ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ವಿಶ್ವಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ಞನ ಹುದ್ದೆಗೆ ಮುಳುವಾದ And ಎಂಬ ಪದ !

ಸಂಸ್ಥೆಯ ನೂತನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಅಧಿಕಾರ ವಹಿಸಿಕೊಂಡಿದ್ದ ಪಾಲ್ ರೋಮರ್ ಅವರ ಕೈಯಿಂದ ಸಂಶೋಧನಾ ವಿಭಾಗದ ನಿಯಂತ್ರಣವನ್ನು ಏಕಾಏಕಿ ಕಿತ್ತುಕೊಳ್ಳಲಾಯಿತು. ಕಾರ್ಯಾ ಚರಣೆ ಮತ್ತು ಸಂಶೋಧನಾ ವಿಭಾಗಗಳನ್ನು ಹತ್ತಿರ ತರಲು ಈ ಬದಲಾವಣೆ ಮಾಡಲಾಗಿದೆ ಎಂದು ಆಂತರಿಕ ಸುತ್ತೋಲೆಯಲ್ಲಿ ಸಬೂಬು ಹೇಳಲಾಯಿತಾದರೂ, ರೋಮರ್ ಅವರು ಬ್ಯಾಂಕ್ ಸಿಬ್ಬಂದಿಯ ಬರವಣಿಗೆಯ ಶೈಲಿಯ ಮೇಲೆ ಸಾರಿದ್ದ ಸಮರವೇ ಅವರ ಕುರ್ಚಿಗೆ ಕುತ್ತು ತಂದಿತು ಎಂಬುದು ನಂತರ ಗೊತ್ತಾಯಿತು.

ಇದೇ ಅಂತರಂಗ ಸುದ್ದಿ

2017ರ ಆರಂಭದಲ್ಲಿ ಜಗತ್ತಿನ ಅತ್ಯಂತ ಗಂಭೀರ ಆರ್ಥಿಕ ಸಂಸ್ಥೆಯಾದ ವಿಶ್ವಬ್ಯಾಂಕ್‌ನೊಳಗೆ ಒಂದು ವಿಚಿತ್ರವಾದ ‘ಮಹಾಯುದ್ಧ’ ಭುಗಿಲೆದ್ದಿತು. ಅದು ಬಡತನ ನಿರ್ಮೂಲನೆಗಾಗಿಯೋ, ಜಾಗತಿಕ ಆರ್ಥಿಕ ಕುಸಿತ ತಡೆಯುವುದಕ್ಕಾಗಿಯೋ ನಡೆದ ಯುದ್ಧವಾಗಿರಲಿಲ್ಲ. ಬದಲಾಗಿ ಇಂಗ್ಲಿಷ್ ಭಾಷೆಯ ಒಂದು ಪುಟ್ಟ ಪದವಾದ ‘and’ (ಮತ್ತು) ಎಂಬ ಮೂರಕ್ಷರದ ವಿರುದ್ಧ ನಡೆದ ಸಮರವಾಗಿತ್ತು!

ಸಂಸ್ಥೆಯ ನೂತನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಅಧಿಕಾರ ವಹಿಸಿಕೊಂಡಿದ್ದ ಪಾಲ್ ರೋಮರ್ ಅವರ ಕೈಯಿಂದ ಸಂಶೋಧನಾ ವಿಭಾಗದ ನಿಯಂತ್ರಣವನ್ನು ಏಕಾಏಕಿ ಕಿತ್ತುಕೊಳ್ಳಲಾಯಿತು. ಕಾರ್ಯಾಚರಣೆ ಮತ್ತು ಸಂಶೋಧನಾ ವಿಭಾಗಗಳನ್ನು ಹತ್ತಿರ ತರಲು ಈ ಬದಲಾವಣೆ ಮಾಡಲಾಗಿದೆ ಎಂದು ಆಂತರಿಕ ಸುತ್ತೋಲೆಯಲ್ಲಿ ಸಬೂಬು ಹೇಳಲಾಯಿತಾದರೂ, ರೋಮರ್ ಅವರು ಬ್ಯಾಂಕ್ ಸಿಬ್ಬಂದಿಯ ಬರವಣಿಗೆಯ ಶೈಲಿಯ ಮೇಲೆ ಸಾರಿದ್ದ ಸಮರವೇ ಅವರ ಕುರ್ಚಿಗೆ ಕುತ್ತು ತಂದಿತು ಎಂಬುದು ನಂತರ ಗೊತ್ತಾಯಿತು.

ಪಾಲ್ ರೋಮರ್ ಅವರಿಗೆ ವಿಶ್ವಬ್ಯಾಂಕ್ ಪ್ರಕಟಿಸುವ ದಪ್ಪನೆಯ ವರದಿಗಳನ್ನು ಓದಿ ಸಾಕಾಗಿ ಹೋಗಿತ್ತು. ‘ವರದಿಗಳು ಚಿಕ್ಕದಾಗಿ, ಚೊಕ್ಕದಾಗಿ ಮತ್ತು ಮನುಷ್ಯರಿಗೆ ಅರ್ಥವಾಗುವಂತಿರಲಿ’ ಎಂದು ಅವರು ಫರ್ಮಾನು ಹೊರಡಿಸಿದರು. ಅದರಲ್ಲೂ ವಿಶೇಷವಾಗಿ, ಬ್ಯಾಂಕ್ ಲೇಖಕರು ಪದೇ ಪದೆ ಬಳಸುವ "and' ಎಂಬ ಪದದ ಮೇಲೆ ಅವರಿಗೆ ಎಲ್ಲಿಲ್ಲದ ಸಿಟ್ಟು ಬಂದಿತ್ತು. ಯಾವುದೇ ವರದಿಯಲ್ಲಿ "and'ಪದದ ಪ್ರಮಾಣವು ಒಟ್ಟು ಪಠ್ಯದ ಶೇಕಡ 2.6ಕ್ಕಿಂತ ಹೆಚ್ಚಿದ್ದರೆ, ತಾವು ಆ ವರದಿಯ ಪ್ರಕಟಣೆಗೆ ಸಹಿಯನ್ನೇ ಹಾಕುವುದಿಲ್ಲ ಎಂದು ರೋಮರ್ ಹಠ ಹಿಡಿದು ಕುಳಿತರು. ಶತಕೋಟಿ ಡಾಲರ್ ಸಾಲ ನೀಡುವ ಬ್ಯಾಂಕ್‌ನಲ್ಲಿ ಕುಳಿತು ಈತ ಶಾಲಾ ಮೇಷ್ಟ್ರಂತೆ ಪದಗಳನ್ನು ಎಣಿಸುತ್ತಿದ್ದಾನಲ್ಲ ಎಂದು ಅಲ್ಲಿನ ಹಿರಿಯ ಅಧಿಕಾರಿಗಳಿಗೆ ಉರಿ ಹತ್ತಿದ್ದರಲ್ಲಿ ಆಶ್ಚರ್ಯವೇನಿರ ಲಿಲ್ಲ!

