ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ರಾಮನ ಬಾಣದಿಂದ ಸೃಷ್ಟಿಯಾದ ಥಾರ್‌ ಮರುಭೂಮಿ

ಒಂದು ಬಾರಿ ಆಮಂತ್ರಿಸಿದ ದೈವಿಕ ಆಯುಧ ವ್ಯರ್ಥವಾಗಬಾರದು ಎಂಬ ಕಾರಣದಿಂದ, ಆ ಆಯುಧ ವನ್ನು ಉತ್ತರ ದಿಕ್ಕಿನ ‘ದ್ರುಮತುಲ್ಯ’ ಎಂಬ ಪ್ರದೇಶದ ಕಡೆಗೆ ಬಿಡುವಂತೆ ರಾಮನಿಗೆ ತಿಳಿಸಿದ. ಯಾಕೆಂದರೆ ಆ ಭಾಗದಲ್ಲಿ ನೀರನ್ನು ಕುಡಿಯುತ್ತಾ ಕುಕೃತ್ಯಗಳಲ್ಲಿ ತೊಡಗಿದ್ದ ಅಭೀರ ಎನ್ನುವ ದುಷ್ಟರು ವಾಸಿಸುತ್ತಿದ್ದರು. ರಾಮನು, ಸಮುದ್ರದೇವನ ಸಲಹೆಯಂತೆ ಬಾಣವನ್ನು ಆ ದಿಕ್ಕಿಗೆ ಪ್ರಯೋಗಿಸಿದ. ಅದು ಬಿದ್ದ ಪ್ರದೇಶವೇ ಇಂದಿನ ಥಾರ್ ಮರುಭೂಮಿಯಾಗಿದೆ

ಒಂದೊಳ್ಳೆ ಮಾತು

ನೂರಾರು ವರ್ಷಗಳ ಹಿಂದೆ ಸರಸ್ವತಿ ನದಿಯು ಥಾರ್ ಮರುಭೂಮಿಯನ್ನು ದಾಟಿ, ಹಿಂದೂ ಮಹಾಸಾಗರದ ಕಡೆ ಹರಿಯುತ್ತಿತ್ತು. ಆದರೆ ಕೆಲವು ಅಧ್ಯಯನಗಳು ಹೇಳುವಂತೆ, ಥಾರ್ ಪ್ರದೇಶ ದಲ್ಲಿ ಹೆಚ್ಚುತ್ತಿರುವ ಒಣ ವಾತಾವರಣದ ಕಾರಣದಿಂದ ಆ ನದಿ ನಿಧಾನವಾಗಿ ಸತ್ತು ಹೋಯಿತು.

ಪೌರಾಣಿಕ ಕಥೆಗಳ ಪ್ರಕಾರ, ರಾಮಾಯಣದ ಸಮಯದಲ್ಲಿ ಥಾರ್ ಮರುಭೂಮಿ ರಚನೆಯಲ್ಲಿ ಶ್ರೀರಾಮನಿಗೂ ಒಂದು ಪಾತ್ರವಿದೆ. ವನವಾಸದ ಸಮಯದಲ್ಲಿ, ತನ್ನ ಪತ್ನಿ ಸೀತೆಯನ್ನು ಹುಡು ಕಲು ಶ್ರೀರಾಮನು ಇಂದಿನ ರಾಮೇಶ್ವರಂನಿಂದ ಲಂಕೆಯ (ಶ್ರೀಲಂಕಾ) ಕಡೆಗೆ ಸಾಗಲು ಸಮುದ್ರ ವನ್ನು ದಾಟಬೇಕಾಯಿತು. ಸಮುದ್ರದ ನೀರು ಕಡಿಮೆಯಾಗಲಿ, ತಾನು ಹಾಗೂ ತನ್ನ ವಾನರಸೇನೆ ಲಂಕೆಗೆ ಹೋಗಲು ದಾರಿ ಸಿಗಲಿ ಎಂದು ರಾಮನು ಎರಡು ದಿನಗಳ ಕಾಲ ಸಮುದ್ರದೇವನನ್ನು ಪ್ರಾರ್ಥಿಸಿದ. ಆದರೆ ಸಮುದ್ರ ದೇವ ರಾಮನ ವಿನಮ್ರ ಪ್ರಾರ್ಥನೆಗೆ ಸ್ಪಂದಿಸಲಿಲ್ಲ. ಇದರಿಂದ ಬೇಸರಗೊಂಡ ರಾಮನು ಸಮುದ್ರ ವನ್ನು ಒಣಗಿಸುವ ಉದ್ದೇಶದಿಂದ ತನ್ನ ದೈವಿಕ ಆಯುಧ ಗಳಲ್ಲಿ ಒಂದನ್ನು ಮಂತ್ರಿಸಲು ಮುಂದಾದ. ತನ್ನ ಅಂತ್ಯ ಸಮೀಪಿಸಿದೆ ಎಂದು ಅರಿತ ಸಮುದ್ರ ದೇವ ತಕ್ಷಣವೇ ರಾಮನ ಮುಂದೆ ಪ್ರತ್ಯಕ್ಷನಾಗಿ ಕ್ಷಮೆಯಾಚಿಸಿದ.

