ಒಂದೊಳ್ಳೆ ಮಾತು
ಪುರಾಣಗಳ ಪ್ರಕಾರ, ಮಹಾದೇವನಾದ ಶಿವನ ದಿವ್ಯ ಪರಿವಾರದಲ್ಲಿ ‘ಶಿವಗಣಗಳು’ ಅತ್ಯಂತ ಪ್ರಮುಖ ಮತ್ತು ವಿಸ್ಮಯಕಾರಿ ಪಾತ್ರವನ್ನು ವಹಿಸುತ್ತವೆ. ಶಿವಪುರಾಣ, ಲಿಂಗಪುರಾಣ ಹಾಗೂ ಸ್ಕಂದಪುರಾಣ ಗಳಲ್ಲಿ ಈ ಗಣಗಳ ಉತ್ಪತ್ತಿ, ಅವರ ದೈವಿಕ ಶಕ್ತಿ ಮತ್ತು ಕೈಲಾಸದಲ್ಲಿ ಅವರ ಸ್ಥಾನ ಮಾನಗಳ ಬಗ್ಗೆ ವಿಸ್ತಾರವಾದ ಪೌರಾಣಿಕ ಉಲ್ಲೇಖಗಳಿವೆ.
'ಗಣ' ಎಂದರೆ ದೇವಸೇನೆ ಅಥವಾ ದೈವಿಕ ಶಕ್ತಿಗಳ ಗುಂಪು. ಪುರಾಣಗಳ ಪ್ರಕಾರ, ಈ ಗಣಗಳು ಸೃಷ್ಟಿಯ ಆದಿಯಲ್ಲಿ ಶಿವನ ವಿಭಿನ್ನ ಶಕ್ತಿಗಳಿಂದ ಮತ್ತು ಅವನ ದಿವ್ಯ ಸಂಕಲ್ಪದಿಂದ ಜನಿಸಿದವು. ಇತರ ದೇವತೆಗಳು ದೇವಲೋಕದಲ್ಲಿ ಯಕ್ಷ-ಗಂಧರ್ವ ರೊಂದಿಗೆ ವಾಸಿಸಿದರೆ, ಬ್ರಹ್ಮಾಂಡದ ಲಯಕಾರಕನಾದ ಶಿವನು ಮಾತ್ರ ಸ್ಮಶಾನವಾಸಿ, ನಿಶಾಚರ ಹಾಗೂ ಸಮಾಜದಿಂದ ಅಪವಿತ್ರರೆಂದು ಪರಿಗಣಿಸಲ್ಪಟ್ಟ ಭೂತ, ಪ್ರೇತ, ಪಿಶಾಚಿ, ಬೇತಾಳ ಮತ್ತು ಬ್ರಹ್ಮರಾಕ್ಷಸರನ್ನು ತನ್ನ ಗಣಗಳನ್ನಾಗಿ ಸ್ವೀಕರಿಸಿದ್ದಾನೆ. ಬಾಹ್ಯ ರೂಪಕ್ಕಿಂತ ಆಂತರಿಕ ಭಕ್ತಿ ಶ್ರೇಷ್ಠವೆಂಬುದನ್ನು ಪೌರಾಣಿಕವಾಗಿ ನಿರೂ ಪಿಸಲು ಶಿವನು ಈ ಸಮಸ್ತ ಅಲೌಕಿಕ ಜೀವಿಗಳನ್ನು ಕೈಲಾಸದಲ್ಲಿ ತನ್ನ ನಿರಂತರ ಸಹಚರರನ್ನಾಗಿ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: Roopa Gururaj Column: ಹರಿಭಕ್ತಿಸಾರ 8: ನಿಂದನೆಯನ್ನು ಸಾಧನೆಯ ಮೆಟ್ಟಿಲಾಗಿಸುವ ಪರಿ
ತಾಯಿ ಪಾರ್ವತಿಯು ವಿವಾಹವಾಗಿ ಕೈಲಾಸಕ್ಕೆ ಬಂದಾಗ, ಪ್ರಧಾನ ಗಣನಾದ ನಂದೀಶ್ವರನು ಅವಳಿಗೆ ಸಾತ್ವಿಕ ಹಾಗೂ ತಾಮಸಿಕ ಗಣಗಳ ಸಂಪೂರ್ಣ ಪರಿಚಯವನ್ನು ಮಾಡಿಕೊಡುತ್ತಾನೆ ಎಂದು ಶಿವಪುರಾಣದಲ್ಲಿ ಉಲ್ಲೇಖವಿದೆ. ಅವರಲ್ಲಿ ಪ್ರಮುಖರೆಂದರೆ:
ಗಣಪತಿ (ಗಣನಾಥ):ಶಿವ-ಪಾರ್ವತಿಯರ ಪುತ್ರನಾದ ಈತನು ಸಮಸ್ತ ಶಿವಗಣಗಳ ಸರ್ವಾಧಿಕಾರಿ ಹಾಗೂ ನಾಯಕ. ಪುರಾಣಗಳ ಪ್ರಕಾರ ಯಾವುದೇ ಪೂಜೆಗಿಂತ ಮುನ್ನ ಈತನಿಗೆ ಅಗ್ರಪೂಜೆ ಸಲ್ಲಿಕೆಯಾಗುತ್ತದೆ.
