ಒಂದೊಳ್ಳೆ ಮಾತು
ಖ್ಯಾತ ಉದ್ಯಮಿ ಆದಿತ್ಯ ಬಿರ್ಲಾ ಅವರ ಜೀವನದ ಈ ಘಟನೆ, ಮನುಷ್ಯ ಸಂಬಂಧಗಳನ್ನು ಉಳಿಸಿಕೊಳ್ಳುವ ಮತ್ತು ವ್ಯಕ್ತಿಯ ಮೌಲ್ಯವನ್ನು ಅಳೆಯುವ ರೀತಿಗೆ ಒಂದು ಅದ್ಭುತ ಕನ್ನಡಿ. ಹಿಂಡಾಲ್ಕೊ ಸಂಸ್ಥೆಯ ಉತ್ತುಂಗದ ಕಾಲವದು. ಆದಿತ್ಯ ಬಿರ್ಲಾ ಅವರ ತಂಡ ದಲ್ಲಿದ್ದ ಅತ್ಯಂತ ನಂಬಿಕಸ್ತ ಮತ್ತು ಹಿರಿಯ ಅಧಿಕಾರಿಯೊಬ್ಬರಿಂದ ಕೆಲಸದಲ್ಲಿ ಒಂದು ಭಾರಿ ಎಡವಟ್ಟಾಯಿತು. ಆ ಒಂದು ಸಣ್ಣ ಅಚಾತುರ್ಯದಿಂದ ಸಂಸ್ಥೆಗೆ ಆದ ನಷ್ಟ ಅಷ್ಟಿಷ್ಟಲ್ಲ. ಸುದ್ದಿ ಹರಡುತ್ತಿದ್ದಂತೆ ಕಂಪನಿಯ ಕಾರಿಡಾರ್‌ಗಳಲ್ಲಿ ಪಿಸುಮಾತುಗಳು ಶುರುವಾದವು.
ಇಷ್ಟು ದೊಡ್ಡ ನಷ್ಟವನ್ನು ಬಿರ್ಲಾ ಅವರು ಸಹಿಸುವುದಿಲ್ಲ, ಆ ಅಧಿಕಾರಿಯ ಕೆಲಸ ಹೋದಂತೆಯೇ ಸರಿ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಕೋಪ ಮತ್ತು ಆತಂಕದ ವಾತಾವರಣ ಅಲ್ಲಿ ಮನೆ ಮಾಡಿತ್ತು. ಆ ಅಧಿಕಾರಿಯನ್ನು ಆದಿತ್ಯ ಬಿರ್ಲಾ ಅವರ ಕೋಣೆಗೆ ಕರೆಯಿಸಲಾಯಿತು.
ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ರಾಮರಾಜ್ಯದ ಸೌರಭ
ಆತ ತಲೆ ತಗ್ಗಿಸಿ, ಬೆವರುತ್ತಾ ನಿಂತಿದ್ದರು. ತಾನು ಮಾಡಿದ ತಪ್ಪಿನ ಅರಿವು ಅವರಿಗಿತ್ತು, ಶಿಕ್ಷೆಗೆ ಅವರು ಸಿದ್ಧರಾಗಿದ್ದರು. ಇತರ ಹಿರಿಯ ಅಧಿಕಾರಿಗಳು ಬಿರ್ಲಾ ಅವರು ಸಿಟ್ಟಿನಿಂದ ಕಿರುಚಾಡಬಹುದು ಅಥವಾ ತಕ್ಷಣವೇ ವಜಾ ಮಾಡುವ ಆದೇಶ ನೀಡಬಹುದು ಎಂದು ಕಾಯುತ್ತಿದ್ದರು. ಆದರೆ, ಆದಿತ್ಯ ಬಿರ್ಲಾ ಅವರು ಮಾಡಿದ್ದೇ ಬೇರೆ. ಅವರು ಶಾಂತವಾಗಿ ತಮ್ಮ ಕುರ್ಚಿಯಲ್ಲಿ ಕುಳಿತರು. ಎದುರಿಗಿದ್ದ ನೋಟ್ ಪ್ಯಾಡ್ ತೆಗೆದುಕೊಂಡರು. ಅದರ ಮೇಲ್ಭಾಗದಲ್ಲಿ ದೊಡ್ಡದಾಗಿ ಬರೆದರು: ‘ಈ ವ್ಯಕ್ತಿಯ ಪರವಾಗಿರುವ ಅಂಶಗಳು.’ ಅವರು ಬರೆಯುತ್ತಾ ಹೋದರು. ಆ ಅಧಿಕಾರಿ ಈ ಹಿಂದೆ ಸಂಸ್ಥೆಯು ಸಂಕಷ್ಟದಲ್ಲಿದ್ದಾಗ ಹೇಗೆ ಅಹೋರಾತ್ರಿ ಶ್ರಮಿಸಿದ್ದರು, ಒಂದು ಸರಿಯಾದ ನಿರ್ಧಾರದ ಮೂಲಕ ಸಂಸ್ಥೆಗೆ ಹೇಗೆ ಕೋಟ್ಯಂತರ ರುಪಾಯಿಗಳ ಲಾಭ ತಂದುಕೊಟ್ಟಿದ್ದರು, ಅವರ ಪ್ರಾಮಾಣಿಕತೆ ಮತ್ತು ನಿಷ್ಠೆ ಎಷ್ಟು ಅಪಾರವಾದುದು ಎಂಬ ಅಂಶಗಳನ್ನು ಒಂದೊಂದಾಗಿ ಪಟ್ಟಿ ಮಾಡಿದರು. ನಷ್ಟದ ತೂಕಕ್ಕಿಂತ, ಆ ವ್ಯಕ್ತಿಯ ಇಷ್ಟು ವರ್ಷಗಳ ಸೇವೆಯ ತೂಕವೇ ಹೆಚ್ಚಾಗಿತ್ತು.
ಅಲ್ಲಿ ನೆರೆದಿದ್ದ ಅಧಿಕಾರಿಗಳಿಗೆ ಆಶ್ಚರ್ಯವಾಯಿತು. ಆದಿತ್ಯ ಬಿರ್ಲಾ ಅವರು ಆ ಅಧಿಕಾರಿ ಯನ್ನು ಹೀಯಾಳಿಸಲಿಲ್ಲ ಅಥವಾ ಅವಮಾನಿಸಲಿಲ್ಲ. ಬದಲಿಗೆ, ಅವರ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ಮತ್ತೆ ಕೆಲಸ ಮುಂದುವರಿಸಲು ಅವಕಾಶ ನೀಡಿದರು.
ಈ ಘಟನೆಯನ್ನು ಹತ್ತಿರದಿಂದ ನೋಡಿದ ಇನ್ನೊಬ್ಬ ಹಿರಿಯ ಅಧಿಕಾರಿ ಮುಂದೆ ಹೀಗೆ ಹೇಳಿಕೊಂಡರು, ಯಾರ ಮೇಲಾದರೂ ಅತಿಯಾದ ಕೋಪ ಬಂದು ಅವರನ್ನು ತರಾಟೆಗೆ ತೆಗೆದುಕೊಳ್ಳಬೇಕು ಎನಿಸಿದಾಗ, ನಾನು ಈಗಲೂ ಆದಿತ್ಯ ಬಿರ್ಲಾ ಅವರ ಈ ಮಂತ್ರವನ್ನೇ ಪಾಲಿಸುತ್ತೇನೆ. ತಕ್ಷಣ ಪ್ರತಿಕ್ರಿಯಿಸುವ ಬದಲು, ಅವರ ಒಳ್ಳೆಯ ಗುಣಗಳು ಮತ್ತು ಅವರು ಈ ಹಿಂದೆ ನೀಡಿದ ಕೊಡುಗೆಗಳ ಪಟ್ಟಿಯನ್ನು ಸಿದ್ಧಪಡಿಸುತ್ತೇನೆ.
