ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಕಾಡಿನಿಂದ ಹರಿದು ಬರುವ ನೀರು ಬಲುರುಚಿ !

ನಮ್ಮ ಮನೆ ಎದುರಿನಲ್ಲೇ ಗದ್ದೆಗಳು. ಎಷ್ಟು ಹತ್ತಿರ ಎಂದರೆ, ಚಾವಡಿ ದಾಟಿ ಹೊರ ಬಂದರೆ ಸಿಗುವ ಪುಟ್ಟ ಕೊಟ್ಟಿಗೆಯನ್ನು ಹಾದು ಮುಂದಡಿಯಿಟ್ಟರೆ, ನೇರವಾಗಿ ಹೆಜ್ಜೆ ಬೀಳುವುದು ಅಗೇಡಿ ಗದ್ದೆಗೆ! ಆ ಅಗೇಡಿಯ ಅಂಚಿನ ಮೇಲೆ ನಡೆದು, ಇನ್ನೊಂದು ಗದ್ದೆ ಅಂಚಿನ ಮೇಲೆ ಬ್ಯಾಲೆನ್ಸ್ ಮಾಡುತ್ತಾ ನಡೆದರೆ ದೊಡ್ಡತೋಡು ಸಿಗುತ್ತದೆ.

ಶಶಾಂಕಣ

ಈ ವರ್ಷ ನಮ್ಮ ರಾಜ್ಯದಾದ್ಯಂತ ಅದೆಂಥ ಮಳೆ ಎಂದರೆ, ಆಕಾಶವೇ ತೂತು ಬಿದ್ದಂತೆ. ಅದರಲ್ಲೂ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆರಾಯನಿಗೆ ಬಿಡುವೇ ಇಲ್ಲವಂತೆ. ಮಳೆ ನಮಗೆ ಬೇಕು. ಆದರೆ, ಅದೇ ಅಧಿಕವಾದಾಗ, ನಾನಾ ರೀತಿಯ ಸಮಸ್ಯೆ. ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆನೀರನ್ನೇ ನಂಬಿಕೊಂಡು ಕೃಷಿ ಮಾಡುವ ರೈತರಿಗೆ, ಅಧಿಕ ಮಳೆ ತಂಡೊಡ್ಡುವ ಸಮಸ್ಯೆಗಳು ಹಲವು.

ಮುಖ್ಯವಾಗಿ, ಗದ್ದೆಗಳಿಗೆ, ತೋಟಕ್ಕೆ ಹಾಕಿದ ಗೊಬ್ಬರವು, ನಿರಂತರ ಮಳೆ ಸುರಿದಾಗ ತೊಳೆದು ಹೋಗುತ್ತದೆ; ಅಂಗಡಿಯಿಂದ ತಂದ ಗೊಬ್ಬರವು ಸಮುದ್ರ ಸೇರುತ್ತದೆ! ಮಳೆಗಾಲದಲ್ಲಿ ಜ್ವರ, ನೆಗಡಿ, ಮೈಕೈನೋವು ಮೊದಲಾದ ಸಮಸ್ಯೆಗಳು ಸಹ ಕಾಡುವುದು ಅಧಿಕ. ಅದೇನೇ ಇದ್ದರೂ, ಮಳೆಗಾಲದ ನೆನಪುಗಳು ಮಾತ್ರ ಮತ್ತೆ ಮತ್ತೆ ಮನದಲ್ಲಿ ಸುರುಳಿಯಂತೆ ಬಿಚ್ಚಿಕೊಂಡು, ಒಂದು ರೀತಿಯ ಆಪ್ತ ಭಾವವನ್ನು ಮೂಡಿಸುವುದು ಸುಳ್ಳಲ್ಲ!

ನಮ್ಮ ಹಳ್ಳಿ ಮನೆಯ ಹತ್ತಿರ ಎರಡು ತೋಡುಗಳಿವೆ. ಮೊದಲನೆಯದು ಸಣ್ಣ ತೋಡು, ಎರಡನೆ ಯದು ದೊಡ್ಡ ತೋಡು. ಮಳೆಗಾಲದಲ್ಲಿ ಮಾತ್ರ ಜೀವ ತಳೆವ ಸಣ್ಣತೋಡಿನ ಒಡನಾಟಕ್ಕಿಂತಲೂ, ಹೆಚ್ಚು ಕಾಲ ನೀರು ಹರಿಯುವ ದೊಡ್ಡ ತೋಡಿನ ಜತೆಗಿನ ನಮ್ಮ ಬಾಂಧವ್ಯ ಹೆಚ್ಚು ಅರ್ಥ ಪೂರ್ಣ. ಆದರೆ, ಈ ಎರಡೂ ತೋಡುಗಳು ಒಂದಕ್ಕೊಂದು ಪೂರಕವಾಗಿದ್ದು, ಮಳೆರಾಯನ ಕೃಪೆಯಿಂದ ಮಾತ್ರ ಜೀವ ತುಂಬಿಕೊಳ್ಳುವುದರಿಂದಾಗಿ, ದೊಡ್ಡತೋಡಿನ ವಿಚಾರ ಹೇಳುವಾಗ ಲೆಲ್ಲಾ, ನಡುನಡುವೆ ಸಣ್ಣ ತೋಡಿನ ನೀರು ಹರಿದುಬರುತ್ತದೆ!

