ಒಂದೊಳ್ಳೆ ಮಾತು
ಸತ್ಯಯುಗದ ಆರಂಭದ ಕಾಲವದು. ಕಶ್ಯಪ ಮಹರ್ಷಿ ಮತ್ತು ದಿತಿ ದೇವಿಯ ಪುತ್ರರಾದ ಹಿರಣ್ಯಾಕ್ಷ ಮತ್ತು ಹಿರಣಕಶಿಪು ಎಂಬ ಇಬ್ಬರು ದೈತ್ಯರು ಬ್ರಹ್ಮನಿಂದ ಅಪ್ರತಿಮ ವರಗಳನ್ನು ಪಡೆದು ಅಹಂಕಾರದಿಂದ ವರ್ತಿಸುತ್ತಿರುತ್ತಾರೆ. ಅದರಲ್ಲಿ ಹಿರಣ್ಯಾಕ್ಷನು ಇಡೀ ಬ್ರಹ್ಮಾಂಡವನ್ನೇ ನಡುಗಿಸುವಂತಹ ಮಹಾ ಬಲಶಾಲಿಯಾಗಿರುತ್ತಾನೆ.
ತನ್ನ ಶಕ್ತಿಯ ಮದದಿಂದ ಆತ ದೇವತೆಗಳಿಗೆ ಪೀಡೆ ಕೊಡಲಾರಂಭಿಸುತ್ತಾನೆ. ಅಷ್ಟೇ ಅಲ್ಲದೆ, ಇಡೀ ಜಗತ್ತಿಗೆ ಆಧಾರವಾಗಿರುವ, ಸಕಲ ಜೀವರಾಶಿಗಳನ್ನು ತನ್ನ ಮಡಿಲಿನಲ್ಲಿ ಸಲಹುತ್ತಿರುವ ಭೂದೇವಿಯನ್ನು ಬಲವಂತವಾಗಿ ಅಪಹರಿಸಿ, ಕಡುಗತ್ತಲಿನಿಂದ ಕೂಡಿದ ಪ್ರಳಯದ ಮಹಾಸಮುದ್ರದ ಆಳದಲ್ಲಿ ಬಚ್ಚಿಡುತ್ತಾನೆ.
ತನ್ನ ಅಸ್ತಿತ್ವವನ್ನೇ ಕಳೆದುಕೊಂಡು, ಸಾಗರದ ಆಳದ ಕತ್ತಲೆಯಲ್ಲಿ ಮುಳುಗುತ್ತಿದ್ದ ಭೂದೇವಿ ಅಸಹಾಯಕಳಾಗಿ ರಕ್ಷಣೆಗಾಗಿ ಆಕ್ರಂದಿಸುತ್ತಾಳೆ. ಇತ್ತ ಭೂಮಿಯಿಲ್ಲದೆ ಜಗತ್ತಿನ ಸೃಷ್ಟಿ ಕಾರ್ಯ ಹೇಗೆ ಸಾಧ್ಯ? ಎಂದು ಚಿಂತಾಕ್ರಾಂತನಾದ ಸೃಷ್ಟಿಕರ್ತ ಬ್ರಹ್ಮದೇವನು, ಈ ಸಂಕಟದಿಂದ ಪಾರು ಮಾಡುವಂತೆ ಜಗದ್ರಕ್ಷಕನಾದ ಶ್ರೀಮನ್ನಾರಾಯಣನನ್ನು ಮನಸಾರೆ ಪ್ರಾರ್ಥಿಸುತ್ತಾನೆ. ಆಗ ಬ್ರಹ್ಮನ ಮೂಗಿನ ಹೊಳ್ಳೆಯಿಂದ ಹೆಬ್ಬೆರಳಿನ ಗಾತ್ರದ ಅತ್ಯಂತ ಸಣ್ಣ ಶ್ವೇತ ವರಾಹವೊಂದು (ಬಿಳಿ ಹಂದಿ) ಪ್ರಕಟವಾಗುತ್ತದೆ.
