ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shashidhara Halady Column: ಹೀಗೂ ಇದೆ ಸೋಗುವೇಷದ ಉದಾಹರಣೆ !

ನಮ್ಮ ಹಳ್ಳಿಯಲ್ಲಿ ಇವು ಅಪರೂಪವೇನಲ್ಲ, ಸಾಕಷ್ಟು ಕಾಣಿಸುತ್ತವೆ. ಜತೆಗೆ, ನಾಲ್ಕಾರು ಪ್ರಭೇದದ ಕಡ್ಡಿಕೀಟಗಳೂ ನಮ್ಮ -ಸಲೆಯಲ್ಲಿವೆ. ಆದರೆ, ಮನುಷ್ಯನ ಕಣ್ಣಿಗೆ ಕಾಣಿಸುವುದು ಅಪರೂಪ. ಕಡ್ಡಿ ಕೀಟವನ್ನು ನಾನು ಮೊದಲ ಬಾರಿ ನೋಡಿದ್ದು ನಾಲ್ಕನೆಯ ತರಗತಿಯ ವಿದ್ಯಾರ್ಥಿಯಾಗಿದ್ದಾಗ. ನಮ್ಮ ಮನೆ ಎದುರಿನಲ್ಲಿದ್ದ ಗುಡಿಸಲಿನಂಥ ಪುಟ್ಟ ಕೊಟ್ಟಿಗೆಯಲ್ಲಿ, ಆ ಕೀಟವು ಕೊಟ್ಟಿಗೆಯ ಮರದ ಕಂಬದ ಮೇಲೆ ಕುಳಿತಿತ್ತು.

ಶಶಾಂಕಣ

ಕಳೆದ ವಾರ ಊರಿಗೆ ಹೋಗಿದ್ದೆ. ಊರೆಂದರೆ ಗೊತ್ತಲ್ಲ, ಹಳ್ಳ, ಗದ್ದೆ, ತೋಡು, ಕಾಡು, ಹಾಡಿ, ಹಕ್ಕಲು, ಗುಮ್ಮಿ, ಬ್ಯಾಣ ಇವೆಲ್ಲವುಗಳ ನಡುವೆ ಬದುಕು. ಅವೆಲ್ಲವೂ ಇದ್ದ ಮೇಲೆ, ಕೀಟ, ಹಕ್ಕಿ, ಚಾರಟೆ ಹುಳ, ಹೈಸಾರ ಹಾವು, ಎಲೆ, ತರಗಲೆ ಇನ್ನೂ ಅವೆಷ್ಟೋ ಜೀವ ಲೋಕದ ದ್ರವ್ಯಗಳು ಇರಲೇಬೇಕಲ್ಲ.

ಅವುಗಳಲ್ಲಿ ಅದ್ಭುತವನ್ನು ಕಂಡು ಹುಡುಕಿ, ಮಾನವನು ಬೆರಗಾಗುವುದುಂಟು. ಆದರೆ, ಸಸ್ಯಗಳಿಗೆ, ಪ್ರಾಣಿಗಳಿಗೆ, ಇಕಾಲಜಿಯ ಸಾವಿರಾರು ಕೊಂಡಿಗಳಿಗೆ ಅದು ದಿನನಿತ್ಯದ ಪಾಡು, ತಮ್ಮ ಸಂತತಿಯನ್ನು ಈ ಜಗತ್ತಿನಲ್ಲಿ ಮುಂದುವರಿಸಿಕೊಂಡು ಬರಬೇಕಾದ ಅನಿವಾರ್ಯ ಕರ್ಮ.

ಇಂಥ ಒಂದು ಅಪರೂಪದ ಇಕಾಲಜಿಯ ಕೊಂಡಿಯನ್ನು, ಅದು ತನ್ನ ಇರವನ್ನು ಉಳಿಸಿಕೊಳ್ಳಲು ಮಾಡುತ್ತಿರುವ ಕಸರತ್ತನ್ನು ನೋಡುವ ಅವಕಾಶ ನಮ್ಮ ಹಳ್ಳಿಯಲ್ಲಿ ಮೊನ್ನೆ ದೊರಕಿತು. ಜೀವಿಗಳು ತಮ್ಮ ರಕ್ಷಣೆಗಾಗಿ ವಿವಿಧ ಸೋಗುಗಳನ್ನು ಪ್ರದರ್ಶಿಸುವುದು, ಬೇರೆ ಅಪಾಯಕಾರಿ ಜೀವಿಗಳನ್ನು ಹೋಲುವಂಥ ದೇಹವನ್ನು ಧರಿಸುವುದು ಸಾಕಷ್ಟು ಕಾಣಬಹುದು.

