ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Balachandra Hegde Column: ಉದ್ಯಾನ ನಗರಿಯ ಉಸಿರುಗಟ್ಟಿಸಿರುವ ಕಸದ ರಾಶಿ

ಬೆಂಗಳೂರಿನಲ್ಲಿ ಪ್ರತಿದಿನ 5000 ದಿಂದ 6000 ಟನ್‌ವರೆಗೆ ಕಸದ ಉತ್ಪಾದನೆಯಾಗುತ್ತಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ, ಎಲ್ಲೆಂದರಲ್ಲಿ ಕಸವನ್ನು ಸುರಿಯುವಿಕೆ, ಕೆರೆಗಳ ಮಾಲಿನ್ಯ ಇವೆಲ್ಲವೂ ನಗರದ ಅಂದವನ್ನು ಕೆಡಿಸುತ್ತಿವೆ. ಇದು ಜನರ ಆರೋಗ್ಯದ ಮೇಲೆ ವಿಪರೀತ ಕೆಟ್ಟ ಪರಿಣಾಮವನ್ನು ಬೀರುತ್ತಿದೆ.

ಕಸ -ಕಸರತು

ಬಾಲಚಂದ್ರ ಹೆಗಡೆ

ಬೆಂಗಳೂರು ಒಂದು ಕಾಲಕ್ಕೆ ‘ಉದ್ಯಾನ ನಗರಿ’ ಎಂದೇ ಪ್ರಸಿದ್ಧವಾಗಿತ್ತು. 70ರ ದಶಕದಲ್ಲಿ ಬೆಂಗಳೂರು ಎಷ್ಟು ಸುಂದರವಾಗಿತ್ತೆಂದರೆ, ಇಲ್ಲಿ ನೆಲೆಸಿರುವುದೇ ಹೆಮ್ಮೆ ಎನಿಸುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಜನಸಂಖ್ಯೆಯ ಏರಿಕೆ ಮತ್ತು ಪ್ರದೇಶವ್ಯಾಪ್ತಿಯ ವಿಸ್ತರಣೆ ಯಿಂದಾಗಿ ನಗರವು ವೇಗವಾಗಿ ಅಭಿವೃದ್ಧಿಯನ್ನು ಕಂಡಿತಾದರೂ, ಜನಸಂಖ್ಯೆಗೆ ತಕ್ಕ ಹಾಗೆ ಮೂಲಸೌಕರ್ಯಗಳ ಸೃಷ್ಟಿಯಾಗಲಿಲ್ಲ.

ಹೀಗಾಗಿ, ತಂಪಾದ ಗಾಳಿ, ಹಸಿರು ಹೊದಿಕೆಯ ರಸ್ತೆಗಳು, ಸುಂದರ ಉದ್ಯಾನಗಳಿಂದ ಜಗತ್ತನ್ನೇ ಸೆಳೆದಿದ್ದ ಬೆಂಗಳೂರು ಇಂದು ‘ಕಸದ ನಗರ’ವಾಗಿ ಮಾರ್ಪಟ್ಟಿದೆ. ರಸ್ತೆ ತಿರುವು ಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಎಲ್ಲಿ ನೋಡಿದರಲ್ಲಿ ಕಸದ ಬೆಟ್ಟಗಳು ಕಾಣಿಸಿ ಕೊಳ್ಳುತ್ತಿವೆ. ‘ಸ್ವಚ್ಛಭಾರತ’ ಎಂಥ ಬೃಹತ್ ಅಭಿಯಾನದ ನಡುವೆಯೂ ಈ ಮಹಾ ನಗರಿಯ ದುಸ್ಥಿತಿ ಯು ನಮ್ಮ ನಾಗರಿಕ ಪ್ರಜ್ಞೆಯನ್ನು ಪ್ರಶ್ನಿಸುವಂತಿದೆ.

