ಅಭಿವೃದ್ಧಿ ಪಥ
ಲಕ್ಷ್ಮಣ ನಿರಾಣಿ
‘ಸಮೃದ್ಧಿ ಮಹಾಮಾರ್ಗ’ವನ್ನು ಗಂಟೆಗೆ ೧೮೦ ಕಿ.ಮೀ. ವೇಗದಲ್ಲಿ ಸಂಚರಿಸುವಂತೆ ನಿರ್ಮಿಸಲಾಗಿದೆ, ನಿಜ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಇದನ್ನು ಸಿಸಿಟಿವಿ ಕಣ್ಗಾವಲಿ ನಲ್ಲಿ 120 ಕಿ.ಮೀ.ಗೆ ಮೀರದಂತೆ ನೋಡಿಕೊಳ್ಳಲಾಗುತ್ತದೆ. ಪ್ರತೀ 40-50 ಕಿ.ಮೀ.ಗಳಲ್ಲಿ ಹೋಟೆಲ, ಶೌಚಾಲಯ, ಇ-ಚಾರ್ಜಿಂಗ್ ಸ್ಟೇಷನ್‌ಗಳಿವೆ. ನಮ್ಮ ಸಮರ ವಿಮಾನಗಳೂ ಸುರಕ್ಷಿತವಾಗಿ ಇಳಿಯಬಹುದು!
Roads for the Development- ಇದು ದಿವಂಗತ ಪ್ರಧಾನಿ ವಾಜಪೇಯಿ ದೇಶಕ್ಕೆ ಕೊಟ್ಟ ಹೊಸ ಮಂತ್ರ! ಇದಕ್ಕೆ ತಕ್ಕಂತೆ ಅವರು ತಮ್ಮ ಆಡಳಿತಾವಧಿಯಲ್ಲಿ ರಾಷ್ಟ್ರದ ಮಹಾನಗರಗಳಾದ ದೆಹಲಿ-ಕೋಲ್ಕತ್ತ-ಮುಂಬೈ-ಚೆನ್ನೈಗಳನ್ನು ಬೆಸೆಯುವ ಸುವರ್ಣ ಚತುಷ್ಪಥ ಹೆದ್ದಾರಿಗಳನ್ನು ನಿರ್ಮಿಸಿ, ಆರ್ಥಿಕತೆಯ ಮಹಾಜಿಗಿತಕ್ಕೆ ಕಾರಣರಾದರು.
ಒಳ್ಳೆಯ ರಸ್ತೆ ಜಾಲವು ಬಂಡವಾಳ ಹೂಡಿಕೆ, ಆರ್ಥಿಕ ಬೆಳವಣಿಗೆ, ಕೈಗಾರಿಕೋದ್ಯಮ, ಸರಕು ಸಾಗಣೆ, ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿ, ಮಿತವ್ಯಯ, ಕ್ಷಿಪ್ರಗತಿಯಲ್ಲಿ ಸೇವೆಗಳ ಪೂರೈಕೆ, ಭೂಮಿಯ ಮೌಲ್ಯವರ್ಧನೆ ಹೀಗೆ ಎಲ್ಲವನ್ನೂ ಸಾಧ್ಯವಾಗಿಸಬಲ್ಲದು ಎನ್ನುವುದನ್ನು ಅವರು ತೋರಿಸಿಕೊಟ್ಟರು.
ಅದರಲ್ಲೂ 2014 ರಿಂದೀಚೆಗೆ 54 ಸಾವಿರ ಕಿ.ಮೀ. ಹೆದ್ದಾರಿ ಜಾಲವನ್ನು ನಿರ್ಮಿಸಲಾಗಿದ್ದು, ಈಗ ದೇಶದಲ್ಲಿ ಪ್ರತಿದಿನ ಸರಾಸರಿ 34 ಕಿ.ಮೀ.ಗಳಷ್ಟು ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟಿನಲ್ಲಿ ನಮ್ಮಲ್ಲೀಗ 6 ಪಥ, 8 ಪಥ ಮತ್ತು 10 ಪಥಗಳ ರಸ್ತೆಗಳು ‘ಅಭಿವೃದ್ಧಿ ಎಂಜಿನ್’ನ ಹೆಗ್ಗುರುತು ಗಳಾಗಿವೆ.