ಹಾಗಾದರೆ, ಪಾಲ್ ರೋಮರ್ ಅವರ ಈ ‘ವ್ಯಾಕರಣ ಪಂಡಿತ’ನ ಅವತಾರಕ್ಕೆ ನಿಜವಾಗಿಯೂ ಅರ್ಥ ವಿತ್ತೇ? ಖಂಡಿತವಾಗಿಯೂ "and' ಪದವನ್ನು ಎಣಿಸುವುದೊಂದೇ ಉತ್ತಮ ಬರವಣಿಗೆಯ ಅಳತೆಗೋಲಲ್ಲ. ಆದರೆ, ಅಡುಗೆಯಲ್ಲಿ ಉಪ್ಪು ಹೆಚ್ಚಾದರೆ ಹೇಗೆ ತಿನ್ನಲು ಅಸಾಧ್ಯವೋ, ಹಾಗೆಯೇ ಬರವಣಿಗೆಯಲ್ಲಿ ‘ಮತ್ತು’ ಎಂಬ ಕೊಂಡಿಯನ್ನು ಮಿತಿಮೀರಿ ತುರುಕಿದರೆ ಆ ವಾಕ್ಯವು ಓದುಗನ ಉಸಿರುಗಟ್ಟಿಸುತ್ತದೆ. ಅದು ಕೇವಲ ನೀರಸವಾಗುವುದಷ್ಟೇ ಅಲ್ಲ, ಓದಲು ಅಸಾಧ್ಯವಾದ ಕಬ್ಬಿಣದ ಕಡಲೆಯಾಗಿ ಬದಲಾಗುತ್ತದೆ.

ಇದನ್ನೂ ಓದಿ: V‌ishweshwar Bhat Column: ವಿಶಿಷ್ಠ ಪತ್ರಕರ್ತ ಜೇಕಬ್ಸ್

ಒಂದೇ ಉಸಿರಿನಲ್ಲಿ ಹತ್ತು ವಿಷಯಗಳನ್ನು ಹೇಳಲು ಹೊರಟರೆ, ಕೊನೆಗೆ ಏನು ಹೇಳಿದೆವು ಎಂಬುದೇ ಬರೆದವನಿಗೂ ಮರೆತುಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ. ವಿಶ್ವಬ್ಯಾಂಕ್‌ನ ಈ ‘ಮತ್ತು’ ವ್ಯಾಮೋಹಕ್ಕೆ 1999ರಲ್ಲಿ ಪ್ರಕಟವಾದ ಒಂದು ವರದಿಯೇ ಜೀವಂತ ಸಾಕ್ಷಿಯಾಗಿದೆ. ಆ ವರದಿಯ ಒಂದು ವಾಕ್ಯದಲ್ಲಿ ಸಂಸ್ಥೆಯು ‘ಕಾರ್ಪೊರೇಟ್ ಆಡಳಿತ ಮತ್ತು ಸ್ಪರ್ಧಾ ನೀತಿಗಳನ್ನು ಉತ್ತೇಜಿಸುವುದು ಮತ್ತು ಸುಧಾರಣೆ ಮಾಡುವುದು ಮತ್ತು ಸರಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸುವುದು ಮತ್ತು ಕಾರ್ಮಿಕ ಮಾರುಕಟ್ಟೆ/ಸಾಮಾಜಿಕ ರಕ್ಷಣಾ ಸುಧಾರಣೆ ಮಾಡುವುದು’ ಎಂದು ಬರೆದುಕೊಂಡಿತ್ತು!

ಈ ವಾಕ್ಯವನ್ನು ಒಂದೇ ಉಸಿರಿನಲ್ಲಿ ಓದಲು ಪ್ರಯತ್ನಿಸಿದರೆ ಎಂಥವರಿಗೂ ತಲೆ ತಿರುಗಿ ಬೀಳು ವುದು ಗ್ಯಾರಂಟಿ. ಇಂಥ ವಾಕ್ಯರಚನೆಯ ಕಸರತ್ತುಗಳನ್ನು ತಪ್ಪಿಸಲೆಂದೇ ರೋಮರ್ ಅವರು ಶೇಕಡ 2.6ರ ಲಕ್ಷ್ಮಣರೇಖೆಯನ್ನು ಎಳೆದಿದ್ದರು. ಇದು ಸಾಮಾನ್ಯ ಶೈಕ್ಷಣಿಕ ಪ್ರಬಂಧಗಳ ಮಟ್ಟ ವಾಗಿದೆ. ಇನ್ನು ಮೊನಚಾದ ಬರವಣಿಗೆಗೆ ಹೆಸರಾದ ‘ದಿ ಎಕನಾಮಿಸ್ಟ್’ ಪತ್ರಿಕೆಯಲ್ಲಿ (ಜಾಹೀರಾತು ಗಳನ್ನು ಹೊರತುಪಡಿಸಿ) "and' ಪದದ ಬಳಕೆ ಕೇವಲ ಶೇಕಡಾ 1.5ರಷ್ಟು ಮಾತ್ರ ಇರುತ್ತದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ವಿಶ್ವಬ್ಯಾಂಕ್‌ನ ಈ ಭಾಷಾ ಕಾಯಿಲೆ ಎಷ್ಟು ಹಳೆಯದು ಎಂಬುದನ್ನು ಪತ್ತೆ ಹಚ್ಚಲು ಸ್ಟ್ಯಾನ್ʼ ಫೋರ್ಡ್ ಲಿಟರರಿ ಲ್ಯಾಬ್‌ನ ಸಂಶೋಧಕರಾದ ಫ್ರಾಂಕೋ ಮೊರೆಟ್ಟಿ ಮತ್ತು ಡೊಮಿನಿಕ್ ಪೆಸ್ಟ್ರೆ ಅವರು ಗಣಕಯಂತ್ರದ ಮೊರೆಹೋದರು. 1940ರ ದಶಕದಲ್ಲಿ ಬ್ಯಾಂಕ್ ಸ್ಥಾಪನೆಯಾದಾಗಿನಿಂದ ಪ್ರಕಟವಾದ ಸಾವಿರಾರು ವರದಿಗಳನ್ನು ಅವರು ಅಕ್ಷರಶಃ ಜಾಲಾಡಿದರು. ಆಶ್ಚರ್ಯವೆಂದರೆ, 1940ರ ದಶಕದಲ್ಲಿ ಬ್ಯಾಂಕ್ ಅಧಿಕಾರಿಗಳು ಬಹಳ ಶಿಸ್ತಿನಿಂದ ಬರೆಯುತ್ತಿದ್ದರು. ಆಗ ಅವರ ವರದಿಗಳಲ್ಲಿ "and' ಪದದ ಪ್ರಮಾಣವು ರೋಮರ್ ಬಯಸಿದ ಶೇಕಡ 2.6ರಷ್ಟೇ ಇತ್ತು.

ಅಂದಿನ ಕಾಲದಲ್ಲಿ ಬ್ಯಾಂಕ್ ವರದಿಗಳು ನೇರವಾಗಿ ಮತ್ತು ಸ್ಪಷ್ಟವಾಗಿರುತ್ತಿದ್ದವು. ಆದರೆ ದಶಕಗಳು ಉರುಳಿದಂತೆ ಬ್ಯಾಂಕ್‌ನ ಭಾಷೆಗೆ ‘ಮತ್ತು’ ಎಂಬ ವೈರಸ್ ತಗುಲಿತು. 2012ರ ಹೊತ್ತಿಗೆ ಪರಿಸ್ಥಿತಿ ಎಲ್ಲಿಗೆ ಬಂತು ಎಂದರೆ, ಬ್ಯಾಂಕ್ ವರದಿಗಳ ಒಟ್ಟು ಪದಗಳಲ್ಲಿ ಶೇಕಡ 6ರಷ್ಟು ಜಾಗವನ್ನು "and' ಎಂಬ ಒಂದೇ ಪದ ಆಕ್ರಮಿಸಿಕೊಂಡಿತ್ತು! ಇದರ ಜತೆಗೆ ಇತರ ಭಾಷಿಕ ಪಾಪಗಳೂ ಸೇರಿಕೊಂಡವು.

