ವಿದ್ಯಮಾನ
ಜಂತರ್ ಮಂತರ್ ಎನ್ನುವ ಪ್ರದೇಶ ನವದೆಹಲಿಯ ಹೃದಯ ಭಾಗದಲ್ಲಿದೆ. ಸಂಸತ್ ಭವನದಿಂದ ಕೆಲವೇ ಕೆಲವು ಮೀಟರ್ ಅಂತರದಲ್ಲಿ ಇರುವಂಥಾ ಪ್ರದೇಶ. ನಡೆದು ಹೋದರೆ 20 ನಿಮಿಷಕ್ಕೆ ಸಂಸತ್ತಿನ ಬಾಗಿಲು ತಲುಪಿಬಿಡಬಹುದು. ಆ ಪ್ರದೇಶಕ್ಕೆ ಅದರದ್ದೇ ಆದ ಶತಮಾನಗಳ ಇತಿಹಾಸ ಅಂತ ಇದ್ದರೂ, ಇತ್ತೀಚಿನ ದಿನಗಳಲ್ಲಿ ಅದು ಪ್ರಖ್ಯಾತವಾದದ್ದು, ಸುದ್ದಿಯಲ್ಲಿದ್ದದ್ದು ಅಲ್ಲಿ ನಡೆಯುವ ಪ್ರತಿಭಟನೆ ಹೋರಾಟಗಳಿಂದ. ಅಣ್ಣಾ ಹಜಾರೆಯವರ ಹರತಾಳ ಶುರುವಾದದ್ದೂ ಇದೇ ಜಂತರ್ ಮಂತರ್‌ನಲ್ಲಿಯೇ ಆಗಿತ್ತು. ನಂತರ ಅದು ರಾಮ್ ಲೀಲಾ ಮೈದಾನಕ್ಕೆ ಸ್ಥಳಾಂತರ ವಾಗಿತ್ತು. ಈಗ ಮತ್ತೆ ಅದೇ ಪ್ರತಿಭಟನೆಯ ಕಾರಣದಿಂದ ಜಂತರ್ ಮಂತರ್ ಮತ್ತೆ ಸುದ್ದಿಯಲ್ಲಿದೆ.
ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅದರಿಂದ ಬಾಧಿತರಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ. ಅವರಿಗೆ ನ್ಯಾಯ ಒದಗಿಸಬೇಕು ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು ಎನ್ನುವ ಪ್ರಮುಖ ಬೇಡಿಕೆಯೊಂದಿಗೆ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುತ್ತಾರೆ. ಅನೇಕ ವಿದ್ಯಾರ್ಥಿಗಳು ಸಂಘಟನೆಗಳು ಅವರ ಹೋರಾಟಕ್ಕೆ ದನಿಗೂಡಿಸುತ್ತವೆ.
ಒಂದು ಹಂತದವರೆಗೆ ಸತ್ಯಾಗ್ರಹ ಶಾಂತವಾಗಿಯೇ ಸಾಗಿತ್ತು. ಸಿಜೆಪಿ ಯಾವಾಗ ಹೆಚ್ಚಿನ ಸಂಖ್ಯೆ ಯಲ್ಲಿ ತಮ್ಮ ಬೆಂಬಲಿಗರನ್ನು ಜಂತರ್ ಮಂತರ್‌ಗೆ ಕರೆಯಲು ಪ್ರಾರಂಭ ಮಾಡಿತೋ ಪ್ರತಿಭಟನೆ ತೀವ್ರಗೊಳ್ಳುವ ಲಕ್ಷಣಗಳು ಕಂಡುಬಂತು. ಸಾವಿರಾರು ಕ್ರಿಮಿನಲ್ ಹಿನ್ನೆಲೆಯುಳ್ಳವರು ಬಂದು ಸೇರಿಕೊಂಡುಬಿಟ್ಟರು. ಸಂಸತ್ತಿನ ಮುಂಗಾರು ಅಧಿವೇಶನದ ಆರಂಭಿಕ ದಿನದಂದು, ಸಿಜೆಪಿ ಜಂತರ್ ಮಂತರ್‌ನಿಂದ ಸಂಸತ್ತಿನ ಕಡೆಗೆ ಬೃಹತ್ ‘ಸಂಸತ್ ಚಲೋ’ ಮೆರವಣಿಗೆಯನ್ನು ಮುನ್ನಡೆಸುತ್ತದೆ.
ರೈಲ್ವೆ ಭವನದ ಬಳಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವ ಲಕ್ಷಣಗಳು ತೋರಿದಾಗ ದೆಹಲಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಗುತ್ತದೆ. ಈ ಘಟನೆಯಲ್ಲಿ ಸುಮಾರು 130 ಪೊಲೀಸ್ ಸಿಬ್ಬಂದಿ ಮತ್ತು 80 ಪ್ರತಿಭಟನಾಕಾರರು ಗಾಯಗೊಂಡಿದ್ದು, ದೆಹಲಿ ಪೊಲೀಸರು 20 ಎಫ್ʼಐಆರ್ ಗಳನ್ನು ದಾಖಲಿಸುತ್ತಾರೆ. ಜುಲೈ 23ರಂದು ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ವಿವಾದದ ಬಗ್ಗೆ ಮಾತನಾಡಿ, ಪರೀಕ್ಷಾ ವಂಚನೆ ಪ್ರಕರಣಗಳನ್ನು ನಿರ್ವಹಿಸಲು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ರಚಿಸುವುದಾಗಿ ಘೋಷಿಸುತ್ತಾರೆ.
