ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shashidhara Halady Column: ವರ್ಷಕ್ಕೊಮ್ಮೆಯಾದರೂ ಇದನ್ನು ತಿನ್ನಬೇಕಂತೆ !

ಬಾಳೆ ಮರದಲ್ಲಿ ಗೊನೆ ಬಂದು, ಮಾಗಿದ ನಂತರ, ಕೊನೆಯನ್ನು ಕತ್ತರಿಸಿ ತೆಗೆಯುವಾಗ, ಅದರ ಜತೆಯಲ್ಲೇ ಸಾಮಾನ್ಯವಾಗಿ ಬಾಳೆ ಮರವನ್ನೂ ಕಡಿದು ಹಾಕುವುದು ಪದ್ಧತಿ. ಅದರಲ್ಲಿ ಮತ್ತೊಂದು ಗೊನೆ ಬರುವುದಿಲ್ಲವಲ್ಲ; ಹಾಗೆ ಕಡಿದ ಮರದ ಒಳಭಾಗದಲ್ಲಿ, ತಿರುಳಿನ ರೂಪದಲ್ಲಿ ಉದ್ದನೆಯ ‘ಬಾಳೆ ದಿಂಡು’ ಇರುತ್ತದೆ. ಅದರ ಹೊರಗಿನ ಪದರ ಪದರ ಸಿಪ್ಪೆಗಳನ್ನು ತೆಗೆದ ನಂತರ, ಕಾಣಿಸುವ ಈ ಬಾಳೆ ದಿಂಡು, ದೂರದಿಂದ ಕಂಡರೆ ಟ್ಯೂಬ್ ಲೈಟ್‌ನ್ನು ಹೋಲುತ್ತದೆ.

ಶಶಾಂಕಣ

‘ಇದನ್ನು ವರ್ಷಕ್ಕೆ ಒಂದು ಸರ್ತಿಯಾದರೂ ತಿನ್ನಬೇಕು’ ಎಂದು ಹೇಳಿಕೊಳ್ಳುತ್ತಾ, ಸೇವಿಸುವ ಹಲವು ತಿನಿಸುಗಳು, ತರಕಾರಿಗಳು ಮತ್ತು ತುಸು ವಿಚಿತ್ರ ಎನಿಸುವ ‘ಖಾದ್ಯ’ಗಳು ನಮ್ಮ ಹಳ್ಳಿ ಯಲ್ಲಿವೆ; ಇವೆ ಎನ್ನುವುದಕ್ಕಿಂತಲೂ, ಕೆಲವೇ ವರ್ಷಗಳ ಹಿಂದೆ ಇದ್ದವು ಎಂದರೆ ಸೂಕ್ತವೇನೋ! ಏಕೆಂದರೆ, ಹಳೆಯ ಕಾಲದ ತಿನಿಸುಗಳನ್ನು ಮತ್ತು ಪದ್ಧತಿಗಳನ್ನು ಬಹುಬೇಗನೆ ಮರೆಯುವಂತಹ ಒಂದು ಕಾಲಘಟ್ಟದಲ್ಲಿ ನಾವಿದ್ದೇವೆ. ಆಧುನಿಕ ವಿದ್ಯಾಭ್ಯಾಸದ ಫಲವೋ, ಊರು ಬಿಟ್ಟು ದೂರಪ್ರದೇಶದಲ್ಲಿ ಉದ್ಯೋಗ ಕೈಗೊಳ್ಳುವ ಅನಿವಾರ್ಯತೆಯೋ, ಕುಟುಂಬದ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿರುವ ವಾಸ್ತವದ ಪ್ರಭಾವವೋ, ಒಟ್ಟಿನಲ್ಲಿ ಹಳೆಯದನ್ನು ಮರೆಯುವ ಅಭ್ಯಾಸ ಇಂದು ಸಾರ್ವತ್ರಿಕ ತಾನೆ.

ಇಂತಹ ದಿನಗಳಲ್ಲಿ, ಕೆಲವು ಹಳೆಯ ಪದ್ಧತಿಗಳು ಕೇವಲ ನೆನಪಿನಲ್ಲಿ ಮಾತ್ರ ಉದಿರುವಂತಹ ಸ್ಥಿತಿಯೂ ಇದೆ! ಇರಲಿ. ವರ್ಷಕ್ಕೆ ಒಮ್ಮೆಯಾದರೂ ತಿನ್ನಬೇಕು ಎಂದು ಹೇಳಿಕೊಂಡು, ನಮ್ಮ ಹಳ್ಳಿಯವರು ತಿನ್ನುತ್ತಿದ್ದ ಒಂದು ಖಾದ್ಯ ಎಂದರೆ, ‘ಬಾಳೆ ದಿಂಡು’- ಇದರ ಪಲ್ಯ.

