ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ganesh Maane Column: ಇದು ಕೇವಲ ನಾಯಕತ್ವ ಉಳಿಸಿಕೊಳ್ಳುವ ರಾಜಕೀಯ ಆಟ !

ರಾಹುಲ್ ಗಾಂಧಿಯವರ ರಾಜಕೀಯ ಅಧಿಕಾರದಾಹದ ಮನಸ್ಥಿತಿ ಎಷ್ಟರಮಟ್ಟಿಗೆ ಇದೆ ಅಂದರೆ, ತಮ್ಮ ರಾಜಕೀಯ ದಾರಿಗೆ ಅಡ್ಡಿಯಾಗುವ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯನ್ನು ವಿವಾದದ ಕಟ್ಟೆಯಲ್ಲಿ ತಂದು ನಿಲ್ಲಿಸುವ ಪ್ರಯತ್ನ ನಡೆಸಿದ್ದಾರೆ. ಈ ಹಿಂದೆ ತನಿಖಾ ಸಂಸ್ಥೆಗಳ ವಿರುದ್ಧ ಸಮರ ಸಾರಿದರು, ಮೊನ್ನೆ ಎಸ್‌ಐಆರ್ ವಿಚಾರವನ್ನು ಮುಂದಿಟ್ಟುಕೊಂಡರು, ಈಗ ನೇರವಾಗಿ ಚುನಾವಣಾ ಆಯೋಗವನ್ನೇ ಗುರಿಯಾಗಿಸಿಕೊಂಡಿದ್ದಾರೆ.

ಜನಮತ

ಜಗದೀಶ್‌ ಮಾನೆ

ಎಸ್‌ಐಆರ್ ಮತ್ತು ‘ವೋಟ್ ಚೋರಿ’ ಎಂಬ ಅಸ್ತ್ರಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದ ಜಿರಳೆಗಳ ಹೋರಾಟಕ್ಕೆ ಕೊನೆಗೂ ಜನಬೆಂಬಲದ ಬರ ಎದುರಾಯಿತು. ಕಳೆದ ಬಾರಿ ಹೋರಾಟದ ಹೆಸರಿನಲ್ಲಿ ಅಬ್ಬರಿಸಿ, ಆರ್ಭಟಿಸಿ, ರಾಜಕೀಯ ರಂಗದಲ್ಲಿ ತಾವೇನೋ ಸಾಧಿಸಿಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿದ್ದ ಅವರಿಗೆ ಈ ಬಾರಿ ಅದೇ ಅಬ್ಬರವನ್ನು ಮುಂದುವರಿ ಸಲು ಸಾಧ್ಯವಾಗಲಿಲ್ಲ.

ಕೇಂದ್ರ ಸರ್ಕಾರದ ಜಾಗೃತಿಯ ಎದುರು ಅವರ ಹೋರಾಟದ ಹುಮ್ಮಸ್ಸೇ ತಣ್ಣಗಾಯಿತು. ಆದರೆ ಈ ಬೆಳವಣಿಗೆಯಿಂದ ಎಲ್ಲರಿಗಿಂತ ಹೆಚ್ಚು ಸಂಕಟವಾಗಿದ್ದು ಮಾತ್ರ ರಾಹುಲ್ ಗಾಂಧಿಯವರಿಗೆ. ಅದಕ್ಕೆ ಕಾರಣವೂ ಇದೆ. ರಾಹುಲ್ ಗಾಂಧಿ ಮತ್ತು ಜಿರಳೆಗಳ ರಾಜಕೀಯದ ನಡುವೆ ಹೊಂದಾಣಿಕೆ ಆಗಿತ್ತು. ವಾರಾಂತ್ಯದಲ್ಲಿ ಜಿರಳೆಗಳ ಹೋರಾಟ; ವಾರದ ದಿನಗಳಲ್ಲಿ ರಾಹುಲ್ ಗಾಂಧಿಯವರ ರಾಜಕೀಯ ಅಬ್ಬರ. ಅವರವರ ಅನುಕೂಲಕ್ಕೆ ತಕ್ಕಂತೆ ಹೋರಾಟದ ಜವಾಬ್ದಾರಿಯನ್ನು ಹಂಚಿಕೊಂಡಿದ್ದರು. ಅವರ ಈ ರಾಜಕೀಯ ಆಟವನ್ನು ನೋಡಿದರೆ, ಇದೊಂದು ಜನಾಂದೋಲ ನದ ಬದಲಿಗೆ ಪರಸ್ಪರ ಅನುಕೂಲಕ್ಕೆ ಮಾಡಿಕೊಂಡಿರುವ ರಾಜಕೀಯ ಜುಗಲ್ಬಂದಿ ಯೆನ್ನುವುದರಲ್ಲಿ ಅನುಮಾನವೇ ಇಲ್ಲ!