ಇದನ್ನೂ ಓದಿ: Vinayaka M Bhat Column: ಮನೆಯ ಹಿರಿಯರ ವೃದ್ಧಾಪ್ಯವನ್ನು ಸಹನೀಯವಾಗಿಸೋಣ
ಕೇಂದ್ರದ ಹಿರಿಯ ಮಂತ್ರಿಗಳ ಜೊತೆಗಿನ ಮಾತುಕತೆಗಳು ಫಲಪ್ರದವಾಗಿರುವುದರಿಂದ ಸೋನಮ್ ವಾಂಗ್ಚುಕ್ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೈಬಿಡಲು ಒಪ್ಪುತ್ತಾರೆ. ಎರಡುದಿನ ಬಿಟ್ಟು ಪರೀಕ್ಷೆಯ ವೈಫಲ್ಯಗಳ ನೈತಿಕ ಜವಾಬ್ದಾರಿಯನ್ನು ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ಅಲ್ಲಿಂದ ಮುಂದೆ ಜಂತರ್ ಮಂತರ್ ನಲ್ಲಿ ಕಸದ ಗುಡ್ಡೆಯನ್ನು ಬಿಟ್ಟು ಒಂದು ನರಹುಳವೂ ಇಲ್ಲದಂತಾಯ್ತು. ವಾಂಗ್ಚುಕ್ ವಂದೇ ಭಾರತ್ ರೈಲು ಹತ್ತಿ, ಲಡಾಖ್ ಗೆ ಪ್ರಯಾಣ ಬೆಳೆಸಿದರು.
ಇದು ಘಟನಾವಳಿಗಳ ಒಟ್ಟಾರೆ ಚಿತ್ರಣ. ಭಾರತದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು, ವಿದ್ಯಾರ್ಥಿಗಳು ಚಳವಳಿ ಮಾಡುವುದು ಇದೇ ಮೊದಲೇನೂ ಅಲ್ಲ, ನೀಟ್ ಪರೀಕ್ಷೆಯ ಅಕ್ರಮದ ಪರಿಣಾಮವಾಗಿ ಸುಮಾರು ಇಪ್ಪತ್ತು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಎಲ್ಲರೂ ಪ್ರಶ್ನೆಪತ್ರಿಕೆಯ ಸೋರಿಕೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಿಕ್ಕೆ ಯಾವುದೇ ಪುರಾವೆಗಳಿಲ್ಲ.
ದುರದೃಷ್ಟವಶಾತ್, ಅತಿಯಾದ ನಿರೀಕ್ಷೆ, ಪಾಲಕರ ಒತ್ತಡ, ಸಾಮಾಜಿಕ ಒತ್ತಡ ಮುಂತಾದ ಅನೇಕ ಕಾರಣಗಳಿಂದಾಗಿ ಮುಗ್ಧ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಪಾಪ. ವಿವಿಧ ರಾಜ್ಯ ಗಳಲ್ಲಿ ತರಬೇತಿಯ ಒತ್ತಡವನ್ನು ತಾಳಲಾರದೇ ನೀಟ್ ಪರೀಕ್ಷೆಯ ತಯಾರಿಯಲ್ಲಿರುವ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಯವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಮೊನ್ನೆ ನಡೆದ ಹೋರಾಟಕ್ಕೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಒಂದು ನೆವವಷ್ಟೇ ಅಂತಹೇಳಬಹುದು. ಈ ಹೋರಾಟಕ್ಕೆ ಬೇರೆಯದೇ ಆದ ಒಂದು ದೊಡ್ಡ ಉದ್ದೇಶವಿತ್ತು ಎನ್ನುವುದು ಸ್ಪಷ್ಟವಾಗಿ ಮನದಟ್ಟಾಗುತ್ತದೆ.
ಅದಲ್ಲದಿದ್ದರೆ, ಬ್ರಾಹ್ಮಣವಾದ ನಿಲ್ಲಬೇಕು, ಅಹ್ ತೇರಾ ನಾಮ್ ರಹೇಗಾ, ಆರ್‌ಎಸ್‌ಎಸ್ ಮುರ್ದಾಬಾದ್. ಪ್ರಧಾನಿ ಮೋದಿ ಮರ್‌ಜಾಯೆ, ಹೀಗೆ ನೀಟ್ ಪರೀಕ್ಷೆಗೆ ಸಂಬಂಧವೇ ಇಲ್ಲದ ವಿಷಯಗಳನ್ನು ಅಲ್ಲಿ ಚರ್ಚಿಸಲಾಗುತ್ತಿರಲಿಲ್ಲ. ನೀಟ್ ಮರು ಪರಿಕ್ಷೆ ಮುಗಿದಲ್ಲಿಗೆ ಈ ಅಧ್ಯಾಯಕ್ಕೆ ಮಂಗಳ ಹಾಡಿಯಾಗಿತ್ತು. ಇದಾವುದರ ಗೊಡವೆಯೇ ಇಲ್ಲದೇ ನಮ್ಮ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ನೆಮ್ಮದಿಯಾಗಿ ವಿದೇಶ ಪ್ರವಾಸ ಮುಗಿಸಿ ಬಂದಿದ್ದರು.
