ಶಿಶಿರಕಾಲ
ನಾವು ನಿತ್ಯ ಬಳಸುವ ಪ್ರತಿಯೊಂದು ಸಾಧಾರಣ ವಸ್ತುವಿನ ಹಿಂದೆಯೂ ಮನುಷ್ಯ ಇತಿಹಾಸವಿದೆ. ಟೂತ್ ಬ್ರಷ್‌ನ ಪ್ಲಾಸ್ಟಿಕ್‌ನ ಹಿಂದೆ ಕಾರ್ಖಾನೆ, ಪೆಟ್ರೋಲಿಯಂ ಉತ್ಖನನ ವಿದೆ. ಬಟ್ಟೆಯ ಹಿಂದೆ ಕಾರ್ಖಾನೆ, ಹೊಲಿಗೆಯಂತ್ರ, ಹತ್ತಿ ಗಿಡ, ಬೀಜ, ಮಾನ್ಸೂನ್, ಮಳೆ, ಕೃಷಿಕ, ಮಣ್ಣು, ಎರೆಹುಳು, ಮಣ್ಣಿನೊಳಗಿನ ಮೈಕ್ರೋ ಜೀವಿಗಳು ಎಲ್ಲವೂ ಇವೆ. ಹೀಗೆ ಒಂದೊಂದು ವಸ್ತುವಿನ ಹಿನ್ನೆಲೆ ನೋಡುತ್ತಾ ಹೋದರೂ ಒಂದೊಂದು ಪ್ರಪಂಚವೇ ನಮ್ಮೆದುರು ತೆರೆದುಕೊಳ್ಳುತ್ತದೆ.
ನಿತ್ಯ ಊಟಕ್ಕೆ ಕೂತಾಗ ಬಟ್ಟಲಿಗೆ ಹಾಕಿಕೊಂಡ ಆಹಾರ, ಬಳಸಿದ ಪದಾರ್ಥಗಳು ಎಲ್ಲಿಂದ ಬಂದಿವೆ ಎಂದು ಒಂದು ಕ್ಷಣ ಯೋಚಿಸುವುದು ನಾನು ಬಾಲ್ಯದಿಂದ ಪಾಲಿಸಿಕೊಂಡು ಬಂದ ಅಭ್ಯಾಸ. ಈ ಅಭ್ಯಾಸ ಶುರುವಾಗಿದ್ದು ಹೀಗೆ: ನಮ್ಮ ಮನೆಯಿಂದ ನಾನು ಹೋಗುತ್ತಿದ್ದ ಶಾಲೆ ನಾಲ್ಕು ಕಿಲೋಮೀಟರ್ ದೂರ. ಶಾಲೆಯ ಹತ್ತಿರವೇ ಗಣೇಶ ಭಟ್ಟರ ಕಿರಾಣಿ ಅಂಗಡಿಯಿತ್ತು.
ಹಾಗಾಗಿ ಶಾಲೆಯಿಂದ ಬರುವಾಗ ಚಿಕ್ಕಪುಟ್ಟ ದಿನಸಿ ಸಾಮಾನನ್ನು ಭಟ್ಟರ ಅಂಗಡಿಯಿಂದ ಅಮ್ಮನಿಗೆ ತಂದು ಕೊಡುವ ಕೆಲಸವಿರುತ್ತಿತ್ತು. ಗಣೇಶ ಭಟ್ಟರಿಗೆ ಆಗಲೇ ಅರವತ್ತು ವರ್ಷ ದಾಟಿತ್ತು ಅನಿಸುತ್ತದೆ. ನಾನು ಅವರ ಅಂಗಡಿಗೆ ಹೋದರೆ ಒಂದೇ ಸಾಮಾನು ಬೇಕಿದ್ದರೂ ಅವರು ಅಷ್ಟು ಬೇಗ ಅದನ್ನು ಕೊಡುತ್ತಿರಲಿಲ್ಲ.
