ಲೋಕಮತ
ಕಳೆದ ವರ್ಷ ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಭರ್ಜರಿ ಎನ್ನುವಷ್ಟು ಮಳೆಯಾಗಿತ್ತು. ಆದರೆ ಈ ಬಾರಿ ಮಳೆರಾಯ ಆಗಾಗ ಬಂದು ಹೋಗುವ ಕೆಲಸ ಮಾಡುತ್ತಿದ್ದಾನೆ. ಕಳೆದ ವರ್ಷ ಮೇ ತಿಂಗಳಿನಲ್ಲಿಯೇ ಕಾಲಿಟ್ಟ ವರುಣ ಈ ಬಾರಿ ಈಗ ತಾನೇ ಹೊಸ್ತಿಲು ತುಳಿದಿ ದ್ದಾನೆ.
ಸಣ್ಣಪುಟ್ಟ ಮಳೆಗೂ ನಲುಗುವ ಬೆಂಗಳೂರಿನ ರಸ್ತೆಗಳು ಬಿಟ್ಟರೆ ಬೇರೆಲ್ಲೂ ಸರಿಯಾಗಿ ನೀರು ಹರಿದಿಲ್ಲ. ಕೃಷಿ ಚಟುವಟಿಕೆಗಳು ಇನ್ನಷ್ಟೇ ಆರಂಭವಾಗಬೇಕಿದೆ. ಈ ಮಧ್ಯೆ ಹವಾ ಮಾನ ತಜ್ಞರು ಈ ಬಾರಿ ಮುಂಗಾರು ವಾಡಿಕೆಗಿಂತ ಕಡಿಮೆಯಾಗಿರಲಿದೆ ಎಂದು ಎಚ್ಚರಿಸಿ ದ್ದಾರೆ.
ಮುಂದಿನ ದಿನಗಳಲ್ಲಿ ಎಲ್‌ನಿನೋ ಪ್ರಭಾವದ ಕಾರಣ ಜಾಗತಿಕ ತಾಪಮಾನ ಪ್ರಮಾಣ ಹೆಚ್ಚಾಗಲಿದೆ. ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಮಳೆ ಪರಿಸ್ಥಿತಿ ಏರುಪೇರಾಗ ಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಈ ನಡುವೆ ಜಲಸಂಪನ್ಮೂಲ ಖಾತೆ ಬೇಡ, ಪಡಿತರ ಖಾತೆ ಬೇಡ ಎಂದು ನಮ್ಮ ಮಂತ್ರಿ ಮಹನೀಯರು ಖಾತೆ ಕ್ಯಾತೆಯಲ್ಲಿ ಮುಳುಗಿ ದ್ದಾರೆ.
ನಾವು ಇದನ್ನೇ ಜಾಗತಿಕ ವಿದ್ಯಮಾನವೆಂಬಂತೆ ಪುಳಕಿತರಾ ಗುತ್ತಿದ್ದೇವೆ. ಕರ್ನಾಟಕದ ವಿಷಯಕ್ಕೆ ಬರುವುದಾದರೆ ಕಳೆದ ಒಂದು ದಶಕದಿಂದ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿಲ್ಲ. ಆಗಾಗ ಕಾವೇರಿ ನೀರಿಗಾಗಿ ತಮಿಳುನಾಡು ತಕರಾರು ತೆಗೆದರೂ ಪ್ರಕೃತಿಯ ಕೃಪೆಯಿಂದ 10 ವರ್ಷಗಳಲ್ಲಿ ಎರಡೂ ರಾಜ್ಯಗಳಿಗೆ ನೀರಿನ ಕೊರತೆ ಆಗಿಲ್ಲ.
ಇದನ್ನೂ ಓದಿ: Lokesh Kayarga Column: ಸರಕಾರವನ್ನೇ ಖಾಸಗಿಯವರಿಗೆ ಒಪ್ಪಿಸಿ ಬಿಡಿ !
ತಮಿಳುನಾಡಿಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಬಿಡಬೇಕಿರುವ ವಾರ್ಷಿಕ 177.25 ಟಿಎಂಸಿ ನೀರಿಗಿಂತ ಹೆಚ್ಚು ಪ್ರಮಾಣದ ನೀರು ಹರಿದು ಹೋಗಿದೆ. ಆದರೆ ಈ ಬಾರಿ ಪರಿಸ್ಥಿ ಭಿನ್ನವಾಗಿದೆ. ಕಳೆದ ವರ್ಷ ಇದೇ ಹೊತ್ತಿಗೆ ಕನ್ನಂಬಾಡಿ ಕಟ್ಟೆಯಲ್ಲಿ 100 ಅಡಿಗಿಂತ ಹೆಚ್ಚಿನ ನೀರು ಶೇಖರವಾಗಿತ್ತು. ಈ ಬಾರಿ ನೀರಿನ ಮಟ್ಟ 81 ಅಡಿಗಳಿಗೆ ಕುಸಿದಿದೆ.
ಸಕಾಲಕ್ಕೆ ಮಳೆ ಸುರಿದು ಕೆಆರ್ʼಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ತುಂಬದಿದ್ದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ತಜ್ಞರ ಎಚ್ಚರಿಕೆಯನ್ನು ಗಣನೆಗೆ ತೆಗೆದುಕೊಂಡರೆ ಕಾವೇರಿ ನೀರಿಗಾಗಿ ಎರಡೂ ರಾಜ್ಯಗಳ ನಡುವೆ ಮತ್ತೊಮ್ಮೆ ಕಲಹ ಭುಗಿಲೇಳುವ ಸಾಧ್ಯತೆ ಹೆಚ್ಚಿದೆ.
ಭಾರತೀಯ ಹವಾಮಾನ ಇಲಾಖೆ ಮತ್ತು ವಿಶ್ವ ಹವಾಮಾನ ಸಂಸ್ಥೆ ಬಿಡುಗಡೆ ಮಾಡಿರುವ ವರದಿಗಳು ದೇಶದ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತ ಮತ್ತು ಕರ್ನಾಟಕದ ಪಾಲಿಗೆ ಆತಂಕಕಾರಿಯಾಗಿವೆ. ಪೆಸಿಫಿಕ್ ಮಹಾಸಾಗರದಲ್ಲಿ ತಲ್ಲಣ ಮೂಡಿಸುತ್ತಿರುವ ‘ಎಲ್ ನಿನೋ’ ವಿದ್ಯಮಾನವು ಈ ಬಾರಿ ಭಾರತದ ಮುಂಗಾರನ್ನು ನುಂಗಿ ಹಾಕುವ ಮುನ್ಸೂಚನೆ ನೀಡಿದೆ. ಈ ವರ್ಷ ರಾಷ್ಟ್ರೀಯ ಸರಾಸರಿ ಮಳೆಯು
ದೀರ್ಘಾವಧಿಯ ಸರಾಸರಿಗಿಂತ ಶೇಕಡಾ 92ರಷ್ಟು ಮಾತ್ರ ಇರಲಿದ್ದು, ಇದು ಕಳೆದ ಹನ್ನೊಂದು ವರ್ಷಗಳಲ್ಲಿಯೇ ಅತ್ಯಂತ ದುರ್ಬಲ ಮುಂಗಾರು ಆಗುವ ಭೀತಿ ಮೂಡಿಸಿದೆ. ಜಾಗತಿಕ ತಾಪಮಾನ ಏರಿಕೆಯ ಈ ಕೆಟ್ಟ ಹೊಡೆತವು ಕೇವಲ ಕೃಷಿ ಕ್ಷೇತ್ರಕ್ಕೆ ಮಾತ್ರವಲ್ಲದೆ, ಕುಡಿಯುವ ನೀರು, ಅಂತರರಾಜ್ಯ ಸಂಬಂಧಗಳು ಮತ್ತು ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಮೇಲೂ ಗಂಭೀರ ಪ್ರಭಾವ ಬೀರಲಿದೆ.