ರಾಹುಲ್ ಗಾಂಧಿಯವರ ರಾಜಕೀಯ ಅಧಿಕಾರದಾಹದ ಮನಸ್ಥಿತಿ ಎಷ್ಟರಮಟ್ಟಿಗೆ ಇದೆ ಅಂದರೆ, ತಮ್ಮ ರಾಜಕೀಯ ದಾರಿಗೆ ಅಡ್ಡಿಯಾಗುವ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯನ್ನು ವಿವಾದದ ಕಟ್ಟೆಯಲ್ಲಿ ತಂದು ನಿಲ್ಲಿಸುವ ಪ್ರಯತ್ನ ನಡೆಸಿದ್ದಾರೆ. ಈ ಹಿಂದೆ ತನಿಖಾ ಸಂಸ್ಥೆಗಳ ವಿರುದ್ಧ ಸಮರ ಸಾರಿದರು, ಮೊನ್ನೆ ಎಸ್‌ಐಆರ್ ವಿಚಾರವನ್ನು ಮುಂದಿಟ್ಟುಕೊಂಡರು, ಈಗ ನೇರವಾಗಿ ಚುನಾವಣಾ ಆಯೋಗವನ್ನೇ ಗುರಿಯಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: Dr Jagadeesh Maane Column: ವಿಭಜನೆಯ ಬೆಂಕಿಯಲ್ಲಿ ಹುಟ್ಟಿತು ಬಲಿಷ್ಠ ಭಾರತದ ಕನಸು !

ನಾಳೆ ನ್ಯಾಯಾಂಗವನ್ನೂ ಇದೇ ವಿವಾದದ ಅಂಗಳಕ್ಕೆ ಎಳೆದು ತಂದು ನಿಲ್ಲಿಸುವುದರಲ್ಲಿ ಅನುಮಾನವೇ ಇಲ್ಲ. ಒಂದರ ಹಿಂದೆ ಮತ್ತೊಂದು ಸಾಂವಿಧಾನಿಕ ಸಂಸ್ಥೆಯನ್ನು ಗುರಿಯಾಗಿಸಿ ಕೊಂಡು ರಾಜಕೀಯ ಸಂಘರ್ಷ ಸೃಷ್ಟಿಸುವ ಈ ತಂತ್ರದ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಹೀಗೆ ಒಂದೊಂದೇ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಶ್ನಿಸುವುದೇ ರಾಜಕೀಯ ತಂತ್ರವಾದರೆ ಅದು ಪ್ರಜಾಪ್ರಭುತ್ವದ ನೇರ ಕಗ್ಗೊಲೆ ಅಲ್ಲದೆ ಮತ್ತಿನ್ನೇನೂ ಅಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿಯವರಿಗೆ ಇಡೀ ದೇಶದಲ್ಲಿ ನ್ಯಾಯಸಮ್ಮತ ಚುನಾವಣೆಗಳ ಮೂಲಕ ಗೆಲುವು ಸಾಧಿಸುವುದು ಸಾಧ್ಯವಿಲ್ಲ ಎಂಬ ಸತ್ಯ ಅರಿವಾಗಿದೆ.

ಈಗಾಗಲೇ ದೇಶದ ಬಹುಪಾಲು ಜನ ರಾಹುಲ್‌ರನ್ನು ತಿರಸ್ಕರಿಸಿದ್ದಾರೆ. ಜನರ ಈ ಮನಸ್ಥಿತಿ ಅಷ್ಟು ಸುಲಭವಾಗಿ ಬದಲಾಗುವುದಿಲ್ಲ. ಹೀಗಾಗಿ ರಾಹುಲ್ ಗಾಂಧಿಯವರು ಪ್ರಧಾನಿಯಾಗಬೇಕೆಂದರೆ ಬೇರೆಯದೇ ಮಾರ್ಗವನ್ನು ಅನುಸರಿಸಬೇಕಾಗುತ್ತದೆ.

