Shashidhara Halady Column: ಹೆಬ್ಬಲಸು: ಹೆಸರು ಮಾತ್ರ ಹಿರಿದು, ಗಾತ್ರದಲ್ಲಿ ಕಿರಿದು !
ಹೆಸರಿಗೆ ಹೆಬ್ಬಲಸು, ಅಂದರೆ ಹಿರಿದಾದ ಹಲಸು. ನೋಡಲು ಥೇಟ್ ಹಲಸಿನ ಹಣ್ಣಿನಂ ತೆಯೇ ಇರುತ್ತದೆ, ಆದರೆ ಗಾತ್ರ ಮಾತ್ರ ಬಹು ಕಿರಿದು. ಮಾವಿನ ಹಣ್ಣಿನ ಗಾತ್ರದ ಈ ಹಣ್ಣುಗಳ ಒಳಗೆ, ಹಲಸಿನ ರೀತಿಯ ತೊಳೆಗಳು. ಸಾಕಷ್ಟು ರುಚಿಕರ. ಇಂಥ ಅಪರೂಪದ ಹಣ್ಣುಗಳು ನಮ್ಮ ರಾಜ್ಯದಲ್ಲಿ ಬೆಳೆಯುತ್ತವೆ ಎಂಬುದು ಹೆಮ್ಮೆಯ ವಿಚಾರವೇ ಸರಿ.

ಮುಖ್ಯ ಉಪಸಂಪಾದಕ, ಅಂಕಣಕಾರ ಶಶಿಧರ ಹಾಲಾಡಿ

ಶಶಾಂಕಣ
ಹೆಸರಿಗೆ ಹೆಬ್ಬಲಸು, ಅಂದರೆ ಹಿರಿದಾದ ಹಲಸು. ನೋಡಲು ಥೇಟ್ ಹಲಸಿನ ಹಣ್ಣಿನಂ ತೆಯೇ ಇರುತ್ತದೆ, ಆದರೆ ಗಾತ್ರ ಮಾತ್ರ ಬಹು ಕಿರಿದು. ಮಾವಿನ ಹಣ್ಣಿನ ಗಾತ್ರದ ಈ ಹಣ್ಣು ಗಳ ಒಳಗೆ, ಹಲಸಿನ ರೀತಿಯ ತೊಳೆಗಳು. ಸಾಕಷ್ಟು ರುಚಿಕರ. ಇಂಥ ಅಪರೂಪದ ಹಣ್ಣುಗಳು ನಮ್ಮ ರಾಜ್ಯದಲ್ಲಿ ಬೆಳೆಯುತ್ತವೆ ಎಂಬುದು ಹೆಮ್ಮೆಯ ವಿಚಾರವೇ ಸರಿ. ಇನ್ನೇನು ಬೇಸಗೆಯ ದಿನಗಳು ಹತ್ತಿರವಾದವು, ಹಲವು ರೀತಿಯ ಹಣ್ಣುಗಳನ್ನು ಸ್ವಾಗತಿ ಸಲು ನಾವೆಲ್ಲಾ ಸಿದ್ಧರಾಗಬಹುದು. ನಗರದಲ್ಲಿರುವವರಿಗೆ ಕಲ್ಲಂಗಡಿ, ದೋಸ ಕಾಯಿ, ಮಸ್ಕ್ ಮೆಲನ್ ಮೊದಲಾದ ಹಣ್ಣುಗಳು ಬೇಸಗೆಯಲ್ಲಿ ಹಿತ ವೆನಿಸಬಹುದು, ಅಂಗಡಿ ಗಳಲ್ಲಿ ಖರೀದಿಸಲು ಕೂಡ ಲಭ್ಯ.