1970ರ ದಶಕದಲ್ಲಿ ಶೇ.3ರಷ್ಟಿದ್ದ ಸಂಕ್ಷಿಪ್ತ ರೂಪಗಳ (acronyms) ಹಾವಳಿ 2012ರ ವೇಳೆಗೆ ಶೇಕಡ 5ಕ್ಕೆ ಏರಿತು. ಇನ್ನು ಸಾಮಾನ್ಯ ಜನರಿಗೆ ತಲೆಬುಡ ಅರ್ಥವಾಗದ ‘ಫೇರ್ ವ್ಯಾಲ್ಯೂ’, ‘ಪೋರ್ಟ್ ಫೋಲಿಯೊ’ ಮುಂತಾದ ಭಾರವಾದ ಹಣಕಾಸು ಪದಗಳು ವರದಿಗಳಲ್ಲಿ ತುಂಬಿ ತುಳುಕಲಾರಂಭಿ ಸಿದವು. ವಾಸ್ತವದಲ್ಲಿ, ಈ "and' ಪದದ ಅತಿಯಾದ ಬಳಕೆಯು ಬ್ಯಾಂಕ್ ಅಧಿಕಾರಿಗಳ ಜಾಣತನದ ರಕ್ಷಣಾ ತಂತ್ರವಾಗಿತ್ತು!

ಯಾವುದೇ ಒಂದು ದೇಶಕ್ಕೆ ಸಲಹೆ ನೀಡುವಾಗ ‘ಇದನ್ನು ಮೊದಲು ಮಾಡಿ, ಅದನ್ನು ಬಿಡಿ’ ಎಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಭಯ. ಯಾರನ್ನೂ ಎದುರು ಹಾಕಿಕೊಳ್ಳಲು ಇಷ್ಟವಿಲ್ಲದಾಗ, ಎಲ್ಲರ ಬೇಡಿಕೆಗಳ ನಡುವೆ ಒಂದು ‘ಮತ್ತು’ ಸೇರಿಸಿಬಿಟ್ಟರೆ ಮುಗಿಯಿತು-ಎಲ್ಲರೂ ಖುಷಿ! ‘ನಾವು ಪರಿಸರವನ್ನೂ ಉಳಿಸುತ್ತೇವೆ ಮತ್ತು ಕಲ್ಲಿದ್ದಲು ಗಣಿಗಾರಿಕೆಯನ್ನೂ ಹೆಚ್ಚಿಸುತ್ತೇವೆ ಮತ್ತು ಬಡತನವನ್ನೂ ನೀಗಿಸುತ್ತೇವೆ’ ಎಂದು ಬರೆದುಬಿಟ್ಟರೆ, ಯಾವುದಕ್ಕೂ ನಿಖರವಾದ ಹೊಣೆಗಾರಿಕೆ ಇರುವುದಿಲ್ಲ. ಎಲ್ಲವೂ ಆದ್ಯತೆಯಾದಾಗ ಯಾವುದೂ ಆದ್ಯತೆಯಾಗಿ ಉಳಿಯುವು ದಿಲ್ಲ ಎಂಬ ಸತ್ಯವನ್ನು ಈ ಪದವು ಸುಂದರವಾಗಿ ಮರೆಮಾಚುತ್ತಿತ್ತು. ಇಷ್ಟೆಲ್ಲ ಕಷ್ಟಪಟ್ಟು, ‘ಮತ್ತು’ಗಳನ್ನು ತುಂಬಿ, ತಲೆನೋವು ತರಿಸುವ ಭಾಷೆಯಲ್ಲಿ ಬರೆದ ವರದಿಗಳನ್ನು ಜಗತ್ತು ಮುಗಿಬಿದ್ದು ಓದುತ್ತಿದೆಯೇ ಎಂದು ನೋಡಿದರೆ ಅಲ್ಲಿರುವುದು ಇನ್ನೂ ದೊಡ್ಡ ದುರಂತ!

2014ರಲ್ಲಿ ವಿಶ್ವಬ್ಯಾಂಕ್‌ನ ದತ್ತಾಂಶ ತಜ್ಞರೇ ಒಂದು ಆಂತರಿಕ ಸಮೀಕ್ಷೆ ನಡೆಸಿದರು. ಬ್ಯಾಂಕ್ ಪ್ರಕಟಿಸಿದ 1611ಪ್ರಮುಖ ಸಂಶೋಧನಾ ದಾಖಲೆಗಳ ಡೌನ್ಲೋಡ್ ಲೆಕ್ಕವನ್ನು ತೆಗೆದಾಗ ಆಘಾತಕಾರಿ ಸತ್ಯವೊಂದು ಹೊರಬಿತ್ತು. ಆ 1611ವರದಿಗಳ ಪೈಕಿ ಬರೋಬ್ಬರಿ ಶೇಕಡ 32ರಷ್ಟು ವರದಿಗಳನ್ನು ಜಗತ್ತಿನ ಯಾವ ಮೂಲೆಯಿಂದಲೂ ಒಬ್ಬನೇ ಒಬ್ಬ ಮನುಷ್ಯನೂ ಡೌನ್ಲೋಡ್ ಮಾಡಿಯೇ ಇರಲಿಲ್ಲ! ಅಂದರೆ ಲಕ್ಷಾಂತರ ಡಾಲರ್ ಖರ್ಚು ಮಾಡಿ, ತಜ್ಞರ ತಲೆ ತಿಂದು ಬರೆದ ಮೂರನೇ ಒಂದು ಭಾಗದಷ್ಟು ವರದಿಗಳನ್ನು ಸ್ವತಃ ಬರೆದವರೇ ಮತ್ತೆ ತೆರೆದು ನೋಡಿರಲಿಲ್ಲ! ಈ ಅಂಕಿ-ಅಂಶವನ್ನು ನೋಡಿದಾಗ ಪಾಲ್ ರೋಮರ್ ಅವರ ಕೋಪ ಎಷ್ಟು ನ್ಯಾಯಸಮ್ಮತವಾಗಿತ್ತು ಎಂಬುದು ಯಾರಿಗಾದರೂ ಅರ್ಥವಾಗುತ್ತದೆ.

ಯಾರೂ ಓದದ, ಓದಿದರೂ ಅರ್ಥವಾಗದ ಇಂಥ ಗೋಜಲು ವರದಿಗಳನ್ನು ಬರೆಯುವುದರಿಂದ ಜಗತ್ತಿನ ಬಡತನ ಹೇಗೆ ತಾನೇ ನಿವಾರಣೆಯಾದೀತು? ಸಾರ್ವಜನಿಕರ ಹಣದಲ್ಲಿ ತಯಾರಾಗುವ ಸಂಶೋಧನಾ ವರದಿಗಳು ಕನಿಷ್ಠ ಓದಿಸಿಕೊಳ್ಳುವ ಗುಣವನ್ನಾದರೂ ಹೊಂದಿರಬೇಕು. ತಾಂತ್ರಿಕ ಪದಗಳ ಕಸರತ್ತು ಮತ್ತು "and' ಪದಗಳ ಸರಪಳಿಯನ್ನು ಕಳಚಿಹಾಕಿದರೆ ಮಾತ್ರ ಆ ವರದಿಗಳಿಗೆ ಜೀವ ಬರಲು ಸಾಧ್ಯ. ವಿಶ್ವಬ್ಯಾಂಕ್ ತನ್ನ ವರದಿಗಳನ್ನು ಕೇವಲ ಕಪಾಟಿನಲ್ಲಿ ಇಡುವುದಕ್ಕಾಗಿ ಅಲ್ಲದೆ, ಜನರು ಓದುವುದಕ್ಕಾಗಿ ಪ್ರಕಟಿಸಬೇಕು ಎಂಬ ಆಶಯ ಹೊಂದಿದ್ದರೆ, ಅದು ಮೊದಲು ತನ್ನ ‘ಮತ್ತು’ ವ್ಯಾಮೋಹಕ್ಕೆ ಕತ್ತರಿ ಹಾಕಲೇಬೇಕು.

