ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shishir Hegde Column: ಕ್ಷಣದಲ್ಲಿ 'ಸಿಂಡ್ರೆಲ್ಲಾ' ರಾಣಿಯಾಗುವ ಸಂಚಲನಗಳು

ನಮಗೆಲ್ಲರಿಗೂ ಆಶ್ಚರ್ಯ- ‘Surprise’ ಇಷ್ಟ. ಯಾರೋ ನಮಗೆ ಅನಿರೀಕ್ಷಿತ ಖುಷಿ ವಿಷಯ ಹೇಳಿದರೆ, ‘ಸರ್ಪ್ರೈಸ್, ಹ್ಯಾಪಿ ಬರ್ತ್‌ಡೇ’ ಎಂದು ಕೇಕ್ ಮನೆಗೆ ಹಿಡಿದು ಬಂದರೆ, ಅಂತಹ ಖುಷಿಗಳ ತೂಕ ಜಾಸ್ತಿ. ಆಶ್ಚರ್ಯವನ್ನು ಬೇರೆಯವರಿಗೆ ಕೊಟ್ಟು ಅದಕ್ಕೆ ಬರುವ ಪ್ರತಿಕ್ರಿಯೆಯನ್ನು ಕಂಡು ನಾವೂ ಅದನ್ನು ಇನ್ನಷ್ಟು ಅನುಭವಿಸುತ್ತೇವೆ. ಹಾಗಂತ ಇಂತಹ ಆಶ್ಚರ್ಯಗಳು ನಮ್ಮೆದುರಿಗೆ ನಡೆದಿರಬೇಕೆಂದಿಲ್ಲ, ನಾವು ಭಾಗಿಯಾಗಿರಬೇಕೆಂದು ಕೂಡ ಇಲ್ಲ. ಯಾರಿಗೋ ಯಾವುದೋ ರೀತಿಯ ‘ಲಾಟರಿ’ ಹೊಡೆದ ಸುದ್ದಿ ಪತ್ರಿಕೆಯಲ್ಲಿ ಓದಿದರೂ ಸಾಕು.

ಶಿಶಿರಕಾಲ

ನೊಬೆಲ್. ಪ್ರತೀ ವರ್ಷ ಅಕ್ಟೋಬರ್ ತಿಂಗಳ ಮೊದಲನೇ ವಾರ ನೊಬೆಲ್ ಪ್ರಶಸ್ತಿ ಪ್ರಕಟವಾಗು ತ್ತದೆ. ಯಾರಿಗೆ ಬಂತು, ಯಾವ ವಿಷಯಕ್ಕೆ, ಯಾವ ಕಾರಣಕ್ಕೆ ಬಂತು ಇವೆಲ್ಲ ವಿಷಯಗಳು ಜಗತ್ತಿನಾದ್ಯಂತ ಮಾಧ್ಯಮಗಳಲ್ಲಿ ಒಂದೆರಡು ವಾರ ಸುದ್ದಿ- ಚರ್ಚೆಗಳಾಗುತ್ತವೆ. ದೊಡ್ಡ ಸಂಗತಿಯೇ ಸರಿ ಬಿಡಿ. ಆದರೆ ಈ ನೊಬೆಲ್ ಪ್ರಶಸ್ತಿಯ ವಿಷಯದಲ್ಲಿ ಕೆಲವೊಮ್ಮೆ ಆವಿಷ್ಕಾರ, ಸಾಧನೆಗಿಂತ ಈ ಪ್ರಶಸ್ತಿ- ಅದರ ಸುತ್ತಲಿನ ಘಟನೆಗಳೇ ಹೆಚ್ಚಿನ ಸುದ್ದಿಯಾಗಿಬಿಡುತ್ತವೆ. ‌

ಅಲ್ಲಿ ಉಂಟಾಗುವ ಆಶ್ಚರ್ಯ, ಸಂಚಲನಗಳು, ಖುಷಿ ಹೀಗೆ ಎಲ್ಲವೂ ಸುದ್ದಿ. ಬದುಕನ್ನೇ ಶಾಶ್ವತ ಬದಲಿಸಿಬಿಡುವ ಪ್ರಶಸ್ತಿಯೊಂದು ಬಂದಿದೆ ಎಂದು ತಿಳಿಯುವ ಸಂದರ್ಭದಲ್ಲಿ- ಆ ವ್ಯಕ್ತಿ ಏನು ಮಾಡುತ್ತಿದ್ದರು? ಎಲ್ಲಿದ್ದರು? ಈ ಅನಿರೀಕ್ಷಿತ ಅಚ್ಚರಿಯನ್ನು ಅವರಿಗೆ ಹೇಳಿದ್ದು ಯಾರು? ಅವರು ಹೇಗೆ ಎದುರಿಸಿದರು? ‘ನಿಮಗೆ ನೊಬೆಲ್ ಬಂದಿದೆ’ ಎಂದು ಹೇಳುವ ಆ ಇನ್ನೊಬ್ಬ ವ್ಯಕ್ತಿ ಯಾರು? ಇಂತಹ ವಿಷಯವನ್ನು ಹೇಳುವಾಗ ಅವನು ಮಾಡಿಕೊಂಡ ಮಾನಸಿಕ ತಯಾರಿ ಏನು? ಇತ್ಯಾದಿ. ಎಲ್ಲರಲ್ಲೂ ಒಂದಿಷ್ಟು ಕೆಲಸಕ್ಕೆ ಬಾರದ ಕುತೂಹಲಗಳಿರುತ್ತವೆಯಲ್ಲ, ನನ್ನ ಮಟ್ಟಿಗೆ ಇವೆಲ್ಲ ಅಂಥವು.