ಬಾಳೆ ಮರದಲ್ಲಿ ಗೊನೆ ಬಂದು, ಮಾಗಿದ ನಂತರ, ಕೊನೆಯನ್ನು ಕತ್ತರಿಸಿ ತೆಗೆಯುವಾಗ, ಅದರ ಜತೆಯಲ್ಲೇ ಸಾಮಾನ್ಯವಾಗಿ ಬಾಳೆ ಮರವನ್ನೂ ಕಡಿದು ಹಾಕುವುದು ಪದ್ಧತಿ. ಅದರಲ್ಲಿ ಮತ್ತೊಂದು ಗೊನೆ ಬರುವುದಿಲ್ಲವಲ್ಲ; ಹಾಗೆ ಕಡಿದ ಮರದ ಒಳಭಾಗದಲ್ಲಿ, ತಿರುಳಿನ ರೂಪದಲ್ಲಿ ಉದ್ದನೆಯ ‘ಬಾಳೆ ದಿಂಡು’ ಇರುತ್ತದೆ. ಅದರ ಹೊರಗಿನ ಪದರ ಪದರ ಸಿಪ್ಪೆಗಳನ್ನು ತೆಗೆದ ನಂತರ, ಕಾಣಿಸುವ ಈ ಬಾಳೆ ದಿಂಡು, ದೂರದಿಂದ ಕಂಡರೆ ಟ್ಯೂಬ್ ಲೈಟ್‌ನ್ನು ಹೋಲುತ್ತದೆ. ಬಾಳೆ ದಿಂಡನ್ನು ಸಣ್ಣಗೆ ಕತ್ತರಿಸಿ, ಒಗ್ಗರಣೆ ಹಾಕಿ ಪಲ್ಯ ಮಾಡಬಹುದು; ಅಥವಾ, ಕೋಸಂಬರಿ ರೂಪವನ್ನೂ ಕೊಡಬಹುದು. ಇದನ್ನು ಅನ್ನದ ಜತೆ ಸೇರಿಸಿ ತಿನ್ನುವ ಪರಿಪಾಠ. ಇದನ್ನು ಸೇವಿಸಿದರೆ, ಹೊಟ್ಟೆಯಲ್ಲಿರುವ ಕೂದಲು ಕರಗಿಹೋಗುತ್ತದಂತೆ!

ಇದನ್ನೂ ಓದಿ: Shashidhara Halady Column: ಚಿಟ್ಟೆಗಳ ವಲಸೆಯನು ನೀವು ಕಂಡಿರಾ ?

ಬಾಳೆ ದಿಂಡನ್ನು ಕತ್ತರಿಸುವಾಗ, ಅದರ ಒಂದೊಂದು ತುಂಡು ಬೇರ್ಪಡುವಾಗ, ಬಿಳಿ ಕೂದಲಿನಂತಹ ಎಳೆಗಳು ಕಾಣಿಸುತ್ತವೆ; ಆದ್ದರಿಂದಲೇ, ಇದನ್ನು ತಿಂದರೆ ಹೊಟ್ಟೆಯ ಕೂದಲು ಕರುಗುತ್ತದೆ ಎಂಬ ನಂಬಿಕೆ ಬೆಳೆಯಿತೋ? ಅಥವಾ, ಬಾಳೆ ದಿಂಡು ತಾಗಿದರೆ ನಿಜವಾಗಿಯೂ ಕೂದಲು ಕರಗುತ್ತದೋ? ಯಾರಾದರೂ ಪರಿಶೀಲಿಸಿ ನೋಡಬೇಕು! ಅಂದ ಹಾಗೆ, ತಲೆಯಲ್ಲಿ ಬೆಳೆಯುವ ಕೂದಲು ನಮ್ಮ ಹೊಟ್ಟೆಯೊಳಗೇಕೆ ಹೋಗುತ್ತದೆ? ಅದೊಂದು ಬೇರೆಯೇ ವಿದ್ಯಮಾನ. ಮನೆಯಲ್ಲಿ ಕಸದ ರೀತಿ ಇರುವ ಕೂದಲು, ಅಕಸ್ಮಾತ್ ಹೊಟ್ಟೆಯೊಳಗೆ ಹೋದರೆ, ಅದು ಕರುಳಿನ ಸಂದಿಯಲ್ಲಿ ಬಹುಕಾಲ ಉಳಿದುಕೊಂಡು, ಆರೋಗ್ಯ ಸಮಸ್ಯೆ ತರುತ್ತದಂತೆ!

