ನೂರೆಂಟು ವಿಶ್ವ
ವಿಮಾನಯಾನದಷ್ಟು ಸುರಕ್ಷಿತವಾದುದು ಯಾವುದೂ ಇಲ್ಲ. ಒಂದು ವಿಮಾನ ಬಿದ್ದ ಮಾತ್ರಕ್ಕೆ ನಮ್ಮ ಅಭಿಪ್ರಾಯವನ್ನೇ ಬದಲಿಸಿಕೊಳ್ಳಬೇಕಿಲ್ಲ. ಯಾವ ವಿಮಾನ ಯಾನ ಸಂಸ್ಥೆಯೂ ಸುರಕ್ಷತೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದಿಲ್ಲ ಅಥವಾ ರಾಜಿ ಮಾಡಿಕೊಳ್ಳುವುದಿಲ್ಲ. ಸುರಕ್ಷತೆ ಕಡೆಗಣಿಸಿದರೆ ಎಂಥ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಯಾವ ಏರ್ʼಲೈನ್ಸ್ʼಗೂ ಉಪದೇಶ ಹೇಳಬೇಕಿಲ್ಲ. ಪಾಲಿಸಬೇಕಾದ ನಿಯಮಗಳ ಮೇಲ್ವಿಚಾರಣೆ ಮಾಡಲು ಸಾಕಷ್ಟು ಸಂಸ್ಥೆಗಳಿವೆ, ಹತ್ತಾರು ಕಣ್ಗಾವಲುಗಳಿವೆ.
ಏರ್ʼಲೈನ್ಸ್ ಸಂಸ್ಥೆಗಳಲ್ಲಿ ಒಂದು ನಂಬಿಕೆಯಿದೆ. ಒಂದು ವಿಮಾನ ಅಪಘಾತ ಸಂಭವಿಸಿ ದರೆ, ಜಗತ್ತಿನೆಡೆ ಇರುವ ವಿಮಾನ ಪ್ರಯಾಣಿಕರಲ್ಲಿ ಭೀತಿ ಹುಟ್ಟಿಕೊಳ್ಳುತ್ತದಂತೆ. ಜನ ವಿಮಾನ ಹತ್ತಲು ಹೆದರುತ್ತಾರಂತೆ. ಅಂಥವರು ತಿಂಗಳ ಮೊದಲೇ ಮಾಡಿದ ಬುಕಿಂಗ್‌ನ್ನು ರದ್ದುಪಡಿಸುತ್ತಾರಂತೆ. ಒಂದು ವಿಮಾನ ಬಿದ್ದ ಮಾತ್ರಕ್ಕೆ ಅಂಥ ನಿರ್ಧಾರ ತೆಗೆದುಕೊಳ್ಳ ಬೇಕಿಲ್ಲ ಎಂದರೂ ಕೇಳುವುದಿಲ್ಲ.
ಅಂಥವರು ವಿಮಾನವನ್ನು ಕಂಡರೆ ‘ಹಾರಾಡುವ ಶವಪೆಟ್ಟಿಗೆ’ ಕಂಡವರಂತೆ ಭಯಭೀತ ರಾಗುತ್ತಾರೆ. ಈ ರೀತಿಯ ಸಮೂಹ ಸನ್ನಿ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲವಂತೆ. ವಿಮಾನ ಪ್ರಯಾಣಕ್ಕೆ ಮಾತ್ರ ಇದು ಅತಿ ಹೆಚ್ಚು ಅನ್ವಯ.
ಮಲೇಶಿಯನ್ ಏರ್ʼಲೈನ್ಸ್ ವಿಮಾನ ಅಪಘಾತಕ್ಕೀಡಾಗಿ ಒಂದು ವರ್ಷದವರೆಗೂ ಆ ವಿಮಾನವನ್ನು ಹತ್ತಲು ಜನ ಭಯಪಡುತ್ತಿದ್ದರು. ನಾನು ಮಲೇಶಿಯಾದ ಕೌಲಾಲಂಪುರ ದಿಂದ ಲಂಕಾವಿಗೆ ಹೋಗುವಾಗ, ಮಲೇಶಿಯನ್ ಏರ್ʼಲೈನ್ಸ್ ವಿಮಾನ ಹತ್ತಬೇಕೆಂಬ ಕಾರಣದಿಂದ ಸ್ನೇಹಿತರೊಬ್ಬರು ನನ್ನೊಂದಿಗೆ ಬರಲಿಲ್ಲ.
