ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಜಗತ್ತಿನ ಅತಿ ಕಡಿಮೆ ಅವಧಿ ಯುದ್ಧ

1896ರ ಆಗಸ್ಟ್ 27ರಂದು ನಡೆದ ಆಂಗ್ಲೋ-ಜಂಜಿಬಾರ್ ಸಮರ ವಿಶ್ವ ಇತಿಹಾಸದ ಅತ್ಯಂತ ಕಡಿಮೆ ಅವಧಿಯ ಯುದ್ಧ ಎಂದು ದಾಖಲಾಗಿದೆ. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಆಫ್ರಿಕಾ ಖಂಡವು ಯುರೋಪಿಯನ್ ರಾಷ್ಟ್ರಗಳ ವಸಾಹತುಶಾಹಿ ಆಸಕ್ತಿಗೆ ಕೇಂದ್ರಬಿಂದು ವಾಗಿತ್ತು.

ಸಂಪಾದಕರ ಸದ್ಯಶೋಧನೆ

ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ದಶಕಗಳ ಕಾಲ ನಡೆದ ಮಹಾಯುದ್ಧಗಳು, ರಕ್ತಸಿಕ್ತ ಹೋರಾಟಗಳು ನಮಗೆ ನೆನಪಾಗುತ್ತವೆ. ಇಸ್ರೇಲ್-ಗಾಜಾ ಮತ್ತು ರಷ್ಯಾ-ಉಕ್ರೇನ್ ನಡುವಿನ ಯುದ್ಧಗಳೇ ತಾಜಾ ನಿದರ್ಶನ. ಆದರೆ, ಕೇವಲ ಮೂವತ್ತೆಂಟು ನಿಮಿಷಗಳಲ್ಲಿ ಮುಕ್ತಾಯಗೊಂಡ ಒಂದು ಯುದ್ಧವಿದೆ ಎಂದರೆ ನಂಬಲು ಅಸಾಧ್ಯವೆನಿಸಬಹುದು.

ಹೌದು, 1896ರ ಆಗಸ್ಟ್ 27ರಂದು ನಡೆದ ಆಂಗ್ಲೋ-ಜಂಜಿಬಾರ್ ಸಮರ ವಿಶ್ವ ಇತಿಹಾಸದ ಅತ್ಯಂತ ಕಡಿಮೆ ಅವಧಿಯ ಯುದ್ಧ ಎಂದು ದಾಖಲಾಗಿದೆ. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಆಫ್ರಿಕಾ ಖಂಡವು ಯುರೋಪಿಯನ್ ರಾಷ್ಟ್ರಗಳ ವಸಾಹತುಶಾಹಿ ಆಸಕ್ತಿಗೆ ಕೇಂದ್ರಬಿಂದುವಾಗಿತ್ತು.

ಬ್ರಿಟನ್ ಮತ್ತು ಜರ್ಮನಿ ಪೂರ್ವ ಆಫ್ರಿಕಾದಲ್ಲಿ ತಮ್ಮ ಪ್ರಭಾವ ಬೀರಲು ಪೈಪೋಟಿ ನಡೆಸುತ್ತಿದ್ದವು. ಈ ಪೈಪೋಟಿಯ ನಡುವೆ ಹಿಂದೂ ಮಹಾಸಾಗರದ ‘ಜಂಜಿಬಾರ್’ (ಇಂದಿನ ತಾಂಜೇನಿಯಾದ ಭಾಗ) ದ್ವೀಪವು ಬ್ರಿಟನ್‌ನ ರಕ್ಷಣಾತ್ಮಕ ಆಳ್ವಿಕೆಗೆ ಒಳಪಟ್ಟಿತ್ತು.

ಇದನ್ನೂ ಓದಿ: Vishweshwar Bhat Column: ಹಠಾತ್‌ ನಿಮ್ಮ ಉಚ್ಚಾರ ಬದಲಾದರೆ ?

ಬ್ರಿಟಿಷರ ಬೆಂಬಲವಿದ್ದ ಸುಲ್ತಾನ್ ಹಮದ್ ಬಿನ್ ತುವೈನಿ ಎಂಬುವವರು ಜಂಜಿಬಾರ್ ಅನ್ನು ಆಳುತ್ತಿದ್ದ. ಆದರೆ, ಆಗಸ್ಟ್ 25, 1896ರಂದು ಆತ ಹಠಾತ್ತನೆ ನಿಧನನಾದ. ಈ ಸಾವಿನ ನಂತರ ಅಧಿಕಾರದ ಗದ್ದುಗೆಯನ್ನು ಏರಿದ್ದು ಅವನ ಸೋದರಸಂಬಂಧಿ ಖಾಲಿದ್ ಬಿನ್ ಬರ್ಘಾಶ್.

