ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Srivathsa Joshi Column: ಸು+ಅಸ್ತಿ+ಕ ಒಳ್ಳೆಯದಾಗಿ ಇರುವುದರ ಪ್ರತೀಕವೇ ಸ್ವಸ್ತಿಕ

19ನೇಯ ಶತಮಾನದ ಹೊತ್ತಿಗಂತೂ ನಾಣ್ಯ, ಇಸ್ಪೀಟ್‌ ಎಲೆ ಮುಂತಾದವುಗಳಿಂದ ಹಿಡಿದು ಭವ್ಯವಾದ ವಾಸ್ತುಶಿಲ್ಪಗಳ ಗೋಡೆ ಕಂಬ ಕಮಾನು ಬಾಗಿಲುಗಳ ಮೇಲೆಲ್ಲ ಅದರದ್ದೇ ವಿನ್ಯಾಸ. ಅಷ್ಟೊಂದು ಅಗಾಧ ಪ್ರಮಾಣದಲ್ಲಿ ವಿಶ್ವಮಾನ್ಯತೆ ಗಳಿಸಿದ್ದ ಚಿಹ್ನೆಯದು. ಯಾವಾಗ ಅದನ್ನು ಅಡಾಲ್ಫ್ ಹಿಟ್ಲರ್ ತನ್ನ ಸರ್ವಾಧಿಕಾರ ಸಾರ್ವಭೌಮತ್ವದ ಸಂಕೇತವಾಗಿಸಿದನೋ, ಅವನ ನಾತ್ಸಿ ಸೈನಿಕರು ಮಾಡಿದ ನರಮೇಧದ ಕಹಿನೆನಪುಗಳಿಗೆ ಯಾವಾಗ ಅದು ಮೂರ್ತರೂಪವಾಯಿತೋ, ಆವಾಗಿಂದ ತಟ್ಟಿಕೊಂಡಿ ತು ಅದಕ್ಕೆ ಕಳಂಕ.

ತಿಳಿರುತೋರಣ

ಅದಕ್ಕಿದೆ ಸುಮಾರು ಐದು‌ ಸಾವಿರ ವರ್ಷಗಳಿಗಿಂತಲೂ ದೀರ್ಘವಾದ ಇತಿಹಾಸ. ಆದಿಮಾನವನ ಶಿಲಾಯುಗದಿಂದ ಹಿಡಿದು ಈಗಿನ ಸ್ಪೇಸ್‌ಏಜ್‌ವರೆಗೂ ಉಳಿದುಕೊಂಡು ಬಂದಿರುವ ಪಾವಿತ್ರ್ಯ. ಭಾರತೀಯ ಸಂಸ್ಕೃತಿಯಿಂದ ಆವಿರ್ಭವಿಸಿದ್ದು ಎನ್ನುವುದಕ್ಕೆ ಸಾಕ್ಷಿಯಾಗಿ ಸಂಸ್ಕೃತ ಹೆಸರಿ ನಿಂದಲೇ ವಿಶ್ವದಲ್ಲೆಲ್ಲ ಗುರುತು-ಗೌರವ. ಹಿಂದೂ, ಬೌದ್ಧ, ಜೈನ ಇತ್ಯಾದಿ ಭಾರತೀಯ ಧರ್ಮ ಗಳಷ್ಟೇ ಅಲ್ಲದೆ ಕ್ರೈಸ್ತ, ಮುಸಲ್ಮಾನ, ಯಹೂದ್ಯ ಮೊದಲಾದ ಧರ್ಮಗಳಿಗೂ ಪಸರಿಸಿ ಅಲ್ಲೂ ಶುಭ ಸಂಕೇತ ಎನಿಸಿಕೊಂಡ ಶ್ರೇಷ್ಠತೆ.

19ನೇಯ ಶತಮಾನದ ಹೊತ್ತಿಗಂತೂ ನಾಣ್ಯ, ಇಸ್ಪೀಟ್‌ಎಲೆ ಮುಂತಾದವುಗಳಿಂದ ಹಿಡಿದು ಭವ್ಯ ವಾದ ವಾಸ್ತುಶಿಲ್ಪಗಳ ಗೋಡೆ ಕಂಬ ಕಮಾನು ಬಾಗಿಲುಗಳ ಮೇಲೆಲ್ಲ ಅದರದ್ದೇ ವಿನ್ಯಾಸ. ಅಷ್ಟೊಂದು ಅಗಾಧ ಪ್ರಮಾಣದಲ್ಲಿ ವಿಶ್ವಮಾನ್ಯತೆ ಗಳಿಸಿದ್ದ ಚಿಹ್ನೆಯದು. ಯಾವಾಗ ಅದನ್ನು ಅಡಾಲ್ ಹಿಟ್ಲರ್ ತನ್ನ ಸರ್ವಾಧಿಕಾರ ಸಾರ್ವಭೌಮತ್ವದ ಸಂಕೇತವಾಗಿಸಿದನೋ, ಅವನ ನಾತ್ಸಿ ಸೈನಿಕರು ಮಾಡಿದ ನರಮೇಧದ ಕಹಿನೆನಪುಗಳಿಗೆ ಯಾವಾಗ ಅದು ಮೂರ್ತರೂಪವಾಯಿತೋ, ಆವಾಗಿಂದ ತಟ್ಟಿಕೊಂಡಿತು ಅದಕ್ಕೆ ಕಳಂಕ.

ಅದುವರೆಗೂ ಪ್ರಪಂಚದಾದ್ಯಂತ ಶುಭ ಸಂಕೇತವೆಂದು ರಾರಾಜಿಸಿದ್ದ ಆ ಚಿಹ್ನೆ, ಹಿಟ್ಲರ್‌ನೆಂಬ ನರಹಂತಕನು ತನ್ನ ಧ್ವಜದಲ್ಲಿ ಬಳಸಿದ್ದನೆಂಬ ಕಾರಣಕ್ಕೆ ಕರಾಳತೆಯ ಕುರುಹಾಗಿ ಬಿಟ್ಟಿತು. ಪ್ರಪಂಚದ ಕೆಲಭಾಗಗಳಲ್ಲಿ ಬಹಿಷ್ಕಾರಕ್ಕೂ ಗುರಿಯಾಗಬೇಕಾಯಿತು. ಆ ಚಿಹ್ನೆ ಬೇರಾವುದೂ ಅಲ್ಲ, ನಮಗೆಲ್ಲರಿಗೂ ಚಿರಪರಿಚಿತವೇ ಆಗಿರುವ, ಭಾರತೀಯರಾಗಿ ನಾವು ಈವತ್ತಿಗೂ ಅತ್ಯಂತ ಪೂಜ್ಯ ಮತ್ತು ಪವಿತ್ರ ಭಾವನೆಯಿಂದ ಗೌರವಿಸುವ ಸ್ವಸ್ತಿಕ!