ನಾನು ವೃತ್ತಿಯಿಂದ ಕೈಗಾರಿಕೋದ್ಯಮಿ. ಹೀಗಾಗಿ, ದೇಶದಾದ್ಯಂತ ಪ್ರಯಾಣ ಮಾಡುತ್ತಲೇ ಇರುತ್ತೇನೆ. ಇತ್ತೀಚೆಗೆ ಮುಂಬೈ-ನಾಗ್ಪುರ ನಡುವಿನ 7.1 ಕಿ.ಮೀ. ಉದ್ದದ ಎಕ್ಸ್ʼಪ್ರೆಸ್ ವೇಯಲ್ಲಿ ಹಲವು ಬಾರಿ ಓಡಾಡಬೇಕಾದ ಸಂದರ್ಭ ಬಂತು. ಈ ಪ್ರಯಾಣ ಮಾಡುವಾಗ ಅನುಭವಕ್ಕೆ ಬಂದ ಹಲವು ಸಂಗತಿಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಕೆಂಬ ಬಯಕೆಯೇ ಈ ಬರಹಕ್ಕೆ ಕಾರಣ.
ಇದನ್ನೂ ಓದಿ: Lakshman R Nirani Column: ಕನಕನ ಕಿಂಡಿ ರೂಪಕದಿಂದ ಪ್ರಭಾವಿತರಾದ ಮಹಾತ್ಮಾ ಗಾಂಧೀಜಿ ಮತ್ತು ಕುವೆಂಪು
‘ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ’ ಅಥವಾ ‘ಮುಂಬೈ-ನಾಗ್ಪುರ ಎಕ್ಸ್ʼಪ್ರೆಸ್ ವೇ’ ಎಂದು ಹೆಸರಾಗಿರುವ ಈ ಹೆದ್ದಾರಿಯು ತಾನು ಹಾದು ಹೋಗಿರುವ ಪ್ರದೇಶದುದ್ದಕ್ಕೂ ಎಂತಹ ಸಕಾರಾತ್ಮಕ ಬೆಳವಣಿಗೆ ಮತ್ತು ಪರಿವರ್ತನೆಗಳಿಗೆ ನಾಂದಿ ಹಾಡಿದೆ ಎನ್ನುವುದನ್ನು ನಾನು ಕಣ್ಣಾರೆ ಕಂಡು, ಮೂಕವಿಸ್ಮಿತನಾಗಿದ್ದೇನೆ.
ಇಂತಹ ಹೆದ್ದಾರಿಗಳು ಭಾರತದಾದ್ಯಂತ ಬಂದರೆ ಅದು ಇನ್ನೆಂಥ ಅಭೂತಪೂರ್ವ ಬೆಳವಣಿಗೆಗೆ ಶ್ರೀಕಾರ ಹಾಕಬಲ್ಲದು ಎನ್ನುವುದನ್ನು ಊಹಿಸಿಕೊಂಡರೆ ರೋಮಾಂಚನವಾಗುತ್ತದೆ. ಇದು ಸಾಧ್ಯ ವಾಗಬೇಕಾದರೆ ರಸ್ತೆ, ಕೈಗಾರಿಕೆ, ವಿಮಾನ ನಿಲ್ದಾಣ, ತಂತ್ರಜ್ಞಾನ ಮುಂತಾದವುಗಳ ಬಗ್ಗೆ ಲಾಗಾಯ್ತಿನಿಂದಲೂ ಬೇರೂರಿರುವ ಅಪನಂಬಿಕೆಗಳಿಂದ ಹೊರಬರಬೇಕು.
ಇಲ್ಲದಿದ್ದರೆ, ಹೆದ್ದಾರಿಗಳು ತಂದು ಕೊಡುವ ಪ್ರಯೋಜನಗಳ ಕಲ್ಪನೆಯೂ ಬರುವುದಿಲ್ಲ. ಮುಂಬೈ-ನಾಗ್ಪುರ ಸಮೃದ್ಧಿ ಮಹಾಮಾರ್ಗವು ಮುಖ್ಯವಾಗಿ ಮಹಾರಾಷ್ಟ್ರದ ಎರಡು ರಾಜಧಾನಿ ಗಳನ್ನು ಬೆಸೆಯುತ್ತದೆ. ಈ ನಗರಗಳ ನಡುವೆ ಹಿಂದೆ ಪ್ರಯಾಣಕ್ಕೆ 18 ಗಂಟೆಗಳು ಬೇಕಾಗುತ್ತಿತ್ತು. ಈಗ 8 ಗಂಟೆಗಳು ಸಾಕು!
