ಇದೇ ಅಂತರಂಗ ಸುದ್ದಿ
ನನಗೆ ಫಾಂಟ್‌ಗಳ ಬಗ್ಗೆ ಒಂದು ರೀತಿಯ ವಿಚಿತ್ರ ಅಬ್ಸೇಷನ್. ಕೆಲವು ಸಲ ಅಕ್ಷರಗಳನ್ನು ಕಂಡಾಗ ನನಗೆ ಮುಂದೆ ಓದಲಾಗುವುದೇ ಇಲ್ಲ. ಪ್ರೂಫ್ ರೀಡ್ ಮಾಡುವವರಿಗೆ ಪದಗಳಲ್ಲಿರುವ ತಪ್ಪುಗಳ ಕಡೆಗೇ ಕಣ್ಣು ಹೋಗುವಂತೆ, ಅಕ್ಷರಗಳ ಮೋಹಕತೆ ಕಂಡಾಗ ನಾನು ಅವುಗಳ ವಿನ್ಯಾಸ, ರಚನೆಯ ಸೌಂದರ್ಯವನ್ನೇ ತದೇಕಚಿತ್ತದಿಂದ ನೋಡುತ್ತಾ ಇದ್ದುಬಿಡುತ್ತೇನೆ. ಇದಕ್ಕೆ ಕಾರಣ ಆ ಅಕ್ಷರಗಳ ಹಿಂದಿರುವ ಜ್ಯಾಮಿತೀಯ ಸೌಂದರ್ಯ (Geometric Beauty). ಪ್ರತಿಯೊಂದು ಫಾಂಟ್‌ನ ಒಳ ಸುರುಳಿಗಳು, ಅಕ್ಷರಗಳ ದಪ್ಪ-ಸಪೂರದ ಅನುಪಾತ ಮತ್ತು ಎರಡು ಅಕ್ಷರಗಳ ನಡುವಿರುವ ಸೂಕ್ಷ್ಮ ಜಾಗ (Kerning)-ಇವೆಲ್ಲವೂ ಒಂದು ಮೂರ್ತಿಶಿಲ್ಪದಷ್ಟೇ ಕಲಾತ್ಮಕವಾಗಿರುತ್ತವೆ.
ಸಾಮಾನ್ಯ ಕಣ್ಣುಗಳಿಗೆ ಕೇವಲ ಮಾಹಿತಿ ಕಾಣಿಸಿದರೆ, ನನ್ನಂಥ ಫಾಂಟ್ ಅಬ್ಸೇಷನ್ ಇರುವವರ ಕಣ್ಣುಗಳಿಗೆ ಅಲ್ಲಿನ ರೇಖಾಗಣಿತದ ಅದ್ಭುತ ವಿನ್ಯಾಸ ಗೋಚರಿಸುತ್ತದೆ. ಪ್ರತಿ ಫಾಂಟ್ ಕೂಡ ಮಾತಾಡುತ್ತದೆ. ಅದಕ್ಕೆ ತನ್ನದೇ ಆದ ಭಾವ, ವ್ಯಕ್ತಿತ್ವವಿದೆ. ಫಾಂಟ್‌ಗಳು ಕೇವಲ ಕಣ್ಣಿಗೆ ಕಾಣುವ ಅಚ್ಚುಗಳಲ್ಲ. ಅವು ಮೂಕವಾಗಿ ಸಂವಹನ ನಡೆಸುವ ಅದ್ಭುತ ಮಾಧ್ಯಮಗಳು.
ಗ್ರಾಫಿಕ್ ವಿನ್ಯಾಸದ ಜಗತ್ತಿನಲ್ಲಿ ‘ಟೈಪ್ ಫೇಸ್ ವಾಯ್ಸ್’ ಎಂಬ ಪರಿಕಲ್ಪನೆಯಿದೆ. ಅಂದರೆ, ನಾವು ಅಕ್ಷರಗಳನ್ನು ಗಟ್ಟಿಯಾಗಿ ಓದದಿದ್ದರೂ, ಅವುಗಳ ವಿನ್ಯಾಸವೇ ನಮ್ಮ ಮನಸ್ಸಿನೊಳಗೆ ಒಂದು ನಿರ್ದಿಷ್ಟ ಧ್ವನಿ ಮತ್ತು ಭಾವನೆಯನ್ನು ಸೃಷ್ಟಿಸುತ್ತದೆ. ಪ್ರತಿಯೊಂದು ಫಾಂಟ್‌ಗೂ ತನ್ನದೇ ಆದ ವಿಶಿಷ್ಟ ಪರ್ಸನಾಲಿಟಿ ಇದೆ. ನಾವು ಬರೆಯುವ ಪದಗಳು ಕೇವಲ ಅರ್ಥವನ್ನು ನೀಡಿದರೆ, ಆ ಪದಗಳಿಗೆ ಬಳಸಿರುವ ಫಾಂಟ್‌ಗಳು ಆ ಅರ್ಥಕ್ಕೆ ‘ಭಾವನೆ’ಯ ಬಣ್ಣ ಬಳಿಯುತ್ತವೆ. ಅದಕ್ಕೇ ಹೇಳು ವುದು-‘ವಿಷಯ ಏನಿದೆ ಎಂಬುದು ಪದಗಳಾದರೆ, ಅದನ್ನು ಹೇಗೆ ಹೇಳಲಾಗಿದೆ ಎಂಬುದು ಫಾಂಟ್!’