ಇಂದಿಗೂ ಅವರು ಆ ಏರ್ʼಲೈನ್ಸ್ ಅಂದ್ರೆ ಭಯಬೀಳುತ್ತಾರೆ. ಹಿಂದಿನ ವರ್ಷ ಏರ್ ಇಂಡಿಯಾ ವಿಮಾನ ಬಿದ್ದ ನಂತರ ಆ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನವೇರಲು ಬಹಳ ಜನ ಹೆದರುತ್ತಿದ್ದರು. ಶೇ.ಅರವತ್ತರಷ್ಟು ಬುಕಿಂಗ್ಸ್ ರದ್ದಾಯಿತು. ಈ ಮಧ್ಯೆ ಒಂದಾದ ನಂತರ ಒಂದರಂತೆ ಹತ್ತಕ್ಕೂ ಹೆಚ್ಚು ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡು ಬಂದು ಮತ್ತಷ್ಟು ಗಾಬರಿಪಟ್ಟರು.
ಇದನ್ನೂ ಓದಿ: Vishweshwar Bhat Column: 'ಮಾರಿಯೋ': ಬದುಕಿನ ಕಿಕ್ಕಿರಿದ ದೃಶ್ಯಗಳಿಗೆ ಬಣ್ಣ ಹಚ್ಚಿದ ಮಾಂತ್ರಿಕ
ಬಸ್ಸು ಕಂದಕಕ್ಕೆ ಬಿದ್ದರೆ, ಯಾರೂ ಬಸ್ ಹತ್ತದೇ ಇರುವುದಿಲ್ಲ. ರೈಲು ದುರಂತವಾದರೆ, ರೈಲಿನಲ್ಲಿ ಹೋಗಲು ಭಯಪಡುವುದಿಲ್ಲ. ಹಾಗೆ ಕಾರು ಅಪಘಾತ ಸುದ್ದಿ ಓದಿದವರು ಆರಾಮಾಗಿ ಕಾರು ಓಡಿಸಿಕೊಂಡು ಹೋಗುತ್ತಾರೆ. ಆದರೆ ಈ ಮಾತು ವಿಮಾನ ದುರಂತಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಯಾವ ವಿಮಾನಯಾನ ಸಂಸ್ಥೆಯೂ ಸುರಕ್ಷತೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದಿಲ್ಲ ಅಥವಾ ರಾಜಿ ಮಾಡಿಕೊಳ್ಳುವುದಿಲ್ಲ.
ಸುರಕ್ಷತೆ ವಿಷಯದಲ್ಲಿ ಕಡೆಗಣನೆ ಮಾಡಿದರೆ ಅದಕ್ಕೆ ಎಂಥ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಯಾವ ಏರ್ʼಲೈನ್ಸ್ʼಗೂ ಉಪದೇಶ ಹೇಳಬೇಕಿಲ್ಲ. ಅದಕ್ಕಿಂತ ಹೆಚ್ಚಾಗಿ, ಸುರಕ್ಷತೆ ವಿಷಯದಲ್ಲಿ ಪಾಲಿಸಬೇಕಾದ ನಿಯಮಗಳ ಮೇಲ್ವಿಚಾರಣೆ ಮಾಡಲು ಸಾಕಷ್ಟು ಸಂಸ್ಥೆಗಳಿವೆ, ಹತ್ತಾರು ಕಣ್ಗಾವಲುಗಳಿವೆ.
ಅವು ಕಾಲಕಾಲಕ್ಕೆ ಏರ್ʼಲೈನ್ಸ್ ಸಂಸ್ಥೆಗಳನ್ನು ಎಚ್ಚರಿಸುತ್ತಲೇ ಇರುತ್ತವೆ. ವಿಮಾನ ತಯಾರಿಕಾ ಸಂಸ್ಥೆಗಳೂ ಸುರಕ್ಷತೆ ನಿರ್ವಹಣೆ ವಿಷಯದಲ್ಲಿ ಒಂದು ಕಣ್ಣಿಟ್ಟಿರುತ್ತವೆ. ಒಂದು ಸಣ್ಣ ಲೋಪ ಕಂಡು ಬಂದರೂ ಅದು ಅಂತಾರಾಷ್ಟ್ರೀಯ ಸುದ್ದಿಯಾಗುತ್ತದೆ ಎಂಬುದು ಏರ್ʼಲೈನ್ಸ್ ಸಂಸ್ಥೆಗಳಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ.
