ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Venugopal Column: ಇವರು ಸಂವಿಧಾನಕ್ಕಿಂತ ಮೇಲಲ್ಲ; ಜನಾದೇಶದ ಅಧಿಕಾರವೇ ಪರಮೋಚ್ಛ

ತಮಿಳುನಾಡಿನಲ್ಲಿ ರಾಜ್ಯಪಾಲರು ವಿಧಾನಸಭೆಯಲ್ಲಿ ಪೂರ್ಣ ಭಾಷಣವನ್ನು ಓದಲು ನಿರಾ ಕರಿಸಿದರು. ಕೇರಳದಲ್ಲಿ ರಾಜ್ಯಪಾಲರು ಭಾಷಣದ ಕೆಲವು ಪ್ರಮುಖ ಭಾಗಗಳನ್ನು ಬಿಟ್ಟು ಬಿಟ್ಟರು. ಕರ್ನಾಟಕದಲ್ಲಿ ರಾಜ್ಯಪಾಲರು ಕೇವಲ ಎರಡು ಸಾಲುಗಳನ್ನು ಹೇಳಿ ಸಭೆಯಿಂದ ಹೊರ ನಡೆದರು. ಈ ಘಟನೆಗಳು ಸಾಮಾನ್ಯ ರಾಜಕೀಯ ವಿವಾದ ಮಾತ್ರ ವಲ್ಲ; ಅವು ಸಂವಿಧಾನಾತ್ಮಕ ಸಂಪ್ರದಾಯಗಳ ಮಹತ್ವವನ್ನು ಮತ್ತೆ ಪ್ರಶ್ನೆಗೆ ಒಳಪಡಿಸಿವೆ.

ರಾಜತಂತ್ರ

ವೇಣುಗೋಪಾಲ್

ವಿಧಾನಸಭೆಯ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲರ ಭಾಷಣವು ಅವರ ವೈಯಕ್ತಿಕ ಅಭಿಪ್ರಾಯವಲ್ಲ; ಅದು ಆಯ್ಕೆಯಾದ ಸರಕಾರದ ನೀತಿ ಮತ್ತು ಕಾರ್ಯಕ್ರಮಗಳ ಅಧಿಕೃತ ಘೋಷಣೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ನಡೆದ ಘಟನೆಗಳು ಭಾರತದ ಸಂವಿಧಾನಾತ್ಮಕ ವ್ಯವಸ್ಥೆಯ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟು‌ ಹಾಕಿವೆ.

ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳ ರಾಜ್ಯಪಾಲರು ವಿಧಾನಸಭೆಯ ಅಧಿವೇಶನ ಆರಂಭದಲ್ಲಿ ನೀಡಬೇಕಾದ ಪರಂಪರೆಯ ಭಾಷಣದ ಬಗ್ಗೆ ತೋರಿದ ನಡೆಯು ರಾಜಕೀಯ ಹಾಗೂ ಕಾನೂನು ವಲಯಗಳಲ್ಲಿ ಕ್ಷೋಭೆ ಉಂಟು ಮಾಡಿದೆ ಸಂಪ್ರದಾಯದಂತೆ, ವಿಧಾನಸಭೆಯ ಪ್ರತಿ ವರ್ಷದ ಮೊದಲ ಅಧಿವೇಶನದಲ್ಲಿ ಸರಕಾರ ತಯಾರಿಸಿದ ಭಾಷಣವನ್ನು ರಾಜ್ಯಪಾಲರು ಓದುತ್ತಾರೆ.

ಈ ಭಾಷಣದಲ್ಲಿ ಸರಕಾರದ ನೀತಿಗಳು, ಯೋಜನೆಗಳು ಮತ್ತು ಮುಂದಿನ ಕಾರ್ಯಕ್ರಮ ಗಳ ಕುರಿತು ವಿವರಿಸಲಾಗುತ್ತದೆ. ಆದರೆ ಇತ್ತೀಚೆಗೆ ಈ ಮೂರು ರಾಜ್ಯಗಳಲ್ಲಿ ಈ ಸಂಪ್ರದಾಯದಿಂದ ಹೊರ ನಡೆದಿರುವುದು ಕಂಡುಬಂದಿದೆ.

