ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gururaj Gantihole Column: ಬಿಡದಿ ಟೌನ್ʼಶಿಪ್‌ʼಗೆ ಬಿಡದ ಹಠ: ಬೇರೆಲ್ಲೂ ಯಾಕಿಲ್ಲ ?

ಸರಕಾರ ಸುಮಾರು 20 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಬಿಡದಿಯಲ್ಲಿ ತರುತ್ತಿರುವ ದೊಡ್ಡ ಹೈಟೆಕ್ ಸಿಟಿ ತರಹದ ಟೌನ್‌ಶಿಪ್ ಯೋಜನೆಗಳು ರಾಜ್ಯದ ಬೇರೆ ಯಾವ ಭಾಗದಲ್ಲೂ ಯಾಕೆ ಬರುತ್ತಿಲ್ಲ? ನಮ್ಮ ಅಧಿಕಾರಿಗಳು ಮತ್ತು ಪ್ಲಾನಿಂಗ್ ಮಾಡುವವರಿಗೆ ಎಲ್ಲವನ್ನೂ ರಾಜಧಾನಿಯ ಸುತ್ತಲೇ ಮಾಡಬೇಕು ಅನ್ನೋ ಹಠ ಇರೋದೇ ಇದಕ್ಕೆ ಮುಖ್ಯ ಕಾರಣ.

ಗಂಟಾಘೋಷ

ಕರ್ನಾಟಕದ ಕೈಗಾರಿಕಾ ನೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದು ಕೇವಲ ಒಂದು ನಗರಕ್ಕೆ ಅಥವಾ ಅದರ ಸುತ್ತಮುತ್ತಲಿನ ಸೀಮಿತ ಪ್ರದೇಶಕ್ಕೆ ಮಾತ್ರ ರತ್ನಗಂಬಳಿ ಹಾಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಕೈಗಾರಿಕೆಗಳನ್ನು ವಿಕೇಂದ್ರೀಕರಣಗೊಳಿಸಲು ಬಿಡದಿ, ರಾಮನಗರ ಅಥವಾ ತುಮಕೂರು ಭಾಗಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ಅಂತ ಸರಕಾರ ಹೇಳುತ್ತಿದೆಯಾದರೂ, ಇವುಗಳು ಕೇವಲ ಬೆಂಗಳೂರಿನ ಭೌಗೋಳಿಕ ವಿಸ್ತರಣೆಯಾಗಿ (ಮೆಟ್ರೋಪಾಲಿಟನ್ ಸ್ಟ್ರೆಚ್) ಮಾರ್ಪಡು ತ್ತಿವೆಯೇ ಹೊರತು ನೈಜ ವಿಕೇಂದ್ರೀಕರಣವಾಗುತ್ತಿಲ್ಲ. ಆದರೆ ಆಡಳಿತ ಯಂತ್ರವು ಬಿಡದಿ ಟೌನ್‌ ಶಿಪ್‌ಗೆ ತೋರಿಸುತ್ತಿರುವ ಅದೇ ಹಠ ಮತ್ತು ಆಸಕ್ತಿಯನ್ನು ರಾಜ್ಯದ ಉಳಿದ ಭಾಗಗಳ ಅಭಿವೃದ್ಧಿಗೆ ಯಾಕೆ ತೋರಿಸುತ್ತಿಲ್ಲ ಎನ್ನುವುದೇ ನಮ್ಮ ಪ್ರಶ್ನೆಯಾಗಿದೆ. ಈ ರಾಜ್ಯ ಸರಕಾರಕ್ಕೆ ಎಲ್ಲವನ್ನೂ ಬೆಂಗಳೂರಿನ ಮಾಡಬೇಕು ಎನ್ನುವ ಒಂದು ರೀತಿಯ ‘ಬಿಡದಿ ಹಠ’ ಹಿಡಿದಂತಿದೆ.

