ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗ್ವತ್
ಅನಕ್ಷರಸ್ಥ, ವೃದ್ಧ ತಂದೆಯಿಂದ ಆಸ್ತಿ ಬರೆಸಿಕೊಂಡು, ಆತನನ್ನು ನೋಡಿಕೊಳ್ಳಬೇಕೆಂಬ ಶರತ್ತು ಬಕ್ಷೀಸ್ ಪತ್ರದಲ್ಲಿ ಇರಲಿಲ್ಲ ಎಂಬ ಕಾರಣ ನೀಡಿ ತಂದೆಯನ್ನು ನಿರ್ಲಕ್ಷಿಸಿದರೆ 2007ರ ಕಾಯಿದೆ ಯ 23ನೇ ಕಲಮಿನನ್ವಯ ಅಂಥ ಆಸ್ತಿ ವರ್ಗಾವಣೆ ರದ್ದಾಗುತ್ತದೆ. ದಾನಪತ್ರದಲ್ಲಿ ಬರೆಯ ದಿದ್ದರೂ, ವೃದ್ಧಾಪ್ಯದಲ್ಲಿ ತನ್ನನ್ನು ನೋಡಿಕೊಳ್ಳುತ್ತಾರೆ ಎಂಬ ಕಾರಣಕ್ಕೇ ದಾನ ನೀಡಿದ್ದಾರೆ ಎಂದು ಊಹಿಸಬೇಕಾಗುತ್ತದೆ- ಎಂದು ಕರ್ನಾಟಕ ಹೈಕೋರ್ಟು ‘ವೆಂಕಟಯ್ಯ ವರ್ಸಸ್ ಕರ್ನಾಟಕ ಸರಕಾರ’ ಪ್ರಕರಣದಲ್ಲಿ ತೀರ್ಪು ನೀಡಿದೆ. ಹರಕೆ ಹೊತ್ತು ಮಕ್ಕಳನ್ನು ಪಡೆದು ಅವರನ್ನೇ ಸರ್ವಸ್ವವೆಂದು ಬಗೆದು, ಪ್ರೀತಿ, ಕಾಳಜಿಯಿಂದ ಬೆಳೆಸಿ, ಶಿಕ್ಷಣ-ಬದುಕು ನೀಡಿದ ಪಾಲಕರಿಗೆ, ತಮ್ಮ ವೃದ್ಧಾಪ್ಯದಲ್ಲಿ ಅವರು ತಮಗೆ ಆಸರೆಯಾಗುತ್ತಾರೆ ಎಂಬ ನಿರೀಕ್ಷೆ ಖಂಡಿತ ಇರುತ್ತದೆ.
ವಯಸ್ಸಾದ ತಾಯಿ ತಂದೆಯರು ಅಸಹನೀಯವೆನಿಸಿದರೆ, ಅವರನ್ನು ಪ್ರೀತಿ ಮಾಡುವ ಬದಲು ಅವರನ್ನು ನೋಡಿಕೊಳ್ಳದಿರಲು ಮಕ್ಕಳು ಕಾರಣ ಹುಡುಕಿದರೆ, ಆ ಬದುಕು ನಿಜಕ್ಕೂ ದುರ್ಭರ. ಆದರೆ ತಂದೆ-ತಾಯಿಯರನ್ನು ನೋಡಿಕೊಳ್ಳದಿರುವದು ವಿವಿಧ ಕಾಯಿದೆಗಳಡಿ ಶಿಕ್ಷಾರ್ಹ ಅಪರಾಧ. ಅಂಥ ಕಾಯಿದೆಗಳ ಪ್ರಾಥಮಿಕ ಜ್ಞಾನ ವಿಶೇಷವಾಗಿ ವೃದ್ಧರಿಗೆ ಅಗತ್ಯ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್ಎಸ್-2023) (ಸಿಆರ್‌ಪಿಸಿ 125) 144ನೇ ಕಲಮಿನನ್ವಯ ತಂದೆ ತಾಯಿಯರ ಪಾಲನೆ ಅವರ ಮಕ್ಕಳ ಜವಾಬ್ದಾರಿ. ಹಾಗೆ ನೋಡಿಕೊಳ್ಳಲು ಅವರು ತಪ್ಪಿದಾಗ, ತಮ್ಮ ಪೋಷಣೆಗೆ ಸಾಕಷ್ಟು ಆರ್ಥಿಕ ಮೂಲ ಇಲ್ಲದ ತಾಯಿ ತಂದೆಯರು ಅರ್ಜಿ ಸಲ್ಲಿಸಿದರೆ, ಮಕ್ಕಳು ಅವರಿಗೆ ಪ್ರತೀ ತಿಂಗಳು ಜೀವನಾಂಶ ನೀಡುವಂತೆ ಮ್ಯಾಜಿಸ್ಟ್ರೇಟ್ ಕೋರ್ಟು ಆದೇಶ ನೀಡುತ್ತದೆ.