ಅದರ ನಾಲ್ಕು ಬಾಹುಗಳು ಬದುಕಿನ ನಾಲ್ಕು (ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ) ಆಶ್ರಮಗಳನ್ನು, ಅಥವಾ ನಾಲ್ಕು (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ) ವರ್ಣಭೇದಗಳನ್ನು, ಅಥವಾ ನಾಲ್ಕು (ಧರ್ಮ, ಅರ್ಥ, ಕಾಮ, ಮೋಕ್ಷ) ಪುರುಷಾರ್ಥಗಳನ್ನು, ಅಥವಾ ನಾಲ್ಕು (ಕೃತ, ತ್ರೇತಾ, ದ್ವಾಪರ, ಕಲಿ) ಯುಗಗಳನ್ನು, ಅಥವಾ ನಾಲ್ಕು (ಋಕ್, ಯಜುಃ, ಸಾಮ, ಅಥರ್ವ) ವೇದಗಳನ್ನು ಪ್ರತಿನಿಧಿಸಿಸುತ್ತವೆ ಅಂತೆಲ್ಲ ಬೇರೆ ಬೇರೆ ನಂಬಿಕೆ ವ್ಯಾಖ್ಯಾನ ವಿಶ್ಲೇಷಣೆಗಳಿವೆ.

ಇದನ್ನೂ ಓದಿ: Srivathsa Joshi Column: ಐದು ವ್ಯಂಜನಗಳ ಸಂಯಕ್ತಾಕ್ಷರವೂ ಪಂಚಾಮೃತವೇ !

ಆಗಲೇ ಹೇಳಿದಂತೆ ‘ಸ್ವಸ್ತಿಕ’ ಹೆಸರು ಸಂಸ್ಕೃತ ಭಾಷೆಯಿಂದ ಬಂದಿರುವುದು. ಅದನ್ನು ಸು+ಅಸ್ತಿ+ಕ ಎಂದು ಯಣ್ ಸಂಧಿ ಬಿಡಿಸಿ ಹೇಳಬಹುದು. ಸು ಎಂದರೆ ಒಳ್ಳೆಯ. ಅಸ್ತಿ ಎಂದರೆ ಆಗಿರುವುದು. ಕ ಎನ್ನುವುದು ಪ್ರತ್ಯಯ. ಒಟ್ಟು ಅರ್ಥ- ಒಳ್ಳೆಯದಾಗುವುದರ, ಒಳ್ಳೆಯದಾಗಿರುವು ದರ ಸಂಕೇತ. ಭಾರತದಲ್ಲಿ ಸ್ವಸ್ತಿಕ ಎಂದು ಕರೆಯಲಾದ ಅದೇ ಚಿಹ್ನೆ ವಿಶ್ವದ ಬೇರೆ ನಾಗರಿಕತೆ ಗಳಲ್ಲಿ ಮೊದಲಿಗೆ ಬೇರೆ ಹೆಸರುಗಳಿಂದ ಗುರುತಿಸಲ್ಪಡುತ್ತಿತ್ತಂತೆ.

ಗ್ರೀಕ್‌ನಲ್ಲಿ ಅದಕ್ಕಿದ್ದ ಹೆಸರು ಟೆಟ್ರಾಗ್ಯಾಮಾಡಿಯನ್ ಎಂದು. ಗ್ರೀಕ್ ಅಕ್ಷರ ಗ್ಯಾಮಾವನ್ನು ಪ್ರದಕ್ಷಿಣಾಕಾರದಲ್ಲಿ ನಾಲ್ಕುಸಲ ಬರೆದಾಗ ಆಗುವ ಚಿಹ್ನೆ ಆದ್ದರಿಂದ ಟೆಟ್ರಾಗ್ಯಾಮಾಡಿಯನ್. ಲ್ಯಾಟಿನ್‌ನಲ್ಲಿ ಅದನ್ನು ಗ್ಯಾಮಾಡಿಯಮ್ ಎಂದಷ್ಟೇ ಕರೆದರೆ, ಫ್ರೆಂಚ್‌ನಲ್ಲಿ ಲಾಕ್ರೊಕ್ಸ್ ಗ್ಯಾಮೆ ಎನ್ನುತ್ತಿದ್ದರಂತೆ.

ಹಳೆಯ ಇಂಗ್ಲಿಷ್‌ನಲ್ಲಿ ಆ ಚಿಹ್ನೆಯ ಹೆಸರು ಫಿಲ್ ಫೋಟ್ (flyfot) ಎಂಬುದಾಗಿತ್ತು. ಇಂಗ್ಲಿಷ್‌ನ ಎಲ್ ಅಕ್ಷರವನ್ನು ನಾಲ್ಕು ದಿಕ್ಕುಗಳಿಗೂ ಅಭಿಮುಖ ಆಗುವಂತೆ ನಾಲ್ಕು ಸಲ ಬರೆದಾಗ ಮೂಡುವ ಚಿಹ್ನೆ. ಆ ನಾಲ್ಕು ಎಲ್‌ಗಳು ಅನುಕ್ರಮವಾಗಿ love, light, life, luck (ಪ್ರೀತಿ, ಜ್ಯೋತಿ, ಜೀವ ಮತ್ತು ದೈವ) ಇವುಗಳನ್ನು ಸೂಚಿಸುತ್ತವೆಂಬ ಭಾವನೆ.

