ವಿಶ್ವರಂಗ
ನಿತ್ಯ ಬೆಳಿಗ್ಗೆ ಎದ್ದ ತಕ್ಷಣ ನಮ್ಮ ತಲೆಯಲ್ಲಿ ಒಂದಲ್ಲ ಒಂದು ವಿಷಯದ ಬಗ್ಗೆ ಯೋಚನೆ ಇದ್ದೇ ಇರುತ್ತೆ. ಅಂತಹ ಹಲವು ಯೋಚನೆಗಳಲ್ಲಿ ಕೆಲವು ವೈಯಕ್ತಿಕ ಇನ್ನು ಕೆಲವು ಸಾಮಾಜಿಕ. ನಾವು ಸಾಮಾಜಿಕ ಸಮಸ್ಯೆಗಳನ್ನ ಎಂದೂ ವೈಯಕ್ತಿಕ ಎಂದು ಪರಿಗಣಿಸಿದವರಲ್ಲ. ಹೀಗೆ ‘ನನ್ನದಲ್ಲ’ ಎನ್ನುವ ಭಾವನೆಯಿಂದ ಯಾರಿಗೂ ಬೇಡದ ಸಾಮಾಜಿಕ ಸಮಸ್ಯೆ ನಾಳೆ ವೈಯಕ್ತಿಕ ಸಮಸ್ಯೆಯಾಗಿ ಬದಲಾಗುತ್ತದೆ. ಆದರೆ ಇಷ್ಟೆ ಯೋಚಿಸಲು ನಮಗೆ ಸಮಯವೆಲ್ಲಿದೆ? ಬೆಳಿಗ್ಗೆ ಏಳು, ನಿತ್ಯ ಕರ್ಮಗಳ ಮುಗಿಸಿ ಒಂದಷ್ಟು ತಿಂದು ಅದನ್ನೇ ಡಬ್ಬಿಗೆ ತುಂಬಿಕೊಂಡು ಓಡುವುದು, ಇಷ್ಟವಿರಲಿ ಬಿಡಲಿ ತಿಂಗಳ ಕೊನೆಗೆ ಬರುವ ಸಂಬಳ ಎನ್ನುವ ಒಂದಷ್ಟು ಹಣಕ್ಕಾಗಿ ದುಡಿಯುವುದು, ಸಾಯಂಕಾಲ ಮನೆಗೆ ವಾಪಸ್ಸು ಬಂದು ಒಂದಷ್ಟು ಟಿವಿ ವೀಕ್ಷಣೆ, ಟೀವಿಯಲ್ಲೂ ಬರುವುದು ಅವರು ಏನು ತೋರಿಸಬೇಕು ಅಂದುಕೊಡಿರುತ್ತಾರೆ ಅದು ಬರುತ್ತದೆ. ಅದು ನಿಜವಾಗಿರಬೇಕಿಲ್ಲ.
ಮತ್ತೆ ನಿದ್ದೆ, ಮತ್ತೆ ಮರುದಿನ ಬೆಳಿಗ್ಗೆ ಮೇಲೆ ಹೇಳಿದ ವಿಷಯಗಳ ಪುನರಾವರ್ತನೆ. ಜಗತ್ತಿನ ಮುಕ್ಕಾಲು ಪಾಲು ಜನರ ಜೀವನದಲ್ಲಿ ಇನ್ನೇನು ಬದಲಾವಣೆ ಇದ್ದೀತು? ನಿಮ್ಮನ್ನ ಈ ರೀತಿಯ ಒಂದು ವರ್ತುಲದಲ್ಲಿ ನಿಮಗೆ ಅರಿವಿಲ್ಲದೆ ದೂಡಿದವರು ಯಾರು? ನೀವು ದುಡಿಯುತ್ತಿರಬೇಕು, ‘ಅವರು’ ಮಾಡಿದ ರೀತಿ ರಿವಾಜು ಕಾನೂನು ಪಾಲಿಸಬೇಕು. ಹೇಳಿದ ತೆರಿಗೆ ಕಟ್ಟಬೇಕು.