ಹೊಟ್ಟೆಯೊಳಗೆ ಅಂತಹ ಕೂದಲುಗಳು ಸೇರಿ ಸೇರಿ, ನಿಧಾನವಾಗಿ ಅದೇ ಒಂದು ಪುಟ್ಟ ಉಂಡೆಯ ರೀತಿ ಆಗುವುದುಂಟು ಮತ್ತು ಆ ರೀತಿ ಆಗಲು ಬಿಡಬಾರದು ಎಂಬ ನಂಬಿಕೆಯೂ ಇದೆ. ಇದಕ್ಕೂ, ಆಧುನಿಕ ವಿಜ್ಞಾನದಲ್ಲಿ ಉತ್ತರವಿರಬಹುದು. ಆದರೆ, ಇಂತಹ ನಂಬಿಕೆಗಳು ಹಳ್ಳಿಗಳಲ್ಲಿ ಇರುವುದಂತೂ ನಿಜ. ಮದ್ದು ಹಾಕುವುದು ಎಂಬ ವಿಚಿತ್ರ ಪದ್ಧತಿಯ ಬಾಲಂಗೋಚಿಯಂತೆ, ಮದ್ದು ತೆಗೆದಾಗ, ಕೆಲವರಿಗೆ ವಾಂತಿಯಾಗಿ, ಆ ವಾಂತಿಯಲ್ಲಿ ಕೂದಲಿನ ಪುಟ್ಟ ಉಂಡೆಗಳು ಹೊರಬರುವುದುಂಟು ಎಂದು ಹೇಳುವುದುಂಟು!

ಮದ್ದು ಹಾಕುವುದು ಎಂಬುದರ ಕುರಿತು ಹೊರಟರೆ, ಅದು ಬೇರೆಯೇ ಬರಹವಾದೀತು; ಇರಲಿ ಬಿಡಿ. ವರ್ಷಕ್ಕೊಮ್ಮೆಯಾದರೂ ಸೇವಿಸಬೇಕು ಎಂದು ಹೇಳಿಕೊಳ್ಳುವ ಒಂದು ರುಚಿಕರ ತರಕಾರಿ ಇದೆ; ಅದೇ ಕಾಡು ಹೀರೆ ಅಥವಾ ಕಾಡು ಪೀರೆ. ಇದನ್ನು ಮಡಹಾಗಲಕಾಯಿ ಎನ್ನುವುದೂ ಉಂಟು. (ಟೀಸಲ್ ಗೌರ್ಡ್: ಮೋಮೋಡಿಕಾ ಡಿಯೋಕಾ) ಮಲೆನಾಡು ಮತ್ತು ಕರಾವಳಿಯ ಕೆಲವು ಭಾಗಗಳಲ್ಲಿ, ಕೆಲವು ಸಮುದಾಯಗಳಲ್ಲಿ ಅತಿ ಜನಪ್ರಿಯ ತರಕಾರಿ ಇದು. ಆದರೆ, ಕಳೆದ ಶತಮಾನದ ತನಕ, ಇದನ್ನು ಪಡೆಯುವುದು ಬಲು ಕಷ್ಟ!

71 ಒಕ

ಏಕೆಂದರೆ, ಕಾಡಿನ ಅಂಚುಗಳಲ್ಲಿ ತನ್ನಷ್ಟಕ್ಕೇ ಬೆಳೆಯುವ ಬಳ್ಳಿಯಲ್ಲಿ, ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಈ ಕಾಯಿಯನ್ನು ತಿನ್ನಬೇಕೆಂದರೆ, ಆ ಸೀಸನ್‌ನಲ್ಲಿ ಮಾತ್ರ ಸಾಧ್ಯ. ಇಂದು ಹಲವು ಕಡೆ ಕೃಷಿ ಮಾಡುತ್ತಿದ್ದರೂ, ಕಾಡಿನಲ್ಲಿ ತನ್ನಷ್ಟಕ್ಕೆ ಬೆಳೆಯುವ ಮಡಹಾಗಲಕಾಯಿಯಷ್ಟು ರುಚಿ ಈಗಿನ ಮಡಹಾಗಲಕಾಯಿಗೆ ಇಲ್ಲ ಎನ್ನುವುದೂ ಇದೆ! ಇದೂ ಸಹ ಮತ್ತೊಂದು ನಂಬಿಕೆ!

