ಶಿಶಿರಕಾಲ
ತಲೆ-ಹರಟೆ - 3
ಇತ್ತೀಚೆಗೆ ನಾನು ಕೆಲಸ ಮಾಡುವ ಕಂಪನಿಯ ಗ್ರಾಹಕ ಕಂಪನಿಯಲ್ಲೊಂದು ವ್ಯವಹಾರಕ್ಕೆೆ ಸಂಬಂಧಿಸಿದ ಮೀಟಿಂಗ್ ಇತ್ತು, ಹೋಗಿದ್ದೆ. ಸೋಮವಾರ ಬೆಳಿಗ್ಗೆ ಮೀಟಿಂಗ್. ಆ ಕಂಪನಿಯ ಮೇಲಧಿಕಾರಿ, ಬೆಳಿಗ್ಗೆ ಎಂಟೂವರೆಗೆಲ್ಲ ಬಂದುಬಿಡಿ ಎಂದಿದ್ದರು. ಆದರೆ ನಾನು ಆ ದಿನ ಹೇಳಿದ್ದಕ್ಕಿಂತ ಅರ್ಧ ಗಂಟೆ ಮೊದಲು ತಲುಪಿದ್ದೆ. ಅವರ ಆಫೀಸಿನ ಒಳಹೋಗುತ್ತೇನೆ, ಅಲ್ಲೊಂದು ಆಶ್ಚರ್ಯ!
ಇಪ್ಪತ್ತೈದು ಮಂದಿ ಕುರ್ಚಿಯ ಮೇಲೆ ಕಣ್ಣು ಮುಚ್ಚಿ ಕೂತಿದ್ದರು. ಗೋಡೆಯ ಮೇಲೆ ದಪ್ಪಾಕ್ಷರದಲ್ಲಿ ಒಂದು ಬೋರ್ಡು- *‘Mindful Monday’. ಒಳಗೆ ಮಂದ ಬೆಳಕು, ಕೊಳಲಿನ ಸಂಗೀತ, ಮೂಲೆಯಲ್ಲೊಂದು ಹಿತ್ತಾಳೆಯ ಗಂಟೆ- ಗಾಂಗ್. ಯೋಗ ಇನ್‌ಸ್ಟ್ರಕ್ಟರ್ ಬ್ರಾಡ್, ತುಪ್ಪದ ನುಣುಪಿನ ಧ್ವನಿಯಲ್ಲಿ ನಿಮ್ಮ ಯೋಚನೆಗಳ ಬಗ್ಗೆೆ ಗಮನಿಸಬೇಡಿ, ವರ್ತಮಾನಕ್ಕೆ ಬನ್ನಿ.. just be present.. ಎನ್ನುತ್ತಿದ್ದ. ಅವನು ಪ್ರತಿ ಸೋಮವಾರ ಬಂದು ಅವರಿಗೆಲ್ಲ ಧ್ಯಾನ ಮಾಡಿಸುವುದಂತೆ. ಇದರಿಂದ ಕಂಪನಿಯ ಉತ್ಪಾದಕತೆ ಹೆಚ್ಚಿದೆ ಎಂದು ಅಲ್ಲಿನ ಮ್ಯಾನೇಜರ್ ಡೇನಿಯಲ್ ಹೆಮ್ಮೆಯಿಂದ ಹೇಳಿದ. ಭಾಗವಹಿಸು ವವರಿಗೆಲ್ಲ ಕಂಪನಿಯ ಲೋಗೋ, ಬುದ್ಧನ ಮುಖವಿರುವ ನೀರಿನ ಬಾಟಲಿ, ಧ್ಯಾನದ ಆ್ಯಪ್‌ನ ವಾರ್ಷಿಕ ಸಬ್‌ಸ್ಕ್ರಿಪ್ಷನ್.
ಇದಾದ ಸ್ವಲ್ಪ ಹೊತ್ತಿನ ನಂತರ ಸಿಬ್ಬಂದಿಯೆಲ್ಲ ನಮ್ಮ ಮೀಟಿಂಗ್‌ಗೆ ಬಂದು ಕೂತರು. ಆದರೆ ಒಬ್ಬೊಬ್ಬರ ಗಮನ ಒಂದೊಂದು ಕಡೆ, ಇಬ್ಬರು ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿದ್ದರು, ಇನ್ನು ನಾಲ್ಕು ಮಂದಿ ತಮ್ಮ ಇಮೇಲ್ ಓದುತ್ತಿದ್ದರು. ಬಹುತೇಕ ಒಬ್ಬೊಬ್ಬರು, ಒಂದೊಂದು ಲೋಕದಲ್ಲಿದ್ದರೇ ವಿನಾ ಮ್ಯಾನೇಜರ್ ಡೇನಿಯಲ್‌ನ ಮಾತನ್ನು ಒಬ್ಬರೂ ಕೇಳಿಸಿಕೊಳ್ಳುತ್ತಿರಲಿಲ್ಲ !
ಇದನ್ನೂ ಓದಿ: Shishir Hegde Column: ತಲೆಯೊಳಗೊಬ್ಬ ನಿತ್ಯ ಜ್ಯೋತಿಷಿಯೂ ಇದ್ದಾನಲ್ಲಾ !