ಅಂಥ ಸಣ್ಣ-ಪುಟ್ಟ ಘಟನೆಗಳಾದಾಗ ಜನರ ಪ್ರತಿಕ್ರಿಯೆ ಉಗ್ರವಾಗಿರುತ್ತವೆ. ಇದರಿಂದ ಸ್ವಾಭಾವಿಕವಾಗಿ ಪ್ರಯಾಣಿಕರು ಗಾಬರಿಯಿಂದ ಕಲ್ಲವಿಲರಾಗುತ್ತಾರೆ. ಹೀಗಾಗಿ ಎಲ್ಲ ಏರ್ʼ ಲೈನ್ಸ್ʼಗಳೂ ಸುರಕ್ಷತೆ, ನಿರ್ವಹಣೆ, ಭದ್ರತೆ ವಿಷಯದಲ್ಲಿ ನಿರ್ದಿಷ್ಟ ಮಾನದಂಡಗಳಿಗೆ ಬದ್ಧವಾಗಿರುತ್ತವೆ. ಈ ವಿಷಯದಲ್ಲಿ ಯಾರೂ ಉಪೇಕ್ಷೆ ಮಾಡುವುದಿಲ್ಲ.
ಎಲ್ಲ ಸಲ ಅಪಘಾತಕ್ಕೆ ನಾವೊಂದೇ ಕಾರಣರಾಗಿರುವುದಿಲ್ಲ. ಬೇರೆಯವರ ಅಜಾಗರೂಕತೆ ಯೂ ದುರಂತಕ್ಕೆ ಕಾರಣವಾಗಬಹುದು. ಮೂವತ್ತು ವರ್ಷಗಳ ಸೇವೆಯಲ್ಲಿ ಒಂದೂ ಅಪಘಾತ ಮಾಡದಿರುವುದಕ್ಕೆ ಪ್ರಶಸ್ತಿ ಪಡೆದ ಚಾಲಕ, ಆ ದಿನ ಮನೆಗೆ ಮರಳುವಾಗ ಅಪಘಾತ ಮಾಡಬಹುದು. ಇಲ್ಲಿ ಅನುಭವವೊಂದೇ ಲೆಕ್ಕಕ್ಕೆ ಬರುವುದಿಲ್ಲ.
ಇಷ್ಟಾಗಿಯೂ ಹೇಳುತ್ತೇನೆ, ವಿಮಾನಯಾನದಷ್ಟು ಸುರಕ್ಷಿತವಾದುದು ಯಾವುದೂ ಇಲ್ಲ. ಒಂದು ವಿಮಾನ ಬಿದ್ದ ಮಾತ್ರಕ್ಕೆ ನಮ್ಮ ಅಭಿಪ್ರಾಯವನ್ನೇ ಬದಲಿಸಿಕೊಳ್ಳಬೇಕಿಲ್ಲ. ಈ ಮಾತಿಗೆ ಪುಷ್ಟಿ ನೀಡಬೇಕೆಂದರೆ ನಿಮಗೆ ಒಂದಿಷ್ಟು ವಿಷಯ, ಮಾಹಿತಿ ನೀಡಬೇಕು.
2023ನೇ ವರ್ಷವು ವಿಮಾನ ಪ್ರಯಾಣದಲ್ಲಿ ದಾಖಲೆ ಮಾಡಿದ ವರ್ಷ. ಆ ವರ್ಷ ಅತಿ ಹೆಚ್ಚು ಜನ ವಿಮಾನ ಪಯಣ ಮಾಡಿದರು. ಅದೊಂದೇ ವರ್ಷ ಜಗತ್ತಿನೆಡೆ 37 ದಶಲಕ್ಷ ವಿಮಾನಗಳು ಟೇಕಾ- ಮತ್ತು ಲ್ಯಾಂಡ್ ಆದವು. ಗಮನಾರ್ಹ ಸಂಗತಿ ಅಂದ್ರೆ ಇದು ಅತ್ಯಂತ ಸುರಕ್ಷಿತ ವರ್ಷವೂ ಆಗಿತ್ತು.
