ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಅಪ್ರತಿಮ ಸಾಧಕಿ “ ಸ್ಕ್ವಾಡ್ರನ್ ಲೀಡರ್ ಸಾನ್ಯಾ”

ಭಾರತೀಯ ವಾಯುಪಡೆಯ (IAF) ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು “ ಸ್ಕ್ವಾಡ್ರನ್ ಲೀಡರ್ ಸಾನ್ಯಾ” ಅವರದ್ದು. ಭಾರತೀಯ ವಾಯುಪಡೆಯಲ್ಲಿ ಅತ್ಯುನ್ನತ ಮತ್ತು ಅತ್ಯಂತ ಪ್ರತಿಷ್ಠಿತ ಬೋಧನಾ ಶ್ರೇಣಿಯಾದ “ಕ್ಯಾಟ್-ಎ” (Cat-A) ಕ್ವಾಲಿಫೈಡ್ ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಪಟ್ಟವನ್ನು ಮುಡಿಗೇರಿಸಿ ಕೊಂಡ ಭಾರತದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಸಾನ್ಯಾ ಪಾತ್ರರಾಗಿದ್ದಾರೆ.

ಒಂದೊಳ್ಳೆ ಮಾತು

ಕೆಲವರು ಫೈಟರ್ ಜೇಟ್‌ಗಳನ್ನು ಹಾರಿಸುತ್ತಾರೆ. ಆದರೆ ಇನ್ನು ಕೆಲವರು, ನಾಳೆ ಆ ಜೇಟ್‌ಗಳನ್ನು ಹಾರಿಸಲಿರುವ ಧೀರರನ್ನು ರೂಪಿಸುತ್ತಾರೆ. ಭಾರತೀಯ ವಾಯುಪಡೆಯ (IAF) ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು “ ಸ್ಕ್ವಾಡ್ರನ್ ಲೀಡರ್ ಸಾನ್ಯಾ” ಅವರದ್ದು. ಭಾರತೀಯ ವಾಯುಪಡೆಯಲ್ಲಿ ಅತ್ಯುನ್ನತ ಮತ್ತು ಅತ್ಯಂತ ಪ್ರತಿಷ್ಠಿತ ಬೋಧನಾ ಶ್ರೇಣಿಯಾದ “ಕ್ಯಾಟ್-ಎ” (Cat-A) ಕ್ವಾಲಿಫೈಡ್ ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಪಟ್ಟವನ್ನು ಮುಡಿಗೇರಿಸಿ ಕೊಂಡ ಭಾರತದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಸಾನ್ಯಾ ಪಾತ್ರರಾಗಿದ್ದಾರೆ. ಇದು ಕೇವಲ ಒಂದು ಪ್ರಚಾರ ಅಥವಾ ಬಡ್ತಿಯಲ್ಲ; ಇದು ಭಾರತೀಯ ಸೈನಿಕ ಇತಿಹಾಸದ ಒಂದು ಐತಿಹಾಸಿಕ ಮೈಲಿಗಲ್ಲು.