ಇದನ್ನೂ ಓದಿ: Vishweshwar Bhat Column: ಒಂದು ಸಣ್ಣ ಲೆಕ್ಕಾಚಾರ
ನಾವು ಬರೆಯುವ ಪದಗಳು ದೇಹವಾದರೆ, ಆ ಪದಗಳಿಗೆ ಧರಿಸುವ ಫಾಂಟ್‌ಗಳು ಆ ದೇಹಕ್ಕೆ ಜೀವ ನೀಡುವ ಆತ್ಮದಂತೆ ಕೆಲಸ ಮಾಡುತ್ತವೆ. ಪದಗಳು ಕೇವಲ ಅರ್ಥವನ್ನು ದಾಟಿಸುವ ಒಣ ಮಾಧ್ಯಮವಾಗಬಲ್ಲವು, ಆದರೆ ಆ ಅರ್ಥಕ್ಕೆ ಸೂಕ್ತವಾದ ಮೂಡ್, ಗಾಂಭೀರ್ಯ ಅಥವಾ ಮೃದುತ್ವದ ‘ಭಾವನೆಯ ಬಣ್ಣ’ ಬಳಿಯುವುದು ನಾವು ಆಯ್ಕೆ ಮಾಡುವ ಫಾಂಟ್ ಮಾತ್ರ. ಬೇಕಾದರೆ ಗಮನಿಸಿ. ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂಬ ವಾಕ್ಯವನ್ನು ಅತ್ಯಂತ ನಾಜೂಕಾದ, ಬಳುಕುವ ‘ನುಪ್ಷಿಯಲ್ ಸ್ಕ್ರಿಪ್ಟ್’ (Nuptial Script) ಫಾಂಟ್‌ನಲ್ಲಿ ಬರೆದಾಗ ಅಲ್ಲಿ ಪ್ರೇಮದ ತೀವ್ರತೆ ಮತ್ತು ಸೌಂದರ್ಯ ಕಣ್ಣಿಗೆ ಕಟ್ಟುತ್ತದೆ. ಅದೇ ವಾಕ್ಯವನ್ನು ಕಚೇರಿಯ ನೋಟೀಸ್‌ಗೆ ಬಳಸುವ ಕಠಿಣವಾದ, ದಪ್ಪನೆಯ ‘ಏರಿಯಲ್ ಬ್ಲ್ಯಾಕ್’ (Arial Black) ಫಾಂಟ್ʼನಲ್ಲಿ ಮುದ್ರಿಸಿದರೆ, ಅದು ಪ್ರೇಮ ನಿವೇದನೆಯಂತೆ ಕಾಣದೆ ಯಾವುದೋ ಎಚ್ಚರಿಕೆಯ ಆದೇಶದಂತೆ ಧ್ವನಿಸುತ್ತದೆ!
ಪದಗಳು ಒಂದೇ ಆದರೂ, ಫಾಂಟ್ ಬದಲಾದಾಗ ಇಡೀ ಸಂದೇಶದ ಆಶಯವೇ ಬದಲಾಗಿ ಬಿಡು ತ್ತದೆ. ಅದಕ್ಕೆ ಒಂದು ಮಾತಿದೆ- If words represent what is said, the font embodies how it is said ಅಂತ. ಫಾಂಟ್‌ಗಳಿಗೆ ಧ್ವನಿಯನ್ನು ಬದಲಾಯಿಸುವ ಶಕ್ತಿಯಿದೆ. ಕೆಲವು ಫಾಂಟ್‌ಗಳು ಪಿಸು ಮಾತಿನಂತೆ ಮೃದುವಾಗಿರುತ್ತವೆ, ಇನ್ನು ಕೆಲವು ಫಾಂಟ್‌ಗಳು ಮೈಕ್‌ನಲ್ಲಿ ಕೂಗಿ ಹೇಳಿದಂತೆ ಅಬ್ಬರಿಸುತ್ತವೆ.
ಸರಿಯಾದ ಫಾಂಟ್ ಆಯ್ಕೆಯು ಓದುಗನಿಗೆ ನಾವು ಹೇಳದೆಯೇ ವಿಷಯದ ಗಂಭೀರತೆಯನ್ನು ಮನವರಿಕೆ ಮಾಡಿಕೊಡುತ್ತದೆ. ನಾವು ಒಂದು ಬ್ರ್ಯಾಂಡ್‌ನ ಲೋಗೋ ನೋಡಿದ ತಕ್ಷಣ ನಮಗೆ ಹುಟ್ಟುವ ನಂಬಿಕೆ ಅಥವಾ ಆಕರ್ಷಣೆಯ ಹಿಂದೆ ಈ ಅಕ್ಷರಗಳ ಸೈಕಾಲಜಿ ಇರುತ್ತದೆ. ಹೀಗಾಗಿ, ಫಾಂಟ್ ಎನ್ನುವುದು ಕೇವಲ ಅಲಂಕಾರಿಕ ಕಲೆಯಲ್ಲ; ಅದು ಪದಗಳ ಮರೆಯಲ್ಲಿ ನಿಂತು ಇಡೀ ಸಂವಹನವನ್ನು ನಿಯಂತ್ರಿಸುವ ಅದೃಶ್ಯ ಕಲಾಪ್ರತಿಭೆ. ಅಕ್ಷರಗಳ ವಿನ್ಯಾಸ ಚೆನ್ನಾಗಿದ್ದಾಗ, ಓದು ಕೇವಲ ಮಾಹಿತಿ ಸಂಗ್ರಹಣೆಯಾಗದೆ ಒಂದು ಸುಂದರ ಅನುಭವವಾಗಿ ಬದಲಾಗುತ್ತದೆ.
ಡಿಸೈನರ್‌ಗೆ ಈ ಸಂಗತಿ ಗೊತ್ತಿರಬೇಕು. ಪ್ರತಿ ಫಾಂಟ್‌ಗೂ ಒಂದು ಒಳದನಿಯಿದೆ, ಆದರೆ ಮುದ್ರಿತ ವಾದ ಬಳಿಕ ಅದು ಜೋರಾಗಿ ಮಾತಾಡುತ್ತದೆ ಎಂಬ ಸಾಮಾನ್ಯ ಸಂಗತಿ ಗೊತ್ತಿರಬೇಕು. ಆಗ ಆತ ಯಾವ ಸಂದರ್ಭಕ್ಕೆ ಯಾವ ಫಾಂಟ್ ಬಳಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.