ಬಹು ಹಿಂದೆ, ಮರಗಿಡಗಳಿಂದಲೇ ಸುತ್ತುವರಿದಿರುವ ಹಳ್ಳಿಗಳಲ್ಲಿ, ಬೇಸಗೆ ಬಂತೆಂದರೆ ನಾನಾ ವೈವಿಧ್ಯ ಹೊಂದಿರುವ ಹಣ್ಣುಗಳು ಲಭ್ಯವಾಗುತ್ತಿದ್ದುದು ಕಾಡಿನಲ್ಲಿ ಅಥವಾ ಕಾಡಂಚಿನ ತೋಟಗಳಲ್ಲಿ! ಸೂರ್ಯನ ತಾಪ ಮೇಲೇರುತ್ತಿರುವಂತೆಯೇ, ಅತ್ತ ಕಾಡು ಮರಗಳಲ್ಲಿದ್ದ ಹಣ್ಣುಗಳು ಮಾಗುತ್ತಿದ್ದವು, ಬಣ್ಣ ತಳೆಯುತ್ತಿದ್ದವು, ಮಂಗ ಮತ್ತು ಇತರ ಕಾಡುಪ್ರಾಣಿಗಳ ಮತ್ತು ಗ್ರಾಮೀಣರ ಹೊಟ್ಟೆಯನ್ನು ತುಂಬಿಸುತ್ತಿದ್ದವು.
ಇದನ್ನೂ ಓದಿ: Shashidhara Halady Column: ಬ್ರಿಟಿಷರ ವಿರುದ್ದ ಹೋರಾಡಿದ ವೈದ್ಯೆ
ಅಂಥದೊಂದು ಹಣ್ಣೆಂದರೆ ಹೆಬ್ಬಲಸು. ಇದರ ಹೆಸರನ್ನು ವಿಶ್ಲೇಷಿಸುತ್ತಾ ಹೋದರೆ, ವಿರುದ್ಧಾರ್ಥ ಹೊಮ್ಮುತ್ತದೆ! ಹೆಸರಿಗೆ ಹೆಬ್ಬಲಸು, ಅಂದರೆ ಹಿರಿದಾದ ಹಲಸು; ಆದರೆ ಇದರ ಹಣ್ಣು ಗಾತ್ರದಲ್ಲಿ ತುಂಬಾ ಕಿರಿದು. ಕಾಡಿನಲ್ಲಿ ಬೆಳೆಯುವ ಬೃಹತ್ ಗಾತ್ರದ ಮರದಲ್ಲಿ ಸಣ್ಣ ಹಣ್ಣು ಬಿಡುವ ಹೆಬ್ಬಲಿಸಿನ ಪರಿಚಯ ನಮ್ಮ ರಾಜ್ಯದ ಕೆಲವೇ ಪ್ರದೇ ಶದ ಜನರಿಗೆ ಇದೆ.
ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗಗಳನ್ನು ಹೊರತುಪಡಿಸಿದರೆ, ಕಿರಿಯ ಹಣ್ಣಾ ದ ‘ಹೆಬ್ಬಲಸು’ ಅಷ್ಟೊಂದು ಪರಿಚಿತವಲ್ಲ. ಹಲಸಿನ ತಂಗಿಯಂತಿರುವ ಈ ಹಣ್ಣು ರುಚಿ ಕರ; ಇದರ ಮರವು ಹಲಸಿಗಿಂತ ದೊಡ್ಡದು, ಎತ್ತರ; ಹಲಸಿನ ಮರದ, ಎಲೆಗಳ ಮತ್ತು ಹಣ್ಣಿನ ಹೋಲಿಕೆ ಇದೆ. ಹಲಸಿನ ಮರದ ರೀತಿಯೇ, ಹೆಬ್ಬಲಸಿನ ಮರದ ನಾಟಾದಿಂದ ಪೀಠೋಪಕರಣಗಳನ್ನು ಸಹ ತಯಾರಿಸಬಹುದು.

