ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಅನೇಕ ಸಮಸ್ಯೆಗಳಿಗೆ ಪರಿಹಾರ ನಮ್ಮೊಳಗೆ ಇರುತ್ತದೆ

ನಮಗೆ ಆಗುವ ಖಿನ್ನತೆ ಆತಂಕ ಬೇಸರಗಳಿಗೆ ದೇವರನ್ನು ದೂಷಿಸುತ್ತ ಓಡಾಡುತ್ತೇವೆ. ಆದರೆ ಧ್ಯಾನ ಮಾಡುತ್ತಾ ನಮ್ಮೊಳಗೆ ನಾವು ಆತ್ಮಾವಲೋಕನ ಮಾಡಿದರೆ ನಮ್ಮ ಆತಂಕಗಳಿಗೆ ಕಾರಣ ಗೊತ್ತಾಗು ವುದು ಅಲ್ಲವೇ? ಒಳಗೆ ಕಳೆದುಕೊಂಡದ್ದನ್ನು ನಾವು ಕೂಡ ಹೊರಗೆಲ್ಲೋ ಹುಡುಕುತ್ತಾ ಇದ್ದೆವಲ್ಲ ದಡ್ಡತನ ಅಲ್ಲವೇ’ ಎಂದರು? ಶಿಷ್ಯನಿಗೆ ಗುರುಗಳು ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅರ್ಥವಾಯಿತು.

ಒಂದೊಳ್ಳೆ ಮಾತು

rgururaj628@gmail.com

ಆ ಗುರುಗಳ ಆಶ್ರಯದಲ್ಲಿ ಅನೇಕ ಶಿಷ್ಯರು ವಿದ್ಯಾರ್ಜನೆ ಮಾಡುತ್ತಿದ್ದರು. ಅಲ್ಲಿರುವ ಶಿಷ್ಯ ನೊಬ್ಬನಿಗೆ, ಸದಾ ಒಂದಲ್ಲ ಒಂದು ವಿಷಯದ ಬಗ್ಗೆ ಕೊರಗು. ಅವನಿಗೆ ಅದೆಷ್ಟೇ ಬುದ್ಧಿ ಹೇಳಿ ದರೂ ಅವನನ್ನು ತಿದ್ದಲು ಗುರುಗಳಿಗೆ ಸಾಧ್ಯವಾಗಿರಲಿಲ್ಲ. ಒಂದಷ್ಟು ಹೊತ್ತು ಧ್ಯಾನಕ್ಕೆ ಕುಳಿತುಕೊಳ್ಳಲು ಕೂಡ ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಅವನ ಮನಸ್ಸು ಸದಾ ವಿಚಲಿತ ವಾಗಿರುತ್ತಿತ್ತು. ಅವನನ್ನು ಹೇಗಾದರೂ ಸರಿದಾರಿಗೆ ತರಬೇಕು ಎಂದು ಗುರುಗಳು ಸದಾ ಆಲೋಚಿಸುತ್ತಿದ್ದರು.

ಒಮ್ಮೆ ತಮ್ಮ ಸಣ್ಣ ಗುಡಿಸಿಲಿನ ಹೊರಗಿನ ಬೀದಿ ದೀಪದ ಬೆಳಕಿನಲ್ಲಿ ಏನನ್ನೂ ಹುಡುಕುತ್ತಿದ್ದರು. ಭಿಕ್ಷೆಗಾಗಿ ಹೊರಗೆ ಹೋಗಿದ್ದ ಅವರ ಶಿಷ್ಯ ಬಂದು ಗುರುಗಳು ಹುಡುಕುವುದನ್ನು ನೋಡಿ ಕೇಳಿದ ಗುರುಗಳೆ, ‘ಏನನ್ನು ಈ ಬೀದಿ ದೀಪದ ಬೆಳಕಿನಲ್ಲಿ ಹುಡುಕಾಟ ಮಾಡುತ್ತಿರುವಿರಿ?’ ಆಗ ಗುರುಗಳು ಬೇಸರದಲ್ಲೇ ‘ಒಂದು ಸೂಜಿ ಕಳೆದು ಹೋಗಿದೆ. ಅದು ಈ ಬೀದಿ ದೀಪದ ಬೆಳಕಿನಲ್ಲಿ ಸಿಗಬಹುದೆ ಎಂದು ಹುಡುಕುತ್ತಿದ್ದೇನೆ’ ಎಂದರು.

