ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಒಂದು ಕಾಲವಿತ್ತು, ಅಮೆರಿಕ ಅಧ್ಯಕ್ಷ ಸೀನಿದರೆ ವಿಶ್ವಕ್ಕೆ ಶೀತವಾಗುತ್ತಿತ್ತು...ಈಗ ?

ಅಮೆರಿಕದ ಖ್ಯಾತ ರಾಜಕೀಯ ವಿಶ್ಲೇಷಕ ಕ್ರಿಸ್ಟೋಫರ್ ಬರ್ರ‍ೋನ್ ಒಮ್ಮೆ ಹೀಗೆ ಬರೆದಿದ್ದ - ಅಧ್ಯಕ್ಷರು ಭಾಷಣದ ಮಧ್ಯೆ ನೀರು ಕುಡಿದರೆ, ಮಾರನೇ ದಿನದ ಪತ್ರಿಕೆಗಳಲ್ಲಿ ‘ಅಧ್ಯಕ್ಷರ ಗಂಟಲು ಒಣಗಲು ರಷ್ಯಾದ ಒತ್ತಡವೇ ಕಾರಣವೇ?’ ಅಥವಾ ‘ಅಧ್ಯಕ್ಷರು ಬಳಸಿದ ನೀರಿನ ಬಾಟಲಿ ಯಾವ ಕಂಪನಿಯದ್ದು? ಆ ಕಂಪನಿಯ ಷೇರು ಬೆಲೆ ಏರುತ್ತದೆಯೇ?’ ಎಂಬ ಲೇಖನಗಳು ಬರುತ್ತವೆ!

ನೂರೆಂಟು ವಿಶ್ವ

ವರದಿಗಾರ: ‘ಅಧ್ಯಕ್ಷರೇ, ನೀವು ಈ ಬೆಳಗ್ಗೆ ಎರಡು ಬಾರಿ ಸೀನಿದ್ದೀರಿ. ನಿಮ್ಮ ವಿದೇಶಾಂಗ ನೀತಿಯಲ್ಲಿ ಏನಾದರೂ ಬದಲಾವಣೆ ಇದೆಯೇ?’

ಅಮೆರಿಕ ಅಧ್ಯಕ್ಷ: ‘ಇಲ್ಲ, ನನಗೆ ಈ ಸುದೀರ್ಘ ಪತ್ರಿಕಾಗೋಷ್ಠಿಗಳೆಂದರೆ ಅಲರ್ಜಿ ಅಷ್ಟೇ!’ ಇದು ಅಮೆರಿಕದ ಅಧ್ಯಕ್ಷರ ಪ್ರಭಾವ ಮತ್ತು ಮಾಧ್ಯಮಗಳು ಅವರ ಪ್ರತಿಯೊಂದು ಸಣ್ಣ ನಡವಳಿಕೆ ಯನ್ನೂ ವಿಶ್ಲೇಷಿಸುವ ರೀತಿಯನ್ನು ಲೇವಡಿ ಮಾಡಲು ಸೃಷ್ಟಿಸಲಾದ ಒಂದು ಕಾಲ್ಪನಿಕ ರಾಜಕೀಯ ಸಂಭಾಷಣೆ.

ಅಮೆರಿಕ ಅಧ್ಯಕ್ಷರ ಒಂದು ಸಣ್ಣ ನಡೆಯನ್ನು ಸಹ ಜಗತ್ತು ಅತ್ಯಂತ ಗಂಭೀರವಾಗಿ ನೋಡುತ್ತದೆ. ಅವರ ಯಾವ ಹಾವಭಾವವನ್ನು ಸಹ ಯಾರೂ ಗಮನಿಸದೇ ಹೋಗುವುದಿಲ್ಲ. When American President sneezes, the rest of the world catches a cold (ಅಮೆರಿಕ ಅಧ್ಯಕ್ಷರು ಸೀನಿದರೆ, ಇಡೀ ಜಗತ್ತಿಗೆ ಶೀತ ಹಿಡಿಯುತ್ತದೆ) ಎಂಬ ಮಾತು ಜನಜನಿತ.

ಅಮೆರಿಕದ ಅಧ್ಯಕ್ಷರು ಮಾತಾಡಿದರೆ ಅದನ್ನು ಅರ್ಥೈಸುವ ಮಾತು ದೂರವೇ ಉಳಿಯಿತು, ಅವರ ಒಂದು ಸಣ್ಣ ನಡೆ, ಸೀನು, ಕೆಮ್ಮು, ಗಂಟಲ ಕೆರೆತವನ್ನೆಲ್ಲ ಜಗತ್ತು ತನ್ನದೇ ವಿಶಿಷ್ಟ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ ಎಂಬ ಮಾತು ರಾಜತಾಂತ್ರಿಕ ವಲಯಗಳಲ್ಲಿ ಇಂದಿಗೂ ನಂಬಲಾಗಿದೆ.

If a US President clears his throat, three countries call an emergency cabinet meeting and one dictator goes into hiding (ಅಮೆರಿಕ ಅಧ್ಯಕ್ಷರು ಗಂಟಲು ಸರಿಪಡಿಸಿಕೊಂಡರೆ, ಮೂರು ದೇಶಗಳು ತುರ್ತು ಸಂಪುಟ ಸಭೆ ಕರೆಯುತ್ತವೆ ಮತ್ತು ಒಬ್ಬ ಸರ್ವಾಧಿಕಾರಿ ಅಡಗಿಕೊಳ್ಳುತ್ತಾನೆ) ಎಂದು ಪತ್ರಿಕೋದ್ಯಮದ ಕ್ಲಾಸ್ ರೂಮುಗಳಲ್ಲಿ ಹೇಳಲಾಗುತ್ತದೆ.

The President doesn't just cough; he issues a sonic warning to the global stock market (ಅಧ್ಯಕ್ಷರು ಕೇವಲ ಕೆಮ್ಮುವುದಿಲ್ಲ, ಅವರು ಜಾಗತಿಕ ಷೇರು ಮಾರುಕಟ್ಟೆಗೆ ಒಂದು ಧ್ವನಿ ತರಂಗದ ಎಚ್ಚರಿಕೆಯನ್ನು ನೀಡುತ್ತಾರೆ) ಎಂದು ಹೇಳುವುದನ್ನು ಕೇಳಿರಬಹುದು.

