ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಶ್ಚಿಮಘಟ್ಟವೇ ನಿಮ್ಮ ಜೀವನಾಡಿ

ಹಿಮಾಲಯಕ್ಕೆ ಹಿಮನದಿಗಳು ಜೀವನಾಡಿಯಾಗಿದ್ದರೆ, ಕರ್ನಾಟಕಕ್ಕೆ ಪಶ್ಚಿಮಘಟ್ಟಗಳ ದಟ್ಟ ಕಾಡು ಗಳೇ ಜೀವನಾಡಿ. ಕಾವೇರಿ, ತುಂಗಭದ್ರಾ, ಶರಾವತಿ, ನೇತ್ರಾವತಿ ಸೇರಿದಂತೆ ಅನೇಕ ನದಿಗಳು ಇಲ್ಲಿಯೇ ಹುಟ್ಟು ತ್ತವೆ. ಪಶ್ಚಿಮಘಟ್ಟಗಳ ಆರೋಗ್ಯವೇ ಕರ್ನಾಟಕದ ನೀರಿನ ಭದ್ರತೆಯನ್ನು ನಿರ್ಧರಿಸುತ್ತದೆ. ಈ ವರ್ಷ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಸ್ತುತ

ಶಿವಯೋಗಿ ಎಂ.ವಿ., ರಾಂಪುರ

ಈ ವರ್ಷ ಕರ್ನಾಟಕದಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ರಾಜ್ಯದ ಹಲವು ಜಿಲ್ಲೆಗಳು ಬರಗಾಲದ ಭೀತಿಯನ್ನು ಎದುರಿಸುತ್ತಿವೆ. ಕೆರೆ-ಕಟ್ಟೆಗಳು ಬರಿದಾಗುತ್ತಿವೆ, ಕೃಷಿ ಚಟುವಟಿಕೆ ಕುಂಠಿತವಾಗುತ್ತಿದೆ, ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗು ತ್ತಿದೆ.

ಈ ಪರಿಸ್ಥಿತಿಯಲ್ಲಿ ಒಂದು ಪ್ರಶ್ನೆ ನಮ್ಮನ್ನು ಕಾಡಲೇಬೇಕು - ನಮ್ಮ ಜೀವನಾಡಿಯಾದ ಪಶ್ಚಿಮ ಘಟ್ಟಗಳನ್ನು ನಾವು ಸಮರ್ಪಕವಾಗಿ ಸಂರಕ್ಷಿಸುತ್ತಿದ್ದೇವೆಯೇ? ಹವಾಗುಣ ಬದಲಾವಣೆಯ ಪರಿಣಾಮಗಳು ಈಗ ಕೇವಲ ವಿಜ್ಞಾನಿಗಳ ಎಚ್ಚರಿಕೆಯಾಗಿ ಉಳಿದಿಲ್ಲ. ಅವು ನಮ್ಮ ದೈನಂದಿನ ಬದುಕಿನ ಭಾಗವಾಗುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಭೂಕುಸಿತ, ಕಾಡ್ಗಿಚ್ಚು, ಉಷ್ಣಾಂಶ ಏರಿಕೆ ಮತ್ತು ನೀರಿನ ಕೊರತೆ - ಇವೆಲ್ಲವೂ ಒಂದೇ ಸಮಸ್ಯೆಯ ವಿವಿಧ ಮುಖಗಳು. ಇತ್ತೀಚೆಗೆ ಹಿಮಾಚಲ ಪ್ರದೇಶ ಸರಕಾರವು ವಿಶ್ವಸಂಸ್ಥೆಯ ಸಹಯೋಗ ದಲ್ಲಿ ಸಿದ್ಧಪಡಿಸಿರುವ ವರದಿಯು ಆತಂಕಕಾರಿ ಚಿತ್ರಣ ನೀಡಿದೆ.