ಇದನ್ನೂ ಓದಿ: Roopa Gururaj Column: ವಾಸ್ತು ಪುರುಷನ ಮಹತ್ವ

ನಂತರ, ರಾಮನ ಸಮಸ್ಯೆಯನ್ನು ಪರಿಹರಿಸುವ ಸೂಕ್ತ ಸಲಹೆಯನ್ನು ಆತ ಕೊಟ್ಟ. ಆದರೆ, ಒಂದು ಬಾರಿ ಆಮಂತ್ರಿಸಿದ ದೈವಿಕ ಆಯುಧ ವ್ಯರ್ಥವಾಗಬಾರದು ಎಂಬ ಕಾರಣದಿಂದ, ಆ ಆಯುಧ ವನ್ನು ಉತ್ತರ ದಿಕ್ಕಿನ ‘ದ್ರುಮತುಲ್ಯ’ ಎಂಬ ಪ್ರದೇಶದ ಕಡೆಗೆ ಬಿಡುವಂತೆ ರಾಮನಿಗೆ ತಿಳಿಸಿದ. ಯಾಕೆಂದರೆ ಆ ಭಾಗದಲ್ಲಿ ನೀರನ್ನು ಕುಡಿಯುತ್ತಾ ಕುಕೃತ್ಯಗಳಲ್ಲಿ ತೊಡಗಿದ್ದ ಅಭೀರ ಎನ್ನುವ ದುಷ್ಟರು ವಾಸಿಸುತ್ತಿದ್ದರು. ರಾಮನು, ಸಮುದ್ರದೇವನ ಸಲಹೆಯಂತೆ ಬಾಣವನ್ನು ಆ ದಿಕ್ಕಿಗೆ ಪ್ರಯೋಗಿಸಿದ.

ಅದು ಬಿದ್ದ ಪ್ರದೇಶವೇ ಇಂದಿನ ಥಾರ್ ಮರುಭೂಮಿಯಾಗಿದೆ. ಕೆಲವು ಕಾಲದ ನಂತರ ಆ ಪ್ರದೇಶದ ನೀರು ಒಣಗಿಹೋದರೂ, ರಾಮನು ಆ ಭೂಭಾಗಕ್ಕೆ ಆಶೀರ್ವಾದ ನೀಡಿದ ಕಾರಣ ಆ ಪ್ರದೇಶದಲ್ಲಿ ದನಪಾಲನೆಗೆ ಅನುಕೂಲವಾಗಿ ಉತ್ತಮ ತುಪ್ಪ, ಹಾಲು, ಹಣ್ಣುಗಳು ಹಾಗೂ ಔಷಧಿ ಯ ಗುಣ ಗಳುಳ್ಳ ಗಿಡಮೂಲಿಕೆಗಳು, ಬೇರುಗಳು ಉತ್ಪತ್ತಿಯಾಗುತ್ತಿವೆ.

ವಿಶ್ವದಲ್ಲಿನ ಅತ್ಯಂತ ನಾಗರಿಕ ಮರುಭೂಮಿಯೆಂದೇ ಥಾರ್ ಮರುಭೂಮಿ ಪ್ರಸಿದ್ಧ. ಕಾರಣ, ಜಗತ್ತಿನ ಎಲ್ಲಾ ಮರುಭೂಮಿಗಳಿಗಿಂತಲೂ ಥಾರ್ ಮರುಭೂಮಿಯಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದಲೂ ರಸ್ತೆಗಳು, ಮೂಲಸೌಕರ್ಯಗಳು ಹಾಗೂ ಮಾನವ ವಾಸಸ್ಥಾನಗಳಿವೆ.