ಸೋನಮ್ ವಾಂಗ್ಚುಕ್ ಉಪವಾಸ ಮುಂದುವರಿಯುತ್ತಿದ್ದಂತೆ ಸುಳ್ಳು ಹೋರಾಟಗಾರರಿಗೆ ಹಾಗೂ ಕಾಂಗ್ರೆಸ್ಸಿಗೆ ಇಂದು ಅವಕಾಶವಿದೆ ಎನ್ನುದು ಅರಿವಿಗೆ ಬಂತು ಅಂತ ಕಾಣುತ್ತೆ. ಜಂತರ್ ಮಂತರ್ ನಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ಸೇರಿಸದ ಕಾರಣ ರಾಗಾ ಮತ್ತು ಅವರ ತಂಡ ಪ್ರಧಾನ ಮಂತ್ರಿಗಳ ಮನೆಯ ಮುಂದಿನ ರಸ್ತೆಯ ಮೇಲೆ ಧರಣಿ ಮಾಡಿದರೆ, ಜಂತರ್ ಮಂತರ್‌ನಲ್ಲಿ ಕೆಲವೇ ಕೆಲವು ಪ್ರಾಮಾಣಿಕ ವಿದ್ಯಾರ್ಥಿಗಳ ಜೊತೆಗೆ, ಕ್ರಿಮಿನಲ್ಸ್, ಭಾರತ ವಿರೋಧಿ ಮನಸ್ಥಿತಿಯವರು, ಎಡಚರು ಹಾಗೂ ಭಾರತ ವಿರೋಧಿ ಹೋರಾಟದಲ್ಲಿ ಸದಾ ಗುರುತಿಸಿಕೊಳ್ಳುವ ಸಿನಿಮಾ ನಟರು ಎಲ್ಲರೂ ಒಟ್ಟಿಗೆ ಸೇರಿ ಬಿಟ್ಟರು.
ಇವರ ಗದ್ದಲದ ಮಧ್ಯದಲ್ಲಿ ಸೋನಮ್ ವಾಂಗ್ಚುಕ್‌ರ ಉಪವಾಸ ಸತ್ಯಾಗ್ರಹ ಮಸುಕಾಗಿ ಹೋಯಿತು ಪಾಪ. ಹಿಂದೆ ಕಾಂಗ್ರೆಸ್ಸಿನ ಸರಕಾರದಲ್ಲಿ ಸಚಿವರಾಗಿದ್ದವರ ಮಗ, ಚೀನಾದ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದರು ಮುಂತಾಗಿ ಸೋನಮ್ ವಾಂಗ್ಚುಕ್ ಅವರ ಪ್ರಾಮಾಣಿಕತೆಯನ್ನೂ ಪ್ರಶ್ನೆ ಮಾಡುವ ಪ್ರಯತ್ನವೂ ನೆಡೆಯಿತು. ಅವರ ಹಿನ್ನೆಲೆ ಏನೇ ಇರಲಿ, ಮಹಾತ್ಮಾ ಗಾಂಧೀಜಿ ಗಿಂತಲೂ ಐದು ದಿನ ಹೆಚ್ಚು
ಅಂದರೆ 26 ದಿನ ಉಪವಾಸ ಮಾಡಿ 11 ಕಿಲೋಗ್ರಾಮ್‌ನಷ್ಟು ತೂಕ ಕಳೆದುಕೊಂಡು ಸಾವಿನ ದವಡೆಯಿಂದ ಪಾರಾಗಿ ಬಂದವರ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡುವುದು ಸಂಸ್ಕಾರವಲ್ಲ. ಅಷ್ಟರ ಮಟ್ಟಿಗೆ ಅವರ ಹೋರಾಟದ ಪ್ರಾಮಾಣಿಕತೆಯನ್ನು ನಾವು ಒಪ್ಪೋಣ. ಆದರೆ ಕೆಲವು ದುಷ್ಕರ್ಮಿಗಳು ಅವರ ಹೋರಾಟವನ್ನು ದಾರಿತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದರೂ ವಾಂಗ್ಚುಕ್ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದರು.
ಅಲ್ಲಿನ ಆಗುಹೋಗುಗಳ ಮೇಲೆ ಅವರಿಗೆ ಯಾವ ನಿಯಂತ್ರಣವೂ ಇರಲಿಲ್ಲ. ಅವರ ಸತ್ಯಾಗ್ರಹ ನೋಡ ನೋಡುತ್ತಿದ್ದಂತೆ ಹೈಜಾಕ್ ಆಗಿಬಿಟ್ಟಿತ್ತು. ವಿಚ್ಛಿದ್ರಕಾರಕ ಶಕ್ತಿಗಳು ಅಲ್ಲಿ ವಿಜೃಂಭಿಸು ತ್ತಿದ್ದರು. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅತ್ಯಾಚಾರ ಮುಂತಾದ ಕ್ರಿಮಿನಲ್ ಹಿನ್ನೆಲೆಯುಳ್ಳ ಜನ ಬಂದು ಸೇರಿಕೊಂಡರು. ಪೋಲೀಸರಿಗೆ ಮುಖ ಮೂತಿ ನೋಡದೇ ಬೂಟುಗಾಲಿನಿಂದ ಒದಯಲಾಯಿತು.