ಇದನ್ನೂ ಓದಿ: Shashidhara Halady Column: ಮಳೆ ಕೋಂಗಿಲ ಹಕ್ಕಿಗೆ ಹಾಡಲು ಬರುವುದಿಲ್ಲ !

ನಮ್ಮ ಮನೆ ಎದುರಿನಲ್ಲೇ ಗದ್ದೆಗಳು. ಎಷ್ಟು ಹತ್ತಿರ ಎಂದರೆ, ಚಾವಡಿ ದಾಟಿ ಹೊರ ಬಂದರೆ ಸಿಗುವ ಪುಟ್ಟ ಕೊಟ್ಟಿಗೆಯನ್ನು ಹಾದು ಮುಂದಡಿಯಿಟ್ಟರೆ, ನೇರವಾಗಿ ಹೆಜ್ಜೆ ಬೀಳುವುದು ಅಗೇಡಿ ಗದ್ದೆಗೆ! ಆ ಅಗೇಡಿಯ ಅಂಚಿನ ಮೇಲೆ ನಡೆದು, ಇನ್ನೊಂದು ಗದ್ದೆ ಅಂಚಿನ ಮೇಲೆ ಬ್ಯಾಲೆನ್ಸ್ ಮಾಡುತ್ತಾ ನಡೆದರೆ ದೊಡ್ಡತೋಡು ಸಿಗುತ್ತದೆ. ಜೂನ್ ಮೊದಲ ವಾರ, ಮಳೆನೀರಿನಿಂದ ತುಂಬಿಕೊಳ್ಳುವ ದೊಡ್ಡ ತೋಡು, ಮುಂದಿನ ಎಂಟು ತಿಂಗಳುಗಳ ಕಾಲ ಹರಿಯುತ್ತಲೇ ಇರುತ್ತದೆ.

ಅಕ್ಟೋಬರ್ -ನವೆಂಬರ್‌ನಲ್ಲಿ ಮಳೆಗಾಲ ನಿಂತು, ಚಳಿಗಾಲ ಆರಂಭವಾದರೂ, ಇನ್ನೂ ಸುಮಾರು ಮೂರು ತಿಂಗಳು ಅದರಲ್ಲಿ ನೀರು ಇರುವುದು ಒಂದು ಚೋದ್ಯ. ಆ ತೋಡು ಹರಿದು ಬರುವ ದಾರಿಯಲ್ಲಿರುವ ಕಾಡು ಗುಡ್ಡಗಳಲ್ಲಿರುವ ಮರಗಳ ಕೃಪೆಯಿಂದಾಗಿ, ಅದರಲ್ಲಿ ಹಲವು ವಾರಗಳ ಕಾಲ ಉಜರು ನೀರು ಹರಿಯುತ್ತಲೇ ಇರುತ್ತದೆ. ಮಾರ್ಚ್-ಏಪ್ರಿಲ್- ಮೇ ತಿಂಗಳುಗಳಲ್ಲಿ ದೊಡ್ಡ ತೋಡು ಪೂರ್ತಿ ಬತ್ತುತ್ತದೆ.

ಆದರೂ, ಅದರ ಪಾತಳಿಯ ಮರಳನ್ನು ಎರಡು ಅಡಿ ಬಗೆದರೆ, ನೀರು ಸಿಗುತ್ತದೆ. ಮಳೆಗಾಲದಲ್ಲಿ ತುಂಬಿ ಹರಿಯುವ ದೊಡ್ಡತೋಡು, ಮೂರು ನಾಲ್ಕು ಕಿ.ಮೀ. ಸಾಗಿ, ಸಣ್ಣ ಹೊಳೆಯನ್ನು ಸೇರು ತ್ತದೆ. ಕೆಳಗೆ ಹೋದಂತೆಲ್ಲಾ, ನೀರಿನ ಆಶ್ರಯ ಜಾಸ್ತಿಯಾಗುತ್ತಾ ಹೋಗಿ, ಬೇಸಗೆಯಲ್ಲೂ ಅದರಲ್ಲಿ ಸ್ವಲ್ಪ ನೀರು ಇರುವುದು ಸಾಮಾನ್ಯ ಸಂಗತಿ.

