ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ತಂದೆ-ತಾಯಿಯರ ಸೇವೆಗಿಂತ ಮಿಗಿಲಾದ ಪುಣ್ಯ ಯಾವುದೂ ಇಲ್ಲ

ಭಕ್ತನ ಮಾತಿನಂತೆ ಕೃಷ್ಣನು ಪತ್ನಿ ರುಕ್ಮಿಣಿ ಸಮೇತ ‘ಪಂಢರಿನಾಥ ಪಾಂಡುರಂಗ’ ಎಂಬ ಹೆಸರಿ ನೊಂದಿಗೆ ಅಲ್ಲೇ ನೆಲೆಸಿದನು. ಇದೇ ಮುಂದೆ ’ಪಂಢರಾಪುರ’ ಎಂಬ ಪುಣ್ಯಕ್ಷೇತ್ರವಾಗಿ ಬೆಳೆಯಿತು. ತಮ್ಮ ಆಯಸ್ಸನ್ನು ಎಲ್ಲಾ ಮಕ್ಕಳ ಶ್ರೇಯಸ್ಸಿಗೆ, ಅಭಿವೃದ್ಧಿಗೆ ವ್ಯಯಿಸಿ ಕೇವಲ ಅವರ ಸುಖಕ್ಕಾಗಿ ಬದುಕುವ ತಂದೆ ತಾಯಿಗಳು, ವೃದ್ಧಾಪ್ಯದಲ್ಲಿದ್ದಾಗ ಮತ್ತೆ ಪುಟ್ಟ ಮಕ್ಕಳಂತಾಗುತ್ತಾರೆ.

ಒಂದೊಳ್ಳೆ ಮಾತು

ವಿಷ್ಣುವಿನ ಭಕ್ತರಾದ ಜಾನುದೇವ -ಸತ್ಯವತಿ ಎಂಬ ಬ್ರಾಹ್ಮಣ ದಂಪತಿಗೆ ವಿಷ್ಣು ಅಂಶದ ಪುತ್ರನ ಜನನವಾಯಿತು. ಅವನಿಗೆ ಪುಂಡಲೀಕ ಎಂದು ಹೆಸರಿಟ್ಟರು. ಇವನು ಸಹವಾಸ ದೋಷದಿಂದಾಗಿ, ದುಶ್ಚಟಗಳೇ ಮೈವೆತ್ತಂತೆ ದುಷ್ಟ ಮಗನಾಗಿ ಬೆಳೆದು ಕಳ್ಳನಾದನು, ವೃದ್ಧರಾದ ತಂದೆ-ತಾಯಿ ಗಳನ್ನು ದೂರ ಮಾಡಿದನು.

ಕೆಲವು ಕಾಲ ಕಳೆಯಿತು. ಕಾಶಿ ವಿಶ್ವನಾಥನ ದರ್ಶನ ಮಾಡಿದರೆ ಸಕಲ ಪಾಪಗಳಿಂದ ಮುಕ್ತಿ ಯಾಗುತ್ತದೆ ಎಂಬ ಸುದ್ದಿ ಕೇಳಿ, ತನ್ನ ಪಾಪಗಳನ್ನು ಕಳೆದುಕೊಳ್ಳುವ ಸಲುವಾಗಿ ಕಾಶಿಗೆ ಯಾತ್ರೆ ಹೊರಟನು. ಖರ್ಚಿಗೆ ದಾರಿ ಮಧ್ಯದಲ್ಲಿ ಸುಲಿಗೆ ಮಾಡುತ್ತಾ ಅಲ್ಲಲ್ಲೇ ರಾತ್ರಿ ಕಳೆದು ಸಾಗುತ್ತಿದ್ದನು.