ಮನೆಯಿಂದ ಎಳೆದು ತಂದು ಮಾರಣಾಂತಿಕವಾಗಿ ಹಲ್ಲೆ ಮಾಡಲಾಯಿತು. ನಾಲ್ಕು ನಾಲ್ಕು ಮತದಾರ ಚೀಟಿಗಳನ್ನು ಹೊಂದಿರುವ ಫ್ರಾಡ್ ಗಳು ಅಲ್ಲಿ ಬಂದು ಮಿಂಚಿದರು, ಧರ್ಮವನ್ನು ಎಳೆದು ತರಲಾಯಿತು, ನೀಟ್ ಹೋರಾಟ ಹಿಂದೂ ಅಥವಾ ಭಾರತದ ಪ್ರಜಾಸತ್ತೆಯ ವಿರೋಧಿ ಚಳುವಳಿಯ ಹಾಗೆ ಕಂಡುಬಂತು.
ನೀಟ್ ಪರೀಕ್ಷೆಯಿಂದ ಬಾಧಿತರಾಗಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಪಾಲಕರು ಹೋರಾಟದ ವೇದಿಕೆಯ ಮುಂಬಾಗದಲ್ಲಿರುತ್ತಾರೆ ಎಂದುಕೊಂಡಿದ್ದರೆ, ಅಲ್ಲಿನ ವೇದಿಕೆಯ ಮೇಲೆ ಕಂಡಿದ್ದು, ಅರುಂಧತಿ ರಾಯ, ಪ್ರಕಾಶ್ ರಾಜ್, ಶಬನಾ ಅಜ್ಮಿ ಇಂಥವರೇ ಆಗಿದ್ದರು. ಉಪವಾಸಕ್ಕೆ ಕುಳಿತ ಸೋನಮ್ ವಾಂಗ್ಚುಕ್ ಅವರದ್ದು ಮೂರೇ ಬೇಡಿಕೆಯಾದರೆ, ಹೋರಾಟವನ್ನು ಹೈಜಾಕ್ ಮಾಡಿದ ಕಾಕ್ರೋಚ್ ಪಕ್ಷದ ಬೇಡಿಕೆ ಮೂವತ್ತು ಇತ್ತು. ಕ್ರಿಮಿನಲ್ ಹಿನ್ನೆಲೆಯುಳ್ಳವರ ಮೇಲೂ ಯಾವುದೇ ಕ್ರಮವಾಗಬಾರದು, ನಾವು ಜೆನ್‌ಜಿಯವರು ಎನ್ನುವ ಕಾರಣಕ್ಕೆ ಸುಪ್ರಿಮ್ ಕೋರ್ಟ್ ಕೂಡಾ ಮಂಡಿಯೂರಬೇಕು ಎನ್ನುವ ನಿರೀಕ್ಷೆ ಇವರದ್ದು. ಇನ್ನು ಕೆಲವರ ಧೋರಣೆಯನ್ನು ಗಮನಿಸಬೇಕು.
ವಿಮಾನ ಅಪಹರಣ ಮಾಡಿದ ಭಯೋತ್ಪಾದಕರು ಸರಕಾರದ ಜೊತೆಗೆ Negotiation ಮಾಡ್ತಾರಲ್ಲ, ಹಾಗಿತ್ತು ಅವರ ಧೋರಣೆ. ಸಾಮಾನ್ಯವಾಗಿ ಇಂಥಾ ಸಂದರ್ಭಗಳಲ್ಲಿ ಸರಕಾರ ಚಳವಳಿ ನಿರತರನ್ನು ಮಾತುಕತೆಗೆ ಕರೆಯುತ್ತೆ ಮತ್ತು ಸರಕಾರದ ಜಾಗದಲ್ಲಿ ಮಾತುಕತೆ ನಡೆಯುತ್ತೆ. ಆದರೆ ಇಲ್ಲಿ ನಡೆದದ್ದು ಹಾಗಲ್ಲ. ಕೇಂದ್ರ ಸರಕಾರ ಕರೆದಲ್ಲಿಗೆ ನಾವು ಬರುವುದಿಲ್ಲ, ಸರಕಾರವೇ ಜಂತರ್ ಮಂತರ್‌ಗೆ ಬರಲಿ ಅಥವಾ ಯಾವುದಾದರೂ ತಟಸ್ಥ ಜಾಗದಲ್ಲಿ ಮಾತನಾಡಬಹುದು ಎಂದು ಕೇಂದ್ರ ಸರಕಾರಕ್ಕೇ ಹೋರಾಟಗಾರರು ಫರ್ಮಾನು ಹೊರಡಿಸಿ ಯಶಸ್ವಿಯಾದರು ಕೂಡಾ. ಭಾರತಮಾತೆ ಅಂದರೆ ಆಕೆ ಯಾರು? ಎಲ್ಲಿದ್ದಾಳೆ ಅವಳು ಎಂದು ಕಾಂಗ್ರೆಸ್ಸಿನ ಚಿರಯುವಕ ರಾಹುಲ್ ಗಾಂಧಿ ಒಮ್ಮೆ ಕೇಳಿದ್ದರು, ವಿದ್ಯಾರ್ಥಿಗಳು ಎಂದು ಹೇಳಿಕೊಳ್ಳುವ ಇವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಭಾರತ’ ಮಾತೆಯಾದರೆ, ಪಿತ ಯಾರು ಎಂದು ಕೇಳಿದರು.
