ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Prof R G Hegde Column: ಜಿರಲೆ ಕ್ರಾಂತಿ ನಡೆಯುವುದಿಲ್ಲ, ಆದರೆ..

ದೊಡ್ಡ ಗುರಿ ಹೊತ್ತು ಬಂದಂತಿರುವ ಜಿರಲೆಗೊಂದು ನಿರಾಸೆಯ ಮಾತು ಹೇಳಿಯೇ ಮುಂದೆ ಹೋಗಬೇಕು. ಏನೆಂದರೆ, ನಮ್ಮ ದೇಶದಲ್ಲಿ ಜಿರಲೆ ಬರಲಿ, ಚೇಳು ಬರಲಿ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಪಾಕಿಸ್ತಾನ ಮಾದರಿಯ ‘ಕ್ರಾಂತಿ’ ನಡೆಯುವುದಿಲ್ಲ. ನಮ್ಮ ವೈವಿಧ್ಯತೆಗಳೇ ದೇಶವನ್ನು ಕಾಪಾಡುತ್ತವೆ. ನಮ್ಮ ಮೂರು ರಾಜಕೀಯ ಹೋಳುಗಳು: ಮಧ್ಯಮ ವರ್ಗ, ಹಿಂದು ಳಿದ ವರ್ಗಗಳು, ಮತ್ತು ಮೈನಾರಿಟಿಗಳು ಇವು ದೇವರೇ ಬಂದು ಹೇಳಿದರೂ ಕೂಡ ‘ಕ್ಷಿಪ್ರ ಕ್ರಾಂತಿ’ಗಾಗಿ ಒಂದೇ ವೇದಿಕೆಯ ಮೇಲೆ ಬರುವುದಿಲ್ಲ.

ಒಳಗುದಿ

ಪ್ರೊ.ಆರ್.ಜಿ.ಹೆಗಡೆ

ನುಸುಳಿ ಬಂದಿರುವ ‘ಜಿರಲೆ’ ಪಕ್ಷ ದೊಡ್ಡ ‘ಸೋಶಿಯಲ್ ಮೀಡಿಯಾ ಕ್ರಾಂತಿ’ಯನ್ನು, ಸಂಚಲನವನ್ನು ನಿರ್ಮಿಸಿರುವುದಂತೂ ಹೌದು. ಜಿರಲೆಯಿಂದ ರೋಮಾಂಚನಗೊಂಡಿ ರುವ ಕೆಲವರಂತೂ (ಜಿರಲೆ ಬಿದ್ದ) ಹಾಲು ಕುಡಿದು ಸಂಭ್ರಮಿಸುತ್ತಿರುವಂತಿದೆ. ಮತ್ತು ಅವರು ಅತಿರಂಜಿತ ಸುದ್ದಿಗಳನ್ನು ಹರಡುತ್ತಿದ್ದಾರೆ. ಲಕ್ಷಗಟ್ಟಲೆ ಜನ ಜಿರಲೆ ಪಕ್ಷದ ಸದಸ್ಯರಾದರು ಎಂಬ ಸುದ್ದಿಗಳು ಬಂದಿವೆ.

ಪಕ್ಷ ಹೊಸ ಪೀಳಿಗೆಯ (ಜೆನ್ ಝೀ) ನಿಜದ ಧ್ವನಿ. ಯುವಜನತೆ ಅದಕ್ಕೆ ಮಾರುಹೋಗಿದೆ. ಜಿರಲೆ ಪಕ್ಷದ ನೇತೃತ್ವದಲ್ಲಿ ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಅಥವಾ ಪಾಕಿಸ್ತಾನ ಮಾದರಿಯಲ್ಲಿ ಭಾರತದಲ್ಲಿಯೂ ಕ್ಷಿಪ್ರ ಕ್ರಾಂತಿಯಾಗಲಿದೆ. ಯುವಧ್ವನಿಯ ಸುನಾಮಿ ಮೋದಿ ಸರಕಾರವನ್ನು ಕೊಚ್ಚಿಕೊಂಡು ಹೋಗಲಿದೆ.