ಅವುಗಳಲ್ಲಿ ತೀರಾ ಅಪರೂಪದ, ತುಸು ವಿಚಿತ್ರ ಎನ್ನಬಹುದಾದ ಸೋಗುವೇಷವನ್ನು ಧರಿಸುವ ಕೆಲವು ಜೀವಿಗಳಿವೆ. ಅಂಥ ಒಂದು ಜೀವಿಯು ನಮ್ಮ ಹಳ್ಳಿಯಲ್ಲಿ, ಮನೆಯ ಅಂಗಳದಲ್ಲಿ ತಣ್ಣಗೆ ಮಲಗಿತ್ತು.ಅದೇ ಕಡ್ಡಿ ಕೀಟ! ಅಂಗಳದ ಮೂಲೆಯಲ್ಲಿ, ಸಣ್ಣ ಹುಲ್ಲಿನ ಎಸಳುಗಳ ನಡುವೆ, ಉದ್ದನೆಯ ಕಡ್ಡಿಯೊಂದು ಮಲಗಿರುವಂಥ ನೋಟ.

ಇದನ್ನೂ ಓದಿ: Shashidhara Halady Column: ನಾವು ಮರೆಯುತ್ತಿರುವ ಹಳೆಯ ತಿನಿಸುಗಳು !

ಮೇಲ್ನೋಟಕ್ಕೆ, ಅಲ್ಲೊಂದು ಒಣಕಡ್ಡಿ ಬಿದ್ದುಕೊಂಡಿದೆ ಎಂದು ಹೇಳಬೇಕು. ಒಣಕಡ್ಡಿ ಯದೇ ಬಣ್ಣ, ಆಕಾರವೂ ತೆಂಗಿನ ಕಡ್ಡಿಯಂತೆಯೇ! ಹತ್ತಿರದಿಂದ ಗಮನಿಸಿದಾಗ, ಅದು ಒಂದು ಕಡ್ಡಿ ಎಂದು ಗೊತ್ತಾಯಿತು. ಪುಟ್ಟ ಗಿಡದ ರೆಂಬೆಯ ಮೇಲೆ ಕುಳಿತಿದ್ದ ಅದನ್ನು ಮುಟ್ಟಿದರೆ, ನಿಧಾನವಾಗಿ ಅತ್ತಿತ್ತ ಓಲಾಡತೊಡಗಿತು- ಗಾಳಿ ಬೀಸಿದಾಗ, ಒಣಗಿದ ಕಡ್ಡಿಗಳು ಓಲಾಡುವ ರೀತಿ. ಇನ್ನೂ ಹತ್ತಿರ ಹೋದಾಗ, ತುಸು ಗಾಬರಿಗೊಂಡಂತೆ, ತನ್ನ ಕಡ್ಡಿಯಂಥ ಕಾಲುಗಳನ್ನು ಅಲ್ಲಾಡಿಸಿ, ನಿಧಾನವಾಗಿ ಕೆಳಗಿಳಿದು, ಅಲ್ಲೇ ಸುಮ್ಮನೆ ಕುಳಿತಿತು.

ಕಡ್ಡಿಯ ಸ್ವರೂಪವನ್ನು ತದ್ವತ್ತಾಗಿ ಹೋಲುವ ಈ ಕಡ್ಡಿಕೀಟವು, ನಮ್ಮ ಪರಿಸರದ ಒಂದು ವಿಚಿತ್ರ, ವಿಶಿಷ್ಟ ಉದಾಹರಣೆ. ತನ್ನ ವೈರಿಗಳಿಂದ (ಇತರ ಹಕ್ಕಿಗಳು, ಉರಗಗಳು ಮತ್ತು ಈಗ ನನ್ನಂಥ ಕುತೂಹಲಿ ಮನುಷ್ಯರು!) ರಕ್ಷಿಸಿಕೊಳ್ಳಲು, ಒಣಗಿದ ಕಡ್ಡಿಯಂಥ ದೇಹವನ್ನ ಧರಿಸುವ ಕಡ್ಡಿಕೀಟವು, ಜೀವಲೋಕದ ಸೋಗುವೇಷಧಾರಿಗಳಲ್ಲಿ ಅಗ್ರಪಂಕ್ತಿಯಲ್ಲಿರು ವಂಥ ಜೀವಿ.