ಹಾಗೆ ಆದೇಶ ನೀಡಿದ ನಂತರವೂ ಜೀವನಾಂಶ ನೀಡಲು ತಪ್ಪಿದರೆ ಅಂಥ ಮಕ್ಕಳಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಜವಾಬ್ದಾರಿ ಸ್ವತಂತ್ರ ಆದಾಯವಿರುವ ಮದುವೆಯಾದ ಹೆಣ್ಣು ಮಕ್ಕಳಿಗೂ ಅನ್ವಯಿಸುತ್ತದೆ. (ವಿಜಯ ಮನೋಹರ ಅರ್ಬತ್ ವರ್ಸಸ್ ಕಾಶಿ ರಾವ್ ರಾಜಾರಾಮ್ ಸಹಾಯ್ - ಸುಪ್ರೀಂ ಕೋರ್ಟ್). ಈ ಕಾಯಿದೆಯು ಎಲ್ಲಾ ಧರ್ಮದವರಿಗೂ ಸಮಾನವಾಗಿ ಅನ್ವಯವಾಗುತ್ತದೆ.
ಇದನ್ನೂ ಓದಿ: Thimmanna Bhagwat Column: ಧಾರ್ಮಿಕ ಆಚರಣೆ, ನಂಬಿಕೆಗಳಲ್ಲಿ ಹಸ್ತಕ್ಷೇಪ
ತಾಯಿ-ತಂದೆಯರ ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಯೋಗಕ್ಷೇಮ ಕಾಯಿದೆ ೨೦೦೭: ಈ ಕಾಯಿದೆಯ 4ನೇ ಕಲಮಿನ ಪ್ರಕಾರ ಯಾವುದೇ ತಂದೆ, ತಾಯಿ, ಅಜ್ಜ ಅಥವಾ ಅಜ್ಜಿಯರಿಗೆ, (ಸಹಜ, ದತ್ತಕ ಅಥವಾ ಮಲ-ತಂದೆ ತಾಯಿಯರೂ ಸೇರಿ) ತಮ್ಮ ಜೀವನವನ್ನು ನೋಡಿಕೊಳ್ಳಲು ಸಾಕಷ್ಟು ಆರ್ಥಿಕ ಮೂಲವಿಲ್ಲದಿದ್ದರೆ, ಅಂಥವರ ಪಾಲನೆ ನೋಡಿಕೊಳ್ಳುವದು ಅವರ ಮಕ್ಕಳ ಅಥವಾ ಮೊಮ್ಮಕ್ಕಳ ಜವಾಬ್ದಾರಿಯಾಗಿರುತ್ತದೆ.