ಬ್ರಿಟಿಷ್ ಸರಕಾರದೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ, ಹೊಸ ಸುಲ್ತಾನನ ನೇಮಕಾತಿಗೆ ಬ್ರಿಟಿಷ್ ಕಾನ್ಸಲ್‌ನ ಅನುಮತಿ ಬೇಕಿತ್ತು. ಆದರೆ ಖಾಲಿದ್ ಬರ್ಘಾಶ್ ಬ್ರಿಟಿಷರ ಅನುಮತಿ ಪಡೆಯದೆ ತಾನೇ ಸುಲ್ತಾನ್ ಎಂದು ಘೋಷಿಸಿಕೊಂಡ. ಇವನು ಬ್ರಿಟಿಷರಿಗಿಂತ ಜರ್ಮನ್ನರ ಕಡೆಗೆ ಒಲವು ಹೊಂದಿದ್ದ.

ಇದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಯಿತು. ಬ್ರಿಟಿಷ್ ಅಧಿಕಾರಿ ಬಾಸಿಲ್ ಕೇವ್, ಸುಲ್ತಾನ ನಿಗೆ ಎಚ್ಚರಿಕೆ ನೀಡಿ, ಕೂಡಲೇ ಅರಮನೆಯಿಂದ ಹೊರಬರುವಂತೆ ಮತ್ತು ಶರಣಾಗುವಂತೆ ಸೂಚಿಸಿದ. ಆದರೆ ಖಾಲಿದ್ ಇದಕ್ಕೆ ಬಗ್ಗದೆ, ತನ್ನ ಅರಮನೆಯ ಸುತ್ತ ಸುಮಾರು ಮೂರು ಸಾವಿರ ಸೈನಿಕರನ್ನು ನಿಯೋಜಿಸಿ, ಹಳೆಯ ಯುದ್ಧನೌಕೆ ‘ಗ್ಲ್ಯಾಸ್ಗೋ’ ಮೂಲಕ ರಕ್ಷಣೆಗೆ ನಿಂತ. ಆಗಸ್ಟ್ 26ರಂದು ಬ್ರಿಟಿಷರು ಅಂತಿಮ ಗಡುವು ನೀಡಿದರು - ‘ಮರುದಿನ ಬೆಳಗ್ಗೆ ಒಂಬತ್ತು ಗಂಟೆಯೊಳಗೆ ಶರಣಾಗದಿದ್ದರೆ ದಾಳಿ ಮಾಡಲಾಗುವುದು.’

ಮರುದಿನ ಬೆಳಗ್ಗೆ ಎಂಟು ಗಂಟೆಗೆ ಖಾಲಿದ್ ಒಂದು ಸಂದೇಶ ಕಳುಹಿಸಿದ - ‘ನಾವು ನಮ್ಮ ಧ್ವಜವನ್ನು ಕೆಳಗಿಳಿಸುವುದಿಲ್ಲ ಮತ್ತು ನೀವು ನಮ್ಮ ಮೇಲೆ ಗುಂಡು ಹಾರಿಸುತ್ತೀರಿ ಎಂದು ನಾವು ನಂಬುವುದಿಲ್ಲ.’ ಅದಕ್ಕೆ ಪ್ರತಿಯಾಗಿ ಬ್ರಿಟಿಷರು, ‘ನಾವು ಗುಂಡು ಹಾರಿಸಲು ಬಯಸುವುದಿಲ್ಲ, ಆದರೆ ನೀವು ಶರಣಾಗದಿದ್ದರೆ ನಾವು ದಾಳಿ ಮಾಡುವುದು ಖಚಿತ’ ಎಂದು ಉತ್ತರಿಸಿದರು.