ಜತೆಗೆ, ಈ ಹೆದ್ದಾರಿಯು ಮಹಾರಾಷ್ಟ್ರದ 24 ಜಿಲ್ಲೆಗಳನ್ನು ಪರಸ್ಪರ ಸಂಪರ್ಕಿಸುತ್ತದೆ. ಈ 701 ಕಿ.ಮೀ.ಗಳ ಹಾದಿಯಲ್ಲಿ ತಲಾ 40-50 ಕಿ.ಮೀ.ಗಳ ಅಂತರದಲ್ಲಿ 19 ಟೌನ್‌ಶಿಪ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಿಂದಾಗಿ ಕೈಗಾರಿಕಾ ಪ್ರದೇಶಗಳ ಬೆಳವಣಿಗೆ, ಬಂಡವಾಳ ಹೂಡಿಕೆ ಆಕರ್ಷಣೆ ವ್ಯವಸ್ಥಿತವೂ ಸುಲಭವೂ ಆಗಿದೆ. ಈ ಟೌನ್‌ಶಿಪ್‌ಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ, ತರಬೇತಿ ಕೇಂದ್ರ, ಐಟಿ ಪಾರ್ಕ್‌ಗಳು, ಐಟಿಐಗಳು, ಕೃಷಿ ಉತ್ಪನ್ನ ಸಂಸ್ಕರಣಾ ವಲಯಗಳು, ಶೀತಲಗೃಹಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳ ಜಾಲ, ಟ್ರಕ್ ಟರ್ಮಿನಲ್ಲುಗಳು ಇರುವಂತೆ ನೋಡಿಕೊಳ್ಳಲಾಗಿದೆ.
6 ಪಥಗಳ ಈ ಹೆದ್ದಾರಿಗೆ ವಿನಿಯೋಗಿಸಿರುವ ಹಣ 55 ಸಾವಿರ ಕೋಟಿ ರು. ‘ಸಮೃದ್ಧಿ ಮಹಾ ಮಾರ್ಗ’ ವನ್ನು ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಂಚರಿಸುವಂತೆ ನಿರ್ಮಿಸಲಾಗಿದೆ, ನಿಜ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಇದನ್ನು ಸಿಸಿಟಿವಿ ಕಣ್ಗಾವಲಿನಲ್ಲಿ 120 ಕಿ.ಮೀ.ಗೆ ಮೀರದಂತೆ ನೋಡಿ ಕೊಳ್ಳಲಾಗುತ್ತದೆ.
ಪ್ರತೀ 40-50 ಕಿ.ಮೀ.ಗಳಲ್ಲಿ ಹೋಟೆಲ, ಶೌಚಾಲಯ, ಇ-ಚಾರ್ಜಿಂಗ್ ಸ್ಟೇಷನ್ನುಗಳು ಇವೆ. ಯುದ್ಧ ದಂಥ ತುರ್ತು ಪರಿಸ್ಥಿತಿಗಳಲ್ಲಿ ಈ ಹೆದ್ದಾರಿಯ ಮೇಲೆ ನಮ್ಮ ಸಮರ ವಿಮಾನಗಳೂ ಸುರಕ್ಷಿತವಾಗಿ ಇಳಿಯಬಹುದು! ಅಂದರೆ, ಅಂತಹ ಸಂದರ್ಭಗಳಲ್ಲಿ ಈ ರಸ್ತೆಯು ರನ್-ವೇ ಆಗಿ ರೂಪಾಂತರ ಗೊಳ್ಳುತ್ತದೆ. ಮಿಗಿಲಾಗಿ, ಹೆದ್ದಾರಿಯ ಇಕ್ಕೆಲಗಳಲ್ಲೂ ತಲೆ ಎತ್ತಲಿರುವ ಕೈಗಾರಿಕಾ ಟೌನ್‌ಶಿಪ್‌ಗಳಿಗೆ ಅನುಕೂಲವಾಗುವಂತೆ ಆಪ್ಟಿಕ್ ಫೈಬರ್ ಕೇಬಲ್, ನೈಸರ್ಗಿಕ ಅನಿಲ ಪೂರೈಕೆ ಕೊಳವೆ ಮಾರ್ಗ, ವಿದ್ಯುತ್ ಪೂರೈಕೆ ಗ್ರಿಡ್ ಇವುಗಳಿಗೂ ಜಾಗ ಮೀಸಲಿಡಲಾಗಿದೆ.