ತಾಯಿ ತಂದೆಯರು ಹಿರಿಯ ನಾಗರಿಕರಲ್ಲದಿದ್ದರೂ ಅವರ ಕುರಿತು ಈ ಜವಾಬ್ದಾರಿ ಅನ್ವಯ ವಾಗುತ್ತದೆ. ಮಕ್ಕಳಿಲ್ಲದಿದ್ದ ಹಿರಿಯ ನಾಗರಿಕರ ಆಸ್ತಿಯನ್ನು ಪಡೆದುಕೊಂಡಿರುವವರು ಅಥವಾ ಅಂಥವರ ಆಸ್ತಿಗೆ ವಾರಸುದಾರರಾಗುವ ಸಂಬಂಽಕರು ಅವರ ಪಾಲನೆ ಮಾಡುವ/ಜೀವನಾಂಶ ನೀಡುವ ಜವಾಬ್ದಾರಿ ಹೊಂದಿರುತ್ತಾರೆ. ಪಾಲನೆ ಅಂದರೆ ಆಹಾರ, ಬಟ್ಟೆ, ವಸತಿ ಹಾಗೂ ವೈದ್ಯಕೀಯ ವೆಚ್ಚಗಳು- ಅವರು ಸಹಜ ಜೀವನ ನಡೆಸಲು ಬೇಕಾದ ಎಲ್ಲವೂ ಸೇರಿರುತ್ತದೆ.
ಅರ್ಜಿ ಸಲ್ಲಿಕೆ
5ನೇ ಕಲಮಿನ ಪ್ರಕಾರ ಅಂಥ ತಂದೆ ತಾಯಿಯರು ಅಥವಾ ಹಿರಿಯ ನಾಗರಿಕರು ತಮಗೆ ಜೀವನಾಂಶ ನೀಡಲು ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಆದೇಶಿಸುವಂತೆ ಉಪ-ವಿಭಾಗೀಯ ಅಧಿಕಾರಿಗಳು(ಎಸಿ) ಅಧ್ಯಕ್ಷರಾಗಿರುವ ಟ್ರಿಬ್ಯೂನಲ್ಲಿಗೆ ಅರ್ಜಿ ಸಲ್ಲಿಸಬಹುದು. ಅವರ ಪರವಾಗಿ ಅವರಿಂದ ಅಧಿಕಾರ ಪಡೆದ ಮೂರನೇ ವ್ಯಕ್ತಿ ಅಥವಾ ಸಂಸ್ಥೆ ಕೂಡಾ ಅಂಥ ಅರ್ಜಿಯನ್ನು ಸಲ್ಲಿಸಬಹುದು. ಟ್ರಿಬ್ಯೂನಲ್ ತಾನೇ ಸ್ವತಃ ಅಂಥ ವಿಷಯವನ್ನು ಕೈಗೆತ್ತಿಕೊಳ್ಳಬಹುದು (suo-moto). ಹಾಗೆ ಅರ್ಜಿ ಬಂದಾಗ ಸೂಕ್ತ ವಿಚಾರಣೆ ನಡೆಸಿ ನಿರ್ದಿಷ್ಟ ಮೊತ್ತದ ಜೀವನಾಂಶ ನೀಡಲು ಟ್ರಿಬ್ಯೂನಲ್ ಆದೇಶಿಸುತ್ತದೆ. ಈ ಪ್ರಕರಣಗಳಿಗೆ 90 ದಿನಗಳ ಒಳಗಾಗಿ ಆದೇಶ ನೀಡಬೇಕೆಂಬ ತ್ವರಿತ ವಿಚಾರಣೆಯ ನಿಯಮ ಅನ್ವಯವಾಗುತ್ತದೆ.
ವಿಚಾರಣೆ ಬಾಕಿಯಿರುವಾಗ ಮಧ್ಯಂತರ ಜೀವನಾಂಶ ಆದೇಶಿಸಲು ಕೂಡಾ ಟ್ರಿಬ್ಯುನಲ್ಲಿಗೆ ಅಧಿಕಾರವಿದೆ. ಟ್ರಿಬ್ಯೂನಲ್‌ನ ಆದೇಶದ ಪ್ರಕಾರ ಜೀವನಾಂಶ ನೀಡಲು ತಪ್ಪಿದರೆ ಅಂಥ ಮಕ್ಕಳು ಅಥವಾ ಸಂಬಂಧಿಕರಿಗೆ ಪ್ರತೀ ಸಲ ತಪ್ಪಿದಾಗಲೂ ವಾರಂಟ್ ಜಾರಿಯಾಗುತ್ತದೆ ಮತ್ತು ಅಂಥವ ರಿಗೆ ಹಾಗೆ ಬಾಕಿ ಇರುವ ಜೀವನಾಂಶದ ಮೊತ್ತದ ಜೊತೆಗೆ ಪ್ರಕರಣದ ಖರ್ಚು ಸೇರಿಸಿ ದಂಡ ವಿಧಿಸುವ ಮತ್ತು ಅಂಥ ಮೊತ್ತವನ್ನು ನೀಡುವವರೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಟ್ರಿಬ್ಯು ನಲ್ಲಿಗೆ ಇರುತ್ತದೆ. ಆಯಾ ಜಿಲ್ಲೆಯ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಈ ಕಾಯಿದೆ ಯಡಿ ನಡೆಯುವ ಪ್ರಕರಣಗಳ ಕುರಿತಾಗಿ ಅಗತ್ಯ ನೆರವು ನೀಡಲು ಬಾಧ್ಯಸ್ಥರಿರುತ್ತಾರೆ.