ತಮಿಳುನಾಡಿನಲ್ಲಿ ರಾಜ್ಯಪಾಲರು ವಿಧಾನಸಭೆಯಲ್ಲಿ ಪೂರ್ಣ ಭಾಷಣವನ್ನು ಓದಲು ನಿರಾಕರಿಸಿದರು. ಕೇರಳದಲ್ಲಿ ರಾಜ್ಯಪಾಲರು ಭಾಷಣದ ಕೆಲವು ಪ್ರಮುಖ ಭಾಗಗಳನ್ನು ಬಿಟ್ಟುಬಿಟ್ಟರು. ಕರ್ನಾಟಕದಲ್ಲಿ ರಾಜ್ಯಪಾಲರು ಕೇವಲ ಎರಡು ಸಾಲುಗಳನ್ನು ಹೇಳಿ ಸಭೆಯಿಂದ ಹೊರ ನಡೆದರು. ಈ ಘಟನೆಗಳು ಸಾಮಾನ್ಯ ರಾಜಕೀಯ ವಿವಾದ ಮಾತ್ರ ವಲ್ಲ; ಅವು ಸಂವಿಧಾನಾತ್ಮಕ ಸಂಪ್ರದಾಯಗಳ ಮಹತ್ವವನ್ನು ಮತ್ತೆ ಪ್ರಶ್ನೆಗೆ ಒಳಪಡಿಸಿವೆ.

ಇದನ್ನೂ ಓದಿ: VenuGopal Column: ನ್ಯಾಯಾಂಗದ ಮೇಲೆ ಒತ್ತಡ ಹಾಕುವ ಯತ್ನ

ಭಾಷಣದ ಸಾಂವಿಧಾನಿಕ ಅರ್ಥ

ಇಲ್ಲಿ ಹುಟ್ಟುವ ಮುಖ್ಯ ಪ್ರಶ್ನೆಗಳು ಏನೆಂದರೆ, ರಾಜ್ಯಪಾಲರ ಪಾತ್ರವೇನು? ಜನರಿಂದ ಆಯ್ಕೆಯಾದ ಸರಕಾರವು ತಯಾರಿಸಿದ ಭಾಷಣವನ್ನು ಬದಲಾಯಿಸಲು ಅಥವಾ ಓದಲು ನಿರಾಕರಿಸಲು ಅವರು ಅಧಿಕಾರ ಹೊಂದಿದ್ದಾರೆಯೇ? ಸಂವಿಧಾನಾತ್ಮಕವಾಗಿ ನೋಡಿದರೆ, ವಿಧಾನಸಭೆಯ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲರು ನೀಡುವ ಭಾಷಣವು ಅವರ ವೈಯಕ್ತಿಕ ಅಭಿಪ್ರಾಯವಲ್ಲ. ಅದು ಜನರಿಂದ ಆಯ್ಕೆಯಾದ ಸರಕಾರದ ನೀತಿಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ಘೋಷಣೆ ಮಾತ್ರ. ಆದ್ದರಿಂದ ಆ ಭಾಷಣವನ್ನು ಬದಲಿಸುವುದು ಅಥವಾ ಓದಲು ನಿರಾಕರಿಸುವುದು ಸಂವಿಧಾನಾತ್ಮಕ ಸಂಪ್ರದಾಯಕ್ಕೆ ವಿರುದ್ಧವಾಗುತ್ತದೆ.

