ಒಂದೊಳ್ಳೆ ಮಾತು
ನಮ್ಮ ಇಡೀ ದಿನಚರಿ ಗಡಿಯಾರದ ಮುಳ್ಳುಗಳ ಜತೆಗಿನ ಓಟದ ಮುಗಿದುಹೋಗುತ್ತದೆ. ಬೆಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಟೈಮ್ ಟೇಬಲ್ ರೀತಿಯಲ್ಲಿ ನಡೆಯುತ್ತಿರುತ್ತದೆ.. ವಿಪರ್ಯಾಸವೆಂದರೆ, ಮನಸ್ಸಿಗೆ ಶಾಂತಿ ತರಬೇಕಾದ ಪೂಜೆ ಮತ್ತು ಪ್ರಾರ್ಥನೆಯಲ್ಲೂ ಇದೇ ಧಾವಂತ, ಸಮಯದ ಮಿತಿ ನುಸುಳಿಬಿಟ್ಟಿದೆ.
ದೇವರಿಗೆ ದೀಪ ಹಚ್ಚಿ, ನಾಲಿಗೆ ತುದಿಯಲ್ಲಿ ಸ್ತೋತ್ರಗಳನ್ನು ಪಟಪಟನೆ ಹೇಳಿ, ಇವತ್ತಿನ ಪೂಜೆ ಮುಗಿಯಿತು ಎಂದು ನಿಟ್ಟುಸಿರು ಬಿಡುವ ಹಂತಕ್ಕೆ ನಾವು ತಲುಪಿದ್ದೇವೆ. ಆದರೆ, ಆಧ್ಯಾತ್ಮ ಎನ್ನುವುದು ಮುಗಿಸಿ ಕೈ ತೊಳೆದುಕೊಳ್ಳುವ ಕರ್ತವ್ಯವಲ್ಲ; ಅದು ನಮ್ಮ ಅಂತರಂಗದೊಂದಿಗೆ ನಾವು ನಡೆಸುವ ಮೌನ ಸಂವಾದ.
ಇದಕ್ಕೆ ಅತ್ಯುತ್ತಮ ನಿದರ್ಶನ ‘ಶ್ರೀ ಲಲಿತಾ ಸಹಸ್ರನಾಮ’. ಬ್ರಹ್ಮಾಂಡ ಪುರಾಣದ ಲಲಿತೋ ಪಾಖ್ಯಾನದಲ್ಲಿ ಬರುವ ಈ ಅದ್ಭುತ ಸ್ತೋತ್ರವನ್ನು ಯಾವುದೇ ಸಾಮಾನ್ಯ ಮನುಷ್ಯರು ಬರೆದಿಲ್ಲ. ಜಗನ್ಮಾತೆಯಾದ ಲಲಿತಾ ಮಹಾತ್ರಿಪುರ ಸುಂದರಿಯ ಆಜ್ಞೆಯ ಮೇರೆಗೆ, ಮಾತಿನ ಅಧಿದೇವತೆ ಗಳಾದ ಅಷ್ಟ ವಾಗ್ಮಿ ದೇವಿಯರು (ವಶಿನಿ, ಕಾಮೇಶ್ವರಿ, ಮೋದಿನಿ, ವಿಮಲಾ, ಅರುಣಾ, ಜಯಿನೀ, ಸರ್ವೇಶ್ವರಿ, ಕೌಳಿನಿ) ಇದನ್ನು ರಚಿಸಿದರು ಎನ್ನಲಾಗುತ್ತದೆ.
ಇದನ್ನೂ ಓದಿ: Roopa Gururaj Column: ಉದ್ಧಟತನದಿಂದ ತನ್ನ ನಾಶಕ್ಕೇ ಕಾರಣನಾದ ಕೃಷ್ಣನ ಪುತ್ರ ಸಾಂಬ
ಮಹಾ ವಿಷ್ಣುವಿನ ಅವತಾರವಾದ ಹಯಗ್ರೀವರು ತಪಸ್ವಿ ಅಗಸ್ತ್ಯ ಮಹರ್ಷಿಗಳಿಗೆ ಬೋಧಿಸಿದ ಸಂವಾದ ರೂಪದಲ್ಲಿ ಇದು ಉಪಲಬ್ಧವಿದೆ. ಲೋಕಕಲ್ಯಾಣಕ್ಕಾಗಿ ಮತ್ತು ಭಕ್ತರ ಅಜ್ಞಾನ, ಪಾಪಗಳನ್ನು ಕಳೆದು ಮುಕ್ತಿ ನೀಡಲು ಜಗನ್ಮಾತೆಯೇ ಸ್ವತಃ ಅನುಗ್ರಹಿಸಿದ ಶ್ರೇಷ್ಠ ರಹಸ್ಯವಿದು. ಈ ಸ್ತೋತ್ರದಲ್ಲಿರುವ ಪ್ರತಿಯೊಂದು ಹೆಸರೂ ಕೇವಲ ಅಕ್ಷರಗಳ ಜೋಡಣೆಯಲ್ಲ; ಅವು ಬ್ರಹ್ಮಾಂಡದ ಶಕ್ತಿಯನ್ನು ಹೊಮ್ಮಿಸುವ ಒಂದೊಂದು ಜೀವಂತ ಮಂತ್ರಗಳು.