ವರ್ಷ ವರ್ಷ ಹೆಚ್ಚುವ ಪದಾರ್ಥಗಳ ಬೆಲೆ, ಆದರೆ ಅದಕ್ಕೆ ತಕ್ಕಂತೆ ಹೆಚ್ಚದ ನಿಮ್ಮ ಸಂಬಳ, ಜೀವನದ ಬಂಡಿ ಹೇಗೋ ಸಾಗಿಸಿದರೆ ಸಾಕು ಎಂದು ನಿಮ್ಮ ವಿವಶವನ್ನಾಗಿಸಿದವರು ‘ಅವರು’! ನಿಮ್ಮ ಬಗ್ಗೆ ನೀವು ಯೋಚಿಸಲು ಸಮಯ ನೀಡದ ಒಂದು ವ್ಯವಸ್ಥೆ ಸೃಷ್ಟಿಸಿ ‘ಹಣ’ ಎನ್ನುವ ಮರೀಚಿಕೆ ಹಿಂದೆ ಸದಾ ಓಡುವಂತೆ ಮಾಡಿರುವ ‘ಅವರು’ ಯಾರು? ಅವರೇಕೆ ಹಾಗೆ? ನಾವೇಕೆ ಹೀಗೆ? ‘ಅವರು’ ಎಂದರೆ ಇಂದಿನ ನಮ್ಮ ಜಗತ್ತನ್ನ ಆಳುತ್ತಿರುವ ಅತ್ಯಂತ ಪ್ರಭಾವಿ ಮನೆತನ ಅಥವಾ ವ್ಯಕ್ತಿಗಳು.
ಇದನ್ನೂ ಓದಿ: Rangaswamy Mookanahalli Column: ಮನಸ್ಥಿತಿ ಬದಲಾಗದೆ ಭಾರತ ಸ್ವಚ್ಛವಾಗುವುದಿಲ್ಲ!
ಮೇಲ್ನೋಟಕ್ಕೆ ಅಮೆರಿಕ ಅಧ್ಯಕ್ಷ, ಯೂರೋಪಿನ ನಾಯಕರು, ಕಣ್ಣಿಗೆ ಕಾಣುವ ಬಿಲಿಯನೇರ್ ಗಳು, ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ಅವರೆಷ್ಟರ ಮಟ್ಟಿಗೆ ಅಧಿಕಾರ ಹೊಂದಿದ್ದಾರೆ? ಎನ್ನುವುದು ಪ್ರಶ್ನೆ. ಇವರನ್ನೆ ಆಳುವುದು ‘ಹಣ’ ಅಂದರೆ ವಿತ್ತ ಪ್ರಪಂಚದ ಮೇಲೆ ಯಾರು ಹಿಡಿತ ಹೊಂದಿದ್ದಾರೋ ಅವರೇ ನಿಜವಾದ ಪ್ರಭಾವಿಗಳು. ಅವರು ಕಾನೂನು ಸೃಷ್ಟಿಸುತ್ತಾರೆ, ಅವರು ಯುದ್ಧ ಮಾಡಿಸುತ್ತಾರೆ, ಒಂದೇ ಮನೆಯಲ್ಲಿ ಅನ್ಯೋನ್ಯದಿಂದ ಇದ್ದ ಅಣ್ಣ- ತಮ್ಮಂದಿರ ನಡುವೆ ಕಾದಾಟ ತಂದು ಹಾಕುತ್ತಾರೆ, ಜನ ಸಾಮಾನ್ಯನ ಎಷ್ಟು ಭಾಗವಾಗಿ ವಿಭಜಿಸಲು ಸಾಧ್ಯವೋ ಅಷ್ಟು ವಿಭಜಿಸುತ್ತಾರೆ.
