ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: 'ದಿ ಸೇಂಟ್ ಹೆಲೆನಾ ಇಂಡಿಪೆಂಡೆಂಟ್'

ಹೊರ ಜಗತ್ತಿನ ಗದ್ದಲವಿಲ್ಲದೇ, ಕೇವಲ ನಾಲ್ಕೂವರೆ ಸಾವಿರ ಜನಸಂಖ್ಯೆಯನ್ನು ಹೊಂದಿರುವ ಈ ದ್ವೀಪದಲ್ಲಿ ಬದುಕುವುದೇ ಒಂದು ವಿಶಿಷ್ಟ ಅನುಭವ. ಇಂಥ ಪ್ರಶಾಂತ ಜಾಗದಲ್ಲಿ ಒಂದು ದಿನಪತ್ರಿಕೆ ಅಥವಾ ವಾರಪತ್ರಿಕೆ ನಡೆಸುವುದು ಎಂದರೆ ಸುಮ್ಮನೆ ಮಾತಲ್ಲ. ಆದರೂ, ಇಲ್ಲಿ ‘ದಿ ಸೇಂಟ್ ಹೆಲೆನಾ ಇಂಡಿಪೆಂಡೆಂಟ್’ ಎಂಬ ಪತ್ರಿಕೆಯು ದಶಕಗಳಿಂದ ಅತ್ಯಂತ ಉತ್ಸಾಹದಿಂದ ಪ್ರಕಟವಾಗುತ್ತಾ, ಜಗತ್ತಿನ ಅತ್ಯಂತ ವಿಲಕ್ಷಣ ಮತ್ತು ಆತ್ಮೀಯ ಪತ್ರಿಕೋದ್ಯಮಕ್ಕೆ ಸಾಕ್ಷಿಯಾಗಿದೆ.

ಸಂಪಾದಕರ ಸದ್ಯಶೋಧನೆ

ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದ ಮಧ್ಯಭಾಗದಲ್ಲಿ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಖಂಡಗಳಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಸೇಂಟ್ ಹೆಲೆನಾ ಎಂಬ ಪುಟ್ಟ ದ್ವೀಪವಿದೆ. ಜಗತ್ತನ್ನೇ ಗೆಲ್ಲಲು ಹೊರಟಿದ್ದ ನೆಪೋಲಿಯನ್ ಬೋನಪಾರ್ಟೆಯನ್ನು ಬ್ರಿಟಿಷರು ಕೊನೆಗಾಲದಲ್ಲಿ ಗಡಿಪಾರು ಮಾಡಿ ಇರಿಸಿದ್ದು ಇದೇ ಏಕಾಂಗಿ ದ್ವೀಪದಲ್ಲಿ!

ಹೊರ ಜಗತ್ತಿನ ಗದ್ದಲವಿಲ್ಲದೇ, ಕೇವಲ ನಾಲ್ಕೂವರೆ ಸಾವಿರ ಜನಸಂಖ್ಯೆಯನ್ನು ಹೊಂದಿರುವ ಈ ದ್ವೀಪದಲ್ಲಿ ಬದುಕುವುದೇ ಒಂದು ವಿಶಿಷ್ಟ ಅನುಭವ. ಇಂಥ ಪ್ರಶಾಂತ ಜಾಗದಲ್ಲಿ ಒಂದು ದಿನಪತ್ರಿಕೆ ಅಥವಾ ವಾರಪತ್ರಿಕೆ ನಡೆಸುವುದು ಎಂದರೆ ಸುಮ್ಮನೆ ಮಾತಲ್ಲ. ಆದರೂ, ಇಲ್ಲಿ ‘ದಿ ಸೇಂಟ್ ಹೆಲೆನಾ ಇಂಡಿಪೆಂಡೆಂಟ್’ ಎಂಬ ಪತ್ರಿಕೆಯು ದಶಕಗಳಿಂದ ಅತ್ಯಂತ ಉತ್ಸಾಹದಿಂದ ಪ್ರಕಟವಾಗುತ್ತಾ, ಜಗತ್ತಿನ ಅತ್ಯಂತ ವಿಲಕ್ಷಣ ಮತ್ತು ಆತ್ಮೀಯ ಪತ್ರಿಕೋದ್ಯಮಕ್ಕೆ ಸಾಕ್ಷಿಯಾಗಿದೆ.