ಇದನ್ನೆಲ್ಲ ನೋಡುತ್ತಿದ್ದ ನನಗೆ ಒಮ್ಮೆಲೇ ನೆನಪಾದದ್ದು ನಮ್ಮೂರಿನ ಮಾದೇವಜ್ಜಿ. ಮಾದೇವಜ್ಜಿಯ ಅಸಲಿ ಹೆಸರು ಮಹಾದೇವಿ. ಅವಳಿಗೊಂದು ಅಭ್ಯಾಸವಿತ್ತು. ಪ್ರತೀ ದಿನ ಬೆಳಿಗ್ಗೆ ಎದ್ದು, ದೇವರ ಪೂಜೆಗೆ ಹೂವನ್ನು ಆಯ್ದ ನಂತರ ಜಗಲಿಯ ಮೇಲೆ ಸುಮಾರು ಹೊತ್ತು ಕಣ್ಣುಮುಚ್ಚಿ ಕೂರುತ್ತಿದ್ದಳು. ‘ಏನಜ್ಜಿ, ಏನ್ ಮಾಡ್ತಿದೀಯಾ?’ ಎಂದರೆ ‘ಏನಿಲ್ಲ’ ಎನ್ನುತ್ತಿದ್ದಳು. ಆ್ಯಪ್ ಇಲ್ಲ, ಗಾಂಗ್ ಇಲ್ಲ, ಇನ್‌ಸ್ಟ್ರಕ್ಟರ್ ಬ್ರಾಡ್ ಇಲ್ಲ, ಮುನ್ನೂರು ಡಾಲರ್ ಅಂತೂ ಮೊದಲೇ ಇಲ್ಲ. ಆಕೆ ಅದನ್ನು ‘ಮೈಂಡ್‌ಫುಲ್‌ನೆಸ್’ ಎಂದು ಕರೆದಿರ ಲಿಲ್ಲ. ಬಹುಶಃ ‘ಧ್ಯಾನ’ ಎಂದೂ ಕರೆಯುತ್ತಿರಲಿಲ್ಲ. ಅದು ಆಕೆಗೆ ಬೆಳಗಿನ ಚಹಾದಷ್ಟೇ ಸಹಜವಾದ ಸಂಗತಿಯಾಗಿತ್ತು. ಮುಂಜಾನೆ, ಮುಸ್ಸಂಜೆ ಸುಮ್ಮನೆ ಒಂದಿಷ್ಟು ಹೊತ್ತು ಕೂತು ಭಗವಂತನ ಸ್ಮರಣೆ ಮಾಡಬೇಕು ಎನ್ನುತ್ತಿದ್ದರು! ಅವರನ್ನು ಜಾಸ್ತಿ ಕೆದಕಿ ಕೇಳಿದರೆ- ‘ಮಗ, ತಲೆ ರಕ್ತಬೀಜಾಸುರ’ ಎನ್ನುತ್ತಿದ್ದರು !
ಕಳೆದೆರಡು ವಾರ ನಮ್ಮ ತಲೆಯೊಳಗಿನ ಇಬ್ಬರು ಖಾಯಂ ನಿವಾಸಿಗಳ ಪರಿಚಯ ಮಾಡಿ ಕೊಂಡಿದ್ದೇವಲ್ಲ - ಒಬ್ಬ ಹಳೆಯದನ್ನು ತನಗೆ ಬೇಕಾದಂತೆ ತಿರುಚುವ ವಿಚಿತ್ರ ಇತಿಹಾಸ ಕಾರ, ಇನ್ನೊಬ್ಬ ಅಸಾಮಿ ಮುಂದಿನದನ್ನು ಬೇಕಾಬಿಟ್ಟಿ ಊಹಿಸುವ ಜ್ಯೋತಿಷಿ. ಹೌದು, ಇವರಿಬ್ಬರ ಬಾಯಿ ಒಂದು ಕ್ಷಣವೂ ನಿಲ್ಲುವುದಿಲ್ಲ. ಇಡೀ ಬದುಕನ್ನು ನಾವು ಇವರಿಬ್ಬರ ಗಲಾಟೆಯ ನಡುವೆಯೇ ಕಳೆಯುತ್ತೇವೆ. ಇವರಿಬ್ಬರು ಆಡಿಸಿದಂತೆ ಆಡುತ್ತೇವೆ. ಗೊತ್ತಿಲ್ಲದೆ ತಾಳ ತಪ್ಪುತ್ತೇವೆ. ಹಾಗಾದರೆ ಈಗ ಇವರಿಬ್ಬರ ಕಿತಾಪತಿಯನ್ನು ನಿಯಂತ್ರಿಸಲು ಧ್ಯಾನ ದಿಂದ ಸಾಧ್ಯವೇ?
