ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravi Sajangadde Column: ಅರಾಜಕತೆಯ ಕಾಡ್ಗಿಚ್ಚು: ಭಾರತ ಸುರಕ್ಷಿತವೆ ?

ಪ್ರಸಕ್ತ ಸನ್ನಿವೇಶದಲ್ಲಿ ಅಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಅವಲೋಕಿಸಿದಾಗ, ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಅತಿವೇಗದ (ವ್ಯತಿರಿಕ್ತ) ಪ್ರಭಾವದಿಂದಾಗಿ ಯುವ ಸಮುದಾಯ, ಅದರಲ್ಲೂ ವಿಶೇಷವಾಗಿ ‘ಜೆನ್ ಝೀ’ ಪೀಳಿಗೆ ಮತ್ತು ಹಲವೆಡೆ ಈ ಪೀಳಿಗೆಯ ಹೆಸರು ಹೇಳಿ ಕೊಂಡು ಇತರ ದೇಶವಿರೋಧಿ/ಆಡಳಿತ ವಿರೋಧಿ ಗುಂಪುಗಳು ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ವಿಚಾರ-ನಿರ್ಧಾರಕ್ಕೆ ವಿರುದ್ಧವಾಗಿ ಧ್ವನಿ ಎತ್ತುವುದು, ಹೋರಾಡುವುದು, ಹಿಂಸಾಚಾರಕ್ಕೆ ಇಳಿಯುವುದು ತೀರಾ ಸಾಮಾನ್ಯವಾಗಿದೆ!

ಜಗದಗಲ

ರವೀ ಸಜಂಗದ್ದೆ

ಪ್ರಾಕೃತಿಕ ಸೌಂದರ್ಯಕ್ಕೆ, ಸಾಮಾಜಿಕ ಸ್ವಾಸ್ಥ್ಯಕ್ಕೆ, ಧಾರ್ಮಿಕ ಸಾಮರಸ್ಯಕ್ಕೆ, ವಿವಿಧ ಬಗೆಯ ಸಂಪನ್ಮೂಲಗಳಿಗೆ, ಮನುಕುಲದ ಅಸೀಮ ಸಂತಸ, ಸಾತತ್ಯ ಮತ್ತು ನೆಮ್ಮದಿಯ ತಾಣವಾಗಿ ವಿಶ್ವದ ಬಹುತೇಕ ಜನರು ಯುರೋಪ್ ಖಂಡವನ್ನು ನೋಡುತ್ತಿದ್ದ ಸುವರ್ಣ ಕಾಲವೊಂದಿತ್ತು. ಯುರೋಪ್ ನಿಜಾರ್ಥದಲ್ಲಿ ಪ್ರಪಂಚದ ಮೇಲಿನ ಸ್ವರ್ಗವಾಗಿತ್ತು. ಈಗ ಎಲ್ಲವೂ ಬದಲಾಗಿದೆ.

ದಂಗೆ, ಧರಣಿ, ಪ್ರತಿಭಟನೆ, ಹಿಂಸೆ, ಗಲಭೆ, ಅಸಹಿಷ್ಣುತೆ ಮುಂತಾದ ಅಯಾಚಿತ ವಿಷಯಗಳಿಗೆ ಯುರೋಪಿನ ಬಹುತೇಕ ರಾಷ್ಟ್ರಗಳು ತುತ್ತಾಗಿ, ಅಲ್ಲಿನ ಜನರು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ.

ಪ್ರಸಕ್ತ ಸನ್ನಿವೇಶದಲ್ಲಿ ಅಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಅವಲೋಕಿಸಿದಾಗ, ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಅತಿವೇಗದ (ವ್ಯತಿರಿಕ್ತ) ಪ್ರಭಾವದಿಂದಾಗಿ ಯುವ ಸಮುದಾಯ, ಅದರಲ್ಲೂ ವಿಶೇಷವಾಗಿ ‘ಜೆನ್ ಝೀ’ ಪೀಳಿಗೆ ಮತ್ತು ಹಲವೆಡೆ ಈ ಪೀಳಿಗೆಯ ಹೆಸರು ಹೇಳಿ ಕೊಂಡು ಇತರ ದೇಶವಿರೋಧಿ/ಆಡಳಿತ ವಿರೋಧಿ ಗುಂಪುಗಳು ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ವಿಚಾರ-ನಿರ್ಧಾರಕ್ಕೆ ವಿರುದ್ಧವಾಗಿ ಧ್ವನಿ ಎತ್ತುವುದು, ಹೋರಾಡುವುದು, ಹಿಂಸಾಚಾರಕ್ಕೆ ಇಳಿಯುವುದು ತೀರಾ ಸಾಮಾನ್ಯವಾಗಿದೆ!