ಇವೆಲ್ಲಕ್ಕೆ ಕಳಶವಿಟ್ಟಂತೆ 250 ಮೆಗಾವ್ಯಾಟ್ ಸೌರವಿದ್ಯುತ್ ಉತ್ಪಾದಿಸುವಂಥ ಸ್ಥಾವರಗಳಿಗೂ ಇಲ್ಲಿ ಅವಕಾಶವಿದೆ. 65 -ಓವರುಗಳು, 6 ಸುರಂಗಗಳು, 24 ಇಂಟರ್-ಚೇಂಜ್‌ಗಳು, ವಾಹನ ಸಂಚಾ ರಕ್ಕೆ 400ಕ್ಕೂ ಹೆಚ್ಚು ಅಂಡರ್‌ಪಾಸ್, ಪಾದಚಾರಿಗಳ ಸುಗಮ ಓಡಾಟಕ್ಕೆ 300ಕ್ಕೂ ಹೆಚ್ಚು ಕೆಳ ಸೇತುವೆ, ತಲಾ 5 ಕಿ.ಮೀ.ಗೆ ಒಂದರಂತೆ ಉಚಿತ ಟೆಲಿಫೋನ್ ಬೂತ್- ಇವಿಷ್ಟೂ ಇದರ ವೈಶಿಷ್ಟ್ಯ ಗಳು. ಇವೆಲ್ಲವೂ ಈ ಹೆದ್ದಾರಿ ಯೋಜನೆಯ ಭಾಗವಾಗಿರುವ ಮುಂದಾಲೋಚನೆಯನ್ನು ಹೇಳುತ್ತವೆ.
ದೇವೇಂದ್ರ ಫಡಣವೀಸ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಈ ಹೆದ್ದಾರಿಯ ಪರಿಕಲ್ಪನೆ ಮೊಳೆಯಿತು. ಆದರೆ, ಕೆಲಸ ಶುರುವಾಗಿದ್ದು 2017ರಲ್ಲಿ. ಆಶ್ಚರ್ಯವೆಂದರೆ, ಕೇವಲ ಎಂಟು ವರ್ಷಗಳಲ್ಲಿ (2025ರ ಹೊತ್ತಿಗೆ) ಈ ಯೋಜನೆಯ ಕಾಮಗಾರಿಯನ್ನು ನೂರಕ್ಕೆ ನೂರರಷ್ಟು ಮುಗಿಸಲಾಗಿದೆ. ಈಗ ಪುನಃ ಆ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಫಡಣವೀಸ್ ಮತ್ತು ಕೇಂದ್ರ ದಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಹೆದ್ದಾರಿ ಸಚಿವರಾಗಿರುವ ನಿತಿನ್ ಗಡ್ಕರಿ ಇಬ್ಬರೂ ನಾಗ್ಪುರ ದವರಾಗಿರುವುದು ಕಾಕತಾಳೀಯ.
ಇದೊಂದೇ ಹೆದ್ದಾರಿಯಲ್ಲಿ ದೇಶದ ಸರಕು ಸಾಗಣೆಯ ಶೇ.6ರಷ್ಟು ಪಾಲು ನಡೆಯುತ್ತದೆ ಎನ್ನು ವುದು ಹೆಗ್ಗಳಿಕೆಯಲ್ಲವೇ? ಅಂದಂತೆ, ಹೆದ್ದಾರಿ ಅಭಿವೃದ್ಧಿಯ ಜತೆಜತೆಯ ಒಕ್ಕಲುತನವೂ ಉಳಿಯ ಬೇಕು ಮತ್ತು ಅದಕ್ಕೆ ಉದ್ಯಮದ ಸ್ವರೂಪ ಸಿಕ್ಕಿ ರೈತರಿಗೆ ಆದಾಯ ಬರಬೇಕು ಎನ್ನುವ ಕಳಕಳಿ ಯಿಂದ ತಲಾ 1000-1500 ಎಕರೆ ವಿಸ್ತಾರದಲ್ಲಿ ‘ಕೃಷಿ ಸಮೃದ್ಧಿ ನಗರ’ ಎನ್ನುವ ಪರಿಕಲ್ಪನೆಯಡಿ ನೂತನ ಟೌನ್‌ಶಿಪ್‌ಗಳು ತಲೆ ಎತ್ತುತ್ತಿವೆ.