ಸರಕಾರ ಸುಮಾರು 20 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಬಿಡದಿಯಲ್ಲಿ ತರುತ್ತಿರುವ ದೊಡ್ಡ ಹೈಟೆಕ್ ಸಿಟಿ ತರಹದ ಟೌನ್‌ಶಿಪ್ ಯೋಜನೆಗಳು ರಾಜ್ಯದ ಬೇರೆ ಯಾವ ಭಾಗದಲ್ಲೂ ಯಾಕೆ ಬರುತ್ತಿಲ್ಲ? ನಮ್ಮ ಅಧಿಕಾರಿಗಳು ಮತ್ತು ಪ್ಲಾನಿಂಗ್ ಮಾಡುವವರಿಗೆ ಎಲ್ಲವನ್ನೂ ರಾಜಧಾನಿಯ ಸುತ್ತಲೇ ಮಾಡಬೇಕು ಅನ್ನೋ ಹಠ ಇರೋದೇ ಇದಕ್ಕೆ ಮುಖ್ಯ ಕಾರಣ. ರಾಜ್ಯದ ಇತರೆ ಪ್ರಾದೇಶಿಕ ನಗರಗಳ ಮೂಲಸೌಕರ್ಯ ಸ್ಥಿತಿಯನ್ನು ಒಮ್ಮೆ ನೋಡಿ, ಎಲ್ಲ ನಗರಗಳು ಒಂದಿಲ್ಲ ಒಂದು ತೊಂದರೆಯಿಂದ ನಲುಗುತ್ತಿವೆ.

ನಿಜ ಹೇಳಬೇಕೆಂದರೆ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಅಥವಾ ಕರಾವಳಿ ಭಾಗದಲ್ಲಿ ಇಂತಹ ದೊಡ್ಡ ಐಟಿ ಮತ್ತು ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪನೆ ಮಾಡಬಹುದಿತ್ತು. ಹಾಗೆ ಮಾಡಿದ್ದರೆ ಆಯಾ ಭಾಗದ ಯುವಕರು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಓಡಿ ಬರುವುದು ತಪ್ಪುತ್ತಿತ್ತು. ಆದರೆ ಸರಕಾರ ಮಾತ್ರ ಎಲ್ಲ ದುಡ್ಡನ್ನೂ ಮತ್ತೆ ಮತ್ತೆ ರಾಜಧಾನಿಯ ಸುತ್ತಮುತ್ತಲೇ ಸುರಿಯುತ್ತಿದೆ. ಬೆಂಗಳೂರಿನ ರಶ್ ಕಡಿಮೆ ಮಾಡ್ತೀವಿ ಅನ್ನೋ ನೆಪದಲ್ಲಿ ಬಿಡದಿಯಲ್ಲಿ ಇಂತಹ ದೊಡ್ಡ ಪ್ರಾಜೆಕ್ಟ್ ಮಾಡಲಾಗ್ತಿದೆಯೇ ಹೊರತು, ಇಡೀ ರಾಜ್ಯಕ್ಕೆ ಉದ್ಯಮಗಳನ್ನು ಸಮಾನವಾಗಿ ಹಂಚಬೇಕು ಅನ್ನೋ ನಿಜವಾದ ಆಸೆ ಈ ರಾಜ್ಯ ಸರಕಾರಕ್ಕೆ ಇದ್ದ ಹಾಗಿಲ್ಲ. ‌‌

ಇದನ್ನೂ ಓದಿ: Gururaj Gantihole Column: ಅನಿವಾಸಿ ಕನ್ನಡಿಗರನ್ನು ತವರು ಮನೆ ಮರೆಯದಿರಲಿ

ಬೆಳಗಾವಿ, ಕಲಬುರಗಿ, ವಿಜಯಪುರ, ದಾವಣಗೆರೆ, ಮಂಗಳೂರು ಅಥವಾ ಹುಬ್ಬಳ್ಳಿಯಂತಹ ನಗರಗಳಲ್ಲಿ ಇಂತಹ ಆಧುನಿಕ ಕೈಗಾರಿಕೆಗಳನ್ನು ತರಲು ಸರಿಯಾದ ಪ್ಲಾನಿಂಗ್ ಮತ್ತು ಬಜೆಟ್ ಕೊಡುತ್ತಿಲ್ಲ. ಇದೇ ಕಾರಣಕ್ಕೆ ಇಡೀ ಕರ್ನಾಟಕದ ಅಭಿವೃದ್ಧಿ ಕೇವಲ ಬೆಂಗಳೂರಿನ ಹೈವೇಗಷ್ಟೇ ಸೀಮಿತವಾಗಿ ಉಳಿದುಬಿಟ್ಟಿದೆ.