ಆರಂಭದ ಹಂತಗಳಲ್ಲಿ ಭ್ರಷ್ಟಾಚಾರ, ನಿರುದ್ಯೋಗ, ಆರ್ಥಿಕ ಮುಗ್ಗಟ್ಟು, ಬೆಲೆ ಏರಿಕೆ, ಸಾರ್ವಜನಿಕ ಸೇವೆಗಳ ವೈಫಲ್ಯದಂತಹ ಜನಪರ ಕಾರಣ- ಕಾಳಜಿಗಳನ್ನು ಮುಂದಿಟ್ಟುಕೊಂಡು, ಸೌಮ್ಯವಾಗಿ ಮತ್ತು ಸಾಂವಿಧಾನಿಕ ಚೌಕಟ್ಟಿನಲ್ಲಿ ಶುರುವಾಗುವ ಇಂತಹ ಪ್ರತಿಭಟನೆಗಳು, ಕಾಲಕ್ರಮೇಣ ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿರುವುದು, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗುವುದು, ಪ್ರಾಣಹಾನಿ ಮುಂತಾದ ಅತಿರೇಕಗಳು ಜಾಗತಿಕ ಮಟ್ಟದಲ್ಲಿ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಈಗ ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ನಡೆಯುತ್ತಿರುವುದು ಇಡೀ ಮನುಕುಲಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ.

ಇದನ್ನೂ ಓದಿ: Ravi Sajangadde Column: ರಾಜ್ಯ ರಾಜಕೀಯದ ಇಂಟರೆಸ್ಟಿಂಗ್‌ ಕವಲುಗಳು !

ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ಉಂಟಾದ ತೀವ್ರ ಆರ್ಥಿಕ ದಿವಾಳಿತನದ ವಿರುದ್ಧದ ದಂಗೆ ಮತ್ತು ಕಳೆದ ವರ್ಷದಲ್ಲಿ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಆಂದೋಲನದ ರೂಪದಲ್ಲಿ ಮೊದಲು ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಎರಡೂ ರಾಷ್ಟ್ರಗಳಲ್ಲಿ ಕೆಲವೇ ದಿನಗಳಲ್ಲಿ ಈ ಹೋರಾಟಗಳು ಹಿಂಸಾತ್ಮಕವಾಗಿ ತಿರುಗಿ, ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚುವುದು ಮತ್ತು ಇಡೀ ಆಡಳಿತ ವ್ಯವಸ್ಥೆಯನ್ನೇ ಅಸ್ಥಿರಗೊಳಿಸಿ, ನೋಡ ನೋಡುತ್ತಿದ್ದಂತೆಯೇ ಆಯಾ ದೇಶಗಳ ಪ್ರಧಾನಿಗಳು ಪ್ರಾಣ ರಕ್ಷಣೆಗಾಗಿ ದೇಶಬಿಟ್ಟು ಓಡಿಹೋಗುವ ಪರಿಸ್ಥಿತಿ ನಿರ್ಮಾಣವಾಯಿತು.

