ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ganesh Bhat Column: ಅದೃಷ್ಟದ ಆಟದಲ್ಲಿ ಪಾತಾಳಕ್ಕೆ ಕುಸಿದವರು

ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಯಶಸ್ಸು ಪಡೆದವರನ್ನು ನಾವು ಹಾಡಿಹೊಗಳುವುದು ಸಹಜ. ಆದರೆ ಚಲನಶೀಲ ಪ್ರಪಂಚದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಒಂದು ಕಾಲಘಟ್ಟದಲ್ಲಿ ಯಶಸ್ಸಿನ ತುತ್ತ ತುದಿಗೇರಿದ್ದ ವ್ಯಕ್ತಿಯು, ಇನ್ನೊಂದು ದಿನ ವಿಫಲನಾಗಿ ಪ್ರಪಾತಕ್ಕೆ ಕುಸಿಯುವುದೂ ಇದೆ.

ಹಾವು-ಏಣಿ ಆಟ

ಗಣೇಶ್‌ ಭಟ್‌, ವಾರಣಾಸಿ

ತಮ್ಮ ಗೆಲುವಿಗೆ ಕಠಿಣ ಪರಿಶ್ರಮವೇ ಕಾರಣ ಎಂದು ಯಶಸ್ವಿ ಉದ್ಯಮಿಗಳೆಲ್ಲರೂ ಹೇಳುವು ದುಂಟು. ಆದರೆ ಕೆಲವೊಮ್ಮೆ ಯಶಸ್ಸಿನ ಹಿಂದೆ ‘ಅದೃಷ್ಟ-ದುರದೃಷ್ಟ’ಗಳ ಆಟವೂ ಇರುತ್ತದೆ. ಯಶಸ್ವಿ ಉದ್ಯಮಿಗಳ ಹೆಸರು ಎಲ್ಲ ಕಡೆ ರಾರಾಜಿಸುತ್ತದೆ; ಆದರೆ ಸೋತವರನ್ನು ಕೇಳುವವರೇ ಇರುವುದಿಲ್ಲ. ‘ಗೆಲುವಿಗೆ ಸಾವಿರ ಅಪ್ಪಂದಿರು ಇದ್ದರೆ, ಸೋಲು ಮಾತ್ರ ಅನಾಥ’ ಎನ್ನುವುದು ಅದಕ್ಕೇ ಇರಬೇಕು!

ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಯಶಸ್ಸು ಪಡೆದವರನ್ನು ನಾವು ಹಾಡಿಹೊಗಳುವುದು ಸಹಜ. ಆದರೆ ಚಲನಶೀಲ ಪ್ರಪಂಚದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಒಂದು ಕಾಲ ಘಟ್ಟದಲ್ಲಿ ಯಶಸ್ಸಿನ ತುತ್ತ ತುದಿಗೇರಿದ್ದ ವ್ಯಕ್ತಿಯು, ಇನ್ನೊಂದು ದಿನ ವಿಫಲನಾಗಿ ಪ್ರಪಾತಕ್ಕೆ ಕುಸಿಯುವುದೂ ಇದೆ.

ಉದ್ಯಮ ವಲಯದಲ್ಲಂತೂ ಇದು ಸರ್ವೇಸಾಮಾನ್ಯ. ಅಪಾರ ಪರಿಶ್ರಮವನ್ನು ವಿನಿಯೋಗಿಸಿ ಯೂ ನೂರರಲ್ಲಿ 50 ಉದ್ಯಮಗಳು ಮಾತ್ರವೇ ೫ ವರ್ಷಗಳನ್ನು ಪೂರ್ಣಗೊಳಿಸುತ್ತವೆ, ೧೦ ವರ್ಷ ಗಳು ಕಳೆಯುವಷ್ಟರಲ್ಲಿ ಶೇ.೩೫ರಷ್ಟು ಉದ್ಯಮಗಳು ಮಾತ್ರ ಉಳಿದುಕೊಳ್ಳುತ್ತವೆ ಎಂದಿದೆ ಒಂದು ಸಮೀಕ್ಷೆ.