ಉದ್ಧಾರವಾಗದ ಐಟಿ ಪಾರ್ಕ್‌ಗಳು

ರಾಜ್ಯ ಸರಕಾರವು ಕಾಲಕಾಲಕ್ಕೆ ‘ಬೆಂಗಳೂರನ್ನು ಮೀರಿದ ಬೆಳವಣಿಗೆ’ (ಬಿಯಾಂಡ್ ಬೆಂಗಳೂರು) ಅಥವಾ ‘ಉದಯೋನ್ಮುಖ ಕ್ಲಸ್ಟರ್‌ಗಳು’ ಎಂಬ ಆಕರ್ಷಕ ಘೋಷಣೆಗಳ ಮೂಲಕ ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರಗಳಲ್ಲಿ ತಂತ್ರಜ್ಞಾನದ ಹೂಡಿಕೆ ಮಾಡುವುದಾಗಿ ಭರವಸೆ ನೀಡುತ್ತಾ ಬಂದಿದೆ. ಆದರೆ, ವಾಸ್ತವದಲ್ಲಿ ಈ ಯೋಜನೆಗಳು ಕೇವಲ ತೋರಿಕೆಯ ಹೂಡಿಕೆಗಳಾಗಿ ಉಳಿದುಕೊಂಡಿವೆ. ಉದಾಹರಣೆಗೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಲಾದ ಮಂಗಳೂರಿನ ಐಟಿ ಪಾರ್ಕ್ ಯೋಜನೆಗೆ ಖಾಸಗಿ ಡೆವಲಪರ್ʼ ಗಳಿಂದ ಬಿಡ್‌ಗಳೇ ಸಿಗದೆ ನೆನೆಗುದಿಗೆ ಬಿದ್ದಿರುವುದು ಹಾಗೂ ಹುಬ್ಬಳ್ಳಿ ಐಟಿ ಪಾರ್ಕ್ ಸಂಪೂರ್ಣ ವಾಗಿ ಶಿಥಿಲಾವಸ್ಥೆಗೆ ತಲುಪಿರುವುದು ಆಡಳಿತ ಯಂತ್ರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಇದಕ್ಕಿಂತಲೂ ಆಘಾತಕಾರಿ ಉದಾಹರಣೆಯೆಂದರೆ ಹುಬ್ಬಳ್ಳಿಯ ಇನೋಸಿಸ್ ಕ್ಯಾಂಪಸ್ ಸೋಲು. ಉತ್ತರ ಕರ್ನಾಟಕದ ಯುವಕರಿಗೆ ಉದ್ಯೋಗ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ರೈತರಿಂದ ಕನಿಷ್ಠ ದರದಲ್ಲಿ ಪಡೆದ 58 ಎಕರೆಗೂ ಅಧಿಕ ಭೂಮಿಯಲ್ಲಿ ನಿರ್ಮಿಸಲಾದ ಈ ಬೃಹತ್ ತಂತ್ರಜ್ಞಾನ ಕೇಂದ್ರವು ಇಂದಿಗೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.

ಬೆಂಗಳೂರಿನಲ್ಲಿ ನೆಲೆಸಿರುವ ಅನುಭವಿ ತಂತ್ರಜ್ಞರು (ಟೆಕ್ಕಿಗಳು) ಮೂಲಸೌಕರ್ಯ ಮತ್ತು ಆಧುನಿಕ ಜೀವನಶೈಲಿಯ ಕೊರತೆಯನ್ನು ಮುಂದಿಟ್ಟುಕೊಂಡು ಹುಬ್ಬಳ್ಳಿಗೆ ಸ್ಥಳಾಂತರಗೊಳ್ಳಲು ತೀವ್ರ ನಿರಾಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಕಂಪನಿಯು ಎಂಟು ಲಕ್ಷ ರೂಪಾಯಿಗಳವರೆಗೂ ಪ್ರೋತ್ಸಾಹ ಧನ (ಇನ್ಸೆಂಟಿವ್ಸ್) ಘೋಷಿಸಿದರೂ ನುರಿತ ಉದ್ಯೋಗಿಗಳನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ.