ಇದೇ ವಿಚಾರವಾಗಿ ಸದ್ದು- ಸುದ್ದಿ ಮಾಡುತ್ತಿರುವುದು ಯುರೋಪ್‌ನಲ್ಲಿ ಕೆಲವು ವಾರಗಳಿಂದ ನಿರಂತರ ವಾಗಿ ನಡೆಯುತ್ತಿರುವ ಸಾಮಾಜಿಕ ಅಶಾಂತಿ. ಅಲ್ಲಿನ ಫ್ರಾನ್ಸ್, ಸ್ಪೇನ್, ಪೋರ್ಚುಗಲ್, ಇಟಲಿ, ಬೆಲ್ಜಿಯಂ ಮುಂತಾದ ದೇಶಗಳಲ್ಲಿ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿವೆ. ಹಣದುಬ್ಬರ, ನಿತ್ಯ ಜೀವನದ ವೆಚ್ಚದಲ್ಲಿನ ವಿಪರೀತ ಏರಿಕೆ, ವಸತಿ ಕ್ಷೇತ್ರದಲ್ಲಿ ಬಿಕ್ಕಟ್ಟು, ನಿರುದ್ಯೋಗ, ವಲಸಿಗರ ಸಮಸ್ಯೆಯಂತಹ ಸ್ಥಳೀಯ ಆರ್ಥಿಕ-ಸಾಮಾಜಿಕ ಅಸಮತೋಲನಗಳು ಮತ್ತು ಇತರೇ ಜ್ವಲಂತ ಸಮಸ್ಯೆಗಳು ಅಲ್ಲಿನ ಯುವ ಜನತೆಯನ್ನು ಬೀದಿಗಿಳಿಯುವಂತೆ ಮಾಡಿದೆ. ‌

ಇದು ಹಿಂಸಾತ್ಮಕ ರೂಪ ತಾಳಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಒಟ್ಟಿನಲ್ಲಿ ಯುರೋಪ್ ಖಂಡವು ಹಿಂಸಾತ್ಮಕ ಪ್ರತಿಭಟನೆಗಳಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಅತ್ಯಂತ ರಮಣೀಯ ತಾಣವಾಗಿರುವ ಪ್ಯಾರಿಸ್ ನಗರ ತನ್ನ ನೈಸರ್ಗಿಕ ಹೊಳಪು, ಸೌಂದರ್ಯ ಮತ್ತು ರಮ್ಯತೆಯನ್ನು ಕಳಕೊಂಡು ನಲುಗುತ್ತಿದೆ.

Ravi Sajangade 28

ಯುರೋಪಿನ ಬಹುತೇಕ ಸುಂದರ ನಗರಗಳು ಮತ್ತು ಪಟ್ಟಣಗಳ ಪರಿಸ್ಥಿತಿ ಅಯೋಮಯವಾಗಿದೆ. ಆಡಳಿತ ವಿರೋಧಿ ಹೆಸರಿನಲ್ಲಿ ಶುರುವಾದ ಪ್ರತಿಭಟನೆಗಳು ದೇಶ ವಿರೋಧಿ ಶಕ್ತಿಗಳ ಕೈಯಲ್ಲಿ ಸಿಲುಕಿ ಇಡೀ ಯುರೋಪ್ ಖಂಡ ನಲುಗುತ್ತಿದೆ, ನಶಿಸುತ್ತಿದೆ, ಉರಿಯುತ್ತಿದೆ! ಇಷ್ಟು ದೊಡ್ಡ ಮಾದರಿಯ ಮತ್ತು ಇಷ್ಟೊಂದು ದೇಶಗಳಲ್ಲಿ ಬಹುತೇಕ ಏಕಕಾಲಕ್ಕೆ ನಡೆಯುತ್ತಿರುವ ಈ ಪ್ರತಿಭಟನೆ, ಅಶಾಂತಿ ಸೃಷ್ಟಿಯ ಹಿಂದೆ ಬಲುದೊಡ್ಡ ಮುಖವಾಡ ಮತ್ತು ಕಾಣದ ಕೈಗಳು ಕೆಲಸ ಮಾಡುತ್ತಿರುವುದು ಸತ್ಯ. ಇದರ ಹಿಂದೆ ಕೇವಲ ಸ್ಥಳೀಯರ, ವಿರೋಧ ಪಕ್ಷಗಳ ಅಥವಾ ಸೋ ಕಾಲ್ಡ್ ಜೆನ್ ಝೀಗಳ ಅಸಮಾಧಾನ ಮಾತ್ರ ಇದ್ದಂತೆ ಕಾಣುತ್ತಿಲ್ಲ; ಬದಲಾಗಿ ಇದರ ಹಿಂದೆ ದೊಡ್ಡ ಮಟ್ಟದ ಭೂ-ರಾಜಕೀಯ ಸಂಚು ಮತ್ತು ಪ್ರಪಂಚವನ್ನು ತಂತಮ್ಮ ತೆಕ್ಕೆಗೆ ಪಡೆಯಲು ಹವಣಿಸುವ ಶಕ್ತಿಗಳ ಕೈವಾಡ ಅಡಗಿರುವುದು ನಿಚ್ಚಳ! ‌