ನಮ್ಮೆಲ್ಲರ ಮೆದುಳು ನಾವು ಊಹಿಸುವುದಕ್ಕಿಂತ ಲಕ್ಷಪಾಲು ಸಂಕೀರ್ಣ ಎನ್ನುವುದು ಎಲ್ಲರಿಗೂ ಗೊತ್ತು. ಮೆದುಳಿನಲ್ಲಿ ಸರಾಸರಿ 86 ಬಿಲಿಯನ್ (8,600 ಕೋಟಿ) ನ್ಯೂರಾನ್‌ಗಳು ಪರಸ್ಪರ ಸಂವಹಿಸುತ್ತವೆ. ಒಂದೇ ನ್ಯೂರಾನ್ ಸಾವಿರಾರು ನ್ಯೂರಾನ್ ಜೊತೆ ಏಕಕಾಲದಲ್ಲಿ ಸಂವಹಿಸಬಲ್ಲದು. ಆ ಸಂವಹನವನ್ನು synapses ಎನ್ನುವುದು. ಲೆಕ್ಕದಂತೆ ಮೆದುಳಿನಲ್ಲಿ ಈ ರೀತಿಯ ಒಂದರಿಂದ ಐದು ಲಕ್ಷ ಕೋಟಿ ರೀತಿಯ ಸಂವಹನ ನಡೆಯುತ್ತಿರುತ್ತದೆ. ಮೆದುಳು ಈ ಪ್ರಮಾಣದ ವ್ಯವಹಾರ ಮಾಡಿದರಷ್ಟೇ ಮನುಷ್ಯನೆಂಬ ಜಗತ್ತಿನ ಅತ್ಯಂತ ಸಂಕೀರ್ಣ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವುದು. ಆದರೆ ಇದಕ್ಕೆಲ್ಲ ಇಂಧನ ಬೇಕು. ನಿಮಗೆ ಗೊತ್ತಿರಬಹುದು, ಮೆದುಳಿನ ಗಾತ್ರ ದೇಹದ 2%. ಆದರೆ ದೇಹದ 20% ಶಕ್ತಿ ವ್ಯಯಿಸುವುದು ಮೆದುಳು. ಸುಮ್ಮನೆ ಬಿಟ್ಟಿದ್ದರೆ ಮೆದುಳಿಗೆ ಅರ್ಧಕ್ಕರ್ಧ ಇಂಧನ ಬೇಕಾಗುತ್ತಿತ್ತೇನೋ, ಆದರೆ ವಿಕಸನದಲ್ಲೊಂದು ಚಮತ್ಕಾರ ನಡೆದಿದೆ. ಏನೆಂದರೆ ಈ ಮೆದುಳಿನ ನ್ಯೂರಾನ್ ಸಂಪರ್ಕಗಳು ಪ್ರತಿ ಕ್ಷಣವೂ ಬದಲಾಗುವುದಿಲ್ಲ. ಬದಲಿಗೆ, ಕೆಲವೊಂದು ಸಂಪರ್ಕಗಳು ಖಾಯಂ ಹಾಗೆಯೇ ಗಟ್ಟಿಯಾಗಿ ಇರುತ್ತವೆ. ಅದನ್ನು Default Mode Network ಎಂದು ಕರೆಯುತ್ತಾರೆ. ಅದುವೇ ನಮ್ಮ ಕ್ರಿಯೆ - ಪ್ರತಿಕ್ರಿಯೆಗಳನ್ನು ನಿರ್ಧರಿಸುತ್ತಿರುತ್ತದೆ. ಅವಮಾನವಾದರೆ ತಕ್ಷಣ ಸಿಟ್ಟಾಗುವುದಕ್ಕೆ ನಾವು ಜಾಸ್ತಿ ಯೋಚಿಸ ಬೇಕಿಲ್ಲವಲ್ಲ.
‘ಡಿಫಾಲ್ಟ್ ಮೋಡ್ ನೆಟ್ವರ್ಕ್’ನಿಂದಾಗಿ ನಮಗೆ ಸಿಟ್ಟನ್ನು ಮತ್ತೆ ಆಹ್ವಾನಿಸಿಕೊಳ್ಳ ಬೇಕಾಗಿಲ್ಲ, ಸಹಜವಾಗಿ ಬಂದುಬಿಡುತ್ತದೆ. ಅದೇ ರೀತಿ ಉಳಿದ ಭಾವನೆಗಳು ಕೂಡ. ಅಲ್ಲಿಯೇ ನಮ್ಮ ಜ್ಯೋತಿಷಿ, ಇತಿಹಾಸಕಾರ ಎಲ್ಲರೂ ಇರುವುದು. ಇವರಿಬ್ಬರು ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಬಹಳ ಮುಖ್ಯ.