ನಿರಂತರ ಸೋಲುಣ್ಣುತ್ತಾ ಕೊನೆಗೊಮ್ಮೆ ಗೆಲುವಿನೆಡೆಗೆ ಸಾಗುವುದು ಮತ್ತು ಯಶಸ್ಸಿನ ಶಿಖರದಿಂದ ಪಾತಾಳಕ್ಕೆ ಕುಸಿಯುವುದು ಇವೆರಡೂ ಅದೃಷ್ಟ-ದುರದೃಷ್ಟದ ಹಾವು-ಏಣಿ ಆಟವಲ್ಲದೆ ಬೇರೇ ನಲ್ಲ. ಬೈಜು ರವೀಂದ್ರನ್ ಮತ್ತು ಅವರ ಪತ್ನಿ ದಿವ್ಯಾ ಗೋಕುಲ್‌ನಾಥ್ ಜತೆಯಾಗಿ ೨೦೧೧ರಲ್ಲಿ ‘ಬೈಜುಸ್’ ಹೆಸರಿನ ಆನ್‌ಲೈನ್ ಕಲಿಕಾ ನವೋದ್ಯಮವನ್ನು ಆರಂಭಿಸಿದರು.

ಇದು ೨೦೧೮ರಲ್ಲಿ ತನ್ನ ಮೌಲ್ಯವನ್ನು ಶತಕೋಟಿ ಡಾಲರ್ ಗಳಿಗೇರಿಸಿಕೊಂಡು ‘ಯುನಿಕಾರ್ನ್ ಸ್ಟಾರ್ಟ್-ಅಪ್’ ಎನಿಸಿಕೊಂಡಿತು. ಭವಿಷ್ಯದಲ್ಲಿ ತನಗೆ ಪ್ರತಿಸ್ಪರ್ಧಿಗಳಾಗಬಹುದು ಎನಿಸಿದ ‘ವೈಟ್ ಹ್ಯಾಟ್ ಜೂನಿಯರ್’, ‘ಆಕಾಶ್’ ಮೊದಲಾದ ೧೨ ಸಂಸ್ಥೆಗಳನ್ನು ಬೈಜುಸ್ ಖರೀದಿಸಿತು.

ಇದನ್ನೂ ಓದಿ: Ganesh Bhat Column: ಇಂದಿನ ಭಾರತ ಎಂದಿಗೂ ನೇಪಾಳ-ಬಾಂಗ್ಲಾ ಆಗದು

ಕರೋನಾ ಲಾಕ್‌ಡೌನ್ ವೇಳೆ ಶಾಲಾ-ಕಾಲೇಜುಗಳು ಮುಚ್ಚಿದ್ದಾಗ ಬೈಜುಸ್ ಆನ್‌ಲೈನ್ ತರಗತಿ ಗಳು ಜನಪ್ರಿಯಗೊಂಡು, ಬೈಜುಸ್ ಉತ್ತುಂಗಕ್ಕೇರಿತು; ಹತ್ತನೇ ಮತ್ತು ಹನ್ನೆರಡನೇ ತರಗತಿಗಳ ಪಾಠಗಳನ್ನು ತಪ್ಪಿಸಿಕೊಂಡ ವಿದ್ಯಾರ್ಥಿಗಳು ಬೈಜುಸ್ ಆಪ್‌ಗೆ ಮುಗಿಬಿದ್ದಿದ್ದು ಇದಕ್ಕೊಂದು ಕಾರಣ. ಆ ಕಾಲಘಟ್ಟದಲ್ಲಿ ಸುಮಾರು ೧೫ ಕೋಟಿ ವಿದ್ಯಾರ್ಥಿಗಳು ಬೈಜುಸ್‌ನಲ್ಲಿ ನೋಂದಾಯಿಸಿ ಕೊಂಡಿದ್ದರು.