ಮಡಹಾಗಲಕಾಯಿಯಿಂದ ಪಲ್ಯ, ಬೋಂಡ ತಯಾರಿಸಬಹುದು. ಇದನ್ನು ವರ್ಷಕ್ಕೊಮ್ಮೆ ತಿಂದರೆ, ಆರೋಗ್ಯ ಉತ್ತಮವಾಗುತ್ತದೆ ಎಂಬ ನಂಬಿಕೆಯುಂಟು. ಪ್ರತಿವರ್ಷ ಆಷಾಢ ಮಾಸದ ಅಮಾವಾಸ್ಯೆಯ ಸಮಯದಲ್ಲಿ, ಅಗತ್ಯವಾಗಿ ತಿನ್ನಬೇಕಾದ ‘ಕ್ಯಾನಿ ಗೆಂಡೆ ಕಡುಬು’ ನಮ್ಮೂರಲ್ಲಿ ಸಾಕಷ್ಟು ಪ್ರಖ್ಯಾತ. ಮಳೆಗಾಲ ಆರಂಭವಾಗಿ ಒಂದು ತಿಂಗಳಾಗುವ ಸಮಯದಲ್ಲಿ, ಹಾಡಿ, ಹಕ್ಕಲು, ಗುಡ್ಡಗಳಲ್ಲಿ, ನೆಲವನ್ನು ಬಗೆದರೆ ಸಿಗುವ ಗಡ್ಡೆಯೇ ಕ್ಯಾನಿ ಗೆಂಡೆ ಅಥವಾ ‘ಕ್ಯಾನಿ’ ಸಸ್ಯದ ಗಡ್ಡೆ. ಒಂದು ಮುಷ್ಟಿ ಗಾತ್ರವಿರಬಹುದಾದ ಈ ಗಡ್ಡೆಯನ್ನು ಅಗೆದು ತಂದು, ಚೆನ್ನಾಗಿ ತೊಳೆದು, ಅಕ್ಕಿಯೊಂದಿಗೆ ಅರೆದು, ಹಬೆಯಲ್ಲಿ ಬೇಯಿಸಿ, ಉಂಡೆಉಂಡೆಯನ್ನಾಗಿ ಮಾಡಿದಾಗ ಕ್ಯಾನೆಗೆಂಡೆ ಕಡುಬು ಸಿದ್ಧ.

ಮಳೆಗಾಲದಲ್ಲಿ ಬರುವ ಆಸಾಡಿ ಅಮಾವಾಸ್ಯೆಯ ಆಚರಣೆಯಲ್ಲಿ ಇದನ್ನು ತಯಾರಿಸುವ ಪದ್ಧತಿ ಇದೆ. ಕೋಣಗಳಿಗೆ, ಎತ್ತುಗಳಿಗೆ, ಹಸುಗಳಿಗೆ ಪೂಜೆ ಮಾಡಿ, ನಂತರ ಇದನ್ನು ತಿನ್ನಿಸುವುದುಂಟು. ಆಸಾಡಿ ಅಮಾವಾಸ್ಯೆಯಂದು ಮಾಡುವ ಸರಳ ಪೂಜೆಗೆ ಇದೇ ನೈವೇದ್ಯ. ಕ್ಯಾನಿ ಗೆಂಡೆಯನ್ನು ವರ್ಷಕ್ಕೊಮ್ಮೆಯಾದರೂ ತಿನ್ನುವುದು ಒಳ್ಳೆಯದು ಎಂಬ ನಂಬಿಕೆಯಿದೆ.