ಇದನ್ನೂ ಓದಿ: Roopa Gururaj Column: ಕಾಶಿಯ ಅವಿಮುಕ್ತ ಕ್ಷೇತ್ರ ಮತ್ತು ಡುಂಢಿ ಗಣೇಶನ ರಹಸ್ಯ

ಕಳೆದ ನಾಲ್ಕು ವರ್ಷಗಳಲ್ಲಿ ನೈಸರ್ಗಿಕ ವಿಕೋಪಗಳು ಮತ್ತು ಹವಾಗುಣ ಬದಲಾವಣೆಯಿಂದ ಸುಮಾರು 46 ಸಾವಿರ ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟ ಸಂಭವಿಸಿದೆ. ಸಾವಿರಾರು ಕುಟುಂಬಗಳು ವಲಸೆ ಹೋಗಿವೆ. ಮೇಘಸೋಟ, ಹಿಮನದಿ ಪ್ರವಾಹ, ಭೂಕುಸಿತ ಮತ್ತು ಕಾಡ್ಗಿಚ್ಚು ಗಳು ಹೆಚ್ಚುತ್ತಿವೆ. ಇದು ಕೇವಲ ಹಿಮಾಚಲದ ಸಮಸ್ಯೆಯಲ್ಲ. ಇಡೀ ಭಾರತದ ಭವಿಷ್ಯದ ಎಚ್ಚರಿಕೆ ಯಾಗಿದೆ. ಹಿಮಾಲಯದಲ್ಲಿ ಮಂಜುಗಡ್ಡೆಗಳು ಕರಗುತ್ತಿದ್ದರೆ, ಕರ್ನಾಟಕದಲ್ಲಿ ಪಶ್ಚಿಮಘಟ್ಟಗಳು ನಿಧಾನವಾಗಿ ತಮ್ಮ ನೈಸರ್ಗಿಕ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ.

ಹಿಮಾಲಯಕ್ಕೆ ಹಿಮನದಿಗಳು ಜೀವನಾಡಿಯಾಗಿದ್ದರೆ, ಕರ್ನಾಟಕಕ್ಕೆ ಪಶ್ಚಿಮಘಟ್ಟಗಳ ದಟ್ಟ ಕಾಡುಗಳೇ ಜೀವನಾಡಿ. ಕಾವೇರಿ, ತುಂಗಭದ್ರಾ, ಶರಾವತಿ, ನೇತ್ರಾವತಿ ಸೇರಿದಂತೆ ಅನೇಕ ನದಿಗಳು ಇಲ್ಲಿಯೇ ಹುಟ್ಟುತ್ತವೆ. ಪಶ್ಚಿಮಘಟ್ಟಗಳ ಆರೋಗ್ಯವೇ ಕರ್ನಾಟಕದ ನೀರಿನ ಭದ್ರತೆಯನ್ನು ನಿರ್ಧರಿಸುತ್ತದೆ. ಈ ವರ್ಷ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಕುಡಿಯುವ ನೀರಿನ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳ ದಿರಬೇಕಾದರೆ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಅತ್ಯುನ್ನತ ಆದ್ಯತೆ ನೀಡಬೇಕು. ಆದರೆ ವಾಸ್ತವ ಚಿತ್ರಣ ಭಿನ್ನವಾಗಿದೆ.

ಗಣಿಗಾರಿಕೆ, ಅಕ್ರಮ ಅರಣ್ಯ ನಾಶ, ಬೆಟ್ಟಗಳನ್ನು ಸೀಳಿ ರಸ್ತೆ ನಿರ್ಮಾಣ, ಅತಿಯಾದ ಪ್ರವಾಸೋ ದ್ಯಮ, ಸುರಂಗ ಕಾಮಗಾರಿಗಳು ಮತ್ತು ವೈeನಿಕ ಅಧ್ಯಯನವಿಲ್ಲದ ಅಭಿವೃದ್ಧಿ ಯೋಜನೆಗಳು ಪಶ್ಚಿಮಘಟ್ಟಗಳ ಸೂಕ್ಷ ಪರಿಸರಕ್ಕೆ ದೊಡ್ಡ ಹೊಡೆತ ನೀಡುತ್ತಿವೆ. ವಿeನಿಗಳು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ಕಡೆಗಣಿಸುವ ಪ್ರವೃತ್ತಿ ಮುಂದು ವರಿದಿದೆ. ಎತ್ತಿನಹೊಳೆ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಪರಿಸರ ಪರಿಣಾಮಗಳ ಬಗ್ಗೆ ಸ್ಥಳೀಯರು ನಿರಂತರವಾಗಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಶರಾವತಿ ಪಂ ಸ್ಟೋರೇಜ್ ಯೋಜನೆಯಂತಹ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ಪರಿಸರ ವಾದಿಗಳು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಯೋಜನೆ ಪರಿಸರ ಸಮತೋಲನ ವನ್ನು ಹಾಳು ಮಾಡದಂತೆ ವೈಜ್ಞಾನಿಕ ಮೌಲ್ಯಮಾಪನ ಮತ್ತು ಸಾರ್ವಜನಿಕ ಚರ್ಚೆ ನಡೆಯು ವುದು ಅತ್ಯಗತ್ಯ. ಪಶ್ಚಿಮಘಟ್ಟಗಳ ನಾಶದಿಂದ ಕೇವಲ ಮಳೆ ಕಡಿಮೆಯಾಗುವುದಿಲ್ಲ. ಮಣ್ಣಿನ ಫಲವತ್ತತೆ ಕುಸಿಯುತ್ತದೆ. ಅಂತರ್ಜಲ ಮಟ್ಟ ಇಳಿಯುತ್ತದೆ. ಜೀವವೈವಿಧ್ಯ ನಾಶವಾಗು ತ್ತದೆ. ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತದೆ. ಆಹಾರ ಭದ್ರತೆ ಮತ್ತು ಆರ್ಥಿಕತೆಯ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಜಿಡಿಪಿ ಹೆಚ್ಚಿಸುವುದು ಅಭಿವೃದ್ಧಿಯ ಏಕೈಕ ಮಾನದಂಡವಾಗ ಬಾರದು.