ಅಷ್ಟಕ್ಕೂ ಧ್ಯಾನ ಎಂದರೆ ಏನು? ಸುಮ್ಮನೆ ಒಂದಿಷ್ಟು ಹೊತ್ತು ಕುಳಿತುಕೊಳ್ಳುವುದೇ? ಪತಂಜಲಿಯ ಪ್ರಕಾರ ಯೋಗ, ಚಿತ್ತ ವೃತ್ತಿ ನಿರೋಧ. ಮೆದುಳಿನ, ಮನಸ್ಸಿನ ವೃತ್ತಿ ಗುಣವನ್ನು ನಿಲ್ಲಿಸಲು ಪ್ರಯತ್ನಿಸುವುದೇ? ತಲೆಯೊಳಗಿನ ತಲೆಹರಟೆಗಳಿಬ್ಬರ ಬಾಯಿ ಮುಚ್ಚಿಸುವುದೇ? ತಲೆ ಖಾಲಿ ಮಾಡಿಕೊಳ್ಳುವುದೇ? ಅಥವಾ ಇದು ಜಗತ್ತಿನಿಂದ ಸ್ವಲ್ಪ ಹೊತ್ತು ಶಾಂತವಾಗಿರುವ ತಾತ್ಕಾಲಿಕ ಪಾರುಮಾರ್ಗವೇ? ಇಲ್ಲಿಯೇ ಧ್ಯಾನವನ್ನು ಏನೆಂದು ಅರ್ಥಮಾಡಿಕೊಳ್ಳುವಲ್ಲಿಯೇ ಬಹುತೇಕರು ಎಡವಿಬಿಡುತ್ತಾರೆ. ಧ್ಯಾನ ಎಂದರೆ ಅದು ಯಾವುದೂ ಅಲ್ಲ. ಧ್ಯಾನ ಅಸಲಿಗೆ ಮೊದಲ ಹಂತದಲ್ಲಿ ಒಂದು ಮಾನಸಿಕ ಕಸರತ್ತು. ದೈಹಿಕ ಕಸರತ್ತು, ವ್ಯಾಯಾಮ ಎಂದರೇನು? ಜಿಮ್‌ಗೆ ಹೋಗಿ ಭಾರ ಎತ್ತುವುದೇ - ಇಲ್ಲ ಎನ್ನುವಂತಿಲ್ಲ. ಅಲ್ಲಿ ಮಾಡುವುದು ಅದನ್ನೇ. ಆದರೆ ವ್ಯಾಯಾಮವೆಂದರೆ ಭಾರವನ್ನು ಬೇಕಾಬಿಟ್ಟಿ, ಅಡಿಕೆ ಚೀಲ ಎತ್ತಿದಂತೆ ಎತ್ತುವುದಲ್ಲವಲ್ಲ. ಅದಕ್ಕೊಂದು ರೀತಿ-ನೀತಿಯಿದೆ. ಬೇಕಾಬಿಟ್ಟಿ ಭಾರ ಎತ್ತಿದರೆ ಬಲಗಡೆ ಹೃತಿಕ್ ರೋಷನ್, ಎಡಗಡೆ ದೊಡ್ಡಣ್ಣ ಆಗಿಬಿಡಬಹುದು! ಅಂತೆಯೇ ಧ್ಯಾನ ಕೂಡ.
ಮೇಲ್ನೋಟಕ್ಕೆ ಧ್ಯಾನವೆಂದರೆ ತಲೆಹರಟೆ ಕಡಿಮೆ ಮಾಡಿಕೊಳ್ಳುವ ಕೆಲಸ. ಆದರೆ ಇದೊಂದು ಮಾನಸಿಕ ಕಸರತ್ತು. ಮೊದಲು ಕಲಿಯಬೇಕು, ಸೈಕಲ್ ಹೊಡೆಯಲು ಕಲಿತಂತೆ. ಬಿದ್ದು, ಎದ್ದು, ಒಮ್ಮೆ ಬ್ಯಾಲೆನ್ಸ್ ಕಲಿತಂತೆ. ಆಗ ತಲೆಯೊಳಗಿನ ಜ್ಯೋತಿಷಿ ಮತ್ತು ಇತಿಹಾಸಕಾರನ ಹೊರತಾಗಿ ಮೂರನೆಯ ವ್ಯಕ್ತಿ ಇರುವುದು ಅನುಭವಕ್ಕೆ ಬರುತ್ತದೆ. ಇದುವೇ ವಿಜ್ಞಾನ ಹೇಳುವ Metacognition - ಸಾಕ್ಷಿಪ್ರಜ್ಞೆ. ಧ್ಯಾನವೆಂದರೆ ನಮ್ಮ ಮನಸ್ಸನ್ನು ಶಾಂತವಾಗಿ ಗಮನಿಸುವ ಅಭ್ಯಾಸ. ಅದು ಯೋಚನೆಗಳನ್ನು ನಿಲ್ಲಿಸುವುದಲ್ಲ. ಯೋಚನೆಗಳು ಬರುತ್ತಿರುವುದನ್ನು ಅರಿವಿನಿಂದ ನೋಡುವ ಸ್ಥಿತಿ. ಸದ್ಯಕ್ಕೆ ಇಷ್ಟೇ ವಿವರ ಸಾಕು.