ಆ ಪಟ್ಟಿ ಮುಗಿಯುವ ಹೊತ್ತಿಗೆ ನನ್ನ ಕೋಪವೆಲ್ಲಾ ಕರಗಿ ಹೋಗಿರುತ್ತದೆ. ಎದುರಿಗಿರುವ ವ್ಯಕ್ತಿಯನ್ನು ನೋಡುವ ದೃಷ್ಟಿಕೋನವೇ ಬದಲಾಗಿರುತ್ತದೆ. ಕೋಪದ ಕೈಗೆ ಬುದ್ಧಿ ಕೊಟ್ಟಿದ್ದರೆ ಆದಿತ್ಯ ಬಿರ್ಲಾ ಅವರು ಅಂದು ಒಬ್ಬ ಸಮರ್ಥ ವ್ಯಕ್ತಿಯನ್ನು ಕಳೆದುಕೊಳ್ಳು ತ್ತಿದ್ದರು. ಆದರೆ ಅವರು ಆರಿಸಿಕೊಂಡ ಹಾದಿ ಮನುಷ್ಯತ್ವದ್ದು. ಒಬ್ಬ ಮನುಷ್ಯ ಮಾಡಿದ ಒಂದು ತಪ್ಪಿಗಿಂತ, ಆತ ಮಾಡಿದ ನೂರು ಒಳ್ಳೆಯ ಕೆಲಸಗಳು ದೊಡ್ಡವು ಎಂದು ಅವರು ಸಾಬೀತುಪಡಿಸಿದ್ದರು. ಈ ಘಟನೆಯು ಇಂದಿಗೂ ಕಾರ್ಪೊರೇಟ್ ಜಗತ್ತಿನಲ್ಲಿ ನಾಯಕತ್ವದ ಗುಣಕ್ಕೆ ಒಂದು ಭಾವನಾತ್ಮಕ ಉದಾಹರಣೆಯಾಗಿ ಉಳಿದಿದೆ.
ನಮಗೂ ಕೂಡ ಜೀವನದಲ್ಲಿ ಇಂತಹ ಅನೇಕ ಸನ್ನಿವೇಶಗಳು ಎದುರಾಗುತ್ತವೆ. ಮನೆಯ ವರು, ಆಪ್ತರು, ಸ್ನೇಹಿತರು ಗೊತ್ತಿದ್ದೋ ಗೊತ್ತಿಲ್ಲದೆಯೋ ಮನಸ್ಸಿಗೆ ಅಹಿತವೇನಿಸುವ ಕೆಲಸಗಳನ್ನು ಮಾಡಿ ಬಿಡುತ್ತಾರೆ. ಆಗ ಸಿಟ್ಟಿನ ಭರದಲ್ಲಿ ಅಥವಾ ಮನಸ್ಸಿನ ಕಹಿಯೊಡನೆ ಅವರೊಡನೆ ವ್ಯವಹರಿಸುವುದಕ್ಕಿಂತ ಸಮಾಧಾನವಾಗಿ ಇಡೀ ಸಂದರ್ಭವನ್ನು ಪರಾಮ ರ್ಶಿಸಿ ನೋಡುವ ತಾಳ್ಮೆ ನಮಗಿದ್ದಾಗ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು? ಎಷ್ಟು ಪ್ರತಿಕ್ರಿಯಿ ಸಬೇಕು? ಎನ್ನುವ ಸೂಕ್ಷ್ಮ ಅರಿವಾಗಬಹುದು.
ಕೆಲವೊಮ್ಮೆ ಪ್ರತಿಕ್ರಿಯೆಯ ಅಗತ್ಯವೂ ಇರುವುದಿಲ್ಲ. ತಪ್ಪು ಮಾಡಿದವರು ನಮಗಿಂತ ಹೆಚ್ಚಾಗಿ ಸಂಕಟವನ್ನು ಅನುಭವಿಸಿ ಪಶ್ಚಾತಾಪ ಪಟ್ಟು ನೊಂದಿರುತ್ತಾರೆ. ನಮ್ಮ ಮೌನವೇ ಕೆಲವೊಮ್ಮೆ ಅವರಿಗೆ ತಲುಪಿಸಬೇಕಾದ ಮಾತನ್ನು ತಲುಪಿಸಿರುತ್ತದೆ.