ಶಿವರಾತ್ರಿ ಕಳೆದ ನಂತರ, ಸುಮಾರು ಫೆಬ್ರವರಿ ತಿಂಗಳಲ್ಲಿ ನಮ್ಮ ಮನೆ ಎದುರಿನ ದೊಡ್ಡತೋಡು ಪೂರ್ತಿ ಒಣಗುತ್ತದೆ. ಆಗ ಅದರ ಮುಖ್ಯ ಉಪಯೋಗವೆಂದರೆ, ಬಹು ಜನರು ಉಪಯೋಗಿಸಬಲ್ಲ ಬಯಲು ಶೌಚಾಲಯದ ಸ್ವರೂಪ! ಗದ್ದೆಬೈಲಿನ ಮಟ್ಟಕ್ಕಿಂತ ನಾಲ್ಕು ಅಡಿ ತಗ್ಗಿನಲ್ಲಿದ್ದುದರಿಂದ ಮತ್ತು ಅದರ ಒಂದು ಅಂಚಿನಲ್ಲಿ ದಟ್ಟವಾಗಿ ಪೊದೆಸ್ವರೂಪದ ಗಿಡಗಳು ಬೆಳೆದು ಗುಬಸಲು ಆಗಿದ್ದರಿಂದ, ಬೇಸಗೆಯ ಶೌಚಾಲಯವಾಗಿ ಉಪಯೋಗಿಸಲು ಆ ಪೊದೆಗಳೇ ಮರೆ ನೀಡುತ್ತವೆ.

ತೋಡಿನ ಇನ್ನೊಂದು ಬದಿಯಲ್ಲಿ, ಉದ್ದಕ್ಕೂ ಹಾಡಿ, ಹಕ್ಕಲು, ಗುಡ್ಡೆ. ಎಂಟು ತಿಂಗಳುಗಳ ಕಾಲ ದೊಡ್ಡತೋಡಿನಲ್ಲಿ ನೀರಿದ್ದರೂ, ಆ ನೀರನ್ನು ಜನರು ಕೃಷಿಗೆ ಉಪಯೋಗಿಸುತ್ತಿದ್ದುದು ನವೆಂಬರ್ ನಂತರ ಮಾತ್ರ. ಏಕೆಂದರೆ, ಜೂನ್ ತಿಂಗಳಿನಲ್ಲಿ ನಮ್ಮೂರಿನಲ್ಲಿ ಆರಂಭವಾಗುವ ಜಡಿಮಳೆ ಯಿಂದಾಗಿ, ಭತ್ತದ ಪೈರಿಗೆ ಬೇರಾವ ನೀರೂ ಬೇಡ.

ಭತ್ತದ ಎರಡನೆಯ ಬೆಳೆಯ ಆರಂಭವು ದೀಪಾವಳಿಯ ಸಮಯದಲ್ಲಿ. ಆಗ ದೊಡ್ಡ ತೋಡಿಗೆ ‘ಕಟ್ಟು’ (ಕಟ್ಟ ) ಹಾಕಿ, ನೀರು ನಿಲ್ಲಿಸಿ, ಗದ್ದೆಗೆ ಹರಿಸುವ ಕ್ರಮ ನಮ್ಮ ಬೈಲಿನಲ್ಲಿತ್ತು (ಈಗ ಆ ಪದ್ಧತಿ ಅಪರೂಪ ಎನಿಸಿದೆ). ಅಕ್ಕಪಕ್ಕದಲ್ಲಿರುವ ಆರೆಂಟು ರೈತರು ಸೇರಿ ಕಟ್ಟು ಹಾಕುತ್ತಿದ್ದರು- ಅದು ಒಂದು ದಿನದ ಕೆಲಸ. ಮೊದಲಿಗೆ ಮರದ ತೊಲೆ, ಗಳ, ಅಡಕೆಯ ದಪ್ಪ ದಬ್ಬೆಗಳನ್ನು ತೋಡಿಗೆ ಅಡ್ಡಲಾಗಿ ಜೋಡಿಸುತ್ತಾರೆ; ಆಗ ತೋಡಿನಲ್ಲಿ ತಿಳಿನೀರು ಹರಿಯುತ್ತಲೇ ಇರುತ್ತದೆ.