ಎಲ್ಲ ಫಾಂಟ್, ಎಲ್ಲ ಸಂದರ್ಭಕ್ಕೆ ಸಮರ್ಪಕವಾಗಿ ಹೊಂದುವುದಿಲ್ಲ. ಒಬ್ಬ ಪರಿಣಾಮಕಾರಿ ಗ್ರಾಫಿಕ್ ಡಿಸೈನರ್ ಅಥವಾ ಲೇಖಕನಿಗೆ ಇರಬೇಕಾದ ಅತ್ಯಂತ ಪ್ರಮುಖ ಪ್ರಜ್ಞೆ ಇದು. ಕಂಪ್ಯೂಟರ್ ಪರದೆಯ ಮೇಲಿರುವಾಗ ಫಾಂಟ್ ಕೇವಲ ಒಂದು ಸಾಫ್ಟ್ʼವೇರ್ ಕಡತದಂತೆ ಮೌನವಾಗಿರುತ್ತದೆ. ಆದರೆ, ಅದು ಕಾಗದದ ಮೇಲೋ, ಹೋರ್ಡಿಂಗ್ ಮೇಲೋ ಮುದ್ರಿತವಾದಾಗ (Printed) ಜಗತ್ತಿ ನೊಂದಿಗೆ ಅತ್ಯಂತ ಜೋರಾಗಿ ಮಾತನಾಡಲು ಶುರು ಮಾಡುತ್ತದೆ. ಮುದ್ರಣಗೊಂಡ ಬಳಿಕ ಅದರ ಒಳದನಿಯು ಓದುಗನ ಉಪಪ್ರಜ್ಞೆಯನ್ನು ನೇರವಾಗಿ ತಲುಪುತ್ತದೆ.
ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಐಸಿಯು ಬಾಗಿಲಿನ ಮೇಲೆ ಅತ್ಯಂತ ಗಂಭೀರವಾದ, ಸರಳ ವಾದ ಮತ್ತು ಧೈರ್ಯ ತುಂಬುವ ಏರಿಯಲ್ ಅಥವಾ ಹೆಲ್ವೆಟಿಕ ಫಾಂಟ್ ಇರಬೇಕು. ಅದನ್ನು ಬಿಟ್ಟು ಡಿಸೈನರ್ ಅಲ್ಲಿಗೆ ಮದುವೆ ಕಾರ್ಡ್‌ಗೆ ಬಳಸುವ ರಂಗುರಂಗಿನ, ಬಳುಕುವ ‘ನುಪ್ಷಿಯಲ್ ಸ್ಕ್ರಿಪ್ಟ್’ ಬಳಸಿದರೆ ಏನಾಗಬಹುದು? ಐಸಿಯು ಎನ್ನುವುದು ಜೀವನ ಮತ್ತು ಮರಣದ ನಡುವೆ ಹೋರಾಟ ನಡೆಯುವ ಅತ್ಯಂತ ಸೂಕ್ಷ್ಮ ಜಾಗ. ಅಲ್ಲಿಗೆ ಬರುವ ರೋಗಿಯ ಸಂಬಂಧಿಕರು ತೀವ್ರ ಆತಂಕ, ಭಯ ಮತ್ತು ಗೊಂದಲದಲ್ಲಿ ಇರುತ್ತಾರೆ.
ಅಂಥ ಸಂದರ್ಭದಲ್ಲಿ ಅಲ್ಲಿನ ವಾತಾವರಣ ಮತ್ತು ನಾಮಫಲಕಗಳು ಜನರಿಗೆ ಸ್ಥಿರತೆ, ಧೈರ್ಯ ಮತ್ತು ವೃತ್ತಿಪರತೆಯ ಭರವಸೆ ನೀಡಬೇಕು. ಏರಿಯಲ್ ಅಥವಾ ಹೆಲ್ವೆಟಿಕದಂತಹ ಸರಳ, ಗಂಭೀರ ವಾದ ಫಾಂಟ್‌ಗಳು ಯಾವುದೇ ಆಡಂಬರವಿಲ್ಲದೇ ‘ಇಲ್ಲಿ ಎಲ್ಲವೂ ನಿಯಂತ್ರಣದಲ್ಲಿದೆ, ವೈದ್ಯರು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ’ ಎಂಬ ಮೂಕ ಸಂದೇಶವನ್ನು ರವಾನಿಸು ತ್ತವೆ. ಇವುಗಳನ್ನು ನೋಡಿದಾಗ ಮಿದುಳಿಗೆ ಒಂದು ರೀತಿಯ ಸ್ಪಷ್ಟತೆ ಸಿಗುತ್ತದೆ.
ಆದರೆ, ಅಲ್ಲಿಗೆ ಸಂಭ್ರಮದ ಸಂಕೇತವಾದ ನುಪ್ಷಿಯಲ್ ಸ್ಕ್ರಿಪ್ಟ್ ಬಳಸಿದರೆ ಇಡೀ ಅರ್ಥವೇ ಆಭಾಸವಾಗಿ ಬಿಡುತ್ತದೆ. ಆ ಫಾಂಟ್ʼನ ಸುರುಳಿಗಳು, ನಯನಾಜೂಕು ಮತ್ತು ರಂಗುರಂಗಿನ ಶೈಲಿ ಮದುವೆ ಮನೆಗೆ ಒಪ್ಪುತ್ತದೆಯೇ ಹೊರತು ಆಸ್ಪತ್ರೆಗಲ್ಲ. ಐಸಿಯು ಬಾಗಿಲಲ್ಲಿ ಅದನ್ನು ನೋಡಿ ದಾಗ, ರೋಗಿಯ ಕಡೆಯವರಿಗೆ ಆಸ್ಪತ್ರೆಯು ತಮ್ಮ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದು ಕೊಂಡಿಲ್ಲ, ಇದೊಂದು ತಮಾಷೆ ಅಥವಾ ಕೇವಲ ವ್ಯಾಪಾರಿ ಜಾಗ ಎಂಬ ತಪ್ಪು ಭಾವನೆ ಮೂಡುತ್ತದೆ.
ಇದು ಅವರಲ್ಲಿ ಆಸ್ಪತ್ರೆಯ ಮೇಲಿನ ನಂಬಿಕೆಯನ್ನೇ ಕಳೆದುಹಾಕಬಹುದು. ಅಲ್ಲದೇ, ಗಾಬರಿ ಯಲ್ಲಿರುವ ಕಣ್ಣುಗಳಿಗೆ ಆ ವಕ್ರ ಅಕ್ಷರಗಳನ್ನು ಓದುವುದೇ ಒಂದು ಕಷ್ಟದ ಕೆಲಸವಾಗಿ ಪರಿಣಮಿಸುತ್ತದೆ.
