ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Keshava Prasad B Column: ಇದು ಟ್ರಂಪ್‌ ಅಲ್ಲ, ಪ್ರಧಾನಿ ಮೋದಿಯವರ ಆರ್ಟ್‌ ಆಫ್‌ ಡೀಲ್‌ !

ಡೊನಾಲ್ಡ್ ಟ್ರಂಪ್ ಹೆಸರಿನಂದು ಪುಸ್ತಕ ಇದೆ. ಹೆಸರು ‘ಆರ್ಟ್ ಆಫ್ ದಿ ಡೀಲ್’. ಅದರಲ್ಲಿ ತಮ್ಮನ್ನು ತಾವೇ ‘ವ್ಯವಹಾರ ಚತುರ’, ‘ಡೀಲ್‌ಗಳ ದೇವರು’ ಎಂದೆಲ್ಲ ಬಣ್ಣಿಸಿಕೊಂಡಿದ್ದಾರೆ ಟ್ರಂಪ್! ಆದರೆ ಅವರಿಗೆ ನಿಜಕ್ಕೂ ಡೀಲ್ ಮಾಡುವ ಕೌಶಲ ಗೊತ್ತಿಲ್ಲ ಎಂಬುದು ಇದೀಗ ಜಗಜ್ಜಾಹೀರಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಈಗ ‘ಬೆಸ್ಟ್ ಡೀಲ್ ಮಾಸ್ಟರ್’ ಆಗಿ ಹೊರಹೊಮ್ಮಿದ್ದಾರೆ!

ಮನಿ ಮೈಂಡೆಡ್

ಅಮೆರಿಕ-ಭಾರತದ ನಡುವೆ ಐತಿಹಾಸಿಕ ವ್ಯಾಪಾರ ಒಪ್ಪಂದ ಘೋಷಣೆ ಆಗಿದೆ. ಇದಕ್ಕೆ ಪಾಕಿಸ್ತಾನದ ಪ್ರತಿಪಕ್ಷ ನಾಯಕರು ಪ್ರಶಂಸೆ ವ್ಯಕ್ತಪಡಿಸಿ, ‘ಚೆನ್ನಾಗಿ ವ್ಯಾಪಾರ ಒಪ್ಪಂದ ಮಾಡಿ ಕೊಳ್ಳುವುದು ಹೇಗೆ ಎಂಬುದನ್ನು ಮೋದಿ ಸರಕಾರ ನೋಡಿ ಕಲಿಯಿರಿ’ ಎಂದು ಪ್ರಧಾನಿ ಶೆಹಬಾಜ್ ಷರೀಫರನ್ನು ಟೀಕಿಸಿದ್ದಾರೆ. ಆದರೆ ನಮ್ಮಲ್ಲಿ ಕೆಲ ಕಾಂಗ್ರೆಸ್ಸಿಗರು, ‘ಮೋದಿ ಸರಕಾರ ಟ್ರಂಪ್ ಒತ್ತಡಕ್ಕೆ ಮಣಿದು ದೇಶದ ರೈತರ ಹಿತಾಸಕ್ತಿಗಳನ್ನು ಬಲಿ ಕೊಟ್ಟಿದೆ’ ಎಂದು ಟೀಕಿಸಿದ್ದಾರೆ! ಹಾಗಾದರೆ ಯಾವುದು ಸರಿ?

ಡೊನಾಲ್ಡ್ ಟ್ರಂಪ್ ಹೆಸರಿನಂದು ಪುಸ್ತಕ ಇದೆ. ಹೆಸರು ‘ಆರ್ಟ್ ಆಫ್ ದಿ ಡೀಲ್’. ಅದರಲ್ಲಿ ತಮ್ಮನ್ನು ತಾವೇ ‘ವ್ಯವಹಾರ ಚತುರ’, ‘ಡೀಲ್‌ಗಳ ದೇವರು’ ಎಂದೆಲ್ಲ ಬಣ್ಣಿಸಿಕೊಂಡಿದ್ದಾರೆ ಟ್ರಂಪ್! ಆದರೆ ಅವರಿಗೆ ನಿಜಕ್ಕೂ ಡೀಲ್ ಮಾಡುವ ಕೌಶಲ ಗೊತ್ತಿಲ್ಲ ಎಂಬುದು ಇದೀಗ ಜಗಜ್ಜಾಹೀರಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಈಗ ‘ಬೆಸ್ಟ್ ಡೀಲ್ ಮಾಸ್ಟರ್’ ಆಗಿ ಹೊರಹೊಮ್ಮಿದ್ದಾರೆ!