ವೃದ್ಧಾಶ್ರಮಗಳು ಮತ್ತು ವೈದ್ಯಕೀಯ
19ನೇ ಕಲಮಿನ ಪ್ರಕಾರ ಆಯಾ ರಾಜ್ಯ ಸರಕಾರಗಳು ಪರಿತ್ಯಕ್ತ ಅಶಕ್ತ ಹಿರಿಯ ನಾಗರಿಕರ ಪುನರ್ವಸತಿಗಾಗಿ ಪ್ರತೀ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ವೃದ್ಧಾಶ್ರಮಗಳನ್ನು ಸ್ಥಾಪಿಸಿ ಅವು ಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸೂಕ್ತ ನಿಯಮಾವಳಿಗಳನ್ನು ರಚಿಸಬೇಕು. 20ನೇ ಕಲಮಿನನ್ವಯ ಸರಕಾರೀ ಆಸ್ಪತ್ರೆಗಳಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುವ ಹಿರಿಯ ನಾಗರಿಕರಿಗೆ ಬೆಡ್‌ಗಳನ್ನು ನೀಡಬೇಕು ಮತ್ತು ತಜ್ಞ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು. ವೈದ್ಯರನ್ನು ಭೇಟಿಯಾಗಲು ಅವರಿಗೆ ಪ್ರತ್ಯೇಕ ಪಾಳಿ ವ್ಯವಸ್ಥೆ ಇರಬೇಕು.
ಆಸ್ತಿ ರಕ್ಷಣೆ
ಕೆಲವು ಸಲ ಹಿರಿಯ ನಾಗರಿಕರು ತಮ್ಮ ಮಕ್ಕಳಿಗೆ ಅಥವಾ ಇತರ ವ್ಯಕ್ತಿಗಳಿಗೆ ತಮ್ಮ ಆಸ್ತಿಗಳನ್ನು ಬಕ್ಷೀಸ್ ಪತ್ರ ಅಥವಾ ಇತರ ವಿಧಾನಗಳ ಮೂಲಕ ಕ್ರಯ ಪಡೆಯದೆ ವರ್ಗಾಯಿಸಬೇಕಾಗುತ್ತದೆ. ಆಸ್ತಿ ವರ್ಗಾವಣೆ ಆಗುವ ವರೆಗೆ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಮಗ-ಸೊಸೆ, ವರ್ಗಾವಣೆಯ ನಂತರ ಅವರನ್ನು ತಿರಸ್ಕರಿಸಬಹುದು ಅಥವಾ ಹೊರಹಾಕಬಹುದು. ಇಂಥ ಸಾಧ್ಯತೆಗಳನ್ನು ತಪ್ಪಿಸಲು, ವೃದ್ಧಾಪ್ಯದಲ್ಲಿ ತಮ್ಮನ್ನು ನೋಡಿಕೊಳ್ಳಬೇಕು ಅಥವಾ ಜೀವನಾಂಶ ನೀಡಬೇಕೆಂಬ ಶರತ್ತನ್ನು ದಾನಪತ್ರ ಅಥವಾ ಆಸ್ತಿವರ್ಗಾವಣೆ ಪತ್ರದಲ್ಲಿ ನಮೂದಿಸಬೇಕು. ಹಾಗೆ ನಮೂದಿಸಿ ದ್ದಾಗ್ಯೂ ಅವರನ್ನು ಅಂಥ ಆಸ್ತಿ ಪಡೆದ ವ್ಯಕ್ತಿಗಳು ನೋಡಿಕೊಳ್ಳಲು ಅಥವಾ ಜೀವನಾಂಶ ನೀಡಲು ತಪ್ಪಿದರೆ, ಅಂಥ ಆಸ್ತಿ ವರ್ಗಾವಣೆಯನ್ನು ಮೋಸ ಅಥವಾ ಒತ್ತಾಯದಿಂದ ಬರೆಸಿಕೊಳ್ಳ ಲಾಗಿದೆ ಎಂದು ಪರಿಗಣಿಸಿ ಟ್ರಿಬ್ಯೂನಲ್ ಮೂಲಕ ರದ್ದುಪಡಿಸುವ ಅವಕಾಶವಿದೆ (23ನೇ ಕಲಮು).