ಒಂದು ದಿನ ಕತ್ತಲಾದಾಗ, ಒಂದು ಆಶ್ರಮದ ಮುಂದೆ ತಂಗಿದನು. ಅದು ಕುಕ್ಕುಟ ಮುನಿಗಳ ಆಶ್ರಮವಾಗಿತ್ತು. ಮರದ ಕೆಳಗೆ ಕುಳಿತು ನೋಡುತ್ತಿದ್ದಂತೆ ಕಳಾಹೀನವಾದ ಮುಖ, ನಿಶ್ಶಕ್ತ ಶರೀರದ ಮೂರು ಜನ ಮಹಿಳೆಯರು ಗುಡಿಸಲ ಒಳಗೆ ಹೋದರು, ನಂತರ ಗುಡಿಸಲನ್ನು ಸ್ವಚ್ಛಗೊಳಿಸಿ, ಮುನಿಗಳ ಸೇವೆ ಮಾಡಿ ಮುಂಜಾನೆ ಹೊರಗೆ ಬರುವಾಗ ಸುಂದರವಾಗಿ, ಸದೃಢವಾಗಿ ಬಂದರು. ಪುಂಡಲೀಕನಿಗೆ ಆಶ್ಚರ್ಯವಾಗಿ ಅವರನ್ನು ತಡೆದು ನಿಲ್ಲಿಸಿ ಜೋರು ಮಾಡಿ ಕಾರಣ ಕೇಳಿದ. ಹೇಳದಿದ್ದರೆ ಬಿಡುವುದಿಲ್ಲ ಎಂದು ಅವರನ್ನು ಅಡ್ಡಗಟ್ಟಿದ.

ಇದನ್ನೂ ಓದಿ: Roopa Gururaj Column: ಸೀತೆಯ ಶಾಪಕ್ಕೆ ಗುರಿಯಾದ ನಾಲ್ವರು

ಆಗ ತರುಣಿಯರು ಹೇಳಿದರು- “ನಾವು ಗಂಗಾ-ಯಮುನಾ-ಸರಸ್ವತಿ ನದಿಗಳು. ನಮ್ಮ ಒಡಲಲ್ಲಿ ಮನುಷ್ಯರು ಸ್ನಾನ ಮಾಡಿ ತಾವು ಮಾಡಿದ ಪಾಪಕರ್ಮಗಳನ್ನು ತೊಳೆದುಕೊಳ್ಳುತ್ತಾರೆ. ಆ ಪಾಪದ ಫಲವನ್ನು ಹೊತ್ತ ನಾವು ವೃದ್ಧರಾಗಿ ಬಳಲಿ ಕುರೂಪಿಗಳಾಗುತ್ತೇವೆ.

ಸಂಜೆಯಾಗುತ್ತಲೇ ನಾವು ಕುಕ್ಕುಟ ಮುನಿಗಳ ಆಶ್ರಮಕ್ಕೆ ಬಂದು ಆ ಪುಣ್ಯವಂತರ ಸೇವೆ ಮಾಡಿ, ಪಾಪಗಳಿಂದ ಮುಕ್ತಿ ಪಡೆದು ಲವಲವಿಕೆಯಿಂದ ಹೊರಡುತ್ತೇವೆ" ಎಂದು ಹರಸಿ ಹೊರಟರು. ಪುಂಡಲೀಕನು ಪುಣ್ಯವಂತರಾದ ಕುಕ್ಕುಟ ಮುನಿಗಳ ಕುರಿತು ತಿಳಿಯಲು ಆಶ್ರಮದ ಒಳಗೆ ಬಂದನು. ಆಗಲೇ ಅವನ ಮನಸ್ಸು ಬದಲಾದಂತೆ ಅನಿಸಿತು.

ಅವರನ್ನು ಕೇಳಿದನು- “ನಿಮ್ಮ ಕುಟೀರಕ್ಕೆ ದೇವತೆಗಳಾದ ಗಂಗಾ-ಯಮುನಾ-ಸರಸ್ವತಿಯರೇ ಬಂದು ಸ್ವಚ್ಛ ಮಾಡಿ ಹೋಗಿದ್ದನ್ನು ನೋಡಿದೆ. ಅಂಥ ದೇವಾನುದೇವತೆಗಳೇ ನಿಮ್ಮ ಸೇವೆ ಮಾಡಲಿಕ್ಕಾಗಿ ಬರಲು ನೀವು ಮಾಡುವ ಕಠಿಣ ತಪಸ್ಸು ಯಾವುದು?". ಮುನಿಗಳು ಹೇಳಿದರು, “ನಾನು ಯಾವ ತಪಸ್ಸನ್ನೂ ಮಾಡುತ್ತಿಲ್ಲ. ತಪಸ್ಸು ಮಾಡಿ ಒಲಿಸಿಕೊಳ್ಳಲು ನನಗೆ ಸಮಯವಿಲ್ಲ. ವೃದ್ಧರಾದ ನನ್ನ ತಂದೆ-ತಾಯಿಯರ ಸೇವೆ ಮಾಡುವುದು, ಅವರನ್ನು ಚೆನ್ನಾಗಿ ನೋಡಿಕೊಳ್ಳು ವುದು ಮಾತ್ರ ನನ್ನ ಕೆಲಸ, ಬೇರೇನೂ ಮಾಡುವುದಿಲ್ಲ".