ನೇಪಾಳದಲ್ಲಿ ಕೇವಲ ಒಂದು ಪ್ರೊಪೆಲ್ಲರ್ ಜೆಟ್ ಅಪಘಾತಕ್ಕೀಡಾಗಿ 72 ಜನರು ಸಾವ ನ್ನಪ್ಪಿದ್ದನ್ನು ಹೊರತುಪಡಿಸಿದರೆ, ಆ ವರ್ಷ ಯಾವುದೇ ಮಾರಕ ಅಪಘಾತಗಳು ಸಂಭವಿ ಸಲಿಲ್ಲ. ಇದನ್ನು ಗಮನಿಸಿದರೆ, ವಾಣಿಜ್ಯ ವಿಮಾನದಲ್ಲಿ ಪ್ರಯಾಣಿಕರು ಸಾಯುವ ಸಾಧ್ಯತೆ ಸರಿಸುಮಾರು 13.7 ದಶಲಕ್ಷಕ್ಕೆ ಒಂದು!
ಇದು ಹೆಚ್ಚು-ಕಮ್ಮಿ ನಗಣ್ಯ ಅಂತಾನೇ ಹೇಳಬೇಕು. ರಸ್ತೆ ಅಪಘಾತಕ್ಕೆ ಹೋಲಿಸಿದರೂ, ಇದು ನಗಣ್ಯವೇ. ರಸ್ತೆಗಳಲ್ಲಿ ಪ್ರತಿ ಐದು ಸಾವಿರ ಪ್ರಯಾಣದಲ್ಲಿ ಒಂದು ಅಪಘಾತ ವಾಗುತ್ತದೆ. ಅಂದರೆ ಪ್ರತಿದಿನದಂತೆ 1,03,239 ವರ್ಷ ವಿಮಾನದಲ್ಲಿ ಪ್ರಯಾಣಿಸಿದರೆ ಒಂದು ಅಪಘಾತವಾಗಬಹುದು. ಆದರೆ ರಸ್ತೆಗಳಲ್ಲಿ ಸೀಟ್ ಬೆಲ್ಟ್ ಕಟ್ಟಿಕೊಳ್ಳದೇ, ರಸ್ತೆ ನಿಯಮ ಪಾಲಿಸದೇ, ಬೇರೆಯವರನ್ನು ಸಾಯಿಸಲು ಲೈಸೆನ್ಸ್ ಪಡೆದವರಂತೆ ಹುಚ್ಚರಂತೆ ವಾಹನ ಓಡಿಸುವವರನ್ನು ನಿತ್ಯವೂ ನೋಡಬಹುದು.
ಇಂದು ವಾಣಿಜ್ಯ ವಿಮಾನ ಪ್ರಯಾಣವು ನಿರ್ವಿವಾದವಾಗಿ ಸುರಕ್ಷಿತವಾಗಿದೆ. ಐವತ್ತೈದು ವರ್ಷಗಳ ಹಿಂದಕ್ಕೆ ಹೋಗಿ ವಿಮಾನ ಪ್ರಯಾಣವನ್ನು ನೋಡೋಣ. 1970ರಲ್ಲಿ ಬೋಯಿಂಗ್ 747 ತನ್ನ ಸೇವೆಯನ್ನು ಪ್ರಾರಂಭಿಸಿತು. ಅದು ವೈಡ್‌ಬಾಡಿ ಪ್ರಯಾಣದ ಇನ್ನೂ ಹೆಚ್ಚು ಐಷಾರಾಮಿ ಯುಗಕ್ಕೆ ನಾಂದಿ ಹಾಡಿತು. ಕೇವಲ 9.5 ದಶಲಕ್ಷ ವಿಮಾನ ಗಳಲ್ಲಿ, 78 ಮಾರಕ ಅಪಘಾತಗಳು ಸಂಭವಿಸಿದವು. ಆ ವರ್ಷ 1475 ಪ್ರಯಾಣಿಕರು ಸತ್ತರು. ಅಂದರೆ ಪ್ರತಿ 122000 ಪ್ರಯಾಣದಲ್ಲಿ ಒಂದು ಸಾವು ಸಂಭವಿಸಿತ್ತು.