ಸಾಮಾಜಿಕ ಜಾಲತಾಣಗಳ ವಿವಿಧ ಅಲ್ಗಾರಿದಂಗಳನ್ನು, ಪ್ರಭಾವವನ್ನು ಬಳಸಿಕೊಂಡು- ವಿಶ್ಲೇಷಿಸಿ ಸುಳ್ಳು ಸುದ್ದಿಗಳನ್ನು, ಪ್ರಚೋದನಕಾರಿ ವೀಡಿಯೊಗಳನ್ನು ಕೆಲವೇ ಸೆಕೆಂಡುಗಳಲ್ಲಿ ಲಕ್ಷಾಂತರ ಜನರಿಗೆ ತಲುಪಿಸಿ, ಯುವಜನತೆಯ ನೈತಿಕ ಮತ್ತು ಆರ್ಥಿಕ ಕಾಳಜಿ, ಆಲೋಚನೆಗಳನ್ನು ತಂತಮ್ಮ ಬೇಳೆ ಬೇಯಿಸಿಕೊಳ್ಳಲು ಅತ್ಯಂತ ವ್ಯವಸ್ಥಿತವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿರುವುದು ಬಹಳ ಸ್ಪಷ್ಟ.

ಜೆನ್ ಝೀ ಹೋರಾಟಗಳಿಗೆ ನಿರ್ದಿಷ್ಟ ಮುಖಂಡರು, ನೇತಾರರು, ದೊಡ್ಡ ಮಟ್ಟದ ಆರ್ಥಿಕ ಬಲ ಇಲ್ಲದಿರುವುದನ್ನು ಮನಗಂಡ ದುಷ್ಟ ಶಕ್ತಿಗಳು, ಅರಾಜಕತೆಯ ಪರವಾಗಿರುವ ಗುಂಪುಗಳು, ದೇಶದ್ರೋಹಿ ಸಂಘಟನೆಗಳು ಮತ್ತು ಶತ್ರುರಾಷ್ಟ್ರಗಳ ಅಗೋಚರ ಶಕ್ತಿಗಳು ಇಂಥಾ ಪ್ರತಿಭಟನಾ ನಿರತ ಗುಂಪುಗಳನ್ನು ತಮ್ಮ ನಿಯಂತ್ರಣಕ್ಕೆ ಸುಲಭವಾಗಿ ತೆಗೆದುಕೊಂಡು, ವಿಧ್ವಂಸಕ ಕೃತ್ಯಗಳಿಗೆ, ಹಿಂಸಾಚಾರಕ್ಕೆ ಬಳಸಿಕೊಳ್ಳುತ್ತವೆ.

ಇದರ ಜೊತೆಗೆ, ಹವಾಲಾ ದಂಧೆ, ಕ್ರಿಪ್ಟೋಕರೆನ್ಸಿ, ಮರೆಮಾಚಿದ ವಿದೇಶಿ ದೇಣಿಗೆ, ಕೆಲವು ಲಾಭರಹಿತ ಸಂಸ್ಥೆಗಳು ಎನಿಸಿರುವ ಪಂಗಡಗಳ ಮೂಲಕ ಪ್ರತಿಭಟನಾಕಾರರಿಗೆ ಹಣದ ಹೊಳೆ ಹರಿಸಿ, ಕಲ್ಲು ತೂರಾಟ, ಹಿಂಸಾತ್ಮಕ ಪ್ರತಿಭಟನೆಗಳಿಗೆ, ಕೋಮು ಗಲಭೆಗಳಿಗೆ ಆರ್ಥಿಕ ನೆರವು ಮತ್ತು ಸಹಕಾರ ಯಥೇಚ್ಛವಾಗಿ ಪೂರೈಸಲಾಗುತ್ತದೆ.