ನಮ್ಮ ಹಳ್ಳಿಯಲ್ಲಿ ಇವು ಅಪರೂಪವೇನಲ್ಲ, ಸಾಕಷ್ಟು ಕಾಣಿಸುತ್ತವೆ. ಜತೆಗೆ, ನಾಲ್ಕಾರು ಪ್ರಭೇದದ ಕಡ್ಡಿಕೀಟಗಳೂ ನಮ್ಮ ಫಾಸಲೆಯಲ್ಲಿವೆ. ಆದರೆ, ಮನುಷ್ಯನ ಕಣ್ಣಿಗೆ ಕಾಣಿಸು ವುದು ಅಪರೂಪ. ಕಡ್ಡಿ ಕೀಟವನ್ನು ನಾನು ಮೊದಲ ಬಾರಿ ನೋಡಿದ್ದು ನಾಲ್ಕನೆಯ ತರಗತಿಯ ವಿದ್ಯಾರ್ಥಿಯಾಗಿದ್ದಾಗ. ನಮ್ಮ ಮನೆ ಎದುರಿನಲ್ಲಿದ್ದ ಗುಡಿಸಲಿನಂಥ ಪುಟ್ಟ ಕೊಟ್ಟಿಗೆಯಲ್ಲಿ, ಆ ಕೀಟವು ಕೊಟ್ಟಿಗೆಯ ಮರದ ಕಂಬದ ಮೇಲೆ ಕುಳಿತಿತ್ತು. ಅದರ ಹತ್ತಿರ ಸಾಗಿದಾಗ, ಅದು ನಿಧಾನವಾಗಿ ತನ್ನ ದೇಹವನ್ನು ಅಲ್ಲಾಡಿಸ ತೊಡಗಿತು- ಗಾಳಿ ಬಂದಾಗ ಗಿಡದ ಟೊಂಗೆಯೊಂದು ಅಲ್ಲಾಡುವ ರೀತಿಯಲ್ಲಿ ಅದರ ದೇಹದ ತೊನೆದಾಟ.

Screenshot_3 R

ತಾನು ಕುಳಿತಿದ್ದ ಮರದ ಕಂಬದ ಬಣ್ಣವನ್ನೇ ಹೊಂದಿದ್ದ ಆ ಕೀಟವು ಒಂದು ‘ಕಡ್ಡಿ ಕೀಟ’ ಎಂದು ನನಗೆ ಆಗ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಆರೆಂಟು ಒಣ ಕಡ್ಡಿಗಳನ್ನು ಜೋಡಿಸಿದಂಥ, ಗಾಳಿ ಬಂದಾಗ ಸುಯ್ದಾಡುವ ರೀತಿ ಅಲ್ಲಾಡುತ್ತಾ ಕುಳಿತಿದ್ದ ಅದನ್ನು ಕಂಡು, ನನಗೆ ತುಸು ಅಚ್ಚರಿ, ತುಸು ಗಾಬರಿ. ಕೂಡಲೇ ನಮ್ಮ ಅಮ್ಮಮ್ಮನನ್ನು ಕರೆದು, “ಇದೇನು ನೋಡಿ, ಕಡ್ಡಿಗಳನ್ನು ಅಂಟಿಸಿದ ರೀತಿ ಇದೆ, ಆದರೆ ಹುಳದ ರೀತಿಯೂ ಇದೆ" ಎಂದೆ.

ಆಗೆಲ್ಲಾ ನಮ್ಮ ಅಮ್ಮಮ್ಮನೇ ನನಗೆ ನಡೆದಾಡುವ ಜ್ಞಾನಕೋಶ. ಒಂದು ಕಸಬರಿಗೆಯನ್ನು ಹಿಡಿದು ಸರಸರನೆ ಬಂದ ನಮ್ಮ ಅಮ್ಮಮ್ಮ, “ಹತ್, ಇದೊಂದು ಹುಳ. ಕಡ್ಡಿ ಜೋಡಿಸಿದಂತೆ ದೇಹ ಮಾಡಿಕೊಂಡು ಓಡಾಡುವ ಕೀಟ. ಇದ್ಯಾಕೆ ಇಲ್ಲಿಗೆ ಬಂತು?" ಎಂದು ಅದಕ್ಕೆ ಬೈಯುವಂತೆ ನಟಿಸುತ್ತಾ, ಕಸಬರಿಗೆಯ ನಡುವೆ ಅದನ್ನು ಬಾಚಿ ಹಿಡಿದು, ಅಂಗಳದಿಂದಾಚೆ ಬಿಟ್ಟುಬಂದರು.

ಕಡ್ಡಿಕೀಟದ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಆಗ ಕುತೂಹಲವಿದ್ದರೂ, ಆ ಹಳ್ಳಿಯ ಮೂಲೆಯಲ್ಲಿ ಕಡ್ಡಿ ಕೀಟದ ಅಥವಾ ಎಲೆ ಕೀಟದ ಕುರಿತು ವಿವರಿಸಿ ಹೇಳುವವರು ತಾನೆ ಯಾರಿದ್ದರು? ಅದರ ಬಗೆಗಿನ ಪುಸ್ತಕಗಳೂ ಅಂದು ನಮಗೆ ಲಭ್ಯವಿರಲಿಲ್ಲ.

