ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Vijay Darda Column: ಚೀನಾದ ಗೂಢಚಾರಿಣಿಯ ಕುರುಳಿನಲ್ಲಿ ಸಿಲುಕಿದವರು !

ಅಮೆಜಾನ್, ಮೆಟಾ, ಗೂಗಲ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಎಲ್ಲಾ ಪ್ರಮುಖ ಟೆಕ್ ಕಂಪನಿಗಳು ಎನ್ವಿಡಿಯಾದ ಚಿಪ್‌ಗಳನ್ನು ಬಳಸುತ್ತವೆ. ಇದನ್ನು ಜೆನ್ಸನ್ ಹುವಾಂಗ್ ಮತ್ತು ಇತರ ಇಬ್ಬರು ಸ್ಥಾಪಿಸಿದರು, ಆದರೆ ಇದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಜೆನ್ಸನ್ ಅವರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ.

ಸಂಗತ

ಚೆಲುವೆಗೆ ಮರುಳಾದವರಲ್ಲಿ ಎನ್ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ಮೊದಲಿಗರಲ್ಲ! ಇಂತಹ ಅನೇಕ ಪ್ರಕರಣಗಳಿವೆ. ಚೀನಾದ ಮಹಿಳಾ ಗೂಢಚಾರಿಣಿಯರು ಅಮೆರಿಕದಲ್ಲಿ ತೊಂದರೆ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಚೀನಾ ಇಂತಹ ಚಟುವಟಿಕೆಗಳಲ್ಲಿ ಆಗಾಗ್ಗೆ ತೊಡಗಿಸಿ ಕೊಳ್ಳುತ್ತದೆ. ಆದರೆ ಸಿಕ್ಕಿಬಿದ್ದಾಗ ಅತ್ಯಂತ ಸುಲಭವಾಗಿ ತನ್ನ ಕೈತೊಳೆದುಕೊಳ್ಳುತ್ತದೆ. ಟ್ರಂಪ್ ಕೂಡ ಈ ಪ್ರಕರಣದಲ್ಲಿ ದೋಷಪೂರಿತ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತರೆಂದು ಪರಿಗಣಿಸಲಾಗಿರುವ ಎನ್ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ಅವರು ಆಲಿಸ್ ಹುವಾಂಗ್ ಎಂಬ ಚೀನಾದ ಗೂಢಚಾರಿಣಿಯ ಬಲೆಯಲ್ಲಿ ಸಿಲುಕಿರುವ ಸುದ್ದಿ ಸದ್ಯ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಇದರಿಂದಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಚೀನಾದ ಮಹಿಳಾ ಗೂಢಚಾರಿಣಿಯರ ಮೋಹಕ್ಕೆ ಬಲಿಯಾದವರಲ್ಲಿ ಇದು ಮೊದಲ ಪ್ರಕರಣವಲ್ಲ.‌

ಚೀನಾ ಇಂತಹ ಚಟುವಟಿಕೆಗಳಲ್ಲಿ ಆಗಾಗ್ಗೆ ತೊಡಗಿಸಿಕೊಳ್ಳುತ್ತದೆ. ಆದರೆ ಸಿಕ್ಕಿಬಿದ್ದಾಗ ಅತ್ಯಂತ ಸುಲಭವಾಗಿ ತನ್ನ ಕೈತೊಳೆದುಕೊಳ್ಳುತ್ತದೆ. ಮೊದಲು ಎನ್ವಿಡಿಯಾ ಎಂದರೇನು ಎಂದು ತಿಳಿದುಕೊಳ್ಳೋಣ. ಇದು ಪ್ರಪಂಚದಾದ್ಯಂತ ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್‌ಗಳು (GPUs) ಮತ್ತು ಕೃತಕ ಬುದ್ಧಿಮತ್ತೆ (ಎಐ) ಚಿಪ್‌ಗಳನ್ನು ಪೂರೈಸುವ ಪ್ರಮುಖ ಅಮೆರಿಕನ್ ‌ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದೆ. ಇದನ್ನು ಕೃತಕ ಬುದ್ಧಿಮತ್ತೆ ಕ್ರಾಂತಿಯ ಬೆನ್ನೆಲುಬು ಎಂದು ಕರೆಯಲಾಗುತ್ತದೆ ಮತ್ತು 4.5 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳದೊಂದಿಗೆ ಇದು ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳಲ್ಲಿ ಒಂದಾಗಿದೆ.