ಗುಡ್ಡಗಳಲ್ಲಿ ನೆಲದಲ್ಲಿ ಬೆಳೆಯುವ ಈ ಗಡ್ಡೆಯನ್ನು ತಿಂದರೆ, ಹೊಟ್ಟೆಯ ಆರೋಗ್ಯ ಉತ್ತಮ ವಾಗಬಲ್ಲದು ಎಂದು ನಾವು ತರ್ಕಿಸಬಹುದಾದರೂ, ಅದರಲ್ಲಿ ಮಳೆಗಾಲದ ಅನಾರೋಗ್ಯವನ್ನು ತಡೆಯುವ ಔಷಽಯ ಗುಣಗಳಿವೆ ಎಂದೂ ಹೇಳುವುದುಂಟು. ಇನ್ನು ಬಾಯಿಚಪಲದ ನೆಪದಲ್ಲಿ, ‘ಇದನ್ನು ವರ್ಷಕ್ಕೆ ಒಂದು ಸಲವಾದರೂ ತಿನ್ನಬೇಕು’ ಎಂದು ಹೇಳಿಕೊಂಡು ತಯಾರಿಸುವ ನಾನಾ ತಿನಿಸುಗಳನ್ನು ನೆನಪಿಸಿಕೊಳ್ಳ ಬಹುದು. ಹಲಸಿನ ಹಣ್ಣಿನ ಶ್ರಾಯದಲ್ಲಿ, ಹಲಸಿನ ತೊಳೆಗಳನ್ನು ಅಕ್ಕಿಯೊಂದಿಗೆ ಚೆನ್ನಾಗಿ ತಿರುವಿ, ಬೋಂಡದ ರೂಪದಲ್ಲಿ ಕರಿದು ತಿನ್ನುವ ‘ಮುಳುಕ’ ಅಂತಹ ಒಂದು ತಿನಿಸು.

ಕೆಲವು ಹಲಸಿನ ತೊಳೆಗಳಿಂದ ತಯಾರಿಸಿದ ಮುಳುಕವು ಹೆಚ್ಚು ಸಿಹಿ ಇರುವುದಿಲ್ಲ; ಆಗ ರುಚಿ ಬರಿಸಲು ಅನುಸರಿಸುವ ಉಪಾಯವೆಂದರೆ, ಜೇನುತುಪ್ಪದೊಂದಿಗೆ ಮುಳುಕ ತಿನ್ನುವುದು. ಹಲಸಿನ ತೊಳೆಯ ‘ಅಪ್ಪ’ವನ್ನೂ ಮುಳುಕದ ಸಾಲಿಗೆ ಸೇರಿಸಬಹುದು. ಬೇರೆ ತರಕಾರಿಗಳು ಲಭ್ಯವಿಲ್ಲದಾಗ, ಹಲಸಿನ ತೊಳೆಯನ್ನು ಆಧರಿಸಿ ಹಿಡಿಯುವ ‘ಮಗಡ’ವನ್ನು ಪಲ್ಯಕ್ಕೆ ಉಪಯೋಗಿಸುವುದುಂಟು. ಹಲಸಿನ ಹಪ್ಪಳವನ್ನು ಸುಟ್ಟು, ಅದರ ಜತೆ, ಗೋಡಂಬಿಯನ್ನು ಸೇವಿಸುವುದುಂಟು; ಇಂತಹ ಗೋಡಂಬಿಯ ತಯಾರಿಯೂ ವಿಶಿಷ್ಟ; ಗೋಡಂಬಿ ಬೀಜಗಳನ್ನು ಚೆನ್ನಾಗಿ ಒಣಗಿಸಿ, ಬೆಂಕಿಗೆ ಹಾಕಿ ಸುಟ್ಟು, ಅದರ ಕವಚ ಬೇರ್ಪಡಿಸಿದಾಗ ದೊರೆಯುವ ಗೋಡಂಬಿ ತಿರುಳು ಬಲು ರುಚಿ; ಅದನ್ನು ಹಲಸಿನ ಹಪ್ಪಳದ ಜತೆ ತಿಂದರೆ ಇನ್ನಷ್ಟು ರುಚಿ.