ಆದರೆ, ಕಡ್ಡಿ ಕೀಟಗಳನ್ನು ಮತ್ತು ಅದರ ಸಂಬಂಧ ಎನಿಸಿರುವ ಎಲೆ ಕೀಟಗಳನ್ನು ಸಾಕಷ್ಟು ಬಾರಿ ನೋಡುವ ಅವಕಾಶ ದೊರಕಿತ್ತು. ಪ್ರತಿ ದಿನ ಶಾಲೆಗೆ ಹೋಗುವಾಗ, ಗಿಡಮರಗಳ ನಡುವಿನ ದಾರಿಯಲ್ಲಿ ಒಂದು ಕಿ.ಮೀ. ನಡೆಯುವ ಅನಿವಾರ್ಯತೆ ನಮಗೆ ಇತ್ತು.

Screenshot_2 ok

ನಡುನಡುವೆ ಸಿಗುವ ಗುಡ್ಡದ ದಾರಿಯಲ್ಲೂ ಅಧ ಕಿ.ಮೀ. ಕ್ರಮಿಸಬೇಕು. ಇಂಥ ದಾರಿ ಯಲ್ಲಿ ಪ್ರತಿದಿನ ನಡೆದು ಸಾಗುವ ವಿದ್ಯಾರ್ಥಿಯೊಬ್ಬನಿಗೆ ಸುತ್ತಲಿನ ಪರಿಸರದ ಆಗು ಹೋಗುಗಳನ್ನು ಗಮನಿಸುವ ಅವಕಾಶ. ಅಂಥ, ಇಂದಿನ ಮಾನದಂಡದಲ್ಲಿ ತುಸು ಅಪೂರ್ವ ಎನ್ನಬಹುದಾದ ಅವಕಾಶ ನನಗೆ ದೊರಕಿತ್ತು.

ನಮ್ಮ ಹಳ್ಳಿಯ ಸಸ್ಯ ಪ್ರಪಂಚ ಮತ್ತು ಪ್ರಾಣಿ ಪ್ರಪಂಚಗಳು ವಿವರವಾಗಿ ಪರಿಚಯ ವಾಗುವ ಅವಕಾಶ ಅದು. ನಮ್ಮ ಹಳ್ಳಿಯ ಸುತ್ತಲೂ ಕಾಡು, ಕಡ್ಡಿ ಕೀಟ, ಎಲೆ ಕೀಟ ಸಹಿತ ನಾನಾ ರೀತಿಯ ಜೀವಿಗಳ ಸಂಖ್ಯೆ ಜಾಸ್ತಿ, ಆದ್ದರಿಂದ ಸಾಕಷ್ಟು ಸಂಖ್ಯೆಯ ಇಂಥ ಕೀಟ ಗಳನ್ನು ನಾನು ಕಂಡಿದ್ದೆ; ವಿಶೇಷವೆಂದರೆ, ಅರಸೀಕೆರೆ ಸುತ್ತಮುತ್ತ ನಾನು ಗುಡ್ಡ ಬೆಟ್ಟ ಗಳಲ್ಲಿ ಸಾಕಷ್ಟು ತಿರುಗಾಡಿದ್ದೇನೆ, ಆ ಬಯಲುಸೀಮೆಯ ಕಾಡು ಪ್ರದೇಶದಲ್ಲೂ ಹಲವು ಕಡ್ಡಿ ಕೀಟಗಳನ್ನು ಬೇರೆ ಸಂದರ್ಭದಲ್ಲಿ ಕಂಡಿರುವೆ!

ನಮ್ಮ ಹಳ್ಳಿಯ ಸುತ್ತಲೂ ಇದ್ದ ಹಾಡಿ ಹಕ್ಕಲುಗಳಲ್ಲಿ, ಗುಡ್ಡಗಳಲ್ಲಿದ್ದ ಗಿಡ ಮರಗಳಲ್ಲಿ ಹಲವು ಪ್ರಭೇದದ ಕಡ್ಡಿ ಕೀಟಗಳನ್ನು ಕಂಡಿದ್ದೆ. ಚಿಕ್ಕ ಗಾತ್ರದವು, ಉದ್ದನೆಯವು, ಕೈಕಾಲು ಗಳಲ್ಲಿ ಪುಟ್ಟ ಎಲೆಗಳಂಥ ಅಥವಾ ಚಿತ್ರವಿಚಿತ್ರ ವಿನ್ಯಾಸ ಹೊಂದಿದ ಕೀಟಗಳು ಅವು. ಸಂಜೆಯ ಹೊತ್ತಿನಲ್ಲಿ, ದೀಪದ ಬೆಳಕಿನ ಆಕರ್ಷಣೆಯಿಂದಲೋ ಏನೋ, ಮನೆಯೊಳಗೂ ಒಮ್ಮೊಮ್ಮೆ ಬರುತ್ತಿದ್ದವು!

