ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಜನಪದ ನಂಬಿಕೆಗಳ ಆಗರ ಈ ಪ್ರಾಕೃತಿಕ ಸೊಬಗಿನ ಬಂಡೆ !

ಹಿಂದಿನ ದಿನಗಳಲ್ಲಿ ಅಲ್ಲಿ ಒಂದೆರಡು ಪುಟ್ಟ ಅಂಗಡಿಗಳಿದ್ದುದರಿಂದ ಪೇಟೆ ಎಂಬ ಹೆಸರು; ಅಲ್ಲಿರುವ ಬೃಹದಾಕಾರದ, ನೂರಾರು ವರ್ಷ ಹಳೆಯದಾದ ತಾರಿಮರದಿಂದಾಗಿ ಆ ಹಳ್ಳಿಗೆ ತಾರಿಕಟ್ಟೆ ಎಂಬ ಹೆಸರು ಬಂದಿದ್ದರೂ, ನಾನೀಗ ಪ್ರಸ್ತಾಪಿಸುತ್ತಿರುವುದು ಅಲ್ಲೇ ಸನಿಹದಲ್ಲಿದ್ದ ಮದಗವನ್ನು.

ಜನಪದ ನಂಬಿಕೆಗಳ ಆಗರ ಈ ಪ್ರಾಕೃತಿಕ ಸೊಬಗಿನ ಬಂಡೆ !

ಮುಖ್ಯ ಉಪಸಂಪಾದಕ, ಅಂಕಣಕಾರ ಶಶಿಧರ ಹಾಲಾಡಿ

ಶಶಾಂಕಣ

ಹಳ್ಳಿಯಲ್ಲಿ ವಾಸಿಸುವವರಿಗೆ ಒಂದು ಲಾಭವಿದೆ; ತಮ್ಮ ಊರಿನ ಸುತ್ತಲೂ ಇರುವ ಬಂಡೆ, ಗುಡ್ಡ, ಬಯಲು, ಕೆರೆ, ತೋಡು, ಹಾಡಿ, ಹಕ್ಕಲು, ಕಾನ, ಮದಗ, ಬ್ಯಾಣ ಮೊದಲಾದವು ಗಳನ್ನು ಪರಿಶೋಧಿಸುವ ಅಪರೂ ಪದ ಅವಕಾಶ ಹಳ್ಳಿಯ ಹುಡುಗರಿಗೆ ಮಾತ್ರ ಲಭ್ಯ. ಯಾವುದೇ ಹಳ್ಳಿಯನ್ನು ಗಮನಿಸಿ, ಊರಂಚಿನಲ್ಲಿ ಒಂದು ಕೆರೆ ಅಥವಾ ಒಂದು ಬಂಡೆ ಇದ್ದೇ ಇರುತ್ತದೆ. ಅಲ್ಲೆಲ್ಲಾ ನಾನಾ ರೀತಿಯ ವೈಚಿತ್ರ್ಯ ಗಳು, ವಿಸ್ಮಯಗಳು ಅಡಗಿರುತ್ತವೆ. ಕೆಲವು ಕಡೆ ಪುರಾತನ ಮಾನವನ ಚಟುವಟಿಕೆಗಳನ್ನು ಸಹ ಗುರುತಿಸಬಹುದು.