ಬಾಂಗ್ಲಾದೇಶದಲ್ಲಿ ನಡೆದ ರೀತಿಯ ಅರಾಜಕತೆಯ ವಾತಾವರಣ ಸೃಷ್ಟಿಯಾದರೆ ಮಾತ್ರ ಅದು ಸಾಧ್ಯವೇ ಹೊರತು, ನ್ಯಾಯಸಮ್ಮತ ಚುನಾವಣೆಗಳಲ್ಲಿ ದೇಶದ ಮತದಾರರು ಮತ ಹಾಕಿದರೆ ರಾಹುಲ್ ಗಾಂಧಿ ಸದ್ಯ ಪ್ರಧಾನಿಯಾಗಲು ಸಾಧ್ಯವಿಲ್ಲ. ಹೀಗಾಗಿ ರಾಹುಲ್ ಗಾಂಧಿಯವರು ಸಂವಿಧಾನದ ಹೆಸರಿನಲ್ಲಿ ಸಂವಿಧಾನದ ರಕ್ಷಕರ ಮುಖವಾಡ ಧರಿಸಿ, ಸಂವಿಧಾನದ ಸ್ತಂಭಗಳನ್ನೇ ನಾಶಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ.

jagadeesh Maane

ಇಂತಹ ಪ್ರಯೋಗಗಳೆಲ್ಲ ಈಗಾಗಲೇ ನಡೆದುಹೋಗಿವೆ. ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ಕೆಳಗಿಳಿಸುವುದೇ ಇವರ ಉದ್ದೇಶವಾಗಿದ್ದರೆ, ಅದಕ್ಕಾಗಿ ಇಷ್ಟೆಲ್ಲ ದೊಡ್ಡ ಹಂಗಾಮ ಸೃಷ್ಟಿಸುವ ಅಗತ್ಯವೇನಿದೆ? ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕಲು ನಿರ್ದಿಷ್ಟ ಕಾನೂನುಬದ್ಧ ಪ್ರಕ್ರಿಯೆಯಿದೆ.

ರಾಹುಲ್ ಗಾಂಧಿಯವರು ರಾತ್ರಿ ಹಗಲೆನ್ನದೆ ಅದೆಷ್ಟೇ ಪ್ರತಿಭಟನೆ ಮಾಡಿ, ಮೋದಿ ಅವರ ಮೇಲೆ ಒತ್ತಡ ಹೇರಿದರೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಪಡೆಯುವ ಅಧಿಕಾರ ಮೋದಿ ಯವರಿಗಿಲ್ಲ. ಅದಕ್ಕಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸಂವಿಧಾನಬದ್ಧ ಪ್ರಕ್ರಿಯೆಯನ್ನು ಅನುಸರಿಸಬೇಕು. ಲೋಕಸಭೆಯಲ್ಲಿ ಕನಿಷ್ಠ 100 ಹಾಗೂ ರಾಜ್ಯಸಭೆಯಲ್ಲಿ ಕನಿಷ್ಠ 50 ಸಂಸದರು ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಅಗತ್ಯವಾದ ಬೆಂಬಲ ನೀಡಬೇಕೆಂಬ ನಿಯಮವಿದೆ.

ಇತ್ತೀಚೆಗೆ ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರಯತ್ನಿಸಿದ ರೀತಿಯ ಇಲ್ಲಿಯೂ ಸಂವಿಧಾನಬದ್ಧ ಮಾರ್ಗವನ್ನು ಅನುಸರಿಸಬಹುದಲ್ಲವೇ? ಇದೆಲ್ಲವನ್ನೂ ಬಿಟ್ಟು ದೇಶದ ಜನರಿಗೆ ಮಂಕುಬೂದಿ ಎರಚಿಸುವ ಪ್ರಯತ್ನವೇಕೆ? ರಾಷ್ಟ್ರಪತಿ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ದೇಶದಲ್ಲಿ ರಾಷ್ಟ್ರಪತಿಗಳಿಗಿಂತ ಮೇಲೆ ಯಾರಾದರೂ ಇದದಾರೆಯೇ? ಇಲ್ಲ.