ಪ್ರತಿ ಬಾರಿ ಹೋದಾಗಲೂ ಏನಾದರೂ ಒಂದು ವಿಷಯವನ್ನು ಚರ್ಚಿಸಿ, ಏನೋ ಒಂದಿಷ್ಟು ಪ್ರಶ್ನೆ ಕೇಳಿ, ಒಂದಿಷ್ಟು ಯೋಚಿಸುವಂತೆ ಮಾಡುತ್ತಿದ್ದರು. ಅಮ್ಮ ಕಳಿಸಿದ್ದಕ್ಕೆ ನಾನು ಅವರ ಅಂಗಡಿಗೆ ಹೋಗುತ್ತಿದ್ದೆನೋ ಅಥವಾ ಅವರಲ್ಲಿ ಮಾತನಾಡಲೆಂದೇ ಹೋಗುತ್ತಿದ್ದೆನೋ ಗೊತ್ತಿಲ್ಲ. ಪ್ರತಿ ಬಾರಿ ಅವರಲ್ಲಿ ಮಾತನಾಡಿದಾಗಲೂ ಯಾವುದೋ ಒಂದು ಹೊಸ ವಿಷಯದ ಮೇಲೆ ನನ್ನ ಕುತೂಹಲ ಹುಟ್ಟಿಕೊಳ್ಳುತ್ತಿತ್ತು.
ಇಂಗು ಮತ್ತು ಸಾಸಿವೆ ತರಲು ಗಣೇಶ ಭಟ್ಟರ ಅಂಗಡಿಗೆ ಅಮ್ಮ ಕಳುಹಿಸಿದ್ದಳು. ಗಣೇಶಭಟ್ಟರಿಗೆ “ಇಂಗು, ಸಾಸಿವೆ ಕೊಡಿ" ಎಂದದ್ದೇ ಅಮ್ಮನ “ಒಗ್ಗರಣೆ ಡಬ್ಬಿಯಲ್ಲಿ ಎಷ್ಟು ಚಿಕ್ಕ ತಟ್ಟೆಗಳಿರುತ್ತವೆ ಹೇಳು ನೋಡೋಣ" ಎಂದರು!
ಇದನ್ನೂ ಓದಿ: Shishir Hegde Column: ಬದುಕಲು ಕಾರಣ ಬೇಕೆಂಬುದೇ ಬಂಡಲ್ ಬಡಾಯಿ !
ನನಗೆಲ್ಲಿ ನೆನಪಿರಬೇಕು- ಇಂಗು, ಸಾಸಿವೆ, ಜೀರಿಗೆ, ಮೆಣಸು ಹೀಗೆ ಒಂದೊಂದೇ ನೆನಪು ಮಾಡಿ ಪಟ್ಟಿ ಮಾಡಿ ಹೇಳಿದೆ. ಗಣೇಶ ಭಟ್ಟರು “ಇಂಗು ಎಲ್ಲಿಂದ ಬರುತ್ತದೆ ಗೊತ್ತೇ?" ಎಂದು ಕೇಳಿದರು. ಅದು- ಅಫ್ಘಾನಿಸ್ತಾನದಿಂದ. ಜೀರಿಗೆ ಎಲ್ಲಿಂದ? ಗುಜರಾತಿನಿಂದ. ಮೆಣಸು ಎಲ್ಲಿಂದ? ಬ್ಯಾಡಗಿಯಿಂದ. ಸಾಸಿವೆ ಎಲ್ಲಿಂದ? ಪಂಜಾಬಿನಿಂದ. ಹೀಗೆ ಸುಮಾರು ಇಪ್ಪತ್ತೈದು ದಿನಸಿ ವಸ್ತುಗಳನ್ನು ಪಟ್ಟಿಮಾಡಿ ಅವು ಎಲ್ಲಿಂದ ಬರುತ್ತವೆ ಎಂದು ಹೇಳಿದರು. ಇಪ್ಪತ್ತು ಊರು, ಹತ್ತು ರಾಜ್ಯ, ಮೂರು ದೇಶ ಇದ್ದವು!
ಅಂದಿನಿಂದ ನನಗೆ ಈ ಅಭ್ಯಾಸ ಶುರುವಾಯಿತು. ನಿತ್ಯ ಬಟ್ಟಲಿಗೆ ಬಡಿಸಿಕೊಂಡ ಅಥವಾ ಸೇವಿಸಲು ಮುಂದಾದ- ಆಹಾರ, ಪದಾರ್ಥಗಳು ಎಲ್ಲಿಂದ ಬಂದಿರಬಹುದು ಎಂದು ಒಂದು ಕ್ಷಣ ಯೋಚಿಸುವ ಅಭ್ಯಾಸ. ಅದೊಂದು ವಿಚಿತ್ರ ಪ್ರಶ್ನೆ, ಬೇಕಾದರೆ ನೀವೂ ಒಮ್ಮೆ ಕೇಳಿಕೊಂಡು ನೋಡಿ. ಆ ಪ್ರಶ್ನೆಯೇ ಆಹಾರಕ್ಕೆ ಇನ್ನಷ್ಟು ರುಚಿ, ಮೆರಗನ್ನು, ವಿಚಿತ್ರ ಧನ್ಯತೆಯನ್ನು ತಂದು ಕೊಡುತ್ತದೆ ಎನ್ನುವುದು ನನ್ನ ಅನುಭವ. ನಮ್ಮ ಇಡೀ ವ್ಯವಸ್ಥೆಯ ಶ್ರಮವು ಬಟ್ಟಲಿನ ಆಹಾರ ದಲ್ಲಿ ಎಲ್ಲರಿಗೂ ಕಾಣಿಸುತ್ತದೆ.