ನಮಗೆಲ್ಲರಿಗೂ ಆಶ್ಚರ್ಯ- ‘Surprise’ ಇಷ್ಟ. ಯಾರೋ ನಮಗೆ ಅನಿರೀಕ್ಷಿತ ಖುಷಿ ವಿಷಯ ಹೇಳಿದರೆ, ‘ಸರ್ಪ್ರೈಸ್, ಹ್ಯಾಪಿ ಬರ್ತ್‌ಡೇ’ ಎಂದು ಕೇಕ್ ಮನೆಗೆ ಹಿಡಿದು ಬಂದರೆ, ಅಂತಹ ಖುಷಿಗಳ ತೂಕ ಜಾಸ್ತಿ. ಆಶ್ಚರ್ಯವನ್ನು ಬೇರೆಯವರಿಗೆ ಕೊಟ್ಟು ಅದಕ್ಕೆ ಬರುವ ಪ್ರತಿಕ್ರಿಯೆಯನ್ನು ಕಂಡು ನಾವೂ ಅದನ್ನು ಇನ್ನಷ್ಟು ಅನುಭವಿಸುತ್ತೇವೆ. ಹಾಗಂತ ಇಂತಹ ಆಶ್ಚರ್ಯಗಳು ನಮ್ಮೆದುರಿಗೆ ನಡೆದಿರಬೇಕೆಂದಿಲ್ಲ, ನಾವು ಭಾಗಿಯಾಗಿರಬೇಕೆಂದು ಕೂಡ ಇಲ್ಲ. ಯಾರಿಗೋ ಯಾವುದೋ ರೀತಿಯ ‘ಲಾಟರಿ’ ಹೊಡೆದ ಸುದ್ದಿ ಪತ್ರಿಕೆಯಲ್ಲಿ ಓದಿದರೂ ಸಾಕು.

ಇದನ್ನೂ ಓದಿ: Shishir Hegde Column: ಟಿಕ್-ಟಿಕ್‌ ಕಾಲ ಕಳೆದಂತೆ ಹಳತು ಹೊಸತಾಗುವ ಮಾಯೆ !

ಒಂದು ಕ್ಷಣ ನಮ್ಮೊಳಗೇ ‘ಅವನಿಗೆ ಆ ಕ್ಷಣದಲ್ಲಿ ಹೇಗೆ ಅನಿಸಿರಬೇಕು?’ ಎಂದು ಕಲ್ಪಿಸಿ, ಯೋಚಿಸಿ, ಅದನ್ನೊಂದು ಕ್ಷಣ ಸ್ವಂತಕ್ಕೆ ಅನುಭವಿಸಿ ಸುಖಿಸುತ್ತೇವೆ. ನೊಬೆಲ್ ಗೆದ್ದವನಿಗೆ ಆ ಸುದ್ದಿ ಹೆಚ್ಚು ಕಡಿಮೆ ಅನಿರೀಕ್ಷಿತವಾದ ರೀತಿಯಲ್ಲಿಯೇ ತಿಳಿಯುವುದು. ಅದು ಯಾರಿಗೇ- ಬದುಕಿನ ಅತಿ ದೊಡ್ಡ ಸುದ್ದಿ. ಹಾಗಾಗಿ ಆ ವ್ಯಕ್ತಿಯ ಸುತ್ತಲಿನ ಆಶ್ಚರ್ಯ ಸಂಚಲನಗಳತ್ತ ಸಹಜ ಕುತೂಹಲ ಎಲ್ಲರಲ್ಲೂ ಇರುತ್ತದೆ. ಮಾಧ್ಯಮಗಳು ಕೂಡ ಅದನ್ನು ಅಷ್ಟೇ ಆಸಕ್ತಿಯಲ್ಲಿ ಅತಿರೋಚಕವಾಗಿಯೇ ಪ್ರಕಟಿಸುತ್ತವೆ.

ನೊಬೆಲ್ ಪ್ರಶಸ್ತಿ ಅನಿರೀಕ್ಷಿತವಾಗಲು ಕಾರಣವಿದೆ. ಅದೊಂದು ಅತಿಗೌಪ್ಯ ಆಯ್ಕೆ ಪ್ರಕ್ರಿಯೆ. ನೊಬೆಲ್ ಪ್ರಶಸ್ತಿಗೆ ವ್ಯಕ್ತಿ ತಾನೇ ತನ್ನನ್ನು ನಾಮ ನಿರ್ದೇಶಿಸಿಕೊಳ್ಳುವಂತಿಲ್ಲ, ನನಗೆ ಕೊಡಿ ಎಂದು ಕೇಳಿಕೊಳ್ಳು ವಂತಿಲ್ಲ. ಬೇರೆಯವರು ಶಿಫಾರಸು ಮಾಡಬೇಕು. ಹಾಗಂತ ಕಾಕಪೋಕರೆಲ್ಲ ಶಿಫಾರಸು ಪತ್ರ ಹಿಡಿದು ಹೋಗುವಂತೆಯೂ ಇಲ್ಲ. ಹಿಂದೆ ನೊಬೆಲ್ ಪ್ರಶಸ್ತಿ ಪಡೆದವರು, ತಜ್ಞರು- ಹೀಗೆ ನೊಬೆಲ್ ಸಮಿತಿ ‘ಇಂಥವರು ಶಿಫಾರಸು ಮಾಡಲು ಯೋಗ್ಯರು’ ಎಂಬ ಗುರುತರ ವ್ಯಕ್ತಿಗಳು ಮಾತ್ರ ಶಿಫಾರಸು ಮಾಡಬಹುದು. ಶಿಫಾರಸು ಮಾಡುವವರು ವ್ಯಕ್ತಿಯ ಅನುಮತಿ ಪಡೆಯಬೇಕಿಲ್ಲ.