ಅಂದಗೆಡುತ್ತಿರುವ ನಗರ

ಬೆಂಗಳೂರಿನಲ್ಲಿ ಪ್ರತಿದಿನ 5000 ದಿಂದ 6000 ಟನ್‌ವರೆಗೆ ಕಸದ ಉತ್ಪಾದನೆಯಾಗುತ್ತಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ, ಎಲ್ಲೆಂದರಲ್ಲಿ ಕಸವನ್ನು ಸುರಿಯುವಿಕೆ, ಕೆರೆಗಳ ಮಾಲಿನ್ಯ ಇವೆಲ್ಲವೂ ನಗರದ ಅಂದವನ್ನು ಕೆಡಿಸುತ್ತಿವೆ. ಇದು ಜನರ ಆರೋಗ್ಯದ ಮೇಲೆ ವಿಪರೀತ ಕೆಟ್ಟ ಪರಿಣಾಮವನ್ನು ಬೀರುತ್ತಿದೆ.

ನಗರದ ಸ್ವಚ್ಛತೆಗೆ ಅತಿದೊಡ್ಡ ಶತ್ರುವೆಂದರೆ ಪ್ಲಾಸ್ಟಿಕ್ ಎನ್ನುವಂತಾಗಿದೆ ಈಗ; ಏಕೆಂದರೆ ಚರಂಡಿಗಳು ಕಸದಿಂದ ಕಟ್ಟಿಕೊಳ್ಳಲು ಮತ್ತು ಕೆರೆಗಳು ಕಲುಷಿತಗೊಳ್ಳಲು ಪ್ಲಾಸ್ಟಿಕ್ ಪ್ರಮುಖ ಕಾರಣವಾಗಿದೆ. ಏಕಬಳಕೆಯ ಪ್ಲಾಸ್ಟಿಕ್ ಅನ್ನು ಸರಕಾರ ನಿಷೇಧಿಸಿದ್ದರೂ, ಅದಿನ್ನೂ ಬಳಕೆಯಲ್ಲಿದೆ.

ಇದನ್ನೂ ಓದಿ: Leena Joshi Column: ಹುಚ್ಚರ ಮದುವೆಯಲ್ಲಿ ಉಂಡ ಜಾಣ ರಷ್ಯಾ

ಖಾಲಿ ನಿವೇಶನ, ರಸ್ತೆ ಬದಿ, ವಸತಿ ಪ್ರದೇಶಗಳು ಹೀಗೆ ಎಲ್ಲೆಂದರಲ್ಲಿ ಕಸವನ್ನು ತಂದು ಸುರಿಯುವುದು ಜನರಿಗೂ ರೂಢಿಯಾದಂತಿದೆ. ಇಂಥವರು ಕಾರು-ಬೈಕುಗಳಲ್ಲಿ ರೊಯ್ಯನೆ ಧಾವಿಸಿ ಬಂದು ರಾಜಾರೋಷವಾಗಿ ಕಸ ಬಿಸಾಕಿ ಹೋಗುತ್ತಾರೆ!

ಈ ಮಹಾನುಭಾವರು ಹೀಗೆ ಬಿಸಾಡುವ ಪ್ಲಾಸ್ಟಿಕ್ ಅನ್ನು ಮುಗ್ಧಜೀವಿಗಳಾದ ದನ-ಕರುಗಳು ತಿಂದು ಜೀವಕ್ಕೆ ಸಂಚಕಾರ ತಂದುಕೊಳ್ಳುವುದು ಹೃದಯವಿದ್ರಾವಕ ಸಂಗತಿ. ಕಸವನ್ನು ಸಂಗ್ರಹಿಸುವ ಬಿಬಿಎಂಪಿಯ ಆಟೋ ಹಾಗೂ ಟಿಪ್ಪರ್‌ಗಳು ಸಮಯದ ಮಿತಿಯಿಲ್ಲದೆ ಎಲ್ಲೆಂದರಲ್ಲಿ ಓಡಾಡುತ್ತಿರುತ್ತವೆ.