ಹೀಗೆ ಸುದ್ದಿಗಳು ಜಾಲತಾಣಗಳಲ್ಲಿ ಹರಡಿಕೊಳ್ಳುತ್ತಿವೆ. ‘ದೊಡ್ಡಗಡ್ಡದ ಬುದ್ಧಿಜೀವಿ’ಗಳ ವರ್ಗ ಆ ಸುದ್ದಿಗಳಿಂದ ರೋಮಾಂಚನಗೊಂಡುಬಿಟ್ಟಿದ್ದಾರೆ. ಮೀಸೆ ತೂರಿಸಲು ತಮಗೂ ಅವಕಾಶ ಸಿಗಲಿದೆಯೇ ಎಂದು ಕಾದಿದ್ದಾರೆ. ಆ ವರ್ಗ ಈಗ ಎಂತಹ ಎಕ್ಸೈಟ್‌ಮೆಂಟ್‌ನಲ್ಲಿ ಇದೆಯೆಂದರೆ ‘ಬಿಳಿ ಜಿರಲೆ’ಯಾದರೂ ಸರಿಯೇ, ಮೋದಿ ಸರಕಾರವನ್ನು ಅಲುಗಾಡಿಸಿ ಹೋದರೆ ಸಾಕು ಎಂದು ಬೆರಳು ಮಡಿಸಿ ಕುಳಿತಿದೆ.

ನಮಗೆ ಗೊತ್ತಿದೆ. ನೇಪಾಳ, ಬಾಂಗ್ಲಾ, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿತ್ಯಂತರದಲ್ಲಿ ಈ (ಬಿಳಿ) ಜಿರಲೆಯ ಕೈವಾಡವಿತ್ತು. ಜಿರಲೆಯ ವಾಸನೆ ಬಡಿದಿರುವ ಕೇಂದ್ರ ಸರಕಾರ ಈಗಾಗಲೇ ಪಕ್ಷವನ್ನು ಗಮನದಡಿಯಲ್ಲಟ್ಟಿದೆ. ಹಾಗಾಗಿ ಸದ್ಯದಲ್ಲಿ ಜಿರಲೆ ತಲೆ ಅಡಿಯಾಗಿ ಬಿದ್ದುಕೊಂಡಿದೆ.

‘ಬುದ್ಧಿಜೀವಿಗಳು’ ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಕೂಗಾಡುತ್ತ ಕ್ರಾಂತಿ ಯೊಂದಕ್ಕಾಗಿ ಭ್ರಾಂತಿಯಿಂದ ಕಾಯುತ್ತಿದ್ದಾರೆ. ಜಿರಲೆ ‘ರಾಷ್ಟ್ರವ್ಯಾಪಿ’ ಆಂದೋಲನ ನಡೆಸುವುದಾಗಿ ಹೇಳಿಕೊಳ್ಳುತ್ತಿದೆ. ಮೊನ್ನೆ ಮೊನ್ನೆ ಜಂತರ್ ಮಂತರ್‌ನಲ್ಲಿ ಮೊದಲ ‘ಜಿರಲೆ ಕ್ರಾಂತಿ’ ನಡೆಯಿತು.

ಇದನ್ನೂ ಓದಿ: Prof R G Hegde Column: ಒಳ್ಳೆಯ ರಾಜಕೀಯಕ್ಕಾಗಿ ಜನರನ್ನು ಕಟ್ಟಲು ಸಾಧ್ಯವಿದೆಯೆ ?

ದೊಡ್ಡ ಗುರಿ ಹೊತ್ತು ಬಂದಂತಿರುವ ಜಿರಲೆಗೊಂದು ನಿರಾಸೆಯ ಮಾತು ಹೇಳಿಯೇ ಮುಂದೆ ಹೋಗಬೇಕು. ಏನೆಂದರೆ, ನಮ್ಮ ದೇಶದಲ್ಲಿ ಜಿರಲೆ ಬರಲಿ, ಚೇಳು ಬರಲಿ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಪಾಕಿಸ್ತಾನ ಮಾದರಿಯ ‘ಕ್ರಾಂತಿ’ ನಡೆಯುವುದಿಲ್ಲ. ನಮ್ಮ ವೈವಿಧ್ಯತೆಗಳೇ ದೇಶವನ್ನು ಕಾಪಾಡುತ್ತವೆ. ನಮ್ಮ ಮೂರು ರಾಜಕೀಯ ಹೋಳು ಗಳು: ಮಧ್ಯಮ ವರ್ಗ, ಹಿಂದುಳಿದ ವರ್ಗಗಳು, ಮತ್ತು ಮೈನಾರಿಟಿಗಳು ಇವು ದೇವರೇ ಬಂದು ಹೇಳಿದರೂ ಕೂಡ ‘ಕ್ಷಿಪ್ರ ಕ್ರಾಂತಿ’ಗಾಗಿ ಒಂದೇ ವೇದಿಕೆಯ ಮೇಲೆ ಬರುವುದಿಲ್ಲ.