ಗೌಪ್ಯವಾಗಿ ಅರ್ಹರನ್ನು ಶಿಫಾರಸು ಮಾಡಬಹುದು. ನಾನು ಇಂಥವರನ್ನು ಶಿಫಾರಸು ಮಾಡಿದ್ದೇನೆ ಎಂದು ಹೇಳಿಕೊಳ್ಳಬಹುದು, ಇಲ್ಲ ಸುಮ್ಮನಿರಬಹುದು. ಆದರೆ ಆಯಾ ವರ್ಷ ಬಂದ ಶಿಫಾರಸುಗಳ ಪೂರ್ಣ ಪಟ್ಟಿಯನ್ನು ನೊಬೆಲ್ ಸಂಸ್ಥೆ 50 ವರ್ಷ ಗೌಪ್ಯವಾಗಿಡುತ್ತದೆ. ಯಾರೆಲ್ಲರ ಶಿಫಾರಸು ಬಂದಿತ್ತು, ಅವರಲ್ಲಿ ಯಾರು ಆಯ್ಕೆಯಾದರು ಎಂಬ ಸ್ಪರ್ಧೆ-ಮಾಪಕಗಳಾಗಬಾರದು ಎಂಬ ಕಾರಣಕ್ಕೆ. ನೊಬೆಲ್ ಪ್ರಶಸ್ತಿಗೆ ಪ್ರತೀ ವರ್ಷ ಹೊಸತಾಗಿ ನಾಮ ನಿರ್ದೇಶಿತವಾಗಬೇಕು.

Screenshot_1

ಹಿಂದಿನ ವರ್ಷ ಶಿಫಾರಸು ಮಾಡಿದವರಿಗೆ ಬಂದಿಲ್ಲ ಎಂದರೆ ಅವರನ್ನು ಯಾರೋ ಅರ್ಹರು ಈ ವರ್ಷ ಪುನಃ ಶಿಫಾರಸು ಮಾಡಬೇಕು. ಆಗ ಮಾತ್ರ ಅವರು ಆ ವರ್ಷದ ಆಯ್ಕೆ ಪಟ್ಟಿಯಲ್ಲಿ ಬರುವುದು. ಸಾಮಾನ್ಯವಾಗಿ, ವಿಶೇಷವಾಗಿ ವಿಜ್ಞಾನಿಗಳಲ್ಲಿ ‘ನಾನು ಇಂಥವನನ್ನು ಶಿಫಾರಸು ಮಾಡಿದ್ದೇನೆ’ ಎಂದು ಬಹಿರಂಗ ಮಾಡುವ ಪರಿಪಾಠ ಕಡಿಮೆ.

ಹಾಗಾಗಿ ಹೆಚ್ಚಿನ ವಿಷಯಗಳಿಗೆ ಬರುವ ನೊಬೆಲ್ ಪಾರಿತೋಷಕ ಪಡೆದವನಿಗೆ ಅದು Surprise, ಅನಿರೀಕ್ಷಿತ ವಿಷಯವೇ ಆಗಿರುತ್ತದೆ. ನೊಬೆಲ್ ಸಮಿತಿ ಈ ಪ್ರಶಸ್ತಿ ಬಂದಿದೆ ಎಂಬ ಸುದ್ದಿ ಮುಟ್ಟಿಸುವ ಕೆಲಸವನ್ನು ಜಾಗರೂಕತೆಯಿಂದ ಮಾಡುತ್ತದೆ. ಪ್ರಕಟಿಸುವ ಮುನ್ನ ಸಮಿತಿಯ ಕಡೆಯಿಂದ ಆ ವ್ಯಕ್ತಿಗೆ ಫೋನ್ ಹೋಗುತ್ತದೆ. ಅವರು ಫೋನ್ ಸ್ವೀಕರಿಸದಿದ್ದರೆ, ಅವರ ಹೆಂಡತಿಗೆ/ಗಂಡನಿಗೆ ಕರೆ.

ಫೋನ್ ಮಾಡಿ- ‘ನೀವು ನೊಬೆಲ್ ಗೆದ್ದಿದ್ದೀರಿ, ಇನ್ನು ಐದು ಹತ್ತು ನಿಮಿಷದಲ್ಲಿ ನಾವು ಪ್ರಕಟಿಸು ತ್ತೇವೆ.’ ಎಂದು ಹೇಳುತ್ತಾರೆ. ಕೆಲವೊಮ್ಮೆ ಸಂಪರ್ಕ ಸಾಧ್ಯವಾಗುವುದಿಲ್ಲ. ಆಗ ಒಂದು ವಾಯ್ಸ ಮೆಸೇಜ್ ಬಿಟ್ಟು, ಹೆಚ್ಚು ಕಾಯದೆ ಸಮಿತಿ ಹೆಸರುಗಳನ್ನೂ ಪ್ರಕಟ ಮಾಡಿಬಿಡುತ್ತದೆ. ಸಾಮಾನ್ಯ ವಾಗಿ ನೊಬೆಲ್ ಗೆದ್ದವರು ಸುಲಭಕ್ಕೆ ಈ ವಿಷಯವನ್ನು ಆ ಕ್ಷಣ ನಂಬುವುದಿಲ್ಲ.

ಸಂಭ್ರಮಿಸುವುದಕ್ಕಿಂತ ಮೊದಲು ನೊಬೆಲ್ ವೆಬ್‌ಸೈಟ್‌ಗೆ ಹೋಗಿ ಹೌದೆಂದು ಐದಾರು ಬಾರಿ ರಿಫ್ರೆಶ್ ಮಾಡಿ ಖಾತರಿಪಡಿಸಿಕೊಳ್ಳುತ್ತಾರೆ. ಈ ಫೊನ್ ಕರೆ ಮತ್ತು ಅದು ಇಂಟರ್ನೆಟ್‌ನಲ್ಲಿ ಪ್ರಕಟವಾಗುವ ಆ ಐದೆಂಟು ನಿಮಿಷದ ಮಾನಸಿಕ ತುಮುಲವನ್ನು ನೊಬೆಲ್ ಗೆದ್ದವರು ಸಂದರ್ಶನದ ಪ್ರಶ್ನೆಗೆ ಉತ್ತರವಾಗಿ ವಿವರಿಸುವುದಿದೆ.