ಅಮೆಜಾನ್, ಮೆಟಾ, ಗೂಗಲ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಎಲ್ಲಾ ಪ್ರಮುಖ ಟೆಕ್ ಕಂಪನಿಗಳು ಎನ್ವಿಡಿಯಾದ ಚಿಪ್‌ಗಳನ್ನು ಬಳಸುತ್ತವೆ. ಇದನ್ನು ಜೆನ್ಸನ್ ಹುವಾಂಗ್ ಮತ್ತು ಇತರ ಇಬ್ಬರು ಸ್ಥಾಪಿಸಿದರು, ಆದರೆ ಇದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಜೆನ್ಸನ್ ಅವರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಸಮಸ್ಯೆಯೇನೆಂದರೆ, ಎನ್ವಿಡಿಯಾ ತಯಾರಿಸುವ ಉನ್ನತ ದರ್ಜೆಯ ಚಿಪ್‌ಗಳನ್ನು ಚೀನಾ ಮತ್ತು ಇತರ ಶತ್ರು ರಾಷ್ಟ್ರಗಳಿಗೆ ರಫ್ತು ಮಾಡುವುದನ್ನು ಅಮೆರಿಕ ನಿಷೇಧಿಸಿದೆ. ಆದರೆ, ಸಿಂಗಾಪುರಕ್ಕೆ ಈ ಚಿಪ್‌ಗಳನ್ನು ರಫ್ತು ಮಾಡಲು ಯಾವುದೇ ನಿರ್ಬಂಧ ಗಳಿರಲಿಲ್ಲ.

ಇದನ್ನೂ ಓದಿ: Dr Vijay Darda Column: ಅವರ ಜೀವನದಲ್ಲಿನ ಕತ್ತಲೆಗೆ ಯಾರು ಹೊಣೆಗಾರರು ?

ಆಲಿಸ್ ಹುವಾಂಗ್ ಎಂಬ ಮಹಿಳೆ ಮಾರ್ಚ್ ಮತ್ತು ನವೆಂಬರ್ 2023ರ ನಡುವೆ ಸಿಂಗಾಪುರ ಮೂಲದ ಡೇಟಾ ಸೆಂಟರ್ ಕಂಪನಿ ‘ಮೆಗಾಸ್ಪೀಡ್ ’ನಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಈ ಕಂಪನಿಯ ಮೂಲಕ ಉನ್ನತ ದರ್ಜೆಯ ಚಿಪ್‌ಗಳನ್ನು ಚೀನಾಕ್ಕೆ ರವಾನಿಸಲಾಗುತ್ತಿದೆ ಎಂಬ ಶಂಕೆ ಇತ್ತು. ಅಮೆರಿಕದ ಗುಪ್ತಚರ ಅಧಿಕಾರಿಗಳು ಈ ಚೀನೀ ಮಹಿಳೆ ಆಲಿಸ್ ಹುವಾಂಗ್ ಅವರ ಮೇಲೆ ಶಂಕೆ ವ್ಯಕ್ತಪಡಿಸಿ ಕಣ್ಗಾವಲು ಇರಿಸಿದ್ದರು. ಈ ಅವಧಿಯಲ್ಲಿ, ಅಮೆರಿಕದ ಪ್ರಜೆಯೊಬ್ಬರೊಂದಿಗೆ ಆಕೆ ನಡೆಸಿದ ಸಂವಹನಗಳು ಬೆಳಕಿಗೆ ಬಂದವು.