‘ಉತ್ತರದವರು’ ಸಮರ್ಥಿಸಿದ ಮಾತನ್ನು (ಅದೇ ಕಾರಣಕ್ಕಾಗಿ) ‘ದಕ್ಷಿಣದವರು’ ಸಮರ್ಥಿಸು ವುದಿಲ್ಲ. ಇನ್ನೊಂದು ವಿಷಯವೆಂದರೆ ದೊಡ್ಡ ಪ್ರಮಾಣದಲ್ಲಿ ಯುವಜನ ಇರುವುದು ನಗರಗಳಲ್ಲಿ. ಅವರಲ್ಲಿ ಹೆಚ್ಚಿನವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಮತ ಹಾಕಲೇ ಬರದ ಅವರು ಕ್ಷಿಪ್ರಕ್ರಾಂತಿಗಾಗಿ ಸೇರುವುದನ್ನು ಊಹಿಸುವುದಾದರೂ ಹೇಗೆ? ಮತ್ತು ನಮ್ಮ ದೇಶದಲ್ಲಿ ಸುಮಾರಾಗಿ ಜನ ಬಸ್, ಟ್ರಕ್, ಊಟ, ‘ಪಾನೀಯ’ ಇತ್ಯಾದಿ ವ್ಯವಸ್ಥೆ ಮಾಡಿ ಮೇಲಿಂದ ಕೈ ಮೇಲೆ ಇಡದಿದ್ದರೆ ಸಾರ್ವಜನಿಕ ಸಭೆಗಳಿಗೆ ಬರುವುದಿಲ್ಲ. ಅದೆಲ್ಲ ಮಾಡಲು ಜಿರಲೆಗೆ ಸಾಧ್ಯವಾಗುತ್ತದೆಯೇ? ಹಾಸ್ಯ ಇರಲಿ. ಆದರೆ ಈ ಮಾತುಗಳನ್ನು ಹೇಳಿಕೊಳ್ಳು ತ್ತಲೇ ಒಂದು ಮಾತನ್ನು ಒಪ್ಪಿಕೊಳ್ಳಬೇಕು.

ಏನೆಂದರೆ ದೇಶದ ಜನತೆ, ವಿಶೇಷವಾಗಿ ಯುವಜನತೆ ಖಂಡಿತಕ್ಕೂ ಪ್ರಸ್ತುತದಲ್ಲಿ ಕುದಿಯುತ್ತಿದೆ. ಅದರ ಒಡಲಾಳದಲ್ಲಿ ಬೆಂಕಿ ತುಂಬಿಕೊಂಡಿದೆ. ಲಾವಾರಸದ ಮೊದಲ ಅಲೆ ತೊಂಭತ್ತರ ದಶಕದಲ್ಲಿ ದೇಶದಲ್ಲಿ ಒಮ್ಮೆ ಕಾಣಿಸಿಕೊಂಡಿತು ಕೂಡ. ಪರಿಣಾಮ ವಾಗಿಯೇ ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಆರ್ಥಿಕ, ಸಾಮಾಜಿಕ ಸುಧಾರಣೆಗಳು ಜಾರಿಗೆ ಬಂದಿದ್ದು.

62

ಬಿಜೆಪಿ ಅಧಿಕಾರಕ್ಕೆ ಬಂದಿದ್ದು. ಮತ್ತು ಈಗ ಬಿಜೆಪಿ ಬಲವಾಗಿ ಬೇರೂರಿ ಕುಳಿತಿರುವುದು. ಗಮನಿಸಬೇಕು, ತೊಂಭತ್ತರ ದಶಕದಿಂದ ಆರಂಭವಾಗಿ 2014ರವರೆಗಿನ ಹಲವು ಘಟನೆ ಗಳಿಗೆ, ಉದಾ ರಾಮಮಂದಿರ ಚಳುವಳಿ, ಸಮಾಜವಾದಿ ಆರ್ಥಿಕತೆಯ ವಿರುದ್ಧದ ದೇಶದ ಆಕ್ರೋಶ, ಮತ್ತು ಮಧ್ಯಮವರ್ಗ ಬಿಜೆಪಿಯ ಜತೆ ನಿಂತಿದ್ದಕ್ಕೆ ಒಂದು ಕ್ರಾಂತಿಯ ಸ್ವರೂಪವೇ ಇತ್ತು. ಆ ಚಳುವಳಿಯೇ ಕಾಂಗ್ರೆಸ್‌ನ ಬೇರುಗಳನ್ನು ಅಲುಗಾಡಿಸಿ ಹೋಗಿದ್ದು ಮತ್ತು ಬಿಜೆಪಿಯನ್ನು ಜನರ ಕಲ್ಪನೆಯಲ್ಲಿ ಮೂಡಿಸಿ ಹೋಗಿದ್ದು. ಸುಮಾರು ಮೂವತ್ತು ವರ್ಷಗಳ ಕಾಲ ನಡೆದ ಆ ಕ್ರಾಂತಿಯನ್ನು ಸ್ಥೂಲವಾಗಿ ಕಾಂಗ್ರೆಸ್ ಪಕ್ಷದ ಕೆಲವು ನೀತಿಗಳ ವಿರುದ್ಧದ ಬಂಡಾಯ ಎಂದೇ ಗುರುತಿಸಬೇಕು.