ನಂತರ ಅವರು, ಪುಂಡಲೀಕನು ಪುಣ್ಯ ಪಡೆಯಲು ಕಾಶಿಗೆ ಹೋಗುತ್ತಿರುವ ವಿಷಯ ಕೇಳಿ, “ನೀನು ಪುಣ್ಯ ಪಡೆಯಲು ಎಲ್ಲಿಗೂ ಹೋಗಬೇಕಾಗಿಲ್ಲ. ಭಗವಂತನ ನಾಮಸ್ಮರಣೆ ಮಾಡುತ್ತಾ, ನಿನ್ನ ತಂದೆ-ತಾಯಿಯರ ಸೇವೆ ಮಾಡಿದರೆ ಸಕಲ ಪಾಪಗಳಿಂದ ಮುಕ್ತಿ ದೊರಕಿ, ಪುಣ್ಯ ಲಭಿಸುತ್ತದೆ" ಎಂದರು.

ಮುನಿಗಳ ಉಪದೇಶದಿಂದ ಪುಂಡಲೀಕನಿಗೆ ತನ್ನ ತಪ್ಪಿನ ಅರಿವಾಗಿ, ಕಾಶಿಗೆ ಹೋಗುವುದನ್ನು ಬಿಟ್ಟು ವಾಪಸಾದನು. ತಂದೆ-ತಾಯಿಯರಲ್ಲಿ ಕ್ಷಮೆ ಬೇಡಿ, ಆ ಕ್ಷಣದಿಂದಲೇ ಅವರ ಸೇವೆಯಲ್ಲಿ ತೊಡಗಿದನು. ನಿರಂತರ ಹರಿನಾಮಸ್ಮರಣೆಗೆ ಶುರುವಿಟ್ಟುಕೊಂಡನು. ಹೀಗೆಯೇ ವರ್ಷಗಳು ಉರುಳಿದವು.

ಹೀಗಿರುವಾಗ ಒಮ್ಮೆ ಕೃಷ್ಣನ ಜತೆ ಕೋಪಗೊಂಡ ರುಕ್ಮಿಣಿ ತವರುಮನೆಗೆ ಬಂದಳು. ಅವಳನ್ನು ಬಿಟ್ಟಿರಲಾರದ ಕೃಷ್ಣನೂ ಅವಳನ್ನು ಹುಡುಕಿಕೊಂಡು ಮಥುರಾ-ಗೋಕುಲ-ದ್ವಾರಕ ಎಲ್ಲಾ ಕಡೆಗೂ ಸುತ್ತಿ ಮಹಾರಾಷ್ಟ್ರಕ್ಕೆ ಬಂದನು. ತವರಿನಲ್ಲಿದ್ದ ರುಕ್ಮಿಣಿಯನ್ನು ಕಂಡು ಸಮಾಧಾನ ಮಾಡಿದನು. ನಂತರ ಕೃಷ್ಣನು ತನ್ನ ಭಕ್ತ ಪುಂಡಲೀಕನನ್ನು ನೋಡಲು ಅವನ ಮನೆಯ ಬಳಿ ಬಂದನು.