ನಮ್ಮ ಹಳ್ಳಿಮನೆಯಿಂದ ಸುಮಾರು 5 ಕಿ.ಮೀ. ದೂರದಲ್ಲಿ ತಾರಿಕಟ್ಟೆ ಎಂಬ ಹಳ್ಳಿಯಿದೆ. ಈಗಿನ ದಿನಗಳಲ್ಲಿ ಬೈಕ್ ಅಥವಾ ಬೇರೊಂದು ವಾಹನ ಏರಿ ಹೊರಟರೆ ೨೦ ನಿಮಿಷಗಳಲ್ಲಿ ತಾರಿಕಟ್ಟೆ ತಲುಪಬಹುದು; ಹಿಂದಿನ ದಿನಗಳಲ್ಲಿ ಅಂದರೆ ಒಂದೂರಿನಿಂದ ಇನ್ನೊಂದು ಊರಿಗೆ ಹೋಗಲು ನಡಿಗೆಯೇ ಪ್ರಧಾನವಾಗಿದ್ದ ದಿನಗಳಲ್ಲಿ, ಅಲ್ಲಿಗೆ 60 ನಿಮಿಷಗಳ ಹಾದಿ. ನಮ್ಮ ಮನೆಯಿಂದ ಪೂರ್ವಕ್ಕೆ ಸಾಗುವ ಚೇರ್ಕಿ ಬೈಲಿನಲ್ಲಿ ಅರ್ಧ ಕಿ. ಮೀ. ನಡೆದು, ಹರನಗುಡ್ಡೆಯ 120 ಕಲ್ಲಿನ ಮೆಟ್ಟಿಲುಗಳನ್ನೇರಿ, ಅಲ್ಲಿ ಎದುರಾಗುವ ದಟ್ಟ ಹಾಡಿಯಲ್ಲಿ ಹತ್ತು ನಿಮಿಷ ಹೆಜ್ಜೆ ಹಾಕಿ, ನಂತರದ ಬಯಲಿನ ಮೂಲಕ ಸಾಗಿ, ಹಿಲಿಯಾಣದ ಬಳಿ ದಾರಿಗೆದುರಾಗುವ ಆಮರಕಲ್ಲನ್ನು ನೋಡುತ್ತಾ, ಬಾವಣಿ ತೋಡು ಮತ್ತು ಕೊಟಬಚ್ಚಲು ಹೊಳೆಗಳನ್ನು ದಾಟಿದ ನಂತರ ಸಿಗುವುದೇ ತಾರಿಕಟ್ಟೆ ಪೇಟೆ.

ಇದನ್ನೂ ಓದಿ: Shashidhara Halady Column: ಹೆಬ್ಬಲಸು: ಹೆಸರು ಮಾತ್ರ ಹಿರಿದು, ಗಾತ್ರದಲ್ಲಿ ಕಿರಿದು !

ಹಿಂದಿನ ದಿನಗಳಲ್ಲಿ ಅಲ್ಲಿ ಒಂದೆರಡು ಪುಟ್ಟ ಅಂಗಡಿಗಳಿದ್ದುದರಿಂದ ಪೇಟೆ ಎಂಬ ಹೆಸರು; ಅಲ್ಲಿರುವ ಬೃಹದಾಕಾರದ, ನೂರಾರು ವರ್ಷ ಹಳೆಯದಾದ ತಾರಿಮರದಿಂದಾಗಿ ಆ ಹಳ್ಳಿಗೆ ತಾರಿಕಟ್ಟೆ ಎಂಬ ಹೆಸರು ಬಂದಿದ್ದರೂ, ನಾನೀಗ ಪ್ರಸ್ತಾಪಿಸುತ್ತಿರುವುದು ಅಲ್ಲೇ ಸನಿಹದಲ್ಲಿದ್ದ ಮದಗವನ್ನು.

ತಾರಿಕಟ್ಟೆಯಲ್ಲಿನ ತಾರಿ ಮರದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ, ಮರ-ಗಿಡಗಳ ನಡುವೆ ಒಂದು ಮದಗವಿತ್ತು. ಆ ಮದಗದ ಅಂಚಿನಲ್ಲೇ ಒಂದು ಕಾಲ್ದಾರಿ; ಕುರುಚಲು ಕಾಡು, ಗೋವೆ ಹಾಡಿ, ಅಲ್ಲಲ್ಲಿ ಎತ್ತರವಾದ ಬೋಗಿ ಮರಗಳು ಮತ್ತು ಕರಡದ ನಡುವೆ ಸಾಗುವ ಆ ದಾರಿಯು, ಮದಗದ ನಡುವೆಯೇ ಹಾದುಹೋಗುತ್ತಿತ್ತು.

ಮಳೆಗಾಲ ಆರಂಭವಾಗಿ ಒಂದೆರಡು ವಾರಗಳಲ್ಲೇ ಆ ಮದಗದಲ್ಲಿ ನೀರು ತುಂಬುತ್ತಿತ್ತು. ಸುತ್ತಲೂ ಇರುವ ಹಾಡಿ, ಗುಡ್ಡಗಳಲ್ಲಿ ಬಿದ್ದ ಮಳೆಯ ನೀರು, ಮಣ್ಣನ್ನು ಕೊಚ್ಚಿಕೊಂಡು ಹರಿದು ಬಂದು, ಮದಗದಲ್ಲಿ ನಿಲ್ಲುತ್ತದೆ. ಮಳೆನೀರನ್ನು ಸಂಗ್ರಹಿಸಲು ಮಾಡಿದ ಪುಟ್ಟ ಕೆರೆ ಅದು. ನೀರು ತುಂಬಿದಾಗ, ಅದರ ‘ಏರಿ’ಯ ಮೇಲೆ ಕಾಲ್ದಾರಿ ಸಾಗುತ್ತಿತ್ತು.