೨೦೨೨ರಲ್ಲಿ ಬೈಜುಸ್‌ನ ಮೌಲ್ಯವು ೨೨ ಶತಕೋಟಿ ಡಾಲರ್‌ಗಳಿಗೆ ಏರಿ, ಭಾರತದ ಅತಿ ಹೆಚ್ಚು ಮೌಲ್ಯದ ನವೋದ್ಯಮ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಯಿತು ಹಾಗೂ ಕ್ರಮೇಣ 21 ದೇಶಗಳಿಗೆ ವಿಸ್ತರಿಸಲ್ಪಟ್ಟಿತು. ೨೦೧೯ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧಿಕೃತ ಪ್ರಾಯೋಜಕನಾಗಿದ್ದ ಬೈಜುಸ್ ಸುಮಾರು ೩೩೦ ಕೋಟಿ ರುಪಾಯಿಗಳನ್ನು ವ್ಯಯಿಸಿ, ೨೦೨೨ರಲ್ಲಿ ಕತಾರ್‌ನಲ್ಲಿ ನಡೆದ ಫಿಫಾ ಫುಟ್‌ಬಾಲ್ ಪಂದ್ಯಾವಳಿಯ ಪ್ರಾಯೋಜಕತ್ವಕ್ಕೂ ಅಡಿಯಿಟ್ಟಿತು.

ಅದೇ ಸಂದರ್ಭದಲ್ಲಿ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿಯನ್ನು ಅದು ತನ್ನ ಜಾಗತಿಕ ರಾಯಭಾರಿಯನ್ನಾಗಿ ನೇಮಿಸಿಕೊಂಡಿತು. ಆದರೆ ಕರೋನಾ ಭೀತಿ ಕಡಿಮೆಯಾಗುತ್ತಿದ್ದಂತೆ ವಿದ್ಯಾರ್ಥಿಗಳು ಬೈಜುಸ್‌ನಿಂದ ಹಿಂದೆ ಸರಿದು ಮುಖ್ಯವಾಹಿನಿ ಶಿಕ್ಷಣ ಸಂಸ್ಥೆಗಳತ್ತ ಮುಖಮಾಡಿ ದರು. ಹೀಗಾಗಿ, ೨೦೨೩ರಲ್ಲಿ ಬೈಜುಸ್‌ನ ಆದಾಯ ಗಣನೀಯವಾಗಿ ಕುಸಿಯಿತು. ದುಬಾರಿ ಬೆಲೆಗೆ ಖರೀದಿಸಿದ್ದ ಸಂಸ್ಥೆಗಳೆಲ್ಲ ಬೈಜುಸ್‌ಗೆ ಭಾರವಾಗತೊಡಗಿದವು.

Screenshot_6

ಇಂದು ಬೈಜುಸ್ ಧರಾಶಾಯಿಯಾಗಿದೆ. ಆಪ್‌ಗೆ ಇದ್ದ ಬೇಡಿಕೆ ಕುಸಿದಿದ್ದು, ಹೂಡಿಕೆದಾರರು ಹಿಂದೆ ಸರಿದಿದ್ದು, ಲೆಕ್ಕಪತ್ರದಲ್ಲಿನ ಅಕ್ರಮ, ಕೆಟ್ಟ ನಿರ್ವಹಣೆ ಮುಂತಾದವು ಬೈಜುಸ್‌ನ ಇಂದಿನ ಸ್ಥಿತಿಗೆ ಕಾರಣವಾಗಿವೆ. ಅಮೆರಿಕದಲ್ಲಿ ಕಾರ್ಯಾಚರಿಸುತ್ತಿದ್ದ ಬೈಜುಸ್‌ನ ಉಪಸಂಸ್ಥೆಗಳು ಅಲ್ಲಿನ ವಿತ್ತೀಯ ಸಂಸ್ಥೆಗಳಿಗೆ ೧.೫ ಶತಕೋಟಿ ಡಾಲರ್ ಸಾಲದ ಮರುಪಾವತಿಯಲ್ಲಿ ವಿಫಲವಾಗಿ ದಿವಾಳಿಯೆಂದು ಘೋಷಿಸಲ್ಪಟ್ಟಿವೆ.