township

ಪರಿಣಾಮವಾಗಿ, ಉದ್ಯೋಗ ಸೃಷ್ಟಿಯಾಗದ ಕಾರಣ ಸ್ಥಳೀಯವಾಗಿ ತೀವ್ರ ರಾಜಕೀಯ ಹತಾಶೆ ಮೂಡಿದ್ದು, ಕೃಷಿ ಭೂಮಿ ಕಳೆದುಕೊಂಡ ರೈತರಿಗೆ ಮತ್ತು ಯುವಕರಿಗೆ ಇದು ಕೇವಲ ಒಂದು ಗಾರ್ಡನಿಂಗ್ ಸ್ಪೇಸ್ ಆಗಿ ಗೋಚರಿಸುತ್ತಿದೆ. ಆಡಳಿತ ಮಂಡಳಿಗಳು ಕೇವಲ ಸ್ಥಳೀಯ ಎಂಜಿನಿಯ ರಿಂಗ್ ಕಾಲೇಜುಗಳ ಹೊಸಬರ ನೇಮಕಾತಿಯನ್ನು ತೋರ್ಪಡಿಕೆಗೆ ಬಳಸಿಕೊಳ್ಳುತ್ತಿವೆಯೇ ಹೊರತು, ಹಿರಿಯ ತಜ್ಞರ ಕೊರತೆಯಿಂದಾಗಿ ಇಡೀ ಕ್ಯಾಂಪಸ್ ಒಂದು ಪ್ರತ್ಯೇಕ ದ್ವೀಪದಂತಾಗಿದೆ.

ಕೈಗಾರಿಕಾ ತಾರತಮ್ಯ

ಎರಡನೇ ಹಂತದ ನಗರಗಳ ಕೈಗಾರಿಕಾ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿರುವ ಪ್ರಮುಖ ಆಡಳಿತಾತ್ಮಕ ಅಡೆತಡೆಗಳು ಇಲ್ಲಿವೆ:

ಅರೆಬರೆ ಸ್ಮಾರ್ಟ್ ಸಿಟಿ ಯೋಜನೆಗಳು: ಮಹಾಲೇಖಪಾಲರ (ಸಿಎಜಿ) ಇತ್ತೀಚಿನ ವರದಿಗಳು ಬಹಿರಂಗಪಡಿಸಿರುವಂತೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ ಮತ್ತು ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ಸ್ಮಾರ್ಟ್ ಸಿಟಿ ಯೋಜನೆಗಳು ಕೇವಲ ಬಜೆಟ್ ಅನುದಾನವನ್ನು ನೆಚ್ಚಿಕೊಂಡಿವೆಯೇ ಹೊರತು ಸ್ವತಂತ್ರ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ನಿರ್ಮಿಸಲಾದ ಕೋಟ್ಯಂತರ ರೂಪಾಯಿ ಮೌಲ್ಯದ ಮೂಲಸೌಕರ್ಯಗಳು ಬಳಕೆದಾರರಿಲ್ಲದೆ ಧೂಳು ತಿನ್ನುತ್ತಿವೆ.

ದುರ್ಬಲ ಸಂಪರ್ಕ ಜಾಲ ಹಾಗೂ ಸಮನ್ವಯದ ಕೊರತೆ: ಪ್ರಾದೇಶಿಕ ವಿಮಾನ ನಿಲ್ದಾಣಗಳಿಗೆ ನಿಯಮಿತ ವಿಮಾನಯಾನ ಸಂಸ್ಥೆಗಳ ಸಂಪರ್ಕ ಕಲ್ಪಿಸುವಲ್ಲಿ ಮತ್ತು ಅವುಗಳನ್ನು ಆರ್ಥಿಕವಾಗಿ ಲಾಭದಾಯಕವಾಗಿ ನಿರ್ವಹಿಸುವಲ್ಲಿ ಸರಕಾರ ಸೋತಿದೆ. ರಸ್ತೆಗಳು ನಿರ್ಮಾಣವಾಗುವ ಮುನ್ನವೇ ಯುಟಿಲಿಟಿ ಡಕ್ಟ್‌ಗಳನ್ನು ಅಳವಡಿಸದ ಕಾರಣ, ಒಮ್ಮೆ ರಸ್ತೆ ನಿರ್ಮಿಸಿದ ತಕ್ಷಣವೇ ನೀರು ಅಥವಾ ವಿದ್ಯುತ್ ಸಂಪರ್ಕಕ್ಕಾಗಿ ಮತ್ತೆ ರಸ್ತೆ ಅಗೆಯುವ ಸಾಂಪ್ರದಾಯಿಕ ನಿರಾಸಕ್ತಿ ಮತ್ತು ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಹೂಡಿಕೆದಾರರ ಆತ್ಮವಿಶ್ವಾಸವನ್ನು ಕಸಿದುಕೊಳ್ಳುತ್ತಿದೆ.