ಅದಕ್ಕಿಂತ ಮೊದಲು ಕೆಲವನ್ನು ಸ್ಪಷ್ಟ ಪಡಿಸಿಬಿಡುತ್ತೇನೆ. ಧ್ಯಾನದಿಂದ ಯಾವುದೇ ಸಮಸ್ಯೆ ಮಾಯವಾಗಿಬಿಡುವುದಿಲ್ಲ. ಇದರಿಂದ ಹಣಕಾಸಿನ ಸಮಸ್ಯೆ, ಸಂಬಂಧಗಳ ಸಂಘರ್ಷ, ಉದ್ಯೋಗದ ಅನಿಶ್ಚಿತತೆ ಅಥವಾ ಆರೋಗ್ಯ ಸಮಸ್ಯೆಗಳು ಬಿಲ್ಕುಲ್ ಬಗೆಹರಿ ಯುವುದಿಲ್ಲ. ಯಾವುದೇ ಧ್ಯಾನಗುರು ಹೀಗೆಲ್ಲ ಹೇಳುತ್ತಿದ್ದಾನೆ ಎಂದರೆ ಅವರಿಗೊಂದು ಕೈಮುಗಿದು ದೂರವಾಗುವುದೇ ಉತ್ತಮ. ದಿನದಲ್ಲೊಂದಿಷ್ಟು ಹೊತ್ತು ನಿಯಮಿತವಾಗಿ ಧ್ಯಾನ ಮಾಡುವುದರಿಂದ ಮಾನಸಿಕ ಸ್ಪಷ್ಟತೆ ಹೆಚ್ಚುತ್ತದೆ. ದೃಷ್ಟಿಕೋನ ಬದಲಾಗುತ್ತದೆ. ಇವಿಷ್ಟು ಧ್ಯಾನದ ಗ್ಯಾರಂಟೀ ಭಾಗ್ಯ.
ಸುಮ್ಮನೆ ಕೂತು ತಲೆಯ ಹರಟೆಯನ್ನು ಸಾಕ್ಷಿಯಾಗಿ ಗಮನಿಸುವುದು ಧ್ಯಾನದ ಮೊದಲ ಹಂತ. ಹಾಗಾದರೆ ಹಾಗೆ ಕೂತಾಗ ಮೆದುಳಿನಲ್ಲೇನಾಗುತ್ತದೆ? ಅಮೆರಿಕಾದ ಯೇಲ್ ವಿಶ್ವವಿದ್ಯಾಲಯ ಮತ್ತು NIH(ಅಮೆರಿಕಾದ ಆರೋಗ್ಯ ಇಲಾಖೆ) 2011ರಲ್ಲಿ ಒಂದಿಷ್ಟು ಮಹತ್ತರ ಬ್ರೈನ್ ಸ್ಕ್ಯಾನಿಂಗ್ ಪ್ರಯೋಗ ನಡೆಸಿತು. ಅವರು ಸುಮಾರು ಐವತ್ತು ಜನ ಧ್ಯಾನ ಮಾಡುವ ಹಿಮಾಲಯದ ಬೌದ್ಧ, ಹಿಂದೂ ಸನ್ಯಾಸಿಗಳನ್ನು ಅಲ್ಲಿಗೆ ಕರೆಸಿ ಅವರು ಧ್ಯಾನ ಮಾಡುವಾಗ ಮೆದುಳಿನ ಸ್ಕ್ಯಾನಿಂಗ್ ನಡೆಸಲಾಯಿತು. ಆಗ ಅತ್ಯಂತ ಸ್ಪಷ್ಟವಾಗಿ ಕಾಣಿಸಿದ್ದೇನೆಂದರೆ ಯಾವಾಗ ಸನ್ಯಾಸಿಗಳು ಧ್ಯಾನ ಆರಂಭಿಸಿದರೋ ಆಗ ತಕ್ಷಣ, ಮೆದುಳಿನ ‘ಡಿಫಾಲ್ಟ್ ಮೋಡ್ ನೆಟ್ವರ್ಕ್’ ವ್ಯವಹಾರ (ಜ್ಯೋತಿಷಿ ಮತ್ತು ಇತಿಹಾಸಕಾರ) ಗಣನೀಯವಾಗಿ ಕಡಿಮೆಯಾದದ್ದು ಕಾಣಿಸಿತು (ಆಧಾರ: Brewer et al., 2011, PNAS- Yale University). ಇನ್ನೊಂದು ಮಹತ್ವದ ಪ್ರಯೋಗ ಅದೇ ವರ್ಷ ಹಾರ್ವರ್ಡ್‌ನಲ್ಲಿಯೂ ನಡೆಯಿತು.
16 ಮಂದಿ ಧ್ಯಾನ ಶಿಬಿರದಲ್ಲಿ ಭಾಗವಹಿಸಿದವರ MRI ಚಿತ್ರಗಳನ್ನು 8-ವಾರದ ಧ್ಯಾನ ಕಾರ್ಯಕ್ರಮದ ಮೊದಲು ಮತ್ತು ನಂತರ ತೆಗೆಯಲಾಯಿತು. ಫಲಿತಾಂಶ - ಕಲಿಕೆ-ಸ್ಮತಿ, ಭಾವನಾ ನಿಯಂತ್ರಣ, ಸ್ವ-ಸಂಬಂಧಿ ಚಿಂತನೆಗೆ ಸಂಬಂಧಿಸಿದ ಮೆದುಳಿನ ಭಾಗಗಳಲ್ಲಿ ಬೂದು ದ್ರವ್ಯದ ( gray matte) ಸಾಂದ್ರತೆಯಲ್ಲಿ ಹೆಚ್ಚಿದ್ದು ನಿಚ್ಚಳ ಕಾಣಿಸಿತು. (ಆಧಾರ : H5lzel, Lazar et al., 2011, Psychiatry Research: Neuroimaging (Harvard / Massachusetts General Hospita.)