ಇದನ್ನೂ ಓದಿ: Vishweshwar Bhat Column: ಕಲಾವಿದ ಶಿಳ್ಳೆಯನ್ನು ಪ್ರತಿಭಟಿಸುತ್ತಾನೆ ಅಂದ್ರೆ ಪ್ರೇಕ್ಷಕರನ್ನು ಅವಮಾನಿಸುತ್ತಾನೆ ಎಂದಲ್ಲ !

ಹಾಗೆಯೇ, ಪಾಶ್ಚಾತ್ಯ ರಾಜತಾಂತ್ರಿಕ ವರದಿಗಾರರ ವಲಯದಲ್ಲಿ ಒಂದು ಮಾತಿದೆ - The President's sneeze is more important than the price of oil (ತೈಲ ಬೆಲೆಗಿಂತಲೂ ಹೆಚ್ಚು ಮುಖ್ಯವಾದುದು ಅಮೆರಿಕ ಅಧ್ಯಕ್ಷರ ಸೀನು). ಶ್ವೇತ ಭವನದ ವರದಿಗಾರರು, Diplomacy is the art of wondering if the President's sneeze was a policy change or just dust in the Oval Office (ಅಧ್ಯಕ್ಷರ ಸೀನು ಒಂದು ಹೊಸ ನೀತಿಯೇ ಅಥವಾ ಓವಲ್ ಆಫೀಸ್‌ನಲ್ಲಿರುವ ಧೂಳಿನ ಪ್ರಭಾವ ವೇ ಎಂದು ಆಲೋಚಿಸುವುದೇ ಅಸಲಿ ರಾಜತಾಂತ್ರಿಕತೆ!) ತಮ್ಮ ತಮ್ಮಲ್ಲಿ ಹಾಸ್ಯಕ್ಕೆ ಹಾಸ್ಯವಾಗಿ, ನಿಜಕ್ಕೆ ನಿಜವಾಗಿ ಮಾತಾಡಿಕೊಳ್ಳುತ್ತಾರಂತೆ.

ಅಮೆರಿಕ ಅಧ್ಯಕ್ಷರ ಸೀನು ಅಥವಾ ಕೆಮ್ಮಿನ ವ್ಯಾಖ್ಯಾನ ಪರಿಧಿ ಇಷ್ಟಕ್ಕೇ ಸೀಮಿತವಾಗಿಲ್ಲ. If the President coughs during a speech, Wall Street puts on a mask, and Tokyo starts looking for a ventilator (ಅಧ್ಯಕ್ಷರು ಭಾಷಣದ ಮಧ್ಯೆ ಕೆಮ್ಮಿದರೆ, ವಾಲ್ ಸ್ಟ್ರೀಟ್ ಮಾಸ್ಕ್ ಧರಿಸುತ್ತದೆ ಮತ್ತು ಟೋಕಿಯೋ ವೆಂಟಿಲೇಟರ್ ಹುಡುಕಲು ಶುರು ಮಾಡುತ್ತದೆ!) ಎಂದು ಹೇಳುವುದನ್ನು ಕೇಳಿರ ಬಹುದು.

ಹಾಗೆಯೇ, The U.S. President is the only person whose sneeze is translated into 50 langua ges and analyzed for hidden military codes (ಅಮೆರಿಕ ಅಧ್ಯಕ್ಷರು, ಸೀನಿದರೆ ಅದನ್ನು 50 ಭಾಷೆ ಗಳಿಗೆ ಅನುವಾದಿಸಿ, ಅದರಲ್ಲಿ ಯಾವುದಾದರೂ ಗುಪ್ತ ಮಿಲಿಟರಿ ಕೋಡ್ ಇದೆಯೇ ಎಂದು ಹುಡುಕುವ ಏಕೈಕ ವ್ಯಕ್ತಿ!) ಎಂದು ಹೇಳುವುದು ಅತಿಶಯೋಕ್ತಿಯಾಗಿ ಕಾಣಿಸಬಹುದು.

ಆದರೆ ಈ ರೀತಿಯ ಮಾತು ಪ್ರಚಲಿತದಲ್ಲಿರುವುದು ವಾಸ್ತವಿಕ. ಈಗ ಸಾಮಾಜಿಕ ಜಾಲತಾಣಗಳ ಜನಪ್ರಿಯತೆಯ ದಿನಗಳಲ್ಲಿ ಇನ್ನೊಂದು ಮಾತನ್ನು ತಮಾಷೆಯಾಗಿ ಹೇಳುವುದುಂಟು - ಹಿಂದೆಲ್ಲ ಕೆಮ್ಮು ಒಂದು ಕೋಣೆಗೆ ಸೀಮಿತವಾಗಿರುತ್ತಿತ್ತು, ಆದರೆ ಇಂದು ಅಧ್ಯಕ್ಷರು ಟಿಶ್ಯೂ ಪೇಪರ್ ಕೈಗೆತ್ತಿ ಕೊಳ್ಳುವ ಮೊದಲೇ ಅವರ ಸೀನು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿರುತ್ತದೆ.

ಅಮೆರಿಕ ಅಧ್ಯಕ್ಷರ ಪ್ರಾಮುಖ್ಯವನ್ನು ಇನ್ನಷ್ಟು ವೈಭವೀಕರಿಸಲು, ಶ್ವೇತಭವನದ ಅಧಿಕಾರಿಗಳಲ್ಲಿ ಒಂದು ತಮಾಷೆಯ ಮಾತಿದೆ - When the President has a headache, the Secretary of State takes an aspirin (ಅಧ್ಯಕ್ಷರಿಗೆ ತಲೆನೋವಾದರೆ, ವಿದೇಶಾಂಗ ಕಾರ್ಯದರ್ಶಿ ಆಸ್ಪಿರಿನ್ ಮಾತ್ರೆ ನುಂಗುತ್ತಾರೆ - ಅಂದರೆ ಅಷ್ಟು ಮುನ್ನೆಚ್ಚರಿಕೆ ವಹಿಸುತ್ತಾರೆ).

trump-jpg ಒಕ

ಅಮೆರಿಕದ ಖ್ಯಾತ ರಾಜಕೀಯ ವಿಶ್ಲೇಷಕ ಕ್ರಿಸ್ಟೋಫರ್ ಬರ್ರ‍ೋನ್ ಒಮ್ಮೆ ಹೀಗೆ ಬರೆದಿದ್ದ - ಅಧ್ಯಕ್ಷರು ಭಾಷಣದ ಮಧ್ಯೆ ನೀರು ಕುಡಿದರೆ, ಮಾರನೇ ದಿನದ ಪತ್ರಿಕೆಗಳಲ್ಲಿ ‘ಅಧ್ಯಕ್ಷರ ಗಂಟಲು ಒಣಗಲು ರಷ್ಯಾದ ಒತ್ತಡವೇ ಕಾರಣವೇ?’ ಅಥವಾ ‘ಅಧ್ಯಕ್ಷರು ಬಳಸಿದ ನೀರಿನ ಬಾಟಲಿ ಯಾವ ಕಂಪನಿಯದ್ದು? ಆ ಕಂಪನಿಯ ಷೇರು ಬೆಲೆ ಏರುತ್ತದೆಯೇ?’ ಎಂಬ ಲೇಖನಗಳು ಬರುತ್ತವೆ!