ಹಾಗಾದರೆ, ಇಂತಹ ದಿವ್ಯ ಸ್ತೋತ್ರವನ್ನು ನಾವು ಹೇಗೆ ಅನುಸಂಧಾನ ಮಾಡಬೇಕು? ಒಮ್ಮೆ ಯೋಚಿಸಿ, ಸುಂದರವಾದ ಉದ್ಯಾನವನದಲ್ಲಿ ನಡೆಯುವಾಗ ನಾವು ಓಡುತ್ತಾ ಹೋಗಿ ಬಾಗಿಲು ಮುಟ್ಟಲು ಯತ್ನಿಸುತ್ತೇವೆಯೇ? ಇಲ್ಲ. ಅಲ್ಲಿರುವ ಮರ-ಗಿಡಗಳ ಗಾಳಿಗೆ ಮೈಯೊಡ್ಡಿ ಹೂವಿನ ಬಣ್ಣ ನೋಡಿ, ಸುವಾಸನೆ ಆಸ್ವಾದಿಸುತ್ತಾ ಹೆಜ್ಜೆ ಹಾಕುತ್ತೇವೆ. ಸಹಸ್ರನಾಮದ ಸಾವಿರ ಹೆಸರುಗಳೂ ಆ ತಾಯಿಯ ಗುಣ, ಕರುಣೆ ಮತ್ತು ಸೌಂದರ್ಯದ ದಿವ್ಯ ಪುಷ್ಪಗಳು.
‘ಶ್ರೀಮಾತಾ’ ಎಂದು ಮೊದಲ ನಾಮವನ್ನು ಉಚ್ಚರಿಸುವಾಗ, ನಮಗೆ ಜನ್ಮವಿತ್ತ ತಾಯಿಯ ಪ್ರೀತಿ, ಇಡೀ ವಿಶ್ವವನ್ನು ಸಲಹುವ ಜಗನ್ಮಾತೆಯ ವಾತ್ಸಲ್ಯ ಕಣ್ಣೆದುರು ತಂದುಕೊಳ್ಳುತ್ತಾ, ಆಕೆಯ ಕಣ್ಣು, ನಗು, ಅಭಯ ಹಸ್ತಗಳನ್ನು ಮನಸ್ಸಿನ ಚಿತ್ರಿಸಿಕೊಳ್ಳಬೇಕು. ವೇಗವಾಗಿ ಸಾವಿರ ಹೆಸರು ಹೇಳಿ ಮುಗಿಸುವುದಕ್ಕಿಂತ, ಅರ್ಥ ತಿಳಿದು, ಭಕ್ತಿಯಿಂದ ಹೇಳುವ ಹತ್ತು ಹೆಸರುಗಳು ಅಂತರಂಗದಲ್ಲಿ ಹೆಚ್ಚು ಬೆಳಕು ತರುತ್ತವೆ.