ಒಂದೆರಡು ದೊಡ್ಡ ಮರದ ಕಾಂಡಗಳನ್ನು ಸಹ ಅಡ್ಡಲಾಗಿ ಇಡಬೇಕು; ಇದು ಕಟ್ಟಿಗೆಗೆ ಬಲ ತುಂಬುತ್ತದೆ. ನಂತರ ಪಕ್ಕದ ಹಕ್ಕಲಿನ ಗಿಡಗಳ ರೆಂಬೆಕೊಂಬೆ ಗಳನ್ನು ಕಡಿದು, ಅಡರು ಮಾಡಿ, ಆ ಮರದ ತುಂಡು ಗಳ ನಡುವೆ ಸಿಕ್ಕಿಸುತ್ತಾರೆ. ಆ ನಂತರ, ಪಕ್ಕದಲ್ಲೇ ಇರುವ ದರೆಯ ಮಣ್ಣನ್ನು ತರಿದು, ಹೆಡಿಗೆಗಳಲ್ಲಿ ತುಂಬಿ, ಆ ಜಾಗಕ್ಕೆ ಸುರಿಯುತ್ತಾರೆ. ಪೂರ್ತಿ ಮಣ್ಣನ್ನು ತುಂಬಿ, ನೀರನ್ನು ತಡೆಯುವ ಕಟ್ಟು ಸಿದ್ಧವಾಗುವ ಹೊತ್ತಿಗೆ ಸಂಜೆಯಾಗುತ್ತದೆ.

ಮರುದಿನ ಬೆಳಗಿನ ಹೊತ್ತಿಗೆ ಕಟ್ಟಿನ ತುಂಬಾ ನೀರು ತುಂಬಿಕೊಳ್ಳುತ್ತದೆ. ಕಟ್ಟಿನ ನೀರು ಗದ್ದೆಗೆ ಬರಲು ಒಂದು ನೀರ್ ಕಡು ಮಾಡುತ್ತಾರೆ. ಯಾವಾಗ ನೀರಿನ ಅಗತ್ಯವಿರುತ್ತದೋ, ಆಗೆಲ್ಲಾ ನೀರನ್ನು ಹರಿಸಿ, ಭತ್ತ ಬೆಳೆಯುತ್ತಾರೆ. ಒಂದು ಕಟ್ಟಿನ ನೀರು ಹತ್ತಾರು ಗದ್ದೆಗಳಿಗೆ ಸಾಕು. ಪ್ರತಿ ವರ್ಷ ಮಳೆ ಒಂದೇ ರೀತಿ ಇರದು. ದೀಪಾವಳಿಯ ಸಮಯದಲ್ಲಿ ಮಳೆ ಬಂದರೆ, ಆ ವರ್ಷದ ಎರಡನೆಯ ಬೆಳೆಗೆ ನೀರು ಬೇಕಷ್ಟಾಯಿತು. ಆದರೆ ಒಂದೊಂದು ವರ್ಷ ಮಳೆಗಾಲ ಬೇಗನೆ ಮುಗಿದಿರುತ್ತದೆ.

ಅಂಥ ವರ್ಷಗಳಲ್ಲಿ, ಕಟ್ಟಿನಲ್ಲಿ ಸಂಗ್ರಹವಾದ ನೀರನ್ನು ಬಹು ಜೋಪಾನದಿಂದ ಉಪಯೋಗಿಸಿ ಬೆಳೆ ಬೆಳೆಯಬೇಕು. ದೊಡ್ಡ ತೋಡು ಹರಿದು ಮುಂದೆ ಸಾಗಿದ ಭಾಗದ ಕೆಲವು ರೈತರಿಗೆ, ಅಂಥ ವರ್ಷ ನೀರಿನ ಕೊರತೆಯಾದರೆ, ಒಂದು ಕಿತಾಪತಿ ಮಾಡುತ್ತಾರೆ. ಈ ಕಿತಾಪತಿಯ ಸಾಹಸಕ್ಕೆ ರಾತ್ರಿಯೇ ಪ್ರಶಸ್ತ. ಇದೊಂದು ರೀತಿಯ ಕಳ್ಳತನ- ನೀರಿನ ಕಳ್ಳತನ. ದೊಡ್ಡ ಮರದ ಸ್ವಾಟೆ (ದಪ್ಪನೆಯ ಕೋಲು) ಹಿಡಿದು ನಿಶ್ಶಬ್ದವಾಗಿ ಕತ್ತಲಿನಲ್ಲೇ ನಡೆಯುತ್ತಾ, ಮೇಲ್ಭಾಗದ ಕಟ್ಟಿನ ಮಧ್ಯಕ್ಕೆ ಒಂದು ತೂತು ಮಾಡುತ್ತಾರೆ.

ಆ ತೂತಿನ ಮೂಲಕ ನೀರು ನಿಧಾನವಾಗಿ ತೋಡಿನಲ್ಲಿ ಕೆಳಗೆ ಹರಿದು, ತುಸು ದೂರದಲ್ಲಿನ ಕೆಳಭಾಗದ ಕಟ್ಟಿನಲ್ಲಿ ತುಂಬಿಕೊಳ್ಳುತ್ತದೆ; ಆ ಕಟ್ಟಿಗೂ ಅಂಥ ಒಂದು ಸಣ್ಣ ತೂತು ಮಾಡಿರು ತ್ತಾರೆ. ಹೀಗೆ ನಾಲ್ಕಾರು ಕಟ್ಟುಗಳಿಗೆ ತೂತು ಮಾಡಿ, ಕೆಳಭಾಗದ ಕೆಲವರು ತಮ್ಮ ಕಟ್ಟಿನಲ್ಲಿ ನೀರು ತುಂಬಿಸಿಕೊಳ್ಳುತ್ತಾರೆ!