ಹಾಗೆ ಮುಂದುವರಿದು ಆತ, An American President doesn't catch a cold; he tests the world's immune system (ಅಮೆರಿಕದ ಅಧ್ಯಕ್ಷರಿಗೆ ಶೀತ ಹಿಡಿಯುವು ದಿಲ್ಲ; ಅವರು ಜಗತ್ತಿನ ರೋಗ ನಿರೋ ಧಕ ಶಕ್ತಿಯನ್ನು ಪರೀಕ್ಷಿಸುತ್ತಾರೆ) ಎಂದು ತುಸು ಅತಿರಂಜಿತವಾಗಿ ಬರೆದಿದ್ದ.

ಶೀತಲ ಸಮರದ ಸಮಯದಲ್ಲಿ If the President sneezes in the Oval Office, someone in the Kremlin says 'Bless you' just to be safe (ಅಧ್ಯಕ್ಷರು ಓವಲ್ ಆಫೀಸ್‌ನಲ್ಲಿ ಸೀನಿದರೆ, ರಷ್ಯಾದ ಕ್ರೆಮ್ಲಿನ್‌ನಲ್ಲಿ ಯಾರೋ ಒಬ್ಬರು ಸುರಕ್ಷತೆಯ ದೃಷ್ಟಿಯಿಂದ ‘ಬ್ಲೆಸ್ ಯೂ’ ಅಂತಾರೆ) ಎಂಬ ಮಾತು ರಾಜತಾಂತ್ರಿಕ ಪಾರ್ಟಿಗಳಲ್ಲಿ ಕೇಳಿ ಬರುತ್ತಿತ್ತು.

ಅಂದರೆ ಅಮೆರಿಕದ ಅಧ್ಯಕ್ಷನ ಸೀನು, ಕೆಮ್ಮು ಮತ್ತು ಗಂಟಲು ಕೆರೆತವನ್ನೇ ಜಗತ್ತು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ತನಗೆ ಬೇಕಾದಂತೆ ಅರ್ಥ ಮಾಡಿಕೊಂಡು ತಲೆ ಕೆಡಿಸಿಕೊಳ್ಳುತ್ತದೆ. ಇನ್ನು ಆತ ಮಾತಾಡಿದರೆ? ಇಡೀ ಜಗತ್ತು ಅದನ್ನು ಕೇಳಿಸಿಕೊಳ್ಳದೇ ಹೋಗುವುದಿಲ್ಲ. ಅಮೆರಿಕ ಅಧ್ಯಕ್ಷರ ಮಾತುಗಳನ್ನು ಉಪೇಕ್ಷಿಸುವ ಮಾತೇ ಇಲ್ಲ. ಆದರೆ ಆ ಸ್ಥಾನದಲ್ಲಿ ಕುಳಿತವರೆಲ್ಲ ತಮ್ಮ ಪದವಿಗೆ ತಕ್ಕುದಾದ ರೀತಿಯಲ್ಲಿ ಮಾತಾಡಿದ್ದಾರೆ ಅಥವಾ ಘನತೆಯಿಂದ ವರ್ತಿಸಿದ್ದಾರೆ ಎಂದೇನೂ ಇಲ್ಲ.

ಅಮೆರಿಕ ಅಧ್ಯಕ್ಷರ ತಿಕ್ಕಲು ನಡವಳಿಕೆಗೆ ದೊಡ್ಡ ಇತಿಹಾಸವೇ ಇದೆ. ಈ ಮಾತು ಹೇಳುವಾಗ ನನಗೆ ನೆನಪಾಗುವವನು ಅಮೆರಿಕದ ಏಳನೇ ಅಧ್ಯಕ್ಷ ಆಂಡ್ರ್ಯೂ ಜಾಕ್ಸನ್ (1829- 1837). ಆತ ಇತಿಹಾಸ ದಲ್ಲಿ ಅತ್ಯಂತ ವಿವಾದಾತ್ಮಕ ಮತ್ತು ಆಕ್ರಮಣಕಾರಿ ನಾಯಕ ಎಂದು ಹೆಸರಾದವನು. ಅವನ ವ್ಯಕ್ತಿತ್ವವು ‘ಮೊದಲು ಆಕ್ರಮಣ, ನಂತರ ಉಪಶಮನ’ ಎಂಬ ಮಾತಿಗೆ ಮಾದರಿಯಾಗಿತ್ತು.

ಜಾಕ್ಸನ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಹೆನ್ರಿ ಕ್ಲೇ ಮತ್ತು ಜಾನ್ ಸಿ.ಕ್ಯಾಲ್ಹೋನ್ ಎಂಬ ಇಬ್ಬರು ಪ್ರಭಾವಿ ನಾಯಕರಾಗಿದ್ದರು. ಜಾಕ್ಸನ್ ಆರ್ಥಿಕ ನೀತಿಗಳನ್ನು ಕ್ಲೇ ಕಟುವಾಗಿ ವಿರೋಧಿಸುತ್ತಿದ್ದ. ಇನ್ನು ಕ್ಯಾಲ್ಹೋನ್, ಜಾಕ್ಸನ್ ಅಧ್ಯಕ್ಷನಾಗಿದ್ದಾಗ ಉಪಾಧ್ಯಕ್ಷನಾಗಿದ್ದ. ಕೆಲವು ರಾಜ್ಯಗಳ ಹಕ್ಕುಗಳ ವಿಷಯದಲ್ಲಿ ಅಧ್ಯಕ್ಷರ ವಿರುದ್ಧವೇ ಆತ ತಿರುಗಿ ಬಿದ್ದಿದ್ದ.