ಇದನ್ನೂ ಓದಿ: Roopa Gururaj Column: ಸೂರ್ಯನ ಅತಿಯಾದ ತೇಜಸ್ಸು ದಿವ್ಯಾಯುಧಗಳಾದ ಬಗೆ
ನೋಡುನೋಡುತ್ತಿದ್ದಂತೆ ಆ ವರಾಹವು ಪರ್ವತದಷ್ಟು ದೈತ್ಯಾಕಾರವಾಗಿ ಬೆಳೆಯುತ್ತದೆ. ಅದರ ಘರ್ಜನೆಗೆ ಇಡೀ ಬ್ರಹ್ಮಾಂಡವೇ ಕಂಪಿಸುತ್ತದೆ. ಆ ನೀಲಮೇಘ ಶ್ಯಾಮಲ ವರ್ಣದ, ತೀಕ್ಷ್ಣ ಕೋರೆಹಲ್ಲುಗಳ ಮಹಾವರಾಹವು ಭೂದೇವಿಯನ್ನು ಹುಡುಕುತ್ತಾ ಸಾಗರದ ಆಳಕ್ಕೆ ಧುಮುಕುತ್ತದೆ.
ಸಮುದ್ರದ ತಳದಲ್ಲಿದ್ದ ಭೂದೇವಿಯನ್ನು ಕಂಡು, ವರಾಹಸ್ವಾಮಿಯು ಆಕೆಯನ್ನು ತನ್ನ ತೀಕ್ಷ್ಣವಾದ ಕೋರೆಹಲ್ಲುಗಳ (ದಾಡೆಗಳ) ಮೇಲೆ ಅತ್ಯಂತ ಮೃದುವಾಗಿ ಎತ್ತಿ ಹಿಡಿಯು ತ್ತಾನೆ. ತಾಯಿಯನ್ನು ಸುರಕ್ಷಿತವಾಗಿ ಮೇಲಕ್ಕೆ ತರುತ್ತಿರುವಾಗ, ಅಡ್ಡಬಂದ ಮಹಾ ಶಕ್ತಿಶಾಲಿ ಅಸುರ ಹಿರಣ್ಯಾಕ್ಷನು ದೇವನಿಗೆ ಸವಾಲು ಹಾಕುತ್ತಾನೆ.
ವರಾಹಸ್ವಾಮಿ ಮತ್ತು ಹಿರಣ್ಯಾಕ್ಷನ ನಡುವೆ ಭೀಕರವಾದ ಗದಾಯುದ್ಧ ನಡೆಯುತ್ತದೆ. ಜಗತ್ತನ್ನೇ ನಡುಗಿಸಿದ ಆ ಯುದ್ಧದ ಕೊನೆಯಲ್ಲಿ, ಭಗವಾನ್ ವರಾಹಮೂರ್ತಿಯು ತನ್ನ ಸುದರ್ಶನ ಚಕ್ರ ಮತ್ತು ಗದೆಯಿಂದ ಹಿರಣ್ಯಾಕ್ಷನನ್ನು ಸಂಹರಿಸಿ ಲೋಕಕ್ಕೆ ಕಂಟಕ ವಾಗಿದ್ದ ಅಧರ್ಮವನ್ನು ಅಳಿಸುತ್ತಾನೆ.
ತದನಂತರ, ಮಹಾಸಾಗರದಿಂದ ಭೂದೇವಿಯನ್ನು ಮೇಲಕ್ಕೆ ತಂದು, ವಿಶ್ವದ ಕೇಂದ್ರಸ್ಥಾನ ದಲ್ಲಿ ಆಕೆಯನ್ನು ಮತ್ತೆ ಸ್ಥಿರವಾಗಿ ಪ್ರತಿಷ್ಠಾಪಿಸುತ್ತಾನೆ. ಆಕೆಗೆ ಅಭಯವನ್ನು ನೀಡಿ ಸಕಲ ಜೀವರಾಶಿಗಳ ಪಾಲನೆಗೆ ದಾರಿ ಮಾಡಿಕೊಡುತ್ತಾನೆ.