ಹಳದಿ ಮತ್ತು ಹೊಂಬಣ್ಣವನ್ನು ಹೊಂದಿರುವ ಈ ನಾಟಾದಿಂದ ತಯಾರಿಸಿದ ಪೀಠೋ ಪಕರಣಗಳು ಅಕ್ಷರಶಃ ನೂರಾರು ವರ್ಷ ಬಾಳಿಕೆ ಬರುತ್ತವೆ! ನನ್ನ ಬಾಲ್ಯಕಾಲದ ಅತಿ ಪ್ರೀತಿಯ ಹಣ್ಣುಗಳಲ್ಲಿ ಹೆಬ್ಬಲಸೂ ಸೇರಿದೆ. ಜತೆಗೆ ಬಿರು ಬೇಸಗೆಯಲ್ಲಿ, ಶಾಲೆಗಳಿಗೆ ರಜಾ ಇರುವ ಕಾಲದಲ್ಲೇ ಹಣ್ಣಾಗುವ ಹೆಬ್ಬಲಸಿನ ಹಣ್ಣನ್ನು ತಿನ್ನುವುದೆಂದರೆ, ಮಕ್ಕಳಿಗೆ ಖುಷಿ.
ಹಲಸಿನ ಸಿಪ್ಪೆಯನ್ನೇ ಹೋಲುವ, ಹೊರ ಭಾಗದ ಮುಳ್ಳು ಮುಳ್ಳು ಸಿಪ್ಪೆಯನ್ನು ನಿಧಾನ ವಾಗಿ ಕೈಯಿಂದಲೇ ಕಿತ್ತು ತೆಗೆದಾಗ, ಮಧ್ಯದ ‘ಗೂಂಜು’ ಎಂಬ ಭಾಗಕ್ಕೆ ಅಂಟಿಕೊಂಡ ಐವತ್ತಕ್ಕೂ ಹೆಚ್ಚು ತೊಳೆಗಳು; ಕೆಲವು ತಳಿಗಳಲ್ಲಿ ಕೆಲವೇ ತೊಳೆಗಳು ಇರುವುದುಂಟು. ಎಲ್ಲಾ ತೊಳೆಗಳೂ ಬಂಗಾರದ ಬಣ್ಣ; ಒಳಗೊಂದು ಬಿಳಿ ಬೀಜ. ಬಾಯಿಗೆ ಹಾಕಿಕೊಂಡು ತೊಳೆಯ ಭಾಗವನ್ನು ನಿಧಾನವಾಗಿ ಚೀಪಿ ತಿಂದು, ಬೀಜವನ್ನು ಉಗುಳಬೇಕು. ಮಾಗಿದ ಹೆಬ್ಬಲಸು ಸಿಕ್ಕರೆ, ಒಮ್ಮೆಗೇ ನಾಲ್ಕಾರು ಹಣ್ಣುಗಳನ್ನು ತಿನ್ನುವ ಅವಕಾಶ; ಅಷ್ಟೊಂದು ರುಚಿಕರ ಈ ಹಣ್ಣು. ಕಾಡಿನ ಅಂಚಿನಲ್ಲೋ, ತೋಟದ ಬೇಲಿಯ ಭಾಗದಲ್ಲೋ ಅಥವಾ ಕಾಡಿನ ಮಧ್ಯೆಯೋ ತಮ್ಮಷ್ಟಕ್ಕೆ ಬೆಳೆದುಕೊಂಡಿರುವ ಹೆಬ್ಬಲಸಿನ ಮರಗಳಲ್ಲಿ, ಸಣ್ಣ ಪ್ರಮಾಣದ ವೈವಿಧ್ಯ ಇದೆ. ಅಂದರೆ, ಎಲ್ಲಾ ಹೆಬ್ಬಲಸಿನ ಮರಗಳ ಹಣ್ಣುಗಳು ಒಂದೇ ರೀತಿ ಇರುವುದಿಲ್ಲ; ಗಾತ್ರದಲ್ಲಿ, ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ.