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನಡುವೆ ಸದಾ ಜಟಾಪಟಿ. ಅಧಿಕಾರದಿಂದ ಕೆಳಗಿಳಿಯುವ ಮುನ್ನ ಜಾಕ್ಸನ್, ‘ನನ್ನ ಜೀವನದಲ್ಲಿ ನನಗೆ ಎರಡು ವಿಷಾದಗಳಿವೆ. ಮೊದಲನೆಯದು, ನಾನು ಹೆನ್ರಿ ಕ್ಲೇನ ನ್ನು ಗುಂಡಿಕ್ಕಿ ಕೊಲ್ಲಲಾಗಲಿಲ್ಲ ಎಂಬುದು ಮತ್ತು ಎರಡನೆಯದು, ಕ್ಯಾಲ್ಹೋನ್ʼನನ್ನು ಗಲ್ಲಿಗೇರಿಸ ಲಿಲ್ಲವಲ್ಲ ಎಂಬುದು’ ಎಂದು ಬಹಿರಂಗವಾಗಿ ಹೇಳಿದ್ದು ಆ ಕಾಲಕ್ಕೆ ದೊಡ್ಡ ವಿವಾದ ವನ್ನುಂಟು ಮಾಡಿತ್ತು.

ಇದು ಕೇವಲ ಬಾಯ್ತಪ್ಪಿನ ಮಾತಾಗಿರಲಿಲ್ಲ. ಜಾಕ್ಸನ್ ತನ್ನ ಜೀವನದಲ್ಲಿ ನೂರಕ್ಕೂ ಹೆಚ್ಚು ಇಂಥ ಜಟಾಪತಿಗಳಲ್ಲಿ ಭಾಗವಹಿಸಿದ್ದ. ತನಗೆ ಇಷ್ಟವಿಲ್ಲದವರನ್ನು ದೈಹಿಕವಾಗಿ ಎದುರಿಸಲು ಹಿಂಜರಿ ಯುತ್ತಿರಲಿಲ್ಲ. ಕೆಲವು ಘಟನೆಗಳಲ್ಲಿ ತಾನು ಅಮೆರಿಕ ಅಧ್ಯಕ್ಷ ಎಂಬುದನ್ನೂ ಮರೆತು ತೀರಾ ಕ್ಷುಲ್ಲಕವಾಗಿ ಮಾತಾಡುತ್ತಿದ್ದ ಮತ್ತು ವರ್ತಿಸುತ್ತಿದ್ದ.

ಅಮೆರಿಕದ ಮೂವತ್ತಾರನೇ ಅಧ್ಯಕ್ಷ ಲಿಂಡನ್ ಬಿ.ಜಾನ್ಸನ್ ಶ್ವೇತಭವನದ ಇತಿಹಾಸದಲ್ಲಿಯೇ ಅತ್ಯಂತ ವಿಚಿತ್ರ ಮತ್ತು ಒರಟು ವ್ಯಕ್ತಿತ್ವದ ನಾಯಕ. ರಾಜಕೀಯ ಚಾತುರ್ಯದಲ್ಲಿ ಎಷ್ಟು ನಿಸ್ಸೀಮನೋ, ತನ್ನ ನಡೆವಳಿಕೆಯಲ್ಲಿ ಅಷ್ಟೇ ಅಸಭ್ಯ ಮತ್ತು ಸ್ವೇಚ್ಛಾಚಾರಿಯಾಗಿದ್ದ. ಅವನ ವರ್ತನೆಗಳು ಹಲವು ಬಾರಿ ಅಧ್ಯಕ್ಷೀಯ ಪೀಠದ ಘನತೆಯನ್ನು ಬೀದಿಗೆ ತಂದಿದ್ದವು.

ಜಾನ್ಸನ್ ಅಧಿಕಾರಿಗಳನ್ನು ಹತೋಟಿಯಲ್ಲಿಡಲು ‘ಜಾನ್ಸನ್ ಟ್ರೀಟ್ಮೆಂಟ್’ ಎಂಬ ತಂತ್ರ ಬಳಸು ತ್ತಿದ್ದ. ಅಂದರೆ, ಎತ್ತರದ ವ್ಯಕ್ತಿಯಾಗಿದ್ದ ಆತ ಅಧಿಕಾರಿಗಳ ತೀರಾ ಹತ್ತಿರ ನಿಂತು, ಅವರ ಕಣ್ಣಲ್ಲಿ ಕಣ್ಣಿಟ್ಟು, ಅಸಭ್ಯ ಪದಗಳನ್ನು ಬಳಸುತ್ತಾ ಬೆದರಿಸುತ್ತಿದ್ದ. ಇನ್ನು ಪತ್ರಕರ್ತರ ಮುಂದೆ ಶರ್ಟ್ ಬಿಚ್ಚಿ ತನ್ನ ಶಸ್ತ್ರಚಿಕಿತ್ಸೆಯ ಗುರುತನ್ನು ತೋರಿಸುವುದು ಅಥವಾ ತನ್ನ ಸಾಕು ನಾಯಿಗಳ ಕಿವಿ ಹಿಡಿದು ಎತ್ತುವ ವಿಚಿತ್ರ ವರ್ತನೆಗಳನ್ನು ಮಾಡುತ್ತಿದ್ದ.

ಲಿಂಡನ್ ಜಾನ್ಸನ್ ನ ಅತ್ಯಂತ ಕುಖ್ಯಾತ ಅಭ್ಯಾಸವೆಂದರೆ ಶೌಚಾಲಯದ ರಾಜಕೀಯ. ಜಾನ್ಸನ್ ಕೆಲಸದ ಒತ್ತಡದ ಸಂದರ್ಭದಲ್ಲಿ, ಶೌಚಾಲಯದಲ್ಲಿ ಕುಳಿತಿದ್ದಾಗಲೂ ಅಧಿಕಾರಿಗಳನ್ನು ಅಲ್ಲಿಗೇ ಕರೆಸಿಕೊಳ್ಳುತ್ತಿದ್ದ. ಶೌಚಾಲಯದ ಬಾಗಿಲು ತೆರೆದಿಟ್ಟುಕೊಂಡೇ ಪ್ರಮುಖ ರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸುತ್ತಾ ಆದೇಶ ನೀಡುತ್ತಿದ್ದ. ಇದು ಅವನಿಗೆ ಕೆಲಸದ ಮೇಲಿದ್ದ ಅತಿಯಾದ ಆಸಕ್ತಿಯೋ ಅಥವಾ ಎದುರಿಗಿದ್ದ ಅಽಕಾರಿಯನ್ನು ಅವಮಾನಿಸುವ ತಂತ್ರವೋ ಎಂಬುದು ಇಂದಿಗೂ ಚರ್ಚೆ ಯ ವಿಷಯ. ಅವನ ಭಾಷೆಯಂತೂ ಅತ್ಯಂತ ಒರಟು, ಕೆಟ್ಟದ್ದಾಗಿತ್ತು.

