ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೈತರ ಸುಲಿಗೆಗೆ ಮಿತಿಯಿಲ್ಲ

ಬೆಳೆಗೆ ನೀರು ಹಾಯಿಸುವ ಅನಿವಾರ್ಯತೆ ಒಂದು ಕಡೆಗೆ, ಸಕಾಲಕ್ಕೆ ಎತ್ತಿ ರಿಪೇರಿ ಮಾಡಿಸುವುದು ಮತ್ತೊಂದು ಕಡೆಗೆ. ಅದನ್ನು ಹೊರ ತೆಗೆಯುವವರ ದುಂಬಾಲು ಬೀಳಬೇಕು. ಅವರಿಗೆ ನಾವೊಬ್ಬರೇ ಗ್ರಾಹಕರಲ್ಲ. ಮನವೊಲಿಸುವ ಪ್ರಯತ್ನ ಒಂದೇ ದಾರಿ. ಮುಂದಿನದು ಅದರ ರಿಪೇರಿ ಮತ್ತು ಸುಲಿಗೆಯ ಕಥೆ. ಬೀಜ, ಗೊಬ್ಬರ, ದರ, ಧಾರಣೆ,

ಪ್ರಸ್ತುತ

ಡಾ.ಎಲ್ಲಪ್ಪ ಜಿ.ಕಲಾದಗಿ

ರೈತನ ಬೆಳೆಗೆ ನೀರೇ ಜೀವಾಳ. ಅದು ಆತನಿಗೆ ವಿವಿಧ ಸಂಪನ್ಮೂಲಗಳ ಮೂಲಕ ದೊರಕುತ್ತದೆ. ಬಯಲು ಸೀಮೆಗಂತೂ ಕೊಳವೆಬಾವಿಗಳೇ ಆಸರೆ ಮತ್ತು ಆಶ್ರಯ. ಅವು ಸರಿಯಾಗಿ ನಡೆದರೆ ಓಕೆ. ಇಲ್ಲದಿದ್ದರೆ ಅದರ ಪಾಡು ಹೇಳಲಾಗದು. ರೈತನ ಸುತ್ತ ಹತ್ತಾರು ಸಮಸ್ಯೆ ಮತ್ತು ಸವಾಲುಗಳು ಹುತ್ತಗಟ್ಟುತ್ತವೆ. ಆತನ ಬದುಕು ಜೂಜಾಟ. ಮಳೆ, ಬೆಲೆ, ಬೀಜ ಮತ್ತು ಕೀಟನಾಶಕಗಳ ತೊಡಕು ಒಂದು ಕಡೆಯಾದರೆ, ಸಕಾಲಕ್ಕೆ ದೊರೆಯದ ಸೇವೆಗಳು, ಜೊತೆಗೆ ವಿಪರೀತ ಬೆಲೆಗಳಿಂದ ಕಂಗಾ ಲಾಗುತ್ತಾನೆ.

ಕೊಳವೆ ಬಾವಿಗೆ ಅಳವಡಿಸುವ ಸಬ್ಮರ್ಸಿಬಲ್ ಮೋಟರ್ ರೈತನಿಗೆ ಆತ್ಮ ಇದ್ದಂತೆ. ಅದೊಂದು ರೀತಿಯ ಜೀವಾತ್ಮ! ಮೋಟರ್ ನಿಂತಿತು ಎಂದರೆ ಆತಂಕ ಮತ್ತು ದಿಗಿಲು. ವಿದ್ಯುತ್ ಪೂರೈಕೆಯ ಕೊರತೆಯಿಂದಲೋ, ವ್ಯತ್ಯಯದಿಂದಲೋ ಮೋಟಾರ್ ಕೆಟ್ಟರೆ ಮುಗೀತು. ನೂರಾರು ಅಡಿ ಆಳದಿಂದ ಅದನ್ನು ಮೇಲಕ್ಕೆ ಎತ್ತಿ ರಿಪೇರಿ ಮಾಡಿಸಿ ಇಳಿಸುವಷ್ಟರಲ್ಲಿ ಸಾಕು ಸಾಕೆನಿಸಿ ಬಿಡುತ್ತದೆ.