ಮುಂಗಾರಿನ ಮೇಲೆ ಮುಸುಕು
ಬದಲಾಗುತ್ತಿರುವ ಜಾಗತಿಕ ಹವಾಮಾನ ವೈಪರೀತ್ಯಕ್ಕೆ ‘ಎಲ್ ನಿನೋ’ ಪ್ರಮುಖ ಕಾರಣ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಎಲ್ ನಿನೋ ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ಸಹಜ ಸ್ಥಿತಿಗಿಂತ 0.5 ರಿಂದ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಒಂದು ನೈಸರ್ಗಿಕ ಹವಾಮಾನ ವಿದ್ಯಮಾನ. ಆದರೆ ಸಮುದ್ರದ ನೀರು ಹೀಗೆ ಅಸಹಜವಾಗಿ ಕಾಯುವುದರಿಂದ ವಾತಾವರಣಕ್ಕೆ ಅಗಾಧ ಪ್ರಮಾಣದ ಬೆಚ್ಚಗಿನ ಗಾಳಿ ಬಿಡುಗಡೆಯಾಗುತ್ತದೆ. ಇದು ಭಾರತದ ಕಡೆಗೆ ತೇವಾಂಶವನ್ನು ಹೊತ್ತು ತರುವ ಮಾನ್ಸೂನ್ ಮಾರುತಗಳನ್ನು ದುರ್ಬಲಗೊಳಿಸುತ್ತದೆ. ಸರಳವಾಗಿ ಹೇಳುವುದಾದರೆ, ಎಲ್ ನಿನೋ ದೇಶದ ಮುಂಗಾರು ಮಾರುತಗಳನ್ನು ದೂರ ಮಾಡುತ್ತದೆ.
ಸಾಮಾನ್ಯವಾಗಿ ಭಾರತದಲ್ಲಿ 96 ರಿಂದ 104 ಸೆಂ.ಮೀ. ಮಳೆಯ ಪ್ರಮಾಣವನ್ನು ಸಾಮಾನ್ಯ ಮಳೆ ಎಂದು ಪರಿಗಣಿಸಿದರೆ, ಅದು ಶೇಕಡಾ 90ಕ್ಕೆ ಕುಸಿದಾಗ ಅಧಿಕೃತ ಬರಗಾಲದ ಮುನ್ಸೂಚನೆ ಎನ್ನಲಾಗುತ್ತದೆ. ಈ ಬಾರಿ ಜೂನ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಎಲ್ ನಿನೋ ಪ್ರಭಾವ ಶೇಕಡಾ 80ರಷ್ಟು ತೀವ್ರವಾಗಿರಲಿದ್ದು, ಹಗಲು ಮತ್ತು ರಾತ್ರಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ.
ಪರಿಣಾಮವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ದೇಶದ ಬಹುತೇಕ ಭಾಗ ಗಳಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅಂದಾಜಿಸಲಾಗಿದೆ. ದೇಶಕ್ಕೆಲ್ಲ ಅನ್ನ ನೀಡುವ ದಕ್ಷಿಣ ಭಾರತದ ಕೃಷಿ ಭೂಮಿ ಈ ಬಾರಿ ಒಣಗುವ ಲಕ್ಷಣಗಳು ಕಾಣಿಸುತ್ತಿವೆ.
ಕೃಷಿ ಬಿಕ್ಕಟ್ಟು ದೇಶಕ್ಕೆ ಇಕ್ಕಟ್ಟು
ಭಾರತದ ಒಟ್ಟು ಜಿಡಿಪಿಯಲ್ಲಿ ಕೃಷಿ ರಂಗದ ಪಾಲು ಇಂದಿಗೂ ಶೇ.15 ರಷ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಗಾರು ಕೈಕೊಟ್ಟರೆ ಅದರ ನೇರ ಏಟು ಗ್ರಾಮೀಣ ಆರ್ಥಿಕತೆಗೆ ಬೀಳು ತ್ತದೆ. ಪ್ರಸ್ತುತ ಜಾಗತಿಕ ರಾಜಕೀಯ ವಿದ್ಯಮಾನಗಳೂ ಭಾರತದ ಆರ್ಥಿಕತೆಗೆ ಪೂರಕ ವಾಗಿಲ್ಲ. ಕೊಲ್ಲಿ ಯುದ್ಧದ ಪರಿಣಾಮ ಕಚ್ಚಾತೈಲ, ರಸಗೊಬ್ಬರ ಮತ್ತು ಇತರ ಪೆಟ್ರೋಲಿ ಯಂ ಉಪ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. ದೇಶದ ಜನಸಾಮಾನ್ಯರು ಹಣದುಬ್ಬರ ಮತ್ತು ವಿಪರೀತ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದರ ಜೊತೆಗೆ ಈಗ ಮುಂಗಾರು ಕೊರತೆಯೂ ಸೇರಿದರೆ, ಕೃಷಿ ಉತ್ಪಾದನೆ ಕುಂಠಿತಗೊಂಡು ಆಹಾರ ಧಾನ್ಯಗಳು ಸೇರಿದಂತೆ ಜೀವನಾವಶ್ಯಕ ಪದಾರ್ಥಗಳ ಬೆಲೆ ಇನ್ನಷ್ಟು ದುಬಾರಿಯಾಗಲಿದೆ.