ರಾಮ ಸೀತೆಯ ಬಗ್ಗೆ ಮಾತಾಡಿದರು. ಇನ್ನು ದೇಶದ ಪ್ರಧಾನಿ ಮೋದಿಯವರ ಬಗ್ಗೆಯಂತೂ ಆಡಬಾರದ ಎಲ್ಲ ಮಾತನ್ನೂ ಆಡಿದರು. ಪ್ರಧಾನಮಂತ್ರಿಯ ಸ್ಥಾನದಲ್ಲಿರುವ ಯಾರ ಬಗ್ಗೆ ಇಂಥಾ ಹೊಲಸು ಮಾತುಬಂದರೂ ಅದನ್ನು ಸಹಿಸಲಾಗದು, ಅದರಲ್ಲೂ ನರೇಂದ್ರ ಮೋದಿಯಂಥಾ ನಿಸ್ವಾರ್ಥ ಸಮರ್ಪಿತ ದೇಶಸೇವಕ ಆ ಸ್ಥಾನದಲ್ಲಿರುವಾಗ ಅವರ ಬಗ್ಗೆ ಯಾರಾದರೂ ಅಶ್ಲೀಲ ಮಾತನಾಡಿದರೆ ಸುಮ್ಮನಿರಲಾಗದು, ಸುಮ್ಮನಿರಬಾರದು ಕೂಡಾ.
ಇನ್ನು, ಹೋರಾಟದಲ್ಲಿ ಪಾಲ್ಗೊಂಡ ಹೆಣ್ಣುಮಕ್ಕಳ ಭಾಷೆ, ಹಾವಭಾವಗಳ ಬಗ್ಗೆ ಮಾತನಾಡದಿರು ವುದೇ ಒಳ್ಳೆಯದು. ಪ್ರಧಾನಿ ಮೋದಿಯವರ ಬಗ್ಗೆ ಅವರಾಡಿದ ಅತ್ಯಂತ ಅಶ್ಲೀಲ ಮಾತುಗಳನ್ನು ನಮ್ಮಂಥವರು ಕೇಳಿಸಿಕೊಳ್ಳುವುದು ಅಸಾಧ್ಯ. ಟಿವಿ ಚಾನೆಲ್‌ಗಳು ಬೀಪ್ ಸೌಂಡ್ ಬಳಸಿ ಪ್ರಸಾರ ಮಾಡಿದವು. ಒಂದೊಮ್ಮೆ ಆ ಹುಡುಗಿಯರ ಮಾತುಗಳನ್ನು ಅವರ ತಂದೆ ತಾಯಿ ಕೇಳಿಸಿಕೊಂಡರೆ ಅವರಿಗೆ ಆತ್ಮಹತ್ಯೆಗೆ ಶರಣಾಗುವುದನ್ನು ಬಿಟ್ಟು ಬೇರೇ ಯಾವುದೇ ದಾರಿ ಇರುವುದಿಲ್ಲ.
ದೇಶದ ಗೌರವಾನ್ವಿತ ಪ್ರಧಾನಿಗೆ ನಿಮ್ಮ ಸಹ ಹೋರಾಟಗಾರರು ಹೀಗೆಲ್ಲ ಅಶ್ಲೀಲ ಮಾತನಾಡ ಬಹುದಾ? ಎಂದು ಕೇಳಿದರೆ, ಕಾಕ್ರೋಚ್ ಪಕ್ಷದ ವಕ್ತಾರ ಆಡುವ ಮಾತು, ಪ್ರಧಾನ ಮಂತ್ರಿಯೇನೂ ದೇವರಲ್ಲವಲ್ಲ, ಟೀಕೆಗಳನ್ನು ಬೈಗುಳಗಳನ್ನು ಸಹಿಸಿಕೊಳ್ಳುವುದನ್ನು ಅವರು ಕಲಿತುಕೊಳ್ಳಬೇಕು ಎನ್ನುತ್ತಾನೆ.
ಇನ್ನೊಬ್ಬ ಮಹಾನುಭಾವ ದೇಶದ ಇತಿಹಾಸದಲ್ಲಿ ಅತ್ಯಂತ ಘಟಿಯಾ ಪ್ರಧಾನಮಂತ್ರಿಗಳು ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಎನ್ನುತ್ತಾನೆ. ಎಂಥಾ ದುರಂತ ಇದು. ಎಲ್ಲ ಆಯಾಮಗಳಿಂದ ಜಾಗತಿಕವಾಗಿ ಭಾರತ ತನ್ನ ಸ್ಥಾನವನ್ನು ಕಳೆದ ಹತ್ತು ವರ್ಷಗಳೀಂದ ಸತತವಾಗಿ ಬಲಪಡಿಸುತ್ತಲೇ ಸಾಗಿದೆ. ಜಾಗತಿಕವಾಗಿ ಭಾರತದ ಕುರಿತಾಗಿದ್ದ ಭಾವನೆಗಳು ಈಗ ಬದಲಾಗಿವೆ ಮತ್ತು ಅದಕ್ಕೆ ನರೇಂದ್ರ ಮೋದಿಯವರ ಪುರೋಗಾಮಿ ಹಾಗೂ ಸೃಜನಾತ್ಮಕವಾದ ಹಾಗೂ ಅತ್ಯಂತ ಧೈರ್ಯದ ನಿರ್ಧಾರಗಳೇ ಕಾರಣ ಎಂದು ಅಮೇರಿಕದ ಅತ್ಯಂತ ಜನಪ್ರಿಯ ರಾಜಕೀಯ ವಿಶ್ಲೇಷಕರಾದ ಇಯಾನ್ ಆರ್ಥರ್ ಬ್ರೆಮ್ಮೆರ್ ಹೇಳುತ್ತಾರೆ.