ಭಾಷೆ ಸರಳವಾದಾಗ ಮಾತ್ರ ಆಲೋಚನೆಗಳು ಸ್ಪಷ್ಟವಾಗುತ್ತವೆ, ಆಲೋಚನೆಗಳು ಸ್ಪಷ್ಟವಾದಾಗ ಮಾತ್ರ ಯೋಜನೆಗಳು ಯಶಸ್ವಿಯಾಗುತ್ತವೆ. ಇಲ್ಲದಿದ್ದರೆ, ವಿಶ್ವಬ್ಯಾಂಕ್‌ನ ವರದಿಗಳು ಜಗತ್ತಿನ ಅತ್ಯಂತ ದುಬಾರಿ ಮತ್ತು ಅತ್ಯಂತ ನೀರಸ ನಿದ್ದೆ ಮಾತ್ರೆಗಳಾಗಿ ಮಾತ್ರ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ!

ಪಾಲ್ ರೋಮರ್ ಮತ್ತು ವಿಶ್ವಬ್ಯಾಂಕ್‌ನ ನಡುವಿನ ಈ "and' ಮಹಾಯುದ್ಧದ ಹಿಂದೆ ಇನ್ನೂ ಹಲವು ರೋಚಕ ಹಾಗೂ ತಮಾಷೆಯ ಸಂಗತಿಗಳಿವೆ. ಅಸಲಿಗೆ ಪಾಲ್ ರೋಮರ್ ಅರ್ಥಶಾಸ್ತ್ರ ದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರು. ಜಗತ್ತಿನ ಆರ್ಥಿಕ ಬೆಳವಣಿಗೆಯ ಸಿದ್ಧಾಂತಗಳನ್ನು ರೂಪಿಸಿದ ಮಹಾ ಮೇಧಾವಿ. ಆದರೆ ವಿಶ್ವಬ್ಯಾಂಕ್‌ಗೆ ಕಾಲಿಟ್ಟ ತಕ್ಷಣ ಅವರು ಆರ್ಥಿಕ ಸೂತ್ರಗಳಿಗಿಂತ ಹೆಚ್ಚಾಗಿ ಅಲ್ಲಿನ ಸಿಬ್ಬಂದಿಯ ಇಂಗ್ಲಿಷ್ ವ್ಯಾಕರಣದ ಬೆನ್ನು ಹತ್ತಿದ್ದು ಎಲ್ಲರಿಗೂ ಅಚ್ಚರಿ ತಂದಿತ್ತು. ಅವರು ಕೇವಲ ಮೌಖಿಕವಾಗಿ ಎಚ್ಚರಿಕೆ ನೀಡಲಿಲ್ಲ. ಬದಲಾಗಿ, ಯಾವುದೇ ವರದಿಯನ್ನು ಪ್ರಕಟಿಸುವ ಮೊದಲು ಅದರಲ್ಲಿರುವ "and' ಪದಗಳನ್ನು ಎಣಿಸಲು ವಿಶೇಷ ಸಾ-ವೇರ್ ತಂತ್ರಾಂಶವನ್ನೇ ಬಳಸಲು ಶುರುಮಾಡಿದ್ದರು!

ಕಂಪ್ಯೂಟರ್ ಪರದೆಯ ಮೇಲೆ "and' ಪ್ರಮಾಣ ಶೇಕಡ 2.6ಕ್ಕಿಂತ ಒಂದೇ ಒಂದು ದಶಮಾಂಶ ಹೆಚ್ಚಾದರೂ, ಆ ಫೈಲ್ ಅನ್ನು ನೇರವಾಗಿ ಕಸದ ಬುಟ್ಟಿಗೆ ಎಸೆದಂತೆ ವಾಪಸ್ ಕಳುಹಿಸುತ್ತಿದ್ದರು. ವಿಶ್ವಬ್ಯಾಂಕ್‌ನ ಲೇಖಕರಿಗೆ ಈ ನಿಯಮ ಎಂಥಾ ಧರ್ಮಸಂಕಟ ತಂದೊಡ್ಡಿತು ಎಂದರೆ, ಅವರು "and'ಪದವನ್ನು ತಪ್ಪಿಸಲು ಇಂಗ್ಲಿಷ್ ನಿಘಂಟಿನಲ್ಲಿದ್ದ ಎಲ್ಲ ಪರ್ಯಾಯ ಪದಗಳನ್ನು ಹುಡುಕಾಡಲು ಶುರುಮಾಡಿದರು.

ಒಂದು ವರದಿಯಲ್ಲಿ "and' ಬದಲಿಗೆ "as well as', "moreover', furthermore', "in addition to' ಮುಂತಾದ ಉದ್ದುದ್ದ ಪದಗಳನ್ನು ತುರುಕಿ ರೋಮರ್ ಅವರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ವನ್ನೂ ಕೆಲವು ಜಾಣ ಅಽಕಾರಿಗಳು ಮಾಡಿದರು! ಇದರಿಂದಾಗಿ ವರದಿಗಳು ಚಿಕ್ಕದಾಗುವ ಬದಲು ಇನ್ನೂ ಉದ್ದವಾಗಿ, ಓದುಗರಿಗೆ ಮತ್ತಷ್ಟು ತಲೆನೋವು ತರುವಂತಾದವು. ಇದನ್ನು ಕಂಡ ರೋಮರ್, ನೀವು "and' ತೆಗೆದು ಅದಕ್ಕಿಂತ ದೊಡ್ಡ ಪೆಡಂಭೂತಗಳನ್ನು ಕೂರಿಸುತ್ತಿದ್ದೀರಲ್ಲ?’ ಎಂದು ತಲೆ ಚಚ್ಚಿಕೊಂಡಿದ್ದರಂತೆ.