‘ಅಶ್ವನಿ ಕುಮಾರ ವರ್ಸಸ್ ಭಾರತ ಸರಕಾರ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ‘ವೃದ್ಧಾಪ್ಯ ಎಲ್ಲರನ್ನೂ ಬಾಧಿಸುತ್ತದೆ. ಆದರೆ ಕೆಲವರು ತಮ್ಮ ವೃದ್ಧಾಪ್ಯದಲ್ಲಿ ಅನಾರೋಗ್ಯ, ದೈಹಿಕ ಅಸಾಮರ್ಥ್ಯದಂಥ ಕಾರಣಗಳಿಂದ ಪೂರ್ತಿ ಪರಾವಲಂಬಿಗಳಾಗುತ್ತಾರೆ.
2007ರ ಕಾಯಿದೆಯ ಮುನ್ನುಡಿಯನ್ನು ಗಮನಿಸಿದರೆ ಅದೊಂದು ಸಾಮಾಜಿಕ ಕಲ್ಯಾಣದ ಕಾಯಿದೆಯಾಗಿದ್ದು ಅದನ್ನು ಅನುಷ್ಠಾನ ಮಾಡುವಾಗ ಎಲ್ಲಾ ಸ್ತರದಲ್ಲಿ ಹಿರಿಯ ನಾಗರಿಕರ ಪರ ಉದಾರವಾಗಿ ಪರಿಗಣಿಸುವ ಅವಶ್ಯಕತೆ ಇದೆ’ ಎಂದು ಅವಲೋಕನ ಮಾಡಿದೆ. ತಂದೆ ತಾಯಿ ಯರನ್ನು ಪರಿತ್ಯಜಿಸಿದರೆ ಅಂಥ ಮಕ್ಕಳಿಗೆ ಈ ಕಾಯಿದೆಯ 24ನೇ ಕಲಮಿನ ಅಡಿಯಲ್ಲಿ, ರೂ.5000 ದಂಡ ಮತ್ತು 3 ತಿಂಗಳು ಜೈಲು ಶಿಕ್ಷೆಯಾಗುತ್ತದೆ. ಮೇಂಟೇನೆನ್ಸ್ ಟ್ರಿಬ್ಯೂನಲ್ ನೀಡುವ ಅಂಥ ಆದೇಶಗಳ ಕುರಿತು ತಡೆ ಅಥವಾ ಇಂಜಂಕ್ಷನ್ ನೀಡಲು ಸಿವಿಲ್ ಕೋರ್ಟುಗಳಿಗೆ ಅಧಿಕಾರವಿರುವ ದಿಲ್ಲ.