ಅಲ್ಲೂ ಮರಗಿಡಗಳು ಬೆಳೆದಿದ್ದವು. ಮಳೆಗಾಲ ಮುಗಿಯುವ ತನಕ, ಅಂದರೆ ಸುಮಾರು ಮೂರ‍್ನಾಲ್ಕು ತಿಂಗಳುಗಳ ಕಾಲ ಅಲ್ಲಿ ನೀರು ನಿಂತಿರುತ್ತಿತ್ತು. ಆದರೆ ನಾನು ಕಂಡಂತೆ, ಆ ಮದಗದ ನೀರನ್ನು ಕೃಷಿಗೆ ಬಳಸುವುದು ಕಡಿಮೆಯೇ; ಆ ಮದಗದ ಕೆಳಭಾಗದಲ್ಲಿದ್ದ ಕೆಲವೇ ಗದ್ದೆಗಳಿಗೆ ಆ ನೀರಿನ ಬಳಕೆ. ಹಿಂದಿನವರು ಈ ಕಾಡುಗುಡ್ಡದ ನಡುವೆ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದನ್ನು ಕಂಡು ಸಣ್ಣ ವಿಸ್ಮಯವೂ ಮೂಡುತ್ತಿತ್ತು.

ಆ ನೀರಿನ ಸಂಗ್ರಹದಿಂದಾಗಿ, ಮದಗ ಎಂದರೆ ನೀರು ನಿಲ್ಲುವ ಸ್ಥಳ ಎಂದು ಗೊತ್ತಾಗಿತ್ತು; ನಂತರದ ವರ್ಷಗಳಲ್ಲಿ ನಮ್ಮ ನಾಡಿನ ಕಡೂರು, ಮಾಸೂರು ಮೊದಲಾದ ಕಡೆ ಇರುವ ‘ಮದಗದ ಕೆರೆ’ಗಳ ವಿಚಾರ ತಿಳಿದು, ಹಿಂದಿನ ಜನರು ಮಳೆನೀರು ಸಂಗ್ರಹಿಸಲು ಮದಗ ದಂಥ ಕೆರೆಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತರು ಎಂದು ಗೊತ್ತಾಯಿತು.

ಈಗ ಆ ಮದಗ ಮರೆಯಾಗಿದೆ! ಅಲ್ಲೀಗ ನೀರು ತುಂಬುವುದಿಲ್ಲ! ಆಗಿನ ಕಾಲದ ಮಳೆಗಾಲ ದಲ್ಲಿ ನೀರು ನಿಲ್ಲುತ್ತಿದ್ದ ಜಾಗದಲ್ಲಿಂದು ಕುರುಚಲು ಕಾಡು, ಕಳೆ ಗಿಡಗಳು ಬೆಳೆದಿವೆ; ಅಲ್ಲ ಲ್ಲಿ ಅಕೇಶಿಯಾ ಮರಗಳೂ ಕಾಣಿಸಿಕೊಂಡಿವೆ; ಹತ್ತಿರದಲ್ಲೇ ಇದ್ದ ‘ಕಿಸ್ಕಾರ್‌ಜಡ್ ಅರೆಕಲ್ಲ’ ನ್ನು ಪುಡಿ ಮಾಡಿ ಲಾರಿಗಳಲ್ಲಿ ಸಾಗಿಸುವ ಕ್ವಾರಿಯತ್ತ ಸಾಗುವ ಒಂದು ಕಚ್ಚಾ ರಸ್ತೆಯೂ ಇದರ ಸನಿಹದಲ್ಲಿ ಹಾದುಹೋಗಿದೆ. ಆ ಭಾಗದಲ್ಲೊಂದು ಮಳೆನೀರು ಸಂಗ್ರಹದ ನಿರ್ಮಾಣವಿತ್ತು ಎಂಬುದು ಈಗ ಮರೆತೇ ಹೋಗಿರುವಂಥ ಸನ್ನಿವೇಶ!