ಇನ್ನೂ ತಮಾಷೆಯ ಸಂಗತಿಯೆಂದರೆ, ವಿಶ್ವಬ್ಯಾಂಕ್‌ನ ಹಿರಿಯ ಅರ್ಥಶಾಸ್ತ್ರಜ್ಞರು ತಮ್ಮ ವರದಿಗಳನ್ನು ತಾವು ಎಷ್ಟು ಕಷ್ಟಪಟ್ಟು ಬರೆದಿದ್ದೇವೆ ಎಂದು ತೋರಿಸಿಕೊಳ್ಳಲು ಅವುಗಳನ್ನು ಉದ್ದೇಶಪೂರ್ವಕವಾಗಿ ಜಟಿಲಗೊಳಿಸುತ್ತಿದ್ದರು. ಸರಳ ಭಾಷೆಯಲ್ಲಿ ಬರೆದರೆ ಎಲ್ಲಿ ತಮ್ಮ ಪಾಂಡಿತ್ಯ ಕಡಿಮೆ ಎಂದು ಜಗತ್ತು ಭಾವಿಸುತ್ತದೋ ಎಂಬ ಭಯ ಅವರಿಗಿತ್ತು. ಹೀಗಾಗಿ ‘ಮಳೆ ಬಂತು’ ಎಂದು ನೇರವಾಗಿ ಹೇಳುವ ಬದಲು, ‘ವಾತಾವರಣದ ತೇವಾಂಶವು ಸಾಂದ್ರೀಕರಣಗೊಂಡು ಭೂಮಿಯ ಗುರುತ್ವಾಕರ್ಷಣೆಯ ಪರಿಣಾಮವಾಗಿ ಜಲರೂಪದಲ್ಲಿ ಅವತರಿಸಿತು ಮತ್ತು ಕೃಷಿ ಚಟುವಟಿಕೆಗಳಿಗೆ ಪೂರಕವಾಯಿತು’ ಎಂದು ಬರೆಯುವುದು ಅಲ್ಲಿನ ಪ್ರತಿಷ್ಠೆಯ ಸಂಕೇತವಾಗಿತ್ತು.

ರೋಮರ್ ಅವರ ಸರಳ ಭಾಷೆಯ ಆಗ್ರಹವು ಈ ಪಂಡಿತರ ಅಹಂಕಾರಕ್ಕೆ ನೇರವಾಗಿ ಪೆಟ್ಟು ನೀಡಿತ್ತು. ಈ ಭಾಷಾ ಕದನವು ಎಷ್ಟು ತೀವ್ರವಾಗಿತ್ತೆಂದರೆ, ವಿಶ್ವಬ್ಯಾಂಕ್‌ನ ಆಂತರಿಕ ಇಮೇಲ್‌ಗಳು ಮತ್ತು ಚಾಟ್‌ಗಳಲ್ಲಿ ಸಿಬ್ಬಂದಿ ರೋಮರ್ ಅವರನ್ನು ‘ಗ್ರಾಮರ್ ಪೊಲೀಸ್’ (ವ್ಯಾಕರಣ ಪೊಲೀಸ್) ಎಂದು ಗೇಲಿ ಮಾಡಲು ಆರಂಭಿಸಿದರು. ಕೆಲವು ತಮಾಷೆಯ ಅಧಿಕಾರಿಗಳು ತಮ್ಮ ಸಹೋದ್ಯೋಗಿ ಗಳಿಗೆ ಕಳುಹಿಸುವ ಸಾಮಾನ್ಯ ಸಂದೇಶಗಳಲ್ಲೂ "and' ಪದವನ್ನು ಬೇಕೆಂದೇ ಕೈಬಿಟ್ಟು, ‘ನಾನು ಕಾಫಿ ಕುಡಿಯಲು ಹೋಗುತ್ತಿದ್ದೇನೆ, ಬಿಸ್ಕೆಟ್ ತಿನ್ನುತ್ತೇನೆ, ವಾಪಸ್ ಬರುತ್ತೇನೆ’ ಎಂದು ಅಲ್ಪವಿರಾಮಗಳ ಸಂಭಾಷಣೆ ನಡೆಸುತ್ತಿದ್ದರು!

ಈ ವ್ಯಾಕರಣದ ಭಯವು ಬ್ಯಾಂಕ್‌ನ ಕಾರಿಡಾರ್‌ಗಳಲ್ಲಿ ಒಂದು ದೊಡ್ಡ ಹಾಸ್ಯದ ವಸ್ತುವಾಗಿ ಮಾರ್ಪಟ್ಟಿತ್ತು. ವಿಶ್ವಬ್ಯಾಂಕ್‌ನ ಈ ಸಂಕೀರ್ಣ ಭಾಷೆಗೆ ‘ಬ್ಯಾಂಕೀಸ್’ (Bankese) ಎಂಬ ಅಡ್ಡಹೆಸರೇ ಚಾಲ್ತಿಯಲ್ಲಿದೆ. ಈ ಭಾಷೆಯ ವೈಶಿಷ್ಟ್ಯವೆಂದರೆ, ಇಲ್ಲಿ ಯಾವುದೇ ಸಮಸ್ಯೆಗೆ ನೇರ ಉತ್ತರವಿರುವುದಿಲ್ಲ. ಬದಲಾಗಿ ಸಮಸ್ಯೆಯ ಸುತ್ತಮುತ್ತ ಗಿರಕಿ ಹೊಡೆಯುವ ನೂರು ವಿಶೇಷಣ ಗಳಿರುತ್ತವೆ. ‘and’ ಪದವನ್ನು ಬಳಸುವ ಮೂಲಕ ಲೇಖಕರು ತಮ್ಮ ವಾಕ್ಯಗಳಿಗೆ ಕೃತಕ ತೂಕವನ್ನು ತರುತ್ತಿದ್ದರು. ರೋಮರ್ ಅವರು ಈ ‘ಬ್ಯಾಂಕೀಸ್’ ಭಾಷೆಯನ್ನು ಕಿತ್ತೊಗೆದು ಸಾಮಾನ್ಯ ಜನರಿಗೆ ಅರ್ಥವಾಗುವ ‘ಇಂಗ್ಲಿಷ್’ ತರಲು ಪ್ರಯತ್ನಿಸಿದಾಗ, ಈ ಭಾಷೆಯ ಬದುಕಿದ್ದ ಅಧಿಕಾರಿಗಳಿಗೆ ತಮ್ಮ ಮಾತೃಭಾಷೆಯನ್ನೇ ಕಿತ್ತುಕೊಂಡಂತೆ ಭಾಸವಾಯಿತು.

ಕೊನೆಗೆ ಈ ‘and’ ಯುದ್ಧವು ಎಲ್ಲಿಗೆ ಬಂದು ನಿಂತಿತು ಎಂದರೆ, ರೋಮರ್ ಅವರ ಕಟ್ಟುನಿಟ್ಟಿನ ನಿಯಮಗಳಿಂದ ಬೇಸತ್ತ ಹಿರಿಯ ಅಧಿಕಾರಿಗಳು ಬ್ಯಾಂಕ್‌ನ ಅಧ್ಯಕ್ಷರಿಗೆ ದೂರು ನೀಡಿದರು. ಸಂಶೋಧನಾ ವರದಿಗಳ ಪ್ರಕಟಣೆಯೇ ನಿಂತುಹೋಗುವ ಹಂತಕ್ಕೆ ತಲುಪಿದ್ದರಿಂದ, ರೋಮರ್ ಅವರಿಂದ ಸಂಶೋಧನಾ ವಿಭಾಗದ ನಿಯಂತ್ರಣವನ್ನೇ ಕಿತ್ತುಕೊಳ್ಳಲಾಯಿತು.

ಇದಾದ ಕೇವಲ ಹದಿನೈದು ತಿಂಗಳ ರೋಮರ್ ವಿಶ್ವಬ್ಯಾಂಕ್‌ಗೆ ರಾಜೀನಾಮೆ ನೀಡಿ ಹೊರನ ಡೆದರು. ‘ನಾನು ಜಗತ್ತಿನ ಬಡತನ ಹೋಗಲಾಡಿಸಲು ಬಂದೆ, ಆದರೆ ಇಲ್ಲಿನ ಅಧಿಕಾರಿಗಳ ವಾಕ್ಯಗಳಲ್ಲಿರುವ ‘and’ ಪದಗಳನ್ನು ಹೋಗಲಾಡಿಸಲೂ ನನ್ನಿಂದ ಸಾಧ್ಯವಾಗಲಿಲ್ಲ’ ಎಂದು ಗೊಣಗಿದರು.