ನಾವೇನು ಕೊಳ್ಳಬೇಕು ಎನ್ನುವುದನ್ನು ಅವರು ನಿರ್ಧರಿಸುತ್ತಾರೆ. ನಮ್ಮ ನಿರ್ಧಾರಗಳ ಮೇಲೆ ಅವರು ಹಿಡಿತ ಹೊಂದಿರುತ್ತಾರೆ. ನಾವು ಇಚ್ಛೆ ಪಟ್ಟು ಕೊಂಡ ಕಾರು, ನಾವು ಕೊಂಡದ್ದಲ್ಲ, ನಮ್ಮನ್ನು ಕೊಳ್ಳುವ ಹಾಗೆ ಮಾಡಿದರು ಎನ್ನುವ ಕಿಂಚಿತ್ತೂ ಅನುಮಾನವೂ ನಮಗೆ ಹುಟ್ಟುವು ದಿಲ್ಲ. ಜನಸಾಮಾನ್ಯ ಒಡೆದು ಛಿದ್ರವಾದಷ್ಟು ಅವರ ಸಾಮ್ರಾಜ್ಯ ಭದ್ರ. ಮುಂದಿನ ಅವರ ಪೀಳಿಗೆಯ ಭವಿಷ್ಯ ಭದ್ರ.
ಹಾಗಾದರೆ ಈ ‘ಅವರು’ ಯಾರು? ಅವರಿಗೇನು ಹೆಸರಿಲ್ಲವೇ ಎನ್ನುವ ಪ್ರಶ್ನೆ ಈ ವೇಳೆಗೆ ನಿಮ್ಮಲ್ಲಿ ಉದ್ಭವವಾಗಿರುತ್ತದೆ. ಈ ಅವರು ಅವರನ್ನವರೇ ದೇವರ ದೂತರು, ಜಗತ್ತನ್ನ ಆಳಲು ಹುಟ್ಟಿದವರು ಎಂದು ನಂಬಿದವರು. ಜಗತ್ತಿನ ಜನಸಂಖ್ಯೆಯ ಒಂದು ಪ್ರತಿಶತಕ್ಕೂ ಕಡಿಮೆ ಸಂಖ್ಯೆಯ ಇವರು ಅದೇ ಜಗತ್ತಿನ ಬಹುಪಾಲು ಸಂಪತ್ತಿನ ಒಡೆಯರು. ಜಗತ್ತಿಗೆ ಸುದ್ದಿ ತಿಳಿಸುವ ಮುಕ್ಕಾಲು ಪಾಲು ಮಾಧ್ಯಮಗಳು ಇವರ ಹಿಡಿತದಲ್ಲಿವೆ. ಅವರೇನು ಬಯಸುತ್ತಾರೆ ಅದನ್ನ ನೀವು ಕೇಳುತ್ತೀರಿ, ನೋಡುತ್ತೀರಿ, ಅವರು ನೀವೇನು ಸತ್ಯ ಎಂದು ನಂಬಬೇಕು ಎಂದು ಬಯಸುತ್ತಾರೆ ಅದನ್ನ ನೀವು ಸತ್ಯ ಎಂದು ನಂಬುತ್ತೀರಿ. ನಿಮಗೆ ಬರುವ ಮಾಹಿತಿ ತಮಗೆ ಬೇಕಾದ ಹಾಗೆ ತಿರುಚಿ ನೀಡಲಾಗುತ್ತದೆ. ಯಾವುದೋ ಒಂದು ದೇಶವನ್ನ ಅಥವಾ ಸಂಸ್ಥೆ ಅಥವಾ ವ್ಯಕ್ತಿಯನ್ನ ತಮಗೆ ಬೇಕಾದ ಹಾಗೆ ಜಗತ್ತಿನ ಮುಂದೆ ಬಿಂಬಿಸುವ ತಾಕತ್ತು ಇವು ಹೊಂದಿವೆ. ಹೀಗೆ ಜಗತ್ತನ್ನ ತಮ್ಮಿಚ್ಛೆಗೆ ಕುಣಿಸುವ ಬೆರಳೆಣಿಕೆ ಮನೆತನಗಳಲ್ಲಿ ರೋತ್ಸ್ ಚೈಲ್ಡ್, ಬ್ರೂಸ್, ಕ್ಯಾವೆಂಡಿಷ್, ಹ್ಯಾನೋವರ್, ಕ್ರುಪ್, ರೋಕೆ ಫಿಲ್ಲರ್, ವಾರ್ಬುರ್ಗ್, ಡೇ ಮೆಡಿಸಿ ಪ್ರಮುಖವಾದವು.
