ಮೂರ್ತಿಪೂಜೆ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನಲ್ಲಿ ಅನುಮಾನ ಶುರುವಾಗಿದೆ. ಒಂದೆಡೆ, ಸಿಎಂ ಸಿದ್ದರಾಮಯ್ಯ ಅವರ ಜಾಗಕ್ಕೆ ಬರಲು ಡಿಕೆಶಿ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾವೇ ಸಿಎಂ ಆಗಲು ಸಜ್ಜಾಗಿದ್ದಾರಾ ಎಂಬುದು ಈ ಅನುಮಾನ. ಪರಿಣಾಮ? ಸಿದ್ದರಾಮಯ್ಯ ಅವರ ಜಾಗಕ್ಕೆ ಬರಲು ಇದುವರೆಗೆ ಖರ್ಗೆಯವರ ನೆರವು ನಿರೀಕ್ಷಿಸುತ್ತಿದ್ದ ಡಿ.ಕೆ.ಶಿವಕುಮಾರ್, ಇನ್ನು ಮುಂದೆ ಪ್ರಿಯಾಂಕಾ ಗಾಂಧಿ ಅವರನ್ನಷ್ಟೇ ನೆಚ್ಚಿ ಕೊಳ್ಳುವುದು ಅನಿವಾರ್ಯ ಎಂಬುದು ಈ ಕ್ಯಾಂಪಿನ ಯೋಚನೆ.
ಅಂದ ಹಾಗೆ, ಡಿಕೆಶಿ ಕ್ಯಾಂಪಿಗೆ ಇಂಥ ಅನುಮಾನ ಮೂಡಲು ಸಿದ್ದು ಸಂಪುಟದ ಸಪ್ತ ಸಚಿವರ ಹೆಜ್ಜೆಗಳೇ ಕಾರಣ. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹ ದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಈ ಸಪ್ತ ಸಚಿವರ ಪಡೆ ಕೆಲ ದಿನಗಳ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದೆ.
ಅಷ್ಟೊತ್ತಿಗಾಗಲೇ ಸಿಎಂ ಸಿದ್ದರಾಮಯ್ಯ ಅವರು ದಿಲ್ಲಿಯಲ್ಲಿ ಕೂತು ‘ನಾನೇ ಐದು ವರ್ಷ ಸಿಎಂ’ ಅಂತ ಗುಟುರು ಹಾಕಿದ್ದರಲ್ಲ? ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಯವರನ್ನು ಭೇಟಿ ಮಾಡಿದ ಸಪ್ತ ಸಚಿವರ ಪಡೆ ‘ಎಮ್ಮೆಲ್ಸಿ ಪಟ್ಟಿ’ಯ ಬಗ್ಗೆ ಚರ್ಚಿಸಿದೆ.
ಇವತ್ತು ಅವಕಾಶ ವಂಚಿತ ಸಮುದಾಯಗಳಿಂದ ಬಂದವರಿಗೆ ಪಟ್ಟಿಯಲ್ಲಿ ಜಾಗ ನೀಡಬೇಕು ಅಂತ ಒತ್ತಾಯಿಸಿ ಎಂ.ಸಿ.ವೇಣುಗೋಪಾಲ್ ಸೇರಿದಂತೆ ಕೆಲ ಹೆಸರುಗಳನ್ನು ಸೂಚಿಸಿದೆ. ಮೂಲಗಳ ಪ್ರಕಾರ, ಈ ಸಂದರ್ಭದಲ್ಲಿ ಮಾತನಾಡಿದ ಕೆಲ ಸಚಿವರು, “ಸರ್, ನಾಯಕತ್ವದ ವಿಷಯ ಬಂದಾಗ ನಾವು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತೇವೆ. ಈ ವಿಷಯದಲ್ಲಿ ಅಂತಿಮವಾಗಿ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ನಾವದನ್ನು ಒಪ್ಪುತ್ತೇವೆ.
ಇದನ್ನೂ ಓದಿ: R T Vittalmurthy Column: ಸಿದ್ದು ಗುಡುಗಿದ್ರೂ ಸುರ್ಜೇವಾಲ ಉಳಿದಿದ್ದು ಹೇಗೆ ?
ಅದರೆ ಒಂದು ವಿಷಯ ನಿಮ್ಮ ಮನಸ್ಸಿನಲ್ಲಿರಲಿ- ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವುದೇ ಆದಲ್ಲಿ ಆ ಜಾಗಕ್ಕೆ ನೀವು ಬನ್ನಿ. ನಿಮ್ಮನ್ನು ನಾವು ಒಪ್ಪುತ್ತೇವೆ" ಎಂದಿದ್ದಾರೆ. ಈ ಸಂದರ್ಭದಲ್ಲಿ ಮಾತುಕತೆ ಬೇರೆ ಬೇರೆ ದಿಕ್ಕಿನತ್ತ ಹೊರಳಿ, ‘ಐದು ವರ್ಷ ನಾನೇ ಸಿಎಂ’ ಎಂಬ ಸಿದ್ದರಾಮಯ್ಯ ಅವರ ಸ್ಟೇಟ್‌ಮೆಂಟಿನತ್ತ ಅದು ಬಂದು ಮುಟ್ಟಿದೆ. ಆಗ ಪುಲ್ಲು ಸೀರಿಯಸ್ಸಾದ ಖರ್ಗೆಯವರು, “ಯಾಕ್ರೀ ಲೀಡರ್‌ಷಿಪ್ ಬದಲಾಗಲ್ಲ?ನೋಡೋಣ.
ಅವರು ಹೇಳಿದ್ದೇ ಫೈನಲ್ಲಾ?" ಅಂತ ಪ್ರಶ್ನಿಸಿದ್ದಾರೆ. ಈ ಬೆಳವಣಿಗೆ ನಡೆದ ಕೆಲ ದಿನಗಳ ನಂತರ ಸಭೆಯೊಂದರಲ್ಲಿ ಪಾಲ್ಗೊಂಡ ಮಲ್ಲಿಕಾರ್ಜುನ ಖರ್ಗೆಯವರು 1999ರಲ್ಲಿ ನಡೆದ ಒಂದು ಎಪಿಸೋಡನ್ನು ಪ್ರಸ್ತಾಪಿಸಿ ಹಳಹಳಿಸಿದ್ದಾರೆ. “ಅವತ್ತು ಸಿಎಲ್ಪಿಪಿ ನಾಯಕನಾಗಿ ನಾನು ದುಡಿದೆ. ಆದರೆ ಚುನಾವಣೆಗಿಂತ ಕೆಲ ತಿಂಗಳ ಮುಂಚೆ ಕೆಪಿಸಿಸಿ ಅಧ್ಯಕ್ಷರಾದ ಎಸ್.ಎಂ.ಕೃಷ್ಣ ಸಿಎಂ ಆದರು. ನನಗೆ ಅವಕಾಶ ತಪ್ಪಿಹೋಯಿತು" ಅಂತ ನೋವಿನಿಂದ ಹೇಳಿದ್ದಾರೆ.
ಅಂದ ಹಾಗೆ, ತಮ್ಮ ನೋವನ್ನು ಖರ್ಗೆ ಅವರು ಬಹಿರಂಗವಾಗಿ ಹೇಳಿದ್ದು ಇದೇ ಮೊದಲಾದರೂ, ಅವರ ನೋವಿನ ಕತೆಯನ್ನು ಕೇಳದ ಕಾಂಗ್ರೆಸ್ ನಾಯಕರು ಅಪರೂಪ. ಯಾಕೆಂದರೆ ಇತ್ತೀಚೆಗೆ ದಿಲ್ಲಿಗೆ ಬಂದು ತಮ್ಮನ್ನು ಭೇಟಿಯಾದ ರಾಜ್ಯ ಕಾಂಗ್ರೆಸ್‌ನ ಬಹುತೇಕ ನಾಯಕರಿಗೆ ತಮ್ಮ ನೋವಿನ ಕತೆಯನ್ನು ಖರ್ಗೆ ವಿವರಿಸಿದ್ದಾರೆ.

ಹೀಗೆ ಅವರು ತಮ್ಮ ನೋವನ್ನು ಆಪ್ತರ ಮುಂದೆ ಪದೇ ಪದೆ ಹೇಳಿಕೊಂಡಿದ್ದಾರೆ ಎಂದರೆ ಏನರ್ಥ? ಅವರಿಗೆ ಸಿಎಂ ಆಗುವ ಕನಸು ಉಳಿದಿದೆ ಅಂತ ತಾನೇ? ಆದರೆ ಇಷ್ಟು ಕಾಲ ತೆರೆಮರೆಯಲ್ಲಿ ತಮ್ಮ ನೋವಿನ ಕತೆ ಹೇಳುತ್ತಿದ್ದ ಖರ್ಗೆಯವರು ಈಗ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದರೆ ಸಿಎಂ ಪೋಸ್ಟಿಗೆ ಅವರು ಆಟ ಶುರು ಮಾಡಿದ್ದಾರೆ ಅಂತಲೇ ಅರ್ಥ ಎಂಬುದು ಡಿಕೆಶಿ ಕ್ಯಾಂಪಿನ ಮಾತು.