ಸಾಮಾನ್ಯವಾಗಿ ಜಗತ್ತಿನ ಯಾವುದೇ ಪತ್ರಿಕೆಯ ಕಚೇರಿಗೆ ಹೋದರೆ ಅಲ್ಲಿ ಬ್ರೇಕಿಂಗ್ ನ್ಯೂಸ್ ಗಳ ಒತ್ತಡ, ರಾಜಕೀಯ ಹಗರಣಗಳ ಚರ್ಚೆ, ಮತ್ತು ವರದಿಗಾರರ ಓಡಾಟ ಕಾಣಸಿಗುತ್ತದೆ. ಆದರೆ ಸೇಂಟ್ ಹೆಲೆನಾ ಇಂಡಿಪೆಂಡೆಂಟ್ ಕಚೇರಿಯಲ್ಲಿ ಪರಿಸ್ಥಿತಿ ತದ್ವಿರುದ್ಧ. ಇಲ್ಲಿನ ಸಂಪಾದಕರಿಗೆ ಎದುರಾಗುವ ಅತಿ ದೊಡ್ಡ ಸವಾಲೆಂದರೆ ‘ನಾಳಿನ ಪತ್ರಿಕೆಗೆ ಸುದ್ದಿ ಎಲ್ಲಿಂದ ತರುವುದು?’ ಎಂಬುದು!

ಇದನ್ನೂ ಓದಿ: Vishweshwar Bhat Column: ಅಂದು ʼಕಳ್ಳರ ದೇಶʼ, ಇಂದು ಹೃದಯಗಳನ್ನು ಕದಿಯುವ ಸುಂದರ ದೇಶ !

ಏಕೆಂದರೆ ಈ ದ್ವೀಪದಲ್ಲಿ ಕೊಲೆ, ಸುಲಿಗೆ, ಭ್ರಷ್ಟಾಚಾರ ಅಥವಾ ಬೀದಿಗಿಳಿದು ಪ್ರತಿಭಟನೆ ಮಾಡುವಂಥ ದೊಡ್ಡ ಘಟನೆಗಳು ನಡೆಯುವುದು ಅಪರೂಪಕ್ಕೊಮ್ಮೆ. ಇಲ್ಲಿನ ಜನ ಎಷ್ಟು ಶಾಂತಿಪ್ರಿಯರೆಂದರೆ, ಯಾರಾದರೂ ಜೋರಾಗಿ ಸೀನಿದರೂ ಅದು ಇಡೀ ದ್ವೀಪಕ್ಕೆ ಕೇಳಿಸುವಷ್ಟು ನಿಶ್ಶಬ್ದ ವಾತಾವರಣವಿರುತ್ತದೆ. ಇಂಥ ಊರಿನಲ್ಲಿ ಹದಿನಾರು ಅಥವಾ ಇಪ್ಪತ್ತು ಪುಟಗಳ ಪತ್ರಿಕೆ ಯನ್ನು ತುಂಬಿಸುವುದು ಸಂಪಾದಕರ ಪಾಲಿಗೆ ನಿಜಕ್ಕೂ ಒಂದು ಸಾಹಸವೇ ಸರಿ. ಸುದ್ದಿಗಳ ಬರಗಾಲವಿರುವ ಈ ದ್ವೀಪದಲ್ಲಿ ಮುಖಪುಟದ ಸುದ್ದಿಗಳು ಹೇಗಿರುತ್ತವೆ ಗೊತ್ತೇ? ನಮ್ಮ ಊರಿನ ಪತ್ರಿಕೆಗಳಲ್ಲಿ ಯುದ್ಧ ಅಥವಾ ಚುನಾವಣೆಯ ಸುದ್ದಿಗಳು ಬರುವ ಜಾಗದಲ್ಲಿ, ಇಲ್ಲಿ ‘ಕಳೆದ ಮಂಗಳವಾರ ಮಿಸೆಸ್ ಜೋ ಅವರ ಮುದ್ದಿನ ನಾಯಿ ಕಾಣೆಯಾಗಿತ್ತು. ಅದು ಬುಧವಾರ ಸಂಜೆ ಸುರಕ್ಷಿತವಾಗಿ ಮನೆಗೆ ಮರಳಿದೆ’ ಎಂಬುದು ಬ್ರೇಕಿಂಗ್ ನ್ಯೂಸ್ ಆಗಿರುತ್ತದೆ!