ಇದೇ ತಾರಿಕಟ್ಟೆಗೆ ನಡೆದು ಸಾಗುವ ದಾರಿಗೆ ಅಡ್ಡಲಾಗಿ ಕೊಟಬಚ್ಚಲು ಹೊಳೆ ಎಂಬ ತೊರೆಯಿದೆ. ಆಮರಕಲ್ಲು ಎಂಬ ಬೃಹದಾಕಾರದ ಬಂಡೆಗಿಂತ ತುಸುದೂರದಲ್ಲಿದೆ ಆ ಹೊಳೆ. ಕಾಲ್ದಾರಿಗೆ ಅಡ್ಡಲಾಗಿದ್ದ ಆ ಹೊಳೆಯನ್ನು ನಡೆದು ದಾಟಿ ನಾವು ಮುಂದು ವರಿಯಬೇಕಿತ್ತು. ಇಲ್ಲಿ ‘ಹೊಳೆ’ ಎಂದರೆ ದೊಡ್ಡ ನದಿಯೇನಲ್ಲ, ಬದಲಿಗೆ ಕಾಡಿನ ನಡುವೆ ಹರಿಯುವ ದೊಡ್ಡ ಗಾತ್ರದ ತೊರೆ.

ನಮ್ಮೂರಿನ ಜನರು ಚಿಕ್ಕ ಗಾತ್ರದ ತೊರೆಯನ್ನು ತೋಡು ಎಂದು ಕರೆದರು, ತುಸು ದೊಡ್ಡ ಗಾತ್ರದ ತೊರೆಯನ್ನು ‘ಹೊಳೆ’ ಎಂದರು. ಹಿಂದೆ ಕಾಡಾಗಿದ್ದ, ಈಗ ಗುಡ್ಡೆಯ ಸ್ವರೂಪ ಪಡೆದಿರುವ ಭೂಪ್ರದೇಶದ ನಡುವೆ ಹರಿಯುವ ಕೊಟಬಚ್ಚಲು ಹೊಳೆಯು, ಮಳೆಗಾಲ ದಲ್ಲಿ ನೀರಿನಿಂದ ತುಂಬಿ ಹೋಗುತ್ತದೆ. ಜಡಿಮಳೆ ಸುರಿಯುವಾಗ, ಇದನ್ನು ದಾಟುವುದು ಕಷ್ಟ; ಅದಕ್ಕೆಂದೇ ಮಳೆಗಾಲದಲ್ಲಿ ಅದನ್ನು ದಾಟಲು ಒಂದು ಸಾರ ಅಥವಾ ಸಂಕವನ್ನು ತುಸು ಮೇಲ್ಭಾಗದಲ್ಲಿ ಹಳ್ಳಿಯವರೇ ನಿರ್ಮಿಸುತ್ತಿದ್ದರು.

ನಡುನಡುವೆ, ಒಂದೊಂದು ವರ್ಷದ ಮಳೆಗಾಲದಲ್ಲಿ ಆ ಸಂಕವು ನೆರೆಯಲ್ಲಿ ಕೊಚ್ಚಿ ಹೋಗುತ್ತಿದ್ದುದುಂಟು; ಆಗ ಆ ಹಳ್ಳವು ನಿಜವಾಗಿಯೂ ಹೊಳೆಯೇ! ಮಳೆಗಾಲ ಮುಗಿದು, ಚಳಿಗಾಲದ ಆರಂಭದ ತನಕವೂ ಇದರಲ್ಲಿ ಉಜರು ನೀರು (ಝರಿ) ಹರಿಯುತ್ತದೆ. ಫೆಬ್ರ ವರಿಯ ಸಮಯದಲ್ಲಿ ಪೂರ್ತಿ ಬತ್ತುತ್ತದೆ.

ನಂತರದ ನಾಲ್ಕು ತಿಂಗಳುಗಳ ಕಾಲ, ಆ ಪಾತ್ರದಲ್ಲಿ ಸಣ್ಣ ಪುಟ್ಟ ಕಲ್ಲುಗಳ ದರ್ಶನ. ಜೂನ್‌ನಲ್ಲಿ ಇದು ಮತ್ತೆ ನೀರಿನಿಂದ ತುಂಬಿಕೊಳ್ಳುತ್ತದೆ. ಕೊಟಬಚ್ಚಲು ಹೊಳೆ ಹರಿ ಯುವ ದಾರಿಯುದ್ದಕ್ಕೂ ಬಹು ಹಿಂದೆ ದಟ್ಟ ಕಾಡಿತ್ತು; ಕ್ರಮೇಣ ಎಲ್ಲಾ ಮರಗಳನ್ನೂ ಮನುಷ್ಯರೇ ಕಡಿದುಹಾಕಲಾಗಿ, ಈಗ ಕುರುಚಲು ಕಾಡು, ಹಕ್ಕಲು ಮತ್ತು ಗುಡ್ಡಗಳಿವೆ. ಅಲ್ಲಲ್ಲಿ ರಬ್ಬರು ತೋಟಗಳೂ ತಲೆ ಎತ್ತಿವೆ.