ಮೇಲ್ಭಾಗದಲ್ಲಿರುವ ಕಟ್ಟಿನ ಪಕ್ಕದ ಮನೆಯವರು ಬೆಳಗ್ಗೆ ಬಂದು ನೋಡಿದರೆ, ನೀರಿನ ಸಂಗ್ರಹ ಅರ್ಧಕ್ಕರ್ಧ ಖಾಲಿ! ಈ ಕುಚೋದ್ಯವನ್ನು ಕಂಡ ಕೂಡಲೇ, ಕಟ್ಟಿನಲ್ಲಿರುವ ತೂತನ್ನು ಮುಚ್ಚುತ್ತಾರೆ. ಸಂಜೆಯೊಳಗೆ ಪುನಃ ಕಟ್ಟಿನಲ್ಲಿ ನೀರು ತುಂಬಿಕೊಳ್ಳುತ್ತದೆ. ಇದು ಕಿತಾಪತಿಯೇ ಹೊರತು ದೊಡ್ಡ ಅಪರಾಧವಲ್ಲ! ಹೀಗೇಕೆ ಕರೆದೆನೆಂದರೆ, ಕಟ್ಟಿನಲ್ಲಿ ಸಣ್ಣ ತೂತನ್ನು ಮಾಡಿ ನೀರನ್ನು ಹರಿಸುತ್ತಾರೆಯೇ ಹೊರತು, ಕಟ್ಟಿನ ಸ್ವರೂಪವನ್ನು ನಾಶಮಾಡುವುದಿಲ್ಲ, ಅನಾಹುತ ವನ್ನೂ ಮಾಡುವುದಿಲ್ಲ. ಮರುದಿನ ಆ ತೂತನ್ನು ಮುಚ್ಚಿದಾಗ ನೀರು ತುಂಬಿ ಕೊಳ್ಳುತ್ತದೆ. ಕಿತಾಪತಿ ಮಾಡಿದವರಿಗೂ ಆ ರಾತ್ರಿ ಸ್ವಲ್ಪ ನೀರು ಸಿಗುತ್ತದೆ.

ನಮ್ಮ ಮನೆಯಿಂದ ಸುಮಾರು ನೂರು ಅಡಿಗಳಷ್ಟು ದೂರದಲ್ಲಿರುವ ದೊಡ್ಡ ತೋಡಿನ ಕಥೆ ಹೇಳುತ್ತಾ ಹೋದರೆ, ಅದು ಸುದೀರ್ಘ ‘ಜಲಕಥನ’ ವೇ ಆದೀತು! ಜೂನ್-ಜುಲೈನಲ್ಲಿ ಚೆನ್ನಾಗಿ ಮಳೆಯಾಗುವಾಗ, ಆ ತೋಡಿನ ತುಂಬಾ ರಭಸದ ಕೆಂಪನೆಯ ನೀರು. ನಾಲ್ಕಾರು ದಿನ ಎಡೆಬಿಡದೆ ಮಳೆಸುರಿದಾಗ, ಒಮ್ಮೊಮ್ಮೆ ನೆರೆ ಬಂದು, ಗದ್ದೆ- ತೋಡು ಎಲ್ಲವೂ ಒಂದಾಗುವುದುಂಟು.

ಆಗಸ್ಟ್ ನಂತರ, ಮಳೆ ಕಡಿಮೆಯಾದರೂ, 2-3 ವಾರ ಮಳೆ ಬಾರದೇ ಇದ್ದರೂ, ದೊಡ್ಡತೋಡಿನಲ್ಲಿ ನೀರು ಹರಿಯುತ್ತಲೇ ಇರುತ್ತದೆ! ಅದು ಉಜರು ನೀರು (ಝರಿ ನೀರು.) ತೋಡು ಹರಿಯುವ ದಾರಿ ಯುದ್ದಕ್ಕೂ ಒಂದು ಭಾಗದಲ್ಲಿರುವ ಹಾಡಿ, ಹಕ್ಕಲು, ಕಾಡಿನ ನೆಲದಿಂದ ಹರಿದು ಬರುವ ಉಜರು ನೀರು ಅದು. ಆ ರೀತಿ ಹೆಚ್ಚು ಹೆಚ್ಚು ಕಾಲ ಉಜರು ನೀರು ಹರಿಯುತ್ತಿದ್ದರೆ, ಆ ಸುತ್ತಲಿನ ಜಲಮೂಲ ಆರೋಗ್ಯಕರವಾಗಿದೆ ಎಂದೇ ಅರ್ಥ.