ಬೈಜುಸ್‌ನ ಮಾತೃಸಂಸ್ಥೆಯಾದ ‘ಥಿಂಕ್ ಆಂಡ್ ಲರ್ನ್’ ಭಾರತದಲ್ಲಿ ದಿವಾಳಿ ಪ್ರಕ್ರಿಯೆಗೆ ಒಳಗಾಗುತ್ತಿದೆ. ಅತಿ ಮಹತ್ವಾಕಾಂಕ್ಷೆಯಿಂದ ಕಂಪನಿಯನ್ನು ಬಹುವೇಗವಾಗಿ ವಿಸ್ತರಿಸಿದ್ದೇ ಹಿನ್ನಡೆಗೆ ಕಾರಣ ಎಂದು ಬೈಜುಸ್ ರವೀಂದ್ರನ್ ಒಪ್ಪಿಕೊಂಡಿದ್ದಾರೆ. ೨ ವರ್ಷಗಳ ಹಿಂದೆ, ದೇಶದ ಬಹು ಯಶಸ್ವಿ ಉದ್ಯಮಿಯೆಂದು ಎಲ್ಲರಿಂದಲೂ ಹೊಗಳಿಸಿಕೊಂಡಿದ್ದ ಬೈಜು ರವೀಂದ್ರನ್ ಬಗ್ಗೆ ಇಂದು ಮಾತನಾಡುವವರೇ ಇಲ್ಲ!

ಒಂದು ಕಾಲದಲ್ಲಿ ಭಾರತದಲ್ಲಿ ಇನೋಸಿಸ್, ವಿಪ್ರೋಗಳಿಗೆ ಸರಿಸಮನಾಗಿದ್ದ ‘ಸತ್ಯಂ ಕಂಪ್ಯೂಟರ‍್ಸ್’ ಕಂಪನಿಯ ಕಥೆಯೂ ಹೀಗೇ ಆಯಿತು. ಬಿ.ರಾಮಲಿಂಗ ರಾಜು ಅವರು ಈ ಕಂಪನಿಯನ್ನು ೧೯೮೭ರಲ್ಲಿ ಹುಟ್ಟು ಹಾಕಿ ಬೆಳೆಸಿದರು. ಆದರೆ ಅತಿಯಾಸೆಗೆ ಬಿದ್ದು, ‘ಕಂಪನಿಯು ಉತ್ತಮ ಲಾಭ ದಲ್ಲಿದೆ’ ಎಂದು ಬಿಂಬಿಸಲು ಸುಳ್ಳುಲಾಭವನ್ನು ತೋರಿಸಿ ಸಿಕ್ಕಿಬಿದ್ದರು.

Screenshot_7ಋ

ಕಂಪನಿಯಲ್ಲಿ ೧.೧ ಶತಕೋಟಿ ಡಾಲರ್‌ನಷ್ಟು ಹಣವು ನಗದು ರೂಪದಲ್ಲಿದೆ ಎಂದು ಬಿಂಬಿಸ ಲಾದ ಸುಳ್ಳು ಲೆಕ್ಕಪತ್ರವನ್ನು ಪರಿಶೀಲನೆ ಮಾಡಿದಾಗ, ಕಂಪನಿಯ ಬಳಿ ೭೮ ದಶಲಕ್ಷ ಡಾಲರ್‌ ನಷ್ಟು ಮಾತ್ರವೇ ನಗದು ಹಣವಿರುವುದು ಕಂಡುಬಂತು. ಈ ಸುಳ್ಳು ಲೆಕ್ಕಪತ್ರವು ಬಯಲಾಗಿ, ೨೦೦೯ರ ಜನವರಿಯಲ್ಲಿ ರಾಮಲಿಂಗರಾಜು ಅವರು ‘ಸತ್ಯಂ’ ಬೋರ್ಡಿನಿಂದ ಪದಚ್ಯುತರಾದರು.