ಇದು ಇಂದಿನ ರಸ್ತೆ ಚಾಲನೆಗಿಂತ ಎಷ್ಟೋ ಪಾಲು ಉತ್ತಮವಾಗಿದೆ. ಆ ವರ್ಷ 78 ಅಪಹರಣ (ಹೈಜಾಕ್)ಗಳು ಮತ್ತು ಆ ಘಟನೆಗಳಿಂದ ಏಳು ಸಾವುಗಳು ಸಂಭವಿಸಿದ್ದವು. ಆ ದಿನಗಳಲ್ಲಿ ವಿಮಾನ ಅಪಹರಣಗಳು ಸಾಮಾನ್ಯವಾಗಿದ್ದವು. ಇಂದು ವಿಮಾನಯಾನ ತಂತ್ರಜ್ಞಾನ ಊಹೆಗೂ ಮೀರಿದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಸಾಧಿಸಿದೆ. ಸುರಕ್ಷತೆ ಮತ್ತು ಭದ್ರತೆ ಜತೆಗೆ ಆರಾಮ (Comfort)ಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.
ಒಂದು ದಿನದಲ್ಲಿ ಜಗತ್ತಿನ ಯಾವ ದೇಶವನ್ನಾದರೂ ತಲುಪುವುದು ಸಾಧ್ಯವಾಗಿದೆ. ವಿಮಾನ ಪ್ರಯಾಣಿಕರಿಗೆ ಸಮಯ ಅಂದ್ರೆ ಆಸ್ತಿ. ಆಧುನಿಕ ಜೆಟ್‌ಗಳು ಜಗತ್ತಿನಾದ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಸಂಚರಿಸುತ್ತಿವೆ. ಇಂದು ವಿಶ್ವದ ಅತಿ ದೀರ್ಘ ತಡೆರಹಿತ ಹಾರಾಟವೆಂದರೆ ಸಿಂಗಾಪುರದಿಂದ ನ್ಯೂಯಾರ್ಕ್‌ಗೆ (JFK) ವಿಶೇಷವಾಗಿ ವಿನ್ಯಾಸ ಗೊಳಿಸಲಾದ ಮತ್ತು ಶಾಂತವಾದ ಏರ್‌ಬಸ್ A350-900ULR ನಲ್ಲಿ 9537 ಮೈಲುಗಳಷ್ಟು ದೂರದ ಬೆರಗುಗೊಳಿಸುವ ಹಾರಾಟ.
1977ರಲ್ಲಿ ಸಿಂಗಾಪುರ್ ಏರ್ʼಲೈನ್ಸ್ ಮೊದಲು ಅಮೆರಿಕಕ್ಕೆ ಹಾರಲು ಆರಂಭಿಸಿದಾಗ, ಸ್ಯಾನ್ ಫ್ರಾನ್ಸಿಸ್ಕೋ ತಲುಪುವ ಮೊದಲು ಮತ್ತು ನ್ಯೂಯಾರ್ಕ್ ನಗರಕ್ಕೆ ಹಾಂಗ್ ಕಾಂಗ್, ಗುವಾಮ್ ಮತ್ತು ಹೊನೊಲುಲು ಮೂಲಕ ಹಾರಬೇಕಾಗಿತ್ತು.
ಕೆಲವು ವಿಮಾನಗಳಲ್ಲಿನ ಬಿಜಿನೆಸ್ ಮತ್ತು - ಕ್ಲಾಸ್, ಮೂವತ್ತೆಂಟು ಸಾವಿರ ಅಡಿ ಎತ್ತರ ದಲ್ಲಿ ಪಂಚತಾರಾ ಹೋಟೆಲಿಗಿಂತ ಉತ್ತಮ ಸೌಲಭ್ಯ ಮತ್ತು ಆಹ್ಲಾದಕರ ವ್ಯವಸ್ಥೆ ಯನ್ನು ನೀಡುವುದನ್ನು ಊಹಿಸಲೂ ಸಾಧ್ಯವಿಲ್ಲ. ನಿಮ್ಮ ಆಫೀಸಿನಲ್ಲಿ, ಮನೆಯಲ್ಲಿ ಇರುವುದಕ್ಕಿಂತ ಟಞ್ಛಟ್ಟಠಿ ಆಗಿ ವಿಮಾನದಲ್ಲಿ ಇರಬಹುದು.