ಕೈಗಾರಿಕಾ ಹಂಚಿಕೆಯ ತಾರತಮ್ಯ: ಉತ್ತರ ಕರ್ನಾಟಕದ ಕೈಗಾರಿಕಾ ನಕ್ಷೆಯನ್ನು ನೋಡಿದಾಗ ಅಲ್ಲಿನ ಆರ್ಥಿಕತೆಯು ಸಂಪೂರ್ಣವಾಗಿ ಮಾಲಿನ್ಯಕಾರಕ ಕೈಗಾರಿಕೆಗಳ ಸ್ಥಾಪನೆಗೆ ಸೀಮಿತವಾಗಿವೆ. ಆದರೆ, ಇಲ್ಲಿನ ಜನರು ಎತ್ತುತ್ತಿರುವ ನಿಜವಾದ ದೂರೆಂದರೆ-ಬೆಂಗಳೂರಿಗೆ ಕೇವಲ ಮಾಲಿನ್ಯರಹಿತ, ಹೈಟೆಕ್ ಸಾಫ್ಟ್‌ʼವೇರ್ ಉದ್ಯೋಗಗಳನ್ನು ಕೊಡುವ ಸರಕಾರಗಳು, ಉತ್ತರ ಕರ್ನಾಟಕಕ್ಕೆ ಮಾತ್ರ ಕೇವಲ ಇಂತಹ ಸಾಂಪ್ರದಾಯಿಕ ಭಾರೀ ಕೈಗಾರಿಕೆಗಳಿಗೆ ಮಾತ್ರ ಸೀಮಿತಗೊಳಿಸುತ್ತಿವೆ.

ವಾಸ್ತವವಾಗಿ, ಈ ಕಾರ್ಖಾನೆಗಳನ್ನು ಕೇವಲ ಪರಿಸರ ನಾಶ ಮಾಡುವ ಮಾಲಿನ್ಯಕಾರಕ ಉದ್ಯಮ ಎಂದು ಕರೆಯಲು ಬರುವುದಿಲ್ಲ. ಅಲ್ಲಿನ ಯುವಕರಿಗೆ ಮತ್ತು ರೈತರಿಗೆ ಕನಿಷ್ಠ ಉದ್ಯೋಗ ಹಾಗೂ ಆರ್ಥಿಕ ಆಸರೆ ನೀಡುತ್ತಿರುವುದೇ ಇವು. ಇವುಗಳ ಪರಿಸರ ಮೇಲಿನ ಪ್ರಭಾವ ಅಥವಾ ಸಣ್ಣಪುಟ್ಟ ತೊಂದರೆಗಳನ್ನು ಸ್ಥಳೀಯರು ಉದ್ಯೋಗದ ಹಿತದೃಷ್ಟಿಯಿಂದ ಸಹಿಸಿಕೊಳ್ಳುತ್ತಾರೆ. ಆದರೆ ಜನರ ಅಸಮಾಧಾನ ಇರುವುದು ಸರಕಾರದ ಧೋರಣೆಯ ಮೇಲೆ; ನಮಗೆ ಯಾಕೆ ಬೆಂಗಳೂರಿನ ತರಹದ ಆಧುನಿಕ, ಸ್ವಚ್ಛ ಮತ್ತು ಉನ್ನತ ಮಟ್ಟದ ಉದ್ಯಮಗಳನ್ನು ತರುತ್ತಿಲ್ಲ? ನಮಗೆ ಕೇವಲ ಕೃಷಿ ಆಧಾರಿತ ಹಾಗೂ ಭಾರಿ ಕಾರ್ಖಾನೆಗಳಷ್ಟೇ ಗತಿಯೇ ಎನ್ನುವುದು ಜನರ ಆಕ್ರೋಶವಾಗಿದೆ.