ಇತ್ತೀಚೆಗೆ ನಾನು ಮತ್ತು ಮಗಳು ಒಂದು ಚಿಕ್ಕ ಪ್ರಾಜೆಕ್ಟ್ ಮಾಡಿದೆವು. ಏನೆಂದರೆ ಆ ದಿನ ಡೈನಿಂಗ್ ಟೇಬಲ್ಲಿನ ಮೇಲಿರುವ ಆಹಾರ ವಸ್ತುಗಳು ಎಲ್ಲಿಂದ ಬಂದಿವೆ ಎಂದು ಒಂದು ವಾರ ನಿತ್ಯ ಪಟ್ಟಿ ಮಾಡುವುದು. ಉಪ್ಪು ಕೆನಡಾದಿಂದ, ಮೆಣಸು ಬ್ಯಾಡಗಿ, ಗುಂಟೂರು, ಹಸಿಮೆಣಸು ಮೆಕ್ಸಿಕೋ, ಜೀರಿಗೆ ಪೂರ್ವ ಮೆಡಿಟೇರಿಯನ್ ಪ್ರದೇಶದಿಂದ, ಇಂಗು ಅಫ್ಘಾನಿಸ್ತಾನದಿಂದ, ದಾಲ್ಚಿನ್ನಿ ಶ್ರೀಲಂಕಾ ದಿಂದ, ಕೊತ್ತುಂಬರಿ ಬೀಜ ದಕ್ಷಿಣ ಯುರೋಪಿನಿಂದ, ಬೆಳ್ಳುಳ್ಳಿ ಚೀನಾದಿಂದ, ಅಕ್ಕಿ ರಾಣಿಬೆನ್ನೂರಿ ನಿಂದ, ಕಾಫಿ ಬೀ ಕೊಲಂಬಿಯಾದಿಂದ, ಹೀಗೆ. ಹಾಲು, ಚೀಸ್, ನೀರು ಇವಿಷ್ಟು ಬಿಟ್ಟು ನಾವು ನಿತ್ಯ ಸೇವಿಸುವ ಭಾರತೀಯ ಆಹಾರದ ಬಹುಪಾಲು ಪದಾರ್ಥಗಳು ಬೇರೆ ದೇಶದಿಂದ ಬಂದವೇ ಇದ್ದವು. ಎಲ್ಲದರ ಪಟ್ಟಿ ಮಾಡಿ ಮುಗಿಸುವಾಗ ಸುಮಾರು ಇಪ್ಪತ್ತಾರು ದೇಶದ ಹೆಸರು ನಮಗೆ ಸಿಕ್ಕಿದ್ದವು!
ಮೊನ್ನೆ ಅಮೆಜಾನ್‌ನಿಂದ ಸಾಮಾನ್ಯವೆನಿಸುವ ಚಿಕ್ಕದೊಂದು ಟೇಬಲ್ ಲ್ಯಾಂಪ್ ತರಿಸಿದ್ದೆ. ಅಮೆಜಾನ್‌ನಲ್ಲಿ ನಾವು ತರಿಸುವ ವಸ್ತು ಎಲ್ಲಿಯದ್ದು ಎಂದು ನೋಡಬಹುದಲ್ಲ. ಅದು ಚೀನಾದ ಅದ್ಯಾವುದೋ ಒಂದು ಹೆಸರು ಹೇಳಲು ಬಾರದ ನಗರದಿಂದ ಹೊರಟು, ಸ್ಯಾನ್ ಫ್ರಾನ್ಸಿಸ್ಕೋ ತಲುಪಿ, ಅಲ್ಲಿಂದ ಶಿಕಾಗೊವಿನ ನಮ್ಮ ಮನೆಗೆ ಬಂದು ಮುಟ್ಟಿತ್ತು.