ಆತ ಬಳಸುವ ಪದಗಳನ್ನು ಸಭ್ಯರು ಬಳಸುವುದಿರಲಿ, ಕೇಳಲೂ ಮುಜುಗರ ಪಡುತ್ತಿದ್ದರು. ಸಾರ್ವಜನಿಕವಾಗಿ ಅತ್ಯಂತ ಸುಸಂಸ್ಕೃತವಾಗಿ ಕಾಣಿಸಿಕೊಳ್ಳಬೇಕಿದ್ದ ಅಮೆರಿಕ ಅಧ್ಯಕ್ಷ, ಖಾಸಗಿ ಸಭೆಗಳಲ್ಲಿ ಕೆಟ್ಟ ಪದಗಳನ್ನು ಬಳಸಿ ವಿರೋಧಿಗಳನ್ನು ನಿಂದಿಸುತ್ತಿದ್ದ.

ರಿಚರ್ಡ್ ನಿಕ್ಸನ್ ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಬುದ್ಧಿವಂತ, ಆದರೆ ಅಷ್ಟೇ ಸಂಶಯಾಸ್ಪದ ವ್ಯಕ್ತಿತ್ವದ ಅಧ್ಯಕ್ಷರಾಗಿ ಗುರುತಿಸಿಕೊಂಡವ. ಸಾರ್ವಜನಿಕವಾಗಿ ಆತ ಅತ್ಯಂತ ಗಂಭೀರ, ಸುಸಂಸ್ಕೃತ ಮತ್ತು ಮುತ್ಸದ್ದಿ ನಾಯಕನಂತೆ ಕಾಣಿಸಿಕೊಳ್ಳುತ್ತಿದ್ದ. ಆದರೆ ‘ವಾಟರ್ ಗೇಟ್’ ಹಗರಣದ ತನಿಖೆಯ ಭಾಗವಾಗಿ ಹೊರ ಬಂದ ಅವನ ಶ್ವೇತಭವನದ ರಹಸ್ಯ ಧ್ವನಿಮುದ್ರಿಕೆಗಳು ( Nixon Tapes), ಅವನ ವ್ಯಕ್ತಿತ್ವದ ಕರಾಳ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟವು.

ಈ ಟೇಪ್‌ಗಳಲ್ಲಿ ನಿಕ್ಸನ್ ಬಳಸಿದ ಭಾಷೆ ಸಭ್ಯತೆಯ ಎಲ್ಲ ಗೆರೆಗಳನ್ನು ದಾಟಿತ್ತು. ಯಹೂದಿಗಳು, ಕಪ್ಪು ವರ್ಣಿಯರು ಮತ್ತು ಐರಿಶ್ ಮೂಲದವರ ಬಗ್ಗೆ ಅತ್ಯಂತ ಹಗುರವಾಗಿ ಮತ್ತು ಜನಾಂಗೀಯ ನಿಂದನೆಯ ಪದಗಳನ್ನು (Racial Slurs) ಬಳಸಿ ಮಾತನಾಡುತ್ತಿದ್ದ.

ವಿಶೇಷವಾಗಿ, ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಬಗ್ಗೆ ನಿಕ್ಸನ್ ಬಳಸಿದ ಪದಗಳು ಅತ್ಯಂತ ಅಸಭ್ಯವಾಗಿದ್ದವು (ಅವರನ್ನು ‘ಮುದಿ ಮಾಟಗಾತಿ’ ಎಂಬರ್ಥದಲ್ಲಿ ನಿಂದಿಸಿದ್ದ). ಇದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದ್ವೇಷವಾಗಿರದೇ, ಅವನಲ್ಲಿದ್ದ ಜನಾಂಗೀಯ ಪೂರ್ವಗ್ರಹದ ಸಂಕೇತವಾಗಿತ್ತು.

ನಿಕ್ಸನ್ ಈ ದ್ವಿಮುಖ ವ್ಯಕ್ತಿತ್ವ ಜಗತ್ತನ್ನೇ ಬೆಚ್ಚಿಬೀಳಿಸಿತು. ಹೊರಗೆ ಶಾಂತಿ ಮತ್ತು ರಾಜತಾಂತ್ರಿಕತೆ ಯ ಬಗ್ಗೆ ಮಾತನಾಡುವ ಜಗತ್ತಿನ ಅತಿ ಪ್ರಬಲ ವ್ಯಕ್ತಿ, ಒಳಗಡೆ ಇಷ್ಟೊಂದು ಕೀಳು ಮಟ್ಟದ ಆಲೋಚನೆಗಳನ್ನು ಹೊಂದಿದ್ದಾನಲ್ಲ ಎಂದು ಇಡೀ ಜಗತ್ತು ಬೆಚ್ಚಿ ಬಿದ್ದಿತು. ಈ ಟೇಪ್‌ಗಳು ಕೇವಲ ರಾಜಕೀಯ ಭ್ರಷ್ಟಾಚಾರವನ್ನು ಮಾತ್ರವಲ್ಲದೇ, ಒಬ್ಬ ಅಧ್ಯಕ್ಷರ ನೈತಿಕ ಪತನವನ್ನೂ ಸಾಬೀತುಪಡಿಸಿದವು.

ಅಂತಿಮವಾಗಿ, ಈ ಧ್ವನಿಮುದ್ರಿಕೆಗಳೇ ಅವರ ಪದಚ್ಯುತಿಗೆ ಪ್ರಮುಖ ಕಾರಣವಾದವು. ಅಮೆರಿಕದ ಇತಿಹಾಸದಲ್ಲಿ ರಾಜೀನಾಮೆ ನೀಡಿದ ಮೊದಲ ಅಧ್ಯಕ್ಷ ಎಂಬ ಕಪ್ಪುಚುಕ್ಕೆಯೊಂದಿಗೆ ನಿಕ್ಸನ್ ಅಽಕಾರದಿಂದ ನಿರ್ಗಮಿಸಿದ.