ಸಂವಿಧಾನ ನಿರ್ಧರಿಸಿರುವ ರಾಜ್ಯಪಾಲರ ಪಾತ್ರ

ಭಾರತದ ಸಂವಿಧಾನವು ರಾಜ್ಯಪಾಲರ ಸ್ಥಾನಮಾನ ಮತ್ತು ಅಧಿಕಾರಗಳನ್ನು ಸ್ಪಷ್ಟವಾಗಿ ನಿರ್ಧರಿಸಿದೆ. ಸಂವಿಧಾನದ ಹಲವು ವಿಧಿಗಳ ಪ್ರಕಾರ ರಾಜ್ಯಪಾಲರು ಓರ್ವ ಸಾಂವಿಧಾನಿಕ ಮುಖ್ಯಸ್ಥರು. ಆದರೆ ಕಾರ್ಯನಿರ್ವಹಣೆಯ ನಿಜವಾದ ಅಧಿಕಾರವು ಜನರಿಂದ ಆಯ್ಕೆ ಯಾದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಕೈಯಲ್ಲಿದೆ. ಅಂದರೆ ರಾಜ್ಯಪಾಲರು ಸ್ವತಂತ್ರ ಕಾರ್ಯನಿರ್ವಾಹಕ ಅಧಿಕಾರಿಯಾಗಿಲ್ಲ; ಅವರು ಸಚಿವ ಸಂಪುಟದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ.

ಸಂವಿಧಾನದ ವಿಧಿ 176ರ ಪ್ರಕಾರ ವಿಧಾನಸಭೆಯ ಸಾಮಾನ್ಯ ಚುನಾವಣೆಯ ನಂತರ ನಡೆಯುವ ಮೊದಲ ಅಧಿವೇಶನದಲ್ಲಿ ಹಾಗೂ ಪ್ರತಿ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ವಿಧಾನಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವುದು ಕಡ್ಡಾಯವಾಗಿದೆ. ಅಧಿವೇಶನವನ್ನು ಏಕೆ ಕರೆಯಲಾಗಿದೆ ಎಂಬುದನ್ನು ಈ ಭಾಷಣವು ವಿವರಿಸುತ್ತದೆ. ನಂತರ ಈ ಭಾಷಣದ ವಿಷಯಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುವುದು ಪ್ರಜಾಪ್ರಭುತ್ವದ ಪ್ರಕ್ರಿಯೆಯ ಭಾಗವಾಗಿದೆ.

ಸಚಿವ ಸಂಪುಟದ ಸಲಹೆ

ವಿಧಾನಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲು ಅಥವಾ ಸಂದೇಶ ಕಳುಹಿಸಲು ಸಂವಿಧಾನದ ವಿಧಿ 175 ರಾಜ್ಯಪಾಲರಿಗೆ ಅವಕಾಶ ನೀಡುತ್ತದೆ. ಆದರೆ ಈ ಅಧಿಕಾರವನ್ನು ಅವರು ತಮ್ಮ ವೈಯಕ್ತಿಕ ಅಭಿಪ್ರಾಯದ ಪ್ರಕಟಣೆಗೆ ಬಳಸುವಂತಿಲ್ಲ. ರಾಜ್ಯಪಾಲರ ಭಾಷಣವು ಸರಕಾರದ ನೀತಿಗಳನ್ನು ಪ್ರತಿಬಿಂಬಿಸುವುದೇ ಹೊರತು ಅವರ ವೈಯಕ್ತಿಕ ದೃಷ್ಟಿಕೋನವನ್ನು ಅಲ್ಲ.

ಸಂವಿಧಾನಾತ್ಮಕ ಸಂಪ್ರದಾಯದ ಪ್ರಕಾರ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಸರಕಾರ ತಯಾರಿಸಿದ ಭಾಷಣದ ಪಠ್ಯದಿಂದ ವಿಚಲಿತರಾಗಬಾರದು. ಏಕೆಂದರೆ ಅದು ಜನರಿಂದ ಆಯ್ಕೆಯಾದ ಸರಕಾರದ ಅಧಿಕೃತ ನೀತಿ ಘೋಷಣೆ ಆಗಿರುತ್ತದೆ. ಅದರಲ್ಲಿ ಬದಲಾವಣೆ ಮಾಡಿದರೆ ಅಥವಾ ಅದನ್ನು ಓದಲು ನಿರಾಕರಿಸಿದರೆ ಸರಕಾರಕ್ಕೆ ರಾಜಕೀಯವಾಗಿ ಸಂಕಷ್ಟಕರ ಪರಿಸ್ಥಿತಿ ಉಂಟಾಗಬಹುದು