ಅಷ್ಟಕ್ಕೇ ನಿಲ್ಲಿಸದೇ, ಸತತವಾಗಿ ಭಾರತವನ್ನು ಜಾಗತಿಕವಲಯದಲ್ಲಿ ನಾಯಕತ್ವದ ಸ್ಥಾನಕ್ಕೆ ಕೊಂಡೊಯ್ಯುತ್ತಿರುವ ನರೇಂದ್ರ ಮೋದಿ ಇಂದು ಜಗತ್ತು ಮೆಚ್ಚುವ ನಾಯಕನಾಗಿ ಮಿಂಚುತ್ತಿದ್ದಾರೆ. ಆದರೆ ದುರದೃಷ್ಟವಶಾತ್ ಭಾರತದ ಅವರಿಗೆ ವೈರಿಗಳು ಹೆಚ್ಚಿಗೆ ಇದ್ದಾರೆ ಎನ್ನುವ ಪರಮಸತ್ಯದ ಮಾತನ್ನಾಡುತ್ತಾರೆ. ಕಳೆದ ಹನ್ನೆರಡು ವರ್ಷಗಳಲ್ಲಿ ಇಂಗ್ಲೆಂಡು ಆರು ಪ್ರಧಾನಮಂತ್ರಿಗಳನ್ನು ನೋಡಿದೆ. ಭಾರತದಲ್ಲಿನ್ನೂ ನರೇಂದ್ರ ಮೋದಿಯವರೇ ಪ್ರಧಾನಮಂತ್ರಿಯಾಗಿದ್ದಾರೆ.
ಕೆಲವರಿಗೆ ಅದೇ ಸಮಸ್ಯೆಯಾಗಿರುವುದು. ನಾವು ನಿರ್ಧಾರ ಮಾಡಬೇಕಿದೆ, ಎರಡು ವರ್ಷಕ್ಕೊಮ್ಮೆ ನಮ್ಮ ಪ್ರಧಾನಿಗಳು ಬದಲಾಗಬೇಕಾ ಅಥವಾ ರಾಜಕೀಯ ಭದ್ರತೆ ಬೇಕಾ? ಈ ಮನುಷ್ಯ ಕಳೆದ ಹನ್ನೆರಡು ವರ್ಷಗಳ ಹಿಂದೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಭಾರತದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು, ಈಗ ಮೂರನೇ ಸ್ಥಾನದತ್ತ ದಾಪುಗಾಲಿಡುತ್ತಿದೆ, ನಕ್ಸಲ್ ಚಳುವಳಿಯಿಂದ ಹೈರಾಣಾಗಿದ್ದ ಈಶಾನ್ಯ ಭಾರದಲ್ಲಿ ಈಗ ಕೊನೆಯ ನಕ್ಸಲನೂ ಬಂಧಿಸಲ್ಪಟ್ಟ ಎಂಬ ಸುದ್ದಿ ಬರುತ್ತಿದೆ. ಕಳೆದ ಹನ್ನೆರಡು ವರ್ಷಗಳಲ್ಲಿ ಭಾರತದ ಮೇಲಿನ ಭಯೋತ್ಪಾದಕ ದಾಳಿಗಳು ಸರಿಸುಮಾರು 70%ನಷ್ಟು ಕಡಿಮೆಯಾಗಿದೆ.
ಜಗತ್ತು ಶೇಕಡಾ ನಾಲ್ಕಕ್ಕಿಂತ ಕಡಿಮೆ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೆ, ಭಾರತ ಹತ್ತಿರಹತ್ತಿರ ಶೇ.7ರ ಪ್ರಮಾಣದಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಒಂದು ದೇಶದ Political stability ಗೆ ಇವನ್ನೆಲ್ಲ ತರುವ ಸಾಧ್ಯತೆ ಇರುತ್ತದೆ. ಇವನ್ನೆಲ್ಲ ಕೆಲವು ವಿದೇಶೀ ಶಕ್ತಿಗಳಿಗೆ ಹಾಗೂ ದೇಶವಿರೋಧಿ ಶಕ್ತಿಗಳಿಗೆ ಸಹಿಸಲಾಗುತ್ತಿಲ್ಲ ಪಾಪ.
ಪ್ರಶ್ನೆಪತ್ರಿಕೆ ಸೋರಿಕೆಯಾದಲ್ಲಿಂದ, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವವರೆಗೆ ನಮ್ಮ ಘನ ಕೇಂದ್ರ ಸರಕಾರ ಕಿಂಚಿತ್ತೂ ಸಂವೇದನೆಯನ್ನು ತೋರಿಸಿಲ್ಲ ಮತ್ತು ವಿದ್ಯಾರ್ಥಿ ಸಮೂಹದ ಜೊತೆಗೆ ಸಂವಹನ ಮಾಡುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ ಎನ್ನುವುದು ವಿಷಾದದ ಸಂಗತಿಯೇ. ಹಾಗಾದರೆ, ಇಷ್ಟೆಲ್ಲ ಗದ್ದಲಗಳ ನಂತರ ತೆಗೆದುಕೊಂಡ ಕ್ರಮಗಳನ್ನು ಕೇಂದ್ರ ಸರಕಾರ ಮೊದಲೇ ತೆಗೆದುಕೊಂಡಿದ್ದರೆ ಇವೆ ಹೋರಾಟಗಳು, ನೆಗೋಶಿಯೇಶನ್ ಎಲ್ಲಾ ಆಗ್ತಾ ಇರಲಿಲ್ವಾ ಅಂತ ಕೇಳಿದರೆ? ಸಮಯ ಸ್ವಲ್ಪ ಆಚೆ ಈಚೆ ಆಗ್ತಿತ್ತೇನೋ, ಆಡಳಿತವನ್ನು ಬದಲಿಸಿ ದೇಶದಲ್ಲಿ ಈ ಅರಾಜಕತೆಯನ್ನು ಹುಟ್ಟುಹಾಕುವ ಉದ್ದೇಶದ ಹೋರಾಟ ನಡೆದೇ ನಡೀತಿತ್ತು, ಇದು ಒಂದು ನೆಪವಷ್ಟೇ ಎಂದು ಹೇಳಬಹುದಾಗಿದೆ.