ಮೂರೇ ದಿನದಲ್ಲಿ ಅದು ಚಲಿಸಿದ್ದು ಸುಮಾರು 13 ಸಾವಿರ ಕಿಲೋ ಮೀಟರ್. ಇಷ್ಟಕ್ಕೇ ಆಶ್ಚರ್ಯ ಪಟ್ಟು ಸುಮ್ಮನಾಗುವುದೇಕೆ ಎಂದು ಆ ಲ್ಯಾಂಪಿನ ಪ್ರಾಡಕ್ಟ್ ಕೋಡ್ ಬಳಸಿ ಅದರ ಇನ್ನಷ್ಟು ವಿವರಗಳನ್ನು ಇಂಟರ್ನೆಟ್‌ನಲ್ಲಿ ನೋಡಬೇಕೆನ್ನಿಸಿತು. ಆ ಲ್ಯಾಂಪಿಗೆ ಬಳಸಿದ್ದ ವೈರ್ ಬಂದದ್ದು ಟರ್ಕಿಯಿಂದ. ಅದರ ವೈರಿಂಗ್ ನಡೆದದ್ದು ಮಲೇಷ್ಯಾದಲ್ಲಿ.
ಅಲ್ಲಿಂದ ಆ ಕಚ್ಚಾವಸ್ತುಗಳು ಚೀನಾದಲ್ಲಿ ಅಸೆಂಬಲ್ ಆಗಿ ಕೊನೆಗೆ ಅಲ್ಲಿನ ವುಹಾನ್, ಅಲ್ಲಿಂದ ಶಾಂಘೈ, ಅಲ್ಲಿಂದ ಸ್ಯಾನ್ ಫ್ರಾನ್ಸಿಸ್ಕೋ, ಅಲ್ಲಿಂದ ಶಿಕಾಗೊ ಗೋದಾಮು, ಅಲ್ಲಿಂದ ನಮ್ಮ ಮನೆಯ ಟೇಬಲ್!
ನಾನು ಹತ್ತು ಡಾಲರ್- ಸುಮಾರು 900 ರುಪಾಯಿ ಕೊಟ್ಟು ಖರೀದಿಸಿದ ಲೈಟ್ ಲ್ಯಾಂಪ್ ಅಷ್ಟು ಪ್ರಯಾಣ ಮಾಡಿ ಬಂದು ಕೆಲಸ ಮಾಡಿದ್ದು ನಾಲ್ಕೇ ದಿನ. ಹಾಳಾಯಿತು ಎಂದು ಅಮೆಜಾನ್‌ಗೆ ಮರಳಿಸಿದೆ. ಬಹುಶಃ ಅಮೆಜಾನ್ ಅವರು ಅದನ್ನು ಎಲ್ಲಿಯೋ ಕಸದ ಜತೆ ಪುಡಿ ಮಾಡಿ ಆ ಕಸವನ್ನು ಇನ್ನೆಲ್ಲಿಗೋ ಕಳುಹಿಸಿರಬಹುದು!
ನಾವೊಂದು ವಿಚಿತ್ರ ಕಾಲಘಟ್ಟದಲ್ಲಿದ್ದೇವೆ. ಈಗ ಮನುಷ್ಯರಿಗಿಂತ ವಸ್ತುಗಳೇ ಹೆಚ್ಚು ಪ್ರಯಾಣ ಮಾಡುತ್ತವೆ. ಸಾಮಾನ್ಯವಾಗಿ ದೇಶದಿಂದ ದೇಶಕ್ಕೆ ರಫ್ತಾಗುವ ವಸ್ತುಗಳಲ್ಲಿ ಹೆಚ್ಚಿನವು ಸಮುದ್ರ ಮಾರ್ಗದಲ್ಲಿ, ಹಡಗಿನಲ್ಲಿ ದೊಡ್ಡ ದೊಡ್ಡ ಕಂಟೈನರ್ ಮೂಲಕ ಸಾಗಿಸಲ್ಪಡುತ್ತವೆ ಎನ್ನುವುದು ನಿಮಗೆ ಗೊತ್ತು. ಈ ಕಂಟೈನರ್‌ನ ಅಳತೆ 20 x 8 ಫೂಟ್, ಅಥವಾ 40 x 8 ಫೂಟ್.