ಸತ್ಯಂ ಷೇರು ಮೌಲ್ಯದಲ್ಲಿ ಭಾರಿ ಕುಸಿತವಾಗಿ ಷೇರುದಾರರು ಒಟ್ಟಾಗಿ ೭,೦೦೦ ಕೋಟಿ ರುಪಾಯಿಗಳಷ್ಟು ನಷ್ಟವನ್ನು ಅನುಭವಿಸಬೇಕಾಯಿತು. ೨೦೦೯ರ ಏಪ್ರಿಲ್‌ನಲ್ಲಿ ‘ಟೆಕ್ ಮಹೀಂದ್ರ’ ಕಂಪನಿಯು ಸತ್ಯಂ ಅನ್ನು ಖರೀದಿಸಿತು. ಆದರೆ ಆರ್ಥಿಕ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ರಾಮಲಿಂಗರಾಜು ಜೈಲುಪಾಲಾಗಬೇಕಾಯಿತು.

ಒಂದು ಕಾಲಕ್ಕೆ ‘ಕಿಂಗ್ ಆಫ್ ಗುಡ್ ಟೈಮ್ಸ್’ ಎಂದೇ ಕರೆಸಿಕೊಂಡಿದ್ದ ಮದ್ಯದ ದೊರೆ ವಿಜಯ್ ಮಲ್ಯರದ್ದೂ ಇದೇ ಕಥೆ. ಮಲ್ಯರು ಮುಟ್ಟಿದೆಲ್ಲಾ ಚಿನ್ನ ಎನ್ನುವ ಕಾಲವೊಂದಿತ್ತು. ಅವರು ಯುನೈಟೆಡ್ ಬ್ರೂವರೀಸ್ ಗ್ರೂಪ್, ಬರ್ಜರ್ ಪೇಂಟ್ಸ್, ಬೆಸ್ಟ್ ಆಂಡ್ ಕ್ರಾಂಪ್ಟನ್, ಕಿಂಗ್‌ಫಿಶರ್ ಏರ್‌ಲೈನ್ಸ್, ಏಷ್ಯನ್ ಏಜ್ ಪತ್ರಿಕೆ, ಸಿನಿ ಬ್ಲಿಟ್ಜ್ ನಿಯತಕಾಲಿಕ, ರಾಯಲ್ ಚಾಲೆಂಜರ‍್ಸ್ ಐಪಿಎಲ್ ಕ್ರಿಕೆಟ್ ಟೀಮ್ ಮುಂತಾದವುಗಳ ಒಡೆತನವನ್ನು ಹೊಂದಿದ್ದಂಥವರು. ಅವರದ್ದು ವಿಲಾಸಿ ಜೀವನಶೈಲಿಯಾಗಿತ್ತು. ‌

‘ಏರ್ ಡೆಕ್ಕನ್’ ಸಂಸ್ಥೆಯನ್ನು ಖರೀದಿಸಿ ಅದಕ್ಕೆ ‘ಕಿಂಗ್‌ಫಿಶರ್ ಏರ್‌ಲೈನ್ಸ್’ ಎಂದು ಮರು ನಾಮಕರಣ ಮಾಡಿದರು ಮಲ್ಯ. ಆದರೆ, ಅವ್ಯವಸ್ಥಿತ ನಿರ್ವಹಣೆಯಿಂದಾಗಿ ನಷ್ಟಕ್ಕೀಡಾದ ಕಿಂಗ್‌ಫಿಶರ್, ಮಲ್ಯರ ಎಲ್ಲ ಸಂಪತ್ತನ್ನೂ ನುಂಗಿ ಕೊನೆಗೆ ಅವರು ಸಾಲದ ಬಲೆಯಲ್ಲಿ ಸಿಲುಕು ವಂತೆ ಮಾಡಿತು. ಭಾರತದ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ರುಪಾಯಿಗಳಷ್ಟು ಸಾಲಮಾಡಿ ಕೊನೆಗೆ ದೇಶಬಿಟ್ಟು ಓಡಿಹೋದ ಮಲ್ಯ, ಈಗ ಇಂಗ್ಲೆಂಡ್‌ನಲ್ಲಿ ತಲೆಮರೆಸಿಕೊಂಡು ಬದುಕು ವಂತಾಗಿದೆ.