2015 ರಲ್ಲಿ ಭಾರತೀಯ ವಾಯುಪಡೆಯ ಫ್ಲೈಯಿಂಗ್ ಬ್ರಾಂಚ್‌ಗೆ ನಿಯೋಜನೆಗೊಂಡ ಸಾನ್ಯಾ ಅವರಿಗೆ, ಆಕಾಶವೇ ಆಕೆಯ ಪ್ರೌಢಿಮೆಯನ್ನು ಸ್ಥಾಪಿಸುವ ಅಂಗಳವಾಗಿತ್ತು. ಬಾಲ್ಯದಲ್ಲಿ ನೀಲಿ ಆಕಾಶದಲ್ಲಿ ಹಾರುವ ಫೈಟರ್ ಜೇಟ್‌ಗಳನ್ನು ನೋಡಿ ಕಣ್ಣು ಅರಳಿಸುತ್ತಿದ್ದ ಕೋಟ್ಯಂತರ ಭಾರತೀಯ ಹೆಣ್ಣುಮಕ್ಕಳಲ್ಲಿ ಸಾನ್ಯಾ ಕೂಡ ಒಬ್ಬರಾಗಿದ್ದರು. ಆದರೆ, ಸಾನ್ಯಾ ಕೇವಲ ಕನಸು ಕಾಣಲಿಲ್ಲ; ಆ ಕನಸಿಗೆ ಕಠಿಣ ಪರಿಶ್ರಮದ ರೆಕ್ಕೆಗಳನ್ನು ಕಟ್ಟಿ ಹಾರಲು ಹೊರಟರು. ವಾಯುಪಡೆ ಯಲ್ಲಿ 'ಕ್ಯಾಟ್-ಎ' ಇನ್ಸ್ಟ್ರಕ್ಟರ್ ಆಗುವುದು ಎಂದರೆ ಸಾಮಾನ್ಯ ವಿಷಯವಲ್ಲ . ಇದು ಅತ್ಯಂತ ಕಠಿಣವಾದ ತಾಂತ್ರಿಕ ಪರೀಕ್ಷೆಗಳು, ಅತ್ಯುನ್ನತ ಮಟ್ಟದ ಹಾರಾಟ ಕೌಶಲ್ಯ ಮತ್ತು ಒತ್ತಡದ ಸಂದರ್ಭಗಳಲ್ಲಿಯೂ ಅಚಲವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೇಡುತ್ತದೆ. ವರ್ಷ ಗಳ ಕಾಲ ನಿರಂತರ ಶ್ರಮ, ಅಪ್ರತಿಮ ತಾಂತ್ರಿಕ ಶ್ರೇಷ್ಠತೆ ಮತ್ತು ತೀವ್ರ ಒತ್ತಡದ ನಡುವೆಯೂ ಶಾಂತವಾಗಿ ಕಾರ್ಯನಿರ್ವಹಿಸುವ ಅದ್ಭುತ ಗುಣ ಸಾನ್ಯಾ ಅವರನ್ನ ಈ ಸಾಧನೆಯ ಶಿಖರಕ್ಕೆ ತಂದು ನಿಲ್ಲಿಸಿದೆ.

ಇದನ್ನೂ ಓದಿ: Roopa Gururaj Column: ವಯಸ್ಸು ದೇಹಕ್ಕಷ್ಟೇ, ಮನಸ್ಸಿಗಲ್ಲ !

'ಕ್ಯಾಟ್-ಎ' ಇನ್ಸ್ಟ್ರಕ್ಟರ್ ಆಗಿ ಸಾನ್ಯಾ ಅವರ ಹೆಗಲ ಮೇಲಿರುವ ಜವಾಬ್ದಾರಿ ಅಪಾರವಾದದ್ದು. ಅವರು ಕೇವಲ ವಿಮಾನ ಹಾರಿಸುವುದನ್ನು ಕಲಿಸುವುದಿಲ್ಲ; ಬದಲಿಗೆ ಭಾರತದ ಭವಿಷ್ಯದ ಫೈಟರ್ ಪೈಲಟ್‌ಗಳನ್ನು ಸಿದ್ಧಪಡಿಸುತ್ತಾರೆ. ಇತರ ಫ್ಲೈಯಿಂಗ್ ಇನ್ಸ್ಟ್ರಕ್ಟರ್‌ಗಳಿಗೆ ಮಾರ್ಗದರ್ಶನ ನೀಡುವ ಮಹತ್ತರ ಜವಾಬ್ದಾರಿ ಇವರ ಮೇಲಿರುತ್ತದೆ.

ಯುದ್ಧದ ತೀವ್ರ ಒತ್ತಡದ ಪರಿಸ್ಥಿತಿಯಲ್ಲಿ, ಪ್ರತಿ ಸೆಕೆಂಡ್ ಜೀವನ್ಮರಣದ ಹೋರಾಟವಾಗಿರುವಾಗ ಅತ್ಯಂತ ನಿಖರವಾಗಿ ನಿರ್ಧಾರ ಕೈಗೊಳ್ಳುವುದನ್ನು ಇವರು ಯುವ ಪೈಲಟ್‌ಗಳಿಗೆ ಕಲಿಸಿ ಕೊಡುತ್ತಾರೆ. ಅವರು ಕೇವಲ ಹಾರಾಟದ ತಂತ್ರಗಳನ್ನು ಕಲಿಸುವುದಿಲ್ಲ; ಬದಲಾಗಿ ದೇಶದ ರಕ್ಷಣೆಗೆ ನಿಲ್ಲುವ ವೀರರಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಸಮಯಪ್ರಜ್ಞೆಯನ್ನು ಬಿತ್ತುತ್ತಿದ್ದಾರೆ. ಇಂದು ಸಾನ್ಯಾ ಕೇವಲ ದೇಶಕ್ಕಾಗಿ ಹಾರುತ್ತಿಲ್ಲ, ಬದಲಿಗೆ ಭಾರತದ ಮುಂದಿನ ತಲೆಮಾರಿನ 'ಆಕಾಶ ಯೋಧರನ್ನು' (Air Warriors) ರೂಪಿಸುತ್ತಿದ್ದಾರೆ.