ಕೃಷಿ ವಲಯ ಬಿಕ್ಕಟ್ಟಿನ ಸುಳಿಗೆ ಸಿಲುಕಿದರೆ ದೇಶದ ಒಟ್ಟಾರೆ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದು ಖಚಿತ. ಪ್ರಸ್ತುತ ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ಸಂಪದ್ಭರಿತ ಹಾಗೂ ಪ್ರಭಾವಿ ಖಾತೆಗಳಿಗಾಗಿ ಭಾರೀ ಪೈಪೋಟಿ ನಡೆದಿದೆಯೇ ವಿನಾ, ರೈತರ ಬದುಕು ಬವಣೆಗಳಿಗೆ ಸಂಬಂಧಿಸಿದ ಕೃಷಿ ಸಚಿವ ಖಾತೆಗಾಗಿ ಯಾವ ಮಂತ್ರಿಯಿಂದಲೂ ಬೇಡಿಕೆ ಬಂದಿಲ್ಲ.
ರಾಜ್ಯದಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಕೆಲವು ಭಾಗಗಳಲ್ಲಿ ಚೆನ್ನಾಗಿ ಆಗಿರುವು ದರಿಂದ ರೈತರು ಭೂಮಿ ಹಸನುಗೊಳಿಸಿ ಬಿತ್ತನೆಗೆ ಸಜ್ಜಾಗಿದ್ದಾರೆ. ಎಡೆ ಬಿತ್ತನೆ ಬೀಜಗಳಿಗೆ ಭಾರೀ ಬೇಡಿಕೆ ಕೇಳಿ ಬರುತ್ತಿದೆ. ದುರದೃಷ್ಟವಶಾತ್, ಈ ಬೇಡಿಕೆಯನ್ನು ಸಕಾಲದಲ್ಲಿ ಪೂರೈಸಲು ನಮ್ಮ ಕೃಷಿ ಇಲಾಖೆ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಇದು ಹೊಸದೇನಲ್ಲ; ಕಳೆದ ಐದಾರು ವರ್ಷಗಳಿಂದ ಹಾವೇರಿ ಸೇರಿದಂತೆ ರಾಜ್ಯದ ವಿವಿಧೆಡೆ ಬಿತ್ತನೆ ಬೀಜ ಮತ್ತು ರಸಗೊಬ್ಬರಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗುತ್ತಿರುವ ಬಗ್ಗೆ ರೈತರಿಂದ ದೂರುಗಳು ಬರುತ್ತಿದ್ದರೂ ಅದು ಅರಣ್ಯ ರೋದನವಾಗಿದೆ.