ಬೆಳೆಗೆ ನೀರು ಹಾಯಿಸುವ ಅನಿವಾರ್ಯತೆ ಒಂದು ಕಡೆಗೆ, ಸಕಾಲಕ್ಕೆ ಎತ್ತಿ ರಿಪೇರಿ ಮಾಡಿಸುವುದು ಮತ್ತೊಂದು ಕಡೆಗೆ. ಅದನ್ನು ಹೊರ ತೆಗೆಯುವವರ ದುಂಬಾಲು ಬೀಳಬೇಕು. ಅವರಿಗೆ ನಾವೊಬ್ಬರೇ ಗ್ರಾಹಕರಲ್ಲ. ಮನವೊಲಿಸುವ ಪ್ರಯತ್ನ ಒಂದೇ ದಾರಿ. ಮುಂದಿನದು ಅದರ ರಿಪೇರಿ ಮತ್ತು ಸುಲಿಗೆಯ ಕಥೆ. ಬೀಜ, ಗೊಬ್ಬರ, ದರ, ಧಾರಣೆ, ಹೀಗೆ ಹಲವಾರು ಸಂದರ್ಭಗಳಲ್ಲಿ ಸುಲಿಗೆ ಇದೆ. ಅವುಗಳಲ್ಲಿ ಮೋಟರ್ ರಿಪೇರಿ ಸುಲಿಗೆಯೂ ಒಂದು.

ಇದನ್ನೂ ಓದಿ: Farmers Protest: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ; ರೈತರಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ

ಸುಟ್ಟು ಹೋದ ಮೋಟರನ್ನು ರೀ ವೈಂಡಿಂಗ್ ಮಾಡಲು ದರ ನಿಗದಿಪಡಿಸುವವರ್ಯಾರು? ಅದನ್ನು ನಿಯಂತ್ರಿಸುವವರು ಯಾರು? ಎಂಬುದೇ ಯಕ್ಷಪ್ರಶ್ನೆ. ಮೊನ್ನೆ ನಮ್ಮದೇ ತೋಟದ ಕೊಳವೆ ಬಾವಿಯ ಮೋಟರ್ ಆರು ತಿಂಗಳ ಅಂತರದಲ್ಲಿ ಮತ್ತೊಮ್ಮೆ ಕೆಟ್ಟು ನಿಂತಿತು.

ಅಚ್ಚರಿಯಾದರೂ ಬೇರೆ ದಾರಿ ಇಲ್ಲ. ಮೇಲಕ್ಕೆತ್ತಲೇ ಬೇಕಾಯಿತು. ಕಳೆದ ಬಾರಿ ಸುತ್ತಿ ಕೊಟ್ಟ ವ್ಯಕ್ತಿಯ ಕಡೆಗೆ ಕೊಂಡೊಯ್ಯಲಾಯಿತು. ಆತನ ಬಿಲ್ಲು ನೋಡಿದರೆ, ಐದು ಸಾವಿರ ಮೀರಿತ್ತು. ಆರು ತಿಂಗಳ ಅಂತರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮೊತ್ತ ಏರಿಸಲಾಗಿದೆ. ಯಾಕೆ ಹೀಗೆ ಎಂದು ವಿಚಾರಿಸಿದರೆ, ವೈರ್ ರೇ ಟು ಹೆಚ್ಚಾಗಿದೆ ಎಂಬ ಪ್ರತಿಕ್ರಿಯೆ. ಆನ್‌ಲೈನಿನಲ್ಲಿ ಚೆಕ್ ಮಾಡಿದಾಗ ಒಂದು ಕೆಜಿಗೆ ಒಂಬೈನೂರು ಬೆಲೆ.