ಅದಕ್ಕೆ ಶಿಷ್ಯ ಕೇಳಿದ, ‘ತಾವು ಸೂಜಿಯನ್ನು ಯಾವ ಜಾಗದಲ್ಲಿ ಕಳೆದುಕೊಂಡಿರೆಂದು ಜ್ಞಾಪಕವಿದೆಯೇ?’ ‘ಹೌದು, ನಾನು ಗುಡಿಸಲಿನಲ್ಲಿ ನನ್ನ ಹಾಸಿಗೆ ಮೇಲೆ ಕಳೆದುಕೊಂಡೆ’ ಎಂದರು ಗುರುಗಳು ಹೆಚ್ಚು ಯೋಚಿಸದೆ. ಶಿಷ್ಯನಿಗೆ ಆಶ್ಚರ್ಯವಾಯಿತು, ‘ಗುರುಗಳೆ, ನೀವೇ ಆ ಸೂಜಿಯನ್ನು ಗುಡಿಸಲಿನಲ್ಲಿ ಕಳೆದುಕೊಂಡೆ ಎಂದು ಹೇಳುತ್ತಿದ್ದೀರಿ, ಆದರೆ ಇಲ್ಲೆಕೆ ಹುಡುಕುತ್ತೀರಿ?’ ಎಂದು ಪ್ರಶ್ನಿಸಿಯೇ ಬಿಟ್ಟ ಅವನಿಗಾದ ಆಶ್ಚರ್ಯವನ್ನು ತಡೆದುಕೊಳ್ಳದೆ ಗುರುಗಳು, ಕಬ್ಬಿಣ ಕಾದಿದೆ ಬಡಿಯಲು ಈಗಲೇ ಸರಿಯಾದ ಸಮಯ ಎಂದು ಕೊಂಡರು. ಅಷ್ಟೇ ಮುಗ್ಧತೆಯಿಂದ ಹೇಳಿದರು, ‘ಗುಡಿಸಲಿನಲ್ಲಿ ಇರುವ ದೀಪದ ಎಣ್ಣೆ ಕಾಲಿಯಾಗಿದೆ, ಅಲ್ಲಿ ತುಂಬಾ ಕತ್ತಲೆಯಿದೆ, ಆದ್ದರಿಂದ ಹೊರಗಡೆ ಸಾಕಷ್ಟು ಬೀದಿ ದೀಪದ ಬೆಳಕಿರುವುದರಿಂದ ಇಲ್ಲಿ ಹುಡುಕುತ್ತಿದ್ದೇನೆ’ ಎಂದರು.

ಇದನ್ನೂ ಓದಿ: Roopa Gururaj Column: ಸೋಮಾರಿ ತಿರುಕನ ಕನಸು

ಶಿಷ್ಯ ತನ್ನ ನಗುವನ್ನು ಹಾಗೆ ತಡೆದು ಹೇಳಿದ ಗುರುಗಳೆ, ‘ನೀವು ನಿಮ್ಮ ಸೂಜಿಯನ್ನು ಗುಡಿಸಿಲಿನ ಒಳಗೆ ಕಳೆದುಕೊಂಡರೆ ಅದು ಹೊರಗೆ ಸಿಗುತ್ತದೆ ಎಂದು ಹೇಗೆ ನಿರೀಕ್ಷಿಸುತ್ತೀರಿ?’ ಗುರುಗಳು ತಮ್ಮ ಮಂದಸ್ಮಿತ ನಗುವಿನಿಂದ ತಮ್ಮ ಶಿಷ್ಯನಿಗೆ ಹೇಳಿದರು, ‘ನಾವೆರೂ ಹೀಗೆ ತಾನೆ ಮಾಡೋದು? ನಮ್ಮಲ್ಲಿರುವುದನ್ನು ಕಳೆದುಕೊಂಡೆವು ಎಂದು ಭಾವಿಸಿ ಅದನ್ನು ಹುಡುಕಲು ನೂರಾರು ಮೈಲಿ ಗಳು ಓಡಾಡುತ್ತೇವೆ.