ಯುರೋಪ್ ಒಕ್ಕೂಟದ ಜತೆಗೆ ‘ಮದರ್ ಆಫ್ ಆಲ್ ಡೀಲ್ಸ್’! ಬೆನ್ನಲ್ಲೇ ಅಮೆರಿಕ ಜತೆಗೆ ‘ಫಾದರ್ ಆಫ್ ಆಲ್ ಡೀಲ್ಸ್’! ಡಬಲ್ ಧಮಾಕಾ! ಈಗ ನೋಡಿ, ಬ್ರೆಜಿಲ್ ವಿರುದ್ಧ 50 ಪರ್ಸೆಂಟ್, ಚೀನಾ ವಿರುದ್ಧ 34 ಪರ್ಸೆಂಟ್, ದಕ್ಷಿಣ ಕೊರಿಯಾ ವಿರುದ್ಧ 30 ಪರ್ಸೆಂಟ್ ಸುಂಕವನ್ನು ಅಮೆರಿಕ ಹೇರಿದ್ದರೆ, ಭಾರತಕ್ಕೆ ಸುಂಕವು 50ರಿಂದ 18 ಪರ್ಸೆಂಟ್‌ಗೆ ಇಳಿಕೆಯಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ವಿಯೆಟ್ನಾಂ, ಇಂಡೊನೇಷ್ಯಾಕ್ಕಿಂತಲೂ ಇದು ಕಡಿಮೆ!

ಈಗ ಸ್ವಾರಸ್ಯಕರ ವಿವರಗಳು ಕೂಡ ಬೆಳಕಿಗೆ ಬರುತ್ತಿವೆ. ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ಭಾರತ-ಅಮೆರಿಕ ಟ್ರೇಡ್ ಡೀಲ್ ಅನ್ನು ಕೊನೆಗೂ ದಡ ಮುಟ್ಟಿಸುವಲ್ಲಿ ಅಜಿತ್ ದೊವೆಲ್ ನಿರ್ಣಾಯಕ ಪಾತ್ರ ವಹಿಸಿರುವ ಸಂಗತಿಯೂ ಇದೀಗ ಬಯಲಾಗಿದೆ. ‌

‘ಬ್ಲೂಮ್ ಬರ್ಗ್’ ವರದಿಯ ಪ್ರಕಾರ, ಅಜಿತ್ ದೊವೆಲ್ ಅವರು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಅವರಿಗೆ ವಾಷಿಂಗ್ಟನ್‌ನಲ್ಲಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತದ ಖಡಕ್ ಸಂದೇಶವನ್ನು ಕೊಟ್ಟಿದ್ದರು (ಹೀಗಿದ್ದರೂ, ಅಜಿತ್ ದೊವೆಲ್ ಮತ್ತು ಮಾರ್ಕ್ ರುಬಿಯೊ ಭೇಟಿಯನ್ನು ವಿದೇಶಾಂಗ ಇಲಾಖೆ ವಕ್ತಾರರು ನಿರಾಕರಿಸಿದ್ದಾರೆ). ಇದಾದ ನಂತರ ಒಪ್ಪಂದ ಅಂತಿಮವಾಗಲು ಹಾದಿ ಸುಗಮವಾಯಿತು! ದೊವೆಲ್ ಏನು ಹೇಳಿದ್ದರು?

ಇದನ್ನೂ ಓದಿ: Keshava Prasad B Column: ಕೇವಲ ವ್ಯಾಪಾರ ಒಪ್ಪಂದವಲ್ಲ, ಟ್ರಂಪ್‌ ಸೊಕ್ಕಿಗೆ ಅರೆದ ಮದ್ದು!