ಹೆಚ್ಚಿನವರು- ‘ಇದೇನೋ ಸುಳ್ಳು ಸುದ್ದಿಯಿರಬೇಕು, ಯಾರೋ ಅಡ್ಡನಾಡಿಗಳು ತಮಾಷೆಗೆಂದು ಮಾಡಿರಬೇಕು’ ಎಂದೇ ಅಂದುಕೊಂಡಿರುತ್ತಾರಂತೆ. ಒಟ್ಟಾರೆ ಇವತ್ತು ಸಂಜೆಯವರೆಗೆ ಸಾಮಾನ್ಯ ಬದುಕು- ವರ್ಷಕಾಲಾವಧಿಯ ಪರಿಶ್ರಮ- ಕೆಲವರಿಗಷ್ಟೇ ಗೊತ್ತಿರುವ ಸಾಧನೆ- ಅದೊಂದು ದಿನ- ಕ್ಷಣದ -ಫೋನ್ ರಿಂಗ್- ಕರೆ- ಶಾಶ್ವತ ಬದಲಾಗಿಬಿಡುವ ಬದುಕು.

ಇದೆಲ್ಲ ಸಂಚಲನದ ಕಥೆಗಳು- ಫ್ಯಾಂಟಸಿ. ಕಸಮುಸುರೆ ತೊಳೆದುಕೊಂಡಿದ್ದ ಹುಡುಗಿ ಸಿಂಡ್ರೆ ರಾಜಕುಮಾರಿಯಾದ ಕಥೆ ಇಷ್ಟವಾಗುವಂತೆ ಇಂತಹ ಕಡೆ ಏರ್ಪಡುವ ಕಥೆಗಳು ನಮ್ಮನ್ನು ರಂಜಿಸುತ್ತವೆ, ಇಷ್ಟವಾಗುತ್ತವೆ. 2012ರ ಕಥೆ. ಬ್ರಯಾನ್ ಕೋಬಿಲ್ಕಾ ಎಂಬ ವಿಜ್ಞಾನಿಗೆ ಆ ವರ್ಷದ ರಸಾಯನಶಾಸ್ತ್ರ ನೊಬೆಲ್ ಸಿಕ್ಕಿತು. ಅದನ್ನು ಹೇಳಲು ನೊಬೆಲ್ ಸಮಿತಿ ಅವನಿಗೆ ಫೊನ್ ಮಾಡಿತು. ಗೊತ್ತಿಲ್ಲದ ಫೋನ್ ನಂಬರ್ ಎಂದು ಅವನು ಕರೆ ಸ್ವೀಕರಿಸಲಿಲ್ಲ.

ಒಂದೆರಡು ಬಾರಿ ಸಂಪರ್ಕಿಸಲು ಪ್ರಯತ್ನ ಮಾಡಿ ಸಮಿತಿ ಅವನ ಹೆಸರನ್ನು ಮಾಧ್ಯಮದೆದುರು ಪ್ರಕಟ ಮಾಡಿತು. ಕೆಲವೇ ನಿಮಿಷದಲ್ಲಿ ಸುದ್ದಿ ಸ್ಥಳೀಯ ಸುದ್ದಿವಾಹಿನಿಗಳಿಗೆ ತಿಳೀತು, ಅವರೆಲ್ಲ ಅವನ ಮನೆಯೆದುರು ಜಮಾವಣೆಯಾದರು. ವಿಜ್ಞಾನಿಗೆ ಏನಾಗುತ್ತಿದೆ ಎಂದು ಗಾಬರಿ. ಅವನಿಗೆ ನೊಬೆಲ್ ಬಂದಿರುವ ಸುದ್ದಿ ಪತ್ರಕರ್ತರಿಂದ ತಿಳಿದದ್ದು.

ಅಷ್ಟಾಗುವಾಗ ಅವನ ಪಕ್ಕದ ಮನೆಯ ಹಿರಿಯ ಅಜ್ಜನೊಬ್ಬ- ಇಷ್ಟೊಂದು ಜನರು, ಪೊಲೀಸರು ಸೇರಿರುವುದು ಕಂಡು ಬ್ರಯಾನ್‌ಗೆ ಹಾರ್ಟ್ ಅಟ್ಯಾಕ್ ಅಥವಾ ಏನೋ ಅವಘಡವಾಗಿದೆ ಎಂದು ಓಡೋಡಿ ಬಂದಿದ್ದನಂತೆ. ಆ ದಿನದ ಮಟ್ಟಿಗೆ ಆ ಅಜ್ಜನೂ ಖ್ಯಾತಿ ಪಡೆದುಬಿಟ್ಟಿದ್ದ.

2020ರ ಅರ್ಥಶಾಸ್ತ್ರ ನೊಬೆಲ್ ಪಡೆದವನು ಪೌಲ್ ಮಿಲ್ಗ್ರೋಮ್. ಅವನು ನೊಬೆಲ್ ಗೆದ್ದದ್ದು ಪಕ್ಕದ ಮನೆಯವನಿಗೆ ಮೊದಲು ತಿಳಿಯಿತು. ವಾಹಿನಿಯಲ್ಲಿ ಸುದ್ದಿ ತಿಳಿದು ಬಂದ ಅವನು ಬಾಗಿಲು ಬಡಬಡ ಬಡಿದು- ‘ಯೇ ಪೌಲ್, ನಿನಗೆ ನೊಬೆಲ್ ಪ್ರಶಸ್ತಿ ಬಂದಿದೆ. ಬಾಗಿಲು ತೆಗಿ’ ಎಂದು ಪೋಸ್ಟ್ ಬಂದಿದೆ, ಹಾಲು ಬಂದಿದೆ ಎಂದು ಕದ ತಟ್ಟಿ ಹೇಳುವಂತೆ ಹೇಳಿದ್ದನಂತೆ. ಆಗೀಗ ಇಂತಹ ತಮಾಷೆಗಳು ನಡೆಯುತ್ತವೆ, ಸುದ್ದಿಯಾಗುತ್ತದೆ. ಕೆಲವೊಮ್ಮೆ ಸುದ್ದಿ ಸೃಷ್ಟಿಸಲಾಗುತ್ತದೆ. ‌