ಒಂದೊಂದರಲ್ಲಿ ಏನಿಲ್ಲವೆಂದರೂ ಐದಾರು ಮಧ್ಯಮವರ್ಗದವರ ಮನೆಯ ಸಾಮಾನು ಸರಂಜಾಮಗಳನ್ನು ಹಿಡಿಸಬಹುದು- ಅಷ್ಟು ದೊಡ್ಡವು. ಒಂದೊಂದು ಹಡಗು ಅಂಥ ಸುಮಾರು ನಾಲ್ಕರಿಂದ ಐದು ಸಾವಿರ ಕಂಟೈನರ್ ಅನ್ನು ನಿರಂತರ ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಎಂದು ಸಾಗಿಸುತ್ತಿರುತ್ತವೆ.
ಅಂಥ ಸುಮಾರು 6500 ಹಡಗುಗಳು ಸದ್ಯ ಚಲನೆಯಲ್ಲಿವೆ. ಒಟ್ಟಾರೆ ಯಾವುದೇ ಗಳಿಗೆಯಲ್ಲಿ ಸರಿಸುಮಾರು 3 ಕೋಟಿ ಕಂಟೈನರ್‌ಗಳು ಸಮುದ್ರದಲ್ಲಿ ಏನೋ ಒಂದು ವಸ್ತುವನ್ನು ಸಾಗಿಸುತ್ತಿರು ತ್ತವೆ! ಈ ಕಂಟೈನರ್‌ನಲ್ಲಿ ಸಾಗಿಸುವ ವಸ್ತುಗಳ ಪ್ರಯಾಣ ಒಂದು ಕಡೆಯಾದರೆ ಖುದ್ದು ಕಂಟೈ ನರ್ ಪ್ರಯಾಣದ್ದು ಬೇರೆಯದೇ ಕಥೆ. ಕಂಟೈನರ್‌ಗೆ ಪ್ರಯಾಣ ಮುಗಿಯಿತು ಎನ್ನುವುದೇ ಇಲ್ಲ.
ಒಂದೋ ಹಡಗಿನಲ್ಲಿ- ಸಮುದ್ರದಲ್ಲಿ, ಇಲ್ಲವೇ ಯಾವುದೋ ಒಂದು ಬಂದರಿನಲ್ಲಿ. ಅಲ್ಲಿಂದ ಇನ್ಯಾವುದೋ ಹಡಗು, ಇನ್ನೆಲ್ಲಿಯೋ ಬಂದರು, ರೈಲು. ಪ್ರತಿ ಕಂಟೈನರ್ ವಾರ್ಷಿಕ ಸುಮಾರು 3 ಲಕ್ಷ ಕಿಲೋಮೀಟರ್ ಪ್ರಯಾಣಿಸುತ್ತದೆಯಂತೆ!!
ಈ ರೀತಿ ಅದೆಲ್ಲಿಯೋ ತಯಾರಾದ ವಸ್ತುಗಳು ಗ್ರಾಹಕರಿಗೆ ತಲುಪಿಸಿದ ಕೂಡಲೇ ಆ ವಸ್ತುಗಳ ಪ್ರಯಾಣ ಮುಗಿಯಿತು ಎಂದುಕೊಳ್ಳಬೇಡಿ. ಉದಾಹರಣೆಗೆ- ಅಮೆರಿಕಕ್ಕೆ ಆಮದಾಗುವ ಬಟ್ಟೆಗಳು ಹೆಚ್ಚಾಗಿ ತಯಾರಾಗುವುದು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಅಥವಾ ವಿಯೆಟ್ನಾಂನಲ್ಲಿ. ಮಹಾರಾಷ್ಟ್ರದಲ್ಲಿ ಬೆಳೆದ ಹತ್ತಿ, ಬಾಂಗ್ಲಾದೇಶಕ್ಕೆ ರಫ್ತಾಗಿ, ಅಲ್ಲಿ ಹತ್ತಿಯಿಂದ ನೂಲಾಗಿ, ಅಲ್ಲಿಂದ ವಿಯೆಟ್ನಾಂನಲ್ಲಿ ಬಣ್ಣ ಹಚ್ಚಿಕೊಂಡು, ಕಾಂಬೋಡಿಯಾದಲ್ಲಿ ಹೊಲಿದು ಟಿ-ಶರ್ಟ್ ಅಥವಾ ಏನೋ ಒಂದು ಆಗಿ ಅಮೆರಿಕ, ಇಂಗ್ಲೆಂಡ್ ದೇಶಗಳ ಮಳಿಗೆಗಳಲ್ಲಿ ಮಾರಲ್ಪಡುತ್ತದೆ.