ಹೀಗಾಗಿ ಅದು ಡಿಕೆಶಿ ಇಡುವ ಮುಂದಿನ ಹೆಜ್ಜೆಗಳ ಬಗ್ಗೆ ಚಿಂತೆಯಲ್ಲಿದೆ. ಯಾಕೆಂದರೆ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಕೆಶಿ ಇದುವರೆಗೆ ದಿಲ್ಲಿ ಲೆವೆಲ್ಲಿನಲ್ಲಿ ಪಾನು ಉರುಳಿಸುತ್ತಿದ್ದಾಗ ಖರ್ಗೆ ಅವರ ಉಪಸ್ಥಿತಿ ಇರುತ್ತಿತ್ತು. ಆದರೆ ಈಗ ಖರ್ಗೆಯವರೇ ಖುದ್ದು ಪಾನು ಉರುಳಿಸಿದ್ದಾರೆ ಎಂದರೆ ಡಿಕೆಶಿ ಗೇಮ್ ಪ್ಲಾನು ಬದಲಾಗಬೇಕು ಎಂಬುದು ಅದರ ವಾದ. ಪರಿಣಾಮ? ಕರ್ನಾಟಕದ ಸಿಎಂ ಹುದ್ದೆಯ ವಿಷಯದಲ್ಲಿ ಇದುವರೆಗೆ ಇಬ್ಬರು ಫೈಟು ಮಾಡುತ್ತಿದ್ದರು. ಆದರೆ ಅದೀಗ ‘ಟ್ರ್ಯಾಂಗಲ್ ಫೈಟ್’ ಆಗಿ ಪರಿವರ್ತನೆಯಾಗಿದೆ ಎಂಬುದು ಆ ಕ್ಯಾಂಪಿನ ಗ್ರಹಿಕೆ.
ವರಿಷ್ಠರು ‘ಯೆಸ್’ ಅನ್ನುತ್ತಾರಾ?
ಅಂದ ಹಾಗೆ, ಡಿಕೆಶಿ ಕ್ಯಾಂಪಿನ ಈ ಅನುಮಾನದ ನಡುವೆ ಖರ್ಗೆ ಸಿಎಂ ಆಗುವ ಸಾಧ್ಯತೆಗಳ ಬಗ್ಗೆ ಗುಸುಗುಸು ಶುರುವಾಗಿದೆ. ಕೆಲ ನಾಯಕರ ಪ್ರಕಾರ, ಖರ್ಗೆಯವರು ರಾಜ್ಯ ರಾಜಕಾರಣಕ್ಕೆ ಮರಳಲು ಬಯಸಿದರೆ ಕಾಂಗ್ರೆಸ್ ವರಿಷ್ಠರು ಒಪ್ಪಬಹುದು. ಯಾಕೆಂದರೆ ಪಕ್ಷ ನಿಷ್ಠೆ, ಅನುಭವ, ಹಿರಿತನ ಗಳೆಲ್ಲ ಖರ್ಗೆಯವರ ಪ್ಲಸ್ ಪಾಯಿಂಟುಗಳು ಎಂಬುದು ಇವರ ವಾದ.
ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಅವರನ್ನು ಬದಲಿಸಿದರೆ ಸರಕಾರ ಅಲುಗಾಡುತ್ತದೆ. ಅದು ಅಲುಗಾಡದೆ ಭದ್ರವಾಗಿರಬೇಕು ಎಂದರೆ ದಲಿತ ನಾಯಕರಾದ ಖರ್ಗೆಯವರನ್ನು ತಂದು ಕೂರಿಸ ಬೇಕು ಎಂಬುದು ಇವರ ಲೆಕ್ಕಾಚಾರ.