ಅಂತೂ, ಬ್ರಾಹ್ಮಣವಾದ ನಿಲ್ಲಬೇಕು, ಆರ್‌ಎಸ್‌ಎಸ್ ಮುರ್ದಾಬಾದ್ ಎಂದವರಿಗೆ ಸಿಕ್ಕ ಉತ್ತರ, ಓಬಿಸಿಗೆ ಸೇರಿದ ಧರ್ಮೇಂದ್ರ ಪ್ರಧಾನ್ ಅವರನ್ನು ಕೆಳಗಿಳಿಸಿ ಶುದ್ಧ ವೈಷ್ಣವ ಬ್ರಾಹ್ಮಣ ಹಾಗೂ ಆರ್‌ಎಸ್ ಎಸ್‌ನ ನಿಷ್ಠಾವಂತ ಶಿಶು ಪ್ರಲ್ಹಾದ ಜೋಶಿಯವರನ್ನು ತಂದು ಆ ಜಾಗದಲ್ಲಿ ಕುಳ್ಳಿರಿಸಿದ ಹಾಗಾಯ್ತು. ಮೋದಿ ಸರಕಾರದ ವಿರುದ್ಧ ಆಕ್ರೋಶ ದೇಶವ್ಯಾಪಿ ಹರಡುತ್ತೆ ಎಂದು ಕೊಂಡವರ ಕನಸು ತಿರುಕನ ಕನಸಾಯಿತು. ಈ ದುಷ್ಟಕೂಟದ ಷಡ್ಯಂತ್ರದ ವಿರುದ್ಧವೇ ದೇಶದ ಸಭ್ಯ ಯುವಕರು ಯಗ್ಗಾಮುಗ್ಗಾ ತಿರುಗಿಬಿದ್ದರು. ಈ ಬೆಳವಣಿಗೆಯಿಂದ ಗಾಬರಿಗೊಂಡ ದುಷ್ಟಪಡೆ, ಸರಕಾರ ಯಾರು ಶಿಕ್ಷಣ ಮಂತ್ರಿಯಾಗಿದ್ದಾಗ ಹತ್ತಾರು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತೋ, ಅದೇ ಕಪಿಲ್ ಸಿಬಲ್ ಮನೆಗೆ ಹೋಗಿ ಕಾನೂನು ನೆರವಿಗಾಗಿ ಹೋಗಿ ಬಾಗಿಲು ತಟ್ಟುವಂತಾಯ್ತು.
ಅವರ ಹೋರಾಟಕ್ಕೆ ಬಲತುಂಬುವ ಉದ್ದೇಶದಿಂದ ಕಪಿಲ್ ಸಿಬಲ್ ಒಂದು ಕೋಟಿ ರುಪಾಯಿಗಳ ಆರ್ಥಿಕ ನೆರವನ್ನೂ ನೀಡಿದ್ದಾರೆ. ಕಪಿಲ್ ಸಿಬಲ್ ಯಾರು ಗೊತ್ತಾಯ್ತಲ್ಲ? ರಾಮಜನ್ಮಭೂಮಿ ಮೊಕದ್ದಮೆಯಲ್ಲಿ ಹಿಂದೂ ಪರ ಸಂಘಟನೆಗಳ ವಿರುದ್ಧ ಹೋರಾಡಿದ ಮಹಾನುಭಾವನೀತ. ದೇಶದ ಸಂವೇದನೆಯ ವಿರುದ್ಧ ಹೋರಾಡುವವರಿಗೆ ನೆರವು ನೀಡಲು ಸದಾ ಮುಂದೆ ನಿಲ್ಲುವ ನಮ್ಮ ದೇಶದ ಕುಪ್ರಸಿದ್ಧ ವಕೀಲನೀತ. ಕಳೆದ ಕೆಲವು ದಿನಗಳಿಂದ ಬರುತ್ತಿರುವ ಕರಾಳ ಕನಸಿನ ವಿಡಿಯೋಗಳನ್ನು ನೋಡುವಾಗ, ನಮ್ಮ ಭವಿಷ್ಯದ ರೂವಾರಿಗಳಾದ ಯುವಜನತೆ ಈ ಮಟ್ಟಕ್ಕೆ ತಲುಪಲು ಕಾರಣವೇನಿರಬಹುದು, ಭವಿಷ್ಯದಲ್ಲಿ ಭಾರತದ ಕಥೆ ಏನಾಗಬಹುದು ಎಂದು ಚಿಂತಿಸಿ ನಿದ್ದೆಗೆಟ್ಟವರೆಷ್ಟೋ ಮಂದಿ. ಜಂತರ್ ಮಂತರ್‌ನಲ್ಲಿ ಸೇರಿದ ಯುವಜನತೆಯ ವ್ಯವಹಾರಗಳನ್ನು ನೋಡಿ ಇಡೀ ದೇಶದ ಯುವಜನತೆ ಹೀಗೆಯೇ ಇದ್ದಾರೆ ಎಂದುಕೊಂಡು ಧೃತಿಗೆಡುವ ಅಗತ್ಯವಿಲ್ಲ.