ಅದರಲ್ಲೂ, ಭತ್ತದ ಗಿಡದ ಎಲೆಯನ್ನು ಹೋಲುವ ರೆಕ್ಕೆ ಹೊಂದಿದ ಕೀಟವೊಂದು ಸದಾ ಮನೆಯೊಳಗೆ ಬರುತ್ತಿದ್ದುದುಂಟು. ಈ ರೀತಿಯಲ್ಲಿ, ಸಂಜೆ ದೀಪ ಹಚ್ಚಿದ ನಂತರ ನಮ್ಮ ಹಳ್ಳಿಯ ಮನೆಯೊಳಗೆ ಬರುವ ಹಲವು ಕೀಟಗಳಿವೆ- ಮಿಣುಕುಹುಳ, ಮಳೆ ಹಾತೆ, ಸರಸ್ವತಿ ಚೇಳು, ಕಡ್ಡಿ ಕೀಟ ಹೀಗೆ.

ಆದರೆ, ಕಡ್ಡಿ ಕೀಟಗಳ ಸಮೀಪದ ಸಂಬಂಧಿಗಳಾದ ಎಲೆ ಕೀಟಗಳು ಮನೆಯೊಳಗೆ ಬರುವುದು ಬಹಳ ಕಡಿಮೆ; ನಮ್ಮ ಹಳ್ಳಿಯ ಸರಹದ್ದಿನಲ್ಲಿ, ಕಡ್ಡಿ ಕೀಟಗಳು ಹೇರಳವಾಗಿ ಕಾಣಸಿಗುತ್ತವಾದರೂ, ಎಲೆ ಕೀಟಗಳು ಕಾಣಿಸಿಕೊಳ್ಳುವುದು ತುಸು ಕಡಿವೆಯೇ. ಇದಕ್ಕೆ ಇನ್ನೊಂದು ಕಾರಣವೂ ಇರಬಹುದು!

ಇಂಥ ಕೀಟಗಳಿಗೆ ಒಂದು ಅಪೂರ್ವ ಗುಣವಿದೆ- ಅದೇನೆಂದರೆ, ತಮ್ಮ ಆಶ್ರಯದಾತ ಗಿಡ, ಟೊಂಗೆ ಅಥವಾ ಎಲೆಯನ್ನು ತದ್ವತ್ತಾಗಿ ಹೋಲುವಂಥ ದೇಹರಚನೆಯನ್ನು ಅವು ಹೊಂದಿವೆ. ಇದರಿಂದ ಅವುಗಳಿಗಾಗುವ ಲಾಭವೆಂದರೆ, ಅಲ್ಲಾಡದೇ ಅವು ತಮ್ಮ ಆಶ್ರಯ ದಾತ ಗಿಡದ ಮೇಲೆ ಕುಳಿತಾಗ, ಬರಿಗಣ್ಣಿನ ನೋಟದಲ್ಲಿ ಅವುಗಳನ್ನು ಕಂಡು ಹಿಡಿಯು ವುದು ಬಹಳ ಕಷ್ಟ. ಎಲೆ ಕೀಟದ ಇಂಥ ಛದ್ಮವೇಷದ ಚಮತ್ಕಾರವು ಹಲವು ಬಾರಿ ಪರಿಪೂರ್ಣತೆಯನ್ನು ತಲುಪುತ್ತದೆ.

ಆದ್ದರಿಂದಲೂ ಇರಬಹುದು, ನಮ್ಮ ಹಳ್ಳಿಯ ಸುತ್ತಲಿನ ಗಿಡಮರಗಳಲ್ಲಿ ಎಲೆ ಕೀಟ ಗಳಿದ್ದರೂ, ಎಲೆಯನ್ನೇ ಹೋಲುವ ಅವುಗಳ ದೇಹರಚನೆಯಿಂದಾಗಿ, ಬೇಗನೆ ಗುರುತಿಸಲು ನಮ್ಮಿಂದ ಸಾಧ್ಯವಾಗಿಲ್ಲವೇನೋ!

ಇಲ್ಲಿ ‘ಆಶ್ರಯದಾತ ಸಸ್ಯವನ್ನು ಹೋಲುವ ದೇಹರಚನೆ’ ಎಂಬ ಪದಪ್ರಯೋಗ ಮಾಡಿದೆ. ಇದು ಇನ್ನೂ ವಿಸ್ಮಯಕಾರಿ ವಿದ್ಯಮಾನ. ಬೇರೆ ಬೇರೆ ಪ್ರಭೇದದ ಗಿಡಗಳ ಮೇಲೆ ಕೂರುವ, ಅವುಗಳನ್ನು ಆಶ್ರಯಿಸಿರುವ ನಿರ್ದಿಷ್ಟ ಪ್ರಭೇದದ ಕಡ್ಡಿ ಕೀಟ ಅಥವಾ ಎಲೆ ಕೀಟಗಳು, ಆಯಾ ಗಿಡದ ಟೊಂಗೆ ಅಥವಾ ಎಲೆಯನ್ನು ಹೋಲುವ ದೇಹರಚನೆಯನ್ನು ಹೊಂದಿರುತ್ತವೆ.