ಈ ಪ್ರತಿಷ್ಠಿತ ಅಮೆರಿಕನ್ ವಿಶ್ವವಿದ್ಯಾಲಯಗಳ ಉದಾಹರಣೆ ಸ್ಯಾಂಪಲ್ ಅಷ್ಟೆೆ. ಇಂತಹ ನೂರಾರು ಪ್ರಯೋಗಗಳು 2010ರಿಂದೀಚೆ ನಡೆಯುತ್ತಲೇ ಇವೆ. ಹದಿನೈದು ವರ್ಷದಲ್ಲಿ ನಡೆದ ಇಂತಹ ಪ್ರಯೋಗಗಳೆಲ್ಲ ಹೇಳುವುದೇನೆಂದರೆ ಧ್ಯಾನವೆಂಬ ಕಸರತ್ತು ಊಹೆ, ಕಲ್ಪನೆಗಳಲ್ಲ ಬದಲಿಗೆ ನಿಜವಾಗಿಯೂ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಇಂದಿನ ಆಧುನಿಕ ಬದುಕಿಗೆ ಅವಶ್ಯಕ ಎಂದೇ ಧ್ಯಾನದತ್ತ ಬೊಟ್ಟು ಮಾಡಿ ತೋರಿಸುತ್ತಿವೆ.
ಆದರೆ ನಮ್ಮ ವಿಜ್ಞಾನಕ್ಕೊಂದು ಮಿತಿಯಿದೆ. ಒಬ್ಬ ವ್ಯಕ್ತಿಯ ತಲೆಯಲ್ಲಿ ಸರಾಸರಿ ಪ್ರತಿನಿತ್ಯ ಆರು ಸಾವಿರದಿಂದ ಇಪ್ಪತ್ತು ಸಾವಿರ ವಿಚಾರಗಳು ಬರುತ್ತವೆಯಂತೆ. ಆದರೆ ನಮಗಿನ್ನೂ ತಲೆಯಲ್ಲಿ ಒಂದು ಯೋಚನೆ ಎಲ್ಲಿಂದ, ಹೇಗೆ ಮೂಡುತ್ತದೆ. ಯಾವುದೇ ಯೋಚನೆಯ ಮೂಲವೆಲ್ಲಿ ಎಂದು ತಿಳಿಯಲು ಸಾಧ್ಯವಾಗಿಲ್ಲ. ನಮಗ್ಯಾರಿಗೂ ನಮ್ಮ ಮುಂದಿನ ಯೋಚನೆ ಏನೆಂದು ಊಹಿಸಲು ಯಾವ ಕ್ಷಣವೂ ಸಾಧ್ಯವಿಲ್ಲ. ಊಹಿಸುವ ಮುಂಚೆಯೇ ಯೋಚನೆ ಬಂದಿರುತ್ತದೆ, ಊಹೆಯೇ ಯೋಚನೆಯಾಗಿರುತ್ತದೆ. ಯೋಚನೆ ಗಳು ಎಲ್ಲೋ ಒಂದು ಕಗ್ಗತ್ತಲ ಗುಹೆಯಿಂದ ತಾವಾಗಿಯೇ ಮೇಲೆದ್ದು ಬರುತ್ತವೆ. ನಾವು ಯೋಚನೆ ಮಾಡುವುದಿಲ್ಲ; ಯೋಚನೆ ನಮಗೆ ‘ಆಗುತ್ತದೆ’.
ಸಾಕ್ಷಿ ಮಾಡುವ ಕೆಲಸ ಇಷ್ಟೇ - ಆ ಗುಹೆಯ ಬಾಗಿಲ ಬಳಿ ಕುಳಿತು, ಮೇಲೆದ್ದು ಬರುವ ಪ್ರತಿ ಯೋಚನೆಯನ್ನೂ ನೋಡುವುದು. ಈ ಸಾಕ್ಷಿ ಎಂದರೇನು? ಎನ್ನುವುದೇ ವಿಜ್ಞಾನದ ಮುಂದಿರುವ Hard Problem Of consciousness. ಪ್ರಜ್ಞೆ ಎಂದರೇನು? ಅದು ತಲೆ ಸೃಷ್ಟಿ ಸುವ ಕಲ್ಪನೆಯಲ್ಲಿ ಒಂದಲ್ಲ ಎನ್ನುವುದು ವಿಜ್ಞಾನಕ್ಕೆ ಗೊತ್ತು. ಆದರೆ ಪ್ರಜ್ಞೆ ಎಂದ ರೇನು? ಈ ಸಾಕ್ಷಿಪ್ರಜ್ಞೆಯ ಪ್ರಶ್ನೆಗೆ ನಮಗಿನ್ನೂ ಸಾಕ್ಷ್ಯ ಸಿಕ್ಕಿಲ್ಲ. ಆದರೆ ಅದಿರುವುದು ಗೊತ್ತು.