ನೀವು ನಿಮ್ಮ ಕಷ್ಟದ ಗಳಿಕೆಯನ್ನು ಒಂದು ಪ್ರಸಿದ್ಧ ಬ್ಯಾಂಕಿನಲ್ಲಿ ಇಡಲು ಹೋಗುತ್ತೀರಿ. ಆ ಬ್ಯಾಂಕಿನ ಲೋಗೋ ಮತ್ತು ರಸೀದಿಗಳ ಮೇಲೆ ಮಕ್ಕಳ ಕಾಮಿಕ್ ಪುಸ್ತಕಗಳಲ್ಲಿ ಬಳಸುವ Comic Sans ಅಥವಾ Chiller ನಂಥ ಚೇಷ್ಟೆಯ ಫಾಂಟ್ ಬಳಸಲಾಗಿದೆ ಎಂದುಕೊಳ್ಳಿ. ಆ ಕ್ಷಣದ ನಿಮಗೆ ಆ ಬ್ಯಾಂಕಿನ ಮೇಲಿನ ನಂಬಿಕೆಗೆ ಬಗ್ಗೆ ಒಂದು ಪ್ರಶ್ನಾರ್ಥಕ ಚಿಹ್ನೆ ಮೂಡುತ್ತದೆ.
ಏಕೆಂದರೆ ಆ ಫಾಂಟ್ ಮುದ್ರಣಗೊಂಡಾಗ ‘ನಾವು ಗಂಭೀರವಾದ ಸಂಸ್ಥೆಯಲ್ಲ, ತಮಾಷೆ ಮಾಡು ತ್ತಿದ್ದೇವೆ’ ಎಂದು ಜೋರಾಗಿ ಕೂಗಿ ಹೇಳುತ್ತಿರುತ್ತದೆ. ಬ್ಯಾಂಕುಗಳಿಗೆ ಯಾವಾಗಲೂ ಸ್ಥಿರತೆ ಮತ್ತು ಭರವಸೆ ನೀಡುವ ಟೈಮ್ಸ್ ನ್ಯೂ ರೋಮನ್ ಅಥವಾ ಬಾಸ್ಕರ್ವಿಲ್ಲೆ (Baskerville) ನಂಥ ‘ಸೆರಿಫ್’ ಫಾಂಟ್ಗಳೇ ಸೂಕ್ತ. ಹಾಗೆಯೇ, ಒಂದು ಭೀಕರ ಹಾರರ್ ಸಿನಿಮಾದ ಪೋಸ್ಟರ್‌ಗೆ ರಕ್ತ ಹೆಪ್ಪುಗಟ್ಟು ವಂಥ, ಮುರಿದು ಹೋದ ಅಕ್ಷರಗಳ ವಿನ್ಯಾಸವಿರುವ ಫಾಂಟ್ ಬಳಸಬೇಕು. ಅದರ ಬದಲಿಗೆ ಡಿಸೈನರ್ ಅತ್ಯಂತ ಕ್ಲಾಸಿಕ್ ಆದ, ಶಾಂತಿಯುತವಾದ ಯಾವುದೋ ಐಷಾರಾಮಿ ಫಾಂಟ್ ಬಳಸಿ ದರೆ, ಜನರಿಗೆ ಅದೊಂದು ಪ್ರೇಮಕಾವ್ಯದ ಸಿನಿಮಾ ಎನಿಸುತ್ತದೆಯೇ ಹೊರತು ಹಾರರ್ ಸಿನಿಮಾ ಎನಿಸುವುದಿಲ್ಲ.
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸುವ ಫ್ಲೆಕ್ಸ್ ಬೋರ್ಡ್ ಅಥವಾ ಸೈನ್ ಬೋರ್ಡ್‌ಗಳ ವಿನ್ಯಾಸ ಕೇವಲ ಮಾಹಿತಿಯಷ್ಟೇ ಅಲ್ಲ, ಅದು ವಾಹನ ಸವಾರರ ಜೀವದ ಸುರಕ್ಷತೆಗೂ ನೇರವಾಗಿ ಸಂಬಂಧಿಸಿದೆ. ಹೆದ್ದಾರಿಯಲ್ಲಿ ವಾಹನಗಳು ಗಂಟೆಗೆ 80 ರಿಂದ 100 ಕಿಮೀ ವೇಗದಲ್ಲಿ ಚಲಿಸುತ್ತಿರು ತ್ತವೆ. ಈ ವೇಗದಲ್ಲಿ ಚಲಿಸುವಾಗ ಚಾಲಕನಿಗೆ ರಸ್ತೆಯ ಪಕ್ಕದಲ್ಲಿರುವ ಬೋರ್ಡ್ ಅನ್ನು ನೋಡಲು, ಓದಿಕೊಳ್ಳಲು ಮತ್ತು ಅದರ ಅರ್ಥವನ್ನು ಗ್ರಹಿಸಲು ಸಿಗುವುದು ಕೇವಲ 3 ಸೆಕೆಂಡುಗಳ ಕಾಲಾವಕಾಶ.
ಅಂಥ ಅತ್ಯಂತ ಕ್ಷಿಪ್ರ ಹಾಗೂ ಅಪಾಯಕಾರಿ ಸಂದರ್ಭದಲ್ಲಿ ಫ್ಲೆಕ್ಸ್ ಬೋರ್ಡ್‌ನಲ್ಲಿ ಬಳಸುವ ಫಾಂಟ್ ಅತ್ಯಂತ ಸರಳ, ಸ್ಪಷ್ಟ ಮತ್ತು ದಪ್ಪನಾಗಿರಬೇಕು ( Bold and Clean ). ಉದಾಹರಣೆಗೆ ಏರಿಯಲ್, ಹೆಲ್ವೆಟಿಕ ಅಥವಾ ಫುಚೂರಾದಂಥ ಗೆರೆಗಳಿಲ್ಲದ ( Sans-serif ) ನೇರ ಫಾಂಟ್‌ಗಳು ಕಣ್ಣಿಗೆ ಬಿದ್ದ ತಕ್ಷಣ, ಮಿದುಳಿಗೆ ಯಾವುದೇ ಶ್ರಮವಿಲ್ಲದೆ ಸೆಕೆಂಡಿನ ನೂರನೇ ಭಾಗದಲ್ಲಿ ಅರ್ಥ ವಾಗಿಬಿಡುತ್ತವೆ. ಇದನ್ನು ಬಿಟ್ಟು ಒಬ್ಬ ಡಿಸೈನರ್ ಅಲ್ಲಿ ತನ್ನ ಸೃಜನಶೀಲತೆ ತೋರಿಸಲು ಹೋಗಿ, ಅತಿ ಹೆಚ್ಚು ಅಲಂಕಾರವಿರುವ, ಗೋಜಲಾದ ಸುರುಳಿಗಳಿರುವ ಕ್ಯಾಲಿಗ್ರಫಿ ಅಥವಾ ನುಪ್ಷಿಯಲ್ ಸ್ಕ್ರಿಪ್ಟ್‌ನಂಥ ಫಾಂಟ್‌ಗಳನ್ನು ಬಳಸಿದರೆ ಏನಾಗುತ್ತದೆ? ಆ ಮೂರು ಸೆಕೆಂಡುಗಳಲ್ಲಿ ಚಾಲಕನಿಗೆ ಆ ಅಕ್ಷರಗಳನ್ನು ಓದಲು ಸಾಧ್ಯವಾಗುವುದಿಲ್ಲ.