ಭಾರತದಲ್ಲೂ ಕಳೆದ ಒಂದು ದಶಕದಲ್ಲಿ ವಿವಿಧ ಹೆಸರುಗಳಿಂದ ಈ ರೀತಿಯ ಪ್ರತಿಭಟನೆಗಳು ನಡೆಯುತ್ತಿವೆ ಮತ್ತು ಸಮಾಧಾನದ ವಿಷಯವೆಂದರೆ ಕೇಂದ್ರ ಸರ್ಕಾರ ಎಲ್ಲವನ್ನೂ ಕೂಲಂಕಷ ವಾಗಿ ಪರಾಮರ್ಶಿಸಿ ಅರೆಯಬೇಕಾದ ಮದ್ದು ಅರೆದು, ಪ್ರತಿಭಟನೆಯ ಹೆಸರಿನಲ್ಲಿ ನಡೆಯುತ್ತಿರುವ ದೇಶ ವಿರೋಧಿ ಕುಮ್ಮಕ್ಕನ್ನು ಯಶಸ್ವಿಯಾಗಿ ಮತ್ತು ಸಮರ್ಪಕವಾಗಿ ಹತ್ತಿಕ್ಕುತ್ತಾ ಬಂದಿದೆ.

ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ ಮತ್ತು ಪ್ರತೀಬಾರಿ ಸಮರ್ಥ ಕೇಂದ್ರ ಸರ್ಕಾರ ಅದನ್ನು ಚಿವುಟಿ ಹಾಕಿ ದೇಶದ ಮತ್ತು ಜನರ ಹಿತ ಕಾಪಾಡುತ್ತಿದೆ. ಒಂದಂಶವಂತೂ ಸ್ಪಷ್ಟ! ಎಡೆ ನಡೆಯುತ್ತಿರುವ ಈ ಅರಾಜಕತೆಯ ಪರಮೋಚ್ಚ ಉದ್ದೇಶ ‘ಹೈಬ್ರಿಡ್ ವಾರ್’! ಪ್ರಸ್ತುತ ಸನ್ನಿವೇಶದಲ್ಲಿ ಜಗತ್ತು ಖಂಡಿತವಾಗಿಯೂ ಮತ್ತೊಂದು ನೇರಾನೇರ ಮಹಾಯುದ್ಧವನ್ನು ಕನಸಿನಲ್ಲಿಯೂ ಅಪೇಕ್ಷಿಸುತ್ತಿಲ್ಲ.

ಯುದ್ಧವು ಈಗ ಪರಂಪರಾಗತ ಶೈಲಿಯನ್ನು ದಾಟಿ ‘ಹೈಬ್ರಿಡ್ ವಾರ್’ ಅರ್ಥಾತ್ ಆರ್ಥಿಕ ಯುದ್ಧ, ಸೈಬರ್ ಯುದ್ಧ ಮತ್ತು ಸೈದ್ಧಾಂತಿಕ ಯುದ್ಧದತ್ತ ವಾಲುತ್ತಿದೆ! ಬಾಂಬ್‌ಗಳು, ಕ್ಷಿಪಣಿಗಳು, ಯುದ್ಧ ನೌಕೆಗಳು, ಬಂದೂಕುಗಳ ಬದಲಿಗೆ ಸುಳ್ಳು ಸುದ್ದಿಗಳು, ಆರ್ಥಿಕ ದಿಗ್ಬಂಧನಗಳು, ಆಂತರಿಕ ಅಶಾಂತಿ, ವ್ಯವಸ್ಥಿತ ನರೇಟಿವ್‌ಗಳು ಪ್ರಜಾಸಾತ್ಮಕವಾಗಿ ಚುನಾಯಿತವಾದ, ಬಹುಮತ ಮತ್ತು ಜನರ ಪ್ರೀತಿ-ಆಶೀರ್ವಾದ ಇರುವ ರಾಷ್ಟ್ರೀಯವಾದಿ ಸರ್ಕಾರಗಳನ್ನು ಕೆಡವಿ, ಅದರ ನೇತಾರರನ್ನು ಆಡಳಿತದಿಂದ ಕೆಳಗಿಳಿಸಿ, ಆ ಸ್ಥಾನದಲ್ಲಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಕೈಗೊಂಬೆ ಸರ್ಕಾರ ಗಳನ್ನು ಸ್ಥಾಪಿಸುವುದು ಈ ಅರಾಜಕತೆಯ ಹಿಂದಿರುವ ಏಕೈಕ ಸ್ಪಷ್ಟ ಉದ್ದೇಶವಾಗಿದೆ.