ಮೊದಲೇ ಹೇಳಿದಂತೆ ಇವರದು ‘ಎಲೈಟ್ ಕ್ಲಬ್’ ಇಲ್ಲಿನ ಸದಸ್ಯರಾಗುವುದು ಸಾಧ್ಯವೇ ಇಲ್ಲ. ಜಗತ್ತಿನ ಬಹುಪಾಲು ವ್ಯಾಪಾರ- ವಹಿವಾಟು ಇವರ ಅಂಕೆಯಲ್ಲಿವೆ. ಜಗತ್ತಿನ ಬಹುಪಾಲು ದೇಶಗಳಲ್ಲಿ ಅಧ್ಯಕ್ಷ ಅಥವಾ ಪ್ರಧಾನ ಮಂತ್ರಿ ಯಾರಾಗಬೇಕು ಎನ್ನುವುದನ್ನ ನಿರ್ಧರಿಸುವುದು ಇವರು. ಜಗತ್ತಿನಲ್ಲಿ ಯುದ್ಧ ಸೃಷ್ಟಿಸುವುದು ಇವರು, ಶಾಂತಿ ಮಂತ್ರ ಜಪಿಸುವುದು ಇವರು, ತೊಟ್ಟಿಲು ತೂಗುವುದು ಮಗುವನ್ನೂ ಚಿವುಟುವುದು ಎರಡೂ ಇವರ ಕೆಲಸ. ಮೊದಲ ಪ್ಯಾರಾ ದಲ್ಲಿ ಹೇಳಿದ ನಿಮ್ಮ ಯಾಂತ್ರಿಕ ಬದುಕು ಸೃಷ್ಟಿಸಿದವರು ಇವರು. ನಿಮಗೆ ಚಿಂತಿಸಲು ಆತ್ಮಾವ ಲೋಕನ ಮಾಡಿಕೊಳ್ಳಲು ಸಮಯ ನೀಡದವರು ಇವರು.
ಹಿಂದೊಂದು ಕಾಲವಿತ್ತು. ಆಗ ಸಮಾಜದಲ್ಲಿ ಸಾಮರಸ್ಯವಿತ್ತು. ವೃತ್ತಿಗನುಗುಣವಾಗಿ ಸಮಾಜವನ್ನ ವಿಭಾಗಿಸಲಾಗಿತ್ತು. ಕಮ್ಮಾರ, ಚಮ್ಮಾರ, ಅಕ್ಕಸಾಲಿ, ಪುರೋಹಿತ ಹೀಗೆ ಪಟ್ಟಿ ಸಾಗುತ್ತದೆ. ಬಿಪಿ ಶುಗರ್ ಇರಲಿಲ್ಲ. ಅವರವರ ವೃತ್ತಿಯಲ್ಲಿ ನಿಪುಣತೆಯಿತ್ತು. ತಲೆತಲಾಂತರದಿಂದ ಮಾಡಿಕೊಂಡು ಬಂದದ್ದರ ಪಲವೋ ಏನೋ ತಿಳಿಯದು, ವಂಶವಾಹಿನಿಗಳಲ್ಲಿ ಕೂಡ ನಿಪುಣತೆ ಹರಿದು ಬರುತಿತ್ತು. ಆಗ ಎಲ್ಲವೂ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ನಡೆಯುತ್ತಿತ್ತು. ಆದರೆ ಅವರು ಇಂತಹ ಕೆಲಸವನ್ನ ಇಂತವರೇ ಏಕೆ ಮಾಡಬೇಕು? ಎನ್ನುವ ಪ್ರಶ್ನೆ ತಲೆಯಲ್ಲಿ ಹಾಕಿದರು. ಜನರನ್ನು ಒಗ್ಗೂಡಿಸುವುದು ಕಷ್ಟ. ಆದರೆ ಅವರನ್ನು ಡಿವೈಡ್ ಮಾಡುವುದು ಸುಲಭ ಎನ್ನುವುದು ಅವರಿಗೆ ಗೊತ್ತು. ಚೆನ್ನಾಗಿ ಲಾಗ ಹಾಕಿ ಮರದಿಂದ ಮರಕ್ಕೆ ನೆಗೆಯುವ ಕೋತಿಯನ್ನ ನೋಡಿ ಕೋತಿಯೇ ಏಕೆ ಮರದಿಂದ ಮರಕ್ಕೆ ನೆಗೆಯಬೇಕು? ಅದೇನು ಪೇಟೆಂಟ್ ಪಡೆದಿದೆಯೇ? ಎಂದು ಕರಡಿಯನ್ನ ಕೋತಿಯ ವಿರುದ್ಧ ಎತ್ತಿ ಕಟ್ಟಲಾಯಿತು.
ಸಹಜವಾಗೇ ಹುಟ್ಟಿನಿಂದ ಕೋತಿ ಮರದಿಂದ ಮರಕ್ಕೆ ಹಾರಬಲ್ಲದು. ಆದರೆ ಕರಡಿ? ಏನು ಮಾಡುವುದು, ಜೋರಾಗಿ ಕಿರುಚಾಡಿ ರಾಡಿ ಎಬ್ಬಿಸಿzಗಿದೆ ಇನ್ನೇನು? ಕರಡಿ ಕೂಡ ಮರದಿಂದ ಮರಕ್ಕೆ ನೆಗೆಯಲು ಅಭ್ಯಾಸ ಶುರು ಹಚ್ಚಿಕೊಂಡಿತು. ಆದರೇನು ಅದು ಕೋತಿಯನ್ನ ಮೀರಿಸ ಬಲ್ಲದೇ? ಇವತ್ತು ವಿಜ್ಞಾನ ವಂಶವಾಹಿ ಸಿದ್ಧಾಂತ ಒಪ್ಪಿಕೊಂಡಿದೆ. ಅಂದರೆ ಯಾವುದನ್ನ ಯಾರು ಮಾಡಿದರೆ ಚಂದವೋ ಅವರು ಮಾಡಿದರೆ ಚಂದ, ಉಳಿದಂತೆ ವೃಥಾ ಶ್ರಮ.
ನಮ್ಮ ಬಲ ಏನು? ಎನ್ನುವ ಅರಿವಿಲ್ಲದ ಜನ ಸುಮ್ಮನೆ ಟೈಮ್ ಪಾಸ್ ಮಾಡಿಕೊಂಡು ಜೀವನ ಸವೆಸುತ್ತಾರೆ. ನನಗೇನು ಬೇಕು? ಎನ್ನುವುದನ್ನ ನಿಖರವಾಗಿ ತಿಳಿದುಕೊಳ್ಳದೆ ಬದುಕು ಸಾಗುವು ದಾದರೂ ಎಲ್ಲಿಗೆ? ಅದೇಕೆ ಎಲ್ಲಾ ಮಕ್ಕಳು ಎಲ್ಲವನ್ನೂ ಮಾಡಬೇಕು? ಅಥವಾ ಎಲ್ಲದರಲ್ಲೂ ಸೈ ಎನ್ನಿಸಿಕೊಳ್ಳ ಬೇಕು. ಅವುಗಳ ಬೇಕು ಬೇಡ ಅರಿಯದೆ ಸುಮ್ಮನೆ ಶಾಲೆಗೆ ಕಳಿಸುತ್ತಾರೆ. ತಿಂಗಳು ಪೂರ್ತಿ ದುಡಿದರೂ ಆದಾಯ ಇಪ್ಪತ್ತು ಸಾವಿರ ಮುಟ್ಟದ ಜನ ಹತ್ತು ಸಾವಿರ ಶಾಲೆಗೇ ಸುರಿಯುತ್ತಾರೆ. ಆ ಹಣ ದುಡಿಯಲು ಸಮಯ ಬೇಕು.