ಉದಾಹರಣೆಗೆ- ಈ ವಾರದ ಸುದ್ದಿಯಲ್ಲಿ ಅಮೆರಿಕಾದ ಸ್ಟ್ಯಾನ್ʼಫೊರ್ಡ್‌ನ ನರ ವಿಜ್ಞಾನಿ ಕಾರ್ಲ್ ಡೈಸೆರೋತ್ ಅವರಿಗೆ ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗ ನೊಬೆಲ್ ಪಾರಿತೋಷಕ ಬಂದ ಸುದ್ದಿ. ಅವರ ಸಂಶೋಧನೆ, ಅದರಲ್ಲೂ ವಿಶೇಷವಾಗಿ ‘ಆಪ್ಟೋಜೆನೆಟಿಕ್ಸ್’ ತಂತ್ರಜ್ಞಾನದಲ್ಲಿ ಮಾಡಿದ ಅಭಿವೃದ್ಧಿ, ಆವಿಷ್ಕಾರಕ್ಕೆ ಬಂದ ನೊಬೆಲ್. ಈ ತಂತ್ರಜ್ಞಾನದ ಮೂಲಕ ನಮ್ಮ ಮೆದುಳಿನ ಬಿಲಿಯನ್‌ಗಟ್ಟಲೆ ನರಕೋಶಗಳಲ್ಲಿ ನಿರ್ದಿಷ್ಟ ನರಕೋಶಗಳನ್ನು ಕೃತಕವಾಗಿ ನಿಯಂತ್ರಿಸಬಹುದು. ಈ ಆವಿಷ್ಕಾರ ದಿಂದ ಮೆದುಳಿನ ಕಾರ್ಯವೈಖರಿ ಮತ್ತು ನರಸಂಬಂಧಿ ಕಾಯಿಲೆಗಳನ್ನು ಅರ್ಥಮಾಡಿಕೊಳ್ಳುವ ಅಧ್ಯಯನಕ್ಕೆ ಹೊಸ ದಿಕ್ಕು ಸಿಕ್ಕಂತಾಗಿದೆ.

ಇದು ಅದೆಷ್ಟೋ ಹೊಸ ಆವಿಷ್ಕಾರಗಳಿಗೆ ದಾರಿದೀಪವಾಗಿದೆ. ಕಾರ್ಲ್ ಡೈಸೆರೋತ್ ಮೊನ್ನೆ ರಾತ್ರಿ ಎಂದಿನಂತೆ ಒಂದಿಷ್ಟು ರಿಸರ್ಚ್ ಕೆಲಸ ಮುಗಿಸಿ ಮಧ್ಯರಾತ್ರಿ ಹೋಗಿ ಮಲಗಿದ್ದ. ಸ್ವೀಡನ್‌ನ ನೊಬೆಲ್ ಸಮಿತಿಯವರು ಫೋನ್ ಮಾಡಿದರು, ಅವನು ಸ್ವೀಕರಿಸಲಿಲ್ಲ. ಹೆಂಡತಿಗೆ ಮಾಡಿ ಅವರಿಗೆ ಫೋನ್ ಕೊಡಿ ಎಂದರು.

ನಿದ್ರೆಗಣ್ಣಿನಲ್ಲಿಯೇ ಅವರು ಸುದ್ಧಿ ಕೇಳಿ, ಎಚ್ಚರಗೊಂಡು ಸಂಭ್ರಮಿಸಿದರು. ಇದು ನಡೆದ ಘಟನೆ. ಆದರೆ ಮಾಧ್ಯಮದವರಿಗೆ ಸುದ್ದಿ ಬೇಕಲ್ಲ. ಏನಾದರೂ ಕಥೆ ಬೇಕಲ್ಲ. ಅವನಲ್ಲಿ ನಿನ್ನ ಬದುಕು ಈಗ ಹೇಗೆ ಬದಲಾಗಿದೆ ಎಂದೆನಿಸುತ್ತಿದೆ ಇತ್ಯಾದಿ ಪ್ರಶ್ನೆಗಳನ್ನು ಕೇಳಿದರು. ನೀನು ಒಂದುವೇಳೆ ನೊಬೆಲ್ ಗೆಲ್ಲದಿದ್ದಲ್ಲಿ ಬೆಳಿಗ್ಗೆ ಏನು ಮಾಡುತ್ತಿದ್ದೆ ಎಂದು ಕೇಳಿದರು. ಅವನು ಸಹಜವಾಗಿ ನನ್ನ ಮಕ್ಕಳಿಗೆ ಶಾಲೆಗೆ ಹೋಗುವ ಬುತ್ತಿ ಕಟ್ಟಿಕೊಡುತ್ತಿದ್ದೆ ಎಂದು ಹೇಳಿದ. ಸರಿ ಅದನ್ನೇ ಮಾಡು ಎಂದು ಅವನಲ್ಲಿ ಹೇಳಿದರು. ಆ ಫೋಟೋ ತೆಗೆದು- ನಿನ್ನೆ ರಾತ್ರಿ ನೊಬೆಲ್ ಸಂಭ್ರಮ, ಬೆಳಿಗ್ಗೆ ಎದ್ದು ಸಾಮಾನ್ಯ ತಂದೆಯಾಗಿ ಎಂದೆಲ್ಲ ಹಣೆಪಟ್ಟಿಯ ಸುದ್ದಿಗಳು ಬಂದವು.