ರಷ್ಯಾ, ಅಮೆರಿಕಾ ಮತ್ತು ಚೀನಾ ಈ ವಿಚಾರದಲ್ಲಿ ಸಕ್ರಿಯವಾಗಿ ಯುದ್ಧಕ್ಕಿಳಿದಿರುವುದು ಓಪನ್ ಸೀಕ್ರೆಟ್. ಇಂಥಾ ವಿಷಣ್ಣ ಮತ್ತು ಸೂಕ್ಷ ಪರಿಸ್ಥಿತಿಯ ಸಂದರ್ಭದಲ್ಲಿ ಭಾರತದ ಮುಂದೆ ಹಲವಾರು ಸವಾಲುಗಳಿವೆ ಮತ್ತು ರಾಷ್ಟ್ರೀಯವಾದಿ ಕೇಂದ್ರ ಸರ್ಕಾರವೂ ಅನೇಕಾನೇಕ ಸಮರ್ಥ ಮತ್ತು ದಿಟ್ಟ ಕ್ರಮಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗಿ ಬಂದಿದೆ. ‌

ಭಾರತದಲ್ಲೂ ಸಿಎಎ ಪ್ರತಿಭಟನೆಗಳು, ಕೃಷಿ ಕಾನೂನುಗಳ ವಿರುದ್ಧದ ಆಂದೋಲನಗಳು ಹಾಗೂ ವಿವಿಧ ಸಂದರ್ಭಗಳಲ್ಲಿ ಜೆನ್ ಝೀ ಯುವಕರ ಭಾವನೆಗಳನ್ನು ಪ್ರಚೋದಿಸಿ, ದೇಶದ ಅಭಿವೃದ್ಧಿಗೆ ತೊಡಕುಂಟು ಮಾಡುವ ಯತ್ನಗಳು ಅವ್ಯಾಹತವಾಗಿ ನಡೆಯುತ್ತಿವೆ. ಅರ್ಬನ್ ನಕ್ಸಲರು ಮತ್ತು ಬಾಹ್ಯ/ ಅಂತಾರಾಷ್ಟ್ರೀಯ ಪ್ರಾಯೋಜಿತ ಗುಂಪುಗಳು-ಸಂಘಟನೆಗಳು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಹವಣಿಸುತ್ತಿದ್ದರೂ, ಕೇಂದ್ರ ಸರ್ಕಾರವು ಇಂತಹ ಕುಕೃತ್ಯಗಳನ್ನು ಅತ್ಯಂತ ಸಮರ್ಥ ವಾಗಿ ಹತ್ತಿಕ್ಕಿರುವುದು ದೇಶದೊಳಗಿನ ಅನೇಕರಿಗೆ ನುಂಗಲಾರದ ತುತ್ತು.

ದೇಶದ್ರೋಹಿ ಚಟುವಟಿಕೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವವರ ವಿರುದ್ಧ ಯುಎಪಿಎ ಮುಂತಾದ ಕಠಿಣ ಕಾನೂನುಗಳನ್ನು ಭಾರತದಲ್ಲಿ ಈಗಾಗಲೇ ಜಾರಿಗೊಳಿಸಲಾಗಿದೆ. ಎನ್ ಜಿಒಗಳ ಹೆಸರಿನಲ್ಲಿ ಅರಾಜಕತೆಗೆ ಹರಿಯುತ್ತಿದ್ದ ಅಕ್ರಮ ವಿದೇಶಿ ನೆರವುಗಳಿಗೆ ಎ-ಸಿಆರ್‌ಎ ನಿಯಂತ್ರಣದ ಮೂಲಕ ಬಹುತೇಕ ಬ್ರೇಕ್ ಹಾಕಲಾಗಿದೆ.