ಪ್ರಯಾಣ ಅಷ್ಟಕ್ಕೇ ಮುಗಿಯುವುದಿಲ್ಲ. ಅಮೆರಿಕ, ಬ್ರಿಟನ್ ಇಲ್ಲ ಕೊಳ್ಳುಬಾಕತನ ಜಾಸ್ತಿ- ಅಂತೆಯೇ ಎಸೆಯುವ ಸಂಸ್ಕೃತಿ. ಇಲ್ಲಿನ ಸಂಘ-ಸಂಸ್ಥೆಗಳು ಜನರು ಬಳಸಿದ ಬಟ್ಟೆಯನ್ನು ಸಂಗ್ರಹಿಸುತ್ತವೆ. ಈ ರೀತಿ ಬಳಸಿ ಹಾಳಾಗದೆ ಎಸೆಯುವ ಒಳ್ಳೆಯ ಬಟ್ಟೆಯ ಪ್ರಮಾಣ ಎಷ್ಟೆಂದರೆ ಅಮೆರಿಕಾದ ಬಡವರಿಗೆ ಹಂಚಿ ಯಥೇಚ್ಛ ಮಿಕ್ಕಿರುತ್ತದೆ.
ಅದನ್ನು ನೈಜೀರಿಯಾ, ಘಾನಾ ಮೊದಲಾದ ದೇಶಗಳಿಗೆ ಕಳುಹಿಸಲಾಗುತ್ತದೆ. ಚೀನಾ ತಾನು ಬಳಸಿದ ಬಟ್ಟೆಯನ್ನು ಕೀನ್ಯಾ, ತಾಂಜೇನಿಯಾ ಕಳುಹಿಸಿಕೊಡುತ್ತದೆ. ಹೀಗೆ ರಾಶಿ ರಾಶಿ ಬಂದು ಬೀಳುವ ಬಟ್ಟೆಗಳನ್ನು ಆಯ್ದು ಅಲ್ಲಿ ಪುಡಿಗಾಸಿಗೆ ಮಾರಾಟಮಾಡಲಾಗುತ್ತದೆ.
ಇನ್ನು ಮಿಕ್ಕಿದವನ್ನು ಅಲ್ಲಿ ಸುಟ್ಟುಹಾಕಲಾಗುತ್ತದೆ. ಬಟ್ಟೆ ಮಾತ್ರವಲ್ಲ- ಈ ರೀತಿಯ ಖಂಡಾಂತರ, ದೇಶಾಂತರ ಸೆಕೆಂಡ್‌ಹ್ಯಾಂಡ್ ವ್ಯವಹಾರ ಬಹುಕೋಟಿ ಮೌಲ್ಯದ್ದು. ಜಪಾನ್ ದೇಶ ಬಳಸಿದ ಸೆಕೆಂಡ್ ಹ್ಯಾಂಡ್ ಕಾರನ್ನು ಕೀನ್ಯಾಗೆ, ಅಮೆರಿಕ, ಮೆಕ್ಸಿಕೋ, ಹೊಂಡುರಾಸ್, ನೈಜೀರಿಯಾಕ್ಕೆ, ದಕ್ಷಿಣ ಕೊರಿಯಾ ವಿಯೆಟ್ನಾಂ, ಜೋರ್ಡಾನ್ ದೇಶಗಳಿಗೆ ಕಳುಹಿಸಿ ಕೊಡುತ್ತದೆ.