ಇಂತಹ ಹಲವು ತಿನಿಸುಗಳು ಇಂದು ಅಪರೂಪವಾದರೂ, ರುಚಿಯ ವಿಚಾರಕ್ಕೆ ಬಂದರೆ ಈಗಲೂ ಬಾಯಲ್ಲಿ ನೀರೂರಿಸುವ ತಿನಿಸುಗಳು. ಕಳೆದ ಶತಮಾನದಲ್ಲಿ ಇಂತಹ ತಿನಿಸುಗಳು ಸಾಮಾನ್ಯ ಎನಿಸಿದ್ದರೂ, ಈಗಿನ ತಲೆಮಾರು ಇದರಿಂದ ತುಸು ದೂರ ಸರಿದ ಹಿನ್ನೆಲೆಯಲ್ಲಿ, ವರ್ಷಕ್ಕೆ ಒಮ್ಮೆಯಾ ದರೂ ಇದನ್ನು ತಿಂದು, ಮತ್ತೊಮ್ಮೆ ನೆನಪಿಸಿಕೊಳ್ಳೋಣ ಎನಿಸುತ್ತದೆ. ನಿಮ್ಮ ಊರಿ ನಲ್ಲೂ ಇಂತಹ ಕೆಲವು ಹಳೆಯ ತಿನಿಸುಗಳು ಇದ್ದಿರಲೇಬೇಕು; ವರ್ಷಕ್ಕೊಮ್ಮೆಯಾದರೂ ಅದನ್ನು ತಯಾರಿಸಿ, ತರಿಸಿ, ತಿಂದು, ನೆನಪಿಸಿಕೊಂಡು, ಅವುಗಳ ಪರಂಪರೆಯನ್ನು ಮುಂದುವರಿಸುವ ಪ್ರಯತ್ನ ಮಾಡೋಣ ಎನಿಸುತ್ತದೆ, ಅಲ್ಲವೆ!

ನಮ್ಮ ಹಳ್ಳಿಗಳಲ್ಲಿ ಕಾಡು ಕೆಸ (ಕೆಸುವು) ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ; ಮಳೆಗಾಲದ ದಿನಗಳಲ್ಲಿ ಮನೆಯ ಸುತ್ತಮುತ್ತ, ತೋಟದ ಅಂಚಿನಲ್ಲಿ, ಗದ್ದೆಯ ಬದುಗಳಲ್ಲಿ ಮೇಲೇಳುವ ಅಗಲ ಎಲೆಯ ಕೆಸುವನ್ನು ವರ್ಷಕ್ಕೊಮ್ಮೆ ಅಥವಾ ಆಗಾಗ ತಿನ್ನಬೇಕು ಎಂದು ಹೇಳುವುದರಲ್ಲಿ, ಸ್ವಲ್ಪ ಅರ್ಥವಿದೆ. ಕೆಸುವಿನ ಎಲೆಯಲ್ಲಿ ಸಾಕಷ್ಟು ಕಬ್ಬಿಣದ ಅಂಶ ಮತ್ತು ಇತರ ಲವಣಾಂಶಗಳು ಇವೆ ಎಂದು ಇಂದಿನ ವಿಜ್ಞಾನ ಹೇಳಿರುವುದರಿಂದ, ಕೆಸುವಿನ ಎಲೆಯನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಖಚಿತವಾಗಿ ಹೇಳಬಹುದು. ಆದರೆ, ಈ ಎಲೆಯನ್ನು ಸೇವಿಸುವಾಗ ತುಸು ಎಚ್ಚರಿಕೆ, ಅನುಭವ ಅಗತ್ಯ. ಕೆಲವು ಕೆಸುವಿನ ಎಲೆಗಳಲ್ಲಿ ತುರಿಕೆ ಅಥವಾ ನವೆ ತರುವ ಗುಣವಿದೆ.

ಕಪ್ಪು ಮಿಶ್ರಿತ ಎಲೆ ಇರುವ ಕೆಸುವಿನಲ್ಲಿ ತುರಿಕೆ ತರುವ ಗುಣ ಕಡಿಮೆ. ಕೆಸುವಿನ ಎಲೆಗಳನ್ನು ತೊಳೆದು, ಚೆನ್ನಾಗಿ ಬೇಯಿಸಿ, ಚಟ್ನಿ ಮಾಡಬಹುದು; ದೊಡ್ಡ ಗಾತ್ರ ಎಲೆಗಳಿದ್ದರೆ, ಪತ್ರೊಡೆ ಮಾಡಬಹುದು; ಕೆಸುವಿನ ಎಲೆಯ ಪತ್ರೊಡೆ ಈಚಿನ ದಶಕಗಳಲ್ಲಿ ನಾಡಿನಾದ್ಯಂತ ಪ್ರಚಾರ ಪಡೆದಿದೆ!