ಮಾನವನ ಸಹಜ ಗುಣದಂತೆ ಚಾಲಕ ಆ ಬೋರ್ಡ್‌ನಲ್ಲಿ ಏನು ಬರೆದಿದೆ ಎಂದು ತಿಳಿಯಲು ತನ್ನ ಗಮನವನ್ನು ರಸ್ತೆಯಿಂದ ಸಂಪೂರ್ಣವಾಗಿ ಹರಿಸಿ, ಬೋರ್ಡ್‌ನ ಕಡೆಗೆ ಹೆಚ್ಚು ದೃಷ್ಟಿ ನೆಡುತ್ತಾನೆ. ವೇಗವಾಗಿ ಚಲಿಸುವ ವಾಹನದಲ್ಲಿ ಕಣ್ಣಿನ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಗಾಡಿಯು ಹಲವು ಮೀಟರ್‌ಗಳಷ್ಟು ಮುಂದೆ ಸಾಗಿರುತ್ತದೆ. ಅಕ್ಷರಗಳ ಒಳದನಿಯ ಗೊಂದಲದಿಂದಾಗಿ ಚಾಲಕನ ಏಕಾಗ್ರತೆ ಭಂಗವಾಗಿ, ಆ ಕ್ಷಣದ ತಪ್ಪು ನಿರ್ಧಾರವು ಭೀಕರ ರಸ್ತೆ ಅಪಘಾತಗಳಿಗೆ ಕಾರಣವಾಗ ಬಹುದು.
ಫಾಂಟ್‌ನ ಸೌಂದರ್ಯಕ್ಕಿಂತ ಅಲ್ಲಿ ಓದುವ Legibility and Readability ಮುಖ್ಯ. ಅದಕ್ಕೇ ಜಾಗತಿಕ ನಿಯಮಗಳ ಪ್ರಕಾರ ಹೆದ್ದಾರಿಯ ಬೋರ್ಡ್‌ಗಳಲ್ಲಿ ಯಾವುದೇ ಅಲಂಕಾರಿಕ ಫಾಂಟ್‌ಗಳಿಗೆ ಜಾಗ ವಿರುವುದಿಲ್ಲ. ತಪ್ಪು ಫಾಂಟ್‌ನ ಆಯ್ಕೆ ಕೇವಲ ಕಲಾತ್ಮಕ ವೈಫಲ್ಯವಲ್ಲ, ಅದು ಜೀವಕ್ಕೆ ಕುತ್ತು ತರುವ ಹೆದ್ದಾರಿಯ ಗಂಡಾಂತರ!
ಒಂದು ಫಾಂಟ್ ನಮ್ಮ ಕಣ್ಣಿಗೆ ಬಿದ್ದ ತಕ್ಷಣ, ಅಲ್ಲಿರುವ ಪದಗಳನ್ನು ಓದುವುದಕ್ಕೂ ಮೊದಲೇ ಆ ವಿಷಯದ ಸಂದರ್ಭ ಮತ್ತು ಗಾಂಭೀರ್ಯ ನಮಗೆ ಅರ್ಥವಾಗಿ ಬಿಡಬೇಕು. ಏಕೆಂದರೆ ಫಾಂಟ್‌ಗಳು ಕೇವಲ ದೃಶ್ಯಗಳಲ್ಲ, ಅವು ಮಾನಸಿಕ ಸಂಕೇತಗಳು. ಒಬ್ಬ ಪರಿಣತ ವಿನ್ಯಾಸಕ ಬರವಣಿಗೆಯ ಆಶಯಕ್ಕೆ ತಕ್ಕಂತೆ ಫಾಂಟ್ ಆರಿಸದಿದ್ದರೆ ಇಡೀ ಸಂದೇಶದ ಮೌಲ್ಯವೇ ಮಣ್ಣುಪಾಲಾಗುತ್ತದೆ. ಇದಕ್ಕೆ ಅತ್ಯಂತ ಸೂಕ್ತ ಉದಾಹರಣೆಯೆಂದರೆ, ಶ್ರದ್ಧಾಂಜಲಿ ಮತ್ತು ಜನ್ಮದಿನದ ಶುಭಾಶಯಗಳು. ಒಬ್ಬ ವ್ಯಕ್ತಿಯ ನಿಧನದ ವಾರ್ತೆ ಅಥವಾ ಭಾವಪೂರ್ಣ ಶ್ರದ್ಧಾಂಜಲಿಯ ಪೋಸ್ಟರ್‌ಗಳನ್ನು ಸಿದ್ಧಪಡಿಸುವಾಗ ಅತ್ಯಂತ ನಿರಾಡಂಬರವಾದ, ಸಾಂಪ್ರದಾಯಿಕ ಮತ್ತು ಭಾರವಾದ ಟೈಮ್ಸ್ ನ್ಯೂ ರೋಮನ್ ಅಥವಾ ದಪ್ಪನೆಯ ಕಪ್ಪು ಅಂಚಿನ ‘ಸೆರಿಫ್’ ಫಾಂಟ್‌ಗಳನ್ನು ಬಳಸಲಾಗುತ್ತದೆ. ಇವು ಮೌನ, ದುಃಖ, ಗೌರವ ಮತ್ತು ಗಾಂಭೀರ್ಯದ ಒಳದನಿಯನ್ನು ಹೊಂದಿರುತ್ತವೆ.