ಇದು ಜೀವವಿಕಾಸದ ವಿಸ್ಮಯವೂ ಹೌದು. ಬೂದು ಬಣ್ಣದ ಟೊಂಗೆ ಹೊಂದಿರುವ ಗಿಡದ ಮೇಲೆ ಸಾಮಾನ್ಯವಾಗಿ ಕಾಣಸಿಗುವ ಕಡ್ಡಿ ಕೀಟವು, ಅದೇ ರೀತಿಯ ಬೂದು ಬಣ್ಣದ ದೇಹವನ್ನು ಹೊಂದಿರುತ್ತದೆ. ತಿಳಿ ಹಸಿರುವ ಬಣ್ಣದ ಎಲೆಯಿರುವ ಗಿಡವನ್ನು ಆಶ್ರಯಿಸುವ ಎಲೆ ಕೀಟವು, ತಿಳಿ ಹಸಿರು ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತದೆ.

ಕೆಲವು ಪ್ರಭೇದಗಳಲ್ಲಿ ಈ ಹೋಲಿಕೆಯು ಎಷ್ಟೊಂದು ಪರಿಪೂರ್ಣ ಎಂದರೆ, ಆ ಕೀಟವು ಅಲ್ಲಾಡದೇ ಕುಳಿತರೆ, ಅದೇ ಗಿಡದ ಎಲೆಯಿರಬಹುದು ಎಂಬಷ್ಟು!

ಕಡ್ಡಿ ಕೀಟಗಳು ಮತ್ತು ಎಲೆ ಕೀಟಗಳ ಜೀವನಕ್ರಮಕ್ಕೆ ಬಹಳ ಸಾಮ್ಯತೆ ಉಂಟು. ವೈಜ್ಞಾನಿಕವಾಗಿ, ಇವೆರಡೂ, ಪಾಸ್ಮಾಟೋಡಿಯಾ ಆರ್ಡರ್‌ಗೆ ಸೇರಿವೆ. ಕಡ್ಡಿ ಕೀಟಗಳು ಮತ್ತು ಎಲೆ ಕೀಟಗಳೂ ಪರಸ್ಪರ ಸಂಬಂಧಿಗಳಾದರೂ, ಅವುಗಳ ಭೌಗೋಳಿಕ ವ್ಯಾಪ್ತಿ ಯಲ್ಲಿ ಗಮನಾರ್ಹ ವ್ಯತ್ಯಾಸವಿದೆ. ಕಡ್ಡಿ ಕೀಟಗಳು ಜಗತ್ತಿನ ಎಲ್ಲೆಡೆ (ದಕ್ಷಿಣ ಧ್ರುವ ಪ್ರದೇಶವನ್ನು ಹೊರತುಪಡಿಸಿ) ಕಾಣಸಿಗುತ್ತವೆ.

ಆದರೆ ಎಲೆ ಕೀಟಗಳ ವ್ಯಾಪ್ತಿ ಬಹಳ ಕಿರಿದು. ಭಾರತ, ದಕ್ಷಿಣ ಏಷ್ಯಾ ಮತ್ತು ಆಸ್ಟ್ರೇಲಿಯಾ ಖಂಡದಲ್ಲಿ ಮಾತ್ರ ಇವುಗಳ ವಾಸ. ನಮ್ಮ ದೇಶದಲ್ಲಿ ಹಲವು ಪ್ರಭೇದದ ಎಲೆ ಕೀಟಗಳಿವೆ. ಆದರೆ ಹೆಚ್ಚು ಅಧಯನಕ್ಕೆ ಒಳಪಟ್ಟಿಲ್ಲ. ಇವುಗಳ ಜೀವನಕ್ರಮದ ಸಂಶೋಧನೆಯ ನಿಟ್ಟಿನಲ್ಲಿ, ಆಸ್ಟ್ರೇಲಿಯಾ ಮುಂದಿದೆ. ಇವುಗಳ ಸಂಬಂಧಿಗಳಾದ ಕಡ್ಡಿ ಕೀಟಗಳು ಜಗದ್ವ್ಯಾಪಿಯಾಗಿದ್ದು, ಬೇರೆ ಬೇರೆ ಖಂಡಗಳಲ್ಲೂ ಕಾಣಸಿಗುವುದರಿಂದ ಅವುಗಳ ಮೇಲೆ ಸಾಕಷ್ಟು ಸಂಶೋಧನೆ ನಡೆದಿದೆ.