ಮರದ ಗಾತ್ರದಲ್ಲಿ ಸಹ ವೈವಿಧ್ಯ ಇದೆ. ಕೆಲವು ಮರಗಳು ಐವತ್ತು ಅಡಿ ಎತ್ತರವಿದ್ದರೆ, ಇನ್ನು ಕೆಲವು ಇಪ್ಪತ್ತರಿಂದ ಮೂವತ್ತು ಅಡಿ ಬೆಳೆದು, ಸುತ್ತಲೂ ರೆಂಬೆ ಕೊಂಬೆಗಳನ್ನು ಹರಡಿಕೊಂಡಿರುತ್ತವೆ. ಕೆಲವು ಮರಗಳ ಹಣ್ಣುಗಳ ರುಚಿ ಅನುಪಮ ಎನಿಸಿದರೆ, ಇನ್ನು ಕೆಲವು ಮರಗಳ ಹಣ್ಣುಗಳು ತುಸು ಸಪ್ಪೆ ಇರಲೂಬಹುದು; ಕೆಲವು ಮರಗಳ ಕಾಯಿಗಳು ಸರಿಯಾಗಿ ಹಣ್ಣಾಗುವುದಿಲ್ಲ ಅಥವಾ ಅತಿಯಾಗಿ ಹಣ್ಣಾಗಿ ತೊಳೆಗಳು ಅಷ್ಟೊಂದು ರುಚಿ ಇರುವುದಿಲ್ಲ. ತೊಳೆಗಳ ಬಣ್ಣದಲ್ಲೂ, ತೊಳೆಗಳ ಸಂಖ್ಯೆಯಲ್ಲೂ ವ್ಯತ್ಯಯ ಇರಬಹುದು.
ನಮ್ಮ ಹಳ್ಳಿ ಮನೆಯ ಹಿಂಭಾಗದ ಮಣ್ಣಿನ ದರೆಯನ್ನು ಹತ್ತಿಹೋದರೆ, ತಕ್ಷಣ ಎರಡು ಭಾರಿ ಗಾತ್ರದ ಹೆಬ್ಬಲಸಿನ ಮರಗಳು ಇದ್ದವು; ಇನ್ನೂ ಸ್ವಲ್ಪ ಮುಂದೆ ನಡೆದರೆ, ಇನ್ನೆರಡು ಮರಗಳಿದ್ದವು. ಮೊದಲು ಸಿಗುವ ಜೋಡಿ ಮರಗಳಿಗೂ, ನಂತರ ಎದುರಾಗುವ ಜೋಡಿಗೂ ಸ್ವರೂಪ, ಗಾತ್ರ, ಹಣ್ಣಿನ ರುಚಿಗಳಲ್ಲಿ ಸಾಕಷ್ಟು ವ್ಯತ್ಯಾಸ. ದರೆಗೆ ಅಂಟಿಕೊಂಡಂತಿರುವ, ಮೊದಲು ಸಿಗುವ ಎರಡೂ ಮರಗಳು ನೋಡಲು ಒಂದೇ ರೀತಿ; ಹೆಚ್ಚು ಕಡಿಮೆ ಅವಳಿ-ಜವಳಿ ಎಂದರೂ ನಡೆದೀತು, ಅವುಗಳ ಸ್ವರೂಪ, ಎತ್ತರ, ಕೊಂಬೆಗಳು ಹರಡಿರುವ ರೀತಿ. ಎರಡೂ ಸುಮಾರು 40ರಿಂದ 50 ಅಡಿ ಎತ್ತರ ಬೆಳೆದುಕೊಂಡಿವೆ; ಆ ಸುತ್ತಲಿನಲ್ಲೇ ಅವೆ ರಡೂ ಬೃಹದಾಕಾರದ ಮರಗಳು.
ನೆಲದಿಂದ ಇಪ್ಪತ್ತು ಅಡಿಯ ತನಕ, ಯಾವುದೇ ಕೊಂಬೆಗಳಿಲ್ಲದೆ ನೇರವಾದ ಬೆಳೆದು ಕೊಂಡು ಹೋಗಿದ್ದ ದಪ್ಪನೆಯ ಕಾಂಡ. ನಂತರ ವಿಶಾಲವಾಗಿ, ದೂರ ದೂರಕ್ಕೆ ಹರಡಿ ಕೊಂಡ ಕೊಂಬೆಗಳು. ಆ ಎರಡೂ ಮರಗಳಲ್ಲಿ ಪ್ರತಿವರ್ಷ ಅಕ್ಷರಶಃ ಸಾವಿರಾರು ಹಣ್ಣು ಗಳು ಬಿಡುತ್ತಿದ್ದವು. ಅಂಬರದಲ್ಲಿ ವಿಶಾಲವಾಗಿ ಹರಡಿಕೊಂಡಿದ್ದ ಆ ಮರದ ರೆಂಬೆಗಳ ತುದಿಯಲ್ಲಿ ಬೆಳೆದಿದ್ದ ಆ ಸಾವಿರಾರು ಕಾಯಿಗಳನ್ನು, ಹಣ್ಣುಗಳನ್ನು ನೋಡುವುದೇ ಒಂದು ಆನಂದ.