ನಿಕ್ಸನ್ ಆ ಸ್ಥಾನಕ್ಕೆ ತಕ್ಕುದಾದ ವ್ಯಕ್ತಿಯಾಗಿರಲಿಲ್ಲ ಎಂದು ಒಂದು ಕಾಲದ ಅವನ ಆಪ್ತರೇ ಬಹಿರಂಗವಾಗಿ ಮಾತಾಡಲಾರಂಭಿಸಿದರು. ಅಮೆರಿಕದ ಅಧ್ಯಕ್ಷರ ಅತ್ಯಂತ ಚಾಣಾಕ್ಷ ಹಾಗೂ ಹಾಸ್ಯಪ್ರಜ್ಞೆ ಹೊಂದಿದ್ದ ರೋನಾಲ್ಡ್ ರೇಗನ್ ಮಾಡಿದ ಒಂದು ಸಣ್ಣ ‘ತಮಾಷೆ’ ಜಗತ್ತನ್ನು ಅಣುಯುದ್ಧದ ಅಂಚಿಗೆ ತಂದು ನಿಲ್ಲಿಸಿತ್ತು. ಅದು ಆಗಸ್ಟ್ 11, 1984ರ ಶನಿವಾರದ ದಿನ.

ರೇಗನ್ ವಾರಾಂತ್ಯದ ರೇಡಿಯೋ ಭಾಷಣಕ್ಕೆ ಸಿದ್ಧನಾಗುತ್ತಿದ್ದ. ಭಾಷಣ ಆರಂಭವಾಗುವ ಮುನ್ನ ಮೈಕ್ ಪರೀಕ್ಷಿಸುವಾಗ, ಗಂಭೀರವಾಗಿ ಓದಬೇಕಿದ್ದ ಸಾಲುಗಳ ಬದಲಿಗೆ ತಮಾಷೆಯಾಗಿ ಹೀಗೆ ಹೇಳಿದ - ‘ನನ್ನ ಪ್ರೀತಿಯ ಅಮೆರಿಕನ್ನರೇ, ರಷ್ಯಾವನ್ನು ಶಾಶ್ವತವಾಗಿ ಅಮಾನ್ಯಗೊಳಿಸುವ ( Outlaw) ಶಾಸನಕ್ಕೆ ನಾನು ಇಂದು ಸಹಿ ಹಾಕಿದ್ದೇನೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ.

ನಾವು ಮುಂದಿನ ಐದು ನಿಮಿಷಗಳಲ್ಲಿ ಬಾಂಬ್ ದಾಳಿ ಆರಂಭಿಸಲಿದ್ದೇವೆ. ’ರೇಗನ್ ಇದನ್ನು ಕೇವಲ ಅಲ್ಲಿದ್ದ ತಂತ್ರಜ್ಞರ ಮನರಂಜನೆಗಾಗಿ ಹೇಳಿದ್ದ. ಆದರೆ ಅವನಿಗೆ ಗೊತ್ತಿಲ್ಲದ ವಿಷಯ ವೆಂದರೆ ಆ ಸಮಯದಲ್ಲಿ ಮೈಕ್ ‘ಲೈವ್’ ಆಗಿತ್ತು ಮತ್ತು ಅವನ ಈ ಮಾತುಗಳು ಪ್ರಸಾರವಾಗಿ ದ್ದವು.

ಶೀತಲ ಸಮರ ಉತ್ತುಂಗದಲ್ಲಿದ್ದ ಆ ಕಾಲದಲ್ಲಿ, ಅಮೆರಿಕದ ಅಧ್ಯಕ್ಷರಿಂದ ಬಂದ ಇಂಥ ಹೇಳಿಕೆ ಇಡೀ ಜಗತ್ತಿನಲ್ಲಿ ಸಂಚಲನ ಮೂಡಿಸಿತು. ಸೋವಿಯತ್ ಒಕ್ಕೂಟವು ತಕ್ಷಣವೇ ತನ್ನ ಸೇನೆಯನ್ನು ಹೈಅಲರ್ಟ್ ಸ್ಥಿತಿಯಲ್ಲಿ ಇರಿಸಿತು. ಅಮೆರಿಕ ನಿಜವಾಗಿಯೂ ಅಣುಬಾಂಬ್ ದಾಳಿ ಮಾಡಲಿದೆ ಎಂದು ಭಾವಿಸಿದ ರಷ್ಯಾದ ನಾಯಕರು ಪ್ರತಿದಾಳಿಗೆ ಸಿದ್ಧರಾದರು.

ಪರಿಸ್ಥಿತಿ ಎಷ್ಟು ಉದ್ವಿಗ್ನವಾಯಿತೆಂದರೆ, ಜಾಗತಿಕ ಮಾರುಕಟ್ಟೆಗಳು ಕುಸಿದವು ಮತ್ತು ಜನರು ಭಯಭೀತರಾದರು. ನಂತರ ಶ್ವೇತಭವನವು ಇದು ಕೇವಲ ಒಂದು ‘ತಮಾಷೆಯ ಪ್ರಹಸನ’ ಎಂದು ಸ್ಪಷ್ಟನೆ ನೀಡಬೇಕಾಯಿತು. ಈ ಘಟನೆಯು ಒಂದು ಪ್ರಮುಖ ಪಾಠವನ್ನು ಕಲಿಸಿತು. ಅಮೆರಿಕದ ಅಧ್ಯಕ್ಷರ ಪೀಠದಲ್ಲಿ ಕುಳಿತ ವ್ಯಕ್ತಿಯ ಪ್ರತಿ ಪದವೂ ಜಗತ್ತಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ರೇಗನ್ ಈ ‘ಮಿಲಿಟರಿ ಜೋಕ್’ ಅಧ್ಯಕ್ಷೀಯ ಘನತೆಗೆ ಮಸಿ ಬಳಿಯಿತಲ್ಲದೇ, ಅಣು ಬಾಂಬ್‌ನಂಥ ಗಂಭೀರ ವಿಷಯದ ಬಗ್ಗೆ ತಮಾಷೆ ಮಾಡುವುದು ಎಷ್ಟು ಅಪಾಯಕಾರಿ ಎಂಬು ದನ್ನು ತಿಳಿಸಿತು.