ಬಟ್ಟೆ, ಕಾರು, ಕೃಷಿ ಸಲಕರಣೆಗಳು, ಟ್ರಾಕ್ಟರ್, ಸ್ಕ್ರಾಪ್ ಲೋಹಗಳು, ಬಳಸಿದ ಮೊಬೈಲ್ ಹೀಗೆ ಸೆಕೆಂಡ್ ಹ್ಯಾಂಡ್ ವಸ್ತುಗಳು ಮತ್ತೆ 10-15 ಸಾವಿರ ಕಿಲೋ ಮೀಟರ್ ಪ್ರಯಾಣಿಸುತ್ತವೆ. ಇವುಗಳ ಜತೆಯಲ್ಲಿ e-waste ಇಲೆಕ್ಟ್ರಾನಿಕ್ ವಸ್ತುಗಳ ಅವಶೇಷಗಳನ್ನು, ಕಸದ ರಾಶಿಗಳನ್ನು ಹಡಗಿನಲ್ಲಿ ಘಾನಾ, ಸೊಮಾಲಿಯಾ ಮೊದಲಾದ ದೇಶಗಳಲ್ಲಿ - ಖಾಲಿ ಸೈಟಿನಲ್ಲಿ ಕಸ ಎಸೆದಂತೆ ಕೆಲವು ದೇಶ ಗಳು ಎಸೆಯುತ್ತವೆ! ಅಂಥ ಪರಿಸ್ಥಿತಿಯೂ ಇದೆ!
ಅದೆಲ್ಲ ಕಥೆ ಬಿಡಿ. ಒಟ್ಟಾರೆ, ನೀವು ಇಂದು ಯಾವ ದೇಶದಲ್ಲಿಯೇ ಇರಿ, ಯಾವ ಮೂಲೆಯಲ್ಲಿಯೇ ಇರಿ, ನಾವೆಲ್ಲರೂ ಒಂದು ಪರಮಾದ್ಭುತ ಸರಬರಾಜು ವ್ಯವಸ್ಥೆಯ ಭಾಗವಾಗಿದ್ದೇವೆ ಎನ್ನುವು ದಂತೂ ಹೌದು. ಈ ಸಮಯದಲ್ಲಿ ನನಗೊಂದು ಮಾತು ನೆನಪಾಗುತ್ತದೆ.
"The ordinary is just the extraordinary seen through the lens of habit'. ಅಭ್ಯಾಸವಾಗು ತ್ತಿದ್ದಂತೆ ನಮಗೆ ಅದೆಂಥದೇ ಅಸಾಧಾರಣ ವಿಷಯವೂ ಸಾಮಾನ್ಯವೆನಿಸುತ್ತದಂತೆ. ನಿತ್ಯ ಬೆಳಗೆದ್ದು ಬಳಸುವ ಹಲ್ಲುಜ್ಜುವ ಬ್ರಷ್, ಹಾಕಿರುವ ಬಟ್ಟೆ, ಪ್ಲೇಟಿನಲ್ಲಿರುವ ಅನ್ನ ಇವೆಲ್ಲವೂ ಅದೆಷ್ಟು ಸಾಧಾರಣ ವಸ್ತುಗಳಲ್ಲವೇ? ನಾವು ನಿತ್ಯ ಬಳಸುವ ಪ್ರತಿಯೊಂದು ಸಾಧಾರಣ ವಸ್ತುವಿನ ಹಿಂದೆಯೂ ಮನುಷ್ಯ ಇತಿಹಾಸವಿದೆ.
ಟೂತ್ ಬ್ರಷ್‌ನ ಪ್ಲಾಸ್ಟಿಕ್‌ನ ಹಿಂದೆ ಕಾರ್ಖಾನೆ, ಪೆಟ್ರೋಲಿಯಂ ಉತ್ಖನನವಿದೆ. ಬಟ್ಟೆಯ ಹಿಂದೆ ಕಾರ್ಖಾನೆ, ಹೊಲಿಗೆಯಂತ್ರ, ಹತ್ತಿ ಗಿಡ, ಬೀಜ, ಮಾನ್ಸೂನ್, ಮಳೆ, ಕೃಷಿಕ, ಮಣ್ಣು, ಎರೆಹುಳು, ಮಣ್ಣಿನೊಳಗಿನ ಮೈಕ್ರೋ ಜೀವಿಗಳು ಎಲ್ಲವೂ ಇವೆ. ಹೀಗೆ ಒಂದೊಂದು ವಸ್ತುವಿನ ಹಿನ್ನೆಲೆ ನೋಡುತ್ತಾ ಹೋದರೂ ಒಂದೊಂದು ಪ್ರಪಂಚವೇ ನಮ್ಮೆದುರು ತೆರೆದುಕೊಳ್ಳುತ್ತದೆ.