ಎಲೆ ಕೀಟಗಳ ಜೀವನಕ್ರಮ, ದಿನಚರಿ ಇಂದಿಗೂ ನಿಗೂಢ. ಅದರ ಸಂಪೂರ್ಣ ಮಾಹಿತಿ ಯನ್ನು ಇನ್ನೂ ನಾವು ಪೂರ್ತಿಯಾಗಿ ಅರಿಯಬೇಕಾಗಿದೆ. ಕೆಲವು ಪ್ರಭೇದಗಳ ಎಲೆ ಕೀಟಗಳ ಜೀವನಕ್ರಮ ಇಂದಿಗೂ ಅಪರಿಚಿತವಾಗಿಯೇ ಉಳಿದಿದೆ. ಎಲೆ ಕೀಟಗಳ ಪ್ರಭೇದದಲ್ಲಿ ತುಸು ದೊಡ್ಡಗಾತ್ರದ ‘ಜಯಂಟ್ ಮಲೇಷಿಯನ್ ಎಲೆ ಕೀಟ’ದ ಉದಾಹರಣೆ ಯನ್ನು ನೋಡಿದರೆ, 1984ರ ತನಕ ಇದರ ವೈಜ್ಞಾನಿಕ ವರ್ಗೀಕರಣ, ಅಧ್ಯಯನ ಆಗಿರಲಿಲ್ಲ.

ಇನ್ನೂ ವಿಶೇಷವೆಂದರೆ, 1994ರ ತನಕ ಈ ಪ್ರಭೇದದ ಗಂಡು ಕೀಟವನ್ನೇ ಪತ್ತೆ ಮಾಡಿರ ಲಿಲ್ಲ. ಎಲೆ ಕೀಟಗಳಲ್ಲಿ ಗಂಡು ಕೀಟಗಳ ಸಂಖ್ಯೆ ಬಹಳ ಕಡಿಮೆ (ಕಡ್ಡಿ ಕೀಟಗಳಲ್ಲೂ ಇಂಥ ವಿದ್ಯಮಾನವಿದೆ). ಆದ್ದರಿಂದಲೇ ಇವು ತಮ್ಮ ನೈಜ ವಾಸಸ್ಥಳದಲ್ಲಿ ಇಂದಿಗೂ ಅಧಯನಕ್ಕೆ ಒಳಪಟ್ಟಿಲ್ಲ.

ನಮಗೆ ಕಾಣಸಿಗುವ ಆ ಕೀಟಗಳು ಸಾಮಾನ್ಯವಾಗಿ ಹೆಣ್ಣು ಕೀಟ ಮಾತ್ರ. ಈ ಕೀಟಗಳಲ್ಲಿ ಗಂಡು ಕೀಟಗಳ ಸಂಖ್ಯೆ ಬಹಳ ಕಡಿಮೆ. ಹಾಗಿದ್ದರೆ, ಸಂತಾನೋತ್ಪತ್ತಿ ಹೇಗಾಗುತ್ತದೆ ಎಂಬ ಪ್ರಶ್ನೆ ಎದುರಾದೀತು! ಹೆಣ್ಣು ಎಲೆ ಕೀಟವು, ಅಗತ್ಯವಿದ್ದಾಗ, ತಾನು ಮಾತ್ರ ಸಂತಾನೋ ತ್ಪತ್ತಿ ಮಾಡುತ್ತದೆ. ಅವೆಲ್ಲವೂ ಹೆಣ್ಣು!

ಆದರೆ, ಗಂಡು ಎಲೆ ಕೀಟ ಜನಿಸಲು, ಗಂಡಿನೊಂದಿಗೆ ಸಂಯೋಗ ಅಗತ್ಯ.ಕಡ್ಡಿ ಕೀಟಗಳು ಹೆಚ್ಚು ಕಾಣಸಿಗುವುದು ದಕ್ಷಿಣ ಏಷ್ಯಾ ಮತ್ತು ದಕ್ಷಿಣ ಅಮೆರಿಕದಲ್ಲಿ. ಬೋರ್ನಿಯೋ ದ್ವೀಪದಲ್ಲಿ (ಇಂಡೋನೇಷ್ಯಾ ಮತ್ತು ಮಲೇಷ್ಯಾ) ಸುಮಾರು 300 ಪ್ರಭೇದದ ಕಡ್ಡಿ ಕೀಟಗಳು ಕಾಣಸಿಗುತ್ತವೆ ಮತ್ತು ಇದು ಒಂದು ರೀತಿಯ ದಾಖಲೆಯೂ ಹೌದು.

ವಿಶ್ವದಲ್ಲಿ ಇದುವರೆಗೆ 3000 ಕ್ಕೂ ಅಧಿಕ ಪ್ರಭೇದದ ಕಡ್ಡಿಕೀಟಗಳನ್ನು ಗುರುತಿಸಲಾಗಿದೆ. 2 ಸೆಂಟಿಮೀಟರ್ ಉದ್ದದ ಕಡ್ಡಿ ಕೀಟ ಪ್ರಭೇದವು ಅತಿ ಚಿಕ್ಕದು. ಸುಮಾರು 64 ಸೆಂಟಿ ಮೀಟರ್ (ಸುಮಾರು ೨ ಅಡಿ) ಉದ್ದದ ಕಡ್ಡಿ ಕೀಟದ ಅತಿ ಉದ್ದನೆಯದು ಎಂದು ದಾಖಲಾಗಿದೆ.