ಭಾರತದ ಸನಾತನ ಸಂಸ್ಕೃತಿಯಲ್ಲೂ ಆ ಚಿಹ್ನೆಗೆ ಅದೇ ಅರ್ಥ, ಅದೇ ಪಾವಿತ್ರ್ಯ, ಅದೇ ಪೂಜ್ಯ ಭಾವನೆ ಎಂದರಿತ ಬ್ರಿಟಿಷರು ಹದಿನೆಂಟು-ಹತ್ತೊಂಬತ್ತನೇ ಶತಮಾನದ ಹೊತ್ತಿಗೆ ಪ್ರಪಂಚವಿಡೀ ಹೆಚ್ಚೂಕಡಿಮೆ ತಮ್ಮದೇ ಆಳ್ವಿಕೆಯೆಂದಾದ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಯಲ್ಲೂ ಅದನ್ನು ಸ್ವಸ್ತಿಕ ಎಂದೇ ಕರೆಯಲು ನಿರ್ಧರಿಸಿರಬೇಕು. ಅಲ್ಲಿಂದೀಚೆಗೆ ಅದು ಸ್ವಸ್ತಿಕವೆಂದೇ ಪ್ರಪಂಚದಾ ದ್ಯಂತ ಪರಿಚಿತವಾಯ್ತು.

ಜಿ.ವೆಂಕಟಸುಬ್ಬಯ್ಯನವರು ‘ಇಗೋ ಕನ್ನಡ’ ಸಾಮಾಜಿಕ ನಿಘಂಟುವಿನಲ್ಲಿ ಸ್ವಸ್ತಿಕದ ಬಗ್ಗೆ ಹೀಗೆ ಬರೆದಿದ್ದಾರೆ: “ಈ ಶಬ್ದಕ್ಕೆ ಮಂಗಳಕರ ವಸ್ತು ಎಂದು ಅರ್ಥ. ಇದು ಸ್ವಸ್ತಿ ಎಂಬುದರಿಂದ ಬಂದದ್ದು. ಮಂಗಳಕರವಾದುದನ್ನು ಹೇಳುವ ವ್ಯಕ್ತಿಗೂ ಈ ಶಬ್ದವನ್ನೇ ಉಪಯೋಗಿಸುತ್ತಾರೆ. ಎದೆಯ ಮೇಲೆ ಒಂದು ತೋಳಿನ ಮೇಲೆ ಮತ್ತೊಂದು ತೋಳು ಬರುವಂತೆ ಇಡುವುದಕ್ಕೂ ಈ ಹೆಸರಿದೆ. ಇದು ಸುದರ್ಶನ ಚಕ್ರದ ನಾಲ್ಕು ಅರಗಳನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ. ಈ ಆಕಾರದ ಗುರುತು ಅಶೋಕನ ಕಾಲದ ಲಿಪಿಗಳಲ್ಲಿ ಸ್ವಸ್ತಿ ಎಂಬ ಶಬ್ದವನ್ನು ಸೂಚಿಸುತ್ತಿತ್ತು.

ಜೈನರಲ್ಲಿ ಈಗಿನ ಅವಸರ್ಪಿಣಿ ಕಾಲದಲ್ಲಿ ಶುಭ ಚಿಹ್ನೆಗಳಲ್ಲಿ ಒಂದೆಂದು ನಂಬಲಾಗಿದೆ. ಶಿವಲಿಂಗದ ಗುರುತೆಂದು ಕೂಡ ಕೆಲವರು ನಂಬುತ್ತಾರೆ. ಪ್ರಾಚೀನ ಶಬ್ದಕೋಶಗಳಲ್ಲಿ ಇದಕ್ಕೆ ಚೌವಟ್ಟ (ನಾಲ್ಕು ದಾರಿಗಳು ಸೇರುವ ಜಾಗ), ಬೆಳ್ಳುಳ್ಳಿ, ಒಂದು ಬಗೆಯ ರೊಟ್ಟಿ, ವ್ಯಭಿಚಾರಿ, ಯೋಗಾಸನ ಮುಂತಾಗಿ ವಿವಿಧ ಅರ್ಥಗಳನ್ನು ಕೊಟ್ಟಿದ್ದಾರೆ.

ಒಂದು ಬಗೆಯ ಅರಮನೆ ರಚನೆಗೂ ಸ್ವಸ್ತಿಕ ಎಂಬ ಹೆಸರಿದೆ. ರಾಜರ ಸೈನ್ಯಗಳಲ್ಲಿ, ಪರಾಕ್ರಮಿಗಳ ಆಯುಧಾಲಂಕಾ ರಗಳಲ್ಲಿ ಲಾಂಛನವಾಗಿ ಪಾಶ್ಚಾತ್ಯ ದೇಶಗಳಲ್ಲೂ ಉಪಯೋಗಿಸುತ್ತಿದ್ದರು." ಜರ್ಮನಿಯಲ್ಲಿ ಅಡಾಲ್ ಹಿಟ್ಲರ್‌ನ ನ್ಯಾಷನಲ್ ಸೋಷಿಯಲಿಸ್ಟ್ ರಿಜೈಮ್ 1920ರಲ್ಲಿ ಶುರುವಾ ದಾಗ ಅದರ ಅಧಿಕೃತ ಲಾಂಛನ ಕೆಂಪು ಬಣ್ಣದೊಳಗಿನ ಬಿಳಿ ವರ್ತುಲದಲ್ಲಿ ಕಪ್ಪು ಬಣ್ಣದ ಸ್ವಸ್ತಿಕ, ನಲವತ್ತೈದು ಡಿಗ್ರಿಗಳಷ್ಟು ತಿರುಗಿಕೊಂಡಿರುವಂಥದು.

ಹಿಟ್ಲರ್‌ನ ಆತ್ಮಚರಿತ್ರೆ ‘ಮೈನ್ ಕೆಂಫ್’ನಲ್ಲಿ ಆ ಧ್ವಜವಿನ್ಯಾಸದ ಬಗ್ಗೆ ಸಾಕಷ್ಟು ವಿವರಗಳು ಬರುತ್ತವೆ. “ನಾನೇ ಸ್ವತಃ ಅನೇಕ ಪ್ರಯತ್ನಗಳ ನಂತರ ಅಂತಿಮ ರೂಪವನ್ನು ನಿಶ್ಚಯಿಸಿದ್ದೆ - ಕೆಂಪು ಹಿನ್ನೆಲೆಯಿರುವ ಧ್ವಜ, ಅದರ ಮಧ್ಯದಲ್ಲಿ ಬಿಳಿ ವೃತ್ತ ಮತ್ತು ಅದರೊಳಗೆ ಕಪ್ಪು ಸ್ವಸ್ತಿಕ ಚಿಹ್ನೆ.