ವಿಕೇಂದ್ರೀಕರಣದ ಪಾಠ

ಕರ್ನಾಟಕದ ಈ ಏಕನಗರ ಆರಾಧನೆಗೆ ಹೋಲಿಸಿದರೆ, ನಮ್ಮ ನೆರೆಯ ಮತ್ತು ಇತರ ಕೈಗಾರಿಕಾ ಮುಂಚೂಣಿ ರಾಜ್ಯಗಳು ಹೂಡಿಕೆಯನ್ನು ವಿಕೇಂದ್ರೀಕರಿಸುವಲ್ಲಿ ಭಾರಿ ಯಶಸ್ಸು ಕಂಡಿವೆ. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಮುಖ ನಗರವಾಗಿ ಬೆಳೆದಿರುವುದು ತಾರ್ಕಿಕವಾಗಿ ಒಪ್ಪಿಕೊಳ್ಳಬೇಕಾದ ವಿಷಯವೇ ಹೌದು. ಆದರೆ, ಬೆಂಗಳೂರು ದೊಡ್ಡ ನಗರ ಎಂಬ ಕಾರಣಕ್ಕಾಗಿ ಯೇ ರಾಜ್ಯದ ಉಳಿದ ನಗರಗಳ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿರುವುದು ದೊಡ್ಡ ತಪ್ಪು. ನೆರೆಯ ರಾಜ್ಯಗಳ ಅಭಿವೃದ್ಧಿ ಮಾದರಿಗಳನ್ನು ಗಮನಿಸಿದರೆ, ತಮಿಳುನಾಡು ಕೇವಲ ರಾಜಧಾನಿ ಚೆನ್ನೆ ಗೆ ಸೀಮಿತವಾಗದೆ ಕೊಯಮತ್ತೂರನ್ನು ಜವಳಿ ಮತ್ತು ಎಂಜಿನಿಯರಿಂಗ್ ಹಬ್ ಆಗಿ, ತಿರುಚ್ಚಿಯನ್ನು ಉತ್ಪಾದನಾ ವಲಯವಾಗಿ, ಮಧುರೈ ಮತ್ತು ಹೊಸೂರನ್ನು ಆಟೋಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್‌ ಕ್ಲಸ್ಟರ್‌ಗಳಾಗಿ ಸಮಾನವಾಗಿ ಅಭಿವೃದ್ಧಿ ಪಡಿಸಿದೆ; ಹಾಗೆಯೇ ಮಹಾರಾಷ್ಟ್ರದಲ್ಲಿ ಮುಂಬೈನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ಪುಣೆ, ನಾಗ್ಪುರ, ನಾಸಿಕ್ ಮತ್ತು ಔರಂಗಾಬಾದ್ (ಛತ್ರಪತಿ ಸಂಭಾಜಿನಗರ) ನಗರಗಳನ್ನು ಸ್ವತಂತ್ರ ಕೈಗಾರಿಕಾ ಎಂಜಿನ್‌ಗಳನ್ನಾಗಿ ಸಾಂಸ್ಥಿಕವಾಗಿ ಬೆಳೆಸಲಾಗಿದೆ.

ಮತ್ತೊಂದೆಡೆ, ಗುಜರಾತ್‌ನಲ್ಲಿ ಅಹಮದಾಬಾದ್, ಸೂರತ್, ವಡೋದರಾ ಮತ್ತು ರಾಜ್ಕೋಟ್ ನಗರಗಳು ಪ್ರತ್ಯೇಕ ಜಾಗತಿಕ ಮಾರುಕಟ್ಟೆ ವೈಶಿಷ್ಟ್ಯಗಳೊಂದಿಗೆ (ವಜ್ರೋದ್ಯಮ, ರಾಸಾಯನಿಕ ಮತ್ತು ಎಂಜಿನಿಯರಿಂಗ್) ಪರಸ್ಪರ ಪೈಪೋಟಿ ನಡೆಸುತ್ತಾ ಬೆಳೆದಿದ್ದರೆ, ಕೇರಳ ರಾಜ್ಯವು ಯಾವುದೇ ಒಂದು ನಗರಕ್ಕೆ ಮಾತ್ರ ಎಲ್ಲವನ್ನೂ ಸೀಮಿತಗೊಳಿಸದೆ ಇಡೀ ರಾಜ್ಯಾದ್ಯಂತ ಸಮಾನವಾದ ಪ್ರಾದೇಶಿಕ ಸುಧಾರಣೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಯನ್ನು ಸಾಧಿಸಿದ್ದು, ಅಲ್ಲಿ ಎಲ್ಲಾ ನಗರಗಳಿಗೂ ಸಮಾನ ಆದ್ಯತೆ ಸಿಗುತ್ತದೆ.