ಇಂದಿಗೂ ಜಾಗತಿಕ ಪತ್ರಿಕೋದ್ಯಮ ಮತ್ತು ಆರ್ಥಿಕ ವಲಯದಲ್ಲಿ ಪಾಲ್ ರೋಮರ್ ಅವರ ಈ ಸಾಹಸವನ್ನು ಒಂದು ಐತಿಹಾಸಿಕ ಹಾಸ್ಯ ಪ್ರಸಂಗದಂತೆ ನೆನಪಿಸಿಕೊಳ್ಳಲಾಗುತ್ತದೆ. ಒಬ್ಬ ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞನನ್ನು ಸೋಲಿಸಲು ಜಗತ್ತಿನ ಯಾವುದೇ ಆರ್ಥಿಕ ಹಿಂಜರಿತಕ್ಕೆ ಸಾಧ್ಯವಾ ಗಲಿಲ್ಲ, ಆದರೆ ಇಂಗ್ಲಿಷ್ ವ್ಯಾಕರಣದ ಒಂದು ಪುಟ್ಟ ‘and’ ಪದವು ಅವರನ್ನು ಅಧಿಕಾರದಿಂದ ಕೆಳಗಿಳಿಸಿತು! ವಿಶ್ವಬ್ಯಾಂಕ್‌ನ ವರದಿಗಳಲ್ಲಿ ಇಂದಿಗೂ ‘and’ ಪದವು ರಾಜಾರೋಷ ವಾಗಿ ಮೆರೆಯುತ್ತಿದ್ದರೆ, ಅದು ಪಾಲ್ ರೋಮರ್ ಅವರ ಸೋಲಿನ ಮತ್ತು ಅಧಿಕಾರಶಾಹಿಯ ಜಯದ ಸಂಕೇತವಾಗಿ ಉಳಿದಿದೆ.

ಮಾನವೀಯ ಸ್ಪರ್ಶ ನೀಡಿದ ಆನ್ ರೋ

ಪತ್ರಿಕೋದ್ಯಮದ ಇತಿಹಾಸದಲ್ಲಿ ನಿಧನ ವಾರ್ತೆಗಳು ಸಾಮಾನ್ಯ ವಾಗಿ ಕೇವಲ ಜನನ, ಮರಣ, ಹುದ್ದೆ ಮತ್ತು ಸಾಧನೆಗಳ ಪಟ್ಟಿಯಂತೆ ಒಣಗಿದ ಅಂಕಿ-ಅಂಶಗಳಾಗಿ ಉಳಿದುಬಿಡುವುದುಂಟು. ಆದರೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ದಿ ಎಕನಾಮಿಸ್ಟ್’ ಪತ್ರಿಕೆಯ ಹಿಂಬದಿಯ ಪುಟಕ್ಕೆ ಕಣ್ಣು ಹಾಯಿಸಿದವರಿಗೆ ಸಾವಿನಲ್ಲೂ ಒಂದು ಕಾವ್ಯಮಯ ಸೌಂದರ್ಯವಿದೆ ಎಂಬುದು ಮನದಟ್ಟಾಗುತ್ತದೆ. ಆ ಸೌಂದರ್ಯಕ್ಕೆ ಕಳೆದ ಎರಡು ದಶಕಗಳಿಂದ ಜೀವ ತುಂಬಿದ ಲೇಖಕಿ ಆನ್ ರೋ. ಸಾವನ್ನು ಅಂತ್ಯವೆಂದು ನೋಡದೇ, ಮಣ್ಣು ಸೇರಿದ ವ್ಯಕ್ತಿಯ ಇಡೀ ಬದುಕಿನ ಸಾರವನ್ನು ಅಕ್ಷರಗಳಲ್ಲಿ ಅರಳಿಸುವ ಅವರ ಶೈಲಿ ವಿಶ್ವಾದ್ಯಂತ ಲಕ್ಷಾಂತರ ವಾಚಕರನ್ನು ಮೂಕವಿಸ್ಮಿತ ರನ್ನಾಗಿಸಿದೆ.

ನಾನಂತೂ ಆ ಪತ್ರಿಕೆಯ ಕೊನೆ ಪುಟವನ್ನು ತಪ್ಪಿಸಿಕೊಳ್ಳುವುದಿಲ್ಲ. ಆನ್ ರೋ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯೊಳಗೂ ಜಗತ್ತಿಗೆ ಕಾಣದ ಅದ್ಭುತ ಲೋಕವೊಂದು ಅಡಗಿರುತ್ತದೆ. ಜಗತ್ತಿನ ಕಣ್ಣು ಸದಾ ಅಧಿಕಾರ, ಸಿರಿವಂತಿಕೆ, ರಾಜಕೀಯ ಚದುರಂಗದಾಟ ಮತ್ತು ಗ್ಲಾಮರ್‌ನ ಬೆನ್ನತ್ತಿ ಓಡುತ್ತಿರುವಾಗ, ರೋ ಅವರ ಕಣ್ಣುಗಳು ಅನಾಮಧೇಯ ಬೀದಿಗಳಲ್ಲಿ, ಯಾರೂ ಗಮನಿಸದ ಮೂಲೆಗಳಲ್ಲಿ ಬದುಕಿ ಹೋದ ಅಪರೂಪದ ವ್ಯಕ್ತಿಗಳನ್ನು ಹುಡುಕುತ್ತಿರುತ್ತವೆ.

ಮಹಾನ್ ನಾಯಕರಷ್ಟೇ ಅಲ್ಲ, ಜಗತ್ತಿಗೆ ಹೊಸ ರುಚಿ ಕಲಿಸಿದ ಒಬ್ಬ ಬಾಣಸಿಗ, ಅಪರೂಪದ ಗಡಿಯಾರ ದುರಸ್ತಿ ಮಾಡುವ ಕುಶಲಕರ್ಮಿ ಅಥವಾ ಸುಮ್ಮನೆ ಹಕ್ಕಿಗಳ ದನಿಗೆ ಕಿವಿಯಾಗುತ್ತಿದ್ದ ಸಾಮಾನ್ಯನೂ ಅವರ ಅಂಕಣದಲ್ಲಿ ಶಾಶ್ವತ ನಾಯಕನಾಗುತ್ತಾನೆ. ಆಕ್ಸ್ʼಫರ್ಡ್ ವಿಶ್ವವಿದ್ಯಾಲಯ ದಲ್ಲಿ ಇತಿಹಾಸ ವಿಷಯದಲ್ಲಿ ಡಾಕ್ಟರೇಟ್ ಪಡೆದ ಆನ್ ರೋ, ಮೊದಲು ‘ದಿ ಎಕನಾಮಿಸ್ಟ್’ ಪತ್ರಿಕೆಯನ್ನು ಪ್ರವೇಶಿಸಿದ್ದು ಕೇವಲ ಪುಸ್ತಕ ವಿಮರ್ಶಕಿ ಮತ್ತು ಅಮೆರಿಕದ ರಾಜಕೀಯ ವಿಭಾಗದ ಸಂಪಾದಕಿಯಾಗಿ.