“ಟ್ರಂಪ್ ಅವರು ಸುಂಕವನ್ನು ಹೆಚ್ಚಿಸಿದರೂ ನಾವು ಸಮ್ಮತಿಸುವುದಿಲ್ಲ. ಯಾವುದೇ ಬೆದರಿಕೆಗೂ ಮಣಿಯುವುದಿಲ್ಲ. ಯಾವುದೇ ಪಬ್ಲಿಕ್ ನಾನ್ಸೆನ್ಸ್‌ಗಳನ್ನೂ ಭಾರತ ಲೆಕ್ಕಿಸುವುದಿಲ್ಲ. ಈ ಅತಾರ್ಕಿಕ ವಾದ ಒಪ್ಪಂದವನ್ನು ಸ್ವೀಕರಿಸುವುದರ ಬದಲಿಗೆ ಟ್ರಂಪ್ ಅಧಿಕಾರಾವಧಿ ಮುಗಿಯುವ ತನಕ ಕಾಯಲು ಸಿದ್ಧವಾಗಿದ್ದೇವೆ" ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಗಮನಿಸಿ, ಭಾರತವನ್ನು ತನ್ನ ಹಳಿಗೆ ತರಲು ಟ್ರಂಪ್ ಸರಕಾರವು ತಿಪ್ಪರಲಾಗ ಹಾಕಿತ್ತು!

ಅದರ ಭಾಗವಾಗಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ಸರಕುಗಳ ಮೇಲೆ ಭಾರಿ ಸುಂಕಾಸ್ತ್ರ ವನ್ನು ಪ್ರಯೋಗಿಸಿತ್ತು. ಮೊದಲು 25 ಪರ್ಸೆಂಟ್ ಪ್ರತಿಸುಂಕವನ್ನು ಘೋಷಿಸಲಾಯಿತು. ಬಳಿಕ ಆಗಸ್ಟ್‌ನಲ್ಲಿ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಹೆಚ್ಚುವರಿ 25 ಪರ್ಸೆಂಟ್ ಸುಂಕವನ್ನು ಹೇರಲಾಯಿತು.

ಒಟ್ಟು 50 ಪರ್ಸೆಂಟ್ ಸುಂಕ! ಟ್ರಂಪ್ ಅವರಂತೂ, ಗಾಯಕ್ಕೆ ಉಪ್ಪು ಸವರುವಂತೆ ಭಾರತವನ್ನು ‘ಡೆಡ್ ಇಕಾನಮಿ’ ಎಂದು ಜರಿದಿದ್ದರು. ಮೋದಿಯವರನ್ನು ‘ಟಾರಿಫ್ ಕಿಂಗ್’ ಎಂದು ವ್ಯಂಗ್ಯವಾಡಿ ದ್ದರು. ಭಾರತವು ರಷ್ಯಾದಿಂದ ತೈಲ ಖರೀದಿಸುವ ಮೂಲಕ ಉಕ್ರೇನ್ ವಿರುದ್ಧದ ರಷ್ಯಾ ಯುದ್ಧಕ್ಕೆ ಹಣದ ನೆರವು ನೀಡುತ್ತಿದೆ ಎಂದು ಬಾಯಿಗೆ ಬಂದಂತೆ ಲೂಸ್‌ಟಾಕ್ ಆಡಿದ್ದರು. ಆಗ ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ಸುಂಕಾಸ್ತ್ರ ದಾಳಿಗೆ ಗುರಿಯಾದ ವಿರಳ ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಇತ್ತು. ‌

Modi and Trump

ನೆರೆಯ ಪಾಕಿಸ್ತಾನ, ಬಾಂಗ್ಲಾದೇಶಗಳ ಆಡಳಿತಗಾರರು ಸಂಭ್ರಮಿಸಿದ್ದರು. ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ದಂಡನಾಯಕರು ಬಲೂಚಿಸ್ತಾನದ ಅಮೂಲ್ಯ ಖನಿಜಗಳ ಪೆಟ್ಟಿಗೆಯನ್ನೂ ಹೊತ್ತು ಕೊಂಡು ಹೋಗಿ ಟ್ರಂಪ್ ಮನವೊಲಿಸಿದ್ದರು. ನೊಬೆಲ್ ಪ್ರಶಸ್ತಿಗೂ ಟ್ರಂಪ್ ಹೆಸರನ್ನು ಶಿಫಾರಸು ಮಾಡಿದ್ದರು.