ನೊಬೆಲ್ ಬಂದರೂ ಮಕ್ಕಳ ಬುತ್ತಿಯೇ ಇವನಿಗೆ ಮುಖ್ಯ ಎಂದೆಲ್ಲ ಸುದ್ದಿ. ಅವನು ಒಳ್ಳೆಯ ವಿಜ್ಞಾನಿ, ಪ್ರಶಸ್ತಿ ಬಂದಿರುವುದು ಅದಕ್ಕೆ. ಆದರೆ ಅವನನ್ನು ಒಳ್ಳೆಯ ಗಂಡ, ಅಪ್ಪ, ಮಗ, ಸಹವರ್ತಿ ಹೀಗೆ ಎಲ್ಲಾ ಕೋನಗಳಿಂದಲೂ ಶ್ರೇಷ್ಠವಾಗಿಸಲು ಪೈಪೋಟಿಗಿಳಿದಂತಿತ್ತು. ಅವನ ಸಾಧನೆ ಅನನ್ಯ- ಆದರೆ ಇಂತಹ ಸುದ್ದಿಗಳು ಸ್ಟೇಜ್ ಮಾಡಿರಲಾಗುತ್ತದೆ. ಅಲ್ಲದಿದ್ದರೆ ಕಾರ್ಲ್ ಹೆಂಡತಿಯಲ್ಲಿ, ‘ನನಗೆ ನೊಬೆಲ್ ಬಂದಿದೆ ಯಲ್ಲ, ಇವತ್ತೊಂದು ದಿನ ಮಕ್ಕಳಿಗೆ ತಿಂಡಿ ಮಾಡಿ ಕೊಡು ಮಾರಾಯ್ತಿ’ ಎಂದರೆ ಅವನ ಹೆಂಡತಿ ಇಲ್ಲ, ನೀವೇ ಮಾಡಬೇಕು ಎಂದು ಅಷ್ಟು ಜನರ ಎದುರು ಹಠ ಹಿಡಿಯುತ್ತಿದ್ದಳೇ? ಇಲ್ಲವಲ್ಲ.

ಎಲ್ಲರಿಗೂ ಸುದ್ದಿ ಒಂದು ಕಥೆಯಾಗಿರಬೇಕು. ಹಾಗಂತ ಈಗಿನ ಕಾಲದಲ್ಲಿ ಖ್ಯಾತಿ- ರಾತ್ರೋರಾತ್ರಿ ಜಗದ್ವಿಖ್ಯಾತಿ ಪಡೆಯಲು ನೊಬೆಲ್ ಪ್ರಶಸ್ತಿಯೇ ಬರಬೇಕೆಂದೇನೂ ಇಲ್ಲ. ಯಾರು ಯಾರು, ಯಾವ ಯಾವುದೋ ಕಾರಣಕ್ಕೆ ಖ್ಯಾತರಾಗಿಬಿಡುತ್ತಾರೆ. ಈಗೆರಡು ವರ್ಷದ ಹಿಂದೆ ಬಂಗಾಳದ ಯಾವುದೋ ಊರಿನ ಶೇಂಗಾ ಮಾರುವವನ ಕಿರುಚು ಹಾಡು ‘ಕಚ್ಚಾ ಬಾದಾಮ್..’ ವೈರಲ್ ಆಗಿ ಅವನು ಎಷ್ಟು ಫೇಮಸ್ ಆಗಿಬಿಟ್ಟಿದ್ದ. ಅಂತಹ ಕಾಲ ಇದು. ಹಿಂದಿನ ವರ್ಷ ನಡೆದ ಮಜಾ ಕಥೆ ಕೇಳಿ.

ನಟಿ ಪ್ರಿಯಾಂಕಾ ಚೋಪ್ರಾ ಗಂಡ ನಿಕ್ ಜೊನಾಸ್ ಅಮೆರಿಕಾದ ಪಾಪ್ ತಾರೆ. ಅವನ ಅಣ್ಣ ತಮ್ಮಂದಿರ ಪಾಪ್ ಸಂಗೀತ ಬ್ಯಾಂಡ್- ಜೊನಾಸ್ ಬ್ರದರ್ಸ್ ಬಹಳ ಜನಪ್ರಿಯ. ಅವರ ಸಂಗೀತ ಎಂದರೆ ಮಂದಿ ಕಿಕ್ಕಿರಿದು ಸೇರುತ್ತಾರೆ. ಸ್ಟೇಡಿಯಂಗಳು ತುಂಬುತ್ತವೆ. ಅಂತಹ ಕಾನ್ಸರ್ಟ್‌ನಲ್ಲಿ, ನೆರೆದ ಜನರಲ್ಲಿ ಯಾರೋ ಒಬ್ಬ ವ್ಯಕ್ತಿ ಮೊಬೈಲ್‌ನಲ್ಲಿ ‘ಸ್ಕಾಟ್ ಕೆಲ್ಲಿ’ ಎಂಬ ವ್ಯಕ್ತಿಯ ಬಯೋ ಡೇಟಾವನ್ನು ಜೂಮ್ ಮಾಡಿ ನೋಡುತ್ತಿದ್ದ. ಅವನ ಮೊಬೈಲ್ ಅನ್ನು ಜೂಮ್ ಮಾಡಿ, ವಿಡಿಯೋ ಮಾಡಿ ಇಂತಹ ದೊಡ್ಡ ಸಂಗೀತ ಕಛೇರಿಗೆ ಬಂದಿರುವವನು ಸಂಗೀತ ಸವಿಯುವುದು ಬಿಟ್ಟು ಬಯೋಡೇಟಾ ನೋಡಿಕೊಳ್ಳುತ್ತಿದ್ದಾನೆ!