ಅನಗತ್ಯ ಜಲ ಪೋಲು
ನಮ್ಮ ಇಂದಿನ ಜಲ ಬಿಕ್ಕಟ್ಟಿಗೆ ಕೇವಲ ಪ್ರಕೃತಿಯನ್ನು ದೂಷಿಸಿದರೆ ಸಾಲದು, ನಮ್ಮ ತಪ್ಪುಗಳೂ ಅಷ್ಟೇ ದೊಡ್ಡದಾಗಿವೆ. ಮೇಲ್ಮೈ ಜಲಮೂಲಗಳಾದ ನದಿ ಮತ್ತು ಕೆರೆಗಳು ಒಣಗುತ್ತಿದ್ದಂತೆ ನಾವು ಭೂಮಿಯ ಆಳಕ್ಕೆ ಕೈಹಾಕುತ್ತಿದ್ದೇವೆ. ಆದರೆ, ಹಳ್ಳಿಗಳಲ್ಲೂ, ನಗರ ಗಳಲ್ಲೂ ಮಳೆ ನೀರು ಒಂದಿಷ್ಟೂ ನೆಲದ ಒಡಲು ಸೇರದ ಕಾರಣ ಅಂತರ್ಜಲ ಮಟ್ಟವು ದಿನದಿಂದ ದಿನಕ್ಕೆ ಗಣನೀಯವಾಗಿ ಕುಸಿಯುತ್ತಿದೆ. ಬೋರ್‌ವೆಲ್‌ಗಳು ಒಣಗುತ್ತಿವೆ. ಕುಡಿಯುವ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗುತ್ತಿದೆ. ಒಂದು ಕಡೆ ಅಂತರ್ಜಲವನ್ನು ಅತಿಯಾಗಿ ಲೂಟಿ ಮಾಡಲಾಗುತ್ತಿದೆ. ಮತ್ತೊಂದು ಕಡೆ ಅದನ್ನು ಮರುಪೂರಣ ಮಾಡುವ ಅಥವಾ ನೀರಿಂಗಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನಗಳು ಸಾರ್ವಜನಿಕ ಮತ್ತು ಆಡಳಿತಾತ್ಮಕ ಮಟ್ಟದಲ್ಲಿ ನಡೆಯುತ್ತಿಲ್ಲ.
ವರ್ಷದಿಂದ ವರ್ಷಕ್ಕೆ ಹೆಚ್ಚುವರಿ ಟಿಎಂಸಿ ನೀರು ಬೇಡುವ ಬಂಗಳೂರಿನಂತಹ ಪ್ರಮುಖ ನಗರಗಳು ಇಂದು ಕಾಂಕ್ರೀಟ್ ಕಾಡುಗಳಾಗಿ ಮಾರ್ಪಟ್ಟಿವೆ. ಸಣ್ಣಪುಟ್ಟ ಮಳೆಯಲ್ಲೂ ಬೆಂಗಳೂರಿನ ರಸ್ತೆಗಳು ಮುಳುಗುತ್ತಿವೆ ಹೊರತು ಹನಿ ನೀರು ಕೂಡ ನೆಲದಾಳವನ್ನು ಸೇರುತ್ತಿಲ್ಲ. ಮಲೆನಾಡು ಹಾಸನ ಜಿಲ್ಲೆಯಲ್ಲಿ ಬೀಳುವಷ್ಟೇ ಪ್ರಮಾಣದ ಮಳೆ ಬೆಂಗಳೂರಿ ನಲ್ಲಿ ಬೀಳುತ್ತದೆ. ಆದರೆ ನಗರದ ಇಂಚಿಂಚು ಭೂಮಿಯನ್ನೂ ಕಾಂಕ್ರೀಟ್'ನಿಂದ ಮುಚ್ಚಿರುವುದರಿಂದ ಮಳೆ ನೀರು ನೆಲದ ಒಡಲು ಸೇರಲು ದಾರಿಯೇ ಇಲ್ಲದಂತಾಗಿದೆ. ನಗರ ಪ್ರದೇಶಗಳಲ್ಲಿ ಬೀಳುವ ಪ್ರತಿಯೊಂದು ಹನಿಯೂ ಚರಂಡಿಗಳಲ್ಲಿ ಹರಿದು ಪೋಲಾ ಗುತ್ತಿದೆ. ಮಳೆ ನೀರನ್ನು ಭೂಮಿಯೊಳಗೆ ಇಂಗಿಸದೆ ಚರಂಡಿಗಳಲ್ಲಿ ಹರಿ ಬಿಡುವ ನಾವು ಮತ್ತದೇ ಮಳೆಗಾಗಿ ಕಾತರಿಸುತ್ತೇವೆ. ಪ್ರಾರ್ಥಿಸುತ್ತೇವೆ.