ನಿಜವಾದ ಅಭಿವೃದ್ಧಿ ಎಂದರೆ ಮುಂದಿನ ತಲೆಮಾರುಗಳಿಗೂ ನೀರು, ಕಾಡು, ಮಣ್ಣು ಮತ್ತು ಶುದ್ಧ ಗಾಳಿಯನ್ನು ಉಳಿಸುವುದು. ಪ್ರಕೃತಿಯನ್ನು ಹಾಳುಮಾಡಿ ಗಳಿಸುವ ಆರ್ಥಿಕ ಬೆಳವಣಿಗೆ ಶಾಶ್ವತ ವಾಗಿರುವುದಿಲ್ಲ. ಪಶ್ಚಿಮಘಟ್ಟಗಳ ಸಂರಕ್ಷಣೆ ಎಂದರೆ ಕೇವಲ ಪರಿಸರ ರಕ್ಷಣೆ ಅಲ್ಲ. ಅದು ಕರ್ನಾಟಕದ ಅಸ್ತಿತ್ವದ ರಕ್ಷಣೆ. ಮಲೆನಾಡಿನ ರೈತ, ಕರಾವಳಿಯ ಮೀನುಗಾರ, ಒಳನಾಡಿನ ಕೃಷಿಕ, ಬೆಂಗಳೂರಿನ ಉದ್ಯೋಗಿ - ಎಲ್ಲರ ಬದುಕೂ ಪಶ್ಚಿಮಘಟ್ಟಗಳ ಮೇಲೆ ಅವಲಂಬಿತವಾಗಿದೆ.

ಸರಕಾರವು ವೈಜ್ಞಾನಿಕ ವರದಿಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪರಿಸರ ಸೂಕ್ಷ ಪ್ರದೇಶ ಗಳಲ್ಲಿ ನಿಯಂತ್ರಣವಿಲ್ಲದ ಅಭಿವೃದ್ಧಿಗೆ ಕಡಿವಾಣ ಹಾಕಬೇಕು. ಅಕ್ರಮ ಗಣಿಗಾರಿಕೆ, ಅರಣ್ಯ ನಾಶ ಮತ್ತು ಬೆಟ್ಟ ಕತ್ತರಿಸುವ ಕಾಮಗಾರಿಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಸ್ಥಳೀಯ ಸಮುದಾಯ ಗಳನ್ನು ಅರಣ್ಯ ಸಂರಕ್ಷಣೆಯ ಭಾಗವಾಗಿಸಬೇಕು.

ಸುಸ್ಥಿರ ಕೃಷಿ, ಪರಿಸರ ಸ್ನೇಹಿ ಪ್ರವಾಸೋದ್ಯಮ ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಉತ್ತೇಜನ ನೀಡಬೇಕು. ಪ್ರಕೃತಿಯನ್ನು ನಿರ್ಲಕ್ಷಿಸಿದರೆ, ಅದು ನಮಗೆ ದೊಡ್ಡ ಹೊಡೆತ ನೀಡಲಿದೆ. ಪಶ್ಚಿಮ ಘಟ್ಟಗಳನ್ನು ಉಳಿಸುವುದು ಪರಿಸರ ಪ್ರೇಮಿಗಳ ಕೆಲಸ ಮಾತ್ರವಲ್ಲ, ಅದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಕನ್ನಡ ನಾಡಿನ ಭವಿಷ್ಯ, ನಮ್ಮ ನದಿಗಳ ಹರಿವು, ರೈತರ ಬದುಕು ಮತ್ತು ಮುಂದಿನ ಪೀಳಿಗೆಯ ನೆಮ್ಮದಿ ಪಶ್ಚಿಮಘಟ್ಟಗಳ ಉಳಿವಿನ ಅಡಗಿದೆ. ಇಂದು ನಾವು ಕೈಗೊಳ್ಳುವ ನಿರ್ಧಾರಗಳೇ ನಾಳೆಯ ನಮ್ಮ ನಾಡನ್ನು ರೂಪಿಸಲಿವೆ.