ಬಂಗಾಲದಲ್ಲಿ ಇತ್ತೀಚೆಗೆ ಬಂದ ಚುನಾವಣಾ ಫಲಿತಾಂಶ ಆ ಬಂಡಾಯದ ಭಾಗವೇ! ‘ಜಾತ್ಯತೀತತೆ’ಯ ತಪ್ಪು ಪರಿಕಲ್ಪನೆಯ ಮತ್ತು ‘ಸಮಾಜವಾದಿ’ ಆರ್ಥಿಕ ನೀತಿಯ ವಿರುದ್ಧದ ಬಂಡಾಯ. ‘ಜಾತ್ಯತೀತ’ ನೀತಿ ಹಾಗೂ ‘ಸಮಾಜವಾದಿ’ ಆರ್ಥಿಕ, ಸಾಮಾಜಿಕ ಆರ್ಥಿಕ ಚಿಂತನೆಯ ವಿರುದ್ಧದ ಸಿಟ್ಟು ಇನ್ನೂ ಪೂರ್ತಿಯಾಗಿ ದೇಶದಲ್ಲಿ ತಣಿದಿಲ್ಲ ಎಂದೇ ಅನಿಸುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಹಿನ್ನೆಡೆಗೆ ಕಾರಣ ಇದು. ತಮಿಳುನಾಡು ಮತ್ತು ಪಂಜಾಬ್‌ಗಳೂ ಬಿಜೆಪಿಯನ್ನು ಒಪ್ಪದಿದ್ದರೂ ಕೂಡ ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತಿರುವ ಕಾರಣ ಇದು. ಅದಿರಲಿ. ದೇಶದ ಯುವಜನತೆ ಈಗ ನಿಜಕ್ಕೂ ಮತ್ತೆ ಒಳಗಿನಿಂದ ಕುದಿಯುತ್ತಿದೆ. ಪ್ರಧಾನಿ ಮೋದಿಯವರ ಮೇಲಿನ ವೈಯಕ್ತಿಕವಾದ ನಂಬಿಕೆ ಇನ್ನೂ ಮುಂದುವರಿದಂತಿದೆ. ಆದರೂ ಸಿಟ್ಟಿನ ಒಳಪ್ರವಾಹ ಜೀವಂತವಾಗಿದೆ ಎಂದೇ ಅನಿಸು ತ್ತಿದೆ. ಜನರ ಸಿಟ್ಟಿಗೆ ಕಾರಣಗಳಿವೆ.

ಮೊದಲನೆಯದು. ‘ದೇಶ ಹೇಗಿರಬೇಕು’ ಎಂಬ ಕುರಿತಾದ ಸ್ಥೂಲ ತೀರ್ಮಾನಕ್ಕೆ ನಾವು ಇನ್ನೂ ಬಂದಂತಿಲ್ಲ. ಮತ್ತು ಇನ್ನೂ ಕೂಡ ಮುಖ್ಯವಾಗಿ ಜಾತ್ಯತೀತ ಮತ್ತು ಸಮಾಜ ವಾದ ಪದಗಳನ್ನು ರಾಜಕೀಯಗೊಳಿಸುತ್ತಲೇ ಇರುವ ನಾವು ಇಡೀ ವ್ಯವಸ್ಥೆಯನ್ನು ಹಾಳುಗೆಡಿಸಿಬಿಟ್ಟಿದ್ದೇವೆ. ಉದಾಹರಣೆ ಗಮನಿಸಿ.

ಕೋಟಿಗಟ್ಟಲೆ ಬಾಂಗ್ಲಾದೇಶೀಯರು ಬಂಗಾಲದಲ್ಲಿ ನೆಲೆಸಿದ್ದಾರೆ. ರಾಷ್ಟ್ರದುದ್ದಕ್ಕೂ ಹರಡಿಕೊಂಡಿದ್ದಾರೆ ಕೂಡ. ನಮ್ಮ ಆಂತರಿಕ ಭದ್ರತೆಗೆ ದೊಡ್ಡ ಸವಾಲು ಇದು. ಏಕೆಂದರೆ ಅಪರಾಧಗಳಿಗೆ (ಮುಖ್ಯವಾಗಿ ಡ್ರಗ್ ಮತ್ತು ವೇಶ್ಯಾವಾಟಿಕೆ) ಮತ್ತು ಅಕ್ರಮ ವಲಸಿಗರಿಗೆ ಹತ್ತಿರದ ಸಂಬಂಧಗಳಿರುತ್ತವೆ. ಇಂತಹ ಗಂಭೀರ ವಿಷಯದಲ್ಲಿ ಜಾತಿ ಮತದ ಪ್ರಶ್ನೆ ನಿಜವಾಗಿಯೂ ಇರಬಾರದು. ಆದರೂ ನಮ್ಮ ಸರಕಾರಗಳು ಕಣ್ಮುಚ್ಚಿ ಕುಳಿತಿವೆ. ಕಾರಣ ರಾಜಕೀಯ.