ಇಂಥ ವಾಹನಗಳು ಕೆಲವೊಂದು ಮುಖ್ಯರಸ್ತೆಗಳ ಬದಿಯಲ್ಲಿ ದೀರ್ಘಾವಧಿವರೆಗೆ ನಿಂತಿರು ತ್ತವೆ; ಆ ಮಾರ್ಗವಾಗಿ ಹೆಜ್ಜೆ ಹಾಕುವ ಜನರು ಮತ್ತು ವಾಹನ ಸವಾರಿಗರು ಆ ಗಬ್ಬುವಾಸನೆ ಯನ್ನು ಸಹಿಸಲಾಗದೆ ಮೂಗು ಮುಚ್ಚಿಕೊಂಡೇ ಸಾಗಬೇಕಾಗುತ್ತದೆ. ಇನ್ನೂ ಬೇಸರದ ಸಂಗತಿಯೆಂದರೆ, ಮುಂಜಾನೆಯ ವಾಯುವಿಹಾರಕ್ಕೆಂದು ಉದ್ಯಾನಗಳ ಬಳಿಗೆ ತೆರಳುವ ಜನರನ್ನು ಕಸದ ಅಡ್ಡೆಗಳು ಸ್ವಾಗತಿಸುತ್ತವೆ.

ಕಸದ ಲಾರಿಗಳು ಅಲ್ಲಿಯೇ ನಿಂತಿರುತ್ತವೆ, ಸಿಬ್ಬಂದಿಗಳು ಕಸದ ವಿಂಗಡಣೆಯನ್ನೂ ಅಲ್ಲೇ ಮಾಡುತ್ತಿರುತ್ತಾರೆ. ಇದರಿಂದಾಗಿ ಉತ್ತಮವಾದ ಹವೆಯ ಸೇವನೆಗೆಂದು ಬರುವವರು ಈ ಕಸದ ದುರ್ನಾತವನ್ನು ಬಲವಂತವಾಗಿ ಸೇವಿಸುವಂತಾಗುತ್ತದೆ.

ಮತ್ತೊಂದೆಡೆ, 15-20 ದಿನಗಳಾದರೂ ಕಸವನ್ನು ಸುರಿದಿರುವ ಪ್ರದೇಶದಿಂದ ಕಸವನ್ನು ಎತ್ತುವವರೇ ಇರುವುದಿಲ್ಲ, ಸಂಬಂಧಪಟ್ಟವರಿಗೆ ದೂರು ಕೊಟ್ಟರೂ ಪ್ರಯೋಜನ ವಾಗುತ್ತಿಲ್ಲ. ಹೀಗಾಗಿ ಬೆಂಗಳೂರು ದಿನೇ ದಿನೆ ಕಸದ ಅಡ್ಡೆಯಾಗುತ್ತಿದೆ, ‘ಗಾರ್ಡನ್ ಸಿಟಿ’ ಎಂದು ಕರೆಸಿಕೊಳ್ಳುತ್ತಿದ್ದುದು ಈಗ ‘ಗಾರ್ಬೇಜ್ ಸಿಟಿ’ ಆಗಿದೆ.

ಬೆರಗಾಗಿಸುವ ಸ್ವಚ್ಛತೆ

ಅಮೆರಿಕ, ಇಂಗ್ಲೆಂಡ್ ಅಥವಾ ಸಿಂಗಾಪುರದಂಥ ದೇಶಗಳಿಗೆ ನಾವು ಹೋದಾಗ ಅಲ್ಲಿನ ರಸ್ತೆಗಳ ಸ್ವಚ್ಛತೆಯನ್ನು ಕಂಡು ಬೆರಗಾಗುತ್ತೇವೆ. ಅಲ್ಲಿನ ಆಳುಗ ವ್ಯವಸ್ಥೆ ಎಷ್ಟು ಬಿಗಿಯಾಗಿದೆಯೋ, ಜನರ ಶಿಸ್ತೂ ಅಷ್ಟೇ ಪ್ರಬಲವಾಗಿದೆ. ಅಲ್ಲೆಲ್ಲಾ ರಸ್ತೆ ಬದಿಯಲ್ಲಿ ಕಸವನ್ನು ಎಸೆಯುವುದು ಸಾಮಾಜಿಕ ಅಪರಾಧ. ಆದರೆ ನಮ್ಮ ದೇಶದಲ್ಲಾದರೋ, ‘ನನ್ನ ಮನೆ ಸ್ವಚ್ಛವಾಗಿದ್ದರೆ ಸಾಕು, ರಸ್ತೆಯ ಸ್ವಚ್ಛತೆಯನ್ನು ನೋಡಿಕೊಳ್ಳೋದು ಸರಕಾರದ ಹೊಣೆಯಲ್ಲವೇ’ ಎಂಬ ಧೋರಣೆಯೇ ಸಾಕಷ್ಟು ಮಂದಿಯಲ್ಲಿ ಕಂಡುಬರುತ್ತದೆ.