ದೀರ್ಘಕಾಲದ ಪ್ರಯೋಗಗಳ ಬಳಿಕ, ಧ್ವಜದ ಗಾತ್ರ ಮತ್ತು ಬಿಳಿ ವೃತ್ತದ ಗಾತ್ರದ ನಡುವೆ ಸರಿಯಾದ ಅನುಪಾತವನ್ನು ಕಂಡುಹಿಡಿದೆ. ಹಾಗೆಯೇ ಸ್ವಸ್ತಿಕದ ಆಕಾರ ಮತ್ತು ಅದರ ದಪ್ಪ‌ ವನ್ನೂ ನಿಶ್ಚಿತಗೊಳಿಸಿದೆ" ಎಂದು ಹಿಟ್ಲರ್ ಬರೆದಿದ್ದಾನೆ.

1933ರ ಆಗಸ್ಟ್‌ನಲ್ಲಿ ನಡೆದಿದ್ದ ಒಂದು ರ‍್ಯಾಲಿಯಲ್ಲಿ ಹಿಟ್ಲರ್ ಯುಥ್ ಪರೇಡ್‌ನ ಸದಸ್ಯರು ದೊಡ್ಡ ದೊಂದು ಸ್ವಸ್ತಿಕ ವಿನ್ಯಾಸದ ಪಥಸಂಚಲನ ಮಾಡುತ್ತ ಅಜ್ಞಾತ ಸೈನಿಕನಿಗೆ ಗೌರವ ಸಲ್ಲಿಸಿದ್ದರು. ಎರಡನೆಯ ಪ್ರಪಂಚಯುದ್ಧ ಸಂಭವಿಸುವವರೆಗೂ, ಸ್ವಸ್ತಿಕ ಚಿಹ್ನೆಗೆ ಪಾಶ್ಚಾತ್ಯ ದೇಶಗಳಲ್ಲಿ ಬಹಳವೇ ಗೌರವವಿತ್ತು.

ಹಿಟ್ಲರ್ʼನಿಂದಾಗಿ ಅದೆಲ್ಲ ಹಾಳಾಯಿತು. ಸಂಸ್ಕೃತದಲ್ಲಿ ಒಂದು ಸುಭಾಷಿತವಿದೆ, “ಅಹೋ ದುರ್ಜನಸಂಸರ್ಗಾನ್ಮಾನಹಾನಿಃ ಪದೇ ಪದೇ| ಪಾವಕೋ ಲೋಹಸಂಗೇನ ಮುದ್ಗರೈರಭಿಹನ್ಯತೇ|| (ದುರ್ಜನರ ಸಹವಾಸದಿಂದ ಮಾನಹಾನಿ ತಪ್ಪಿದ್ದಲ್ಲ. ಕಬ್ಬಿಣಕ್ಕೆ ಬೀಳುವ ಸುತ್ತಿಗೆಯ ಪೆಟ್ಟು ಅದನ್ನು ಕಾಯಿಸುವ ಬೆಂಕಿಗೂ ಬೀಳುತ್ತದಲ್ಲ?)" ಎಂದು. ಹಿಟ್ಲರ್‌ನ ಸಹವಾಸದಿಂದ ಸ್ವಸ್ತಿಕದ ಮಾನಹಾನಿ ಆದದ್ದೂ ಅದೇ ರೀತಿಯಲ್ಲಿ.

ಭಾರತೀಯ ಸಂಸ್ಕೃತಿಯಲ್ಲಿ ಸ್ವಸ್ತಿಕವು ವಿಶೇಷ ಮಹತ್ತ್ವವುಳ್ಳದ್ದು ಮತ್ತು ಜರ್ಮನಿಯಲ್ಲಿ ಹಿಟ್ಲರ್‌ನ ಸರ್ವಾಧಿಕಾರಿ ಪ್ರವೃತ್ತಿಯಿಂದಾಗಿ ಸ್ವಸ್ತಿಕ ಚಿಹ್ನೆಗೆ ಕೆಟ್ಟ ಅರ್ಥ ಬಂತು- ಈ ಎರಡು ವಿಷಯಗಳಷ್ಟೇ ಸ್ವಸ್ತಿಕದ ಬಗ್ಗೆ ನಮ್ಮೆಲ್ಲರಿಗಿರುವ ಸಾಮಾನ್ಯ ಜ್ಞಾನದ ವಿಸ್ತಾರ. ಚುನಾವಣೆಗಳಲ್ಲಿ ಮತಪತ್ರದ ಮೂಲಕ ಮತ ಚಲಾಯಿಸುತ್ತಿದ್ದ ಹಳೆಯ ದಿನಗಳಲ್ಲಿ ನಮ್ಮ ಆಯ್ಕೆಯನ್ನು ಸೂಚಿಸುವ ಮೊಹರು ಇರುತ್ತಿದ್ದದ್ದು ಒಂದು ನಮೂನೆಯ ಸ್ವಸ್ತಿಕ ಚಿಹ್ನೆಯ ವಿನ್ಯಾಸದ್ದೇ ಎಂದು ನಿಮ್ಮಲ್ಲನೇಕರಿಗೆ ನೆನಪಿರಬಹುದು.

ಶುಭ ಸಂಕೇತದ ಚಿಹ್ನೆಯ ಮೂಲಕ ‘ಒಳ್ಳೆಯದಾಗಲಿ, ಒಳ್ಳೆಯದನ್ನೇ ಮಾಡಲಿ’ ಎಂದು ಕೆಟ್ಟಾ ಕೊಳಕ ರಾಜಕಾರಣಿಯೊಬ್ಬನ ಆಯ್ಕೆಯನ್ನು ಬಯಸುತ್ತಿದ್ದೆವೆಂಬುದನ್ನು ನೆನಪಿಸಿ ಕೊಂಡರೆ ಮುಜುಗರವೆನಿಸುತ್ತದೆ. ಆದರೆ ಇನ್ನೂ ಎಷ್ಟೋ ಸ್ವಾರಸ್ಯಕರ ಸಂಗತಿಗಳಿವೆ ಈ ವಿಶಿಷ್ಟ ಚಿಹ್ನೆಯ ಚರಿತ್ರೆಯಲ್ಲಿ. ಅವುಗಳಲ್ಲೊಂದಿಷ್ಟನ್ನು ಈಗ ತಿಳಿದುಕೊಳ್ಳೋಣ.