ಹಿರಿಯ ನಾಗರಿಕರ ಪೋರ್ಟಲ್
ಹಿರಿಯ ನಾಗರಿಕರ ಸಹಾಯಕ್ಕಾಗಿ ಪ್ರತ್ಯೇಕ ಪೋರ್ಟಲ್ ಒಂದನ್ನು ಕೇಂದ್ರ ಸರಕಾರದ ಸಮಾಜ ಕಲ್ಯಾಣ ಇಲಾಖೆ ತೆರೆದಿದ್ದು ಅದರಲ್ಲಿ ವೃದ್ಧಾಶ್ರಮಗಳ ಕುರಿತು ಮಾಹಿತಿ, ಆರೋಗ್ಯ ಸಲಹೆಗಳು, ಅವರಿಗೆ ಉದ್ಯೋಗಾವಕಾಶಗಳು ಮುಂತಾದ ವಿಷಯಗಳ ಮಾಹಿತಿ ಇದೆ. ಹಿರಿಯ ನಾಗರಿಕರಿಗೆ ಗೌರವದಿಂದ ಸ್ಪಂದಿಸಿ ಅಗತ್ಯ ಸಹಾಯ ಮತ್ತು ಬೆಂಬಲ ನೀಡಲು 14567 ಸಂಖ್ಯೆಯ ಉಚಿತ ಹೆಲ್ಪ್‌ಲೈನ್ ಕೂಡಾ ಇರುತ್ತದೆ.
ಹಿಂದೂ ದತ್ತಕ ಮತ್ತು ಪಾಲನಾ ಕಾಯಿದೆ 1956 ( Hindu Adoption and Maintenance Act): ಈ ಕಾಯಿದೆಯ 20 ಮತ್ತು 21ನೇ ಕಲಮಿನ ಅಡಿಯಲ್ಲಿ ಕೂಡಾ ಅಶಕ್ತ ತಾಯಿ ತಂದೆಯರ ಪಾಲನೆ-ಪೋಷಣೆ ಅವರ ಮಕ್ಕಳ ಜವಾಬ್ದಾರಿ ಎಂದು ಸ್ಪಷ್ಟವಾಗಿ ಹೇಳಲಾಗಿದೆ. 23ನೇ ಕಲಮಿನ ಪ್ರಕಾರ, ಪಾಲನೆ ಮಾಡಬೇಕಾಗಿರುವ ತಾಯಿ ತಂದೆಯರ ಸ್ಥಾನಮಾನ, ಅವರ ಸಾಮಾನ್ಯ ಅವಶ್ಯಕತೆ, ಮಕ್ಕಳ ಆರ್ಥಿಕ ಸ್ಥಿತಿಗತಿ ಇವೆಲ್ಲವನ್ನು ಪರಿಗಣಿಸಿ ಕೋರ್ಟು ಜೀವನಾಂಶದ ಆದೇಶ ನೀಡುತ್ತದೆ. ಆದರೆ ಜೀವನಾಂಶ ನೀಡುವ ಪ್ರಶ್ನೆ ಬರುವದು ಅವರನ್ನು ಮಕ್ಕಳು ಒಟ್ಟಿಗೆ ಇಟ್ಟುಕೊಳ್ಳದಿದ್ದಾಗ ಎಂಬುದನ್ನು ಗಮನಿಸಬೇಕು.
HAMA-1956 ಮತ್ತು BNSS-2023 ಕಾಯಿದೆಗಳಡಿಯಲ್ಲಿ ಜೀವನಾಂಶ ಸಿಗುತ್ತದಾದರೂ ಆ ಕಾಯಿದೆಗಳಡಿ ವ್ಯಾಜ್ಯ ನಡೆಸುವದು ವಿಳಂಬವಾಗುತ್ತದೆ ಮತ್ತು ಹೆಚ್ಚಿನ ಖರ್ಚು ಬರುತ್ತದೆ. ಆದರೆ ಹಿರಿಯ ನಾಗರಿಕರ ಪಾಲನೆ ಮತ್ತು ಯೋಗಕ್ಷೇಮ ಕಾಯಿದೆ 2007ರ ಅಡಿಯಲ್ಲಿ ಪ್ರಕರಣ ನಡೆಸಲು ಯಾವದೇ ಕ್ಲಿಷ್ಟ ಕಾಯಿದೆಯ ಅಂಶಗಳಾಗಲೀ ವಕೀಲರ ನೇಮಕವಾಗಲೀ ಇರುವದಿಲ್ಲ. ಕೇವಲ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದರೆ ಶೀಘ್ರ ವಿಚಾರಣೆ ನಡೆಸಿ ಅದೇಶವನ್ನು ನೀಡಲಾಗುತ್ತದೆ.