ಕೆಸುವಿನ ಒಂದು ತಳಿಯಾದ ‘ಮರಕೆಸ’ದ ಎಲೆಗಳಿಂದ ಪತ್ರೊಡೆ, ದೋಸೆ (ಚಟ್ಟಿ) ಮಾಡಿದರೆ ಹೆಚ್ಚು ರುಚಿ. ಬಹುದೊಡ್ಡ ಗಾತ್ರದ ಎಲೆಗಳಿರುವ ‘ಗೋವೆ ಕೆಸ’ದ ಎಲೆಗಳು ಪತ್ರೊಡೆ ಮಾಡಲೂ ಅನುಕೂಲ, ಅದರ ದಡಿಗಳಿಂದ ಸಾಂಬಾರ, ಪಲ್ಯಗಳನ್ನೂ ತಯಾರಿಸಬಹುದು. ಇದನ್ನು ಸೇವಿಸಿದಾಗ ಹೆಚ್ಚಿನ ಕಬ್ಬಿಣದ ಅಂಶವು ದಕ್ಕುವುದರ ಜತೆಯಲ್ಲೇ, ನಾರಿನ ಅಂಶವೂ ಹೊಟ್ಟೆ ಯನ್ನು ಸೇರುವುದರಿಂದ, ಹೊಟ್ಟೆಯ ಆರೋಗ್ಯವೂ ಉತ್ತಮಗೊಳ್ಳಬಲ್ಲದು.

ಕೆಸುವಿನ ಎಲೆಗಳು ಒಮ್ಮೊಮ್ಮೆ ಉಂಟುಮಾಡುವ ತುರಿಕೆಯ ಅನುಭವವನ್ನು ಸಹಿಸಿಕೊಂಡು, ಒಂದು ಉತ್ತಮ ತರಕಾರಿಯಾಗಿ ಇದನ್ನು ನಮ್ಮ ಜನರು ಬಳಸುವ ಅವಕಾಶವಿದೆ; ವಾಣಿಜ್ಯಕವಾಗಿಯೂ ಕೆಸುವಿನ ಎಲೆ, ಕೆಸುವಿನ ಗಡ್ಡೆಯನ್ನು ಪ್ರಚುರಪಡಿಸುವ ಅವಕಾಶವಿದೆ. ಉತ್ತರಭಾರತದ ಕೆಲವು ಭಾಗದ ಕೃಷಿಕರು, ಕೆಸುವನ್ನು ಗದ್ದೆಗಳಲ್ಲಿ ಬೆಳೆಸುವುದುಂಟು. ಕೆಸುವನ್ನು ವಾಣಿಜ್ಯಕವಾಗಿ ಬೆಳೆಯುವ ಸಾಧ್ಯತೆ ಯನ್ನು ನಮ್ಮ ರಾಜ್ಯದ ರೈತರು ಸಹ ಪರಿಶೀಲಿಸಬಹುದು.

ಕೃಷಿ ಕೆಲಸ ಮಾಡುವವರು, ಹಾಡಿ ಗುಡ್ಡೆಗಳಲ್ಲಿ ದೈಹಿಕ ಶ್ರಮದ ಕೆಲಸ ಮಾಡುವವರು, ವರ್ಷಕ್ಕೊಮ್ಮೆ ಯಾದರೂ ತಿನ್ನಬೇಕು ಎಂದು ನಂಬಿರುವ ಒಂದು ‘ವಿಚಿತ್ರ ವಸ್ತು’ವಿನ ಕುರಿತು ಹೇಳಿದರೆ, ನಿಮಗೆ ತುಸು ಅಚ್ಚರಿಯೂ ಆದೀತು, ತುಸು ಹೇವರಿಕೆಯೂ ಆದೀತು. ಈ ನಂಬಿಕೆಯು ನಮ್ಮ ಹಳ್ಳಿಗಳಲ್ಲಿ ಇರುವುದನ್ನು ಕಂಡಿದ್ದರಿಂದ ಮಾತ್ರ ಇಲ್ಲಿ ಹೇಳಿದ್ದೇನೆಯೇ ಹೊರತು, ಇದರ ಔಷಧಿಯ ಗುಣದ ಕುರಿತು ಖಂಡಿತವಾಗಿಯೂ ನನ್ನಲ್ಲಿ ಮಾಹಿತಿ ಇಲ್ಲ. ಒಮ್ಮೆ, ನಮ್ಮ ಹಳ್ಳಿಮನೆಯ ತೋಡಿನಿಂದಾಚೆ ಇದ್ದ ಪುಟ್ಟ ದರೆಯಿಂದ ಮಣ್ಣನ್ನು ತೆಗೆಸಿ, ತೋಟಕ್ಕೆ ಹರಡುವ ಕೆಲಸ ನಡೆಯುತ್ತಿತ್ತು.