ಆದರೆ ಆ ಬೃಹದಾಕಾರದ ಮರಗಳಲ್ಲಿ ಬಿಡುತ್ತಿದ್ದ ರುಚಿಕರ ಹಣ್ಣುಗಳನ್ನು ಕೊಯ್ದು ತಿನ್ನುವುದು ತುಸು ಕಷ್ಟ; ಏಕೆಂದರೆ, ಐವತ್ತು ಅಡಿಗಳಷ್ಟು ನೇರವಾಗಿ ಏರಿಹೋಗಿದ್ದ ಅದರ ಕಾಂಡವನ್ನು ಏರಲು ಎಂಟೆದೆ ಬೇಕು. ಕೊಕ್ಕೆಯಿಂದ ಕಾಯಿಗಳನ್ನು ಕೊಯ್ಯೋಣ ವೆಂದರೆ, ಅಷ್ಟು ಎತ್ತರದ ಕೊಕ್ಕೆಗಳೇ ನಮ್ಮನೆಯಲ್ಲಿ ಇರಲಿಲ್ಲ.
ಆದರೂ, ಆ ಎತ್ತರದ ಮರವನ್ನು ಏರಿ, ಕೌಶಲದಿಂದ ಅದರ ಕಾಯಿಗಳನ್ನು, ಹಣ್ಣು ಗಳನ್ನು ಕಿತ್ತು ತರುವ ಕೆಲವು ಹಮ್ಮೀರರು ನಮ್ಮೂರಿನಲ್ಲಿ ಇದ್ದರು. ಅಷ್ಟು ಎತ್ತರದ ಮರ ಏರಿ, ಹೆಬ್ಬಲಸಿನ ಹಣ್ಣು ಕೊಯ್ಯಲು ಸಾಕಷ್ಟು ಸಿದ್ಧತೆಯೂ ಅಗತ್ಯ; ಹತ್ತಾರು ‘ನ್ಯಾಗಾಳು’ ಬೀಳುಗಳನ್ನು ಕಿತ್ತು, ಒಂದಕ್ಕೊಂದು ಗಂಟು ಹಾಕಿ, ಮೂವತ್ತರಿಂದ ನಲವತ್ತು ಅಡಿ ಉದ್ದದ ದಪ್ಪನೆಯ ದಾರವನ್ನು ತಯಾರಿಸಿಕೊಳ್ಳುತ್ತಿದ್ದರು; ಆ ರೀತಿ ಜೋಡಿಸಿದ ನಂತರ, ದೂರದಿಂದ ನೋಡಿದರೆ ಅದೊಂದು ಉದ್ದನೆಯ, ಕಪ್ಪನೆಯ ವಯರಿನ ರೀತಿ ಕಾಣಿಸು ತ್ತಿತ್ತು.
ಅದನ್ನು ಹಿಡಿದು, ಜಾಗರೂಕತೆಯಿಂದ ಮರವೇರಿ, ಬಂಗಾರದ ಬಣ್ಣದ ಹಣ್ಣನ್ನು ಕಿತ್ತು, ‘ನ್ಯಾಗಾಳು’ ಬಿಳಲಿನ ಒಂದು ತುದಿಗೆ ಕಟ್ಟಿ, ನಿಧಾನವಾಗಿ ಕೆಳಗೆ ಇಳಿಬಿಡುತ್ತಿದ್ದರು. ಕೆಳಗೆ ನಿಂತಿದ್ದ ನಾವೆಲ್ಲಾ ಅದನ್ನು ಕಲೆಕ್ಟ್ ಮಾಡಿಕೊಂಡು, ದಾರವನ್ನು ಪುನಃ ಮೇಲಕ್ಕೆ ಕಳಿಸುತ್ತಿದ್ದೆವು. ಇದೇ ರೀತಿ ಹತ್ತಾರು ಹಣ್ಣುಗಳನ್ನು ಕೆಳಗಿಳಿಸಿದ ನಂತರ, ಮರ ಹತ್ತಿದ ಹಮ್ಮೀರ ಕೆಳಗಿಳಿಯುತ್ತಿದ್ದ.