ಜರ್ಮನಿಯ ಪತ್ರಿಕೆಯೊಂದು, ‘ಟ್ರಂಪ್ ನಾಲ್ಕು ಸಲ ಫೋನ್ ಕರೆ ಮಾಡಿದ್ದರೂ, ಮೋದಿಯವರು ಸ್ವೀಕರಿಸಿರಲಿಲ್ಲ’ ಎಂದು ವರದಿ ಮಾಡಿತ್ತು. ಈ ಎಲ್ಲ ಹೈಡ್ರಾಮಾ ನಡೆಯುತ್ತಿದ್ದಾಗಲೂ ಭಾರತ ತಾಳ್ಮೆಗೆಟ್ಟು ಪ್ರತಿಕ್ರಿಯಿಸಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಚೀನಾದಲ್ಲಿ ಹೈ ಪ್ರೊಫೈಲ್ ಮೀಟಿಂಗ್ ನಡೆಸಿದರು.

ಇದರಿಂದ ಟ್ರಂಪ್ ಸರಕಾರ ಒಳಗೊಳಗೆ ಅಸಮಾಧಾನಪಟ್ಟಿತ್ತು. ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧವು ವಿರಸದ ಹಾದಿಯಲ್ಲಿದ್ದ ಸೂಕ್ಷ್ಮ ಸಂದರ್ಭದಲ್ಲಿ ಅಜಿತ್ ದೊವೆಲ್ ಅಮೆರಿಕ ಭೇಟಿ ಕೈಗೊಂಡಿದ್ದರು.

ವಾಷಿಂಗ್ಟನ್‌ನಲ್ಲಿ ಅಮೆರಿಕದ ವಿದೇಶಾಂಗ ಸಚಿವ ರುಬಿಯೊ ಅವರಿಗೆ, “ಸರಿಯಾದ ಒಪ್ಪಂದ ಆಗದಿದ್ದ ಪಕ್ಷದಲ್ಲಿ ಟ್ರಂಪ್ ಅಧಿಕಾರಾವಧಿ ಮುಗಿಯುವ ತನಕ, ಅಂದರೆ 2029ರ ತನಕ ಕಾಯಲೂ ಭಾರತ ಸಿದ್ಧವಾಗಿದೆ" ಎಂಬ ಕಠಿಣ ಸಂದೇಶವನ್ನು ಡಿಟರ್ಜೆಂಟ್ ಪೌಡರ್ ಹಾಕಿ ಬಟ್ಟೆ ತೊಳೆದಂತೆ ತಿಳಿಸಿದರು.

ಇಷ್ಟು ಮಾತ್ರವಲ್ಲದೆ, ಟ್ರಂಪ್ ಮತ್ತು ಅವರ ಬಂಟರು ಸಾರ್ವಜನಿಕವಾಗಿ ಭಾರತದ ವಿರುದ್ಧ ಮನಬಂದಂತೆ ಟೀಕಿಸುವುದನ್ನು ಕೂಡ ನಿಲ್ಲಿಸಬೇಕು. ಆಗ ಮಾತ್ರ ದೀರ್ಘಾವಧಿಯ ರಾಜತಾಂತ್ರಿಕ ಸಂಬಂಧಗಳು ಗಟ್ಟಿಯಾಗಿ, ಸುಗಮವಾಗಿ ಮುಂದುವರಿಯಲಿವೆ ಎಂದು ದೊವೆಲ್ ಹೇಳಿದ್ದರು.

ಇನ್ನೂ ನಾಲ್ಕು ವರ್ಷ ಕಾಯಲೂ ದೇಶ ಸಜ್ಜಾಗಿದೆ ಎಂಬ ಕಠಿಣ ಸಂದೇಶ ಟ್ರಂಪ್ ಸರಕಾರಕ್ಕೆ ಬಿಸಿ ಮುಟ್ಟಿಸಿತ್ತು. ಬಳಿಕ ಯುರೋಪ್ ಜತೆಗೆ ಚಾರಿತ್ರಿಕ ಮುಕ್ತ ವ್ಯಾಪಾರ ಒಪ್ಪಂದವೂ ಸುಸೂತ್ರವಾಗಿ ನಡೆಯಿತು. ಇಷ್ಟೆಲ್ಲ ಆದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿಯವ‌ ರೊಡನೆ ಫೋನ್ ಮೂಲಕ ಮಾತನಾಡಿ, ಒಪ್ಪಂದದ ಬಗ್ಗೆ ಘೋಷಣೆ ಮಾಡಿದ್ದಾರೆ.