ಹಿಂದಿನ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳಿಲ್ಲದ ಸಂಬಂಧಿಕರು/ಅನಾಥರನ್ನು ಮನೆಯಲ್ಲಿ ಇಟ್ಟುಕೊಂಡು ಅವರ ಆರೈಕೆ ಮಾಡಿ, ಅವರ ಅಂತ್ಯಸಂಸ್ಕಾರವನ್ನೂ ಪೂರೈಸಿದ ಎಷ್ಟೋ ಘಟನೆಗಳನ್ನು ನೋಡಿದ್ದೇವೆ. ಆದರೆ ಈಗ ವಯಸ್ಸಾದ ತಾಯಿತಂದೆಯರೇ ಮಕ್ಕಳಿಗೆ ಬೇಡವಾಗಿದ್ದಾರೆ. ಅಸಹಾಯಕ ವೃದ್ಧ ತಾಯಿ-ತಂದೆಯರನ್ನು ಆಹಾರ ನೀಡದೇ ಹಿಂಸಿಸುವ, ಪರಿತ್ಯಜಿಸುವ ಅನೇಕ ಘಟನೆಗಳು ನಡೆಯುತ್ತಿವೆ. ಹಿರಿಯ ಜೀವಗಳು ತಮ್ಮ ಜೀವನದ ಅಂತಿಮ ಕಾಲದಲ್ಲಿ ಮಕ್ಕಳಿಂದ ತಿರಸ್ಕೃತರಾಗಿ, ನೋವನ್ನು ಹೇಳಿಕೊಳ್ಳಲಾಗದೆ ಅನಾಥಾಶ್ರಮದಲ್ಲಿ ಬದುಕುವ ಸ್ಥಿತಿ ನಿಜಕ್ಕೂ ಶೋಚನೀಯ. ಜೀವನಾಂಶ ಕೇಳಲು ಕಾಯಿದೆ, ಕೋರ್ಟುಗಳು ಇವೆ. ಆದರೆ ಪ್ರೀತಿ-ಕಾಳಜಿಯ ಕೊರತೆ, ಅನಾದರ, ಅಸಡ್ಡೆ ಕುರಿತಾಗಿ ಕಾಯಿದೆ ಏನನ್ನೂ ಮಾಡಲಾಗದು. ಅಂಥ ಮಕ್ಕಳನ್ನು ಸಮಾಜ ಖಂಡಿಸಬೇಕು.
ಕೆಲ ವರ್ಷಗಳ ಹಿಂದೆ ವೃದ್ಧಾಶ್ರಮವೊಂದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹಿರಿಯರೊಬ್ಬರು ಈ ವೃದ್ಧಾಶ್ರಮ ಖಾಲಿ ಇರಲಿ ಎಂದು ಹಾರೈಸಿದ್ದು ಮಾರ್ಮಿಕವಾಗಿತ್ತು. ತಮ್ಮ ಹಿತರಕ್ಷಣೆಗೆ ಈ ಎಲ್ಲ ಕಾಯಿದೆಗಳಿವೆ ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಸಮಾಜ ಮತ್ತು ಸಂಘಟನೆಗಳು ಅಂಥವರ ನೆರವಿಗೆ ನಿಂತು ಅಂಥ ಕಾಯಿದೆಗಳನ್ವಯ ದೊರಕುವ ಸಹಾಯವನ್ನು ಒದಗಿಸಲು ಕಾರ್ಯತತ್ಪರರಾಗಬೇಕು. ಈ ವಿಷಯದಲ್ಲಿ ಎಲ್ಲರಿಗೆ ತಿಳುವಳಿಕೆ ಕೊಡುವ ಅವಶ್ಯಕತೆ ಯನ್ನು ಒತ್ತಿ ಹೇಳುತ್ತಾ ಈ ಕಾಯಿದೆಗಳನ್ನು ಉಪಯೋಗಿಸುವ ಅವಶ್ಯಕತೆ ಬಾರದಿರಲಿ ಎಂದು ಆಶಿಸೋಣ.