ಆತ ಕೆಜಿಗೆ ಸಾವಿರದ ಐದುನೂರು ರೂಪಾಯಿಗಳಂತೆ ಬಿಲ್ ಮಾಡಿದ್ದ. ಪ್ರಶ್ನಿಸಿದರೆ ಇಷ್ಟ ಇದ್ರೆ ರಿಪೇರಿ ಮಾಡಿಸಿಕೊಳ್ಳಿ, ಇಲ್ಲವೆಂದರೆ ಬೇಡ ಎಂದು ಕಡ್ಡಿ ಮುರಿದ. ರೈತ ಇನ್ನೇನು ಮಾಡಲು ಸಾಧ್ಯ? ಬೇರೆಯವರ ಕಡೆ ಹೋದರೂ ಇದೇ ಬೆಲೆ ಹೇಳುತ್ತಾರೆ. ರೈತರನ್ನು ಎಲ್ಲರೂ ಯಾಮಾರಿಸು ತ್ತಾರೆ.

ಇದೊಂದೇ ಅಲ್ಲ. ರೈತ ಎಂದರೆ ಸುಲಿಗೆಗೆ ಸುಲಭದ ವಸ್ತು. ಇದಕ್ಕೆಲ್ಲ ಕಡಿವಾಣ ಹಾಕುವವರು ಯಾರು? ಭೂಮಿಯಿಂದ ಆಕಾಶಕ್ಕೆ ಜಿಗಿಯುವ ಕ್ಷಿಪಣಿಗಳನ್ನ ಶೋಧಿಸಿದ್ದೇವೆ. ಅಂತರಿಕ್ಷವನ್ನೇ ಅಧ್ಯಯನಕ್ಕೊಳಪಡಿಸಿ, ಸಂಶೋಧನೆಗೆ ಮುಂದಾಗಿದ್ದೇವೆ. ಆದರೆ ರೈತನ ಬವಣೆಯ ಬದುಕಿಗೆ ಬಿಡುಗಡೆ ಇಲ್ಲವೇ? ಆತನ ನೋವುಗಳಿಗೆ ಮಾತ್ರೆಗಳಿಲ್ಲ ಎಂಬಂತಾಗಿದೆ!

ಇಂದು ರೈತ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದಾನೆ ಎಂದು ಊಹಿಸಿಕೊಳ್ಳುವುದು ಕಷ್ಟ. ಮಧ್ಯವರ್ತಿಗಳ ಕಾಟ, ಕೂಲಿ ಆಳುಗಳ ಕೊರತೆ, ವಿದ್ಯುತ್ತಿನ ವ್ಯತ್ಯಯ, ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ಬಂದ ಬೆಳೆಗೆ ಸೂಕ್ತ ಕಾಲದಲ್ಲಿ ಕೊಯ್ಲಿಗೆ ಜನ ಸಿಗದಿರುವುದು, ಬೆಳೆ ಕೈಗೆ ಹತ್ತಿದರೂ ಮಾರುಕಟ್ಟೆಗೆ ಕೊಂಡೊಯ್ದಾಗ ಪಿಳ್ಳೆ ನೆಪ ಹೇಳಿ ದರ ಕಡಿಮೆ ಮಾಡುವುದು, ಹೀಗೆ ಒಂದಲ್ಲ ಎರಡಲ್ಲ ಸರಪಳಿಯಂತೆ ಜೋಡಿಸಬಹುದು.

ಬೇಸತ್ತ ಜೀವಗಳು ಬೆಲೆತೆತ್ತು ಹೋಗಿವೆ. ಬೇಸಾಯ ಮಾಡೋನು ದೇಶ ಹಿಡಿದೋದ, ಕೂಲಿ ಮಾಡೋನು ಕುದುರೆ ಏರಿದ ಎಂಬ ಗಾದೆ ಮಾತು ಮತ್ತೆ ಮತ್ತೆ ನೆನಪಾಗುತ್ತದೆ. ಭಾರತದಲ್ಲಿ ಯಾರನ್ನಾದರೂ ಸುಲಭವಾಗಿ ಶೋಷಿಸಬಹುದು ಎಂದರೆ ಅದು ಕೃಷಿಕನನ್ನು. ಪುಣ್ಯವಶಾತ್, ಇನ್ನೂ ಕೃಷಿಗೆ ಆದಾಯ ತೆರಿಗೆ ವಿಧಿಸಿಲ್ಲ.