ನಂತರ, ಎಲ್ಲರೂ ಸುತ್ತಲೂ ಕುಳಿತು ಹೆಬ್ಬಲಸಿನ ಹಣ್ಣಿನ ಸಮಾರಾಧನೆ ನಡೆಸುವ ಕಾರ್ಯಕ್ರಮ! ಹಣ್ಣಾಗಿ, ಮೆತ್ತಗಾದ ಹೆಬ್ಬಲಸಿನ ಹಣ್ಣನ್ನು ಮರದ ತುದಿಯಿಂದ ಕೆಳಗೆ ಎಸೆದರೆ, ಪೂರ್ತಿ ಒಡೆದು, ತೊಳೆಗಳೆಲ್ಲಾ ಮಣ್ಣುಪಾಲಾಗುತ್ತವೆ. ಅಷ್ಟು ಮೆದು ಆ ಹಣ್ಣು; ಅದರ ಮೇಲ್ಭಾಗವು, ಹಲಸಿನ ಹಣ್ಣಿನ ಮೇಲ್ಭಾಗದಂತೆ ಮುಳ್ಳು ಮುಳ್ಳಾಗಿದ್ದರೂ, ನೆಲಕ್ಕೆ ಬಿದ್ದರೆ ತಕ್ಷಣ ಒಡೆದುಹೋಗುವಷ್ಟು ಮೆತ್ತಗಿರುತ್ತದೆ.
ಆದ್ದರಿಂದಲೇ, ನ್ಯಾಗಾಳು ಬಿಳಲನ್ನು ಬಳಸಿ, ಹಣ್ಣುಗಳನ್ನು ಕೆಳಗಿಳಿಸುವ ಸಾಹಸ. ಅಷ್ಟು ಸಾಹಸಪಟ್ಟದ್ದಕ್ಕೂ ಸಾರ್ಥಕ ರುಚಿಕೊಡುವ ಕಾಯಿಗಳನ್ನು ಬಿಡುತ್ತಿದ್ದ ಆ ಎರಡು ಪುರಾ ತನ ಹೆಬ್ಬಲಸಿನ ಮರಗಳು ಇಂದಿಲ್ಲ.
ನೋಡಲು ಒಂದೇ ಸ್ವರೂಪ ಹೊಂದಿದ್ದ ಆ ಎರಡೂ ಎತ್ತರವಾದ ಹೆಬ್ಬಲಸಿನ ಮರಗಳ ಹಣ್ಣುಗಳು ಸಹ ಒಂದೇ ರೀತಿ. ಆ ಎರಡು ಮರಗಳನ್ನು ದಾಟಿ, ತುಸು ಮುಂದಕ್ಕೆ ನಡೆದರೆ ಇನ್ನೆರಡು ಹೆಬ್ಬಲಸಿನ ಮರಗಳಿವೆ. ಇವೆರಡರದ್ದೂ ಅವಳಿ-ಜವಳಿ ಸ್ವರೂಪ; ಎತ್ತರ 30 ಅಡಿಗಿಂತ ಕಡಿಮೆ. ಮೊದಲ ಹದಿನೈದು ಅಡಿಗೇನೇ ರೆಂಬೆ ಕೊಂಬೆಗಳು ಟಿಸಿಲು ಒಡೆದಿ ದ್ದವು; ದಪ್ಪನಾಗಿ ಬೆಳೆದ ಎಲೆಗಳ ಕ್ಯಾನೊಪಿ; ಆರಂಭದಲ್ಲಿ ಹೇಳಿದ, ಬೃಹದಾಕಾರದ ಎರಡು ಮರಗಳಿಂಗಿಂತಲೂ ಈ ಮರಗಳು ಮೇಲ್ನೋಟಕ್ಕ ಸ್ವರೂಪದಲ್ಲಿ ಸಾಕಷ್ಟು ಭಿನ್ನ. ಈ ಎರಡು ಮರಗಳಲ್ಲೂ ಪ್ರತಿವರ್ಷ ಸಾಕಷ್ಟು ಹಣ್ಣುಗಳಾದರೂ, ಇವಕ್ಕೆ ನಾವು ಮಕ್ಕಳು ಮುಗಿಬೀಳುವುದು ಕಡಿಮೆ.