ಆದ್ದರಿಂದ, ಹಿಂದೆ ವರ್ಷಪೂರ್ತಿ ಹರಿಯುತ್ತಿದ್ದಿರಬಹುದಾದ ಆ ‘ಹೊಳೆ’, ಈಗ ಆರು ತಿಂಗಳುಗಳ ಕಾಲ ಬತ್ತಿರುತ್ತದೆ. ಬೇಸಗೆಯಲ್ಲಿ ಪೂರ್ತಿ ಒಣಗುವ ಕೊಟ ಬಚ್ಚಲು ಹೊಳೆ ಯು ಮುಂದೆ ಸಾಗಿ ಸೀತಾನದಿಯನ್ನು ಕೂಡಿಕೊಳ್ಳುತ್ತದೆ. ನಮ್ಮ ಮನೆಯಿಂದ ಕಾಲ್ದಾರಿ ಹಿಡಿದು ತಾರಿಕಟ್ಟೆಗೆ ಹೊರಟರೆ ಸಿಗುವ ಇನ್ನೊಂದು ದೊಡ್ಡ ತೋಡು ಎಂದರೆ ಬಾವಣಿ ತೋಡು. ಚಳಿಗಾಲದ ತನಕವೂ ಸ್ವಲ್ಪ ತಿಳಿನೀರು ಹರಿಯುವ ಈ ತೋಡಿನಲ್ಲಿ ಕಾಲಾ ಡಿಸುತ್ತಾ, ನಡಿಗೆಯಿಂದ ಬಳಲಿದ ಮುಖಕ್ಕೆ ನೀರು ಸಿಂಪಡಿಸಿಕೊಂಡು ಮುಂದುವರಿ ಯುವುದು ಕ್ರಮ. ಕೊಟಬಚ್ಚಲು ಹೊಳೆಗಿಂತ ಬಾವಣಿ ತೋಡು ಸ್ವಲ್ಪ ಚಿಕ್ಕದು.

ಆದರೆ ಈ ತೋಡು ಸಾಗುವ ದಾರಿಯುದ್ದಕ್ಕೂ ‘ನಾಗೇರ್ತಿ ಕಾನು’ ಇರುವುದರಿಂದ, ಈ ತೋಡಿಗೆ ಭೀಮಬಲ. ಕಾನು ಎಂಬ ಪದಕ್ಕೆ ಗೌರವ ತುಂಬಿಕೊಡುವಂಥ ದಟ್ಟವಾದ, ವಿಶಾಲವಾದ ಕಾಡು ಇಲ್ಲಿದ್ದು, ಆ ಪ್ರದೇಶವೆಲ್ಲಾ ದೊಡ್ಡ ದೊಡ್ಡ ಮರಗಳಿಂದ, ಬಳ್ಳಿ ಗಳಿಂದ ತುಂಬಿಹೋಗಿದೆ.

ವಿಶೇಷವೆಂದರೆ, ಕಳೆದ ಹಲವು ದಶಕಗಳಿಂದಲೂ ಅಲ್ಲಿ ಮರಗಳನ್ನು ಕದ್ದು ಮುಚ್ಚಿ ಕಡಿಯುತ್ತಲೇ ಇದ್ದರೂ, ಆ ಕಾಡು ಇಂದಿಗೂ ತಕ್ಕಮಟ್ಟಿಗೆ ಉಳಿದುಕೊಂಡಿದೆ! ಇಂದು ಈ ಕಾಡನ್ನು ಮತ್ತು ಇಂಥ ಹಲವು ಕಾಡುಗಳನ್ನು ರಕ್ಷಿಸಿರುವುದು ಸರಕಾರ ರೂಪಿಸಿರುವ ಕಾನೂನುಗಳು.