ಮತ್ತೆ ಮಕ್ಕಳಿಗೆ ಪೋಷಕರ ಸಮಯವೆಲ್ಲಿ? ಹೀಗೆ ಸುಮ್ಮನೆ ಹಣವನ್ನ ಶಾಲೆಗೆ ವ್ಯಯಿಸಿದ್ದಷ್ಟೇ ಲಾಭ. ಮುಕ್ಕಾಲು ಪಾಲು ಮಕ್ಕಳು ಪ್ರೌಢಾವಸ್ಥೆಗೆ ಬರುವಷ್ಟರಲ್ಲಿ ಓದಿನಲ್ಲಿ ಆಸಕ್ತಿ ಕಳೆದು ಕೊಂಡಿರುತ್ತವೆ. ಈ ಮಧ್ಯೆ ಕಿಸೆ ಉಬ್ಬಿಸಿಕೊಳ್ಳುವುದು ಮಾತ್ರ ಶಾಲೆಯವರು. ಯಾರಿಗೇನು ಬೇಕು? ಬದುಕಿಗೇನು ಬೇಕು? ಎನ್ನುವುದರ ಆಧಾರದ ಮೇಲೆ ಶಿಕ್ಷಣ ಬೇಕು. ಶಿಕ್ಷಣ ಬೇಕು ಎನ್ನುವ ಜಿದ್ದಿನಿಂದ ಶಿಕ್ಷಣ ಕೊಡಿಸಲು ಹೋಗಬಾರದು. ಅಂದರೆ ಬದುಕಿಗೆ ಬಹು ಮುಖ್ಯವಾಗಿ ಬೇಕಾಗುವ ವಿಷಯಗಳನ್ನ ಹೇಳಿಕೊಡಬೇಕು. ಬದುಕುವ ಕಲೆ ಅವರಿಗೆ ಕಲಿಸಬೇಕು.
ಅಮೆರಿಕದ ಇಲಿನಾಯ್ಸ ಯೂನಿವರ್ಸಿಟಿಯಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ಅಲ್ಲಿನ 36 ಪ್ರತಿಶತ ಯುವ ಜನತೆ ಫೈನಾನ್ಸಿಯಲ್ ರಿಸ್ಕ್ʼನಲ್ಲಿದ್ದಾರೆ. ಅಂದರೆ ನೂರಕ್ಕೆ 36 ಜನರಿಗೆ ಹಣವನ್ನ ಹೇಗೆ ಗಳಿಸಬೇಕು, ಅದನ್ನ ದುಡಿಸಿಕೊಳ್ಳಬೇಕು ಎನ್ನುವ ಮತ್ತು ಹಣದುಬ್ಬರ, ಬಡ್ಡಿ, ಬಡ್ಡಿ ದರ, ಬ್ಯಾಂಕಿಂಗ್ ವ್ಯವಹಾರ ಹೇಗೆ ನಡೆಯುತ್ತದೆ ಎನ್ನುವ ಮೂಲಭೂತ ವಿಷಯ ಕೂಡ ಗೊತ್ತಿಲ್ಲ ಎನ್ನುತ್ತದೆ ಅಧ್ಯಯನ. ಇವರ ಹತ್ತಿರ ಸೇವಿಂಗ್ ಅಕೌಂಟ್, ಸೇವಿಂಗ್ ಅನ್ನುವ ಮಾತು ಕೂಡ ಇಲ್ಲ. ಗಮನಿಸಿ ಈ 36 ಪ್ರತಿಶತ ಯುವ ಜನತೆ 18 ದಾಟಿದವರು. ಸ್ವಂತಂತ್ರವಾಗಿ ಬದುಕಲು ಶುರು ಮಾಡಿದವರು. ಅವರಿಗೆ ಅಚಾನಕ್ಕಾಗಿ ಹೆಚ್ಚಿನ ಹಣ ಬೇಕಾದರೆ ಅದನ್ನ ಹೊಂದಿಸಲು ಸಾಧ್ಯವಾಗದವರು ಎಂದರೆ ಅವರಲ್ಲಿನ ಫೈನಾನ್ಸಿಯಲ್ ಇಲ್ಲಿಟರಸಿ, ಹಣಕಾಸು ಅಜ್ಞಾನ ಎಷ್ಟಿರಬಹುದು ಎನ್ನುವುದರ ಅಂದಾಜು ನಿಮ್ಮದಾಗುತ್ತದೆ.