ಅಮೆರಿಕದ ಅಧ್ಯಕ್ಷ ಸ್ಥಾನ ಎನ್ನುವುದು ಕೇವಲ ಅಧಿಕಾರವಲ್ಲ, ಅದು ಜಾಗತಿಕ ಪ್ರಜಾಪ್ರಭುತ್ವದ ಅತಿ ದೊಡ್ಡ ಸಂಕೇತ. ಅಬ್ರಹಾಂ ಲಿಂಕನ್, ಟ್ರೂಮನ್, ಎಫ್.ಡಿ. ರೂಸ್‌ವೆಲ್ಟ್ , ಕೆನಡಿ ಅಥವಾ ಒಬಾಮಾ ಅವರಂಥ ನಾಯಕರು ತಮ್ಮ ಮಾತುಗಳ ಮೂಲಕ ಜಗತ್ತನ್ನು ಪ್ರಭಾವಿಸುತ್ತಿದ್ದರು. ಅವರ ಮಾತುಗಳಲ್ಲಿ ತೂಕವಿರುತ್ತಿತ್ತು, ಪ್ರತಿ ಪದವೂ ಅಳೆದು ತೂಗಿ ಬರುತ್ತಿತ್ತು. ‌

ಅನುಚಿತವಾದ ಮತ್ತು ಅನಗತ್ಯವಾದ ಯಾವ ಮಾತುಗಳೂ ಅವರ ಬಾಯಿಂದ ಬರುತ್ತಿರಲಿಲ್ಲ. ಆದರೆ ಡೊನಾಲ್ಡ್ ಟ್ರಂಪ್ ಆಗಮನದೊಂದಿಗೆ ಅಮೆರಿಕ ಪ್ರಜಾಪ್ರಭುತ್ವ ಹಾಕಿ ಕೊಟ್ಟ ಎಲ್ಲ ಶ್ರೇಷ್ಠ ಮತ್ತು ಉದಾತ್ತ ಸಂಪ್ರದಾಯಗಳೆಲ್ಲ ಮಣ್ಣು ಪಾಲಾಗಿವೆ. ಟ್ರಂಪ್ ದೊಡ್ಡ ವೈರಿ ಅಂದರೆ ಅವನ ಮಾತು. ಅವನು ಮಾತಿಗೆ ನಿಂತರೆ ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಹೇಳಲಾಗುವುದಿಲ್ಲ.

ಆದರೆ ಟ್ರಂಪ್ ತನ್ನ ವಿರೋಧಿಗಳನ್ನು ಹೀಯಾಳಿಸುವುದು, ಮಾಧ್ಯಮಗಳನ್ನು ‘ಜನರ ಶತ್ರು’ ಎಂದು ಕರೆಯುವುದು ಮತ್ತು ಜಾಗತಿಕ ವೇದಿಕೆಗಳಲ್ಲಿ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುವುದು ಸಾಮಾನ್ಯವಾಗಿ ಹೋಗಿದೆ. ಅವನ ಟ್ವೀಟ್, ರಾಜಕೀಯ ಮತ್ತು ಸಾರ್ವಜನಿಕ ವೇದಿಕೆ ಗಳ ಮೇಲಿನ ಭಾಷಣಗಳು ಅಧ್ಯಕ್ಷ ಸ್ಥಾನಕ್ಕೆ ಇರಬೇಕಾದ ಘನತೆ ಮತ್ತು ಗಾಂಭೀರ್ಯವನ್ನು ಕುಂದಿಸಿಬಿಟ್ಟಿವೆ.

ಟ್ರಂಪ್‌ಗೆ ಯಾರ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ಇಲ್ಲ. ಫ್ರೆಂಚ್ ಅಧ್ಯಕ್ಷ ಇಮಾನ್ಯುಯೆಲ್ ಮೆಕ್ರಾನ್ ಬಗ್ಗೆ ಮಾತಾಡುತ್ತಾ, ‘ಆತ ಹೆಂಡತಿಗೆ ಹೆದರುತ್ತಾನೆ, ಆತನ ಹೆಂಡತಿ ಕೆನ್ನೆಗೆ ಹೊಡೆದ ಪರಿಣಾಮ ಆತನ ದವಡೆ ಊದಿಕೊಂಡಿತ್ತು’ ಎಂದು ಹೇಳಿದ್ದು ಆತನ ಬಾಯಿ, ಬಚ್ಚಲ ಮನೆ ಎಂಬುದನ್ನು ಸಾಬೀತುಪಡಿಸಿತು.

ಇರಾನ್ ವಿರುದ್ಧದ ಯುದ್ಧದ ನಂತರ ಟ್ರಂಪ್ ಇಡೀ ಜಗತ್ತಿನಲ್ಲಿ ಅತ್ಯಂತ ವಿವಾದಾಸ್ಪದ, ಅಪಾಯಕಾರಿ ಮತ್ತು ತಿಕ್ಕಲು ಮನುಷ್ಯ ಎಂದು ಕರೆಯಿಸಿಕೊಂಡಿದ್ದಾನೆ. ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಅಮೆರಿಕದ ಮಿತ್ರ ರಾಷ್ಟ್ರಗಳಾದ ಜರ್ಮನಿ, ಫ್ರಾನ್ಸ್ ಮತ್ತು ಕೆನಡಾಗಳ ಜತೆಗಿನ ಸಂಬಂಧವೂ ಹದಗೆಟ್ಟಿತು. ಜಾಗತಿಕ ನಾಯಕರು ಟ್ರಂಪ್ ನಡವಳಿಕೆಯನ್ನು ಕಂಡು ಮುಸಿಮುಸಿ ನಗುವಂತಾಯಿತು. ಹವಾಮಾನ ಬದಲಾವಣೆಯ ಒಪ್ಪಂದದಿಂದ ಹೊರ ಬರುವುದು, ನ್ಯಾಟೊ ದಿಂದ ಹೊರ ಬರುವುದು ಅಥವಾ ವಿಶ್ವ ಆರೋಗ್ಯ ಸಂಸ್ಥೆಯಂಥ ಸಂಸ್ಥೆಗಳ ಬಗ್ಗೆ ಹಗುರವಾಗಿ ಮಾತನಾಡುವುದು ಅಮೆರಿಕದ ನೈತಿಕ ನಾಯಕತ್ವವನ್ನೇ ಪ್ರಶ್ನಿಸುವಂತೆ ಮಾಡಿತು.