ಹಾಗಾದರೆ, ರಾಹುಲ್ ಗಾಂಧಿಯವರು ನ್ಯಾಯಾಲಯದಲ್ಲಿ ತಮ್ಮ ಹೋರಾಟವನ್ನು ಮುಂದು ವರಿಸಿ, ಜ್ಞಾನೇಶ್ ಕುಮಾರ್ ಅವರು ತಪ್ಪು ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಬೇಕಲ್ಲವೇ? ಒಂದು ವೇಳೆ ನ್ಯಾಯಾಲಯದಲ್ಲಿ ಆರೋಪ ಸಾಬೀತಾದರೆ, ರಾಹುಲ್ ಗಾಂಧಿಯವರಿಗೆ ಪ್ರತಿಭಟನೆ ಮಾಡುವ ಅಗತ್ಯವಾದರೂ ಏನಿರುತ್ತದೆ? ಆಗ ದೇಶದ ಜನರೇ ರೊಚ್ಚಿಗೆದ್ದು ಪ್ರಶ್ನಿಸುವುದಿಲ್ಲವೇ? ಆದರೆ ರಾಹುಲ್ ಗಾಂಧಿಯವರಿಗೆ ಕಾನೂನುಬದ್ಧ ಮಾರ್ಗಕ್ಕಿಂತ ರಾಜಕೀಯ ಹೋರಾಟದ ಹಂಗಾಮವೇ ಹೆಚ್ಚು ಇಷ್ಟ.

ಸಾಮಾನ್ಯವಾಗಿ ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ, ಗೃಹ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ಯಾರನ್ನಾದರೂ ಭೇಟಿಯಾಗಿ ಮನವಿ ಸಲ್ಲಿಸಬಹುದು. ಆದರೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗಳನ್ನು ಖಾಸಗಿಯಾಗಿ ಭೇಟಿಯಾಗಿ ಮನವಿ ಸಲ್ಲಿಸುವ ವಿಚಾರದಲ್ಲಿ ನಮ್ಮ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಆದರೆ ರಾಹುಲ್ ಗಾಂಧಿ ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಸುಪ್ರೀಂ ಕೋರ್ಟ್‌ʼನ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಆದರೆ ಮುಖ್ಯ ನ್ಯಾಯಮೂರ್ತಿಗಳು ಇದನ್ನು ನಯವಾಗಿ ತಿರಸ್ಕರಿಸಿ, ಇಂತಹ ವಿಚಾರಗಳಿಗೆ ಕಾನೂನುಬದ್ಧ ಮಾರ್ಗದಲ್ಲಿಯೇ ಬರಬೇಕೆಂದು ತಿಳಿಸಿದರು.

ಇದರಿಂದ, ಈ ದೇಶದಲ್ಲಿ ಯಾರು ಬೇಕಾದರೂ ದಾರಿ ತಪ್ಪಬಹುದು; ಆದರೆ ನ್ಯಾಯಾಲಯ ಮಾತ್ರ ಸಂವಿಧಾನದ ದಾರಿಯನ್ನು ಬಿಟ್ಟು ನಡೆಯುವುದಿಲ್ಲ ಎಂಬ ಮಹತ್ವದ ಸಂದೇಶವಂತೂ ಹೊರಹೊಮ್ಮಿದೆ. ರಾಹುಲ್ ಗಾಂಧಿಯವರಂತಹ ನಾಯಕರು ಬಾಂಗ್ಲಾದೇಶದ ರೀತಿಯ ವಾತಾವರಣವನ್ನು ಭಾರತದಲ್ಲಿಯೂ ಸೃಷ್ಟಿಸಲು ಎಷ್ಟೇ ಪ್ರಯತ್ನಿಸಿದರೂ, ಈ ದೇಶದಲ್ಲಿ ಅದು ಸಾಧ್ಯವಿಲ್ಲ.