ಸರಿ 36 ಪ್ರತಿಶತ ಇಂಥವರಿದ್ದಾರೆ, ಉಳಿದವರು ಪರವಾಗಿಲ್ಲ ಎಂದು ನೆಮ್ಮದಿಯಾಗಿರುವಂತಿಲ್ಲ. ಏಕೆಂದರೆ ಉಳಿದವರ ಪಾಡು ಕೂಡ ಅಷ್ಟಕ್ಕಷ್ಟೇ. ಒಟ್ಟು ಯುವಜನತೆಯ 22 ಪ್ರತಿಶತ ಮಾತ್ರ ಪರವಾಗಿಲ್ಲ ಎನ್ನುವ ಜ್ಞಾನ ಹೊಂದಿದ್ದಾರೆ. ಉಳಿದ 78 ಪ್ರತಿಶತ ಆಜ್ಞಾನದಲ್ಲಿ ಬಾಳುತ್ತಿದ್ದಾರೆ. ಅದರಲ್ಲೂ 36 ಪ್ರತಿಶತ ಅಪಾಯದ ಅಂಚಿನಲ್ಲಿದ್ದಾರೆ.
ಇದು ಇಲಿನಾಯ್ಸ ಅಥವಾ ಅಮೆರಿಕದ ಕಥೆ ಎಂದು ಹಗುರವಾಗಿ ತೆಗೆದುಕೊಳ್ಳುವ ಹಾಗಿಲ್ಲ. ಇದು ಜಗತ್ತಿನ ಕಥೆ. ಮನೆ ಮನೆಯ ಕಥೆ. ಪೋಷಕರಾದವರು ಮಕ್ಕಳಿಗೆ ಹಣಕಾಸು ಜ್ಞಾನ ನೀಡಬೇಕು. ಅದಕ್ಕೆ ಮೊದಲು ಅವರು ತಮ್ಮ ಹಣಕಾಸು ಅಜ್ಞಾನವನ್ನ ತಿದ್ದಿಕೊಳ್ಳಬೇಕು. ಇಂದು ಜಗತ್ತಿನ 90 ಪ್ರತಿಶತ ಜನ ದುಡಿಯಬೇಕು, ಅದಕ್ಕೆ ಒಂದಷ್ಟು ಹಣ ಕೊಡುತ್ತಾರೆ. ಆ ಹಣವನ್ನ ಮರು ಬಳಸಿ ಬೇಕಾದ್ದು ಕೊಳ್ಳುವುದು, ಉಪಯೋಗಿಸುವುದು, ಬದುಕುವುದು, ಇದನ್ನ ಜೀವನ ಎಂದುಕೊಂಡಿ ದ್ದಾರೆ.