ಭಾರತದ ಭವ್ಯ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಯುವಪಡೆ, ಕ್ರೀಡೆ, ಶಿಕ್ಷಣ ಹಾಗೂ ಉದ್ಯಮ ಮುಂತಾದ ಕ್ಷೇತ್ರದಲ್ಲಿ ತೊಡಗಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿವೆ ಮತ್ತು ಇಂಥಾ ಯುವಕರು ಕಿಡಿಗೇಡಿಗಳಿಗಿಂತ ಸಾವಿರಾರುಪಟ್ಟು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದು ಸಮಾಧಾನಪಡುವ ಸಂಗತಿಯಾಗಿದೆ. ಈ ದೇಶವಿರೋಧಿ ಚಳುವಳಿಯು ದೇಶವ್ಯಾಪಿ ಹರಡುವ ಸಂಭವನೀಯತೆ ಇರುವುದರಿಂದ ನಮ್ಮ ಯುವಕರಿಗೆ ಒಂದಷ್ಟು ಹಿತವಚನ ಹೇಳಲಿಚ್ಛಿಸುತ್ತೇನೆ. ನಿಮ್ಮ ಹಕ್ಕುಗಳಿಗಾಗಿ ಸಂವಿಧಾನರೀತ್ಯ ಹೋರಾಟ ಮಾಡಿ, ಈ ತರದ ಅರಾಜಕತೆ ಸೃಷ್ಟಿಸುವ ಮನಸ್ಥಿತಿಯವರ ಜೊತೆಗೂಡಬೇಡಿ.
ಇಂಥವರು ಈಗ ಇರುವ ಶಾಂತಿ ಸಮಾಧಾನವನ್ನೂ ಹಾಳುಮಾಡಿ ದೇಶವನ್ನು ದಶಕಗಳಷ್ಟು ಹಿಂದೆ ತಂದು ನಿಲ್ಲಿಸಿ ಮಾಯವಾಗಿ ಬಿಡುತ್ತಾರೆ. ಬಾಂಗ್ಲಾ ನೇಪಾಳಗಳಲ್ಲಿನ ಗಲಭೆಯ ನಂತರದ ವರ್ತಮಾನವನ್ನು ನೋಡಿ ಕಲಿಯಿರಿ. ಮುಂದಿನ ಮೂವತ್ತು ವರ್ಷಗಳ ಭಾರತದ ಭವಿಷ್ಯಕ್ಕಾಗಿ ಚಿಂತಿಸುವ, ಈಗಿರುವುದಕ್ಕಿಂತ ಉತ್ತಮ ನಾಯಕತ್ವ ನಮಗೆ ಸಿಗುವುದು ಕಷ್ಟವೇ. ಹಾಗಾಗಿ ಇರುವ ಭಾಗ್ಯವ ನೆನೆದು ಬಾರೆನೆಂಬುದನುಬಿಡು ಹರುಷಕಿದೆ ದಾರಿ ಎನ್ನುವುದು ನಿಮಗೆ ತಿಳಿದಿರಲಿ.
ಕರ್ನಾಟಕದ ಯಾವ ಮಾಧ್ಯಮಗಳೂ ಜಂತರ್ ಮಂತರ್‌ನ ಘಟನೆಗಳನ್ನು ಎಳೆಎಳೆಯಾಗಿ ತೋರಿಸುವ ಪ್ರಯತ್ನ ಮಾಡಲಿಲ್ಲ. ಹಾಗಾಗಿ ಅಲ್ಲಿನ ಪರಿಸ್ಥಿತಿಯ ಭೀಕರತೆ ಕನ್ನಡಿಗರಾದ ನಮಗೆ ಗೊತ್ತೇ ಆಗಲಿಲ್ಲ. ಒಂದು ಮಾತಂತೂ ಸತ್ಯ, ಮೊನ್ನೆಯ ಸಂದರ್ಭದಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರೇನಾದರೂ ಪ್ರಧಾನಮಂ ತ್ರಿಯಾಗಿದ್ದರೆ ಅಥವಾ ಮುಲಾಯಂ ಸಿಂಗ್ ಯಾದವ್ ಗೃಹಮಂತ್ರಿಯಾಗಿದ್ದರೆ, ತುರ್ತುಪರಿಸ್ಥಿತಿ ಜಾರಿಯಾಗುತ್ತಿತ್ತು ಅಥವಾ ಗುಂಡುಗಳು ಹಾರುತ್ತಿದ್ದವು. ಈ ಕಾಲಘಟ್ಟದಲ್ಲಿ ನರೇಂದ್ರ ಮೋದಿ ಅಥವಾ ಅವರ ಪ್ರಬುದ್ಧ ಸರಕಾರವೊಂದಲ್ಲದಿದ್ದರೆ ಮೊನ್ನೆ ದೆಹಲಿಯ ಗದ್ದುಗೆ ಖಾಲಿಯಾಗಿರುತ್ತಿತ್ತು. ಇಷ್ಟೊತ್ತಿಗೆ ಬಾಂಗ್ಲಾ, ನೇಪಾಳ ಹಾಗೂ ಶ್ರೀಲಂಕಾವನ್ನು ಭಾರತ ನೋಡಬೇಕಾಗುತ್ತಿತ್ತು.