ಕೋರ್ಟ್ ತೀರ್ಪುಗಳು ಹೇಳುವ ಮಿತಿ

ಈ ವಿಷಯದಲ್ಲಿ ಭಾರತದ ಸುಪ್ರೀಂ ಕೋರ್ಟ್ ಹಲವು ತೀರ್ಪುಗಳ ಮೂಲಕ ರಾಜ್ಯ ಪಾಲರ ಅಧಿಕಾರದ ಮಿತಿಯನ್ನು ಸ್ಪಷ್ಟಪಡಿಸಿದೆ. ವಿಶೇಷವಾಗಿ 2016ರಲ್ಲಿ ನಡೆದ ನಾಬಮ್ ರೇಬಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ನೀಡಿತು. ಸಂವಿಧಾನದ ವಿಧಿ 163(1) ಪ್ರಕಾರ ರಾಜ್ಯಪಾಲರು ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತು.

ಸಂವಿಧಾನವು ವಿಶೇಷವಾಗಿ ಅವಕಾಶ ನೀಡಿರುವ ಕೆಲವೇ ಸಂದರ್ಭಗಳನ್ನು ಹೊರತು ಪಡಿಸಿದರೆ ರಾಜ್ಯಪಾಲರಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಸಾಮಾನ್ಯವಾಗಿ ಅವರು ಸಚಿವ ಸಂಪುಟದ ಸಲಹೆಯನ್ನು ಅನುಸರಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.

ನ್ಯಾಯಾಲಯ ಮತ್ತೊಂದು ಮಹತ್ವದ ಎಚ್ಚರಿಕೆಯನ್ನು ನೀಡಿದೆ. ರಾಜ್ಯಪಾಲರು ರಾಜ್ಯದಲ್ಲಿ ಸಮಾನಾಂತರ ಆಡಳಿತ ನಿರ್ಮಿಸುವಂತಾಗಬಾರದು. ಜನರಿಂದ ಆಯ್ಕೆ ಯಾದ ಸರಕಾರದ ಮೇಲೆ ಮತ್ತೊಂದು ಅಧಿಕಾರ ಕೇಂದ್ರ ನಿರ್ಮಾಣವಾದರೆ ಅದು ಸಂಸದೀಯ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಿಗೆ ವಿರುದ್ಧವಾಗುತ್ತದೆ.

ವಸಾಹತು ಕಾಲದ ಪರಂಪರೆ

ಇತಿಹಾಸಾತ್ಮಕವಾಗಿ ನೋಡಿದರೆ, ರಾಜ್ಯಪಾಲರ ಅಸ್ತಿತ್ವವು ವಸಾಹತುಶಾಹಿ ಆಡಳಿತದ ಕಾಲದಿಂದ ಬಂದ ವ್ಯವಸ್ಥೆಯಾಗಿದೆ. ಬ್ರಿಟಿಷರ ಆಡಳಿತದಲ್ಲಿ ರಾಜ್ಯಪಾಲರನ್ನು ಲಂಡನ್‌ ನಿಂದ ನೇಮಕ ಮಾಡಲಾಗುತ್ತಿತ್ತು. ಇಂದು ಅವರನ್ನು ಕೇಂದ್ರ ಸರಕಾರವು ದೆಹಲಿಯಿಂದ ನೇಮಕ ಮಾಡುತ್ತದೆ. ಆದರೂ ಪ್ರಜಾಪ್ರಭುತ್ವದ ಮೂಲತತ್ವ ಒಂದೇ- ಅದೆಂದರೆ, ನಿಜವಾದ ಅಧಿಕಾರವು ಜನರಿಂದ ಆಯ್ಕೆಯಾದ ಸರಕಾರದ ಕೈಯಲ್ಲಿರಬೇಕು ಎಂಬುದು.

ರಾಜ್ಯಪಾಲರು ಮತ್ತು ರಾಜ್ಯ ಸರಕಾರಗಳ ನಡುವೆ ಘರ್ಷಣೆಗಳು ಹೊಸದೇನಲ್ಲ. 1960ರ ದಶಕದಲ್ಲಿಯೇ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ಅವರು ವ್ಯಂಗ್ಯವಾಗಿ ಹೇಳಿದ ಈ ಮಾತು ಇಂದಿಗೂ ಪ್ರಸಿದ್ಧವಾಗಿದೆ: ‘ಒಂದು ಮೇಕೆಗೆ ಗಡ್ಡ ಏಕೆ ಬೇಕು? ಹಾಗೆಯೇ ಒಂದು ದೇಶಕ್ಕೆ ರಾಜ್ಯಪಾಲರು ಏಕೆ ಬೇಕು?’.