ನಾಲ್ಕಾರು ಜನರು, ಹಾರೆ ಗುದ್ದಲಿ ಹಿಡಿದು, ಮಣ್ಣನ್ನು ತರಿದು, ಬುಟ್ಟಿಯಲ್ಲಿ ತುಂಬಿಸಿ ತೋಟಕ್ಕೆ ಹರಡುತ್ತಿದ್ದರು. ಬೆಳಗಿನಿಂದ ಆರಂಭಗೊಂಡ ಕೆಲಸ ಮಧ್ಯಾಹ್ನದ ತನಕವೂ ಸಾಗಿತ್ತು; ನಾಲ್ಕೆಂಟು ಅಡಿ ಆಳಕ್ಕೆ ಮಣ್ಣನ್ನು ಅಗೆದುಹಾಕಲಾಗಿತ್ತು. ಅಲ್ಲೊಂದು ಕಡೆ ಗೆದ್ದಲಿನ ಹುತ್ತದ ಬುಡದ ಭಾಗ ತೆರೆದುಕೊಂಡಿತು. ಮಣ್ಣನ್ನು ಅಗೆಯುತ್ತಿದ್ದ ದೇವಣ್ಣ ಎಂಬಾತನು, ‘ಸ್ವಲ್ಪ ಇರಿ, ಸ್ವಲ್ಪ ಇರಿ’ ಎಂದು ತರಾತುರಿಯಿಂದ, ಗೆದ್ದಲಿನ ಪುಟಾಣಿ ಸುರಂಗವನ್ನು ಕೈಯಿಂದಲೇ ತುಸು ತೆರವು ಮಾಡಿ, ಅದರೊಳಗೆ ಇದ್ದ ರಾಣಿ ಗೆದ್ದಲನ್ನು ಕೈಗೆತ್ತಿಕೊಂಡ. ಅದು ನೋಡಲು ತುಪ್ಪದ ಬಣ್ಣ; ಎರಡರಿಂದ ಮೂರು ಇಂಚು ಉದ್ದನೆಯ ಹುಳ ಅದು. ಆತನು ಅದನ್ನು ಎರಡು ಬೆರಳುಗಳಿಂದ ಎತ್ತಿಕೊಂಡು, ‘ಸ್ವಾಹಾ’ ಮಾಡಿದ. ‘ಇದನ್ನು ವರ್ಷಕ್ಕೊಂದು ಸಲವಾದರೂ ತಿನ್ನಬೇಕು. ಅದರಿಂದ ಮೈಕೈನೋವು ಬರುವುದಿಲ್ಲ, ಒಳ್ಳೆಯ ಶಕ್ತಿ ಕೂಡಿಬರುತ್ತದೆ’ ಎನ್ನುತ್ತಾ ನಸುನಕ್ಕು, ಮಣ್ಣು ಅಗೆಯುವ ಕೆಲಸ ಮುಂದುವರಿಸಿದ.

ಇದನ್ನು ಕಂಡ ನನಗಂತೂ ಬಲು ಅಚ್ಚರಿ; ಈ ಕುರಿತು ಬೇರೆ ಕಡೆ ಚರ್ಚಿಸಿದಾಗ, ಅಂತಹದೊಂದು ನಂಬಿಕೆ ನಮ್ಮೂರಲ್ಲಿ ಇದೆ ಎಂದು ಗೊತ್ತಾಯಿತು. ಇದೇ ನಂಬಿಕೆ ಬೇರೆ ಬೇರೆ ಕಡೆಯೂ ಇದೆಯೇ ಎಂದು ಸ್ಪಷ್ಟವಿಲ್ಲ. ರಾಣಿ ಗೆದ್ದಲು ನೀಡುವ ಶಕ್ತಿಯಾದರೂ ಅದೆಂತಹದ್ದು? ಗೊತ್ತಿದ್ದರೆ ತಿಳಿಸಿ!

ಶಶಿಧರ ಹಾಲಾಡಿ

View all posts by this author