ಎಂತಹ ರಾಜಕೀಯವೆಂದರೆ ಇಂತಹ ಒಂದು ಕೋಟಿ ಹತ್ತು ಲಕ್ಷ ಜನ ಬಂಗಾಲದ ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದರು. ಅಲ್ಲಿಯ ರಾಜಕೀಯ ಅಧಿಕಾರವನ್ನು ನಿರ್ಧರಿಸುತ್ತಿದ್ದವರು ಇಂತವರು. ದುರಂತವೆಂದರೆ ಅಲ್ಲಿನ ಮಾಜಿ ಮುಖ್ಯಮಂತ್ರಿ ಅಂತವರ ಪರವಾಗಿದ್ದರು. ಜನತೆ ಕುದಿಯಬೇಕಾದ ಮಾತು ಇದು. ಆ ಸರಕಾರವನ್ನು ಜನ ಕಿತ್ತೆಸೆದರು ಬಿಡಿ. ಆದರೆ ಇಂತವುಗಳನ್ನು ತಡೆಯಲು, ಅವನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಶಕ್ತ ಕಾನೂನುಗಳು, ಮಾರ್ಗಗಳು ಇನ್ನೂ ಇಲ್ಲದಿರುವುದು ಆತಂಕಕಾರಿ ವಿಷಯ.

ಹಾಗೆಯೇ ನಮ್ಮ ದೇಶದಲ್ಲಿ ‘ಒಂದು ದೇಶ ಒಂದು ಕಾನೂನು’ ಎಂಬುದು ಇಲ್ಲ ಅನಿಸು ತ್ತದೆ. ಜನರಿಗೊಂದೊಂದು ಕಾನೂನು ಇದೆ. ಧರ್ಮ ಒಂದು ಖಾಸಗಿ ವಿಚಾರ, ಅದು ರಸ್ತೆಗಿಳಿಯಕೂಡದು, ಯಾವ ಧರ್ಮದ್ದೂ ಓಲೈಕೆ ಸಲ್ಲದು ಎಂಬ ಸರಳ ಮಾತು ಇಟ್ಟುಕೊಂಡು ಕಾನೂನುಗಳನ್ನು ನಾವು ರಚಿಸಿಯೇ ಇಲ್ಲ.

ಧರ್ಮಗಳ ವೋಟ್ ಬ್ಯಾಂಕ್ ರಾಜಕೀಯ ದೇಶವನ್ನು ಅಪಾಯದಂಚಿಗೆ ತಂದು ನಿಲ್ಲಿಸಿದೆ. ಈ ವಿಷಯದಲ್ಲಿ ದೇಶದ ಜೆನ್ ಝೀ ಮನಸ್ಸಿನಲ್ಲಿ ಕ್ರೋಧ ಇದೆ ಎಂಬುದು ನಿಜ. ಎರಡನೆಯ ವಿಷಯ. ಸುದೀರ್ಘ ಕಾಲ ಸಮಾಜವಾದದ ಹುಚ್ಚಿನಲ್ಲಿದ್ದ ನಮ್ಮ ನಾವು ದೇಶದ ಮನೋಭೂಮಿಕೆಯನ್ನೇ ವಿರೂಪ ವಿಕೃತಗೊಳಿಸಿಬಿಟ್ಟಿದ್ದೇವೆ.