ಸ್ವಸ್ತಿಕ ಚಿಹ್ನೆಯು ಐದು ಸಾವಿರ ವರ್ಷಗಳ ಹಿಂದಿನ ಸಿಂಧೂನದಿ ನಾಗರಿಕತೆಯ ಕಾಲದಲ್ಲಿ ಮೊತ್ತ ಮೊದಲಿಗೆ ಮೂಡಿಬಂತೆನ್ನುವುದು ಇತಿಹಾಸಜ್ಞರ ಅಭಿಪ್ರಾಯ. ಬರವಣಿಗೆಯಲ್ಲಿ ಅದರ ಮೊತ್ತ ಮೊದಲ ಉಲ್ಲೇಖ ಆಗಿರುವುದು ವೇದವ್ಯಾಸ ಮುನಿವಿರಚಿತ ‘ಹರಿವಂಶ’ ಗ್ರಂಥದಲ್ಲಿ ಎನ್ನುತ್ತಾರೆ.

ಅಂತೂ ಸ್ವಸ್ತಿಕವೆಂಬ ಹೆಸರಷ್ಟೇ ಅಲ್ಲ, ಆ ಚಿಹ್ನೆಯನ್ನೂ ಪ್ರಪಂಚಕ್ಕೆ ಪರಿಚಯಿಸಿದ್ದು ಭಾರತವೇ ಎನ್ನುವುದು ಬಹುಜನರ ವಾದ. ಆದರೆ ಸಿಂಧೂನದಿ ನಾಗರಿಕತೆಯಲ್ಲಷ್ಟೇ ಅಲ್ಲ, ಈಜಿಪ್ಟ್, ಚೀನಾ, ಗ್ರೀಕ್, ರೋಮನ್, ದಕ್ಷಿಣ ಅಮೆರಿಕದ ಮಾಯನ್ ಮುಂತಾದ ಪ್ರಾಚೀನ ಸಂಸ್ಕೃತಿಗಳಲ್ಲೂ ಸ್ವಸ್ತಿಕ ಚಿಹ್ನೆ ಕಂಡುಬಂದಿದೆ ಎನ್ನುವುದು ಗಮನಾರ್ಹ.

ಪ್ರಾಚೀನ ಗ್ರೀಕ್ ನಗರವೆಂಬ ಖ್ಯಾತಿಯ ಟ್ರಾಯ್ ನಗರದ ಉತ್ಖನನದಲ್ಲಿ ಸ್ವಸ್ತಿಕ ಚಿಹ್ನೆಯ ಗುರುತು ಗಳು ಹೇರಳವಾಗಿ ಸಿಕ್ಕಿವೆಯಂತೆ. ಈಗಿನ ಅಫಘಾನಿಸ್ತಾನದ ಕಾಬುಲ್ ಪಕ್ಕದಲ್ಲಿರುವ ಸುಮಾರು 80 ಅಡಿ ಎತ್ತರದ ಬೌದ್ಧಸ್ತೂಪವು ಸ್ವಸ್ತಿಕ ಚಿಹ್ನೆಯ ಮೇಲೆಯೇ ನಿಂತಂತಿದೆಯಂತೆ.

ಅಲ್ಲಿ ಸ್ವಸ್ತಿಕಕ್ಕೆ ಜೀವವೃತ್ತ (ಹುಟ್ಟು, ಬಾಳು, ಸಾವು, ಮರುಹುಟ್ಟುಗಳ ಪುನರಾವರ್ತನೆ) ಮತ್ತು ಅದು ಬುದ್ಧನ ಪದತಲ ಎಂಬ ಕಲ್ಪನೆ. ಐರೋಪ್ಯ ದೇಶಗಳಲ್ಲಿ ಪುರಾತನ ಕಟ್ಟಡಗಳಲ್ಲಿ ಸ್ವಸ್ತಿಕ ವಿನ್ಯಾಸದ ಬಳಕೆ ಕಂಡುಬರುತ್ತದೆ.

ನ್ಯೂಯಾರ್ಕ್‌ನಲ್ಲಿ 1860ರಲ್ಲಿ ಕಟ್ಟಲಾದ ಸ್ಪಾನಿಷ್ ಪೋರ್ಚುಗೀಸ್ ಸಿನೆಗಾಗ್‌ನ ಕಿಟಕಿ-ಬಾಗಿಲು ಗಳ ಗಾಜಿಗೆ ಸ್ವಸ್ತಿಕ ವಿನ್ಯಾಸವೇ ಇದೆ. ಇಂಗ್ಲೇಂಡ್‌ನಲ್ಲಿ ಮ್ಯಾಂಚೆಸ್ಟರ್ ಆರ್ಟ್ ಗ್ಯಾಲರಿಯಲ್ಲಿ, ಸೆಂಟ್ರಲ್ ಲೈಬ್ರರಿಯ ನೆಲ ಮತ್ತು ಗೋಡೆಗೆ ಸ್ವಸ್ತಿಕ ಚಿಹ್ನೆಯ ವಿನ್ಯಾಸವಿದೆ.