ನಮಗೆ ಆಗುವ ಖಿನ್ನತೆ ಆತಂಕ ಬೇಸರಗಳಿಗೆ ದೇವರನ್ನು ದೂಷಿಸುತ್ತ ಓಡಾಡುತ್ತೇವೆ. ಆದರೆ ಧ್ಯಾನ ಮಾಡುತ್ತಾ ನಮ್ಮೊಳಗೆ ನಾವು ಆತ್ಮಾವಲೋಕನ ಮಾಡಿದರೆ ನಮ್ಮ ಆತಂಕಗಳಿಗೆ ಕಾರಣ ಗೊತ್ತಾಗುವುದು ಅಲ್ಲವೇ? ಒಳಗೆ ಕಳೆದುಕೊಂಡದ್ದನ್ನು ನಾವು ಕೂಡ ಹೊರಗೆಲ್ಲೋ ಹುಡುಕುತ್ತಾ ಇದ್ದೆವಲ್ಲ ದಡ್ಡತನ ಅಲ್ಲವೇ’ ಎಂದರು? ಶಿಷ್ಯನಿಗೆ ಗುರುಗಳು ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅರ್ಥವಾಯಿತು.

ಕೈ ಮುಗಿಯುತ್ತಾ ಗುರುಗಳ ಪಾದಕ್ಕೆ ಬಿದ್ದು ನಮಸ್ಕರಿಸಿದ. ‘ಕ್ಷಮಿಸಿ, ಗುರುಗಳೇ ನಿಮ್ಮಿಂದ ಒಂದು ದೊಡ್ಡ ಪಾಠ ಕಲಿತಂತಾಯಿತು. ನನ್ನೊಳಗೆ ಕಂಡುಕೊಳ್ಳಬೇಕಾದ ಸಮಾಧಾನ ನೆಮ್ಮದಿ ಆತ್ಮ ಶಕ್ತಿಯನ್ನು ಹೊರಗಿನ ಪ್ರಪಂಚದಲ್ಲಿ ಬೇರೆಯವರನ್ನು ದೂಷಿಸುತ್ತಾ ಹುಡುಕಾಡುತ್ತಿದ್ದೆ.

ಇನ್ನು ಮುಂದೆ ನೀವು ಹೇಳಿದಂತೆ ಧ್ಯಾನದಿಂದ ನನ್ನನ್ನು ನಾನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ’ ಎಂದ. ಗುರುಗಳಿಗೆ ಸಂತೋಷವಾಗಿ ಅವನಿಗೆ ಆಶೀರ್ವಾದ ಮಾಡಿದರು. ನಾವು ಕೂಡ ಹೀಗೆಯೇ ಅಲ್ಲವೇ? ನಮಗೆ ಬಂದ ಕಷ್ಟಗಳಿಗೆ ಮತ್ತೊಬ್ಬರನ್ನು ದೂಷಿಸುತ್ತಾ ಅವರ ಮೇಲೆ ಅಪವಾದ ಹೊರಿಸುತ್ತಾ ಪ್ರಪಂಚದ ಮೇಲೆ ಸಿಟ್ಟು ಮಾಡಿಕೊಂಡು ಓಡಾಡುತ್ತೇವೆ. ಆದರೆ ನಾವು ಎದುರಿಸುವ ಅನೇಕ ಸಮಸ್ಯೆಗಳು ಕಷ್ಟಕೂಟಲೆಗಳಿಗೆ ನಾವೇ ಜವಾಬ್ದಾರರು.

ಸಾವಿರ ಜನರನ್ನು ಬೈದುಕೊಂಡು ಓಡಾಡಿದರು. ಅದರಿಂದ ಪಾರಾಗುವ ಕೆಲಸವನ್ನು ನಾವೇ ಮಾಡಬೇಕು. ಅದಕ್ಕೆ ಆಂತರ್ಯದಲ್ಲಿ ಮೊದಲು ನಾವು ಗಟ್ಟಿಯಾಗಬೇಕು. ಈ ಸಮಸ್ಯೆಗೆ ಹೊರಗಿ ನಿಂದ ಪರಿಹಾರ ಸಿಗುವುದಿಲ್ಲ. ಇದಕ್ಕೆ ಬೇಕಿರುವ ಮನೋಸ್ಥೈರ್ಯವನ್ನು ಒಳಗಿನಿಂದ ನಾವು ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಮಗೆ ಪರಿಹಾರ ದೊರಕುತ್ತದೆ.

ರೂಪಾ ಗುರುರಾಜ್

View all posts by this author