ಪೋಷಕರು ಮಕ್ಕಳ ಬೇಕು ಬೇಡ ಅರಿಯಬೇಕು. ಅವರ ಇಚ್ಛೆಯ ಕಾರ್ಯಕ್ಷೇತ್ರ ಗುರುತಿಸಿ ಅದರಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಬೇಕು. ಕೆಲವು ಮಕ್ಕಳಿಗೆ ಶಾಲೆಗೆ ಹೋಗಿ ಕಲಿಯುವುದರಲ್ಲಿ ಆಸಕ್ತಿ ಇರುವುದಿಲ್ಲ. ಅಂತವರನ್ನ ಶಾಲೆಗೆ ಬಲವಂತವಾಗಿ ಕಳಿಸುವುದರಿಂದ ಹಣ ಮತ್ತು ವೇಳೆ ಎರಡೂ ಪೋಲಾಗುತ್ತದೆ. ಶಾಲೆಗೆ ಕಟ್ಟುವ ಹಣವನ್ನ ನಿಯಮಿತವಾಗಿ ಹೂಡಿಕೆ ಮಾಡುತ್ತಾ ಬಂದರೆ 15/20 ವರ್ಷದಲ್ಲಿ ಅದು ಲಕ್ಷಾಂತರ ರೂಪಾಯಿಯಾಗಿ ಅವರು ಇಚ್ಛಿಸುವ ಕೆಲಸ ಮಾಡಲು ಬಂಡವಾಳ ವಾಗುತ್ತದೆ. ಪಕ್ಕದ ಮನೆಯ ಹುಡುಗ ಇಂಜಿನಿಯರ್ ಅಥವಾ ಡಾಕ್ಟರ್ ಆದ ಅಂತ ನಮ್ಮ ಮಗ/ಮಗಳು ಹಾಗೆ ಆಗಲಿ ಅನ್ನುವ ಮನಸ್ಥಿತಿಯಿಂದ ಸಮಾಜ, ಪೋಷಕರು ಹೊರಬರಬೇಕಿದೆ.
ಜಗತ್ತಿನ ಪ್ರತಿಯೊಬ್ಬ ಪ್ರಜೆಯೂ ಸುಖವಾಗಿ ಬಾಳಲು ಬೇಕಾಗಿರುವ ಸಂಪತ್ತು ಇಲ್ಲಿದೆ. ಆದರೆ ಅದು ಕೆಲವೇ ಕೆಲವು ವ್ಯಕ್ತಿಗಳ ಮನೆಯಲ್ಲಿ ಕೊಳೆಯುತ್ತಾ ಬಿದ್ದಿದೆ. ತಮ್ಮ ಹೆಚ್ಚುಗಾರಿಕೆ ಪ್ರದರ್ಶಿಸಲು ಹಳೆಯ ವಿತ್ತ ವ್ಯವಸ್ಥೆಗೆ ಹೊಂದಿಕೊಳ್ಳಲಾಗಿದೆ. ಇದರ ಬದಲಾವಣೆಗೆ ಇರುವುದೊಂದೇ ಮಂತ್ರ, ಒಗ್ಗಟ್ಟು. ನಾವೆ ಒಂದಾದರೆ? ಯೋಚಿಸಿ ನೋಡಿ, ನಾವು 99 ಪ್ರತಿಶತ ಅವರು ಕೇವಲ 1 ಪ್ರತಿಶತ. ನೂರಾರು ಕುರಿ ಕಾಯಲು ಒಬ್ಬ ಮನುಷ್ಯ ಸಾಕು ಅಲ್ವಾ? ಹಾಗಾಗಿದೆ ನಮ್ಮ ಸ್ಥಿತಿ. ಜಾತಿ ಧರ್ಮ ಭಾಷೆ ಹೀಗೆ ನೂರಾರು ವಿಧದಲ್ಲಿ ಒಡೆದು ಹೋಳಾಗಿರುವ ನಮಗೆ ಒಗ್ಗಟ್ಟಾಗಲು ಸಾಧ್ಯವೇ? ಅದು ಸಾಧ್ಯವಾದರೆ ಬದುಕು ಹಸನಾಗುತ್ತದೆ.