ಈಗ ಯೋಚಿಸಿ, ಇದೇ ಶ್ರದ್ಧಾಂಜಲಿಯ ಫಾಂಟ್ ಅನ್ನು ಬಳಸಿ ಯಾರಾದರೂ ‘ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು’ ಎಂದು ಕಾರ್ಡ್ ಮುದ್ರಿಸಿದರೆ ಏನಾಗಬಹುದು? ಜನ್ಮದಿನ ಎನ್ನುವುದು ಸಂಭ್ರಮ, ಹರ್ಷ ಮತ್ತು ಹೊಸ ಆಶಾವಾದದ ಸಂಕೇತ. ಅದಕ್ಕೆ ಬಳಸುವ ಫಾಂಟ್ಗಳು ಹಗುರವಾಗಿ, ಚಟುವಟಿಕೆಯಿಂದ ಕೂಡಿರಬೇಕು. ಅದರ ಬದಲು ನಿಧನ ಸುದ್ದಿಯ ಗಂಭೀರ ಫಾಂಟ್ ಬಳಸಿದರೆ ಆ ಕಾರ್ಡ್ ನೋಡಿದ ತಕ್ಷಣ ಹುಟ್ಟುಹಬ್ಬದ ಆಚರಣೆಯ ಬದಲಿಗೆ ಆಘಾತ ಅಥವಾ ಶೋಕಾ ಚರಣೆಯ ಭಾವನೆ ಮೂಡುತ್ತದೆ. ಶುಭ ಕೋರಬೇಕಾದ ಜಾಗದಲ್ಲಿ ಅಮಂಗಳದ ನೆರಳು ಬಿದ್ದಂತೆ ಭಾಸವಾಗುತ್ತದೆ.
ಫಾಂಟ್‌ಗಳಿಗೆ ತಮ್ಮದೇ ಆದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಹಿನ್ನೆಲೆಯಿರುತ್ತದೆ. ಕಣ್ಣುಗಳು ಅಕ್ಷರಗಳ ಆಕಾರವನ್ನು ನೋಡಿ ಮಿದುಳಿಗೆ ಕ್ಷಣಾರ್ಧದಲ್ಲಿ ಸಂದೇಶ ಕಳುಹಿಸುತ್ತವೆ. ಹೀಗಾಗಿ, ಹುಟ್ಟುಹಬ್ಬದ ಉಸಕ್ಕೆ ನಗುವ ಫಾಂಟ್ ಬೇಕು, ಸಾವಿನ ಮೌನಕ್ಕೆ ಕಂಬನಿ ಮಿಡಿಯುವ ಫಾಂಟ್ ಬೇಕು. ಎರಡನ್ನೂ ಅದಲು ಬದಲು ಮಾಡಿದರೆ ಬದುಕಿನ ಎರಡು ಪರಮ ಸತ್ಯಗಳಾದ ‘ಜನನ’ ಮತ್ತು ‘ಮರಣ’ಗಳ ನಡುವಿನ ವ್ಯತ್ಯಾಸವೇ ಮಸುಕಾಗಿ ಬಿಡುತ್ತದೆ.
ಹೀಗಾಗಿ ಫಾಂಟ್ ಅಂದ್ರೆ ಬರೀ ಅಕ್ಷರಗಳಲ್ಲ. ಅವುಗಳನ್ನು ಬೇಕಾಬಿಟ್ಟಿ ಬಳಸುವಂತಿಲ್ಲ. ಅದು ಸಂದರ್ಭದ ‘ಭಾವನಾತ್ಮಕ ತೂಕ’ವನ್ನು ಹೊರುವ ಮಾಧ್ಯಮ. ತಪ್ಪು ಫಾಂಟ್ ಬಳಕೆಯು ಅತ್ಯಂತ ಪವಿತ್ರವಾದ ಅಥವಾ ಗಂಭೀರವಾದ ಜಾಗವನ್ನು ಕೂಡ ಹಾಸ್ಯಾಸ್ಪದವಾಗಿ ಮಾಡ ಬಲ್ಲದು. ಸಾಯುವ ಮೊದಲೇ ಸಿದ್ಧವಾಗುತ್ತವೆ!
ದೊಡ್ಡ ದೊಡ್ಡ ಗಣ್ಯ ವ್ಯಕ್ತಿಗಳು, ಸೆಲೆಬ್ರಿಟಿಗಳು ಬದುಕಿದ್ದಾಗಲೇ ಪತ್ರಿಕಾ ಕಚೇರಿಗಳಲ್ಲಿ ಅವರ Obituary (ಶ್ರದ್ಧಾಂಜಲಿ ವರದಿ) ಆಗಲೇ ಸಿದ್ಧವಾಗಿರುತ್ತದೆ ಅನ್ನೋದು ಗುಟ್ಟೇನೋ ಅಲ್ಲ. ಇಂಗ್ಲಿಷ್ ನಲ್ಲಿ ಇದನ್ನು Advance Obituaries ಅಂತಾರೆ. ಕೇಳಲು ಇದು ಸ್ವಲ್ಪ ವಿಚಿತ್ರ ಎನಿಸಿದರೂ, ಪತ್ರಿಕೋದ್ಯಮದ ಕಾರ್ಯಕ್ಷಮತೆ ದೃಷ್ಟಿಯಿಂದ ಇದು ಅನಿವಾರ್ಯ. ಆದರೆ, ಒಬ್ಬ ಗಣ್ಯ ವ್ಯಕ್ತಿ ಇನ್ನು ಆರಾಮಾಗಿ ಬದುಕಿ, ಕಾಫಿ ಕುಡಿಯುತ್ತಾ ಪೇಪರ್ ಓದುತ್ತಿರುವಾಗಲೇ, ಬ್ಯಾಕ್ ಗ್ರೌಂಡ್‌ನಲ್ಲಿ ಪತ್ರಿಕಾ ಕಚೇರಿಗಳಲ್ಲಿ ಅವನ ಅಬಿಚುವರಿ ಸಿದ್ಧವಾಗುತ್ತಿರುತ್ತದೆ.
ಗಣ್ಯ ವ್ಯಕ್ತಿಯೊಬ್ಬರು ಸತ್ತ ತಕ್ಷಣ ಬ್ರೇಕಿಂಗ್ ನ್ಯೂಸ್ ಕೊಡಬೇಕು, ಮಾರನೇ ದಿನ ಪೇಪರ್‌ನ ಮೊದಲ ಪುಟದಲ್ಲಿ ಅವರ ಇಡೀ ಜೀವನ ಚರಿತ್ರೆ ಬರಬೇಕು. ಅದಕ್ಕೆ ಪತ್ರಿಕಾ ಕಚೇರಿಗಳು ಮೊದಲೇ ತಯಾರಿ ಮಾಡಿಕೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಸುದ್ದಿಮನೆಯಲ್ಲಿ ನಡೆಯುವ ಒಂದು ಸಂಭಾಷಣೆಯನ್ನು ಕೇಳಿಸಿಕೊಳ್ಳಿ.