ನಾನಾ ರೀತಿಯ ಮರ, ಗಿಡ, ಬಳ್ಳಿಗಳು ನೆಳದಾಳಕ್ಕೆ ಬಿಟ್ಟುಕೊಂಡ ಬೇರುಗಳ ಜಾಲದಲ್ಲಿ ಸಂಗ್ರಹಿತ ನೀರು, ಉಜರು ನೀರಿನ ರೂಪದಲ್ಲಿ ಹಲವು ವಾರಗಳ ಕಾಲ ಹರಿಯುತ್ತಲೇ ಇರುತ್ತದೆ. ಗಿಡಮರಗಳ ಸಂದಿಯಿಂದ ಹರಿದು ಬರುವ ಆ ಶುದ್ಧ ನೀರನ್ನು ನೇರವಾಗಿ ಕುಡಿಯಬಹುದು! ಜತೆಗೆ, ಆ ತಿಳಿನೀರು ಬಹಳ ರುಚಿಯನ್ನೂ ಹೊಂದಿರುವುದು ವಿಶೇಷ!

ಆದರೆ, ನಮ್ಮ ಮನೆ ಎದುರಿನ ದೊಡ್ಡತೋಡಿನುದ್ದಕ್ಕೂ ಅಲ್ಲಲ್ಲಿ ಕೆಲವು ಮನೆಗಳು ಇರುವು ದರಿಂದ, ಇಂದಿನ ‘ಶುದ್ಧತೆ’ (ಹೈಜೀನ್) ದೃಷ್ಟಿಯಲ್ಲಿ, ಆ ನೀರು ನೇರವಾಗಿ ಕುಡಿಯಲು ಪ್ರಶಸ್ತ ಅಲ್ಲ ಎಂದೇ ಹೇಳಬಹುದು. ಹಲವು ಮನೆಗಳವರು ಆ ಹರಿವ ನೀರಿನಲ್ಲಿ ಪಾತ್ರೆ ತೊಳೆಯುವುದು, ಕೋಣಗಳ ಮೈ ತೊಳೆಯುವುದು ಮೊದಲಾದವುಗಳನ್ನು ಮಾಡುತ್ತಿದ್ದರು. ಜುಳುಜುಳು ಎಂದು ಹರಿವ ಆ ತಿಳಿನೀರು ನೋಡಲು ಆಹ್ಲಾದಕರ; ಆದರೆ ನಮ್ಮ ಹಳ್ಳಿಯ ಜನರಿಗೆ ಆ ‘ಸಲಿಲ ಸೌಂದರ್ಯ’ವನ್ನು ನೋಡಿ, ಆಸ್ವಾದಿಸುವಷ್ಟು ವ್ಯವಧಾನವಿರಲಿಲ್ಲ- ಕಷ್ಟದ ದಿನಚರಿ. ಪ್ರತಿದಿನ ಬೆಳಗ್ಗೆ, ಆ ತೋಡನ್ನು ಶೌಚಾಲಯವಾಗಿಯೂ ಬಳಸುತ್ತಿದ್ದರು!

ಅವರ ದೃಷ್ಟಿಯಲ್ಲಿ ಅದು ಅನಿವಾರ್ಯವೂ ಆಗಿತ್ತು. ಆಗಿನ ದಿನಗಳಲ್ಲಿ ಮನೆಗೊಂದು ಶೌಚಾಲಯ ಇರಲಿಲ್ಲವಲ್ಲ! ಬೆಳಗಿನ ಆ ಮೊದಲ ಕೆಲಸಕ್ಕೆ, ಹಳ್ಳಿಯ ಎಲ್ಲಾ ಜನರಿಗೂ ತೋಡಿನ ನೀರೇ ಗತಿ ಎನಿಸಿದ ದಿನಗಳು ಅವು! ನಾವು ಹೆಚ್ಚಾಗಿ ಉಪಯೋಗಿಸುತ್ತಿದ್ದುದು ಸಣ್ಣ ತೋಡನ್ನು. ಸಣ್ಣಗೆ ಹರಿವ ಅದರ ನೀರನ ಮೇಲೆ ಎರಡು ಕಲ್ಲುಗಳನ್ನಿಟ್ಟುಕೊಂಡು ಕುಳಿತು, ಬೆಳಗಿನ ಆ ಕೆಲಸವನ್ನು ಮುಗಿಸುತ್ತಿದ್ದೆವು.

ತೋಡಿನ ನೀರು ಬತ್ತಿದ ನಂತರ, ಅಲ್ಲೇ ಮೇಲ್ಭಾಗದಲ್ಲಿದ್ದ ಹಕ್ಕಲಿಗೆ ಹೋಗುವ ಕ್ರಮ. ಪಾಯಿಖಾನೆಗೆಂದು ಪ್ರತ್ಯೇಕವಾಗಿ ಪುಟ್ಟ ಕಟ್ಟಡವನ್ನು 1990ರ ದಶಕದಲ್ಲಿ ನಿರ್ಮಿಸುವ ತನಕ, ಇದೇ ನಮ್ಮ ದಿನಚರಿ!