ಶ್ರೀಮನ್ನಾರಾಯಣನು ತಳೆದ ವರಾಹ ಅವತಾರದ ಈ ಪೌರಾಣಿಕ ಕಥೆ ನಮಗೆ ಕೇವಲ ಭಕ್ತಿಯನ್ನಷ್ಟೇ ಅಲ್ಲ, ಪ್ರಕೃತಿಯನ್ನು ರಕ್ಷಿಸುವ ಪರಮ ಕರ್ತವ್ಯವನ್ನು ನೆನಪಿಸುತ್ತದೆ. ಆದರೆ, ಇಂದು ಪ್ಲಾಸ್ಟಿಕ್ ಮಾಲಿನ್ಯ, ಜಾಗತಿಕ ತಾಪಮಾನ, ಮತ್ತು ಅರಣ್ಯ ನಾಶದಂತಹ ಮಾನವ ನಿರ್ಮಿತ ಪ್ರಳಯದ ಸಾಗರದಲ್ಲಿ ಭೂಮಿ ಮತ್ತೆ ಮುಳುಗುತ್ತಿದೆ. ಈ ಭೂಮಿ ಕೇವಲ ನಾವು ವಾಸಿಸುವ ಜಾಗವಲ್ಲ, ನಮ್ಮನ್ನು ಹೆತ್ತು ಹೊತ್ತ ತಾಯಿ. ಈ ಭೂಮಿ ದಿನ ದಿನವೂ ಕರಗುತ್ತಿದ್ದರೆ, ನಾವು ಮತ್ತೊಬ್ಬ ರಕ್ಷಕನಿಗಾಗಿ ಕಾಯುತ್ತಾ ಕೂರಲು ಸಾಧ್ಯವಿಲ್ಲ. ನಾವೇ ಆ ರಕ್ಷಕರಾಗಬೇಕಿದೆ.
ದೇವಸ್ಥಾನಗಳಿಗೆ ದೇವರ ಪೂಜೆ ಮಾಡಲು ಹೋಗುವ ನಾವು, ಉಸಿರಾಡುತ್ತಿರುವ, ನಮಗೆ ಅನ್ನ ನೀಡುತ್ತಿರುವ ಭೂಮಿಯನ್ನು ಸ್ವಚ್ಛವಾಗಿರಿಸುವ, ಪೂಜಿಸುವ ಹೊಣೆಯನ್ನು ಮರೆತೆ ಹೋಗಿದ್ದೇವೆ. ಹಬ್ಬ ಹರಿದಿನಗಳ ನಂತರ ಟನ್ ಗಟ್ಟಲೆ ಕಸ ಪ್ರತಿ ನಗರದಲ್ಲೂ ಉತ್ಪಾದನೆಯಾಗುತ್ತದೆ.
ಇದನ್ನೆಲ್ಲ ಊರ ಜನ ಯಾವುದೋ ಒಂದು ಭೂಭಾಗದಲ್ಲಿ ಹೂಳಲಾಗುತ್ತದೆ. ಹಬ್ಬಗಳ ನಂತರ ನದಿ ಕೆರೆಗಳ ಪರಿಸ್ಥಿತಿಯೂ ಬೇರೆ ಏನಲ್ಲ. ದೇವರ ಪೂಜೆಯ ನೆಪದಲ್ಲಿ, ನಮ್ಮ ಸುಖದ ಸೋಗಿನಲ್ಲಿ ನಾವಿರುವ ಭೂಮಿಯನ್ನು ಕಲುಷಿತ ಗೊಳಿಸುತ್ತಿರುವ ನಾವು ಭೂಮಿಯಲ್ಲಿ ಬದುಕಲು ಎಷ್ಟು ಅರ್ಹರು ಎಂದು ಪ್ರಶ್ನಿಸಿಕೊಳ್ಳಬೇಕಿದೆ.
ಇನ್ನಾದರೂ ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ವಸ್ತುಗಳನ್ನು ಕಡಿಮೆ ಬಳಸೋಣ. ಆದಷ್ಟು ಪ್ರಕೃತಿಗೆ ಹತ್ತಿರವಾಗುತ್ತಾ ನಮ್ಮ ಮಕ್ಕಳಿಂದ ಸಾಲವಾಗಿ ಪಡೆದಿರುವ ಭೂಮಿಯನ್ನು ಕಡಿಮೆ ಕಲುಷಿತಗೊಳಿಸಿ ಮಾನವೀಯತೆ ಮೆರೆಯೋಣ.