‘ಸಾಮಾಜಿಕ ನ್ಯಾಯ’ ಎಲ್ಲೆಲ್ಲೂ ಹರಡಿಕೊಂಡಿದೆ. ಇದರಿಂದಾಗಿ ಹಲವು ರೀತಿಯ ದುಷ್ಪರಿಣಾಮಗಳಾಗಿವೆ. ಜನರ ಸಾರ್ವಜನಿಕ ಜವಾಬ್ದಾರಿಯ ಭಾವನೆ ಹೋಗಿದೆ. ಸಾರ್ವಜನಿಕ ಸಂಪತ್ತು ಯಾರ ಸಂಪತ್ತೂ ಅಲ್ಲ ಎಂಬ ಭಾವನೆ ಸೃಷ್ಟಿಯಾಗಿ ಹೋಗಿದೆ. ಕೋಟಿಗಟ್ಟಲೆ ವೆಚ್ಚದಲ್ಲಿ ನಿರ್ಮಾಣವಾಗುವ ಸಾರ್ವಜನಿಕ ಕಟ್ಟಡಗಳು, ಪಾರ್ಕುಗಳು, ರಸ್ತೆಗಳು ಇವು ಕೆಲವೇ ತಿಂಗಳುಗಳಲ್ಲಿ ಕೆಟ್ಟು ಕೆರ ಹಿಡಿಯುವ ಕಾರಣ ಇದು. ಇದಕ್ಕೆ ಕಾರಣ ಜನ ಏನು ಮಾಡಿದರೂ ನಮ್ಮಲ್ಲಿ ನಡೆದುಹೋಗುತ್ತದೆ. ಹಾಗೆಯೇ ಸಮಸ್ಯೆ ಯೆಂದರೆ ಕೆಲಸ ಮಾಡದಿರುವ ಹಕ್ಕು ನಮ್ಮ ಮೈಮನಗಳನ್ನು ತುಂಬಿಕೊಂಡು ಬಿಟ್ಟಿದೆ.

ಕೆಲಸ ಹೇಳುವವನು, ಗಟ್ಟಿಯಾಗಿ ಹಿಡಿದು ದುಡಿಸುವವನು ಅಥವಾ ಆ ರೀತಿಯ ಧೋರಣೆ ಹೊಂದಿದವನು‘ಬಂಡವಾಳಶಾಹಿ’ ಮನಸ್ಥಿತಿಯವನು ಎಂಬ ಮನಸ್ಥಿತಿ ಇದೆ. ಹಾಗಾಗಿ ಕಚೇರಿಗಳಲ್ಲಿ ಅಧಿಕಾರಿಗಳು ಯಾರೂ ಕೆಲಸ ಹೇಳುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಹಿರಿಯರು, ಕಿರಿಯರು, ಮಹಿಳೆಯರು, ಹಿಂದುಳಿದವರು, ಮುಂದುವರಿದವರು ಇಂತವರಿಗೆ ಕೆಲಸ ಹೇಳುವುದಿಲ್ಲ.

ಏಕೆಂದರೆ ಅವರೆಲ್ಲರಿಗೂ ಪ್ರತ್ಯೇಕ ನ್ಯಾಯ ಸಂಹಿತೆಗಳಿವೆ. ಹಾಗಾಗಿ ನಮ್ಮ ಕಚೇರಿಗಳಿಗೆ ಶಿಸ್ತಿನಲ್ಲಿ ಕೆಲಸ ಮಾಡಲು ಸಾಧ್ಯವಾಗುವುದೇ ಇಲ್ಲ. ಆಡಳಿತಾತ್ಮಕವಾಗಿ ನಾವು ಕುಸಿಯುವ ಹಂತದಲ್ಲಿದ್ದೇವೆ. ನಮ್ಮ ನಗರಗಳು ಇಂತಹ ವಾಸ್ತವಗಳಿಗೆ ಸಾಕ್ಷಿ. ಈ ಕುರಿತು ಇಡೀ ದೇಶದಾದ್ಯಂತ ಕ್ರೋಧವಿದೆ.

ಇನ್ನೊಂದು ವಿಷಯ. ಮೂಲಭೂತ ಸೌಕರ್ಯ ಸೃಷ್ಟಿಸುವ ವಿಷಯದಲ್ಲಿ ನಾವು ಬಹಳ ಹಿಂದೆ ಇದ್ದೇವೆ. ಇನ್ನೂ ಟಾಯ್ಲೆಟ್ʼಗಳನ್ನು ಕಟ್ಟುವುದರಲ್ಲಿಯೇ ಇದ್ದೇವೆ. ರಸ್ತೆಗಳು ಈಗ ಅಭಿವೃದ್ಧಿ ಆಗುತ್ತಿವೆ. ಕುಡಿಯುವ ನೀರು, ಕೃಷಿಗೆ ನೀರಿನ ಕುರಿತು ನಾವು ಸ್ಪಷ್ಟವಾಗಿ, ಶಿಸ್ತು ಬದ್ಧವಾಗಿ ಯೋಚಿಸಿಯೇ ಇಲ್ಲ ಅನಿಸುತ್ತದೆ.