ಅಧ್ಯಕ್ಷರ ಮಾತು ಎಂದರೆ ಅದು ಶಾಸನವೆಂಬ ನಂಬಿಕೆ ಇತ್ತು. ಆದರೆ ಟ್ರಂಪ್ ಅವಧಿಯಲ್ಲಿ ‘ಪರ್ಯಾಯ ಸತ್ಯ’ (Alternative Facts) ಎಂಬ ಹೊಸ ಪರಿಕಲ್ಪನೆ ಹುಟ್ಟಿಕೊಂಡಿತು. ಅವನು ಹೇಳುವ ಅಂಕಿ-ಅಂಶಗಳು, ಇತಿಹಾಸದ ವ್ಯಾಖ್ಯಾನಗಳು ಅಥವಾ ವೈಜ್ಞಾನಿಕ ಸಂಗತಿಗಳು ವಾಸ್ತವ ಕ್ಕೆ ದೂರವಾಗಿದ್ದವು. ಜಗತ್ತಿನ ಅತಿ ಪ್ರಬಲ ವ್ಯಕ್ತಿ ಸುಳ್ಳುಗಳನ್ನು ಸತ್ಯವೆಂದು ನಂಬಿಸಲು ಹೊರಟಾಗ, ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯೇ ನಗುವಂತಾಯಿತು. ಇದು ಅಧ್ಯಕ್ಷ ಸ್ಥಾನದ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಹಾಳುಮಾಡಿತು.

ಟ್ರಂಪ್ ಅವರ ಇಂದಿನ ಅತಿರೇಕದ ಮಾತುಗಳನ್ನು ಗಮನಿಸಿದರೆ, ಅಮೆರಿಕದ ಇತಿಹಾಸದಲ್ಲಿಯೇ ಅಧ್ಯಕ್ಷ ಸ್ಥಾನದ ಘನತೆಯನ್ನು ಈ ರೀತಿ ಮೂರಾಬಟ್ಟೆ ಮಾಡಿದವರು ಯಾರೂ ಇರಲಿಕ್ಕಿಲ್ಲ. ಅಽಕಾರ ಮತ್ತು ಅಹಂಕಾರ ಸೇರಿದಾಗ ಒಬ್ಬ ನಾಯಕ ಹೇಗೆ ವರ್ತಿಸಬಹುದು ಎಂಬುದಕ್ಕೆ ಟ್ರಂಪ್ ನಡವಳಿಕೆಗಳೇ ಸಾಕ್ಷಿ.

ಅಧ್ಯಕ್ಷ ಸ್ಥಾನ ಎನ್ನುವುದು ಒಂದು ಗೌರವಾನ್ವಿತ ಪೀಠ. ಆದರೆ ಟ್ರಂಪ್ ಅದನ್ನು ಒಂದು ‘ರಿಯಾಲಿಟಿ ಶೋ’ ರೀತಿ ನಡೆಸಿಕೊಂಡಿದ್ದಾನೆ. ಅವನಿಗೆ ಮಾಧ್ಯಮಗಳ ಗಮನ ಸೆಳೆಯುವುದೇ ಮುಖ್ಯ ಗುರಿಯೇ ಹೊರತು, ಆ ಸ್ಥಾನದ ಗಾಂಭೀರ್ಯವನ್ನು ಕಾಪಾಡುವುದಲ್ಲ. ತನ್ನ ಕೆಳಗೆ ಕೆಲಸ ಮಾಡುವ ಅಧಿಕಾರಿಗಳನ್ನು ಬಹಿರಂಗವಾಗಿ ಅವಮಾನಿಸುವುದು, ಕಿತ್ತುಹಾಕುವುದು ಮತ್ತು ವೈಯ ಕ್ತಿಕ ದಾಳಿಗಳನ್ನು ಮಾಡುವುದು ಒಬ್ಬ ರಾಷ್ಟ್ರದ ನಾಯಕನಿಗೆ ಒಪ್ಪುವ ಗುಣವಲ್ಲ. ಇದರಿಂದಾಗಿ ಶ್ವೇತಭವನದ ಘನತೆ ಬೀದಿಪಾಲಾಗಿರುವುದು ಸುಳ್ಳಲ್ಲ.

ಯಾವಾಗ ಅಮೆರಿಕದ ಅಧ್ಯಕ್ಷನ ಮಾತು ಅರ್ಥ ಕಳೆದುಕೊಳ್ಳುತ್ತದೆಯೋ, ಆಗ ಜಾಗತಿಕವಾಗಿ ಅರಾಜಕತೆ ಸೃಷ್ಟಿಯಾಗುತ್ತದೆ. ಟ್ರಂಪ್ ಮಾತುಗಳನ್ನು ಚೀನಾ, ರಷ್ಯಾ ಅಥವಾ ಉತ್ತರ ಕೊರಿಯಾ ದಂಥ ದೇಶಗಳು ಗಂಭೀರವಾಗಿ ಪರಿಗಣಿಸುವುದನ್ನು ನಿಲ್ಲಿಸಿ ಬಿಟ್ಟಿವೆ. ಅಮೆರಿಕದ ಅಧ್ಯಕ್ಷರ ಮಾತಿಗೆ ಹಿಂದೆ ಇದ್ದ ‘ಭಯ ಮಿಶ್ರಿತ ಭಕ್ತಿ’ ಹೋಗಿ, ಈಗ ‘ಏನೋ ಮಾತಾಡುತ್ತಾನೆ ಬಿಡಿ’ ಎನ್ನುವ ಅಸಡ್ಡೆ ಮೂಡಿದೆ. ಇದು ಕೇವಲ ಅಮೆರಿಕಕ್ಕೆ ಅಲ್ಲ, ಇಡೀ ಜಗತ್ತಿನ ಸುರಕ್ಷತೆಗೆ ದೊಡ್ಡ ಹೊಡೆತ.

ಇಂದು ಅಮೆರಿಕದ ಅಧ್ಯಕ್ಷರ ಸೀನು ಕೇಳಿಸಿಕೊಳ್ಳಲು ಜಗತ್ತು ಕಿವಿಗೊಡುತ್ತಿಲ್ಲ, ಬದಲಾಗಿ ಆ ‘ಜೋಕರ್’ ಮತ್ತೆ ಯಾವ ಜೋಕ್ ಹೇಳುತ್ತಾನೆ ಎಂದು ಕಾದು ಕುಳಿತು ಹಾಸ್ಯ ಮಾಡುತ್ತಿದೆ. ಇದು ಪ್ರಜಾಪ್ರಭುತ್ವದ ದುರಂತವೇ ಸರಿ.

ವಿಶ್ವೇಶ್ವರ ಭಟ್‌

View all posts by this author