ಸುಂಕವನ್ನು 50 ಪರ್ಸೆಂಟ್‌ನಿಂದ 18 ಪರ್ಸೆಂಟ್‌ಗೆ ಇಳಿಸಿದ್ದಾರೆ. ಈಗ ಚೀನಾ, ಇಂಡೊನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತಲೂ ಕಡಿಮೆ ಸುಂಕವು ಭಾರತದ ಪಾಲಿಗೆ ಇರುವುದು ಮೋದಿ ಯವರ ರಾಜತಾಂತ್ರಿಕ ನೀತಿಗೆ ಸಂದ ಗೆಲುವಾಗಿದೆ.

ಎಂಥಾ ವಿಚಿತ್ರ ನೋಡಿ! ಅಮೆರಿಕ ಮತ್ತು ಭಾರತದ ನಡುವೆ ಐತಿಹಾಸಿಕ ವ್ಯಾಪಾರ ಒಪ್ಪಂದ ಘೋಷಣೆ ಆಗಿದೆ. ಇದಕ್ಕೆ ಪಾಕಿಸ್ತಾನದಲ್ಲಿ ಅಲ್ಲಿನ ಪ್ರತಿಪಕ್ಷ ನಾಯಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚೆನ್ನಾಗಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಮೋದಿ ಸರಕಾರ ನೋಡಿ ಕಲಿಯಿರಿ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಟೀಕಿಸಿದ್ದಾರೆ. ಇತ್ತ ಭಾರತದಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ನ ನಾಯಕರು, “ಮೋದಿ ಸರಕಾರವು ಟ್ರಂಪ್ ಒತ್ತಡಕ್ಕೆ ಮಣಿದು ದೇಶದ ರೈತರ ಹಿತಾಸಕ್ತಿಗಳನ್ನು ಬಲಿ ಕೊಟ್ಟಿದೆ" ಎಂದು ಟೀಕಿಸಿದ್ದಾರೆ!

ಹಾಗಾದರೆ ಯಾವುದು ಸರಿ? ಮೊದಲಿಗೆ ಪಾಕಿಸ್ತಾನದ ಪ್ರತಿಪಕ್ಷ ನಾಯಕರು, ಚಿಂತಕರು ಏನು ಹೇಳಿದರು ಎಂಬುದನ್ನು ನೋಡೋಣ. ಪಾಕಿಸ್ತಾನದ ವೃತ್ತಿಪರ ಕೌಶಲಾಭಿವೃದ್ಧಿ ಸಂಸ್ಥೆ ಎನ್‌ಎವಿಟಿಟಿಸಿಯ ಮಾಜಿ ಮುಖ್ಯಸ್ಥ ಜಾವೇದ್ ಹಸನ್ ಹೀಗೆನ್ನುತ್ತಾರೆ- “ಭಾರತವು ಟ್ರಂಪ್‌ಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಶಿಫಾರಸು ಮಾಡಲಿಲ್ಲ, ಖನಿಜಗಳ ಉಡುಗೊರೆಯನ್ನೂ ನೀಡಲಿಲ್ಲ. ಆದರೂ ಪಾಕಿಸ್ತಾನಕ್ಕಿಂತ ಚೆನ್ನಾಗಿ ಡೀಲ್ ಮಾಡಿಕೊಂಡಿತು".

ಲಾಹೋರಿನ ಉದ್ಯಮಿ ಶಹ್ನಾಸೀಬ್ ಬಾಬರ್ ಭಟ್ಟಿ ಹೇಳುತ್ತಾರೆ- “ಭಾರತವು ಜಗತ್ತಿಗೆ ಕೊಡಲು ಸಾಕಷ್ಟು ವಿಷಯಗಳನ್ನು, ಆಫರ್‌ಗಳನ್ನು ಹೊಂದಿದೆ. ಆದರೆ ಪಾಕಿಸ್ತಾನದ ಬಳಿ ಏನೂ ಇಲ್ಲ. ಅಮೆರಿಕ ಸಹಜವಾಗಿ ಭಾರತದ ಬಳಿಗೆ ಹೋಗಿದೆ".