ಒಂದೆಡೆ ಕಂಡಕಂಡಲ್ಲಿ ಕಸ ಎಸೆಯುವ ಜನರು, ಮತ್ತೊಂದೆಡೆ ಸಮರ್ಪಕವಾಗಿ ಕಸದ ನಿರ್ವಹಣೆಯನ್ನು ಮಾಡದ ಸಿಬ್ಬಂದಿಗಳು- ಈ ದೃಶ್ಯವನ್ನು ನೋಡಿದಾಗ ‘ಸ್ವಚ್ಛಭಾರತ’ ಅಭಿಯಾನವು ನಿಜವಾಗಿಯೂ ಯಶಸ್ವಿಯಾಗಿದೆಯೇ ಅಥವಾ ಅದು ಜಾಹೀರಾತಿಗಷ್ಟೇ ಸೀಮಿತವಾಗಿದೆಯೇ? ಎಂಬ ಅನುಮಾನ ಕಾಡುತ್ತದೆ.

garbaze

ಹೊಣೆಗಾರಿಕೆ ಮೆರೆಯಬೇಕು

ಕಳೆದೊಂದು ದಶಕದಿಂದ ‘ಸ್ವಚ್ಛಭಾರತ’ದ ಘೋಷಣೆ ಎಲ್ಲೆಡೆ ಕೇಳಿ ಬರುತ್ತಿದೆ. ಶೌಚಾ ಲಯಗಳ ನಿರ್ಮಾಣದ ವಿಷಯದಲ್ಲಿ ಇದು ಕೆಲಮಟ್ಟಿಗೆ ನಿಜವಾಗಿದ್ದರೂ, ನಗರ ಪ್ರದೇಶ ಗಳಲ್ಲಿನ ಘನತ್ಯಾಜ್ಯ ನಿರ್ವಹಣೆಯ (Solid Waste Management) ವಿಷಯದಲ್ಲಿ ಅದು ನಿರೀಕ್ಷಿತ ಮಟ್ಟವನ್ನು ಮುಟ್ಟಿಲ್ಲ ಎನಿಸುತ್ತದೆ. ಈ ಪರಿಸ್ಥಿತಿಗೆ ಸರಕಾರವನ್ನು ಮಾತ್ರವೇ ದೂಷಿಸುವುದು ಸರಿಯಲ್ಲ; ಹಸಿಕಸ ಮತ್ತು ಒಣಕಸವನ್ನು ವಿಂಗಡಣೆ ಮಾಡದೆ ಎಲ್ಲವನ್ನೂ ಒಂದೇ ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ರಸ್ತೆಯ ಮೂಲೆಯಲ್ಲಿ ಎಸೆಯುವ ಜನರ ನಡವಳಿಕೆಯೂ ಈ ವೈಫಲ್ಯಕ್ಕೆ ಮುಖ್ಯ ಕಾರಣವಾಗಿದೆ.

ಬೆಂಗಳೂರಿನ ಅಂದ-ಚೆಂದ ಮತ್ತು ಸ್ವಚ್ಛತೆಯನ್ನು ಕಾಪಿಟ್ಟುಕೊಳ್ಳುವುದಕ್ಕೆ ಈಗ ಕಾನೂನುಗಳು ಮಾತ್ರವೇ ಸಾಕಾಗುವುದಿಲ್ಲ, ನಾಗರಿಕರು ನೈತಿಕ ಹೊಣೆಗಾರಿಕೆಯನ್ನೂ ಮೆರೆಯಬೇಕಾದ ಅಗತ್ಯವಿಲ್ಲಿ ಎದ್ದುಕಾಣುತ್ತದೆ.