ಇಲ್ಲಿ ಏನೇ ಬದಲಾವಣೆ ಆಗಬೇಕಾದರೂ ಅದು ಚುನಾವಣೆಗಳ ಮೂಲಕವೇ ಆಗಬೇಕು. ಈ ದೇಶದಲ್ಲಿ ಚುನಾವಣೆಯ ಮೂಲಕವೇ ಅಧಿಕಾರಕ್ಕೆ ಬರಬೇಕು; ಅದೇ ಚುನಾವಣೆಯ ಮೂಲಕ ಅಧಿಕಾರವನ್ನು ಕಳೆದುಕೊಳ್ಳುವ ವ್ಯವಸ್ಥೆಯೂ ಇದೆ. ಅದಕ್ಕೆ ಮುಖ್ಯ ಕಾರಣ ಈ ದೇಶದ ನ್ಯಾಯಾಂಗ ವ್ಯವಸ್ಥೆ, ಸೇನೆ ಹಾಗೂ ಚುನಾವಣಾ ಆಯೋಗ. ಈ ಸಂಸ್ಥೆಗಳು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುವುದೇ ದೇಶದ ಪ್ರಜಾಪ್ರಭುತ್ವದ ಶಕ್ತಿ.

ಹೀಗಿರುವಾಗ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ರಾಹುಲ್ ಗಾಂಧಿ ಯವರು ನಡೆಸುತ್ತಿರುವ ಇಂತಹ ಸಾವಿರ ಪ್ರಯತ್ನಗಳು ವಿಫಲ, ಹತಾಶ ಯತ್ನಗಳಷ್ಟೇ. ಇಂತಹ ಪ್ರಯತ್ನಗಳಿಂದ ನರೇಂದ್ರ ಮೋದಿ ಮತ್ತಷ್ಟು ಗಟ್ಟಿಯಾಗುತ್ತಾರೆ ಹೊರತು, ತಮ್ಮ ಅಧಿಕಾರವನ್ನು ಅಷ್ಟು ಸುಲಭವಾಗಿ ಕಳೆದುಕೊಳ್ಳುವುದಿಲ್ಲ.

ನಮ್ಮ ಸೇನೆಯು ಅತ್ಯಂತ ಶಿಸ್ತುಬದ್ಧವಾಗಿದೆ. ಅದು ಯಾವತ್ತಿಗೂ ರಾಜಕೀಯವನ್ನು ಪ್ರವೇಶಿಸುವು ದಿಲ್ಲ. ಸಂವಿಧಾನಾತ್ಮಕವಾಗಿ ಅಧಿಕಾರದಲ್ಲಿರುವ ಸರ್ಕಾರದ ಕಾನೂನುಬದ್ಧ ಆದೇಶಗಳನ್ನು ಚಾಚೂತಪ್ಪದೆ ಪಾಲಿಸುತ್ತದೆ. ಹೀಗಾಗಿ ನಮ್ಮ ಸೇನೆಯಿಂದ ರಾಹುಲ್ ಗಾಂಧಿಯಾಗಲಿ, ಜಿರಳೆ ಗಳಾಗಲಿ ಅಥವಾ ಅವರ ಇಕೋಸಿಸ್ಟಮ್‌ಗಾಗಲಿ ಯಾವುದೇ ರೀತಿಯ ಅಕ್ರಮ ಸಹಕಾರ ಸಿಗುವುದಿಲ್ಲ.

ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಇಂತಹ ಷಡ್ಯಂತ್ರಗಳಿಗೆ ಅವಕಾಶವಿಲ್ಲ. ಒಂದು ವೇಳೆ ನರೇಂದ್ರ ಮೋದಿ ಅವರು ರಾಜೀನಾಮೆ ನೀಡುವಂತಹ ಸನ್ನಿವೇಶ ಎದುರಾದರೂ, ಜನರು ಅವರನ್ನು ಮತ್ತೊಮ್ಮೆ ಬಹುಮತದಿಂದ ಗೆಲ್ಲಿಸುತ್ತಾರೆ ಹೊರತು ಅಧಿಕಾರದಿಂದ ದೂರವಿಡುವುದಿಲ್ಲ. ಇದಕ್ಕೆ ಕಾರಣ ಮೋದಿ ಅವರ ಸರಳತೆ, ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರಮುಕ್ತ ಆಡಳಿತ ಸೇವೆ. ಹೀಗಾಗಿ ಜನರು ಮತ್ತೊಮ್ಮೆ ಮೋದಿಯವರನ್ನು ಬೆಂಬಲಿಸುತ್ತಾರೆ. ಈ ವಿಚಾರ ರಾಹುಲ್ ಗಾಂಧಿಗೆ ಗೊತ್ತಿದ್ದರೂ ಅವರು ಇಂತಹ ಪ್ರಯತ್ನಗಳನ್ನು ಯಾಕೆ ಮಾಡುತ್ತಿದ್ದಾರೆ? ಅವರು ಪ್ರಧಾನಿ ಯಾಗುವುದಕ್ಕಿಂತಲೂ ತಮ್ಮ ಪಕ್ಷದೊಳಗೆ ಇನ್ನಷ್ಟು ಹಿಡಿತ ಸಾಧಿಸಿ, ಪ್ರಬಲ ವಿರೋಧ ಪಕ್ಷದ ನಾಯಕ ಅಥವಾ ಪ್ರಬಲ ಎದುರಾಳಿ ಎಂಬಂತೆ ತಮ್ಮನ್ನು ಬಿಂಬಿಸಿ ಕೊಳ್ಳುವುದಕ್ಕಾಗಿ ಮಾತ್ರ ಈ ಹೋರಾಟಗಳನ್ನು ನಡೆಸುತ್ತಿದ್ದಾರೆ.