ಇತ್ತೀಚೆಗೆ ಆಪಲ್ ಕಂಪನಿಯ ಕುರಿತಾದ ಕೆಲವು ರಿಸರ್ಚ್ ಪೇಪರ್‌ಗಳನ್ನು ನೋಡುತ್ತಿದ್ದೆ. ಅದರಲ್ಲಿ ಐಫೋನ್ ತಯಾರಿಕೆಯ ವಿವರವಿತ್ತು. ಆಪಲ್ ಅಮೆರಿಕದ ಕಂಪನಿ. ಫೋನಿನ ರಚನೆ, ಡಿಸೈನ್ ಇವೆಲ್ಲ ಕ್ಯಾಲಿಫೋರ್ನಿಯಾದಲ್ಲಿ. ಫೋನಿನ ಹೊರಮೈ ಗ್ಲಾಸ್ ತಯಾರಾಗುವುದು ಅಮೆರಿಕದ ಕೆಂಟಕಿಯಲ್ಲಿ. ಐಫೋನ್‌ನ ಪ್ರೊಸೆಸರ್ ತಯಾರಾಗುವುದು ತೈವಾನ್‌ನಲ್ಲಿ. ಅದರ ಸ್ಕ್ರೀನ್- OLED ಅನ್ನು ಒದಗಿಸುವುದು ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಮತ್ತು ಎಲ್ ಜಿ ಕಂಪನಿ, ಕ್ಯಾಮರಾದ ಸೆನ್ಸರ್ ತಯಾರಿಸುವವರು ಸೋನಿ, ಅದರೊಳಗಿನ ಕೆಲವು ಸೂಕ್ಷ್ಮ ಗ್ರಾಹ್ಯ ವಸ್ತುಗಳು ತಯಾರಾಗುವುದು ಜರ್ಮನಿಯಲ್ಲಿ, ಅದಕ್ಕೆ ಬಳಸುವ ಖನಿಜಗಳು ಕಾಂಗೋ ಮೊದಲಾದ ಆಫ್ರಿಕಾ ದೇಶಗಳಿಂದ, ಚೀನಾದಲ್ಲಿ ಬ್ಯಾಟರಿ, ಜೋಡಣೆ, ಅಲ್ಲಿಂದ ಆಯಾ ದೇಶಕ್ಕೆ, ಗ್ರಾಹಕರಿಗೆ.
ನೀವು ಯಾವುದೇ ಫೋನ್ ಬಳಸುತ್ತಿರಿ- ಅದರಲ್ಲಿ ಸರಿಸುಮಾರು 40 ರಿಂದ 50 ದೇಶಗಳ ವಸ್ತುಗಳು ಇರುತ್ತವೆ. ನೀವು ಪೇಟೆಯಲ್ಲಿ ಬದುಕುವವರಾದರೆ ಬಳಸುವ ನೀರು ನೂರಾರು ಕಿಲೋಮೀಟರ್ ಕ್ರಮಿಸಿ ಮನೆಯ ನಲ್ಲಿಗೆ ಬಂದು ಮುಟ್ಟುತ್ತದೆ. ವಿದ್ಯುತ್ ಅಲ್ಲೇಲ್ಲೋ ತಯಾರಾಗುತ್ತದೆ, ವಿದ್ಯುತ್ತಿಗೆ ಕಲ್ಲಿದ್ದಲು ಬಳಸಿದ್ದರೆ ಸ್ವಿಚ್ ಹಾಕಿದಾಗ ಬೆಳಗುವ ಬಲ್ಬಿನ ಬೆಳಕಿನ ಇತಿಹಾಸ ಲಕ್ಷ ವರ್ಷದ ಹಿಂದೆ ಬೆಳೆದ ಅದ್ಯಾವುದೋ ಅಜ್ಞಾತ ಮರಕ್ಕೆ ಹೋಗಿ ಮುಟ್ಟುತ್ತದೆ.
ನಮ್ಮ ಸುತ್ತಮುತ್ತಲಿನ ವಸ್ತುಗಳ ಮೂಲದ ಬಗ್ಗೆ ಸ್ವಲ್ಪ ಯೋಚಿಸಿದರೆ ನಮ್ಮೆಲ್ಲರ ಬದುಕು ಅದೆಷ್ಟು ಅಸಾಧಾರಣ ಎನ್ನುವ ಅರಿವು ನಮಗಾಗುತ್ತದೆ. ಬದುಕು ಅದೆಷ್ಟು ವಿಶೇಷ ಎಂಬ ಅಂದಾಜಾಗುತ್ತದೆ. ಧನ್ಯತೆ ಬೆಳೆಯುತ್ತದೆ, ಬದುಕು ಹೆಚ್ಚು ರುಚಿಸುತ್ತದೆ.