ಸ್ಕ್ವಾಡ್ರನ್ ಲೀಡರ್ ಸಾನ್ಯಾ ಅವರ ಈ ಯಶೋಗಾಥೆ ಕೇವಲ ವಾಯುಪಡೆಗೆ ಸೀಮಿತವಾಗಿಲ್ಲ; ಇದು ಇಡೀ ಭಾರತ ಹೆಮ್ಮೆ ಪಡುವಂತಹ ಕ್ಷಣ. ಭಾರತದ ಹೆಣ್ಣುಮಗಳೊಬ್ಬಳು ಆಕಾಶದ ಎತ್ತರಕ್ಕೆ ಬೆಳೆದು ನಿಂತು ದೇಶದ ಹೆಮ್ಮೆಯ ರಕ್ಷಕರನ್ನು ಸಜ್ಜುಗೊಳಿಸುತ್ತಿರುವುದು ನಾರಿ ಶಕ್ತಿಯ ಅಪ್ರತಿಮ ಉದಾಹರಣೆ.

ಭಾರತೀಯ ವಾಯುಪಡೆಯ ಈ ಸಾಧಕಿ ಇಡೀ ಭಾರತದ ಹೆಣ್ಣುಮಕ್ಕಳಿಗೆ ಹೊಸ ಆಕಾಶವನ್ನೇ ತೆರೆದಿದ್ದಾರೆ. ಮದುವೆಯಾದ ಸ್ವಲ್ಪವೇ ಸಮಯಕ್ಕೆ ವರದಕ್ಷಣೆಗಾಗಿ ಅಥವಾ ಮತ್ಯಾವುದೋ ವಿಷಯಕ್ಕಾಗಿ ಹಲ್ಲೆಗೊಳಗಾಗುವ ಪ್ರಾಣವನ್ನೇ ಕಳೆದುಕೊಳ್ಳುವ ಹೆಣ್ಣು ಮಕ್ಕಳ ಬಗ್ಗೆ ಸುದ್ದಿ ಪತ್ರಿಕೆಗಳಲ್ಲಿ ಓದುವಾಗ ಎದೆ ಒಡೆಯುತ್ತದೆ. ಕಷ್ಟಪಟ್ಟು ವಿದ್ಯಾ ಬುದ್ಧಿ ಕಲಿಸಿ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಿ ಆತ್ಮವಿಶ್ವಾಸದಿಂದ ಬದುಕುವ ಧೈರ್ಯವನ್ನು ತುಂಬುವ ಕೆಲಸ ನಮ್ಮದು.

ಪರಿಸ್ಥಿತಿ ಕೈ ಮೀರಿದರೆ ಸ್ವತಂತ್ರವಾಗಿ ಬದುಕಿ ಜೀವನ ನಡೆಸುವ ಆತ್ಮಸ್ಥೈರ್ಯ ಈ ಹೆಣ್ಣು ಮಕ್ಕಳಲ್ಲಿ ನಾವೇ ತುಂಬಬೇಕು. ಬರಿ ವಿದ್ಯೆ ಬುದ್ಧಿ ಇದ್ದರೆ ಸಾಲದು, ಬದುಕುವ ಛಲ ಪರಿಸ್ಥಿತಿಗಳು ಕೈ ಮೀರಿದರೆ ತಮ್ಮ ಯೋಗಕ್ಷೇಮವನ್ನು ಆರಿಸಿಕೊಂಡು ಬದುಕಿ ತೋರಿಸುವ ಧೈರ್ಯ ಈ ಹೆಣ್ಣು ಮಕ್ಕಳಿಗೆ ಇರಬೇಕು. ಪ್ರತಿ ಮನೆಯಲ್ಲೂ ಇಂತಹ ಹೆಣ್ಣು ಮಕ್ಕಳನ್ನು ಬೆಳೆಸೋಣ.

ರೂಪಾ ಗುರುರಾಜ್

View all posts by this author