ಈ ನೆರೆಯ ರಾಜ್ಯಗಳ ಯಶಸ್ಸನ್ನು ನೋಡಿದ ಮೇಲಾದರೂ ಕರ್ನಾಟಕ ಕೇವಲ ಬೆಂಗಳೂರನ್ನು ಮಾತ್ರ ನೆಚ್ಚಿಕೊಳ್ಳುವ ಹಠಮಾರಿ ಧೋರಣೆಯಿಂದ ಹೊರಬರಬೇಕಿದೆ. ನಮ್ಮ ಬೆಳಗಾವಿ, ಕಲಬುರಗಿ, ಮಂಗಳೂರು, ವಿಜಯಪುರ ಮತ್ತು ಹುಬ್ಬಳ್ಳಿಯಂಥ ಎರಡನೇ ಹಂತದ ನಗರಗಳನ್ನು ಕಾಗದದ ಮೇಲಷ್ಟೇ ಅಲ್ಲದೆ, ಸ್ವತಂತ್ರ ಆರ್ಥಿಕ ಕೇಂದ್ರಗಳಾಗಿ ಬೆಳೆಸುವ ರಾಜಕೀಯ ಇಚ್ಛಾಶಕ್ತಿ ನಮಗೆ ಬೇಕಾಗಿದೆ. ಎರಡನೇ ಹಂತದ ನಗರಗಳನ್ನು ನೈಜ ಆರ್ಥಿಕ ಕೇಂದ್ರಗಳನ್ನಾಗಿ ಪರಿವರ್ತಿ ಸಲು ಸರಕಾರ ಈ ಕೆಳಗಿನ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ:

ವಲಯವಾರು ಕ್ಲಸ್ಟರ್ ಕಡ್ಡಾಯೀಕರಣ: ಮೈಸೂರನ್ನು ಸೆಮಿಕಂಡಕ್ಟರ್ ಮತ್ತು ಸೈಬರ್ ಭದ್ರತೆಗೆ, ಮಂಗಳೂರನ್ನು ಫಿನ್ʼಟೆಕ್ ಮತ್ತು ಕರಾವಳಿ ಪ್ರವಾಸೋದ್ಯಮಕ್ಕೆ, ಹುಬ್ಬಳ್ಳಿ-ಧಾರವಾಡ ವನ್ನು ಕೃತಕ ಬುದ್ಧಿಮತ್ತೆಗೆ (ಎಐ) ಹಾಗೂ ಬೆಳಗಾವಿಯನ್ನು ಇವಿ ಮತ್ತು ಡ್ರೋನ್ ಉತ್ಪಾದನೆಗೆ, ಈ ರೀತಿಯಲ್ಲಿ ಬೇರೆ ಬೇರೆ ವಲಯಗಳಲ್ಲಿ ಪ್ರತ್ಯೇಕ ಉತ್ಪಾದನಾ ಕ್ಲಸ್ಟರ್ ಮಾಡಬೇಕಾಗಿದೆ.

ಲೊಕೇಶನ್-ಲಿಂಕ್ಡ್ ಇನ್ಸೆಂಟಿ (ಸ್ಥಳ ಆಧಾರಿತ ಪ್ರೋತ್ಸಾಹಕಗಳು): ಹೊಸ ಉದ್ಯಮಗಳಿಗೆ ನೀಡುವ ಆಡಳಿತಾತ್ಮಕ ಸಬ್ಸಿಡಿಗಳನ್ನು ಬೆಂಗಳೂರಿನ ವ್ಯಾಪ್ತಿಯಿಂದ ಹೊರಗಿರುವ ಜಿ‌ಲ್ಲೆಗಳಲ್ಲಿ ಹೂಡಿಕೆ ಮಾಡಿದರೆ ಮಾತ್ರ ಶೇಕಡಾ 100ರಷ್ಟು ಸಿಗುವಂತೆ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಮರುರೂಪಿಸಬೇಕು.