ನಂದಿ:ಮಹಾದೇವನ ವಾಹನ ಮಾತ್ರವಲ್ಲದೆ, ಸಮಸ್ತ ಶಿವಗಣಗಳ ಪ್ರಧಾನ ಸಚಿವ ಮತ್ತು ದ್ವಾರಪಾಲಕ. ಈತನು ಸಾತ್ವಿಕ ಗಣಗಳ ಮುಖಂಡ.
ವೀರಭದ್ರ: ದಕ್ಷಬ್ರಹ್ಮನು ಶಿವನಿಗೆ ಮಾಡಿದ ಅಪಮಾನವನ್ನು ಸಹಿಸದೆ, ಶಿವನು ತನ್ನ ಜಟೆಯನ್ನು ನೆಲಕ್ಕೆ ಬಡಿದಾಗ ಹುಟ್ಟಿದ ಪರಮ ಭಯಂಕರ ಗಣ. ಈತನು ದಕ್ಷ ಯಜ್ಞವನ್ನು ಧ್ವಂಸ ಮಾಡಿದ ವೀರ.
ಭೃಂಗಿ: ಶಿವನ ಅತ್ಯಂತ ನಿಷ್ಠಾವಂತ ಭಕ್ತ. ಈತನು ಕೇವಲ ಶಿವನನ್ನೇ ಪ್ರದಕ್ಷಿಣೆ ಮಾಡಲು ಭೃಂಗಿ (ದುಂಬಿ) ರೂಪ ತಾಳಿದನೆಂದು ಪುರಾಣ ಹೇಳುತ್ತದೆ.
ಘಂಟಾಕರ್ಣ: ಹರಿಹರ ದ್ವೇಷವನ್ನು ಮರೆತು, ಸದಾ ಶಿವನಾಮವನ್ನೇ ಕಿವಿಯಲ್ಲಿ ಕೇಳಲು ಘಂಟೆ ಗಳನ್ನು ಧರಿಸಿದ ವಿಶಿಷ್ಟ ಗಣ.
ದೈವಿಕ ನಾಗಗಳು: ವಾಸುಕಿ, ತಕ್ಷಕ ಮುಂತಾದ ನಾಗರಾಜರು ಕೂಡ ಶಿವನ ಆಜ್ಞೆಯನ್ನು ಪಾಲಿಸುವ ಗಣಗಳಾಗಿದ್ದಾರೆ.