ರಾಹುಲ್ ಗಾಂಧಿ ಹೀಗೆ ಮಾಡದೇ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ‘ಇಂಡಿಯಾ’ ಮೈತ್ರಿಕೂಟವೇ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತಿತ್ತು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗಿನ ಕಾಂಗ್ರೆಸ್ ಮೈತ್ರಿ ಕಡಿದುಬೀಳುವ ಹಂತದಲ್ಲಿತ್ತು. ಆದರೆ ರಾಹುಲ್ ಗಾಂಧಿಯವರ ಈ ರೀತಿಯ ಹೋರಾಟಗಳಿಂದ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಸಕ್ರಿಯವಾಗಿದೆ ಎಂಬ ಭಾವನೆ ಅಖಿಲೇಶ್ ಯಾದವ್ ಅವರಲ್ಲಿಯೂ ಮೂಡಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗಿನ ಮೈತ್ರಿಯನ್ನು ಮುಂದುವರಿಸುವ ಯೋಚನೆ ಮಾಡಿದ್ದಾರೆ.

ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ರಾಹುಲ್ ಗಾಂಧಿಯವರ ನಾಯಕತ್ವದ ಬಗ್ಗೆ ದೊಡ್ಡ ಪ್ರಶ್ನೆಗಳು ಎದ್ದಿದ್ದವು. ಆ ಪರಿಸ್ಥಿತಿಯಿಂದ ಹೊರಬರುವುದಕ್ಕಾಗಿಯೇ ರಾಹುಲ್ ಗಾಂಧಿ ಈ ರೀತಿಯ ಹೋರಾಟದ ಹೈಡ್ರಾಮಗಳನ್ನು ಸೃಷ್ಟಿಸುತ್ತಿದ್ದಾರೆ.