ತುಸು ಚಿಕ್ಕ ಗಾತ್ರದ ಹಣ್ಣು, ರುಚಿ ಪರವಾಗಿಲ್ಲ ಎನ್ನಬಹುದು, ಆದರೆ ಆ ದೊಡ್ಡ ಮರಗಳ ಹಣ್ಣಿನ ರುಚಿಗೆ ಸಾಟಿಯಲ್ಲ, ತೊಳೆಗಳ ಬಣ್ಣವು ತುಸು ಕೆಂಪು ಮಿಶ್ರಿತ. ಕಡಿಮೆ ಎತ್ತರದ ಈ ಎರಡು ಮರಗಳಿಂದ ಕೊಕ್ಕೆಯಲ್ಲಿ ಬಡಿದು ಕಾಯಿ ಕೊಯ್ಯಬಹುದು. ಇದರ ಹತ್ತಿಪ್ಪತ್ತು ಕಾಯಿಗಳನ್ನು ಕೊಕ್ಕೆಯಿಂದ ಕೊಯ್ದು, ಮನೆಯ ಅಂಗಳಕ್ಕೆ ತಂದು, ಹುಲ್ಲು ಕುತ್ರಿ ಅಡಿ ಇರುವ ಜಾಗದಲ್ಲಿ ಇಡುತ್ತಿದ್ದೆವು. ನಾಲ್ಕಾರು ದಿನಗಳಲ್ಲಿ ಹಣ್ಣಾದಾಗ ತಿನ್ನುವ ಕಾರ್ಯಕ್ರಮ.
ಆದರೆ, ಮರದಲ್ಲೇ ಆದ ಹಣ್ಣಿನ ರುಚಿ ಇವಕ್ಕಿಲ್ಲ. ನಮ್ಮೂರಿನ ಕಾಡಿನಂಚಿನಲ್ಲಿ ಅಲ್ಲಲ್ಲಿ ಹೆಬ್ಬಲಸಿನ ಮರಗಳಿವೆ. ಈ ಮರ ಬೆಳೆಯುವುದು ತುಂಬಾ ನಿಧಾನ. ಆದರೆ, ಒಮ್ಮೆ ಬೆಳೆದ ನಂತರ, ಇದರ ಮೋಪಿಗೆ, ಈ ಮರದ ಹಲಗೆಗೆ ಬಹಳ ಬೇಡಿಕೆ. ಬಾಗಿಲು, ಟೇಬಲ್, ಕುರ್ಚಿ ತಯಾರಿಸಲು ಹಲಸಿನ ಮರದ ಹಲಗೆಗಿಂತಲೂ, ಹೆಬ್ಬಲಸಿನ ಮರದ ಹಲಗೆ ಉತ್ತಮ ಎನ್ನುತ್ತಾರೆ ನಮ್ಮೂರಿನವರು.
ಹಲಸಿನ ಕಾಯಿಯಿಂದ ಸಾಂಬಾರು ಮಾಡಿದ ರೀತಿಯಲ್ಲೇ, ಹೆಬ್ಬಲಸಿನ ಕಾಯಿಯನ್ನು ಸಾಂಬಾರು ಮಾಡುವ ಪದ್ಧತಿ ಕೆಲವು ಕುಟುಂಬಗಳಲ್ಲಿದೆ. ಕೆಲವು ದಶಕಗಳ ಹಿಂದಿನ ತನಕ ಹೆಬ್ಬಲಸಿನ ಬೀಜಕ್ಕೆ ವಾಣಿಜ್ಯಕ ಮೌಲ್ಯ ಇತ್ತು; ನಮ್ಮೂರಿನ ಹೆಬ್ಬಲಸಿನ ಮರಗಳಲ್ಲಿ ಹಣ್ಣಾಗುವುದು ಬೇಸಗೆಯಲ್ಲಿ; ಜೂನ್ ಮೊದಲ ವಾರ ಮಳೆ ಬಿದ್ದ ನಂತರ, ಹೆಬ್ಬಲಸಿನ ಹಣ್ಣಿಗೆ ಬೇಡಿಕೆ ಇಲ್ಲ.