ವಾಸ್ತವವಾಗಿ, ಸುಮಾರು 50000 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ನಾಗರಿಕತೆ ಅರಳಿ ಬೆಳೆಯಿ ತೆಂದು ಅಧ್ಯಯನಗಳು ಸೂಚಿಸುತ್ತವೆ. ಥಾರ್ ಮರುಭೂಮಿಯು ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಹರಡಿಕೊಂಡಿದೆ. ಸುಮಾರು ೮೫ ಶೇಕಡಾ ಥಾರ್ ಮರುಭೂಮಿ ಭಾರತದಲ್ಲಿದ್ದು, ಉಳಿದ ಭಾಗ ಪಾಕಿಸ್ತಾನದಲ್ಲಿ ಇದೆ. ಭಾರತದಲ್ಲಿ ಈ ಮರುಭೂಮಿಯು ಗುಜರಾತ್, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳವರೆಗೂ ವ್ಯಾಪಿಸಿದೆ.

ಭಾರತೀಯ ಥಾರ್ ಮರುಭೂಮಿಯು ವಿಶ್ವದ 18ನೇ ಅತಿ ದೊಡ್ಡ ಉಷ್ಣಮಂಡಲ ಮರುಭೂಮಿ ಯಾಗಿದ್ದು, ಅತ್ಯಂತ ಜನಸಾಂದ್ರತೆಯ ಮರುಭೂಮಿಗಳಂದಾಗಿದೆ. ರಾಜಸ್ಥಾನದ ಜನಸಂಖ್ಯೆಯ ಸುಮಾರು 40 ಶೇಕಡಾ ಜನರು ಥಾರ್ ಮರುಭೂಮಿಯಲ್ಲಿ ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ಈ ಮರುಭೂಮಿಯು ಸತ್ಲೆಜ್ ನದಿಯಿಂದ ಆರಂಭವಾಗಿ, ಗ್ರೇಟ್ ರಣ್ ಆಫ್ ಕಛ್, ಅರಾವಳಿ ಪರ್ವತಗಳು ಮತ್ತು ಇಂಡಸ್ ನದಿಯಿಂದ ಸುತ್ತುವರಿದಿದೆ.

ನಿಯಮಿತ ನೀರು ಸಂಗ್ರಹಣೆ ಮತ್ತು ಮಣ್ಣು ನಿರ್ವಹಣೆಯಿಂದ, ಥಾರ್ ಮರುಭೂಮಿ ಈಗ ನೀರಿನಿಂದ ಸಮೃದ್ಧ ಪ್ರದೇಶವಾಗಿ ಮಾರ್ಪಟ್ಟಿದೆ, ಸ್ಥಳೀಯ ಮರುಭೂಮಿ ಸಸ್ಯಗಳು ಹಾಗೂ ಹಲವು ಅಪರೂಪದ ಪಕ್ಷಿ-ಪ್ರಾಣಿಗಳಿಗೂ ನೆಲೆಯಾಗಿದೆ.

ಮನುಷ್ಯ ಮನಸ್ಸು ಮಾಡಿದರೆ ಎಂಥ ಮರಳುಗಾಡನ್ನಾದರೂ ವಾಸಯೋಗ್ಯ ಮಾಡಿಕೊಳ್ಳಲು ಸಾಧ್ಯ ಎಂಬುದಕ್ಕೆ ಥಾರ್ ಮರುಭೂಮಿ ದೊಡ್ಡ ಉದಾಹರಣೆ. ಪ್ರಪಂಚದ ಅತಿ ದೊಡ್ಡ ಮರುಭೂಮಿಗಳಲ್ಲಿ ಒಂದಾದ ಥಾರ್ ಮರುಭೂಮಿಯ ಮನುಷ್ಯ ಹಸಿರನ್ನು ಹುಟ್ಟಿಸಿ, ನೀರು ಚಿಮ್ಮಿಸಿ, ಅಪರೂಪದ ಪ್ರಾಣಿ ಪಕ್ಷಿಗಳಿಗೆ ನೆಲೆ ಕಲ್ಪಿಸಿ ಸಾಧಿಸಿದ್ದಾನೆ ಎಂದ ಮೇಲೆ ಮನುಷ್ಯ ಪ್ರಯತ್ನಕ್ಕೆ ಎಷ್ಟು ಶಕ್ತಿ ಇದೆ ಇಂದು ನೀವೇ ಯೋಚಿಸಿ...! ಮನಸ್ಸು ಮಾಡಿದರೆ ನಮ್ಮ ಕೈಲಾಗದ್ದು ಯಾವುದೂ ಇಲ್ಲ ಅಲ್ಲವೇ?

ರೂಪಾ ಗುರುರಾಜ್

View all posts by this author