ತಮ್ಮ ಬೆಂಬಲಿಗರಿಗೆ, ‘ನಾನಿನ್ನೂ ರಾಜಕೀಯವಾಗಿ ಜೀವಂತವಾಗಿದ್ದೇನೆ; ಚುನಾವಣೆಗಳಲ್ಲಿ ನಾನೇ ಗೆಲ್ಲುತ್ತಿದ್ದೆ, ಆದರೆ ವೋಟ್ ಚೋರಿ ಕಾರಣದಿಂದ ಗೆಲ್ಲಲಾಗುತ್ತಿಲ್ಲ’ ಎಂಬ ಸಂದೇಶ ನೀಡುವ ಮೂಲಕ ಕೆಲವು ವರ್ಗಗಳನ್ನು ತಮ್ಮ ಬೆಂಬಲದಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿ ಮೊನ್ನೆ ದೆಹಲಿಯ ಹೋರಾಟದ ಸಂದರ್ಭದಲ್ಲಿ, ‘ಈ ದೇಶದಲ್ಲಿ ಅನೇಕ ಅಧಿಕಾರಿಗಳು ಸರ್ಕಾರದ ವಿರುದ್ಧವಾಗಿದ್ದಾರೆ. ಅಂತಹ ಇನ್ನೂರಕ್ಕೂ ಹೆಚ್ಚು ಅಧಿಕಾರಿಗಳು, ಅರ್ಧದಷ್ಟು ಪೊಲೀಸರು ನನ್ನ ಸಂಪರ್ಕದಲ್ಲಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕೂಡ ನನ್ನನ್ನು ಸಂಪರ್ಕಿಸಿದ್ದಾರೆ’ ಎಂಬರ್ಥದಲ್ಲಿ ಸುಳ್ಳು ಹೇಳಿಕೆ ನೀಡಿದ್ದರು. ಇಂದು ಇಡೀ ವಿಶ್ವದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ನಾಯಕ ಎಂದರೆ ಅದು ಡೊನಾಲ್ಡ್ ಟ್ರಂಪ್. ವಿಶ್ವದ ನಾಯಕರ ನಡುವೆ ಸುಳ್ಳು ಹೇಳುವ ಸ್ಪರ್ಧೆ ಆಯೋಜಿಸಿದರೆ, ನಿಸ್ಸಂದೇಹವಾಗಿ ಟ್ರಂಪ್ ಅವರೇ ಗೆಲ್ಲುತ್ತಾರೆ; ಅವರ ಆಸುಪಾಸಿಗೂ ಯಾರೂ ಬರುವುದಿಲ್ಲ. ಆದರೆ ಈ ಸ್ಪರ್ಧೆಯಲ್ಲಿ ನಮ್ಮ ರಾಹುಲ್ ಗಾಂಧಿಯವರನ್ನೇನಾದರೂ ನಿಲ್ಲಿಸಿದರೆ, ಅವರು ಕ್ಷಣಾರ್ಧದಲ್ಲಿ ಟ್ರಂಪ್ ಅವರನ್ನು ಹಿಂದಿಕ್ಕಿಬಿಡುತ್ತಾರೆ. ‌

ಟ್ರಂಪ್ ಅವರ ಸುಳ್ಳುಗಳಿಗಿಂತ ರಾಹುಲ್ ಗಾಂಧಿ ಹೇಳುವ ಸುಳ್ಳುಗಳು ಬಹಳಷ್ಟು ಮಜಾ ಕೊಡುತ್ತವೆ. ‘ಜ್ಞಾನೇಶ್ ಕುಮಾರ್ ನನ್ನನ್ನು ಪರೋಕ್ಷವಾಗಿ ಸಂಪರ್ಕಿಸುತ್ತಿದ್ದಾರೆ. ನಾನು ಅವರಿಗೆ ರಾಜೀನಾಮೆ ನೀಡಿ ಮಾಫಿ ಸಾಕ್ಷಿಯಾಗುವಂತೆ ಹೇಳಿದ್ದೇನೆ’ ಎಂಬರ್ಥದ ಹೇಳಿಕೆಯನ್ನು ರಾಹುಲ್ ಗಾಂಧಿ ನೀಡಿದ್ದಾರೆ.

ಅಮಿತ್ ಶಾ ಮತ್ತು ಮೋದಿ ಅವರು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಯಾವ ರೀತಿಯ ಒತ್ತಡ ಹೇರಿದರು, ತಮ್ಮನ್ನು ಹೇಗೆಲ್ಲ ಬಳಸಿಕೊಂಡರು ಎಂಬುದನ್ನು ನ್ಯಾಯಾ ಲಯದ ಮುಂದೆ ಮಾಫಿ ಸಾಕ್ಷಿಯಾಗಿ ಹೇಳಬೇಕೆಂದು ಜ್ಞಾನೇಶ್ ಕುಮಾರ್ ಅವರಿಗೆ ನಾನು ಸೂಚಿಸಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇಂತಹ ಹೇಳಿಕೆಗಳನ್ನು ಕೇಳಿದಾಗ ನಗಬೇಕೋ ಅಳಬೇಕೋ ತಿಳಿಯದಂತಾಗುತ್ತದೆ. ಸಾಮಾನ್ಯ ವಾಗಿ ಜಂತರ್ ಮಂತರ್‌ನಲ್ಲಿ ನಡೆಯುವ ಪ್ರತಿಭಟನೆಗಳ ಸಂದರ್ಭದಲ್ಲಿ, ಅದು ಸಿಜೆಐಗೆ ಸಂಬಂಧಿಸಿದ ವಿಚಾರವಾಗಿರಲಿ ಅಥವಾ ಕಾಂಗ್ರೆಸ್‌ನ ಪ್ರತಿಭಟನೆಯಾಗಿರಲಿ, ಮಾಧ್ಯಮಗಳು ಪ್ರತಿಭಟನಾಕಾರರನ್ನು ಮಾತನಾಡಿಸಿ ಅವರ ಅಹವಾಲುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತವೆ.