ಗುಪ್ತಚರ ಮತ್ತು ತಾಂತ್ರಿಕ ಮಾರ್ಗಗಳ ಮೂಲಕ ತನಿಖೆ ನಡೆಸಿದಾಗ, ಆ ಅಮೆರಿಕನ್ ಪ್ರಜೆ ಬೇರಾರೂ ಅಲ್ಲ, ಸ್ವತಃ ಜೆನ್ಸನ್ ಹುವಾಂಗ್ ಎಂದು ತಿಳಿದುಬಂದಿತು. ಗಮನಾರ್ಹವಾಗಿ, ಇಬ್ಬರ ಉಪನಾಮವೂ ಹುವಾಂಗ್ ಎಂದಿದ್ದರೂ ಇವರಿಬ್ಬರಿಗೂ ಯಾವುದೇ ರಕ್ತಸಂಬಂಧವಿಲ್ಲ. ಜೆನ್ಸನ್ ಅವರನ್ನು ಹನಿಟ್ರ್ಯಾಪ್‌ನಲ್ಲಿ (ಮಧುಜಾಲ) ಸಿಲುಕಿಸಲು ಚೀನಾ ಆಲಿಸ್ ಹುವಾಂಗ್ ಅವರನ್ನು ಒಬ್ಬ ಉದ್ಯಮಿಯಂತೆ ಬಿಂಬಿಸಿ ಕಳುಹಿಸಿತ್ತು ಮತ್ತು ಜೆನ್ಸನ್ ಅದಕ್ಕೆ ಬಲಿಯಾದರು.

ಆಲಿಸ್ ಅವರೊಂದಿಗೆ ಸಂಬಂಧ ಹೊಂದಿದ್ದನ್ನು ಅವರು ಒಪ್ಪಿಕೊಂಡಿzರೆ ಮತ್ತು ತಮ್ಮ ಪತ್ನಿಗೆ ದ್ರೋಹ ಬಗೆದಿದ್ದಕ್ಕಾಗಿ ಕ್ಷಮೆಯನ್ನೂ ಯಾಚಿಸಿದ್ದಾರೆ. ಆದಾಗ್ಯೂ, ಜೆನ್ಸನ್ ಅವರು ಪ್ರಣಯ ಸಂಬಂಧ ಹೊಂದಿದ್ದ ಇತರ ಇಬ್ಬರು ಮಹಿಳೆಯರ ಹೆಸರುಗಳು ಈಗ ಹೊರಬಂದಿವೆ. ಇನ್ನೂ ಹೆಚ್ಚಿನ ಹೆಸರುಗಳು ಬೆಳಕಿಗೆ ಬರುವ ಸಾಧ್ಯತೆಯಿದೆ. ಪರಿಣಾಮವಾಗಿ, ಜೆನ್ಸನ್ ಅವರು ಕಂಪನಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ಪ್ರಕರಣದ ಕುತೂಹಲಕಾರಿ ಅಂಶವೆಂದರೆ, ಅವರು ಡೊನಾಲ್ಡ್ ಟ್ರಂಪ್ ಅವರಿಗೆ ತುಂಬಾ ಆಪ್ತರಾಗಿದ್ದರು. ‌

Dr darda 19

ಸುಮಾರು ಆರು ತಿಂಗಳ ಹಿಂದೆ, ಜೆನ್ಸನ್ ಮತ್ತು ಚೀನೀ ಮಹಿಳೆ ಆಲಿಸ್ ನಡುವಿನ ಸಂಬಂಧದ ಬಗ್ಗೆ ಟ್ರಂಪ್ ಅವರಿಗೆ ಮಾಹಿತಿ ನೀಡಲಾಗಿತ್ತು, ಆದರೆ ಅವರು ಆ ವಿಷಯದ ಬಗ್ಗೆ ಅಷ್ಟಾಗಿ ಗಮನ ಹರಿಸಿರಲಿಲ್ಲ. ಎಫ್‌ʼಬಿಐ ತನಿಖೆ ನಡೆಯುತ್ತಿದ್ದರೂ, ಟ್ರಂಪ್ ಅವರು, ನಾನು ಜೆನ್ಸನ್ ಅವರೊಂದಿಗೆ ಮಾತನಾಡಿದ್ದೇನೆ, ಆಕೆ ಚೀನಾದ ಗೂಢಚಾರಿಣಿ ಎಂಬುದು ತನಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಅವರು ಒಳ್ಳೆಯ ವ್ಯಕ್ತಿ ಎಂದು ಪ್ರತಿಕ್ರಿಯಿಸಿದ್ದಾರೆ. ಬಹುಶಃ ಈ ಪ್ರಕರಣವನ್ನು ಮುಚ್ಚಿ ಹಾಕಬಹುದಿತ್ತೇನೋ. ಆದರೆ ಈಗ ಮಾಧ್ಯಮಗಳಲ್ಲಿ ಬಹಿರಂಗಗೊಂಡಿರುವುದರಿಂದ ಜೆನ್ಸನ್ ಪರಿಣಾಮಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆಂದು ತೋರುತ್ತದೆ. ಆಲಿಸ್ ಹುವಾಂಗ್ ಎಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ; ಆಕೆ ಚೀನಾಕ್ಕೆ ಪರಾರಿಯಾಗಿರುವ ಸಾಧ್ಯತೆಯೇ ಹೆಚ್ಚು.