ನಂತರ ಪತ್ರಿಕೆಯು ಪ್ರತಿ ವಾರ ನಿಧನ ವಾರ್ತೆಯ ಅಂಕಣವನ್ನು ರೂಪಿಸಲು ನಿರ್ಧರಿಸಿದಾಗ, ರೋ ಆ ಜವಾಬ್ದಾರಿಯನ್ನು ಹೊತ್ತುಕೊಂಡರು. ಇತಿಹಾಸದ ಆಳವಾದ ತಿಳಿವಳಿಕೆ ಮತ್ತು ಭಾಷೆಯ ಮೇಲಿನ ಅಪ್ರತಿಮ ಹಿಡಿತ ಅವರ ಬರವಣಿಗೆಗೆ ಹೊಸ ತಿರುವು ನೀಡಿತು. ಸಾಮಾನ್ಯವಾಗಿ ಪತ್ರಿಕೆಗಳು ಮೊದಲೇ ತಯಾರಿಸಿಟ್ಟುಕೊಂಡ ಸಿದ್ಧ ಮಾದರಿಯ ಚರಮಗೀತೆಗಳನ್ನು ಪ್ರಕಟಿಸು ತ್ತವೆ. ಆದರೆ ರೋ ಕಾರ್ಯ ವೈಖರಿ ಸಂಪೂರ್ಣ ವಿಭಿನ್ನವಾಗಿತ್ತು. ಅವರು ಯಾವುದೇ ವ್ಯಕ್ತಿಯನ್ನು ಮೊದಲೇ ಅಳೆದು ತೂಗುವುದಿಲ್ಲ. ಸಾವು ಸಂಭವಿಸಿದ ವಾರದ, ಅತ್ಯಂತ ಆಪ್ತವಾಗಿ, ಆ ವ್ಯಕ್ತಿಯ ಬದುಕಿನ ಸೂಕ್ಷ್ಮ ಎಳೆಗಳನ್ನು ಹೆಕ್ಕಿ ತೆಗೆದು, ವಾರದ ಕಡೆಯ ಹೊತ್ತಿಗೆ ಅದ್ಭುತ ಕಲಾಕೃತಿಯನ್ನಾಗಿ ಸಿದ್ಧಪಡಿಸುತ್ತಾರೆ.

ಅವರ ನಿಧನ ಬರಹಗಳು ಕೇವಲ ಒಂದು ಪುಟದ, ಸುಮಾರು ಒಂದು ಸಾವಿರ ಪದಗಳ ಪರಿಮಿತಿ ಯಲ್ಲಿ ಇರುತ್ತಿದ್ದವು. ಆದರೆ ಆ ಒಂದು ಪುಟದಲ್ಲಿ ಅವರು ಸೃಷ್ಟಿಸುತ್ತಿದ್ದ ಜಾದೂ ಬೆರಗುಗೊಳಿಸು ವಂಥದ್ದು. ಅವರ ಬರವಣಿಗೆ ಎಂದಿಗೂ ಹುಟ್ಟಿದ ವರ್ಷ ಅಥವಾ ಪಡೆದ ಪದವಿಗಳಿಂದ ಶುರುವಾಗುತ್ತಿರಲಿಲ್ಲ.

ಬದಲಾಗಿ, ಆ ವ್ಯಕ್ತಿಯ ಬದುಕಿನ ಯಾವುದೋ ಒಂದು ಅಪರೂಪದ ಸನ್ನಿವೇಶ, ಕಣ್ಣಿಗೆ ಕಟ್ಟುವ ದೃಶ್ಯ, ಅವರ ವಿಚಿತ್ರ ಹವ್ಯಾಸ ಅಥವಾ ಅವರು ಧರಿಸುತ್ತಿದ್ದ ಬಟ್ಟೆಯ ಬಣ್ಣದಿಂದ ಮೊದಲ ವಾಕ್ಯ ಆರಂಭ ವಾಗುತ್ತಿತ್ತು. ಓದುಗ ಮೊದಲ ಪ್ಯಾರಾ ಓದುತ್ತಿದ್ದಂತೆಯೇ, ಮಣ್ಣಾಗಿ ಹೋದ ವ್ಯಕ್ತಿ ಎದುರೇ ನಿಂತು ಮಾತನಾಡುತ್ತಿರುವಂತೆ ಭಾಸವಾಗುತ್ತಿತ್ತು. ಸಾವಿನ ದುರಂತವನ್ನು ಎತ್ತಿ ಹಿಡಿಯುವ ಬದಲು, ಅವರು ಜೀವಿಸಿದ್ದ ಕ್ಷಣಗಳನ್ನು ಸಂಭ್ರಮಿಸುವುದು ರೋ ಬರವಣಿಗೆಯ ವೈಶಿಷ್ಟ್ಯವಾಗಿತ್ತು. ಅವರ ಅಂಕಣದಲ್ಲಿ ಫಿಡೆಲ್ ಕ್ಯಾಸ್ಟ್ರೋ, ಮಾರ್ಗರೇಟ್ ಥ್ಯಾಚರ್ ಮುಂತಾದ ಜಾಗತಿಕ ಮುಖಂಡರ ಜತೆಜತೆಗೇ, ಯಾರೂ ಹೆಸರು ಕೇಳಿರದ ವ್ಯಕ್ತಿಗಳೂ ಸ್ಥಾನ ಪಡೆದರು.

ಉದಾಹರಣೆಗೆ, ಪೆನ್ಸಿಲ್ ಮೇಲಿನ ರಬ್ಬರ್ ತುಂಡನ್ನು ಅನ್ವೇಷಿಸಿದಾತ, ವಿಶ್ವದ ಮೊದಲ ಕಾನ್ಸೆಪ್ಟ್ ಆಲ್ಬಂ ಸೃಷ್ಟಿಸಿದ ಸಂಗೀತಗಾರ, ಸಮುದ್ರದ ಅಲೆಗಳನ್ನು ಆಲಿಸುತ್ತಾ ನಕ್ಷೆ ತಯಾರಿಸಿದ ಅಲೆಮಾರಿ, ಇಲ್ಲವೇ ಮೈಕೆಲ್ ಜಾಕ್ಸನ್‌ನ ಸಾಕು ‘ಚಿಂಪಾಂಜಿ ಬಬಲ್ಸ್’ ಸಹ ಅವರ ಲೇಖನಿಗೆ ಆಹಾರವಾದವು! ‌