‘ಡಿಜಿಟಲ್ ನಿಗಾ’ದ ಮೂಲಕ ಸುಳ್ಳು ಸುದ್ದಿ ಹಬ್ಬಿಸುವ ಜಾಲಗಳನ್ನು ನಿಷ್ಕ್ರಿಯಗೊಳಿಸುವುದರ ಜೊತೆಗೆ, ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಪ್ರತಿಭಟಿಸುವ ಹಕ್ಕಿಗೆ ಗೌರವ ನೀಡಿ, ಅಗತ್ಯವಿದ್ದಾಗ ಸಂವಾದದ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ದೇಶದಲ್ಲಿ ಯಾವುದೇ ರೀತಿಯಲ್ಲಿ ಅರಾಜಕತೆ ಸೃಷ್ಟಿಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗು ತ್ತಿದೆ. ಇದು ಸಮರ್ಥ ಸರ್ಕಾರ ಮತ್ತು ಸಶಕ್ತ ನಾಯಕತ್ವದ ಅಪ್ರತಿಮ ಶಕ್ತಿ.

ಇನ್ನು ಯುವ ಪೀಳಿಗೆಯ ಅಪಾರ ಶಕ್ತಿಯನ್ನು ವಿನಾಶಕಾರಿ ಅಸ್ತ್ರವನ್ನಾಗಿ, ದೇಶ ವಿರೋಧಿ ಶಕ್ತಿಯಾಗಿ ಬಳಸಿಕೊಳ್ಳುತ್ತಿರುವ, ಕಾಣದ ಕೈಗಳು ಮಾಡುತ್ತಿರುವ ಜಾಗತಿಕ ಪಿತೂರಿಯನ್ನು ಪ್ರತಿಯೊಂದು ರಾಷ್ಟ್ರವೂ ಗಂಭೀರವಾಗಿ ಪರಿಗಣಿಸಿ ಅದನ್ನು ಮೊಳಕೆಯ ಹತ್ತಿಕ್ಕುವ ಕಾರ್ಯ ಮತ್ತು ಕಾರ್ಯಯೋಜನೆ ಜಾರಿಗೊಳಿಸಬೇಕು.

ಹೋರಾಟ, ಪ್ರತಿಭಟನೆ, ವಿರೋಧ ಮುಂತಾದವು ಪ್ರಜಾಪ್ರಭುತ್ವವು ಪ್ರತಿಯೊಬ್ಬ ನಾಗರಿಕನಿಗೆ ಒದಗಿಸಿರುವ ಮೂಲಭೂತ ಹಕ್ಕಾಗಿದ್ದರೂ, ಅದು ದೇಶದ ಅಖಂಡತೆ, ಸಾರ್ವಭೌಮತೆ ಮತ್ತು ಕಾನೂನಿನ ಚೌಕಟ್ಟಿಗೆ ನಿಸ್ಸಂಶಯವಾಗಿ ಒಳಪಟ್ಟಿರಬೇಕು. ಭಾರತವು ತನ್ನ ಬಲವಾದ ಪ್ರಜಾ ಪ್ರಭುತ್ವ ವ್ಯವಸ್ಥೆ, ಬಲವಾದ ನಾಯಕತ್ವ ಮತ್ತು ಪ್ರಜೆಗಳ ಎಚ್ಚರಿಕೆಯ ಹೆಜ್ಜೆಯಿಂದಾಗಿ ಇಂತಹ ಆಂತರಿಕ ಅಶಾಂತಿಗಳನ್ನು ವಿ-ಲಗೊಳಿಸುತ್ತಿದ್ದು, ವಿಶ್ವಗುರು ಆಗುವ ಗುರಿಯತ್ತ ದಾಪುಗಾಲಿಡು ತ್ತಿದೆ. ಜಗದಗಲ ಹಬ್ಬಿರುವ-ಹರಡಿರುವ ಈ ಯುದ್ಧೋನ್ಮಾದ, ಅಶಾಂತಿ, ಗಲಭೆ, ಹಿಂಸೆ ಎಂದೆಂದಿಗೂ ಕೊನೆಯಾಗಿ ಇಡೀ ಪ್ರಪಂಚವು ನೆಮ್ಮದಿಯ, ಸುಂದರ, ಭವ್ಯ ಬದುಕಿನ ತಾಣವಾಗಲಿ. ಸರ್ವೇ ಸಂತು ನಿರಾಮಯಾಃ. ಹಾಗಾದೀತೇ...?