ಈಗಿನ ವಿಮಾನಗಳಲ್ಲಿ ವೈ-ಫೈ ಸೌಲಭ್ಯವಿರುವುದರಿಂದ, ನೀವು ವಿಮಾನದಲ್ಲಿರಲಿ, ಆಫೀಸಿ ನಲ್ಲಿರಲಿ, ಹೆಚ್ಚು ವ್ಯತ್ಯಾಸವಿಲ್ಲ. ಆಫೀಸಿನಲ್ಲಿ ಮಾಡುವ ಎಲ್ಲ ಕೆಲಸಗಳನ್ನು, ವಿಮಾನ ದಲ್ಲೂ ಮಾಡಬಹುದು. ಮೊನ್ನೆ ನಾನು ಫಿಲಿಫೈನ್ಸ್ʼನ ರಾಜಧಾನಿ ಮನಿಲಾ ದಿಂದ ಸಿಂಗಾಪುರ ಮಾರ್ಗವಾಗಿ ಬೆಂಗಳೂರಿಗೆ ಬರುವಾಗ, ಭಾನುವಾರದ ನನ್ನ ಎರಡು ಅಂಕಣ (ಪತ್ರಿಕೆ ಯಲ್ಲಿ ಇಡೀ ಪುಟಕ್ಕಾಗುವಷ್ಟು) ಗಳನ್ನು ವಿಮಾನದಲ್ಲಿಯೇ ಬರೆದು, ಬೆಂಗಳೂರಿನಲ್ಲಿ ಲ್ಯಾಂಡ್ ಆಗುವ ಮುನ್ನವೇ, ಡೆಡ್ ಲೈನ್ ಒಳಗೆ ಆಫೀಸಿಗೆ ಕಳಿಸಿದ್ದೆ.
ಇಂದು ವಿಮಾನಗಳು ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತವಾಗಿವೆ ಮಾತ್ರವಲ್ಲದೆ, ಅವು ‘ಹಳೆಯ ದಿನಗಳಿಗಿಂತ’ ಉತ್ತಮ ಪ್ರಯಾಣ ಅನುಭವಗಳನ್ನು ಒದಗಿಸುತ್ತವೆ. ಇಂದಿನ ವಿಮಾನಗಳು ಹೆಚ್ಚು ನಿಶ್ಯಬ್ದವಾಗಿವೆ. (ಇದು ಸ್ವತಃ ಆರೋಗ್ಯಕರವಾಗಿದೆ. ಏಕೆಂದರೆ ಹೆಚ್ಚಿನ ಅಧ್ಯಯನಗಳು ಅತಿಯಾದ ಶಬ್ದವನ್ನು ಆರೋಗ್ಯಕ್ಕೆ ಅಪಾಯಕಾರಿ ಅಂಶವೆಂದು ಸೂಚಿಸುತ್ತವೆ). ಹೆಚ್ಚಿನ ಅಂತರಖಂಡ ಜೆಟ್‌ಗಳು ಈಗ ಹಾಸಿಗೆಗಳನ್ನು ಹೊಂದಿವೆ.
ಕೆಲವು ವಿಮಾನಗಳು 19 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಹಾರಿದರೂ, ನಿರಾತಂಕವಾಗಿ, ಆರಾಮವಾಗಿ ಪಯಣದ ಸುಖವನ್ನು ಅನುಭವಿಸಬಹುದು. ಆಧುನಿಕ ಬಿಜಿನೆಸ್ ಮತ್ತು ಪ್ರಥಮ ದರ್ಜೆಯ ಸೂಟ್ ಗಳಲ್ಲಿರುವ ರೆಕ್ಲೈನರ್‌ಗಳು ಈಗ ಗರಿಷ್ಠ ವಿಶ್ರಾಂತಿ ಸುಖವನ್ನು ನೀಡಬಲ್ಲವು. ಪ್ರಥಮ ದರ್ಜೆ ಪ್ರಯಾಣಿಕರು ಗೌಪ್ಯ ಕೋಣೆ, ವೇಗದ ವೈ-ಫೈ ಮತ್ತು ಲೆಕ್ಕವಿಲ್ಲದಷ್ಟು ಗಂಟೆಗಳ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ.
