಂಧವನ್ನು ಮರುವ್ಯಾಖ್ಯಾನಿಸಿದ್ದಾರೆ ಎಂತಲೇ ಹೇಳಬಹುದು.
ಮೋದಿಯವರಿಗೆ ತಾವು ಒಂದುದಿನ ಈ ದೇಶದ ಪ್ರಧಾನಿಯಾಗುವ ನಂಬಿಕೆ ಇತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಕನಸಂತೂ ಇತ್ತು ಅಂತ ಕಾಣುತ್ತದೆ. ತಾವು ಪ್ರಧಾನಿಯಾದರೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎನ್ನುವ ಕುರಿತು ಸ್ಪಷ್ಟವಾದ ಚಿಂತನೆ, ಕಾರ್ಯತಂತ್ರ ಇತ್ತು ಎನ್ನು ವುದು ಭಾಸವಾಗುತ್ತದೆ. ಹಾಗೆ ಪೂರ್ವಯೋಜನೆಯಿಲ್ಲದೇ, ತಯಾರಿ ಇಲ್ಲದೇ, ಒಂದು ಪ್ರದೇಶಕ್ಕೆ ಸೀಮಿತವಾದ ವ್ಯಕ್ತಿಯೊಬ್ಬ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಮಾಣದ ಯಶಸ್ಸು ಗಳಿಸಲು ಸಾಧ್ಯವೇ ಇಲ್ಲ.
ಅಧಿಕಾರ, ಅವಕಾಶ ಎನ್ನುವುದು ಸಿಕ್ಕುವುದು ಒಂದು ಕಡೆಯಾದರೆ, ಅದನ್ನು ಉಳಿಸಿ-ಬೆಳೆಸಿ ಕೊಂಡು ಹೋಗುವುದು ಸಮರ್ಥರಿಗೆ ಮಾತ್ರ ಸಾಧ್ಯವಾಗುತ್ತದೆ. ಅಂತೂ, ವಿಶ್ವ ಕುಟುಂಬದ ಬೋಧನೆ ಮಾಡುವ ಸನಾತನ ಭಾರತದ ಅಸ್ಮಿತೆಯಾಗಿರುವ ಮೋದಿಯವರು 75 ಸಾರ್ಥಕ ವಸಂತಗಳನ್ನು ಪೂರೈಸುತ್ತಿರುವ ಈ ಹೊತ್ತಿನಲ್ಲಿ, ಭಾರತೀಯರಾಗಿ ನಾವು ಹೇಳಬಹುದಾದದ್ದಿಷ್ಟೇ: ‘ಶತಮಾನಂ ಭವತಿ ಶತಾಯುಃ ಪುರುಷಃ ಶತೇಂದ್ರಿಯಃ ಆಯುಷ್ಯೇವೇಂದ್ರಿಯೇ ಪ್ರತಿಷ್ಠತಿ.... ದೀರ್ಘಾಯುಷ್ಯಮಸ್ತು’..