ಜಾಗೃತಿ ಮೂಡಿಸಬೇಕು

ಸಾರ್ವಜನಿಕವಾಗಿ ಕಸವನ್ನು ಎಸೆಯುವವರಿಗೆ, ವಿದೇಶಗಳ ಮಾದರಿಯಲ್ಲಿ ಹೆಚ್ಚಿನ ದಂಡವನ್ನು ವಿಧಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಜತೆಗೆ, ಬಿಬಿಎಂಪಿಯ ಕಸ ಸಂಗ್ರಹಣಾ ವಾಹನಗಳು ಮನೆಮನೆಯ ಬಳಿಗೆ ಸರಿಯಾದ/ನಿಗದಿತ ಸಮಯಕ್ಕೆ ಬರುವಂತೆ ತಾಂತ್ರಿಕ ವ್ಯವಸ್ಥೆಯನ್ನು (GPS Tracking) ಬಲಪಡಿಸುವ ಅವಶ್ಯಕತೆ ತುಂಬಾ ಇದೆ.

‘ಬೆಂಗಳೂರು ಕೇವಲ ಒಂದು ನಗರವಲ್ಲ, ಇದು ನಮಗೆ ಅನ್ನ-ಆಶ್ರಯ-ನೀರು-ಗಾಳಿ ಯನ್ನು ನೀಡುತ್ತಿರುವ ನೆಲೆ’ ಎಂಬ ಭಾವನೆ ಜನರಲ್ಲಿ ದಟ್ಟವಾಗಬೇಕು. ‘ಎಲ್ಲೆಂದರಲ್ಲಿ ಕಸ ಎಸೆಯುವವನು ನಮ್ಮವನಲ್ಲ’ ಎಂಬ ಸಾಮಾಜಿಕ ಬಹಿಷ್ಕಾರದಂಥ ಜಾಗೃತಿ ಅವರಲ್ಲಿ ಮೂಡಬೇಕು.

ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸದಿದ್ದಲ್ಲಿ, ಮುಂದಿನ ಪೀಳಿಗೆಗೆ ನಾವು ‘ಹಸಿರು ಬೆಂಗಳೂರನ್ನು’ ಅಲ್ಲ ‘ಕಸದ ಕೂಪವನ್ನು’ ಹಸ್ತಾಂತರಿಸಲಿದ್ದೇವೆ. ಸ್ವಚ್ಛತೆ ಎಂಬುದು ನಮ್ಮ ಜೀವನದ ಸಂಸ್ಕಾರವಾಗಬೇಕು. ಸಿಂಗಾಪುರದ ರಸ್ತೆಗಳನ್ನೇ ಹೊಗಳುತ್ತಾ ಕೂರುವ ಬದಲು, ನಮ್ಮ ರಸ್ತೆಗಳನ್ನೂ ಆ ಮಟ್ಟಕ್ಕೆ ಏರಿಸುವಂಥ ಸಂಕಲ್ಪವನ್ನು ನಾವು ಮಾಡಬೇಕಿದೆ.

ಅಮೆರಿಕದ ಮೇಲ್ಪಂಕ್ತಿ

ಮೊದಲೇ ಉಲ್ಲೇಖಿಸಿದಂತೆ, ನಮ್ಮಲ್ಲಿ ರಸ್ತೆಬದಿಯಲ್ಲಿ ಕಸ ಎಸೆಯುವುದು ಸಾಮಾನ್ಯ ಎನಿಸಿದರೆ, ಅಮೆರಿಕದಂಥ ದೇಶಗಳಲ್ಲಿ ಇದು ಅಪರಾಧ. ಅಲ್ಲಿ ಈ ಸಮಸ್ಯೆಯನ್ನು ಮೂರು ಸೂತ್ರಗಳ ಮೂಲಕ ಹತೋಟಿಗೆ ತರಲಾಗಿದೆ:

? ಅಲ್ಲಿನ ಬಹುತೇಕ ರಾಜ್ಯಗಳಲ್ಲಿ ರಸ್ತೆಯಲ್ಲಿ ಕಸವನ್ನು ಎಸೆದರೆ, ಅದರ ಪ್ರಮಾಣಕ್ಕೆ ಅನುಗುಣವಾಗಿ ಕನಿಷ್ಠ 500ರಿಂದ 1000 ಡಾಲರ್‌ವರೆಗೆ ದಂಡವನ್ನು ವಿಧಿಸಲಾಗುತ್ತದೆ. ಮತ್ತೆ ಕೆಲವು ಕಡೆ ‘ಸಮುದಾಯ ಸೇವೆ’ ಅಂದರೆ ರಸ್ತೆ ಗುಡಿಸುವ ಶಿಕ್ಷೆಯನ್ನೂ ನೀಡಲಾಗು ತ್ತದೆ. ಈ ಭಯವು ಜನರಲ್ಲಿ ಶಿಸ್ತನ್ನು ಮೂಡಿಸಿದೆ.