ಭಾರತದಲ್ಲಿ ಮತ್ತು ಹಿಂದೂ ಮಹಾಸಾಗರದಲ್ಲಿರುವ ದ್ವೀಪರಾಷ್ಟ್ರಗಳಲ್ಲಿ ಮಾತ್ರ ಕಾಣಸಿಗುವ ಎಲೆ ಕೀಟಗಳ ಕುರಿತಾದ ಅಧ್ಯಯನ ಇನ್ನೂ ಶೈಶವಾವಸ್ಥೆಯಲ್ಲಿದೆ. ಎಲೆ ಕೀಟಗಳ 114 ಪ್ರಭೇದಗಳನ್ನು ಪತ್ತೆ ಹಚ್ಚಲಾಗಿದ್ದರೂ, ವಿಸ್ತೃತ ವೈಜ್ಞಾನಿಕ ಅಧ್ಯಯನವು ಈ ಸಂಖ್ಯೆಯನ್ನು ಸುಮಾರು 50ಕ್ಕೆ ತಂದು ನಿಲ್ಲಿಸುತ್ತದೆ. ಇವುಗಳ ವರ್ಗೀಕರಣವೂ ತುಸು ಜಿಡುಕಾಗಿಯೇ ಇದೆ.

ಗಿಡವೊಂದರ ಎಲೆಯನ್ನು ಹೋಲುವ ಇವುಗಳ ಜೀವನಕ್ರಮವು ಬೆರಗು ಹುಟ್ಟಿಸು ವಂಥದ್ದು; ಎಲೆ ಕೀಟವು ಸಾಯುವ ಮುನ್ನ, ನಿಜವಾದ ಎಲೆಯು ಬಣ್ಣ ಬದಲಿಸುವಂತೆ ಬಣ್ಣ ಬದಲಿಸಿಕೊಳ್ಳುವುದನ್ನು ಗುರುತಿಸಲಾಗಿದೆ. ಅಂದರೆ, ಎಲೆಯೊಂದು ಉದುರುವ ಮುಂಚೆ ಹಣ್ಣಾಗುವಂತೆಯೇ, ಕಡ್ಡಿ ಕೀಟದ ದೇಹವೂ ‘ಹಣ್ಣಾಗಿ’ ಅಳಿಯುತ್ತದೆ! ಹೋಲಿಕೆಯಲ್ಲಿ ಗಮನಿಸಿದಾಗ, 3000 ಪ್ರಭೇದದ ಕಡ್ಡಿ ಕೀಟಗಳನ್ನು ಗುರುತಿಸಲಾಗಿದ್ದರೆ, ಸುಮಾರು 100ಕ್ಕಿಂತ ಕಡಿಮೆ ಪ್ರಭೇದದ ಎಲೆ ಕೀಟಗಳನ್ನು ಗುರುತಿಸಲಾಗಿದೆ.

ಜಗತ್ತಿನಾದ್ಯಂತ ಕಾಣಸಿಗುವ ಕಡ್ಡಿಕೀಟಗಳ ಕುರಿತು ನಡೆದಿರುವ ಅಧ್ಯಯನಗಳನ್ನು ಹೋಲಿಸಿದರೆ, ಅವುಗಳ ಸಂಬಂಽಗಳೆನಿಸಿರುವ ಎಲೆ ಕೀಟಗಳು ನಮ್ಮ ದೇಶದಲ್ಲೇ ಅಧಿಕ; ಅವುಗಳ ಸಮಗ್ರ ಅಧ್ಯಯನ ಇನ್ನಷ್ಟೇ ಆಗಬೇಕಿದೆ ಎಂಬುದು ಸಹಜ.

ಪಶ್ಚಿಮಘಟ್ಟಗಳಲ್ಲಿ, ಹುಲ್ಲುಗಾವಲುಗಳಲ್ಲಿ, ಬೆಟ್ಟಗಳಲ್ಲಿ, ಬಯಲುಸೀಮೆಯ ಉದುರೆಲೆಯ ಕಾಡುಗಳಲ್ಲಿರಬಹುದಾದ ಇನ್ನಷ್ಟು ಪ್ರಭೇದದ ಎಲೆ ಕೀಟಗಳನ್ನು ಅಧ್ಯಯನಕ್ಕೆ ಒಳಪಡಿಸಿ, ಹೊಸ ಪ್ರಭೇದಗಳನ್ನು ಗುರುತಿಸುವ ಕೆಲಸಗಳನ್ನು ನಮ್ಮ ವಿಶ್ವವಿದ್ಯಾಲಯಗಳು ಕೈಗೆತ್ತಿಕೊಳ್ಳಲಿ ಎಂಬ ಆಶಯ ನನ್ನದು.

ಶಶಿಧರ ಹಾಲಾಡಿ

View all posts by this author