ಕರ್ನಾಟಕವೂ ಸೇರಿದಂತೆ ಉಳಿದ ರಾಜ್ಯಗಳು ಇದನ್ನು ಮಾದರಿಯಾಗಿ ಸ್ವೀಕರಿಸಿದರೆ ಎಷ್ಟೊಂದು ಚೆನ್ನವಲ್ಲವೇ? ಇದೊಂದು ಹೆದ್ದಾರಿಯಿಂದ ಮಹಾರಾಷ್ಟ್ರದ ಪಶ್ಚಿಮ ಭಾಗ ಮತ್ತು ಹಿಂದುಳಿ ದಿರುವ ವಿದರ್ಭ ಪ್ರದೇಶಗಳ ನಡುವಿನ ಪ್ರಾದೇಶಿಕ ತಾರತಮ್ಯ ನಿವಾರಣೆಯಾಗುವುದು ನಿಶ್ಚಿತ. ಇದರಿಂದಾಗಿ ಭಿವಾಂಡಿ, ಕಲ್ಯಾಣ್, ಉಲ್ಲಾಸನಗರ, ಷಹಾಪುರ, ನಾಸಿಕ್, ಸಿನ್ನಾರ್, ಕೋಪರ ಗಾಂವ್, ಶಿರಡಿ, ವೈಜಾಪುರ, ಮೇಖರ್, ಮಾಲೇಗಾಂವ್, ಧರ್ಮಾಗಾಂವ್, ವಾರ್ಧಾ, ಪುಲ್ಗಾಂವ್ ಮುಂತಾದ ನಗರಗಳ ‘ಭಾಗ್ಯದ ಬಾಗಿಲು’ ತೆರೆದಂತಾಗಿದೆ.
ಹಾಗೆಯೇ ಈ ಹೆzರಿಯು ಮುಂಬೈ-ದೆಹಲಿ ಕೈಗಾರಿಕಾ ಕಾರಿಡಾರ್, ಬೆಂಗಳೂರು-ಚೆನ್ನೈ ಆರ್ಥಿಕ ಕಾರಿಡಾರ್, ಚೆನ್ನೈ-ವಿಶಾಖಪಟ್ಟಣ ಕಾರಿಡಾರ್ ಸೇರಿದಂತೆ ದೇಶದ ಪ್ರಮುಖ ಬಂದರುಗಳನ್ನು ಮತ್ತಷ್ಟು ಹತ್ತಿರಕ್ಕೆ ತಂದಿದೆ.
ದೇಶದಲ್ಲೀಗ 44 ಎಕ್ಸ್ʼಪ್ರೆಸ್ ವೇಗಳು ಇದ್ದು, ಇದರಡಿಯಲ್ಲಿ 6000 ಕಿ.ಮೀ. ಉದ್ದದ ರಸ್ತೆಗಳು ಬಳಕೆಗೆ ಮುಕ್ತವಾಗಿವೆ. ಇನ್ನೊಂದೆಡೆಯಲ್ಲಿ, ಇನ್ನೂ 11 ಸಾವಿರ ಕಿ.ಮೀ. ಉದ್ದದ ಎಕ್ಸ್ʼಪ್ರೆಸ್ ಹೆದ್ದಾರಿಗಳು ಪ್ರಗತಿಯಲ್ಲಿವೆ. ಇವುಗಳ ಪೈಕಿ ಮುಂಬೈ-ನಾಗ್ಪುರ ಸಮೃದ್ಧಿ ಮಹಾಮಾರ್ಗವು ಅನನ್ಯ. ಒಂದು ಅತ್ಯುತ್ತಮ ರಸ್ತೆ ತಾನು ಹಾದು ಹೋಗುವ ಭೌಗೋಳಿಕ ಸರಹದ್ದಿನ ಚಹರೆಗಳನ್ನೇ ಹೇಗೆ ‘ನ ಭೂತೋ’ ಎಂಬಂತೆ ಬದಲಿಸಬಲ್ಲದು, ಜನಜೀವನವನ್ನು ಸುಧಾರಿಸಬಲ್ಲದು, ಆರ್ಥಿಕ ಎಂಜಿನ್ ಆಗಿ ಕೆಲಸ ಮಾಡಬಲ್ಲದು ಎನ್ನುವುದಕ್ಕೆ ಇದೊಂದು ತೋರುಗಂಬ. ಪುರೋಗಾಮಿ ದೃಷ್ಟಿಗೆ ಮೈಲಿಗಲ್ಲು. ಚರಿತ್ರೆಯನ್ನು ಓದುವುದೇ ಬೇರೆ; ಅದನ್ನು ಸೃಷ್ಟಿಸುವುದೇ ಬೇರೆ.
(ಲೇಖಕರು, ಕೈಗಾರಿಕೋದ್ಯಮಿ, ಬೀಳಗಿ)