ಅಮೆರಿಕದಲ್ಲಿ 1890ರ ಆಸುಪಾಸಿನಲ್ಲಿ ‘ಲಕ್ಕಿ ಸೆಂಟ್’ ಎಂದು ಕರೆಯಲಾಗುತ್ತಿದ್ದ ಸ್ವಸ್ತಿಕಾಕಾರದ ನಾಣ್ಯಗಳು ಇದ್ದುವಂತೆ. ಹುಡುಗಿಯರ ಕಬ್ಸ್ ಮತ್ತು ಹುಡುಗರ ಸ್ಕೌಟ್ಸ್ ಎರಡಕ್ಕೂ ಬ್ಯಾಡ್ಜ್ ಗಳು ಸ್ವಸ್ತಿಕ ರೂಪದವಿದ್ದುವಂತೆ. 1910ರಲ್ಲಿ ಡೆಟ್ರಾಯಿಟ್‌ನಲ್ಲಿ ನಿರ್ಮಾಣವಾಗುತ್ತಿದ್ದ ‘ಕ್ರಿಟ್’ ಕಾರಿನ ಮುಂಭಾಗದಲ್ಲಿ ಸ್ವಸ್ತಿಕ ಚಿಹ್ನೆಯದೇ ಎಂಬ್ಲೆಮ್. ಬ್ರಿಟನ್‌ನಲ್ಲಿ ಸ್ವಸ್ತಿಕ ಹೆಸರಿನ ನಿಯತಕಾಲಿಕ; ಸ್ವಸ್ತಿಕ ಚಿಹ್ನೆಯಿರುವ ಅಂಚೆಚೀಟಿ; ರಷ್ಯಾದಲ್ಲಿ 250 ರೂಬಲ್ ನೋಟಿನಲ್ಲಿ ಸ್ವಸ್ತಿಕ ಮುದ್ರೆ; ಕೆನಡಾದಲ್ಲಿ ಮಹಿಳೆಯರ ಐಸ್-ಹಾಕಿ ಪಂದ್ಯಾಟದಲ್ಲಿ ಸ್ವಸ್ತಿಕಾಸ್ ಹೆಸರಿನ ತಂಡ; ಲಾಸ್ ಏಂಜಲೀಸ್‌ನಲ್ಲಿ ಸ್ವಸ್ತಿಕ ಹೆಸರಿನ ಹಾಯಿದೋಣಿ ಕಂಪನಿ; ಅಟ್ಲಾಂಟಾದ ಕೋಕಾ-ಕೋಲಾ ಕಂಪೆನಿಯಿಂದ ಪ್ರಚಾರಕ್ಕೆಂದು ಸ್ವಸ್ತಿಕ ಆಕಾರದ ಲಕ್ಕೀ-ರಿಂಗ್ಸ್ ಉಚಿತ ಕೊಡುಗೆ; ಅಮೆರಿಕದ ಭೂಸೇನೆಯ ಒಂದು ತುಕಡಿಯ ಸಮವಸದಲ್ಲಿ ಸ್ವಸ್ತಿಕ ಲಾಂಛನ; ಫಿನ್‌ಲ್ಯಾಂಡ್ ದೇಶದ ಫಿನ್ನಿಶ್ ಏರ್ ಫೋರ್ಸ್ ಲಾಂಛನವೂ ಸ್ವಸ್ತಿಕವೇ ಆಗಿತ್ತು, ಪ್ರಪಂಚಯುದ್ಧದ ಬಳಿಕ ಅದು ಬದಲಾಯಿತು.

ಲಾಂಛನಗಳ ಸಂಗತಿ ಹಾಗಿರಲಿ, ಕೆನಡಾದಲ್ಲಿ ಓಂಟಾರಿಯೊ ಪ್ರಾಂತ್ಯದಲ್ಲಿ ಒಂದು ಪುಟ್ಟ ಊರು ಸ್ವಸ್ತಿಕ ಎಂಬ ಹೆಸರಿನದೇ ಇದೆಯೆಂದರೆ ನಂಬುತ್ತೀರಾ? ಅದು ಗಣಿಗಾರಿಕೆಗೆ ಪ್ರಸಿದ್ಧ. ಎರಡನೆಯ ಪ್ರಪಂಚಯುದ್ಧದ ವೇಳೆ ಆ ಊರಿನ ಹೆಸರನ್ನು ಬದಲಾಯಿಸುವ ಹುನ್ನಾರ ನಡೆದಿತ್ತಂತೆ.

ಊರವರೆಲ್ಲ ಸೇರಿ ಅದನ್ನು ಯಶಸ್ವಿಯಾಗಿ ತಡೆದರು. ಸ್ವಸ್ತಿಕ ಎಂಬ ಹೆಸರಿನ ಒಂದು ಪುಟ್ಟ ಹಳ್ಳಿ ಅಮೆರಿಕದ ನ್ಯೂಯಾರ್ಕ್ ಸಂಸ್ಥಾನದಲ್ಲೂ ಇದೆ. ಒಟ್ಟಿನಲ್ಲಿ ತಾತ್ಪರ್ಯವಿಷ್ಟೇ- ಸ್ವಸ್ತಿಕ ಅಲ್ಲಿ ಇಲ್ಲಿ ಮಾತ್ರವಲ್ಲ ಎಲ್ಲೆಲ್ಲೂ ಇದೆ, ಆಗಲೂ ಈಗಲೂ!

ಸ್ವಸ್ತಿಕ ಚಿಹ್ನೆ ಪ್ರದಕ್ಷಿಣಾಕಾರವಾಗಿ ತಿರುಗಬಹುದಾದ ಗಿರಗಿಟ್ಲೆ ಅಂತನಿಸುತ್ತದಷ್ಟೆ? ಅಪ್ರದಕ್ಷಿಣಾ ಕಾರವಾಗಿರುವ ಸ್ವಸ್ತಿಕವೂ ಇದೆ, ಬೌದ್ಧಧರ್ಮದಲ್ಲಿ ಅದಕ್ಕೆ ಸೌವಸ್ತಿಕ ಎಂದು ಹೆಸರಿದೆಯಂತೆ. ಜಪಾನ್ ಮತ್ತಿತರ ಪೂರ್ವದೇಶಗಳಲ್ಲಿ ನಕ್ಷೆಯ ಮೇಲೆ ಬೌದ್ಧ ದೇವಾಲಯದ ಗುರುತಿಗೆ ಸೌವಸ್ತಿಕದ ಬಳಕೆಯಾಗುತ್ತದೆ.

ಕೆಲವು ಸಂಸ್ಕೃತಿಗಳಲ್ಲಿ ಈ ರೀತಿಯ ಉಲ್ಟಾ ಸ್ವಸ್ತಿಕವು ಅಶುಭ ಸಂಕೇತವೆಂಬ ನಂಬಿಕೆಯೂ ಇದೆ, ಆದರೆ ಆಫ್ರಿಕನ್-ಅಮೆರಿಕನ್ ಜನಾಂಗದಲ್ಲಿ ಅದೊಂದು ಶುಭಸಂಕೇತ. ಸೌವಸ್ತಿಕಕ್ಕೂ ಸ್ವಸ್ತಿಕ ದಷ್ಟೇ ಗೌರವ ಸಲ್ಲುತ್ತದೆ. ಅಂದಹಾಗೆ ‘ದ ಜಂಗಲ್ ಬುಕ್’ ಪ್ರಖ್ಯಾತಿಯ ರುಡ್‌ಯಾರ್ಡ್ ಕಿಪ್ಲಿಂಗ್ (ಈತ ಹುಟ್ಟಿದ್ದು ನಮ್ಮ ಭಾರತದೇಶದಲ್ಲಿ ಮುಂಬಯಿಯಲ್ಲಿ) ಸ್ವಸ್ತಿಕ ಚಿಹ್ನೆಯನ್ನು ತನ್ನ ಲಾಂಛನವನ್ನಾಗಿ ಇಟ್ಟುಕೊಂಡಿದ್ದನು. 1920ರ ಸುಮಾರಲ್ಲಿ ಪ್ರಕಟವಾಗುತ್ತಿದ್ದ ಅವನ ಪುಸ್ತಕಗಳ ರಕ್ಷಾಕವಚದ ಮೇಲೆ ಸ್ವಸ್ತಿಕ ಚಿಹ್ನೆ ಇರುತ್ತಿತ್ತು.

ಹೀಗೆ ವಿಶ್ವವ್ಯಾಪಿಯಾದ ಸ್ವಸ್ತಿಕ ಚಿಹ್ನೆಗೆ ಈಗ ಜರ್ಮನಿಯಲ್ಲಿ ಬಹಿಷ್ಕಾರವಿದೆ. ನಾತ್ಸಿ ಸಂಕೇತದ ಅರ್ಥದಲ್ಲಿ ಅದನ್ನು ಪ್ರದರ್ಶಿಸುವಂತಿಲ್ಲ. ಧಾರ್ಮಿಕ ಕಾರಣಗಳಿಗಾದರೆ ವಿನಾಯಿತಿಯಿದೆ. ಎರಡನೆಯ ಪ್ರಪಂಚ ಯುದ್ಧದಲ್ಲಿ ನಾತ್ಸಿಗಳಿಂದ ಸಾಕಷ್ಟು ಪೆಟ್ಟು ತಿಂದಿದ್ದ ಅಮೆರಿಕನ್ನರಿಗೂ ಸ್ವಸ್ತಿಕ ಕಂಡರೆ ಸಂಕಟ ಶುರುವಾಗುತ್ತದೆ.

ಕೆಲ ವರ್ಷಗಳ ಹಿಂದೆ ಮೈಕ್ರೋಸಾಫ್ಟ್ ಕಂಪನಿಯ ಸಾಫ್ಟ್‌ʼವೇರ್‌ʼನಲ್ಲಿ ಒಂದು ಅಕ್ಷರಲಿಪಿ ವಿನ್ಯಾಸ (ಫಾಂಟ್)ದಲ್ಲಿ ಸ್ವಸ್ತಿಕ ಚಿಹ್ನೆ ಸೇರಿಕೊಂಡದ್ದು ದೊಡ್ಡ ಗಲಾಟೆಯಾಗಿ ಆಮೇಲೆ ಮೈಕ್ರೋಸಾಫ್ಟ್‌ ಕಂಪನಿಯು ಕ್ಷಮಾಪಣೆಯ ಸ್ಪಷ್ಟೀಕರಣ ನೀಡಿದ ಪ್ರಸಂಗವೂ ನಡೆದಿತ್ತು. ಅದೇ ರೀತಿ 2007ರಲ್ಲಿ ಝಾರಾ ಎಂಬ ಗಾರ್ಮೆಂಟ್ ಕಂಪನಿಯು ಭಾರತದಲ್ಲಿ ಉತ್ಪಾದಿಸಿ ತಂದು ಮಾರುತ್ತಿದ್ದ ಕಂಬಳಿ, ಬೆಡ್‌ಶೀಟ್‌ಗಳಲ್ಲಿ ಸ್ವಸ್ತಿಕ ಚಿಹ್ನೆಯ ವಿನ್ಯಾಸವಿದ್ದುದನ್ನು ಗಮನಿಸಿ ಆ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದುಕೊಂಡಿತ್ತು.

ಆದರೆ ಗಮನಿಸಬೇಕಾದ ಅಂಶವೆಂದರೆ ಇದು ಭಾರತೀಯ ಸಂಸ್ಕೃತಿಯಲ್ಲಿ ಸ್ವಸ್ತಿಕ ಚಿಹ್ನೆಗಿರುವ ಅರ್ಥಕ್ಕೆ ಅಪಮಾನ ಮಾಡುವುದಕ್ಕಲ್ಲ. ನಾತ್ಸಿ ಸೈನಿಕರು ಮಾಡಿದ್ದ ನರಮೇಧದ ಕರಿನೆರಳು ಆ ಸ್ವಸ್ತಿಕ ಚಿಹ್ನೆಯ ಮೂಲಕ ಅಮೆರಿಕನ್ನರ ಮನದಲ್ಲಿ ಮತ್ತೊಮ್ಮೆ ಬೀಳದಿರಲಿ ಎಂಬ ಸೆಂಟಿಮೆಂಟ್‌ ಅನ್ನು ಗೌರವಿಸುವ ಉದ್ದೇಶ ಅಷ್ಟೆ. ಅಮೆರಿಕದ ಒರೆಗನ್ ರಾಜ್ಯದ ಉಂಪ್ಕ್ವಾ ರಾಷ್ಟ್ರೀಯ ಅರಣ್ಯದಲ್ಲಿ ಇರುವ ಪರ್ವತಶ್ರೇಣಿಗೆ Swastika Mountain ಎಂಬ ಹೆಸರು 1900ರ ಆರಂಭದಲ್ಲೇ, ಅಂದರೆ ನಾತ್ಸಿಗಳು ಆ ಚಿಹ್ನೆಯನ್ನು ಬಳಸುವ ಮೊದಲು, ಮಾನವ ಇತಿಹಾಸದ ಕತ್ತಲೆಯ ಅಧ್ಯಾಯಕ್ಕೆ ಸಂಬಂಽಸುವುದಕ್ಕೂ ಮುಂಚೆಯೇ ಇಡಲಾಗಿತ್ತು.

ಸುಮಾರು 4197 ಅಡಿ ಎತ್ತರದ ಈ ಪರ್ವತಕ್ಕೆ, ಗೋವುಗಳನ್ನು ಸಾಕುತ್ತಿದ್ದ ಕ್ಲೇಟನ್ ಇ ಬರ್ಟನ್ ಎಂಬ ರೈತನಿಂದಾಗಿ ಆ ಹೆಸರು ಬಂದದ್ದು. ಅವನು ತನ್ನ ಗೋವುಗಳಿಗೆ ಸ್ವಸ್ತಿಕ ಗುರುತು ಹಾಕುತ್ತಿದ್ದನು. ಆ ಸಮಯದಲ್ಲಿ ಈ ಚಿಹ್ನೆಯನ್ನು ಶುಭದ ಸಂಕೇತವಾಗಿ ಹಲವು ಧರ್ಮಗಳಲ್ಲಿ ಬಳಸಲಾಗುತ್ತಿತ್ತು.

ಜರ್ಮನಿಯಲ್ಲಿ ನಾತ್ಸಿ ಪಕ್ಷ ಈ ಚಿಹ್ನೆಯನ್ನು ಬಳಸಿದ ನಂತರ, ಸಕಾರಾತ್ಮಕ ಅರ್ಥ ಮಸುಕಾಿತು. ಆದರೂ ಪರ್ವತದ ಹೆಸರು ಇಷ್ಟು ವರ್ಷಗಳ ಕಾಲ ಹಾಗೆಯೇ ಉಳಿದುಕೊಂಡಿತ್ತು. ಬಹುಶಃ ಒರೆಗನ್ ರಾಜ್ಯದ ಜನರಿಗೆ ಈ ಪರ್ವತದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. 2022ರಲ್ಲಿ ಇಬ್ಬರು ಚಾರಣಿ ಗರನ್ನು ಆ ಪ್ರದೇಶದಿಂದ ರಕ್ಷಿಸಿದ ಘಟನೆ ಸುದ್ದಿಯಾದಾಗ, ಪರ್ವತದ ಹೆಸರಿನ ಕಡೆ ಜನರ ಗಮನ ಸೆಳೆಯಿತು.

ಅದಾದ ಮೇಲೆ ಒರೆಗನ್ ನಿವಾಸಿಗಳು ಆ ಹೆಸರನ್ನು ಬದಲಾಯಿಸಲು ಒತ್ತಾಯಿಸತೊಡಗಿದರು. ಜಾಯ್ಸ್ ಮ್ಯಾಕ್ಲೇನ್ ಎಂಬಾತ ಅಧಿಕೃತವಾಗಿ ಒಂದು ಮನವಿಯನ್ನೂ ಸಲ್ಲಿಸಿದನು. ಸ್ವಸ್ತಿಕದ ಬದಲಿಗೆ ‘ಮೌಂಟ್ ಹ್ಯಾಲೋ’ ಎಂಬ ಹೆಸರಿಡಬೇಕೆಂದೂ, ತನ್ಮೂಲಕ ಅಲ್ಲಿನ ಯೋಂಕಾಲಾ ಕಲಪುಯಾ ಜನಾಂಗದ ನಾಯಕ ಚೀಫ್ ಹ್ಯಾಲಿಟೋ (ಹ್ಯಾಲೋ) ಹೆಸರನ್ನು ಸ್ಮರಿಸಬೇಕೆಂದೂ ಸೂಚಿಸಿದನು. ಈ ಅಹವಾಲನ್ನು ಒರೆಗನ್ ಜಿಯೋಗ್ರಾಫಿಕ್ ನೇಮ್ಸ್ ಬೋರ್ಡ್ ಅನುಮೋದಿಸಿದೆ.‌

ಅದೇನೇ ಇರಲಿ, ಧಾರ್ಮಿಕವಾಗಿ ಸ್ವಸ್ತಿಕದ ಮಹತ್ತ್ವ ಅರಿತಿರುವ ದೇಶಗಳಲ್ಲಿ ಅದರ ಘನತೆ ಗೌರವ ಗಳಿಗೇನೂ ಕುಂದು ಬಂದಿಲ್ಲ. ಲವ್, ಲೈಟ್, ಲೈಫ್ ಮತ್ತು ಲಕ್ ಇವೆಲ್ಲವನ್ನೂ ಅದು ಸಂಕೇತಿಸು ತ್ತದೆಯೆಂಬ ನಂಬಿಕೆಗೂ ಏನೇನೂ ಚ್ಯುತಿಯಾಗಿಲ್ಲ. ‌

ಬೇರೇನೂ ಬೇಡ, ಶುಭವಿವಾಹ ಸಂದರ್ಭದಲ್ಲಿ ಪುರೋಹಿತರಿಂದ “ಸುಮುಹೂರ್ತ ಸಾವಧಾನ..." ಎಂದು ಮಂತ್ರಘೋಷ ಆಗುತ್ತಿರುವಾಗ ಮಾಲೆ ಹಿಡಿದುಕೊಂಡು ನಿಂತ ವಧೂವರರ ಮಧ್ಯೆ ಹಿಡಿದದ್ದಿರುತ್ತದಲ್ಲ ಅಂತರಪಟ, ಅದರಲ್ಲಿರುವ ಚಿಹ್ನೆಯ ಅರ್ಥವಾದರೂ ಅದೇ ತಾನೆ? ಪ್ರೀತಿ, ಜ್ಯೋತಿ, ಜೀವ, ದೈವಗಳದೇ ಪ್ರತೀಕ ಅದು ಕೂಡ. ಒಳ್ಳೆಯದಾಗಿಯೇ ಇರಬೇಕೆಂಬುದನ್ನು ಮತ್ತು ಅದರಿಂದ ಒಳ್ಳೆಯದೇ ಆಗುವುದೆಂಬುದನ್ನು ಸಾರುವ ಶುಭಾಶಯದ ಸ್ವಸ್ತಿಕ!

ಶ್ರೀವತ್ಸ ಜೋಶಿ

View all posts by this author