ಇವರೆಲ್ಲರಲ್ಲೂ ಆನ್ ರೋ ಹುಡುಕಿದ್ದು ಒಂದೇ-ಮಾನವ ಸಹಜವಾದ ಕುತೂಹಲ ಮತ್ತು ಪ್ರಪಂಚಕ್ಕೆ ಅವರು ನೀಡಿದ ವಿಶಿಷ್ಟ ಕೊಡುಗೆ. ಸಾಮಾನ್ಯತೆಯ ಮುಸುಕಿನೊಳಗೆ ಅಡಗಿರುವ ಅಸಾಮಾನ್ಯ ಮಿಡಿತ ವನ್ನು ಗುರುತಿಸುವ ಅಪೂರ್ವ ದೃಷ್ಟಿ ಅವರಲ್ಲಿದೆ. ಪ್ರತಿಯೊಂದು ಸಾಮಾನ್ಯ ಜೀವಿಗೂ ಒಂದು ಕಾವ್ಯಮಯ ಮುಕ್ತಾಯ ಸಲ್ಲಬೇಕು ಎಂಬುದು ಅವರ ಅಚಲ ನಂಬಿಕೆ ಇದ್ದಿರಬಹುದು. ರೋ ಭಾಷಾ ಶೈಲಿ ಪತ್ರಿಕೋದ್ಯಮದ ಸರಳ ಗದ್ಯವನ್ನು ಮೀರಿ ಶುದ್ಧ ಸಾಹಿತ್ಯದ ಉತ್ತುಂಗಕ್ಕೇರುತ್ತದೆ. ಅವರ ವಾಕ್ಯಗಳು ಶಾಂತ ನದಿಯಂತೆ ಹರಿಯುತ್ತವೆ, ಪದಗಳ ಆಯ್ಕೆ ಅತ್ಯಂತ ಮಿತ ಹಾಗೂ ಶಕ್ತಿಯುತ. ಕಲೆಯಂತೆ ಬರೆಯುವ ಈ ತಂತ್ರ ಅವರಿಗೆ ಕೇವಲ ಪತ್ರಿಕಾ ಲೇಖಕಿಯ ಪಟ್ಟ ತಂದುಕೊಡಲಿಲ್ಲ.

ಬ್ರಿಟನ್ನಿನ ಅತ್ಯುನ್ನತ ಸಾಹಿತ್ಯಿಕ ಗೌರವವಾದ ‘ರಾಯಲ್ ಸೊಸೈಟಿ ಆಫ್ ಲಿಟರೇಚರ್’ನ ಫೆಲೋ ಗೌರವಕ್ಕೂ ಪಾತ್ರವಾಗಿಸಿತು. ಪಾಂಟಿಯಸ್ ಪಿಲಾತ್, ಕಾರ್ಡಿನಲ್ ಪೂಲ್ ಮತ್ತು ಶೆಲ್ಲಿಯಂಥ ಐತಿಹಾಸಿಕ ವ್ಯಕ್ತಿಗಳ ಕುರಿತು ಅವರು ರಚಿಸಿದ ಜೀವನಚರಿತ್ರೆಗಳು ಹಾಗೂ ಬಣ್ಣಗಳು ಮತ್ತು ಪ್ರಕಾಶದ ಕುರಿತಾದ ಅವರ ಕೃತಿಗಳು ಅವರ ಆಳವಾದ ದಾರ್ಶನಿಕತೆಯನ್ನು ಸಾಬೀತುಪಡಿಸುತ್ತವೆ. ಸಾವನ್ನು ಬರೆಯುವಾಗಲೂ ಅವರಲ್ಲಿ ಕತ್ತಲೆಯ ಭೀತಿಯಿರಲಿಲ್ಲ, ಬದಲಾಗಿ ಮನುಷ್ಯನ ಅಸ್ತಿತ್ವದ ಮೇಲೊಂದು ಬೆಳಕಿನ ರೇಖೆ ಮೂಡುತ್ತಿತ್ತು. ಆನ್ ರೋ ವ್ಯಕ್ತಿತ್ವವೂ ಅವರ ಬರವಣಿಗೆ ಯಂತೆಯೇ ಅತ್ಯಂತ ಸರಳ, ಗಂಭೀರ ಹಾಗೂ ಆಪ್ತ.

ಪ್ರಚಾರದ ಬೆಳಕಿನಿಂದ ಸದಾ ದೂರವುಳಿದು, ಲಂಡನ್ನಿನ ತಮ್ಮ ಮನೆಯ ಅಥವಾ ಪುಟ್ಟ ಲೈಬ್ರರಿಯ ಮೂಲೆಯ ಕುಳಿತು ಅಕ್ಷರಗಳ ತಪಸ್ಸಿನಲ್ಲಿ ಮುಳುಗಿರುವ ಸಾಧಕಿ ಅವರು. ಸಾವನ್ನು ನಿರಂತರವಾಗಿ ಎದುರುಗೊಂಡರೂ ಅವರಲ್ಲಿ ಎಂದಿಗೂ ವಿಷಾದವಾಗಲಿ, ನಕಾರಾತ್ಮಕತೆ ಯಾಗಲಿ ಸುಳಿಯಲಿಲ್ಲ. ಪ್ರತಿಯೊಂದು ಸಾವೂ ಬದುಕಿನ ಮಹತ್ವವನ್ನು ಮತ್ತೆ ನೆನಪಿಸುತ್ತದೆ, ಉಸಿರಾಡುವ ಪ್ರತಿ ಕ್ಷಣವೂ ಎಷ್ಟು ಅಮೂಲ್ಯವಾದುದು ಎಂಬುದನ್ನು ಎಚ್ಚರಿಸುತ್ತದೆ ಎಂದು ಅವರು ಸಾರಿದರು.

ಬದುಕಿನ ಸಂಕೀರ್ಣತೆಯನ್ನು ಅರಿಯಲು ಸಾವಿನ ಕನ್ನಡಿಯೇ ಅತ್ಯುತ್ತಮ ಮಾಧ್ಯಮ ಎಂಬ ಸತ್ಯವನ್ನು ಅವರು ತಮ್ಮ ಇಡೀ ವೃತ್ತಿಜೀವನದಲ್ಲಿ ಸಾಕಾರಗೊಳಿಸಿದರು. ಆನ್ ರೋ ಕೇವಲ ನಿಧನ ವಾರ್ತೆಗಳನ್ನು ಬರೆದ ಪತ್ರಕರ್ತೆಯಲ್ಲ. ಅವರು ಬದುಕಿನ ಅಗಾಧತೆಯನ್ನು ಅಕ್ಷರಗಳಲ್ಲಿ ದಾಖಲಿಸಿದ ಅಪರೂಪದ ಇತಿಹಾಸಕಾರ್ತಿ. ಭೂಮಿಯ ಮೇಲೆ ಹೆಜ್ಜೆ ಇಟ್ಟು ಹೋದ ಯಾವುದೇ ಜೀವವೂ ವ್ಯರ್ಥವಲ್ಲ, ಪ್ರತಿಯೊಬ್ಬರ ಕಣ್ಣೀರಲ್ಲೂ ನಗುವಿನಲ್ಲೂ ಒಂದು ಅಸಾಧಾರಣ ಕಥೆಯಿದೆ ಎಂಬುದನ್ನು ಅವರು ಜಗತ್ತಿಗೆ ನಿರೂಪಿಸಿದರು. ಸಾವಿನ ಮೌನ ಕಣಿವೆಯಲ್ಲಿ ಕಳೆದುಹೋಗುತ್ತಿದ್ದ ಅದೆಷ್ಟೋ ಮುಗ್ಧ, ಸಾಮಾನ್ಯ ಜೀವಿಗಳ ಪಿಸುಮಾತನ್ನು ಜಾಗತಿಕ ರಂಗಭೂಮಿಗೆ ತಲುಪಿಸಿದ ಆನ್ ರೋ, ತಮ್ಮ ಜೀವಂತಿಕೆಯ ಬರಹಗಳ ಮೂಲಕ ಪತ್ರಿಕೋದ್ಯಮದ ಚರಿತ್ರೆಯಲ್ಲಿ ಚಿರಂಜೀವಿಯಾಗಿ ಉಳಿಯುತ್ತಾರೆ.

ವಿಶ್ವೇಶ್ವರ ಭಟ್‌

View all posts by this author