ನಾಗೇರ್ತಿ ಕಾನಿನ ಮರಗಳು ನೀಡುವ ಜಲಾಶ್ರಯದಿಂದಾಗಿ, ಬಾವಣಿ ತೋಡಿನಲ್ಲಿ ವರ್ಷ ದ ಬಹುಭಾಗ ನೀರು ಹರಿಯುತ್ತಿರುತ್ತದೆ. ಐದು ನಾಗಕನ್ನಿಕೆಯರ (ನಾಗ ದೇವತೆಗಳ) ಪ್ರಸಿದ್ಧ ಐತಿಹ್ಯದ ಭಾಗವಾಗಿರುವ ನಾಗರತಿಗೆ ಈ ನಾಗೆರ್ತಿ ಕಾನಿನಲ್ಲಿ ಒಂದು ಪುಟ್ಟ ದೇಗುಲವಿರುವುದೂ ವಿಶೇಷ; ಚಾವಣಿಯಲ್ಲದೇ ಆ ದೇಗುಲವನ್ನು ನಿರ್ಮಿಸಬೇಕೆಂಬ ಪುರಾತನ ನಂಬಿಕೆಗೂ ಇಲ್ಲಿ ಗೌರವ ನೀಡಲಾಗಿದೆ (ಇನ್ನಿತರ ನಾಗದೇವತೆಗಳೆಂದರೆ ಮಂದರ್ತಿ, ಚಾರುರತಿ, ದೇವರತಿ, ನೀಲರತಿ).

ನಾಗೇರ್ತಿ ಕಾನು ಎಂಬ ದೇವರ ಕಾಡು, ಅಲ್ಲಿನ್ನೂ ಉಳಿದುಕೊಂಡಿರುವ ಹಸಿರು ಸಿರಿ, ಮರಗಿಡಗಳು, ಆ ಕಾಡಿನಂಚಿನಲ್ಲಿ ಹರಿಯುವ ಬಾವಣಿ ತೋಡು, ಐವರು ನಾಗಕನ್ನಿಕೆ ಯರ ಐತಿಹ್ಯಗಳು- ಇವೆಲ್ಲವೂ ಈ ಪರಿಸರದ ಜನಪದ ಶ್ರೀಮಂತಿಕೆಯನ್ನು ಕಟ್ಟಿ ಕೊಡು ವುದರ ಜತೆಗೆ, ಜಲಸಂರಕ್ಷಣೆಗೂ ಒತ್ತು ನೀಡುವುದನ್ನು ಗಮನಿಸಬಹುದು. ಆ ಮೂಲಕ ಬದುಕಿಗೆ ಅಗತ್ಯ ಎನಿಸಿರುವ ನೀರಿನ ಲಭ್ಯತೆ, ಗೊಬ್ಬರಕ್ಕಾಗಿ ಹಸಿರು ಸೊಪ್ಪಿನ ಲಭ್ಯತೆಗೆ ಅವಕಾಶವಾಗಿದೆ.

ಇದೇ ಕಾಡುದಾರಿಯಲ್ಲಿ ಎದುರಾಗುವ ‘ಆಮರಕಲ್ಲು’ ಎಂಬ ಬೃಹದಾಕಾರದ ಬಂಡೆಯು, ಹಲವು ಐತಿಹ್ಯಗಳ ಆಗರ! ಶತಶತಮಾನಗಳಿಂದ ಅದರ ಮೇಲೆ ಮಳೆ ಸುರಿದು, ಪಾಚಿಗಟ್ಟಿ, ಬಿಸಿಲು ಬಿದ್ದು ಒಣಗಿದ್ದರಿಂದಾಗಿ, ಅದರ ಮೇಲ್ಮೈ ಪೂರ್ಣ ಕಪ್ಪು ಬಣ್ಣ. ನಮ್ಮ ಹಳ್ಳಿ ಯಿಂದ ತಾರಿಕಟ್ಟೆಗೆ ನಡೆದು ಸಾಗುವಾಗ, ನಾವೆಲ್ಲಾ ಒಮ್ಮೊಮ್ಮೆ ಈ ಆಮರಕಲ್ಲನ್ನು ಏರಿ, ಅಲ್ಲಿಂದ ಕಾಣುವ ಭೂದೃಶ್ಯವನ್ನು ನೋಡಲು ಹೋಗುತ್ತಿದ್ದೆವು (ಈಗ ಇದನ್ನು ‘ಅಮರ ಶಿಲೆ’ ಎಂಬ ಸಂಸ್ಕೃತೀಕರಿಸಿದ ಹೆಸರಿನಿಂದ, ತುಸು ತಪ್ಪಾಗಿ ಕರೆಯುವುದುಂಟು!