- ಜನರು ಕಸವನ್ನು ಎಷ್ಟು ಉತ್ಪಾದಿಸುತ್ತಾರೋ ಅಷ್ಟು ಹಣವನ್ನು ಸರಕಾರಕ್ಕೆ ಪಾವತಿಸ ಬೇಕಾಗಿ ಬರುವ Pay As-You-Throw ಎಂಬ ನಿಯಮವನ್ನು ಅಲ್ಲಿ ಜಾರಿಗೆ ತರಲಾಗಿದೆ. ಅಂದರೆ, ಕಸದ ಉತ್ಪಾದನೆಯನ್ನು ನೀವು ತಗ್ಗಿಸಿದಷ್ಟೂ ನಿಮ್ಮ ಹಣ ಉಳಿಯುತ್ತದೆ. ಇದು ಜನರಲ್ಲಿ ಕಸವನ್ನು ಕಡಿಮೆ ಮಾಡುವ (Reduce) ಮತ್ತು ಮರುಬಳಕೆ ಮಾಡುವ ( Recycle) ಪ್ರವೃತ್ತಿಯನ್ನು ಬೆಳೆಸಿದೆ.

ಅಲ್ಲಿ ಸಮರ್ಪಕ ತಂತ್ರಜ್ಞಾನದ ವ್ಯವಸ್ಥೆಯಿದೆ. ಅಲ್ಲಿನ ಕಸದ ತೊಟ್ಟಿಗಳು ಎಷ್ಟರಮಟ್ಟಿಗೆ ‘ಸ್ಮಾರ್ಟ್’ ಆಗಿವೆ ಎಂದರೆ, ತೊಟ್ಟಿ ತುಂಬಿದ ಕೂಡಲೇ ನಗರಪಾಲಿಕೆಗಳಿಗೆ ಸಂದೇಶ ರವಾನೆಯಾಗುತ್ತದೆ. ಅತ್ಯಾಧುನಿಕವಾಗಿರುವ ಕಸ ಸಂಗ್ರಹಣಾ ವಾಹನಗಳು ರಸ್ತೆಯ ಮೇಲೆ ಕೊಂಚವೂ ಚೆಲ್ಲದಂತೆ ಕಸವನ್ನು ಸಾಗಿಸುತ್ತವೆ.

ಬೇಕಿದೆ ಸಂಸ್ಕಾರ

ಅಮೆರಿಕದ ಶಾಲೆಗಳಲ್ಲಿ ಮಕ್ಕಳಿಗೆ ‘ಪರಿಸರ ಪ್ರೇಮ’ವನ್ನು ಒಂದು ಪಠ್ಯವಿಷಯವಾಗಿ ಮಾತ್ರವಲ್ಲದೆ, ಜೀವನದ ಭಾಗವಾಗಿ ಕಲಿಸಲಾಗುತ್ತದೆ. ‘ನನ್ನ ದೇಶದ ರಸ್ತೆಯು, ನನ್ನ ಮನೆಯ ವಾಸದ ಕೋಣೆಯಷ್ಟೇ ಪವಿತ್ರ’ ಎಂಬ ಭಾವನೆಯನ್ನು ಮಕ್ಕಳಲ್ಲಿ ಚಿಕ್ಕಂದಿ ನಲ್ಲೇ ಬಿತ್ತಲಾಗುತ್ತದೆ. ಹೀಗಾಗಿ ಮಗುವೊಂದು ಚಾಕೊಲೇಟ್ ಅನ್ನು ತಿಂದ ನಂತರ ಅದರ ಕವರನ್ನು ಸ್ವತಃ ಕಸದ ಡಬ್ಬಿಗೆ ಎಸೆದುಬರುತ್ತದೆ.