ಸಣ್ಣ ತೋಡು ನಮ್ಮ ಮನೆಯಿಂದ ಸುಮಾರು ಐವತ್ತು ಅಡಿ ದೂರದಲ್ಲಿದೆ. ಜೂನ್‌ನಿಂದ ಅಕ್ಟೋಬರ್ ತನಕ ಮಾತ್ರ ಅದರಲ್ಲಿ ನೀರಿನ ಹರಿವು. ದೊಡ್ಡ ತೋಡು ಮತ್ತು ಸಣ್ಣ ತೋಡುಗಳು ಅಕ್ಕತಂಗಿಯರಿದ್ದಂತೆ. ನಮ್ಮ ಮನೆಯ ಹಿಂದಿನಿಂದ ಹರಿದು ಸಾಗುವ ಸಣ್ಣ ತೋಡು, ಎದುರಾಗುವ ಗದ್ದೆಬಯಲನ್ನು ಇಬ್ಭಾಗ ಮಾಡುತ್ತಾ ಉತ್ತರಕ್ಕೆ ಸಾಗಿ, ದೊಡ್ಡ ತೋಡನ್ನು ಸೇರಿಕೊಳ್ಳುತ್ತದೆ.

ಕರೆಯುವುದು ಸಣ್ಣ ತೋಡು ಎಂದಾದರೂ, ಮಳೆಗಾಲದಲ್ಲಿ ಅದರ ರಭಸ ಕಡಿಮೆಯೇನಲ್ಲ! ಸೊಪ್ಪಿನ ಅಣೆ, ಬೋಳುಗುಡ್ಡ ಮೊದಲಾದ ಪ್ರದೇಶಗಳ ಮಳೆ ನೀರು ಅದರಲ್ಲಿ ತುಂಬಿ ಹರಿದು, ಸಣ್ಣ ನೆರೆಯನ್ನೇ ಸೃಷ್ಟಿಸುತ್ತದೆ. ಆ ಕೆಂಪನೆಯ ನೀರು ತುಂಬಿದ ಸಣ್ಣ ತೋಡು, ರಭಸದಿಂದ ದೊಡ್ಡ ತೋಡನ್ನು ಸೇರಿಕೊಳ್ಳುವ ಜಾಗದಲ್ಲಿ ಒಂದು ಗುಂಡಿ ಬಿದ್ದಿದೆ.

ಜಡಿಮಳೆ ಕಡಿಮೆಯಾದಾಗ, ಉಜರು ನೀರು ಇನ್ನೂ ಹರಿಯುತ್ತಿರುವ ಸೆಪ್ಟೆಂಬರ್ ಸಮಯದಲ್ಲಿ, ಈ ಗುಂಡಿಯಲ್ಲಿ ಈಜುವ ಮಜವೇ ಮಜ! ಎರಡು ತೋಡುಗಳಿಂದ ಹರಿದು ಬರುವ ತಿಳಿಯಾದ ನೀರು, ಆ ಗುಂಡಿಯಲ್ಲಿ ತುಂಬಿದಾಗ ಮೂರು ಅಥವಾ ನಾಲ್ಕು ಅಡಿ ಆಳದ ಪುಟಾಣಿ ಈಜುಕೊಳವೇ ಅಲ್ಲಿ ನಿರ್ಮಾಣವಾಗುತ್ತದೆ.

ನಾವು ಮಕ್ಕಳು ಒಮ್ಮೊಮ್ಮೆ ಮಧ್ಯಾಹ್ನದ ಹೊತ್ತಿನಲ್ಲಿ ಆ ಗುಂಡಿಯಲ್ಲಿ ಮುಳುಗಿ ಸ್ನಾನ ಮಾಡುವುದಿತ್ತು. ಜಾಸ್ತಿ ಈಜುವಷ್ಟು ಜಾಗ ಅಲ್ಲಿಲ್ಲ. ಕಾಲು ಬಡಿಯುತ್ತಾ ಈಜುವಂತೆ ನಟಿಸುತ್ತಾ, ಒಂದು ಗಂಟೆ ಆ ನೀರಿನಲ್ಲಿ ಹೊರಳಾಡಿದರೆ, ಅದೇ ನೋ ವಿಶೇಷ ಆನಂದ, ಉಲ್ಲಾಸ. ಒಮ್ಮೊಮ್ಮೆ ನಮ್ಮ ಜತೆ, ಅಕ್ಕಪಕ್ಕದ ಮನೆಗಳವರ ಕೋಣಗಳು, ಹಸುಗಳು ಸಹ ಈ ಗುಂಡಿಯಲ್ಲಿ ಮೀಯು ತ್ತಿದ್ದವು!