‘ಆ ಪ್ರಸಿದ್ಧ ನಟನಿಗೆ 85 ವರ್ಷ ಆಯ್ತು, ಯಾವಾಗ ಬೇಕಿದ್ರೂ ನ್ಯೂಸ್ ಬರಬಹುದು. ಅವರ Obituary ರೆಡಿ ಮಾಡಿ ಇಟ್ಕೊಳ್ಳಿ.’ ‘ಸಾರ್, ಈಗಾಗಲೇ ಹೆಡ್‌ಲೈನ್ ಬರೆದು, ಫೋಟೋ ಎಡಿಟ್ ಮಾಡಿ, ಬ್ಲ್ಯಾಕ್ ಅಂಡ್ ವೈಟ್ ಬಾರ್ಡರ್ ಹಾಕಿ ರೆಡಿ ಇಟ್ಟಿದ್ದೀನಿ. ಬರೀ ಸತ್ತ ದಿನಾಂಕ ಮತ್ತು ಸಮಯದ ಜಾಗ ಖಾಲಿ ಬಿಟ್ಟಿದ್ದೀನಿ ಅಷ್ಟೇ!’
ಅಂದರೆ, ಆ ಗಣ್ಯ ವ್ಯಕ್ತಿ ಇನ್ನೂ ಮದುವೆ-ಮುಂಜಿ, ಹಬ್ಬ, ಪಾರ್ಟಿ ಅಂತ ಓಡಾಡಿಕೊಂಡಿರುತ್ತಾನೆ, ಆದರೆ ಪತ್ರಿಕೆಯ ಕಂಪ್ಯೂಟರ್ ಫೋಲ್ಡರ್‌ನಲ್ಲಿ ಅವನ ನಿಧನ ಸುದ್ದಿ ಆತ ಸಾಯುವುದನ್ನೇ ಕಾಯುತ್ತಿರುತ್ತದೆ!
ಈ ಅಡ್ವಾ ಆಕ್ಸಿಡೆಂಟ್‌ಗಳು ಪತ್ರಿಕೋದ್ಯಮದಲ್ಲಿ ತುಂಬಾ ಪ್ರಸಿದ್ಧ. ಸಾಫ್ಟ್ʼವೇರ್ ಅಪ್ಡೇಟ್ ಮಾಡು ವಾಗಲೋ ಅಥವಾ ಆತುರದ ಯಾರಾದರೂ ಅಪ್ಪಿತಪ್ಪಿ Publish ಬಟನ್ ಒತ್ತಿ ಬಿಟ್ಟರೆ?ಬದುಕಿರುವ ಗಣ್ಯ ವ್ಯಕ್ತಿ ಬೆಳಗ್ಗೆ ಎದ್ದು ಕಾಫಿ ಕುಡಿಯುತ್ತಾ ಪತ್ರಿಕೆ ನೋಡಿದರೆ, ಅದರಲ್ಲಿ ಅವರದೇ ಸಾವಿನ ಸುದ್ದಿ ‘ಖ್ಯಾತ ಉದ್ಯಮಿ ಇನ್ನಿಲ್ಲ, ತೀವ್ರ ಸಂತಾಪ’ ಎಂದು ಪ್ರಕಟವಾಗಿರುತ್ತದೆ. ಅದನ್ನು ಓದಿದ ಉದ್ಯಮಿ ಅಂದುಕೊಳ್ಳುತ್ತಾನೆ-ಅರೇ, ನಾನು ಸತ್ತು ಹೋಗಿದ್ದೇನಾ? ಇಲ್ಲವಲ್ಲ.. ಇನ್ನು ಇ ಇದ್ದೀನಿ, ಉಪ್ಪಿಟ್ಟು ತಿನ್ನುತ್ತಿದ್ದೇನೆ!’ಇಂಥ ಘಟನೆಗಳು ಜಗತ್ತಿನ ದೊಡ್ಡ ದೊಡ್ಡ ಪತ್ರಿಕೆಗಳ ನಡೆದು ಹೋಗಿವೆ.
ಸಾವು ಯಾವಾಗ ಬರುತ್ತದೋ ಗೊತ್ತಿಲ್ಲ, ಆದರೆ ಅದಕ್ಕೆ ಪತ್ರಿಕೆಗಳ ಕರಡು ಪ್ರತಿ (Draft) ಮಾತ್ರ ಯಾವಾಗಲೂ ‘ರೆಡಿ ಟು ಪಬ್ಲಿಷ್’ ಮೋಡ್‌ನಲ್ಲಿ ಕಾಯುತ್ತಿರುತ್ತದೆ. ಅದನ್ನು ನಾವೇ ಬರೆದು ಕೊಂಡರೆ? ನಾವು ಸತ್ತ ನಂತರ ನಮ್ಮ ಬಗ್ಗೆ ಒಂದು ವಾಕ್ಯವನ್ನು ತಮಾಷೆಯಾಗಿ, ಹಾಸ್ಯಮಯ ವಾಗಿ, ನಾವು ಬದುಕಿದ್ದಾಗಲೇ ಬರೆದಿಟ್ಟರೆ ಹೇಗಿರಬಹುದು? ಅಂಥ ಕೆಲವು ವಾಕ್ಯಗಳು: ಪ್ರತಿ ಸೋಮವಾರದಿಂದ ಡಯಟ್ ಶುರು ಮಾಡಿ ಜಿಮ್‌ಗೆ ಹೋಗ್ತೀನಿ ಅಂತಿದ್ದ ಪುಣ್ಯಾತ್ಮ, ಕೊನೆಗೂ ಯಮನ ಜತೆ ಲಾಂಗ್ ಡ್ರೈವ್ ಹೊರಟೇಬಿಟ್ಟ. ಅವನಿಗೆ ಜಗತ್ತಿನ ಎಲ್ಲ ರಾಜಕೀಯ, ಕ್ರಿಕೆಟ್ ತಂತ್ರಗಳು ಗೊತ್ತಿದ್ದವು. ಗೊತ್ತಿಲ್ಲದ ಒಂದೇ ಒಂದು ವಿಷಯವೆಂದರೆ-ಸಂಬಳ ತಿಂಗಳ ಕೊನೆಯ ವರೆಗೂ ಹೇಗೆ ಉಳಿಸಬೇಕು ಅನ್ನೋದು!