ಆದರೆ ಇನ್ನು ಕೆಲವರು ಈ ಮಾತನ್ನು ಒಪ್ಪುವುದಿಲ್ಲ. ಆಂಧ್ರದಲ್ಲಿ ಈ ಹಿಂದೆ ಹಿರಿಯ ನಾಯಕ ಕೆ.ರೋಸಯ್ಯ ಅವರನ್ನು ಸಿಎಂ ಮಾಡಿದ ಕ್ರಮವು ಪಕ್ಷಕ್ಕೆ ಲಾಭ ತರಲಿಲ್ಲ. ಹೀಗಾಗಿ ಕರ್ನಾಟಕ ದಲ್ಲಿ ಹಿರಿಯ ನಾಯಕರನ್ನು ತಂದು ಕೂರಿಸಲು ವರಿಷ್ಠರು ಬಯಸುವುದಿಲ್ಲ ಎಂಬುದು ಇವರ ಮಾತು. ಆದರೆ ಇಂಥ ಮಾತುಗಳೆಲ್ಲದರ ನಡುವೆ ಕೇಳಿ ಬರುತ್ತಿರುವ ಇನ್ನೊಂದು ವಾದವೆಂದರೆ, ಈ ಹಿಂದೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ ವಾಗಿದೆ ಎಂಬ ಮಾತಿಗಾಗಿ ನಾಯಕತ್ವ ಬದಲಾವಣೆಯ ಮಾತು ಚಾಲ್ತಿಯಲ್ಲಿದೆ.
ಆದರೆ ಈ ಮೂಲ ವಿಷಯ ಇಂಪ್ಲಿಮೆಂಟ್ ಆಗುವುದಿಲ್ಲ ಎಂದರೆ ಸಿದ್ದರಾಮಯ್ಯ ಏಕೆ ಬದಲಾಗ ಬೇಕು? ಅವರು ಬದಲಾಗುವುದಿಲ್ಲ ಎಂದರೆ ಸರಕಾರ ಅಲುಗಾಡುವುದೇ ಇಲ್ಲವಲ್ಲ? ಎಂಬುದು. ಹೀಗೆ ಇಂಥ ವಾದಗಳೇನೇ ಇರಲಿ, ಸಿದ್ದರಾಮಯ್ಯ ಅವರ ಪರವಾಗಿ ರಾಹುಲ್ ಗಾಂಧಿ ಮತ್ತು ಡಿಕೆಶಿ ಪರವಾಗಿ ಪ್ರಿಯಾಂಕಾ ಗಾಂಧಿ ನಿಂತಿರುವುದು ರಹಸ್ಯವೇನಲ್ಲ ಮತ್ತು ಸಿಎಂ ಆಗುವ ಆಟದಿಂದ ಡಿಕೆಶಿ ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ.
ಬಿಜೆಪಿ ಭಿನ್ನರಿಗೆ ತಲೆನೋವು
ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಪದಚ್ಯುತಿಗೆ ಹವಣಿಸುತ್ತಿರುವ ಬಿಜೆಪಿ ಭಿನ್ನರ ಪಡೆಯು ದಿಲ್ಲಿಯತ್ತ ಮುಖ ಮಾಡಿ ಕುಳಿತಿದೆ. ಕಾರಣ? ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಯಾಗದೆ ಕರ್ನಾಟಕದ ಎಪಿಸೋಡು ಸೆಟ್ಲ್ ಆಗುವುದಿಲ್ಲ ಎಂಬ ಯೋಚನೆ. ಅಂದ ಹಾಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಲ ತಿಂಗಳ ಹಿಂದೆಯೇ ಮುಗಿಯಬೇಕಿತ್ತು. ಆದರೆ ಆರೆಸ್ಸೆಸ್ ವರಿಷ್ಠರು ಪಕ್ಷಾಧ್ಯಕ್ಷ ಸ್ಥಾನಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಬರಲಿ ಅಂತ ಪಟ್ಟು ಹಿಡಿದಿದ್ದರೆ, ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಬರಲಿ ಅಂತ ಮೋದಿ-ಅಮಿತ್ ಶಾ ಜೋಡಿ ಪಟ್ಟು ಹಿಡಿದಿದೆ.