ಅಮೆರಿಕದ ಸ್ವಚ್ಛ ರಸ್ತೆಗಳನ್ನು ನೋಡಿ ನಾವು ಬೆರಗಾಗುತ್ತೇವೆ. ಆದರೆ ಅದಕ್ಕೆ ಕಾರಣ ವಾಗಿರುವುದು ಸರಕಾರದ ಕಠಿಣ ಕಾನೂನು ಮಾತ್ರವೇ ಅಲ್ಲ, ಜನರ ಹೊಣೆಯರಿತ ವರ್ತನೆಯ ಪಾಲೂ ಇದರ ಹಿಂದಿದೆ. ‘ರಸ್ತೆಗಳಿಗೆ ಕಸವನ್ನು ಎಸೆಯುವುದು ನಮ್ಮ ಘನತೆಗೆ ಕುಂದು’ ಅಂತ ಅಲ್ಲಿನ ಜನರು ಭಾವಿಸುತ್ತಾರೆ.

ನಿಜಾರ್ಥದ ನಾಗರಿಕರಾಗೋಣಈ ಬರಹದಲ್ಲಿ ‘ಬೆಂಗಳೂರು’ ಎಂಬುದು ಪ್ರಾಸಂಗಿಕ ಉಲ್ಲೇಖವಷ್ಟೇ. ಹಾಗೆ ನೋಡಿದರೆ, ನಮ್ಮ ಹಲವು ಪಟ್ಟಣ ಮತ್ತು ನಗರಗಳಲ್ಲಿ ನೈರ್ಮಲ್ಯ ದ ಕೊರತೆ ಕಣ್ಣಿಗೆ ರಾಚುವಂತಿದೆ. ಇಂಥ ಎಲ್ಲ ಪ್ರದೇಶಗಳನ್ನು ‘ಕಸಮುಕ್ತ’ ವಾಗಿಸಬೇಕಿದೆ, ಅಂಥ ಸ್ವಚ್ಛತೆಯ ಅರಿವನ್ನು ಜನರೂ ಮೂಡಿಸಿಕೊಂಡು ‘ನಿಜಾರ್ಥದ ನಾಗರಿಕರು’ ಎನಿಸಿಕೊಳ್ಳಬೇಕಿದೆ.

ಇಲ್ಲವಾದಲ್ಲಿ ‘ಸ್ವಚ್ಛಭಾರತ’ ಅಭಿಯಾನವು ತನ್ನ ಅರ್ಥವನ್ನು ಕಳೆದುಕೊಳ್ಳುವುದು ಕಟ್ಟಿಟ್ಟ ಬುತ್ತಿ. ‘ವಿಕಸಿತ ಭಾರತ’ ಎಂಬ ಮಹತ್ವಾಕಾಂಕ್ಷೆಯು ಸಾಕಾರಗೊಳ್ಳಬೇಕಿದ್ದರೆ, ಅದರ ಒಂದು ಭಾಗವಾಗಿ ‘ಸ್ವಚ್ಛಭಾರತ’ದ ಆಶಯವನ್ನೂ ಸಾಕಾರಗೊಳಿಸಬೇಕಿದೆ.

Cleanliness is next to godliness ಎಂಬುದೊಂದು ಮಾತಿದೆ. ಸ್ವಚ್ಛತೆಯನ್ನು ಕಾಯ್ದು ಕೊಂಡರೆ ಮಾತ್ರವೇ ದೇವರ ಸಾನ್ನಿಧ್ಯದ ಅನುಭೂತಿ ನಮಗೆ ಸಿಗುತ್ತದೆ ಎಂಬುದನ್ನು ಮರೆಯದಿರೋಣ. ಬೆಂಗಳೂರನ್ನು ಅಥವಾ ನಾವು ನೆಲೆಸಿರುವ ಪ್ರದೇಶ ವನ್ನು ಸುಂದರ ಮತ್ತು ಆರೋಗ್ಯವಂತವಾಗಿಟ್ಟುಕೊಳ್ಳುವುದು ಮುಂದಿನ ಪೀಳಿಗೆಗೆ ನಾವು ನೀಡಬಹು ದಾದ ಅತ್ಯುತ್ತಮ ಕೊಡುಗೆಯಾಗಿದೆ.

(ಲೇಖಕರು ಹವ್ಯಾಸಿ ಬರಹಗಾರರು)