ಹಳೆಯ ಹೆಸರೇ ಚಂದ, ಅಲ್ಲವೆ?). ದೊಡ್ಡ ಗಾತ್ರದ ಈ ಕಲ್ಲಿನ ಇಳಿಜಾರಿನಂಥ ಮೇಲ್ಮೈ ಯನ್ನು ಏರುತ್ತಾ ಹೋದರೆ, ನೆಲಮಟ್ಟದಿಂದ ಸುಮಾರು ಐವತ್ತು ಅಡಿ ಎತ್ತರದ, ಮಟ್ಟಸ ವಾದ ತುದಿಯನ್ನು ತಲುಪಬಹುದು. ಸುಮಾರು ಮುನ್ನೂರು ಅಡಿ ಉದ್ದ ಮತ್ತು ಇನ್ನೂರು ಅಡಿ ಅಗಲವಿರುವ ಆಮರಕಲ್ಲನ್ನು ಏರುವುದು, ನೋಡುವುದು ಎಂದರೆ ಅದೊಂದು ಅನನ್ಯ ಅನುಭವ.

ಕಲ್ಲಿನ ಮೇಲೇರಿದಂತೆಲ್ಲಾ ವಿಶಾಲವಾದ, ತುಸು ಏರುತಗ್ಗಾದ ಮಟ್ಟಸ ಜಾಗವೂ ಕಾಣು ತ್ತದೆ. ಆ ಎತ್ತರದಲ್ಲಿ ‘ಅಕ್ಕತಂಗಿಯರ ಹೊಂಡ’ ಎಂಬ ಎರಡು ರಚನೆಗಳಿವೆ. ಮೇಲ್ನೋಟ ಕ್ಕೆ ಎರಡು ದೊಡ್ಡ ಹೊಂಡಗಳು ಒಂದರ ಪಕ್ಕ ಒಂದು ಕಾಣಿಸುತ್ತವೆ. ಮತ್ತು ಆ ಹೊಂಡ ಗಳಲ್ಲಿ ಸಾಮಾನ್ಯವಾಗಿ ನೀರು ತುಂಬಿರುತ್ತದೆ!

ಮಳೆಗಾಲದಲ್ಲಿ ಮತ್ತು ಅಕಾಲದಲ್ಲಿ ಸುರಿಯುವ ಮಳೆನೀರು ಅಲ್ಲಿ ಸಂಗ್ರಹಗೊಳ್ಳುವುದು ವಿಶೇಷ. ಪುರಾತನ ಕಾಲದಲ್ಲಿ ಮಾನವನೇ ಮಳೆನೀರನ್ನು ಸಂಗ್ರಹಿಸಲು ಆ ಎರಡು ಗುಂಡಿ ಗಳನ್ನು ಮಾಡಿರಲೂ ಬಹುದು! ಪುರಾತನ ಮಾನವರು ಮಾಡಿರಬಹುದಾದ ಇನ್ನೂ ಕೆಲವು ಕುತೂಹಲಕಾರಿ ರಚನೆಗಳು, ಬಂಡೆಯ ಹಾಸುಗಳು ಆ ಬಂಡೆಯ ಮೇಲೆ ಇವೆ.

ಅಂಥವುಗಳಲ್ಲಿ ಕಳ್ಳರ ಕೋಣೆ, ಕೆಲವು ಕಲ್ಲಿನ ಹಾಸುಗಳು, ಚೌಕಾಕಾರ ಎನ್ನಬಹುದಾದ ಕಲ್ಲುಗಳು ಇವೆ. ಆ ಬಂಡೆಯ ಮೇಲೆ ಕುಳಿತು, ಉತ್ತರತುದಿಯಲ್ಲಿ ಕಾಣಿಸುವ ಕೊಡಚಾದ್ರಿ ಶಿಖರ, ಪೂರ್ವ ದಿಗಂತದ ಉದಕ್ಕೂ ಸಾಗಿರುವ ಸಹ್ಯಾದ್ರಿ ಶ್ರೇಣಿಯನ್ನು ನೋಡುವ ಅನುಭವ ವಿಶಿಷ್ಟ. ಗುಡ್ಡ, ಹಾಡಿ, ಹಕ್ಕಲು, ಬ್ಯಾಣಗಳ ನಡುವೆ ಇರುವ ಈ ಬೃಹತ್ ಕಲ್ಲು, ಆ ಕಲ್ಲಿನ ತುದಿಯಲ್ಲಿರುವ ಎರಡು ಹೊಂಡಗಳು, ಆ ಹೊಂಡಗಳಲ್ಲಿ ಸದಾಕಾಲ ತುಂಬಿ ಕೊಂಡಿರುವ ನೀರು, ‘ಅಕ್ಕತಂಗಿಯರ ಹೊಂಡ’ ಎಂದು ಜನಪದರು ಮಾಡಿರುವ ನಾಮ ಕರಣ, ಆ ಬಂಡೆಯನ್ನೇರಿದಾಗ ಕಾಣಿಸುವ ಸುತ್ತಲಿನ ನಿಸರ್ಗ ಎಲ್ಲವೂ, ಒಂದು ಪ್ರಾಕೃತಿಕ ಕಾವ್ಯದ ಭಾಗವಾಗಿ ನನಗೆ ಕಾಣಿಸುತ್ತವೆ.