ಇವನೆಂತಹ ಅರಸಿಕ, ಈ ಸ್ಕಾಟ್ ಕೆಲ್ಲಿಗೆ ಕೆಲಸ ಸಿಗಲಿ ಎಂದು ಯಾರೋ ರೀಲ್ಸ್ ಮಾಡಿ ಹಾಕಿದರು. ಈ ವಿಷಯ ಯಾವ ಮಟ್ಟಿಗೆ ಚರ್ಚೆಯಾಯಿತೆಂದರೆ ಐವತ್ತರವತ್ತು ಮಿಲಿಯ ಪ್ರತಿಕ್ರಿಯೆಗಳು ಬಂದುವು. ಖುದ್ದು ಜೊನಾಸ್ ಅಣ್ಣ ತಮ್ಮಂದಿರು ಬಂದು ಸ್ಕಾಟ್ ಕೆಲ್ಲಿಗೆ ಬೇಗ ಕೆಲಸ ಸಿಗಲಿ ಎಂದು ತಮಾಷೆ ಮಾಡಿದರು.‌

ಸ್ಕಾಟ್ ಕೆಲ್ಲಿ ರಾತ್ರೋರಾತ್ರಿ ಜನಪ್ರಿಯನಾಗಿಬಿಟ್ಟ. ಅಸಲಿಗೆ ಸ್ಟೇಡಿಯಂನಲ್ಲಿ ಸ್ಕಾಟ್ ಕೆಲ್ಲಿ ಇರಲೇ ಇಲ್ಲ. ಆ ಕಛೇರಿ ನಡೆಯುವಾಗ ಅವನೆ ನಿದ್ರೆ ಮಾಡುತ್ತಿದ್ದ. ಅವನೊಬ್ಬ ನಿರುದ್ಯೋಗಿ. ತನ್ನ ಬಯೋಡಾಟವನ್ನು ನಾಲ್ಕಾರು ಕಂಪನಿಗಳಿಗೆ ಕಳುಹಿಸಿದ್ದ. ಅದರಲ್ಲಿ ಯಾರೋ ಒಬ್ಬಾತ ಆ ಸ್ಟೇಡಿಯಂನಲ್ಲಿ ಕೂತಾಗ ಬಂದ ಇಮೇಲ್‌ನೊಳಗಿನ ಬಯೋಡೇಟಾ ಜೂಮ್ ಮಾಡಿ ನೋಡಿದ್ದಾನೆ.

ಪಾಪ ಸ್ಕಾಟ್ ಕೆಲ್ಲಿ- ನಿಷ್ಕಾರಣ ಜಗದ್ವಿಖ್ಯಾತಿ ಪಡೆದುಬಿಟ್ಟ- ಪ್ರಯೋಜನವೇನೂ ಆಗಲಿಲ್ಲ. ಫೈನಲ್ಲಿ ಹಿಂದಿನ ವರ್ಷ ಅಲ್ಲಿನ ಲೂರ್ವ್ ಸಂಗ್ರಹಾಲಯದಲ್ಲಿ ಹಗಲು ದರೋಡೆಯಾಗಿತ್ತು. ದೊಡ್ಡ ಸುದ್ದಿ. ಆಗ ಅಬ್ಬ ಜೇಂಸ್ ಬಾಂಡ್ ರೀತಿಯಲ್ಲಿ ಬಟ್ಟೆ ಧರಿಸಿ ಇದ್ಯಾವುದರ ಅರಿವಿಲ್ಲದೆ ಪೊಲೀಸರನ್ನು ದಾಟಿ ಹೋಗುತ್ತಿದ್ದ. ಅವನ ಫೋಟೋ ತೆಗೆದು ಯಾರೋ ಪ್ರಕಟಿಸಿದರು. ಅದು ಇಂಟರ್ನೆಟ್‌ನಲ್ಲಿ ದೊಡ್ಡ ಸುದ್ದಿ.

ಅವನೇ ಕಳ್ಳನೇ, ತನಿಖಾಧಿಕಾರಿಯೇ? ಏನೇನೋ ಪ್ರಶ್ನೆ. ಅವನ ಫೋಟೋ ಆ ದಿನ ಜಗದ್ವಿಖ್ಯಾತಿ ಪಡೆದ ನಂತರವೇ ಎಲ್ಲರಿಗೂ ಅವನು ಹದಿನೈದು ವರ್ಷದ, ಇತ್ತಿಂದತ್ತ ಹಾದು ಹೋಗುತ್ತಿದ್ದ ಹುಡುಗ ಎಂದು ಗೊತ್ತಾದದ್ದು. ಇವೆಲ್ಲ ಪುಕ್ಸಟ್ಟೆ ಖ್ಯಾತಿಗಳು, ಬಯಸಿದ್ದೂ ಅಲ್ಲ, ಪ್ರಯೋಜನವೂ ಇಲ್ಲ. ಅಮೆರಿಕಾದಲ್ಲಿ ಲಾಟರಿಗಳು ಬಹಳ ಜನಪ್ರಿಯ. ಚಿಕ್ಕಪುಟ್ಟ ಅಂಗಡಿಗಳಲ್ಲಿ, ಪೆಟ್ರೋಲ್ ಬ್ಯಾಂಕುಗಳಲ್ಲಿ ಲಾಟರಿ ಮಾರುವಷ್ಟು ವ್ಯಾಪಕ.