ವಿದ್ಯುತ್ ಶಕ್ತಿ ಅಥವಾ ಬದಲಿ ಶಕ್ತಿ ಮೂಲಗಳ ಕುರಿತೂ ಯೋಚಿಸಿದಂತಿಲ್ಲ. ನಮ್ಮಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಇಲ್ಲ ಎನ್ನುವುದು ಯಾವಾಗಲೇ ತಿಳಿದ ವಿಷಯ. ಆದರೆ ಬದಲಿ ಸಂಪನ್ಮೂಲಗಳನ್ನು ನಾವು ಅಭಿವೃದ್ಧಿಗೊಳಿಸಿಯೇ ಇಲ್ಲ. ಮತ್ತು ಬಂಡವಾಳ ಶಾಹಿ ವಿರೋಧಿ ನೀತಿಯ ಹೆಸರಲ್ಲಿ ಸ್ವಂತ ದುಡಿಯುವಿಕೆಯ ಸಂಸ್ಕೃತಿಯನ್ನೇ ನಾಶ ಮಾಡಿಬಿಟ್ಟಿದ್ದೇವೆ.

ದೇಶದ ಕಾನೂನುಗಳು ಬಂಡವಾಳ ಹೂಡಿಕೆಗೆ, ಸ್ವಂತ ಉದ್ಯೋಗಕ್ಕೆ ವಿರುದ್ಧವಾದವು. ನಮ್ಮಲ್ಲಿ ಹೂಡಿಕೆಯನ್ನು ಕಾನೂನುಗಳು ಅನುಮಾನದಿಂದ ನೋಡುತ್ತವೆ. ಹೂಡಿಕೆಯ ಹಿಂದೆ ಕಳ್ಳತನ ಇದೆ ಎನ್ನುವ ಅನುಮಾನವನ್ನು ಸೃಷ್ಟಿಸಿ ಬಿಟ್ಟಿದ್ದೇವೆ. ಉದಾಹರಣೆಗೆ ನೋಡಿ, ಒಂದು ಚಿಕ್ಕ ಉದ್ಯಮ ಆರಂಭಿಸುವವನು ಇಡೀ ಸರಕಾರವನ್ನು, ಸುತ್ತಮುತ್ತಲ ಇಡೀ ಸಮಾಜವನ್ನು ಒಪ್ಪಿಸಬೇಕು.

ಕಾನೂನುಗಳು ಪಾರದರ್ಶಕವಾಗಿ, ಗಟ್ಟಿಯಾಗಿ ಇಲ್ಲವೇ ಇಲ್ಲ. ದುಡ್ಡು ಕೊಟ್ಟರೆ ಕಾನೂನುಗಳು ಬದಲಾಗುತ್ತವೆ. ಹಾಗಾಗಿ ನಮ್ಮಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ಹುಟ್ಟಿಕೊಂಡೇ ಇಲ್ಲ. ಅವುಗಳನ್ನು ಹುಟ್ಟಿಸಲು ಕೈ ಹಾಕದೆ ಇರುವಂತಹ ವಾತಾವರಣವೇ ಅದಕ್ಕೆ ಕಾರಣ. ಚೀನಾವನ್ನು ಗಮನಿಸಿ.

ಚೀನಾದ ಜನರು ಚಿಕ್ಕ ಚಿಕ್ಕ ವಸ್ತುಗಳು, ಅಂದರೆ ಬಾಚಣಿಗಳು ಪೆನ್ಸಿಲ್‌ಗಳು, ಬಾಟಲಿ ಮುಚ್ಚಲಗಳು ಇಂತಹ ಚಿಕ್ಕಪುಟ್ಟ ಸಾಮಾನುಗಳನ್ನು ತಯಾರಿಸುವುದರಲ್ಲಿ ನಿಸ್ಸೀಮರು. ಏಕೆಂದರೆ ಚೀನಾ ಆ ರೀತಿಯ ಸಂಸ್ಕೃತಿಯನ್ನು ಚಿಕ್ಕ ಮತ್ತು ಮಧ್ಯಮ ಬಂಡವಾಳ ಹೂಡಿಕೆಯನ್ನು ಪ್ರೇರೇಪಿಸಿದೆ. ಇಂದು ಚೀನಾ ಯಾವ ಮಟ್ಟಕ್ಕೆ ಬೆಳೆದಿದೆ ಎಂದರೆ ಅದರ ಆರ್ಥಿಕತೆ ನಿಂತಿರುವುದು ಚಿಕ್ಕ ಪುಟ್ಟ ವಸ್ತುಗಳ ಉತ್ಪಾದನೆಯ ಮೇಲೆ. ಅಂತಹ ಲೋಕಲ್ ಪ್ರಾಡಕ್ಟ್‌ಗಳು, ಪ್ರಾದೇಶಿಕ ವಸ್ತುಗಳ ಚಿಕ್ಕ ಚಿಕ್ಕ ವಸ್ತುಗಳ ಉತ್ಪಾದನೆಯ ಕುರಿತು ನಾವು ಗಮನ ಹರಿಸಿಯೇ ಇಲ್ಲ.

ಹೀಗಾಗಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಹೊರಬರುತ್ತಿರುವ ಯುವಕರಿಗೆ ಉದ್ಯೋಗಗಳು ಹುಟ್ಟಿ ಕೊಳ್ಳುತ್ತಿಲ್ಲ. ನಗರಗಳ ಹೊರಗೆ, ಹಳ್ಳಿಗಳಲ್ಲಿ ಹೇಗೆ ಉದ್ಯೋಗ ಸೃಷ್ಟಿಸಬೇಕು ನಮಗೆ ಹೊಳೆಯುತ್ತಿಲ್ಲ. ಕೃಷಿ ಲಾಭದಾಯಕವಲ್ಲ. ಬೇರೆ ಒಳ್ಳೆಯ ಉದ್ಯೋಗಗಳು ಹುಟ್ಟಿಕೊಳ್ಳು ತ್ತಿಲ್ಲ. ಸ್ವಂತ ಉದ್ಯೋಗ ಸುಲಭವಲ್ಲ. ಸರಕಾರ ಉದ್ಯೋಗಗಳನ್ನು ತುಂಬಿಕೊಳ್ಳುತ್ತಿಲ್ಲ. ಐಟಿ ಕಂಪನಿಗಳು ಕೆಲಸಗಾರರನ್ನು ಕಡಿಮೆ ಮಾಡುತ್ತಿವೆ. ಯುವಕರು ಏನು ಮಾಡಬೇಕು? ರಾಷ್ಟ್ರೀಯವಾಗಿ ಶಿಕ್ಷಣ ದುರವಸ್ಥೆಯ ಅಂಚಿನಲ್ಲಿದೆ.

ನೀಟ್ ಪರೀಕ್ಷೆಯ ಕತೆ ನಮಗೆ ಗೊತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿರುವ ಬಹುದೊಡ್ಡ ದುರಂತಗಳನ್ನು ಹೇಳಬೇಕು. ವಿಶ್ವವಿದ್ಯಾಲಯಗಳು ಕುಲಗೆಟ್ಟು ಹೋಗಿವೆ. ಮಂಕಾಗಿ ಕುಳಿತುಬಿಟ್ಟಿವೆ. ಅವಕ್ಕೆ ಉದ್ಯೋಗ ಗಳಿಸಬಲ್ಲ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಸಾಮರ್ಥ್ಯ ವಿಲ್ಲ.

ಇನ್ನೊಂದು ವಿಷಯ. ನಮ್ಮಲ್ಲಿ ದುಡ್ಡು ಕೊಟ್ಟರೆ ಎಲ್ಲಿ ಬೇಕಾದರೂ ಸೀಟು ಸಿಗುತ್ತದೆ. ಆದರೆ ಮೆರಿಟ್‌ನಲ್ಲಿ ನೂರಕ್ಕೆ ನೂರು ಮಾರ್ಕ್ ಬಂದರೂ ಒಳ್ಳೆಯ ಸೀಟು ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ವರ್ಷಗಳ ಹಿಂದೆ ದೆಹಲಿಯ ಪ್ರತಿಷ್ಠಿತ ಕಾಲೇ ಜೊಂದರಲ್ಲಿ ಕೊನೆಯ ಸೀಟು ಕೂಡ ಸಿಕ್ಕಿದ್ದು ನೂರಕ್ಕೆ ನೂರು ಇದ್ದ ವಿದ್ಯಾರ್ಥಿಗೇ. ತೊಂಭತ್ತೊಂಭತ್ತು ಮಾರ್ಕ್ ಬಂದವನಿಗೆ ಸೀಟು ಇಲ್ಲ. ಅಂದರೆ ನಮ್ಮ ದೇಶದಲ್ಲಿ ಒಳ್ಳೆಯ ಶಿಕ್ಷಣ ಸಂಸ್ಥೆಗಳ ಕೊರತೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಗಮನಿಸಬೇಕು.

ಒಟ್ಟಾರೆಯಾಗಿ ವಿದ್ಯಾರ್ಥಿಗಳ ಬಂಡಾಯಕ್ಕೆ ಬೇಕಿರುವ ಎಲ್ಲ ವಿಸ್ಫೋಟಕಗಳೂ ನಮ್ಮಲ್ಲಿ ಇವೆ. ಜಿರಲೆ ಬಂಡಾಯ ಯಶಸ್ವಿಯಾಗುವುದಿಲ್ಲ. ಆದರೆ ದೇಶದೊಳಗೆ ಮನಸ್ಸುಗಳು ಹೊತ್ತಿ ಉರಿಯುತ್ತಿರುವುದು ನಿಜ. ಮತ್ತು ಉರಿ ಕ್ರಮೇಣ ಅಧಿಕಾರದಲ್ಲಿರುವ ಪಕ್ಷವನ್ನು ಸುಟ್ಟುಹಾಕುತ್ತದೆ.