ಚೀನಾದ ಮಹಿಳಾ ಗೂಢಚಾರಿಣಿಯರು ಅಮೆರಿಕದಲ್ಲಿ ತೊಂದರೆ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. 2011 ಮತ್ತು 2015ರ ನಡುವೆ, ಕ್ರಿಸ್ಟೀನ್ ಫ್ಯಾಂಗ್ ಎಂಬ ಚೀನೀ ಮಹಿಳೆ ಮಾಜಿ ಕಾಂಗ್ರೆಸ್ ಸದಸ್ಯ ಎರಿಕ್ ಸ್ವಾಲ್ವೆಲ, ಕನಿಷ್ಠ ಇಬ್ಬರು ಮೇಯರ್‌ಗಳು ಮತ್ತು ಇತರ ಹಲವಾರು ರಾಜಕಾರಣಿಗಳಿಗೆ ಹತ್ತಿರವಾಗುವ ಮೂಲಕ ರಾಜಕೀಯ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿದ್ದರು. ಅದೇ ರೀತಿ, ಚೀನೀ-ಅಮೆರಿಕನ್ ಉದ್ಯಮಿ ಕತ್ರಿನಾ ಲೆಯುಂಗ್, ಇಬ್ಬರು ಹಿರಿಯ ಅಧಿಕಾರಿಗಳೊಂದಿಗೆ ಸಂಬಂಧ ಇಟ್ಟುಕೊಂಡು ಅಮೆರಿಕದ ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ಚೀನಾಕ್ಕೆ ರವಾನಿಸುವ ಮೂಲಕ ಡಬಲ್ ಏಜೆಂಟ್ ಆಗಿ ಕೆಲಸ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು.

ಚೀನಾದ ಮಹಿಳಾ ಗೂಢಚಾರಿಣಿಯರು ಇತರ ದೇಶಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಕೆ.ಪಿ. ಶರ್ಮಾ ಓಲಿ ಅವರು ನೇಪಾಳದ ಪ್ರಧಾನಿಯಾಗಿದ್ದಾಗ, ಅತ್ಯಂತ ಆಕರ್ಷಕ ಚೀನೀ ರಾಯಭಾರಿ ಹೌ ಯಾಂಕಿ ಅವರೊಂದಿಗಿನ ಓಲಿ ಅವರ ಸಂಬಂಧವು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹೌ ಎಷ್ಟರಮಟ್ಟಿಗೆ ಪ್ರಭಾವ ಶಾಲಿಯಾಗಿದ್ದರೆಂದರೆ, ಅವರು ನೇಪಾಳದ ಆಂತರಿಕ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಲು ಪ್ರಾರಂಭಿಸಿದ್ದರು.

ಭಾರತದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡು ನೇಪಾಳ ಬಿಡುಗಡೆ ಮಾಡಿದ ವಿವಾದಾತ್ಮಕ ನಕ್ಷೆಯ ಹಿಂದೆಯೂ ಹೌ ಅವರ ಕೈವಾಡವಿತ್ತು. ಅವರು ಓಲಿ ಅವರ ಖಾಸಗಿ ನಿವಾಸಕ್ಕೂ ನೇರ ಪ್ರವೇಶ ಪಡೆದಿದ್ದರು ಎಂದು ವರದಿಯಾಗಿತ್ತು. ಆ ಸಮಯದಲ್ಲಿ, ಓಲಿ ಅವರು ಹೌ ಯಾಂಕಿ ಅವರ ಕೈಗೊಂಬೆಯಂತೆ ಆಡುತ್ತಿದ್ದಾರೆ ಎಂದು ಎಲ್ಲರೂ ಮಾತನಾಡಿ ಕೊಳ್ಳುತ್ತಿದ್ದರು. ಈ ವಿಷಯದ ಸಂಪೂರ್ಣ ಸತ್ಯಾಸತ್ಯತೆ ಇನ್ನೂ ಅಸ್ಪಷ್ಟವಾಗಿದ್ದರೂ, ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಎಂಬುದು ಲೋಕರೂಢಿಯ ಮಾತು!

ರಕ್ಷಣಾ ಕಾರ್ಯದರ್ಶಿಯನ್ನೇ ತರಾಟೆಗೆ ತೆಗೆದುಕೊಂಡ ಸೈನಿಕನಿಗೆ ಗೌರವ!: ಇದು ಅಮೆರಿಕದಲ್ಲಿ ಮಾತ್ರ ಸಾಧ್ಯ. ನವೆಂಬರ್ 11 ರಂದು ‘ವೆಟರನ್ಸ್ ಡೇ’ (Veterans Day) ಸಂದರ್ಭದಲ್ಲಿ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಅವರ ತಂಡದ ಕೆಲವು ಸದಸ್ಯರು ‘ಟೂಂಬ್ ಆಫ್ ದಿ ಅನ್‌ನೋನ್ ಸೋಲ್ಜರ್’ (Tomb of the Unknown Soldier) ಯುದ್ಧ ಸ್ಮಾರಕದ ಬಳಿ ಸಂಭಾಷಣೆ ನಡೆಸುತ್ತಾ ನಗುತ್ತಿದ್ದರು. ‌

ಅಲ್ಲಿದ್ದ ಥಾಮಸ್ ಇಗ್ಲೇಷಿಯಸ್ ಎಂಬ ಸೈನಿಕ, ಆ ಸ್ಥಳದ ಘನತೆಗೆ ತಕ್ಕಂತೆ ವರ್ತಿಸುವಂತೆ ಮತ್ತು ಮೌನವಾಗಿರುವಂತೆ ಅವರಿಗೆ ಸೂಚಿಸಿದರು. ಮರುದಿನವೇ ಹೆಗ್ಸೆತ್ ಅವರು ಆ ಸೇನಾ ತುಕಡಿಯನ್ನು ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯಾದ ಪೆಂಟಗನ್‌ಗೆ ಆಹ್ವಾನಿಸಿ, ಕರ್ತವ್ಯದಲ್ಲಿದ್ದಾಗ ಶಿಸ್ತು ಮತ್ತು ಘನತೆಯನ್ನು ಕಾಪಾಡಿದ್ದಕ್ಕಾಗಿ ಥಾಮಸ್ ಇಗ್ಲೇಷಿಯಸ್ ಅವರಿಗೆ ‘ಜಾಯಿಂಟ್ ಸರ್ವಿಸ್ ಕಮೆಂಡೇಶನ್ ಮೆಡಲ್’ (Joint Service Commendation Medal) ನೀಡಿ ಗೌರವಿಸಿದರು. ಬೇರೆ ಯಾವುದೇ ದೇಶದಲ್ಲಿ ಒಬ್ಬ ಸೈನಿಕ ರಕ್ಷಣಾ ಕಾರ್ಯದರ್ಶಿಯನ್ನು ಈ ರೀತಿ ಗದರಿಸಿದ್ದರೆ ಏನಾಗುತ್ತಿತ್ತು ಎಂದು ಒಮ್ಮೆ ಊಹಿಸಿ ನೋಡಿ?

ಡಾ.ವಿಜಯ್‌ ದರಡಾ

View all posts by this author