ಹೀಗೆ ಮೋದಿ-ಅಮಿತ್ ಶಾ ಜೋಡಿ ಮತ್ತು ಆರೆಸ್ಸೆಸ್ ನಡುವೆ ಫೈಟು ನಡೆಯುತ್ತಿರುವುದಕ್ಕೆ ವಿಶೇಷ ಕಾರಣಗಳೂ ಇವೆ. ಈ ಪೈಕಿ ಮೋದಿ-ಅಮಿತ್ ಶಾ ಅವರಿಗೆ, ಅದರಲ್ಲೂ ಅಮಿತ್ ಶಾ ಅವರಿಗೆ ಭವಿಷ್ಯದಲ್ಲಿ ಪ್ರಧಾನಿ ಹುದ್ದೆಗೇರುವ ಕನಸಿದೆ. ಇಂಥ ಕನಸು ಈಡೇರುವ ಕಾಲದಲ್ಲಿ ತಮಗೆ ಬೇಕಾದವರು ಪಕ್ಷದ ಅಧ್ಯಕ್ಷರಾಗಿರಬೇಕು ಎಂಬುದು ಅವರ ಯೋಚನೆ. ಒಂದು ವೇಳೆ ಹಾಗಾಗದೆ ಆರೆಸ್ಸೆಸ್ ಸೂಚಿಸಿದವರು ಅಧ್ಯಕ್ಷರಾದರೆ ತಮಗೆ ಅಡ್ಡಿಯಾಗುತ್ತದೆ.
ಯಾಕೆಂದರೆ ಅರೆಸ್ಸೆಸ್ ವರಿಷ್ಠರಿಗೆ ಮೋದಿಯವರ ನಂತರ ನಿತಿನ್ ಗಡ್ಕರಿ ಇಲ್ಲವೇ ಯೋಗಿ ಆದಿತ್ಯ ನಾಥ್ ಪ್ರಧಾನಿಯಾಗಲಿ ಎಂಬ ಬಯಕೆ ಇದೆ. ಹೀಗಾಗಿ ಆರೆಸ್ಸೆಸ್ ಹೇಳಿದಂತೆ ಶಿವರಾಜ್ ಸಿಂಗ್ ಚೌಹಾಣ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬಂದರೆ ತಮಗೆ ಅಡ್ಡಿಯಾಗುತ್ತದೆ ಎಂಬುದು ಅಮಿತ್ ಶಾ ಚಿಂತೆ.
ಇನ್ನು ಮೋದಿ-ಅಮಿತ್ ಶಾ ಹೇಳಿದಂತೆ ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಅಧ್ಯಕ್ಷ ಸ್ಥಾನಕ್ಕೆ ಬಂದು ಕೂರುವುದು ಆರೆಸ್ಸೆಸ್ ವರಿಷ್ಠರಿಗೆ ಇಷ್ಟವಿಲ್ಲ. ಯಾಕೆಂದರೆ ಧರ್ಮೇಂದ್ರ ಪ್ರಧಾನ್ ಮತ್ತು ಭೂಪೇಂದ್ರ ಯಾದವ್ ಅವರಿಗೆ ಸಂಘ ನಿಷ್ಠೆಗಿಂತ ಮೋದಿ-ಅಮಿತ್ ಶಾ ಬಗ್ಗೆ ಹೆಚ್ಚು ನಿಷ್ಠೆ. ಹೀಗಾಗಿ ಅನಿವಾರ್ಯ ಸನ್ನಿವೇಶಗಳಲ್ಲಿ ಅವರು ಆ ಕಡೆಗೇ ವಾಲುತ್ತಾರೆ. ಕೀ ಪೋಸ್ಟು ಗಳಲ್ಲಿ ಸಂಘನಿಷ್ಠರೇ ಇರಬೇಕು ಅಂತ ಈ ಹಿಂದೆ ಹೇಳಿದರೆ ಮೋದಿ-ಅಮಿತ್ ಶಾ ಜೋಡಿ ನಿರ್ಲಕ್ಷ್ಯ ಮಾಡಿತು.