ಅಷ್ಟೇ ಅಲ್ಲ, ‘ಈ ವಾರ ಬಂದರಿಗೆ ಸರಕು ಹಡಗು ಬಂದಿದ್ದು, ಅಂಗಡಿಗಳಲ್ಲಿ ತಾಜಾ ಸೇಬು ಮತ್ತು ಕಿತ್ತಳೆ ಹಣ್ಣುಗಳು ಲಭ್ಯವಿವೆ’ ಎಂಬ ವರದಿಯು ಓದುಗರಲ್ಲಿ ಸಂಭ್ರಮ ಮೂಡಿಸುತ್ತದೆ. ಇಲ್ಲಿನ ಓದುಗರಿಗೆ ಶೇರು ಮಾರುಕಟ್ಟೆಯ ಏರಿಳಿತಕ್ಕಿಂತ, ಪಕ್ಕದ ಬೀದಿಯ ಜಾರ್ಜ್ ಅವರ ತೋಟದಲ್ಲಿ ಬೆಳೆದ ಬೃಹತ್ ಕುಂಬಳಕಾಯಿಯ ತೂಕ ಎಷ್ಟಿದೆ ಎಂಬುದೇ ಹೆಚ್ಚು ಕುತೂಹಲಕಾರಿ ವಿಷಯ. ಈ ಪತ್ರಿಕೆಯ ಮುದ್ರಣ ಮತ್ತು ತಾಂತ್ರಿಕ ವ್ಯವಸ್ಥೆಯ ಕಥೆಯಂತೂ ಇನ್ನೂ ತಮಾಷೆಯಾಗಿದೆ.

2017ರವರೆಗೆ ಈ ದ್ವೀಪಕ್ಕೆ ವಿಮಾನ ನಿಲ್ದಾಣವೇ ಇರಲಿಲ್ಲ. ಹೊರಜಗತ್ತಿನೊಂದಿಗೆ ಈ ದ್ವೀಪಕ್ಕಿದ್ದ ಏಕೈಕ ನಂಟು ಎಂದರೆ ತಿಂಗಳಿಗೊಮ್ಮೆ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಿಂದ ಬರುತ್ತಿದ್ದ ‘ಆರ್‌ಎಂಎಸ್ ಸೇಂಟ್ ಹೆಲೆನಾ’ ಎಂಬ ಅಂಚೆ ಹಡಗು ಮಾತ್ರ. ಪತ್ರಿಕೆ ಮುದ್ರಿಸಲು ಬೇಕಾದ ನ್ಯೂಸ್‌ಪ್ರಿಂಟ್ ಕಾಗದ, ಮುದ್ರಣದ ಶಾಯಿ ಮತ್ತು ಯಂತ್ರದ ಬಿಡಿಭಾಗಗಳೆಲ್ಲವೂ ಇದೇ ಹಡಗಿನಲ್ಲಿ ಬರಬೇಕು. ಒಂದು ವೇಳೆ ಹವಾಮಾನ ವೈಪರೀತ್ಯದಿಂದ ಹಡಗು ತಡವಾದರೆ ಅಥವಾ ಕಾಗದದ ದಾಸ್ತಾನು ಬೇಗನೆ ಖಾಲಿಯಾದರೆ, ಸಂಪಾದಕರು ಸ್ವಲ್ಪವೂ ವಿಚಲಿತರಾಗುವುದಿಲ್ಲ.