ಆಮರಕಲ್ಲು ಮತ್ತು ಅದರ ತುದಿಯಲ್ಲಿರುವ ‘ಅಕ್ಕತಂಗಿಯರ ಹೊಂಡ’ದಲ್ಲಿರುವ ನೀರ ನ್ನು (ಮಳೆಗಾಲದಲ್ಲಿ) ಇಂದಿಗೂ ನೋಡಬಹುದು. ಆದರೆ ಈ ರೀತಿಯ ಪ್ರಾಕೃತಿಕ ಬಂಡೆ ಗಳಿಗೆ, ಈಗಿನ ಆಧುನಿಕ ಮನೋಭಾವದ ಮನುಷ್ಯನಿಂದಲೇ ಅಪಾಯವಿದೆ! ಆಮರಕಲ್ಲಿನ ಸುತ್ತಮುತ್ತಲೆಲ್ಲಾ ಕಲ್ಲುಕ್ವಾರಿಯ ಉದ್ಯಮದ ಚಟುವಟಿಕೆ ನಿರಂತರವಾಗಿ ನಡೆಯುತ್ತಲೇ ಇದೆ.

ಇಲ್ಲಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿರುವ, ತಾರಿಕಟ್ಟೆ ಮದಗದ ಹತ್ತಿರವೇ ಇರುವ ‘ಕಿಸ್ಕಾರ ಜಡ್ ಅರೆಕಲ್’ ಅದಾಗಲೇ ಕಳೆದ ಮೂರ‍್ನಾಲ್ಕು ದಶಕಗಳ ಅವಧಿಯಲ್ಲಿ ಪುಡಿಪುಡಿಯಾಗಿದೆ; ಆಮರಕಲ್ಲಿನ ಗಾತ್ರಕ್ಕೆ ಹೋಲಿಸಬಹುದಾದಷ್ಟು ದೊಡ್ಡದಾಗಿದ್ದ, ಎತ್ತರವಾಗಿದ್ದ ಆ ಕಿಸ್ಕಾರ್ ಜಡ್ ಅರೆಕಲ್ ಎಂಬ ಬೃಹತ್ ಬಂಡೆಯು ಇಂದು ನೆಲಮಟ್ಟ ಕ್ಕಿಳಿದಿದ್ದು, ಅಲ್ಲಿನ ಕಲ್ಲು, ಜಲ್ಲಿ, ಬೇಬಿ ಜಲ್ಲಿ, ಪುಡಿ ಜಲ್ಲಿ ಎಲ್ಲವೂ ಲಾರಿಗಳಲ್ಲಿ ನಿರಂತರ ವಾಗಿ ಸಾಗಣೆಯಾಗಿವೆ; ಈ ರೀತಿಯ ಹಲವು ಬಂಡೆಗಳು, ಕಲ್ಲುಗಳು, ಅರೆಕಲ್ಲುಗಳು ಕಳೆದ ನಾಲ್ಕಾರು ದಶಕಗಳಲ್ಲಿ ಬಹುವೇಗವಾಗಿ ನಾಶವಾಗಿದ್ದು, ನಮ್ಮ ನಾಡಿನ ರಸ್ತೆಗಳಿಗೆ, ಕಟ್ಟಡಗಳಿಗಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ.

ಈಗಲೂ ಉಳಿದುಕೊಂಡಿರುವ ಆಮರಕಲ್ಲಿನಂಥ ಕೆಲವೇ ಕೆಲವು ಬೃಹತ್ ಬಂಡೆಗಳು, ಸಾವಿರಾರು ವರ್ಷ ಹಿಂದಿನ ಪಳೆಯುಳಿಕೆಗಳಾಗಿ, ಉಳಿದುಕೊಂಡಿವೆ; ಕೆಲವು ಜನಪದ ನಂಬಿಕೆಗಳ ಆಗರಗಳಾಗಿವೆ.