ಬೇರೆ ಪಕ್ಷದಿಂದ ವಲಸೆ ಬಂದ ಜೈದೀಪ್ ಧನಕರ್ ಅವರನ್ನು ರಾಜ್ಯಸಭೆಯ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿತು. ಪಕ್ಷಕ್ಕೆ ಬಂದಾಗಿನಿಂದ ಧನಕರ್ ಅವರಿಗೆ ವಿವಿಧ ಹುದ್ದೆಗಳನ್ನು ದಯಪಾಲಿ ಸಿದ್ದ ಮೋದಿ-ಅಮಿತ್ ಶಾ ಜೋಡಿ ರಾಜ್ಯಸಭೆಯ ಅಧ್ಯಕ್ಷ ಸ್ಥಾನ ಕೊಡುವಾಗಲೂ ಮೈ ಮರೆ ಯಿತು. ಪರಿಣಾಮ? ಟೈಮು ನೋಡಿ ಧನಕರ್ ಬಿಜೆಪಿಯ ಬುಡಕ್ಕೇ ಬಿಸಿ ಕಾಯಿಸಿದರು! ಭವಿಷ್ಯ ದಲ್ಲಿ ಇಂಥ ಎಪಿಸೋಡು ಪುನರಾವರ್ತನೆ ಆಗಬಾರದು ಎಂದರೆ, ತಮ್ಮ ನಿಷ್ಠರಿಗಿಂತ ಸಂಘ ನಿಷ್ಠರಿಗೆ ಮೋದಿ-ಅಮಿತ್ ಶಾ ಆದ್ಯತೆ ಕೊಡಬೇಕು ಎಂಬುದು ಅರೆಸ್ಸೆಸ್‌ನ ಪಟ್ಟು. ಪರಿಣಾಮ? ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಳಂಬವಾಗುತ್ತಲೇ ಇದೆ. ಅರ್ಥಾತ್, ದಿಲ್ಲಿ ಎಪಿಸೋಡು ಮುಗಿಯದೆ ಕರ್ನಾಟಕದ ಎಪಿಸೋಡಿಗೆ ಚಾಲನೆ ಸಿಗುವುದಿಲ್ಲ ಎಂಬುದು ಬಿಜೆಪಿ ಭಿನ್ನರ ಚಿಂತೆ.
ಜೋಡೆತ್ತುಗಳ ಬೆಂಬಲ ಬೇಕು
ಅಂದ ಹಾಗೆ, ದಿಲ್ಲಿಯತ್ತ ಕಣ್ಣು ನೆಟ್ಟು ಕುಳಿತಿರುವ ಭಿನ್ನರಿಗೆ ವಿಜಯೇಂದ್ರ ಅವರ ಡ್ರಾಬ್ಯಾಕುಗಳು ಕಾಣುತ್ತಲೇ ಇವೆಯಂತೆ. ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿರುವ ಅವರಿಗೆ ಜೋಡೆತ್ತುಗಳ ಬೆಂಬಲವಿಲ್ಲ ಎಂಬುದು ಭಿನ್ನರ ಲೇಟೆಸ್ಟು ವರ್ಷನ್ನು. ರಾಜ್ಯ ಬಿಜೆಪಿಯಲ್ಲಿ ಬಿ.ಬಿ.ಶಿವಪ್ಪ ಯುಗ ಮುಗಿದ ನಂತರ ಅಧ್ಯಕ್ಷರಾದ ಬಹುತೇಕ ಎಲ್ಲರಿಗೂ ಜೋಡೆತ್ತುಗಳ ಬೆಂಬಲ ವಿತ್ತು. ಅರ್ಥಾತ್, ಪಕ್ಷದ ಅಧ್ಯಕ್ಷರು ಯಾರೇ ಆಗಲಿ, ಬಹುತೇಕ ಸಂದರ್ಭಗಳಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್ ಎಂಬ ಜೋಡೆತ್ತುಗಳ ಬೆಂಬಲ ಅವರಿಗಿರುತ್ತಿತ್ತು. ಅದು ಬಸವರಾಜ ಪಾಟೀಲ್ ಸೇಡಂ ಇರಲಿ, ಕೆ.ಎಸ್.ಈಶ್ವರಪ್ಪ ಇರಲಿ, ಜಗದೀಶ್ ಶೆಟ್ಟರ್, ಸದಾನಂದಗೌಡ, ಪ್ರಲ್ಹಾದ್ ಜೋಷಿ ಅವರಿರಲಿ, ಒಟ್ಟಿನಲ್ಲಿ ಈ ಎಲ್ಲರಿಗೂ ಯಡಿಯೂರಪ್ಪ ಮತ್ತು ಅನಂತಕುಮಾರ್ ಆಸರೆ ಇತ್ತು.