ದೊಡ್ಡ ತೋಡಿನ ನೀರಿನ ಗುಂಡಿಯಲ್ಲಿ ಕೋಣಗಳಿಗೂ, ಮನುಷ್ಯರಿಗೂ ಸಮಾನ ಸ್ಥಾನ, ಮಾನ!ಸುಮಾರು ಎರಡು ಕಿ.ಮೀ. ದೂರದಿಂದ ಹರಿದು ಬರುವ ದೊಡ್ಡ ತೋಡಿನಲ್ಲಿ ಸಾಕಷ್ಟು ಮೀನುಗಳಿರುತ್ತವೆ. ಕಾಣಿ, ಕರ್ಸೆ ಹೆಸರಿನ ಅವೆಲ್ಲವೂ ಸಣ್ಣ ಗಾತ್ರದವು. ಅವನ್ನು ಹಿಡಿಯುವುದು ಕೆಲವರ ಹವ್ಯಾಸ. ಗಾಳ ಹಾಕಿ ಹಿಡಿಯುವುದು ಒಂದು ವಿಧಾನ.

ಬಿದಿರಿನ ಕಡ್ಡಿಗಳ ಕೂಣಿಯಲ್ಲಿ ಮೀನು ಹಿಡಿಯುವುದು ಇನ್ನೊಂದು ವಿಧಾನ. ಜತೆಗೆ, ಕಾಡಿನ ಅದಾವುದೋ ಕಾಯಿಯನ್ನು ಜಜ್ಜಿ ತೋಡಿನ ನೀರಿಗೆ ಹಾಕಿ, ಆಗ ಸಾಮೂಹಿಕವಾಗಿ ಪ್ರಜ್ಞೆ ತಪ್ಪುವ ಮೀನುಗಳನ್ನು ಸಹ ಹಿಡಿಯುತ್ತಿದ್ದರು. ಮಳೆಗಾಲ ಪ್ರಾರಂಭವಾದಾಗ, ನೆರೆನೀರಿನಲ್ಲಿ ಬಹುದೂರ ದಿಂದ ಈಜಿ ನಮ್ಮ ತೋಡುಗಳಿಗೆ, ಬೈಲಿಗೆ ಬರುವ ‘ಹತ್ಮೀನು’ಗಳನ್ನು ಹಿಡಿಯುವುದೆಂದರೆ ಅದೊಂದು ಹಬ್ಬ- ಮಳೆ ಸುರಿಯುತ್ತಿರುವಾಗಲೇ, ತೋಡು ಮತ್ತು ಗದ್ದೆಗಳಿಗೆ ನುಗ್ಗಿ ಬರುವ ಮೀನುಗಳನ್ನು ಹಿಡಿಯುವ ಹಬ್ಬ.

ಆದರೆ, ಈಚಿನ ದಶಕದಲ್ಲಿ ಕೆಲವು ವ್ಯತ್ಯಯಗಳಾಗಿವೆ. ಹಾಡಿ ಗುಡ್ಡೆಗಳಲ್ಲಿ ಅಕೇಶಿಯಾ ನೆಡು ತೋಪು ವ್ಯಾಪಕವಾಗಿ, ಅಲ್ಲಿನ ನೆಲದಾಳದಲ್ಲಿ ನೀರಿನ ಒರತೆ ಕಡಿಮೆಯಾಗಿದೆ. ದೊಡ್ಡತೋಡಿನ ನೀರು ಬೇಗನೆ ಕಡಿಮೆಯಾಗುತ್ತಿದೆ. ಜನರ ದಿನಚರಿಯೂ ಬದಲಾಗಿದೆ. ತೋಡಿನ ನೀರಿಗೆ ಕಟ್ಟು ಹಾಕಿ ಗದ್ದೆಗೆ ನೀರು ಹಾಯಿಸುವುದರ ಬದಲು, ಬಾವಿಗಳ ನೀರನ್ನು ಪಂಪ್‌ಸೆಟ್‌ನಿಂದ ತೆಗೆಯುವುದೂ ಉಂಟು. ಸಹಜ ಕೃಷಿಯ ಬದಲು ವಾಣಿಜ್ಯಕ ಕೃಷಿಗೆ ಹೆಚ್ಚು ಪ್ರಾಧಾನ್ಯ; ಅದೇ ರೀತಿ ಜನರ ಯೋಚನೆಯೂ ವಾಣಿಜ್ಯಕವಾಗಿ ಬದಲಾಗಿದೆ! ಇದರಲ್ಲಿ ಅಚ್ಚರಿಯೇನಿಲ್ಲ, ಅಲ್ಲವೆ?

ಶಶಿಧರ ಹಾಲಾಡಿ

View all posts by this author