ಫಸ್ಟ್ ಕ್ಲಾಸ್ ಪ್ರಯಾಣಿಕರಾದರೆ, ಇಪ್ಪತ್ತು ನಿಮಿಷಗಳ ಕಾಲ ವಿಮಾನದಲ್ಲಿಯೇ ಸ್ನಾನ (ಶವರ್)ವನ್ನೂ ಮಾಡಬಹುದು. ಕೆಲವು ಆಧುನಿಕ ಜೆಟ್ ಗಳು ಆನ್-ಬೋರ್ಡ್ ಬಾರ್ ಗಳನ್ನು ಸಹ ಹೊಂದಿವೆ. ಇಂದಿನ ಎಕಾನಮಿ ಕ್ಲಾಸ್ ಅನುಭವವು ಕಡಿಮೆ ಆಕರ್ಷಕ ವಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಆದರೆ 1970ರ ಎಕಾನಮಿ ಕ್ಲಾಸ್ ಅನ್ನು ಇಂದಿನ ಬೆಲೆಗೆ ಹೋಲಿಸಲಾಗುವುದಿಲ್ಲ.
ಏಕೆಂದರೆ ಅಂದಿನ ಎಕಾನಮಿ ಕ್ಲಾಸ್ ಬೆಲೆಯು ಇಂದಿನ ಮೊದಲ ದರ್ಜೆಯಷ್ಟಿತ್ತು. ಪ್ರಸ್ತುತ ಪ್ರಯಾಣದ ಆಯ್ಕೆಗಳಲ್ಲಿ ಬೆಲೆ ನಿಗದಿಯೂ ಒಂದು ಪ್ರಮುಖ ಅಂಶ. ಆ ದಿನ ಗಳಲ್ಲಿ ಸರಾಸರಿಯಾಗಿ, ರೌಂಡ್-ಟ್ರಿಪ್ ದೇಶೀಯ ವಿಮಾನಯಾನಕ್ಕೆ ಸರಾಸರಿ ವಾರ್ಷಿಕ ಸಂಬಳದ ಶೇ. ಐದರಷ್ಟು ವೆಚ್ಚವಾಗುತ್ತಿತ್ತು. ಆದರೆ ಈಗ ಅದು ಶೇ. ಒಂದರ ಅರ್ಧದಷ್ಟು. ಇಂದು ಶೇ. 90ರಷ್ಟು ಅಮೆರಿಕನ್ನರು ವಿಮಾನ ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ.
1971ರಲ್ಲಿ, ಅದು ಕೇವಲ ಶೇ.49ರಷ್ಟು ಆಗಿತ್ತು. ನಗದು ರೂಪದಲ್ಲಿ ಪಾವತಿಸುವಾಗ ವಿಮಾನ್ ಟಿಕೆಟ್ ಕಾಯ್ದಿರಿಸುವುದು ಹೆಚ್ಚು ಕೈಗೆಟುಕುತ್ತದೆ. ಹಣದುಬ್ಬರಕ್ಕೆ ಸರಿ ಹೊಂದಿ ಸಿದಾಗ, 2024 ರಲ್ಲಿ ಅಮೆರಿಕದ ದೇಶೀಯ ವಿಮಾನ ಪ್ರಯಾಣದ ವೆಚ್ಚವು 2000ದಿಂದ ಶೇ.28.3ರಷ್ಟು ಕಡಿಮೆಯಾಗಿದೆ. 2010ರಿಂದ ಇಂದಿನವರೆಗಿನ ದಿನವನ್ನು ವಿಮಾನ ಪ್ರಯಾಣದ ‘ಪ್ಲಾಟಿನಂ ಯುಗ’ ಎಂದು ಹೇಳಬಹುದು.
ಕ್ರೆಡಿಟ್ ಕಾರ್ಡ್‌ಗಳ ಪ್ರಸರಣವು ವಿಶ್ವದ ಅತ್ಯಂತ ಮೌಲ್ಯಯುತ ಕರೆನ್ಸಿಗಳಲ್ಲಿ ಒಂದನ್ನಾಗಿ ಮಾಡಿದ್ದರಿಂದ ವಿಮಾನಯಾನ ಉದ್ಯಮಕ್ಕೆ ನಿರ್ಣಾಯಕ ಆದಾಯದ ಮೂಲವನ್ನಾಗಿ ಮಾಡಿದ ಅಭೂತಪೂರ್ವ ಕಾಲ ಎಂದು ಹೇಳಬಹುದು.