ಪುರಾಣಗಳ ಪ್ರಕಾರ, ಈ ಗಣಗಳು ಕೇವಲ ಸೇವಕರಲ್ಲ, ಇವರು ಅಮೋಘ ಶಕ್ತಿಯುಳ್ಳ ದಿವ್ಯ ಯೋಧರು. ಲೋಕದಲ್ಲಿ ಅಧರ್ಮ ಹೆಚ್ಚಾದಾಗ ಶಿವನ ಆಜ್ಞೆಯಂತೆ ದುಷ್ಟ ಶಿಕ್ಷಕ ಪ್ರವೃತ್ತಿಯನ್ನು ತಳೆಯುವುದು. ದೇವತೆಗಳ ಯಜ್ಞಗಳು ವಿಧಿಬದ್ಧವಾಗಿ ನಡೆಯುವಂತೆ ಮತ್ತು ಅಲ್ಲಿ ಶುದ್ಧತೆ ಕಾಯುವಂತೆ ನೋಡಿಕೊಳ್ಳುವುದು ಇವರ ಕಾರ್ಯ. ಶಿವನು ಆನಂದ ಅಥವಾ ರುದ್ರ ತಾಂಡವ ವಾಡುವಾಗ ಈ ಗಣಗಳು ಮಂತ್ರಮುಗ್ಧರಾಗಿ ಪಾಲ್ಗೊಳ್ಳುತ್ತಾರೆ. ನಂದಿ ಮೃದಂಗ ನುಡಿಸಿದರೆ, ಭೃಂಗಿಯು ನೃತ್ಯ ಗುರುವಾಗುತ್ತಾನೆ. ಉಳಿದ ಗಣಗಳು ದೇವಭಾಷೆಯಲ್ಲದ, ಯಾರಿಗೂ ಅರ್ಥ ವಾಗದ ನಿಗೂಢ ಧ್ವನಿಯಲ್ಲಿ ಶಿವನ ಮಂತ್ರಗಳನ್ನು ಜಪಿಸುತ್ತಾ ವಾದ್ಯ ನುಡಿಸುತ್ತಾನೆ. ಸತ್ಯ ಹರಿಶ್ಚಂದ್ರ, ಉಪಮನ್ಯು ಮುಂತಾದ ಪರಮ ಶಿವಭಕ್ತರ ಭಕ್ತಿಯನ್ನು ಪರೀಕ್ಷಿಸಲು ಶಿವನು ಈ ಗಣಗಳನ್ನು ಕಳುಹಿಸಿ ಕ್ಲಿಷ್ಟಕರ ಪರೀಕ್ಷೆಗಳನ್ನು ಒಡ್ಡುವುದನ್ನು ಪುರಾಣದಲ್ಲಿ ಓದಿದ್ದೇವೆ.
ಪೌರಾಣಿಕ ದೃಷ್ಟಿಕೋನದಲ್ಲಿ, ಶಿವಗಣಗಳು ಎಂದರೆ ಭಗವಂತನ ನಿಷ್ಕಲ್ಮಶ ಪ್ರೇಮದ ಪ್ರತೀಕ. ಜಗತ್ತಿನ ಕಣ್ಣಿಗೆ ಭಯಾನಕ ಮತ್ತು ವಿಕೃತವಾಗಿ ಕಾಣುವ ಜೀವಿಗಳೂ ಸಹ ನಿಷ್ಠೆ ಮತ್ತು ಭಕ್ತಿ ಯಿಂದ ದೇವತೆಗಳಿಗಿಂತಲೂ ಶ್ರೇಷ್ಠವಾದ ದಿವ್ಯ ಪದವಿಯನ್ನು ಪಡೆಯ ಬಹುದು ಎಂಬುದನ್ನು ಈ ಶಿವಗಣಗಳು ಸಾರುತ್ತವೆ.
ಬದುಕಿನಲ್ಲಿ ಕೆಲವೊಮ್ಮೆ ನಮಗೆ ನೆರವಾಗುವುದು ಅಂತಸ್ತು, ಅಧಿಕಾರ ಆಸ್ತಿಯಲ್ಲಿ ಶ್ರೀಮಂತ ರಾದವರಲ್ಲ. ಆದರೆ ಪ್ರಪಂಚವೆಲ್ಲ ಉದಾಸೀನದಿಂದ ನೋಡುವ, ನಾವು ಕೂಡ ಕಡೆಗಣಿಸಿ ಬಿಡುವ ಕೆಲವರು. ಯಾವುದೇ ಪುಸ್ತಕವನ್ನು ಅದರ ಮುಖಪುಟದಿಂದ ಅಳೆಯ ಬಾರದು ಎನ್ನುತ್ತಾರೆ. ಅಂತೆಯೇ ಮನುಷ್ಯರನ್ನು ಅವರ ಗುಣಗಳಿಂದ ಗೌರವಿಸಲು ಕಲಿಯಬೇಕು. ಆಪತ್ತಿಗಾದವರೇ ನೆಂಟರು.