ಇಸ್ರೇಲ್ ಜಲ ನಿರ್ವಹಣೆ ಮಾದರಿ
ಅರಬ್ ಜಗತ್ತಿನ 60ಕ್ಕೂ ಹೆಚ್ಚು ಶತ್ರು ದೇಶಗಳನ್ನು ಎದುರಿಸಿ ನಿಂತ ಇಸ್ರೇಲ್ ಭಾರತದಲ್ಲಿ ಹಲವರಿಗೆ ಪ್ರಿಯ ದೇಶ. ಆದರೆ ನಿಜವಾಗಿಯೂ ನೀರಿನ ಸದ್ಬಳಕೆ ಮತ್ತು ಕಟ್ಟುನಿಟ್ಟಾದ ಜಲ ನಿರ್ವಹಣೆಯ ವಿಷಯದಲ್ಲಿ ನಾವು ಇಸ್ರೇಲ್‌ನಂತಹ ದೇಶವನ್ನು ಅನುಸರಿಸ ಬೇಕಾಗಿದೆ. ತೀರಾ ಕಡಿಮೆ ಮಳೆಯಾಗುವ ಮರಳುಗಾಡಿನ ಪರಿಸರದಲ್ಲೂ ಇಸ್ರೇಲ್ ಅತ್ಯಾಧುನಿಕ ತಂತ್ರಜ್ಞಾನ, ನೀರಿನ ಮರುಬಳಕೆ ಮತ್ತು ಹನಿ ನೀರಾವರಿ ಪದ್ಧತಿಯ ಮೂಲಕ ನೀರಿನ ಸ್ವಾವಲಂಬನೆ ಸಾಧಿಸಿದೆ. ನಮಗೆ ವಾರ್ಷಿಕ ನೂರಾರು ಟಿಎಂಸಿ ನೀರು ಸಿಕ್ಕರೂ ಅದನ್ನು ನಿರ್ವಹಿಸಲಾಗದೆ ಪೋಲು ಮಾಡುತ್ತಿದ್ದೇವೆ. ಇಸ್ರೇಲ್‌ನ ಜಲ ಶಿಸ್ತನ್ನು ನಾವು ಅಳವಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ.
ನೀರು ಕೇವಲ ಒಂದು ಸಂಪನ್ಮೂಲವಲ್ಲ, ಅದು ಮಾನವನ ಅಸ್ತಿತ್ವದ ಮೂಲಾಧಾರ. ಪ್ರಕೃತಿಯು ನಮಗೆ ‘ಎಲ್ ನಿನೋ’ ಮತ್ತು ಮುಂಗಾರು ಕೊರತೆಯ ರೂಪದಲ್ಲಿ ಒಂದು ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ. ಈ ಸವಾಲನ್ನು ನಾವು ನಿರ್ಲಕ್ಷಿಸಿದರೆ, ಅದರ ಬೆಲೆ ಯನ್ನು ನಮ್ಮ ಇಡೀ ದೇಶ ಮತ್ತು ರೈತಾಪಿ ವರ್ಗ ತೆರಬೇಕಾಗುತ್ತದೆ. ಸರಕಾರಗಳು ಉಪದೇಶಗಳನ್ನು ಬದಿಗಿಟ್ಟು, ಮಣ್ಣಿನ ಮಕ್ಕಳ ಮತ್ತು ನಾಗರಿಕರ ಜಲ ಭದ್ರತೆಗೆ ತಕ್ಷಣದ ಕಾರ್ಯ ಯೋಜನೆಗಳನ್ನು ರೂಪಿಸಬೇಕಾಗಿದೆ.
ನಾಗರಿಕರೂ ಸಹ ಹನಿ ಹನಿ ನೀರನ್ನೂ ಮಿತವ್ಯಯದಿಂದ ಬಳಸಿ, ಮಳೆ ನೀರನ್ನು ಮಣ್ಣಿನ ಒಡಲಿಗೆ ಇಂಗಿಸುವ ಸಂಕಲ್ಪ ಮಾಡಬೇಕಿದೆ. ಪ್ರಕೃತಿಯ ಮುನಿಸನ್ನು ಪ್ರಕೃತಿ ಮೇಲಿನ ಒಲವಿನಿಂದಲಷ್ಟೇ ಎದುರಿಸಲು ಸಾಧ್ಯ.