ಮುಂದಿನ ಹಡಗು ಬರುವವರೆಗೂ ಪತ್ರಿಕೆಯ ಪುಟಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸುತ್ತಾರೆ ಅಥವಾ ದಾಸ್ತಾನಿನಲ್ಲಿದ್ದ ಬೇರೆ ಬಣ್ಣದ ಕಾಗದಗಳ ಮೇಲೆಯೇ ಪತ್ರಿಕೆಯನ್ನು ಮುದ್ರಿಸಿ ಓದುಗರ ಕೈಗಿಡುತ್ತಾರೆ. ಸೇಂಟ್ ಹೆಲೆನಾ ದ್ವೀಪದಲ್ಲಿ ಯಾರೂ ಸಾಮಾನ್ಯರಲ್ಲ. ಇಲ್ಲಿ ಪ್ರತಿಯೊಬ್ಬರೂ ಒಬ್ಬೊಬ್ಬ ಸೆಲೆಬ್ರಿಟಿಯೇ. ಈ ದ್ವೀಪದಲ್ಲಿ ಯಾರದೇ ಹುಟ್ಟುಹಬ್ಬವಿರಲಿ, ಮದುವೆ ವಾರ್ಷಿಕೋತ್ಸವವಿರಲಿ ಅಥವಾ ಶಾಲಾ ಮಕ್ಕಳ ಸಣ್ಣದೊಂದು ಆಟೋಟ ಸ್ಪರ್ಧೆಯಿರಲಿ, ಅದು ಪತ್ರಿಕೆಯಲ್ಲಿ ಫೋಟೋ ಸಮೇತ ದೊಡ್ಡ ಸುದ್ದಿಯಾಗಿ ಪ್ರಕಟವಾಗುತ್ತದೆ.

ಇನ್ನು ದ್ವೀಪದ ಯಾರಾದರೂ ನಿವಾಸಿ ರಜೆಯ ಮೇಲೆ ದಕ್ಷಿಣ ಆಫ್ರಿಕಾಕ್ಕೋ ಅಥವಾ ಇಂಗ್ಲೆಂಡ್‌ಗೋ ಪ್ರವಾಸ ಹೊರಟರೆ, ಅವರು ವಿಮಾನ ಅಥವಾ ಹಡಗು ಹತ್ತುವ ಮೊದಲೇ ಆ ವಿಷಯ ಪತ್ರಿಕೆಯಲ್ಲಿ ಅಚ್ಚಾಗಿರುತ್ತದೆ. ಹಾಗೆಯೇ ಅವರು ಪ್ರವಾಸ ಮುಗಿಸಿ ವಾಪಸ್ ಬಂದಾಗ ‘ದ್ವೀಪಕ್ಕೆ ಮರಳಿದ ಮಿಸ್ಟರ್ ಸ್ಮಿತ್ ಅವರಿಗೆ ಆತ್ಮೀಯ ಸ್ವಾಗತ’ ಎಂಬ ಶುಭಾಶಯದ ಸಾಲುಗಳು ಪತ್ರಿಕೆಯ ಕಾಲಂಗಳನ್ನು ತುಂಬುತ್ತವೆ. ಇಲ್ಲಿ ಸುದ್ದಿಗಾಗಿ ಯಾರೂ ಪತ್ರಿಕಾಗೋಷ್ಠಿ ಕರೆಯ ಬೇಕಾಗಿಲ್ಲ. ಬೀದಿಯಲ್ಲಿ ಸಿಕ್ಕಾಗ ಹೇಳುವ ಉಭಯಕುಶಲೋಪರಿಯೇ ನಾಳೆಯ ವರದಿಯಾಗುತ್ತದೆ

ವಿಶ್ವೇಶ್ವರ ಭಟ್‌

View all posts by this author