‘ನಿಮ್ಮ ಮತದಾನದ ಹಕ್ಕು ಕಡಿತವಾಗಿದೆಯೇ?’, ‘ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ತೆಗೆದುಹಾಕಲಾಗಿದೆಯೇ?’ ಎಂಬ ಪ್ರಶ್ನೆಗಳನ್ನು ಕೇಳುತ್ತವೆ. ಆದರೆ ಈವರೆಗೆ ಅಂತಹ ಪ್ರತಿಭಟನೆ ಗಳಲ್ಲಿ, ‘ನಾನು ಇದೇ ದೇಶದಲ್ಲಿ ಹುಟ್ಟಿದ್ದೇನೆ; ನನ್ನ ಅಜ್ಜ, ಮುತ್ತಜ್ಜ ಎಲ್ಲರೂ ಇಲ್ಲಿಯವರೇ. ಆದರೆ ಈಗ ಎಸ್ ಐಆರ್ ಕಾರಣದಿಂದ ನನ್ನ ಮತದಾನದ ಹಕ್ಕು ಹೋಗಿದೆ. ಅದಕ್ಕಾಗಿಯೇ ಈ ಪ್ರತಿಭಟನೆಗೆ ನಾನು ಬಂದಿದ್ದೇನೆ’ ಎಂದು ಹೇಳಿದ ಒಬ್ಬ ವ್ಯಕ್ತಿಯ ಒಂದೇ ಒಂದು ಉದಾಹರಣೆ ಯೂ ಇಲ್ಲ.

ಇವರೆಲ್ಲರೂ ಈಗ ಈ ದೇಶದಲ್ಲಿ 13 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಒಂದು ವೇಳೆ ಕೋಟ್ಯಂತರ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಿದ್ದೇ ಆಗಿದ್ದರೆ, ಅದರಿಂದ ತೊಂದರೆಗೊಳ ಗಾದ ಜನರು ತಮ್ಮ ಹಕ್ಕು ಗಳಿಗಾಗಿ ಪ್ರಶ್ನಿಸದೆ, ಹೋರಾಟ ಮಾಡದೆ ಸುಮ್ಮನಿರುತ್ತಿರಲಿಲ್ಲ. ಒಂದು ವೇಳೆ ನನ್ನ ಹೆಸರನ್ನೇ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದರೆ, ನಾನೇ ಉಗ್ರ ರೀತಿಯಲ್ಲಿ ಹೋರಾಟ ಮಾಡುತ್ತಿದ್ದೆ.

ಇವರ ಆರೋಪದಂತೆ ಕೋಟ್ಯಂತರ ಮತದಾರರ ಹೆಸರುಗಳನ್ನು ಕೈಬಿಟ್ಟಿದ್ದೇ ಆಗಿದ್ದರೆ, ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರು. ಹೀಗಾಗಿ ಇದು ಯಾರಿಗೋ ಮತದಾನದ ಹಕ್ಕುಗಳನ್ನು ಕೊಡಿಸಲಿಕ್ಕಾಗಿ ನಡೆದ ಹೋರಾಟವಲ್ಲ. ಕೇವಲ ರಾಹುಲ್ ಗಾಂಧಿ ತಮ್ಮನ್ನು ರಾಜಕೀಯವಾಗಿ ಬಚಾವ್ ಮಾಡಿಕೊಳ್ಳಲು, ಮುಂದಿನ ಅವಧಿಗೂ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ತಮ್ಮನ್ನು ಬಿಂಬಿಸಿಕೊಳ್ಳಲು ಈ ಹೋರಾಟದ ಹೆಸರಿನಲ್ಲಿ ಹೈಡ್ರಾಮ ಸೃಷ್ಟಿಸುತ್ತಿದ್ದಾರೆ. ಶ್ರೀಸಾಮಾನ್ಯರು ಈ ರಾಜಕೀಯ ತಂತ್ರಗಾರಿಕೆಯನ್ನು ಅರ್ಥಮಾಡಿಕೊಳ್ಳಬೇಕಿದೆ.