ಈ ಮಧ್ಯೆ ಯಡಿಯೂರಪ್ಪ ಮತ್ತು ಅನಂತಕುಮಾರ್ ಪಕ್ಷದ ಅಧ್ಯಕ್ಷರಾದ ಕಾಲದ ಬಗ್ಗೆ ಹೇಳು ವುದೇ ಬೇಡ. ಯಾಕೆಂದರೆ ಪಕ್ಷ ಈ ಜೋಡೆತ್ತುಗಳ ಶಕ್ತಿಯಿಂದಲೇ ನಡೆಯುತ್ತಿತ್ತು. ಬಸವರಾಜ ಪಾಟೀಲ್ ಸೇಡಂ ಅಧ್ಯಕ್ಷರಾಗುವ ಕಾಲದಲ್ಲಿ ಹಿರಿಯ ನಾಯಕ ಎಂ. ಆರ್.ತಂಗಾ ಫೈಟು ಕೊಟ್ಟಿದ್ದರೂ ಯಡಿಯೂರಪ್ಪ ಸೇಡಂ ಜತೆ ನಿಂತಿದ್ದರು.
ಸದಾನಂದಗೌಡರ ನಂತರ ನಳೀನ್ ಕುಮಾರ್ ಕಟೀಲ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರುವ ಬಯಕೆ ಸಂತೋಷ್ ಅವರಿಗಿತ್ತಾದರೂ ಅನಂತ ಕುಮಾರ್ ಬಲದಿಂದ ಪ್ರಲ್ಹಾದ ಜೋಷಿ ಅಟ್ಟ ಹತ್ತಿದ್ದರು. ಮುಂದೆ ಅನಂತಕುಮಾರ್ ಯುಗ ಮುಗಿದ ನಂತರ ಸಂತೋಷ್ ಅವರು ಕಟೀಲರನ್ನು ಪ್ರತಿಷ್ಠಾಪಿ ಸಿದ ಕಾಲದಲ್ಲಿ ಯಡಿಯೂರಪ್ಪ ಮತ್ತು ಸಂತೋಷ್ ಬಲ ಕಟೀಲರ ಜತೆಗಿತ್ತು.
ಹೀಗೆ ಹಿಂದಿನ ಅಧ್ಯಕ್ಷರಿಗೆ ಹೋಲಿಸಿದರೆ ಹಾಲಿ ಅಧ್ಯಕ್ಷರಿಗೆ ಬಲ ತುಂಬುವ ಜೋಡೆತ್ತುಗಳು ಇಲ್ಲ. ಯಡಿಯೂರಪ್ಪ ಅವರ ಅಸರೆ ಇದ್ದರೂ, ಸಕ್ರಿಯ ರಾಜಕಾರಣದಿಂದ ಅವರು ದೂರವಾಗಿರುವು ದರಿಂದ ಪಕ್ಷ ಸಂಘಟನೆ ಮಾಡುವುದು ವಿಜಯೇಂದ್ರ ಅವರಿಗೆ ಕಷ್ಟ. ಇದೇ ರೀತಿ, ಈ ಹಿಂದೆ ಅನಂತಕುಮಾರ್ ಇದ್ದ ಜಾಗದಲ್ಲಿ ಬಿ.ಎಲ್.ಸಂತೋಷ್ ನೆಲೆಯಾಗಿದ್ದರೂ ಅವರು ವಿಜಯೇಂದ್ರರ ಪರವಾಗಿಲ್ಲ.
ಹೀಗಾಗಿ ಜೋಡೆತ್ತುಗಳ ಬಲವಿಲ್ಲದ ವಿಜಯೇಂದ್ರ ಕೆಳಗಿಳಿಯಲಿ ಎಂಬುದು ಬಿಜೆಪಿ ಭಿನ್ನರ ವರ್ಷನ್ನು. ಅದರೆ ಇಂಥ ವರ್ಷನ್ನುಗಳೇನೇ ಇದ್ದರೂ ಮೌನವಾಗಿ ಕೆಲಸ ಮಾಡಿಕೊಂಡು ಹೋಗು ವಂತೆ ಯಡಿಯೂರಪ್ಪ ಅವರು ವಿಜಯೇಂದ್ರ ಅವರಿಗೆ ಹೇಳಿದ್ದಾರಂತೆ. ಪರಿಣಾಮ? ವಿಜಯೇಂದ್ರ ಅವರು ತಮ್ಮ ಪಾಡಿಗೆ ತಾವು ಸರಕಾರದ ವಿರುದ್ಧದ ಸರಣಿ ಹೋರಾಟಗಳಲ್ಲಿ ಮುಳುಗಿದ್ದಾರೆ.