ಒಟ್ಟಾರೆ ಇಲ್ಲಿ ವಿಷಯ ಇಷ್ಟೆ. ಮೊದಲು ಧ್ಯಾನ, ಯೋಗದ ಬಗ್ಗೆ ಸಹಜವಾಗಿ ಪಾಶ್ಚಾತ್ಯ ಜಗತ್ತಿನಲ್ಲಿ ತಿರಸ್ಕಾರವಿತ್ತು. ಏಕೆಂದರೆ ಅದು ಏನೆಂದು ಅವರಿಗೆ ಅರ್ಥವಾಗುವ ವಾತಾ ವರಣ ಅವರಲ್ಲಿರಲಿಲ್ಲ. ಆದರೆ ಕಾಲ ಕಳೆದಂತೆ ಇಂಥದ್ದೊಂದು ಜ್ಞಾನವನ್ನು ಮನುಷ್ಯ ಇಷ್ಟು ಕಾಲ ಇಟ್ಟುಕೊಂಡು ಬಂದದ್ದೇಕೆ ಎಂಬ ಪ್ರಶ್ನೆ ವಿಜ್ಞಾನಕ್ಕೆ ಮೂಡಿದೆ. ಮೊದಲು ಮೆದುಳೆಂದರೆ ವಿಡಿಯೋ ರೆಕಾರ್ಡರ್, ಕ್ಯಾಸೆಟ್, ಹಾರ್ಡ್ ಡಿಸ್ಕ್ ಎಂಬ ರೀತಿಯ ಊಹೆ ಗಳಿದ್ದುವು. ಅದೊಂದು ತಪ್ಪು ಕಲ್ಪನೆ, ಮೆದುಳಿನ ಕಾರ್ಯಶೈಲಿ ಅದೆಲ್ಲವನ್ನೂ ಮೀರಿದೆ ಎನ್ನುವ ಸೂಕ್ಷ್ಮತೆ ಈಗ ನಮಗೆ ತಿಳಿದಿದೆ, ಸಿದ್ಧವಾಗಿದೆ. ಇದೆಲ್ಲವಕ್ಕೂ ಹೇಳಿ ಕೊಳ್ಳುವ ಸಾಕ್ಷ್ಯ ಬಹುಕಾಲ ಇರಲಿಲ್ಲ. ಧ್ಯಾನ, ಯೋಗ ನಮ್ಮದು ಎಂದು ನಾವೇ ಏನೇನೋ ಸುಳ್ಳು ಸುಳ್ಳು ಪ್ರಯೋಗವಾಗಿದೆ ಎಂದು ಹೇಳಿಕೊಂಡು ತಿರುಗುತ್ತಿದ್ದೆವು. ಆದರೀಗ ಹಾಗಲ್ಲ- ಪಾಶ್ಚಾತ್ಯ, ಅದರಲ್ಲೂ ಇದೆಲ್ಲವನ್ನೂ ತಿರಸ್ಕಾರದಿಂದಲೇ ನೋಡಿದ್ದ ಅಮೆರಿಕಾ ವಿಜ್ಞಾನ ಪ್ರಪಂಚದಲ್ಲಿ ಈಗ ಹೊಸ ನೀರು ಹರಿಯುತ್ತಿದೆ. ಅದರಿಂದಾಗಿ ಇಂಥದ್ದಕ್ಕೆಲ್ಲ ಒಂದಿಷ್ಟು ಸಾಕ್ಷ್ಯ ಸಿಗುತ್ತಿದೆ.
ನಮ್ಮಲ್ಲಿ ಧ್ಯಾನದ ವಿಷಯದಲ್ಲಿ ಯಾರಿಗೂ ಅನುಮಾನಗಳಿಲ್ಲ. ಅನುಮಾನಗಳಿದ್ದರೆ ಈ ಪ್ರಯೋಗಗಳು ಅದನ್ನು ಈಗ ಸಾಬೀತು ಮಾಡಿವೆ. ವೈಜ್ಞಾನಿಕ ಮನಸ್ಥಿತಿಯಲ್ಲಿಯೇ ನೋಡುವುದಾದರೆ ಒಮ್ಮೆ ಸಿದ್ಧವಾದ ಮೇಲೆ ಅದರ ಪ್ರಯೋಜನವಾಗಬೇಕು. ಅದುವೇ ಕಷ್ಟ- ಬಹುತೇಕರ ಸಮಸ್ಯೆ ಏನೆಂದರೆ ದಿನಕ್ಕೊಂದಿಷ್ಟು ಹೊತ್ತು ಸುಮ್ಮನೆ ಕುಳಿತು ಕೊಳ್ಳಬೇಕಲ್ಲ. ಎಲ್ಲರಿಗೂ ಮಾದೇವಜ್ಜಿಯ ಹಾಗೆ ಬಿಡುವಿಲ್ಲವಲ್ಲ? ಬಿಡುವು ಹೇಗೋ ಮಾಡಿಕೊಂಡುಬಿಡಬಹುದು, ಆದರೆ ಧ್ಯಾನ ಎಲ್ಲಿಂದ ಆರಂಭಿಸಬೇಕು? ಸುಮ್ಮನೆ ಒಂದಿಷ್ಟು ಹೊತ್ತು ಕೂತು ಬಿಡುತ್ತೇನೆ ಎಂದರೆ, ಧ್ಯಾನ ಮಾಡಿಬಿಡುತ್ತೇನೆ ಎಂದರೆ ತಲೆಯೊಳಗಿರುವ ವಕೀಲ, ಜಡ್ಜ್, ಅಪ್ಪ, ಅಮ್ಮ, ಜ್ಯೋತಿಷಿ, ಇತಿಹಾಸಕಾರ ಇವರೆಲ್ಲ ಸುಮ್ಮನಿರುವುದಿಲ್ಲ. ಎರಡೇ ನಿಮಿಷಕ್ಕೆ ಸುಸ್ತೆನಿಸಿ, ಇಲ್ಲಿ ಹೇಳಿದ್ದೆಲ್ಲಾ ಬಂಡಲ್ ಎಂದೆನಿಸಿ ಬಿಡುತ್ತದೆ ! ಸಹಜ.