ಪುರಾಣಗಳು ಹೇಳುವಂತೆ, ಈ ನಾಮಗಳ ನಿರಂತರ ಪಾರಾಯಣದಿಂದ ಮನಸ್ಸಿನ ಆತಂಕ, ಭಯ ಮತ್ತು ಖಿನ್ನತೆ ದೂರವಾಗುತ್ತದೆ. ನಕಾರಾತ್ಮಕ ಆಲೋಚನೆಗಳು ಕರಗಿ, ಆಂತರಿಕ ಸ್ಥೈರ್ಯ ಬೆಳೆಯುತ್ತದೆ. ಕುಟುಂಬದಲ್ಲಿ ನೆಮ್ಮದಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸುತ್ತದೆ. ಆದರೆ ಈ ಎಲ್ಲಕ್ಕಿಂತ ಮಿಗಿಲಾದದ್ದು ತಾಯಿಯ ಒಡ ನಾಟ. ಆಕೆ ‘ಭಕ್ತ ಸುಲಭೆ’; ಕಠಿಣ ನಿಯಮ ಗಳಿಗಿಂತ ಹೆಚ್ಚಾಗಿ ಭಕ್ತಿಯ ಆರ್ದ್ರತೆಗೆ ಕರಗುವ ವಳು. ಸಂಸ್ಕೃತದ ಉಚ್ಚಾರಣೆ ಸ್ವಲ್ಪ ತಪ್ಪಾದರೂ, ಮಗು ವಿನ ಮುಗ್ಧ ತೊದಲು ನುಡಿಯನ್ನು ತಾಯಿ ಸಂಭ್ರಮಿಸುವಂತೆ ಆಕೆ ಸ್ವೀಕರಿಸುತ್ತಾಳೆ.
ಇಂದಿನಿಂದ ನಮ್ಮ ಪೂಜೆಯ ಶೈಲಿಯನ್ನು ಕೊಂಚ ಬದಲಾಯಿಸಿಕೊಳ್ಳೋಣ. ಯಾವುದೇ ಮಂತ್ರ ಪಠಣವನ್ನು ಯಾಂತ್ರಿಕವಾಗಿ ಅಂದಿನ ದಿನಚರಿಯಂತೆ ಮಾಡದೆ ನಿಧಾನವಾಗಿ ಉಸಿರೆಳೆದು ಕೊಂಡು, ಪ್ರತಿಯೊಂದು ಹೆಸರಿಗೂ ಸ್ವಲ್ಪ ವಿರಾಮ ಕೊಡುತ್ತಾ ಅರ್ಥ ಮಾಡಿಕೊಳ್ಳುವ ಪ್ರಯತ್ನ ವನ್ನು ಮಾಡೋಣ. ಲಲಿತಾ ಸಹಸ್ರ ನಾಮವನ್ನು ಪಠಿಸುವ ಸದವಕಾಶ ದೊರೆತರೆ ಅದರಲ್ಲಿನ ಒಂದೊಂದು ಹೆಸರಿನ ಅರ್ಥವನ್ನೂ ಬಲ್ಲವರಿಂದ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಸಾವಿರ ಹೆಸರೂ ಒಂದೇ ದಿನ ಮುಗಿಯಬೇಕೆಂದಿಲ್ಲ; ದಿನಕ್ಕೆ ನೂರು ನಾಮವಾದರೂ ಸರಿ, ಪೂರ್ಣ ಪ್ರeಯಿಂದ ಧ್ಯಾನಿಸೋಣ. ತಾಯಿ ಲಲಿತಾದೇವಿಯನ್ನು ‘ಭಕ್ತಚಿತ್ತ ಕೇಕಿ ಘನಾಘನಾ’ (ಭಕ್ತರ ಮನಸ್ಸೆಂಬ ನವಿಲಿಗೆ ಕಾರ್ಮೋಡದಂತೆ ಸಂತೋಷ ನೀಡುವವಳು) ಎನ್ನಲಾಗುತ್ತದೆ. ಆದ್ದರಿಂದ ಕಠಿಣ ನಿಯಮಗಳಿಗಿಂತ ಹೆಚ್ಚಾಗಿ ನಿಷ್ಕಲ್ಮಶ ಭಕ್ತಿಯಿಂದ ಒಂದು ನಾಮವನ್ನು ಕರೆದರೂ ತಾಯಿ ಒಲಿಯುತ್ತಾಳೆ. ಜಗತ್ತಿನ ಕೋಟ್ಯಂತರ ಜನರಲ್ಲಿ ನಮಗೆ ಆಕೆಯ ನಾಮಸ್ಮರಣೆ ಮಾಡುವ ಮನಸ್ಸಾಗಿದೆ ಎಂದರೆ, ಅದು ಆಕೆಯ ಕೃಪೆಯ ಕರೆಯೋಲೆ. ಆ ಕರೆಯನ್ನು ಗೌರವಿಸಿ. ಅಮ್ಮನ ಮಡಿಲಲ್ಲಿ ಕುಳಿತ ಮಗುವಿನಂತೆ ಆ ನಾಮಗಳಲ್ಲಿ ವಿರಮಿಸಿ; ತಾಯಿ ಲಲಿತೆಯ ಕೃಪೆಗೆ ಪಾತ್ರರಾಗೋಣ.