ನಾಲ್ಕು ಜನಕ್ಕೆ ಸಾಲ ಕೊಟ್ಟು, ಅದನ್ನು ವಾಪಸ್ ಕೇಳಲಾಗದೆ ಅವರಿಂದಲೇ ಅಡಗಿ ಓಡಾಡುತ್ತಿದ್ದ ಮಹಾನ್ ದಾನಿ ಇವನು. ಯೂಟ್ಯೂಬ್‌ನಲ್ಲಿ ಅಡುಗೆ ವಿಡಿಯೋ ನೋಡಿ ಇಡೀ ಕಿಚನ್ ಹಾಳು ಮಾಡುವುದರಲ್ಲಿ ಇವಳು ಪಿಎಚ್‌ಡಿ ಮಾಡಿದ್ದಳು. ಸ್ವಿಗ್ಗಿ, ಜೊಮ್ಯಾಟೋ ಸಂಸ್ಥೆಗಳು ಇಂದು ತಮ್ಮ ಅತಿ ದೊಡ್ಡ ಪ್ರಾಯೋಜಕರನ್ನು ಕಳೆದುಕೊಂಡಿವೆ.
ಫೋನಿಗೆ ಬರುವ ಸ್ಪ್ಯಾಮ್ ಕಾಲ್‌ಗಳ ಜತೆಯೂ ಅರ್ಧ ಗಂಟೆ ಹರಟೆ ಹೊಡೆಯುತ್ತಿದ್ದ ಈ ಜೀವ, ಕೊನೆಗೂ ಯಮಧರ್ಮನ ಕರೆಯನ್ನು ರಿಜೆಕ್ಟ್ ಮಾಡಲು ಸಾಧ್ಯವಾಗದೆ ರಿಸೀವ್ ಮಾಡಿದೆ. ಗೋವಾ ಟ್ರಿಪ್ ಪ್ಲಾನ್ ಮಾಡುವುದರ ಅರ್ಧ ಬದುಕು ಕಳೆದ ಇವನು, ಕೊನೆಗೂ ಗೋವಾ ಬದಲು ನೇರವಾಗಿ ಸ್ವರ್ಗಕ್ಕೆ ಟಿಕೆಟ್ ಬುಕ್ ಮಾಡಿಕೊಂಡ. ರಸ್ತೆಯಲ್ಲಿ ಹೋಗುವಾಗ ಯಾವ ನಾಯಿ ಬೊಗಳಿದರೂ ‘ಹಲೋ ಬ್ರದರ್’ ಎನ್ನುತ್ತಿದ್ದ ಈ ಪ್ರಾಣಿ ಪ್ರೇಮಿ, ಇಂದು ನರಕದ ಕಾವಲು ನಾಯಿ ಗಳ ಜತೆ ಸ್ನೇಹ ಬೆಳೆಸಲು ಹೊರಟಿದ್ದಾನೆ.
ಇನ್ಸ್ಟಾಗ್ರಾಮ್ ರೀಲ್ಸ್ ನೋಡಿ ಇಡೀ ರಾತ್ರಿ ಕಳೆದು, ಬೆಳಗ್ಗೆ ಆಫೀಸ್‌ಗೆ ತಡವಾಗಿ ಹೋಗುತ್ತಿದ್ದ ಈ ಅಪ್ರತಿಮ ಸೋಮಾರಿ, ಇನ್ನು ಮುಂದೆ ಶಾಶ್ವತವಾಗಿ ‘Do Not Disturb’ ಮೋಡ್ ನಲ್ಲಿದ್ದಾನೆ. ಮನೆಯಲ್ಲಿ ಬಲ್ಬ ಬದಲಾಯಿಸುವುದಕ್ಕೂ ಎಲೆಕ್ಟ್ರಿಷಿಯನ್ ಬೇಕು ಎನ್ನುತ್ತಿದ್ದ ಇವನು, ಇಂದು ಇಡೀ ಬದುಕಿನ ಕರೆಂಟ್ ಆಫ್ ಮಾಡಿಕೊಂಡು ನಿಶ್ಚಿಂತನಾಗಿದ್ದಾನೆ.
ಆನ್‌ಲೈನ್ ಶಾಪಿಂಗ್‌ನಲ್ಲಿ ಬರುವ ಆಫರ್‌ಗಳನ್ನು ನೋಡಿ ಬೇಡದ ವಸ್ತುಗಳನ್ನೆಲ್ಲ ಕೊಂಡು ಕೊಳ್ಳುತ್ತಿದ್ದ ಈ ಗ್ರಾಹಕ ಶ್ರೇಷ್ಠನಿಗೆ, ಯಮಲೋಕದ ಟ್ರಿಪ್ ಮಾತ್ರ ಸಂಪೂರ್ಣ ಉಚಿತವಾಗಿ ( 100% Off ) ಸಿಕ್ಕಿದೆ. ಟ್ರಾಫಿಕ್‌ನಲ್ಲಿ ಸಿಲುಕಿದಾಗಲೆಲ್ಲ ‘ದೇವರೇ ನನ್ನನ್ನು ಇಲ್ಲಿಂದ ಹೇಗಾದರೂ ಪಾರು ಮಾಡು’ ಎನ್ನುತ್ತಿದ್ದ ದೇವರು, ಇವನ ಪ್ರಾರ್ಥನೆಯನ್ನು ಗಂಭೀರವಾಗಿ ತಗೆದುಕೊಂಡು ನೇರವಾಗಿ ಮೇಲಕ್ಕೆತ್ತಿಕೊಂಡಿದ್ದಾನೆ. ಬದುಕಿನುದ್ದಕ್ಕೂ ಹೆಂಡತಿಯ ರಿಮೋಟ್ ಕಂಟ್ರೋಲ್ ನಲ್ಲಿದ್ದ ಇವನು, ಕೊನೆಗೂ ಆ ಕಂಟ್ರೋಲ್ ವ್ಯಾಪ್ತಿಯಿಂದ ದೂರ ಹೋಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ!