ಹೊಸ್ಮನೆ ಮುತ್ತು
ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕೆಲವು ದಶಕಗಳ ಹಿಂದೆ ಎಲ್ಲಿ ನೋಡಿ ದರಲ್ಲಿ ಭತ್ತದ ಗzಗಳೇ ಕಾಣುತ್ತಿದ್ದವು. ಮಳೆಗಾಲದಲ್ಲಿ ಈ ಗದ್ದೆಗಳಲ್ಲಿ ‘ತರು’ ಮೀನುಗಳು ಹೇರಳವಾಗಿರುತ್ತಿದ್ದವು. ಇವು ಪೈರಿಗೆ ದಾಳಿ ಇಡುವ ಕ್ರಿಮಿ-ಕೀಟಗಳನ್ನು ತಿಂದು ವೇಗವಾಗಿ ಬೆಳೆಯುತ್ತಿದ್ದವು. ಚುರುಕಾದ ಈ ಸಣ್ಣ ಮೀನುಗಳನ್ನು ಬಲೆ ಹಾಕಿ ಅಥವಾ ಬರಿಗೈಯಿಂದ ಹಿಡಿಯುವುದು ಕಷ್ಟ.
ಇದಕ್ಕಾಗಿ ನಮ್ಮ ಹಿರಿಯರು ವಿಶಿಷ್ಟವಾದ ಸಾಧನವೊಂದನ್ನು ಕಂಡುಕೊಂಡಿದ್ದರು. ಇದನ್ನು ‘ಕೊಡಿಮೆ, ‘ಕೊಂಜೋಲು’ ಅಥವಾ ‘ಕೂರಿ’ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು.
ಅಪರೂಪದ ಹಸ್ತಕಲೆಯಾದ ಈ ಸಾಧನವನ್ನು ಸಿದ್ಧಪಡಿಸಲು ಬೇಕಿರುವುದು ಬರಿ ಕೌಶಲವಲ್ಲ; ಅತೀವ ತಾಳ್ಮೆ ಮತ್ತು ನಿಖರತೆ. ಇದರ ತಯಾರಿಕೆಗೆ ಬಿದಿರು, ಬೆತ್ತ ಅಥವಾ ಈಚಲು ಮರದ ತೆಳುವಾದ ಕಡ್ಡಿಗಳೇ ಆಧಾರ. ಇವುಗಳನ್ನು ಸಮಾನ ಅಳತೆಯ ತೆಳು ವಾದ ಪಟ್ಟಿಗಳಾಗಿ ಸೀಳಿ ನಾರಿನಿಂದ ನೈಪುಣ್ಯದಿಂದ ಹೆಣೆದು, ಶಂಕುವಿನಾಕಾರದಲ್ಲಿ ಸಿದ್ಧಪಡಿಸಲಾಗುತ್ತದೆ.
ಇದನ್ನೂ ಓದಿ: Hosmane Muttu Column: ಒನಕೆ ತೂಬು: ಪುರಾತನ ಭಾರತದ ಜಲವಿಜ್ಞಾನದ ಅದ್ಭುತ
ಇದರ ಒಳಭಾಗದ ವಿನ್ಯಾಸ ಅತ್ಯಂತ ಚತುರತೆಯಿಂದ ಕೂಡಿದ್ದು, ಮೀನು ಒಳಗೆ ಹೋಗಲು ಸುಲಭವಾದ ದಾರಿಯಿರುತ್ತದೆ, ಆದರೆ ಒಮ್ಮೆ ಒಳಗೆ ಹೋದರೆ ಮರಳಿ ಬರಲು ಸಾಧ್ಯವಾಗದಂಥ ತಾಂತ್ರಿಕತೆಯನ್ನು ಇದು ಹೊಂದಿದೆ. ಈ ನೈಸರ್ಗಿಕ ಸಾಧನಗಳು ನೀರಿನಲ್ಲಿ ದೀರ್ಘಕಾಲ ಇದ್ದರೂ ಕೊಳೆಯುವುದಿಲ್ಲ.
ಇದು ಮಲೆನಾಡಿನ ಕೃಷಿ ಸಂಸ್ಕೃತಿಯ ತಾಂತ್ರಿಕ eನಕ್ಕೆ ಸಾಕ್ಷಿಯಾಗಿದೆ. ಹಳ್ಳ ಅಥವಾ ಗದ್ದೆಗಳ ನೀರು ಹರಿದು ಹೋಗುವ ಕಿರಿದಾದ ತೋಡುಗಳಲ್ಲಿ (ಕಣಿ), ನೀರಿನ ಹರಿವಿಗೆ ಎದುರಾಗಿ ಮೀನುಗಳ ವಲಸೆಯ ಹಾದಿಯನ್ನು ಗುರುತಿಸಿ ಸರಿಯಾದ ಜಾಗದಲ್ಲಿ ಇವು ಗಳನ್ನು ಅಳವಡಿಸುತ್ತಾರೆ.
ನೀರಿನ ಹರಿವಿನ ಜತೆಗೆ ಬರುವ ಮೀನುಗಳು ನೇರವಾಗಿ ಕೂರಿಯ ಒಳಗೆ ಸೇರಿ ಸಿಲುಕಿ ಕೊಳ್ಳುತ್ತವೆ. ನಮ್ಮ ಹಿರಿಯರು ಆಧುನಿಕ ವಿಜ್ಞಾನವನ್ನು ಓದದಿದ್ದರೂ, ಭೌತಶಾಸ್ತ್ರ ಮತ್ತು ಜೀವಶಾಸ್ತ್ರದ ತತ್ವಗಳನ್ನು ಈ ಸಾಧನಗಳಲ್ಲಿ ಅಳವಡಿಸಿದ್ದಾರೆ. ಸಾಧನದ ಕಡ್ಡಿಗಳ ನಡುವೆ ಇರುವ ಸಣ್ಣ ಕಿಂಡಿಗಳು ನೀರು ಸುಲಭವಾಗಿ ಹರಿದು ಹೋಗಲು ಬಿಡುತ್ತವೆ, ಆದರೆ ಮೀನನ್ನು ಮಾತ್ರ ತಡೆಹಿಡಿಯುತ್ತವೆ. ಈ ಸಾಧನದ ಕಿಂಡಿಗಳು ನಿರ್ದಿಷ್ಟ ಗಾತ್ರ ದಲ್ಲಿರುವುದರಿಂದ ತಿನ್ನಲು ಯೋಗ್ಯವಾದ ದೊಡ್ಡ ಮೀನುಗಳು ಮಾತ್ರ ಸಿಕ್ಕಿ ಬೀಳುತ್ತವೆ.
ಇದರ ಹಿಂದೆ ಜೈವಿಕ ಸಂರಕ್ಷಣೆಯ ತತ್ವವಿದೆ. ಅತಿ ಸಣ್ಣ ಮರಿಗಳು ಕಿಂಡಿಗಳ ಮೂಲಕ ತಪ್ಪಿಸಿಕೊಂಡು ಹೋಗುವುದರಿಂದ ಜಲಚರಗಳ ಸಂತಾನೋತ್ಪತ್ತಿ ನಿರಂತರವಾಗಿ ಸಾಗುತ್ತದೆ. ಇವುಗಳಲ್ಲಿ ಯಾವುದೇ ಪ್ಲಾಸ್ಟಿಕ್ ಅಥವಾ ರಾಸಾಯನಿಕವನ್ನು ಬಳಸದ ಕಾರಣ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ಗದ್ದೆಗಳ ಜಾಗವನ್ನು ಅಡಕೆ ತೋಟಗಳು ಆಕ್ರಮಿಸಿಕೊಂಡಂತೆ ‘ಕೂರಿ’ಯಂಥ ಸಾಂಪ್ರ ದಾಯಿಕ ಪರಿಕರಗಳು ಕಣ್ಮರೆಯಾಗುತ್ತಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಾಣಿಜ್ಯ ಮೇಳದಂಥ ಜಾಗತಿಕ ವೇದಿಕೆಗಳಲ್ಲಿ ಈ ವಸ್ತು ಪ್ರದರ್ಶನಗೊಂಡಿರುವುದು ನಮ್ಮ ಗ್ರಾಮೀಣ ಜೀವನಶೈಲಿಯ ಸರಳತೆ ಮತ್ತು ತಾಂತ್ರಿಕ ಕೌಶಲಕ್ಕೆ ಸಂದ ಗೌರವವಾಗಿದೆ. ಬದಲಾದ ಕಾಲದಲ್ಲೂ ನಮ್ಮ ಪರಂಪರೆಯ ಮೌಲ್ಯ ಮಾಸಿಲ್ಲ ಎಂಬುದಕ್ಕೆ ಇದೇ ಸಾಕ್ಷಿ.