ಈ ಮಾತು ರಾಜ್ಯಪಾಲರ ಸ್ಥಾನಮಾನದ ಕುರಿತು ಸಮಾಜದಲ್ಲಿ ನಡೆಯುತ್ತಿರುವ ಚರ್ಚೆ ಯನ್ನು ಪ್ರತಿಬಿಂಬಿಸುತ್ತದೆ. ಆದರೆ ಸಂವಿಧಾನಾತ್ಮಕ ವ್ಯವಸ್ಥೆಯ ಮೂಲ ಸಂದೇಶ ಸ್ಪಷ್ಟ ವಾಗಿದೆ- ಜನರಿಂದ ಆಯ್ಕೆಯಾದ ಸರಕಾರವೇ ಆಡಳಿತದ ನಿಜವಾದ ಕೇಂದ್ರ. ರಾಜ್ಯಪಾಲ ರು ಆ ವ್ಯವಸ್ಥೆಯ ಗೌರವಾನ್ವಿತ, ಆದರೆ ಸಾಂವಿಧಾನಿಕ ಮಿತಿಗಳೊಳಗಿನ ಪಾತ್ರವನ್ನು ಮಾತ್ರ ನಿರ್ವಹಿಸಬೇಕು.

ಒಂದು ಸಾಂವಿಧಾನಿಕ ಸಂಸ್ಥೆಯು ಸಂವಿಧಾನದ ಚೌಕಟ್ಟನ್ನು ಮೀರಿದರೆ, ಅದು ಇಡೀ ದೇಶದಲ್ಲಿ ಅರಾಜಕತೆಯ ಆರಂಭ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಸಾವಿರಾರು ವರ್ಷಗಳಿಂದ ವಿವಿಧ ಸಂಸ್ಕೃತಿಗಳು, ಮಹಾನ್ ವ್ಯಕ್ತಿಗಳ ಅನೇಕ ಕೊಡುಗೆಗಳಿಂದಾಗಿ ನಮ್ಮ ದೇಶವು ವೈವಿಧ್ಯದ ಅತ್ಯುತ್ತಮ ಅನನ್ಯ ದೇಶವಾಗಿದೆ. ಆದ್ದರಿಂದ ಒಕ್ಕೂಟ ರಚನೆಯು ನಮ್ಮ ಆಡಳಿತದ ಆತ್ಮವಾಗಿದೆ. ಒಕ್ಕೂಟ ರಚನೆಯು ವೈಯಕ್ತಿಕ ವೈವಿಧ್ಯ ಮಯ ಹಿತಾಸಕ್ತಿಗಳನ್ನು ಗೌರವಿಸುತ್ತದೆ.

ಒಂದು ರಾಜ್ಯ ಸರಕಾರವು ಆಯಾ ರಾಜ್ಯದ ಜನರ ನಿಜವಾದ ಹಿತಾಸಕ್ತಿಗಳೇನು ಎಂಬು ದನ್ನು ಚೆನ್ನಾಗಿ ತಿಳಿದಿರುತ್ತದೆ. ಕೆಲವು ರಾಜ್ಯಪಾಲರ ಇತ್ತೀಚಿನ ವರ್ತನೆ ಈ ದೇಶದ ಅಗತ್ಯ ಒಕ್ಕೂಟ ರಚನೆಯನ್ನು ಅಣಕಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗಳಿಗಿಂತ ಸಂವಿಧಾನವೇ ಶ್ರೇಷ್ಠ. ಅದರ ಆತ್ಮವನ್ನು ಗೌರವಿಸುವುದು ಪ್ರತಿಯೊಂದು ಸಂವಿಧಾನಾತ್ಮಕ ಸಂಸ್ಥೆಯ ಜವಾಬ್ದಾರಿಯಾಗಿದೆ.

(ಲೇಖಕರು ವಕೀಲರು)