ಸಕಾಲಿಕ ಭೂ ಸ್ವಾಧೀನ ಮತ್ತು ಏಕಗವಾಕ್ಷಿ ಪರಿಹಾರ: ಜಿಲ್ಲಾ ಮಟ್ಟದಲ್ಲಿ ಭೂಮಿ ಕಳೆದು ಕೊಳ್ಳುವ ರೈತರ ಮಕ್ಕಳಿಗೆ ಗ್ರೂಪ್ ಸಿ ಮತ್ತು ಡಿ ಉದ್ಯೋಗಗಳ ಜೊತೆಗೆ ಉನ್ನತ ತಾಂತ್ರಿಕ ಕೌಶಲ್ಯ ತರಬೇತಿ ನೀಡುವುದನ್ನು ಕಂಪನಿಗಳ ಸಿಎಸ್‌ಆರ್ ಒಪ್ಪಂದದ ಭಾಗವಾಗಿಸಬೇಕು.

ಪ್ರಾದೇಶಿಕ ಗುಣಮಟ್ಟದ ಜೀವನಶೈಲಿ ಅಭಿವೃದ್ಧಿ: ಎರಡನೇ ಹಂತದ ನಗರಗಳಲ್ಲಿ ಅಂತಾ ರಾಷ್ಟ್ರೀಯ ಶಾಲೆಗಳು, ಅತ್ಯಾಧುನಿಕ ತೃತೀಯ ಹಂತದ ಆಸ್ಪತ್ರೆಗಳು ಮತ್ತು ಗುಣಮಟ್ಟದ ಮನರಂಜನಾ ಸೌಲಭ್ಯಗಳನ್ನು ನಿರ್ಮಿಸಲು ಖಾಸಗಿ-ಸಾರ್ವಜನಿಕ ಸಹಭಾಗಿತ್ವಕ್ಕೆ (ಪಿಪಿಪಿ) ವಿಶೇಷ ಉತ್ತೇಜನ ನೀಡಬೇಕು. ಆಗ ಮಾತ್ರ ತಂತ್ರಜ್ಞರು ಬೆಂಗಳೂರು ಬಿಟ್ಟು ಬರಲು ಸಿದ್ಧರಾಗು ತ್ತಾರೆ.

ಕೊನೆಯದಾಗಿ ಹೇಳಬೇಕೆಂದರೆ, ಕರ್ನಾಟಕದ ಸಮಗ್ರ ಪ್ರಗತಿಯಾಗಬೇಕಾದರೆ ಸರಕಾರ ಮೊದಲು ಬೆಂಗಳೂರು ಕೇಂದ್ರಿತ ಭೌಗೋಳಿಕ ವ್ಯಾಮೋಹ ಮತ್ತು ಆಡಳಿತಾತ್ಮಕ ಹಠಮಾರಿ ಧೋರಣೆ ಯಿಂದ ಹೊರಬರಬೇಕಿದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಸರಕಾರ ಬಿಡದಿ ರೀತಿಯ ಬೃಹತ್ ಯೋಜನೆಯನ್ನು ಬೇರೆಲ್ಲೂ ಮಾಡದಿರುವುದು ಕರ್ನಾಟಕದ ಇತರೆ ಭಾಗದ ಜನತೆಗೆ ನಿರಾಶೆ ಮೂಡಿಸಿದೆ. ಕೈಗಾರಿಕೆಗಳನ್ನು ರಾಜ್ಯದಾದ್ಯಂತ ವಿಕೇಂದ್ರೀಕರಿಸುವ ನಿಜವಾದ ಆಸೆ ಸರಕಾರಕ್ಕೆ ಇದ್ದ ಹಾಗಿಲ್ಲ. ಸರಕಾರ ಇನ್ನಾದರೂ ಕೇವಲ ಒಣ ಘೋಷಣೆಗಳಿಂದ ಹೊರಬಂದು ಬೆಂಗಳೂರಾ ಚೆಗಿನ ಇಡೀ ಕರ್ನಾಟಕವನ್ನು ಸಮಾನವಾಗಿ ಬೆಳೆಸದಿದ್ದರೆ ಪ್ರಾದೇಶಿಕ ಸಮತೋಲನದ ಕನಸು ಸಂಪೂರ್ಣವಾಗಿ ಮರೀಚಿಕೆಯಾಗಿಯೇ ಉಳಿಯಲಿದೆ.

ಗುರುರಾಜ್ ಗಂಟಿಹೊಳೆ

View all posts by this author