ಬಾಗಿಲಲ್ಲಿ ನಿಂತು ‘ಪುಂಡಲೀಕ’ ಎಂದು ಕೃಷ್ಣ ಕೂಗುತ್ತಾನೆ. ಪುಂಡಲೀಕ ತಂದೆ-ತಾಯಿಯ ಸೇವೆ ಮಾಡುತ್ತಿದ್ದವನು ತಿರುಗಿ ನೋಡದೆ, “ಸೇವೆ ಮುಗಿಸಿ ಬರುತ್ತೇನೆ" ಎಂದನು. ಆಗ ಕೃಷ್ಣನು ನಗುತ್ತಾ, “ನೀನು ಬರುವ ತನಕ ನಾನು ಎಲ್ಲಿ ನಿಲ್ಲಲಿ?" ಎಂದು ಕೇಳಿದಾಗ, ಪುಂಡಲೀಕನು ತನ್ನ ಬಳಿ ಇದ್ದ ಒಂದು ಇಟ್ಟಿಗೆಯನ್ನು ತಳ್ಳಿ, “ಇದರ ಮೇಲೆ ನಿಂತಿರು" ಎಂದನು.

ಮರು ಮಾತನಾಡದೆ ಕೃಷ್ಣನು ಕೈಗಳನ್ನು ಸೊಂಟದ ಮೇಲಿಟ್ಟುಕೊಂಡು, ಪುಂಡಲೀಕನು ತಂದೆ-ತಾಯಿಯರ ಸೇವೆ ಮಾಡುವುದನ್ನು ನೋಡುತ್ತಾ ನಿಂತನು. ಪುಂಡಲೀಕ ತನ್ನ ತಂದೆ-ತಾಯಿಯರ ಸೇವೆ ಮುಗಿಸಿ ಹೊರಗೆ ಬಂದು ಸಾಕ್ಷಾತ್ ಭಗವಂತನೇ ನಿಂತಿರುವುದನ್ನು ಕಂಡು ಪುಳಕಿತನಾಗಿ ಅವನನ್ನು ಸ್ತುತಿಸಿ ಕೈ ಮುಗಿಯುತ್ತಾನೆ ಹಾಗೂ ನೀನು ಇಲ್ಲಿಯೇ ಸ್ಥಿರವಾಗಿ ನೆಲೆಸು ಎಂದು ಅಂಗಲಾಚಿ ಬೇಡಿಕೊಳ್ಳುತ್ತಾನೆ.

ಭಕ್ತನ ಮಾತಿನಂತೆ ಕೃಷ್ಣನು ಪತ್ನಿ ರುಕ್ಮಿಣಿ ಸಮೇತ ‘ಪಂಢರಿನಾಥ ಪಾಂಡುರಂಗ’ ಎಂಬ ಹೆಸರಿನೊಂದಿಗೆ ಅಲ್ಲೇ ನೆಲೆಸಿದನು. ಇದೇ ಮುಂದೆ ’ಪಂಢರಾಪುರ’ ಎಂಬ ಪುಣ್ಯಕ್ಷೇತ್ರವಾಗಿ ಬೆಳೆಯಿತು. ತಮ್ಮ ಆಯಸ್ಸನ್ನು ಎಲ್ಲಾ ಮಕ್ಕಳ ಶ್ರೇಯಸ್ಸಿಗೆ, ಅಭಿವೃದ್ಧಿಗೆ ವ್ಯಯಿಸಿ ಕೇವಲ ಅವರ ಸುಖಕ್ಕಾಗಿ ಬದುಕುವ ತಂದೆ ತಾಯಿಗಳು, ವೃದ್ಧಾಪ್ಯದಲ್ಲಿದ್ದಾಗ ಮತ್ತೆ ಪುಟ್ಟ ಮಕ್ಕಳಂತಾಗುತ್ತಾರೆ.

ಕೈಲಾಗದ ಮಕ್ಕಳಂತೆ ಹಠ ಮಾಡುವ ಅವರನ್ನು ಸಮಾಧಾನದಿಂದ ಪ್ರೀತಿಯಿಂದ ನೋಡಿ ಕೊಳ್ಳುವುದಕ್ಕಿಂತ ಪುಣ್ಯದ ಕೆಲಸ ಮತ್ತಾವುದೂ ಇಲ್ಲ. ಇದು ಎಲ್ಲಾ ತೀರ್ಥಯಾತ್ರೆಗಳಿಗಿಂತಲೂ, ತಪಸ್ಸಿಗಿಂತಲೂ ಮಿಗಿಲಾದದ್ದು.

ರೂಪಾ ಗುರುರಾಜ್

View all posts by this author