ಕೆಲವೊಮ್ಮೆ ನೂರಾರು ಮಿಲಿಯನ್ ಒಬ್ಬನೇ ವ್ಯಕ್ತಿಗೆ ಬಂದುಬಿಡುತ್ತದೆ. ಇಂಥವೆಲ್ಲ ಶುದ್ಧ ಅದೃಷ್ಟದಿಂದ ಬರುವ ಖ್ಯಾತಿಗಳು. ಆದರೆ ಇಲ್ಲಿಯೂ ಘಟನೆಗಿಂತ ಮೊದಲು ಮತ್ತು ಆಮೇಲೆ ಎಂಬ ಕಥೆಗಳಿರುತ್ತವೆ. ಕೆಲವು ಖ್ಯಾತಿಗಳು ಚಿತ್ರವಿಚಿತ್ರವಾಗಿ ಬರುತ್ತವೆ. ಉದಾಹರಣೆಗೆ ಬಾನು ಮುಷ್ತಾಕ್ ಮತ್ತು ಬುಕರ್ ಪ್ರಶಸ್ತಿ. ಬಾನು ಮುಷ್ತಾಕ್ ಒಳ್ಳೆಯ ಬರಹಗಾರರೇ. ಅದರಲ್ಲಿ ಅನುಮಾನವಿಲ್ಲ. ಆದರೆ ವಿಷಯ ಏನೆಂದರೆ ಬುಕರ್ ಪ್ರಶಸ್ತಿ ಬಂದಿರುವುದು ದೀಪಾ ಬಸ್ತಿ ತರ್ಜುಮೆ ಮಾಡಿರುವ ಆಯ್ದ ಕಥೆಗಳ ಇಂಗ್ಲಿಷ್ ಅವತರಣಿಕೆಗೆ.

ಇದು ಮೂಲ ಇಂಗ್ಲಿಷ್‌ನಲ್ಲಿಯೇ ಇದ್ದಷ್ಟು ಒಳ್ಳೆಯ ತರ್ಜುಮೆಯಾಗಿದೆ ಎಂದು ಕೊಟ್ಟ ಪ್ರಶಸ್ತಿ. ಹಾಗಂತ ನಾನಿಲ್ಲಿ ಬಾನು ಮುಷ್ತಾಕ್ ಅಪಮೌಲ್ಯ ಮಾಡುತ್ತಿಲ್ಲ. ಕೃತಿ ಮೂಲ ಅವರದ್ದೇ. ಮತ್ತು ಈ ಪ್ರಶಸ್ತಿಯನ್ನು ಅವರಿಬ್ಬರೂ ಹಂಚಿಕೊಂಡಿರುವುದು ಯೋಗ್ಯವಾಗಿಯೇ ಇದೆ. ಆದರೆ ಬಾನು ಮುಷ್ತಾಕ್ ಖ್ಯಾತಿಯ ವಿಷಯಕ್ಕೆ ಬಂದಾಗ ಅದು ಮೌಲ್ಯೋತ್ಕರ್ಷವಾದದ್ದು ಅಷ್ಟೇ ಕಷ್ಟವಾದ ಇನ್ನೊಬ್ಬರ ಇನ್ನೊಂದು ಕೆಲಸದಿಂದ. ಅದಕ್ಕಿಂತ ಮೊದಲು ಬಾನು ಮುಷ್ತಾಕ್ ಕರ್ನಾಟಕದಾಚೆ ಎಷ್ಟು ಜನರಿಗೆ ಗೊತ್ತಿತ್ತು? ಆದರೆ ಈಗ ಅವರ ಕಥಾಸಂಕಲನಗಳ ಮೌಲ್ಯ ಕನ್ನಡಿಗರ ಕಣ್ಣಿನಲ್ಲಿಯೂ ಈ ಮೂಲಕ ಹೆಚ್ಚಿದೆ.

ಕೆಲವು ಖ್ಯಾತಿಗಳು ನಿಧಾನ. ಉದಾ- ಚಿತ್ರಕಾರ ವಿನ್ಸೆಂಟ್ ವ್ಯಾನ್ ಗೌ. ಅವನು 1980ರಲ್ಲಿ ಬಿಡಿಸಿದ ಚಿತ್ರಗಳು ಈಗ ಮಿಲಿಯ- ನೂರು, ಸಾವಿರಕೋಟಿ ಮೌಲ್ಯದಲ್ಲಿ ಬಿಕರಿಯಾಗುತ್ತವೆ. ವ್ಯಾನ್ ಗೌ ಎಂದರೆ ಇವತ್ತು ಚಿತ್ರ ಜಗತ್ತಿನ ದೇವರು. ಆದರೆ ಅವನಿಗೆ ಯಾವುದೇ ಸಮಿತಿಯಿಂದ ‘ನೀವು ಪ್ರಶಸ್ತಿ ಗೆದ್ದಿದ್ದೀರಿ’ ರಾತ್ರಿ ಫೋನ್ ಬರಲಿಲ್ಲ. ಯಾರೂ ಹಾರ ತುರಾಯಿ ಹಾಕಲಿಲ್ಲ.

ಅವನು ಸತ್ತ ದಶಕಗಳ ನಂತರ ಅವನಿಗೆ ಖ್ಯಾತಿ ಬಂತು. ಅವನು ಇದ್ಯಾವುದನ್ನೂ ನೋಡಲೂ ಇಲ್ಲ, ಕಲ್ಪಿಸಿಕೊಂಡಿರಲಿಕ್ಕೂ ಇಲ್ಲ. ಖ್ಯಾತಿಯಷ್ಟೇ ಅಲ್ಲ, ಅಪಖ್ಯಾತಿಗಳೂ ಹಾಗೆಯೇ. ವ್ಯಕ್ತಿಯ ಮೇಲಿನ ಅಭಿಪ್ರಾಯ ಬದಲಿಸಿಕೊಳ್ಳಲು ಜಗತ್ತಿಗೆ ಸಮಯವೇ ಬೇಕಾಗಿಲ್ಲ. ಹೆಚ್ಚಾಗಿ ಖ್ಯಾತಿಯ ಕ್ಯಾಚ್‌ಅಪ್- ವೇಗ ಹಿಡಿಯುವಲ್ಲಿ ವ್ಯಕ್ತಿ ಹಿಂದೆ ಬೀಳುತ್ತಾನೆ. ಕೆಲವೊಮ್ಮೆ ಎಡವುತ್ತಾನೆ. ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿಯಂತೆ.

ಶಿಶಿರ್‌ ಹೆಗಡೆ

View all posts by this author