ಈ ಯುಗವು ವ್ಯವಸ್ಥೆಯಿಂದ ಹೇಗೆ ಗರಿಷ್ಠ ಪ್ರಯೋಜನ ಪಡೆಯಬೇಕೆಂದು ತಿಳಿದಿರುವ ಹೊಸ ಪೀಳಿಗೆಯ ವಿಜೇತರನ್ನು ಸೃಷ್ಟಿಸಿತು. ಬುದ್ಧಿವಂತ ಗ್ರಾಹಕರು ತಮ್ಮ ಉತ್ತಮ ಕ್ರೆಡಿಟ್ ಅನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಜಗತ್ತಿನೆಡೆ ಪ್ರಯಾಣಿಸಬಹುದು ಎಂಬುದನ್ನು ಕಂಡುಕೊಂಡರು.
ಉದ್ಯಮಶೀಲ ಕಾಲೇಜು ವಿದ್ಯಾರ್ಥಿಗಳು ಆರ್ಥಿಕತೆಯ ಕೊನೆಯ ಸಾಲಿನಲ್ಲಿರುವ ತಮ್ಮ ಸಹಪಾಠಿಗಳಿಗಿಂತ ಕಡಿಮೆ ಹಣದಲ್ಲಿ ವಿದೇಶದಲ್ಲಿ ಅಧ್ಯಯನ ಮಾಡಲು ಪ್ರಥಮ ದರ್ಜೆ ಯಲ್ಲಿ ಪಯಣಿಸುವ ಚಮತ್ಕಾರದ ಸಾಧ್ಯತೆ ಕಂಡುಕೊಂಡರು. ಪಾಯಿಂಟ್‌ಗಳ ಆರ್ಥಿಕತೆಯು ಅದನ್ನು ಇನ್ನಷ್ಟು ಸಮಾನಗೊಳಿಸಿತು.
ಮೈಲುಗಳು ಮತ್ತು ಪಾಯಿಂಟ್ ಗಳನ್ನು ಪಡೆದುಕೊಳ್ಳುವ ಅವಕಾಶಗಳು ಹೆಚ್ಚಾದವು. ಇದರಿಂದ ವಿಮಾನ ದರಗಳು ಗಣನೀಯವಾಗಿ ಕುಸಿದವು. ಪ್ರಯಾಣದ ಸುವರ್ಣ ಯುಗ ದಲ್ಲಿ ಶ್ರೀಮಂತರು ಮಾತ್ರ ಪಯಣಿಸಬಹುದಾದ ಸಮಯಕ್ಕಿಂತ ಭಿನ್ನವಾಗಿ, ಪ್ಲಾಟಿನಂ ಯುಗದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜನರನ್ನು ಒಳಗೊಂಡಿತು.
ವಿದೇಶಗಳಿಗೆ ವಿಮಾನದಲ್ಲಿ ಪಯಣಿಸುವುದು ಈ ಜನ್ಮದಲ್ಲಿ ಸಾಧ್ಯವಿಲ್ಲವೇನೋ ಎಂದು ಭಾವಿಸಿದವರ ಕನಸುಗಳು ಅವರು ನಿರೀಕ್ಷಿಸಿದ್ದಕ್ಕಿಂತ ಮುಂಚೆಯೇ ಈ ಜನ್ಮದಲ್ಲಿಯೇ ನನಸಾದವು. ಮುಂದಿನ ಐದು ವರ್ಷಗಳಲ್ಲಿ ವಿಮಾನಯಾನ, ಕಳೆದ ಮೂವತ್ತು ವರ್ಷ ಗಳಲ್ಲಿ ಕಾಣದ ಸುಧಾರಣೆಗಳನ್ನು ಕಾಣಲಿದೆ. ಒಂದು ಅಪಘಾತದಿಂದ ನಾವು ಧೃತಿಗೆಡ ಬಾರದು.
ಅಪಘಾತದಿಂದ ಹೆಚ್ಚು ಘಾಸಿಯಾಗುವವರು ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾ ಕಂಪನಿಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಷ್ಟಕ್ಕೂ ವಿಮಾನ ಅಪಘಾತಗಳ ಬಗ್ಗೆ ಯೋಚಿಸಿದಾಗಲೆಲ್ಲ ಅದ್ಯಾವನೋ ಹೇಳಿದ ಒಂದು ಮಾತು ಮತ್ತೆ ಮತ್ತೆ ನೆನಪಾಗು ತ್ತದೆ - If black boxes survive air crashes & why don't they make the whole plane out of that stuff?