ಬೆಳಗ್ಗೆ ಸರಿಯಾಗಿ ಒಂಬತ್ತು ಗಂಟೆಗೆ ಬ್ರಿಟಿಷ್ ಯುದ್ಧನೌಕೆಗಳಾದ ಹರ್ಕ್ಯೂಲಸ್, ಫಿಲೋ ಮೆಲ್ ಮತ್ತು ರಷ್ʼಗಳಿಗೆ ದಾಳಿ ಮಾಡಲು ಆದೇಶ ನೀಡಲಾಯಿತು. ಮುಂದಿನ ಮೂರು ನಿಮಿಷಗಳಲ್ಲಿ ಫಿರಂಗಿಗಳು ಗುಡುಗಿದವು. ಮುಂದಿನ ಮೂವತ್ತೆಂಟು ನಿಮಿಷ ಗಳಲ್ಲಿ ಏನಾಯಿತು? ಬ್ರಿಟಿಷರ ಆಧುನಿಕ ಫಿರಂಗಿಗಳ ಮುಂದೆ ಸುಲ್ತಾನನ ಹಳೆಯ ಶಸ್ತ್ರಾಸ್ತ್ರ ಗಳು ಮಂಕಾದವು.

ಐದು ನಿಮಿಷಗಳಲ್ಲಿ ಸುಲ್ತಾನನ ಏಕೈಕ ಯುದ್ಧನೌಕೆ ‘ಗ್ಲ್ಯಾಸ್ಗೋ’ ಮುಳುಗಡೆಯಾಯಿತು. ಅದಾಗಿ ಹತ್ತು ನಿಮಿಷಗಳಲ್ಲಿ ಅರಮನೆಯ ಮರದ ರಚನೆಗಳು ಬೆಂಕಿಗೆ ಆಹುತಿಯಾದವು. ಸುಲ್ತಾನ್ ಖಾಲಿದ್ ಪ್ರಾಣಭಯದಿಂದ ಅರಮನೆಯ ಹಿಂಬಾಗಿಲಿನಿಂದ ಓಡಿ ಹೋಗಿ ಜರ್ಮನ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದ.

ಮುಂದಿನ ಅರ್ಧ ಗಂಟೆಯಲ್ಲಿ ಅರಮನೆಯ ಮೇಲಿದ್ದ ಸುಲ್ತಾನನ ಧ್ವಜವನ್ನು ಕೆಳಗಿಳಿಸ ಲಾಯಿತು. ಗುಂಡಿನ ದಾಳಿ ನಿಂತಿತು. ಅಷ್ಟರಲ್ಲಿ ಕೇವಲ ಮೂವತ್ತೆಂಟು ನಿಮಿಷಗಳು ಕಳೆದಿತ್ತು. ಜಂಜಿಬಾರ್ ಸೈನ್ಯದ ಸುಮಾರು ಐನೂರು ಜನರು ಸಾವನ್ನಪ್ಪಿದರು ಅಥವಾ ಗಾಯಗೊಂಡರು.

ಬ್ರಿಟಿಷ್ ಕಡೆಯಿಂದ ಕೇವಲ ಒಬ್ಬ ಸೈನಿಕನಿಗೆ ಸಣ್ಣ ಗಾಯವಾಗಿತ್ತು. ಯುದ್ಧ ಮುಗಿದ ತಕ್ಷಣ ಬ್ರಿಟಿಷರು ತಮಗೆ ಬೇಕಾದ ಹಮದ್ ಬಿನ್ ಮುಹಮ್ಮದ್‌ನನ್ನು ಸುಲ್ತಾನನನ್ನಾಗಿ ನೇಮಿಸಿದರು. ಜಂಜಿಬಾರ್ ಮುಂದಿನ ಅರವತ್ತೇಳು ವರ್ಷಗಳ ಕಾಲ ಬ್ರಿಟಿಷರ ಸಂಪೂರ್ಣ ನಿಯಂತ್ರಣದಲ್ಲಿತ್ತು. ತಪ್ಪಿಸಿಕೊಂಡ ಖಾಲಿದ್ ನಂತರ ಬ್ರಿಟಿಷರಿಗೆ ಸಿಕ್ಕಿ ಬಿದ್ದು ಸೆರೆಯಾದ.

ಒಬ್ಬ ವ್ಯಕ್ತಿಯ ಹಠ ಮತ್ತು ತಪ್ಪು ನಿರ್ಧಾರ ಒಂದು ರಾಷ್ಟ್ರವನ್ನು ಹೇಗೆ ಯುದ್ಧಕ್ಕೆ ದೂಡಬಹುದು ಎಂಬುದಕ್ಕೆ ಇದು ದೊಡ್ಡ ಉದಾಹರಣೆ. ಇದು ‘ಜಗತ್ತಿನ ಅತಿ ಕಡಿಮೆ ಅವಽಯ ಯುದ್ಧ’ ಎಂದು ದಾಖಲಾಗಿದೆ.

ವಿಶ್ವೇಶ್ವರ ಭಟ್‌

View all posts by this author