ಆದರೆ, ಹಣ್ಣಿನೊಳಗಿರುವ ಪುಟಾಣಿ ಬೀಜಗಳನ್ನು ನಮ್ಮೂರಿನವರು ಮೂಟೆಗಟ್ಟಲೆ ಸಂಗ್ರಹಿಸಿ, ಚೆನ್ನಾಗಿ ಅರೆದು ಅಥವಾ ಜಜ್ಜಿ, ಬೇಯಿಸಿ, ಅದರಿಂದ ಎಣ್ಣೆ ತೆಗೆಯುತ್ತಿದ್ದರು. ಅದು ಬಹು ಶ್ರಮದ ಕೆಲಸ. ಅಡುಗೆಗೂ ಈ ಎಣ್ಣೆಯ ಉಪಯೋಗವಿತ್ತು. ಕಾಡಿನಲ್ಲಿ ದೊರಕುವ ಈ ಹಣ್ಣಿನ ಬೀಜಗಳಿಂದ ಖಾದ್ಯತೈಲ ತಯಾರಿಸುವ ಪದ್ಧತಿ ಈಗ ಸಂಪೂರ್ಣ ಮರೆಯಾಗಿದೆ. ತಲೆ ಕೂದಲಿಗೆ, ಮೈಗೆ, ಕೋಣಗಳ ಬೆನ್ನಿಗೆ ಹಚ್ಚಲು ಸಹ ಇದರ ಎಣ್ಣೆ ಯನ್ನು ಉಪಯೋಗಿಸುವುದುಂಟು.
ಹಲಸಿನ ಮರವನ್ನು ಹೋಲುವ, ಆದರೆ ವಿಭಿನ್ನ ಪ್ರಭೇದದ ಹೆಬ್ಬಲಸು ಕರಾವಳಿ ಮತ್ತು ಮಲೆನಾಡಿಗೆ ಮಾತ್ರ ಸೀಮಿತವಾಗಿದ್ದೇಕೆಂದು ನನಗಿನ್ನೂ ಸ್ಪಷ್ಟವಾಗಿಲ್ಲ; ಬಹುಶಃ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತದೋ ಏನೋ. ಅದರ ದೊಡ್ಡಣ್ಣನಾಗಿ ರುವ ಹಲಸು, ನಮ್ಮ ರಾಜ್ಯದಾದ್ಯಂತ ಹರಡಿದೆ, ಅದರ ಹಣ್ಣು ಜನಪ್ರಿಯವಾಗಿದೆ. ಸಖರಾಯಪಟ್ಟಣ, ಕನಕಪುರ, ಹೊಳೆನರಸೀಪುರ, ಕೋಲಾರ ಮೊದಲಾದ ಕಡೆಯ ಹಲಸಿನ ಹಣ್ಣುಗಳ ರುಚಿ ಬಹು ಪ್ರಖ್ಯಾತ.
ಮಲೆನಾಡಿನ ಹಣ್ಣುಗಳಿಗಿಂತ, ಬಯಲು ಸೀಮೆಯ ಹಣ್ಣುಗಳಿಗೆ ರುಚಿ ಜಾಸ್ತಿ. ಆದರೆ, ಹೆಬ್ಬಲಸು ಮಾತ್ರ ಮಲೆನಾಡನ್ನು ದಾಟಿ ಬಯಲು ಸೀಮೆಗೆ ಬರಲೇ ಇಲ್ಲ; ಆದ್ದರಿಂದಲೇ ನಮ್ಮ ರಾಜ್ಯದ ಬಹುಪಾಲು ಜನರಿಗೆ ಹೆಬ್ಬಲಸು ಇಂದಿಗೂ ಅಪರಿಚಿತ.