ಹೀಗೆ ಪಾಕಿಸ್ತಾನದ ನಾಯಕರೂ ಭಾರತದ ನಡೆಗಳನ್ನು ಪ್ರಶಂಸಿಸುತ್ತಿದ್ದರೆ, ಇತ್ತ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ನಾಯಕರು ಚಡಪಡಿಸುತ್ತಿದ್ದಾರೆ. “ಮೋದಿ ಸರಕಾರ ಟ್ರಂಪ್ ಒತ್ತಡಕ್ಕೆ ಕಟ್ಟುಬಿದ್ದು ಅಮೆರಿಕದ ಕಚ್ಚಾ ತೈಲವನ್ನು ದುಬಾರಿ ದರದಲ್ಲಿ ಖರೀದಿಸುವ ಫಜೀತಿಗೆ ಸಿಲುಕಿದೆ. ಕೃಷಿ ಮಾರುಕಟ್ಟೆಗೂ ಅಮೆರಿಕನ್ ಕಂಪನಿಗಳಿಗೆ ಪ್ರವೇಶಕ್ಕೆ ಅನುಮತಿ ನೀಡಲಿದೆ" ಎಂದು ಅವರು ಆರೋಪಿಸಿದ್ದಾರೆ.

“ಅಮೆರಿಕವು ತನ್ನ ರೈತರಿಗೆ ಭಾರಿ ಸಬ್ಸಿಡಿಗಳನ್ನು ಕೊಡುತ್ತಿದೆ. ಅದರ ಲಾಭವನ್ನು ಪಡೆದು ಅಲ್ಲಿನ ರೈತರು ದಂಡಿಯಾಗಿ ಉತ್ಪಾದಿಸುವ ಕೃಷಿ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟರೆ ಇಲ್ಲಿನ ರೈತರ ಗತಿ ಏನಾಗಬೇಕು? ಅಗ್ಗದ ದರದ ರಷ್ಯಾ ತೈಲದ ಬದಲಿಗೆ ದುಬಾರಿ ಬೆಲೆಯ ಅಮೆರಿಕದ ಕಚ್ಚಾ ತೈಲ ಆಮದು ಮಾಡಿಕೊಳ್ಳಬೇಕೇ? ಈ ಹಿಂದೆ ಕೇವಲ 2-3 ಪರ್ಸೆಂಟ್ ಸುಂಕ ವನ್ನು ಅಮೆರಿಕ ವಿಧಿಸುತ್ತಿತ್ತು. ಆದರೆ ಈಗ 18 ಪರ್ಸೆಂಟ್ ಕೊಡುವಂತಾಗಿದೆ, ಇದು ಸರಕಾರದ ವೈಫಲ್ಯವಲ್ಲವೇ.

ಭಾರತವು 500 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳು ಮತ್ತು ಸೇವೆಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲು ಒಪ್ಪಿದೆ ಎಂದು ಟ್ರಂಪ್ ಸರಕಾರ ಹೇಳುತ್ತಿದೆ. ಆದರೆ ಸದ್ಯಕ್ಕೆ ಭಾರತ ಕೇವಲ 45 ಶತಕೋಟಿ ಡಾಲರ್ ಮೌಲ್ಯದ ಆಮದು ಮಾಡುತ್ತಿದೆ. ಹಾಗಿದ್ದರೆ 500 ಶತಕೋಟಿ ಡಾಲರ್ ಆಮದು ಸಾಧ್ಯವೇ?" ಎಂದು ಅವರು ಟೀಕಿಸಿದ್ದಾರೆ.

ನಿಜ, ಕೆಲವು ಪ್ರಶ್ನೆಗಳು ಸ್ವಾಭಾವಿಕ. ಆದರೆ ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರ ಹೇಳಿಕೆಯನ್ನು ಗಮನಿಸಿ. “ಅಮೆರಿಕದ ಭೇಟಿ ಫಲಪ್ರದವಾಗಿದೆ. ಇದಕ್ಕಾಗಿ ವಿದೇಶಾಂಗ ಸಚಿವ ರುಬಿಯೊ ಅವರಿಗೆ ಧನ್ಯವಾದಗಳು. ಐತಿಹಾಸಿಕ ಭಾರತ-ಅಮೆರಿಕ ಟ್ರೇಡ್ ಡೀಲ್ ಅಂತಿಮ ಘಟ್ಟ ದಲ್ಲಿದೆ. ವಿವರಗಳನ್ನು ಶೀಘ್ರ ತಿಳಿಸಲಾಗುವುದು.