ಹಾಗಾದರೆ ಧ್ಯಾನ ಎಲ್ಲಿಂದ ಶುರು ಮಾಡಬೇಕು? ಹೇಗೆ ಆರಂಭಿಸಬೇಕು? ಕಸರತ್ತು ಎಂದಾ ದರೆ ಯಾವ ಜಿಮ್ಮಿಗೆ ಹೋಗಬೇಕು? ಹಿಮಾಲಯಕ್ಕೆ ಹೋಗಬೇಕೆ? ಅಥವಾ ಜಗ್ಗಿ ವಾಸು ದೇವರ, ರವಿಶಂಕರರ ಆಶ್ರಮ ಸೇರಬೇಕೆ? ನನ್ನ ಪ್ರಶ್ನೆ - ಒಬ್ಬ ಸಂಸಾರಿ, ಎಲ್ಲಾ ರಗಳೆ ಕಷ್ಟಗಳಿರುವ, ತೃಪ್ತಿ, ಅಸಂತೃಪ್ತಿಯಿರುವ ಮನುಷ್ಯ ಸಹಜ ಜೀವನವನ್ನು ಬದುಕುವ ನಮ್ಮಂಥವರು ಧ್ಯಾನ ಕಲಿಯುವುದು ಹೇಗೆ? ಕಲಿತನಂತರ ನಿತ್ಯ ಆಸಕ್ತಿ? ಇಲ್ಲಿ ಒಂದು ಹೇಳಬೇಕು - ಸನ್ಯಾಸಿ, ಮಾಂಕ್ ಆದವರಿಗೆ ನನ್ನ ಅನಿಸಿಕೆಯಂತೆ ಧ್ಯಾನ ಬಹಳ ಸುಲಭ. ಏಕೆಂದರೆ ಅವರು ಅಷ್ಟಾಗಿ ಜಗತ್ತಿನ ಜೊತೆ ವ್ಯವಹರಿಸುವುದಿಲ್ಲ. ಇದರಿಂದಾಗಿ ಅವರ ತಲೆಯೊಳಗೆ ತಲೆಹರಟೆ ಸಹಜವಾಗಿಯೇ ಕಡಿಮೆ. ಧ್ಯಾನದಲ್ಲಿ ಸಾಧನೆ ಮಾಡಲು ಮುಂದಾಗುವವರು ಗುಡ್ಡ - ಬೆಟ್ಟ - ಪರ್ವತ - ಕಣಿವೆ ಹುಡುಕಿಕೊಂಡು ಹೋಗುವುದೇಕೆ? ಸರ್ವ ಸಂಗ ಪರಿತ್ಯಾಗಿಯಾದವರಿಗೆ ತಲೆಬಿಸಿಯ ತಲೆಬಿಸಿ ಇಲ್ಲ. ನಿಜವಾದ ಚಾಲೆಂಜ್ ಇರುವುದು - ನಮ್ಮ ನಿಮ್ಮೆಲ್ಲರ ಸಹಜ ಬದುಕಿನಲ್ಲಿ, ಸಮಾಜದಲ್ಲಿ. ಹಾಗಾಗಿ ಧ್ಯಾನದ ಅವಶ್ಯಕತೆ, ಪಯೋಜನ ಸನ್ಯಾಸಿಗಳಿಗಿಂತ ಸಂಸಾರಿಗಳಿಗೆ ಹೆಚ್ಚು. ಜಿಮ್ ಹೇಗೆ ಬರೀ ಬಾಡಿ ಬಿಲ್ಡರ್, ರಣವೀರ್ ಸಿಂಗ್‌ಗಳಿಗಷ್ಟೇ ಸೀಮಿತವಾಗಬಾರದೋ ಹಾಗೆಯೇ ಮಾನಸಿಕ ಕಸರತ್ತು- ಧ್ಯಾನ ಕೂಡ.
(ತಲೆ-ಹರಟೆ ಮುಂದುವರಿಯುತ್ತದೆ)