ನಿರ್ಣಾಯಕವಾಗಿರುವ ಖನಿಜಗಳ ವಲಯದಲ್ಲಿ ಸಹಕಾರ ಮುಂದುವರಿಯಲಿದೆ. ವ್ಯೂಹಾತ್ಮಕ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು. ರಕ್ಷಣೆ, ಇಂಧನ ವಲಯದಲ್ಲಿ ಒಪ್ಪಂದ ನಡೆಯಲಿದೆ" ಎಂದು ಅವರು ತಿಳಿಸಿದ್ದಾರೆ. ಅಲ್ಲಿಗೆ ಸಮಗ್ರ ಒಪ್ಪಂದ ಇನ್ನೂ ಆಗಿಲ್ಲ. ಸದ್ಯಕ್ಕೆ ಭಾರತದ ಉತ್ಪನ್ನ ಗಳಿಗೆ 18 ಪರ್ಸೆಂಟ್ ಸುಂಕ ಎನ್ನುವುದು ಮಾತ್ರ ದೃಢಪಟ್ಟಿರುವುದು. ಆದ್ದರಿಂದ ಆತಂಕ ಅನವಶ್ಯಕ.

ಈಗಲೂ ಭಾರತಕ್ಕೆ ವಾಣಿಜ್ಯ ವ್ಯವಹಾರಗಳಲ್ಲಿ ಅಮೆರಿಕವು ನಿರ್ಣಾಯಕ ಪಾಲುದಾರ ರಾಷ್ಟ್ರ ವಾಗಿದೆ. ಭಾರತವು ತನ್ನ ರಫ್ತಿನಲ್ಲಿ ಐದನೇ ಒಂದರಷ್ಟನ್ನು ಅಮೆರಿಕಕ್ಕೆ ಮಾಡುತ್ತಿದೆ. ಮೊಬೈಲ್ ಫೋನ್ ಮತ್ತು ಇಲೆಕ್ಟ್ರಾನಿಕ್ ವಸ್ತುಗಳನ್ನು ರಫ್ತು ಮಾಡುತ್ತಿದೆ.

ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕದ ಕಂಪನಿಗಳು ಭಾರತದಲ್ಲಿ ದೊಡ್ಡ ಮಟ್ಟದ ಹೂಡಿಕೆಗಳನ್ನು ಘೋಷಿಸಿವೆ. ಮುಖ್ಯವಾಗಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಅಮೆಜಾನ್ ಮತ್ತು ಮೈಕ್ರೊಸಾಫ್ಟ್ ಕಂಪನಿಗಳು 52 ಶತಕೋಟಿ ಡಾಲರ್ ಹೂಡಿಕೆಯನ್ನು ಮಾಡುತ್ತಿವೆ. ಗೂಗಲ್ ತನ್ನ ಡೇಟಾ‌ ಸೆಂಟರ್‌ಗಳಿಗೆ 15 ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿವೆ.

ಅಮೆರಿಕದ ಹಣಕಾಸು ವಲಯಕ್ಕೂ ಭಾರತ ಅನಿವಾರ್ಯವಾಗಿದೆ. ಗೋಲ್ಡ್‌ಮನ್ ಸ್ಯಾಕ್ಸ್ ಗ್ರೂಪ್, ಅಮೆರಿಕ ಹೊರತುಪಡಿಸಿದರೆ ಭಾರತದಲ್ಲಿಯೇ, ಬೆಂಗಳೂರಿನಲ್ಲಿ ತನ್ನ ಅತಿ ದೊಡ್ಡ ಕಚೇರಿ‌ ಯನ್ನು ಹೊಂದಿದೆ. ಈ ಒಪ್ಪಂದದಿಂದ ಉಭಯ ದೇಶಗಳಿಗೂ ಲಾಭವಾಗಲಿದೆ. ಭಾರತದ ಉತ್ಪನ್ನ ಗಳಿಗೆ ಅಮೆರಿಕದಲ್ಲಿ18 ಪರ್ಸೆಂಟ್ ಸುಂಕ ಇರುವುದರಿಂದ ಇತರ ದೇಶಗಳಿಗೆ ಹೋಲಿಸಿದರೆ ಅನುಕೂಲವಾಗಲಿದೆ. ಅಮೆರಿಕಕ್ಕೂ ಭಾರತಕ್ಕೆ ಕಚ್ಚಾ ತೈಲ, ಎಲ್‌ʼಎನ್‌ಜಿ, ವಿಮಾನ, ರಕ್ಷಣಾ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ತೆರೆದುಕೊಳ್ಳಲಿದೆ.

ಕೇಶವ ಪ್ರಸಾದ್​ ಬಿ

View all posts by this author