ಅವರ ವಿರುದ್ಧ ಭಾರತ ಸರಕಾರವು ಕಾನೂನು ಕ್ರಮಗಳನ್ನು ಕೈಗೊಂಡು ಸುಮಾರು ೧೦,೨೦೦ ಕೋಟಿ ರುಪಾಯಿಗಳನ್ನು ವಸೂಲಿ ಮಾಡಿದ್ದರೂ, ಮಲ್ಯರಿಗೆ ಭಾರತದಲ್ಲಿನ ಜೈಲುಶಿಕ್ಷೆಯ ಭಯವಿನ್ನೂ ತಪ್ಪಿಲ್ಲ. ಅಂದು ರಿಲಯನ್ಸ್ ಸಂಸ್ಥೆಯು ಅಣ್ಣ ಮುಖೇಶ್ ಅಂಬಾನಿ ಮತ್ತು ತಮ್ಮ ಅನಿಲ್ ಅಂಬಾನಿ ನಡುವೆ ಹಂಚಲ್ಪಟ್ಟಾಗ, ಮುಖೇಶ್‌ರಿಗಿಂತಲೂ ತುಸು ಹೆಚ್ಚೇ ಆಸ್ತಿಯನ್ನು ಪಡೆದಿದ್ದ ಅನಿಲ್‌ರ ಇಂದಿನ ಪರಿಸ್ಥಿತಿ ಹೇಗಿದೆ? ಹಾಗೆ ನೋಡಿದರೆ, ಅಪ್ಪ ಧೀರೂಭಾಯ್ ಅಂಬಾನಿಯವರ ನಿಧನಾನಂತರ, ‘ರಿಲಯನ್ಸ್ ಸಾಮ್ರಾಜ್ಯವನ್ನು ಪಾಲು ಮಾಡದೆ ಜತೆಯಾಗಿ ನಡೆಸೋಣ’ ಎಂದು ಮುಖೇಶ್ ಹೇಳಿದರೂ ಪಾಲಿಗಾಗಿ ಅನಿಲ್ ಹಠ ಹಿಡಿದಾಗ, ೨೦೦೫ರ ವರ್ಷದಲ್ಲಿ ತಾಯಿ ಕೋಕಿಲಾ ಬೆನ್ ಮಧ್ಯಸ್ಥಿಕೆಯಲ್ಲಿ ತಲಾ ೪೦ ಸಾವಿರ ಕೋಟಿ ರು.ಗಳಷ್ಟು ಮೌಲ್ಯದ ಸಂಪತ್ತು ಈ ಸೋದರರಿಗೆ ಹಂಚಲ್ಪಟ್ಟಿತು.

ಮುಖೇಶ್ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಾ ಸಾಗಿ, ಸಂಪತ್ತು ೨೦ ಪಟ್ಟು ಹೆಚ್ಚಾಗಿ, ಪ್ರಸ್ತುತ ಅವರ ಆಸ್ತಿಯ ಮೌಲ್ಯವು ೯.೫ ಲಕ್ಷ ಕೋಟಿ ರು.ಗಳನ್ನು ದಾಟಿದೆ. ಆದರೆ, ರಿಲಯನ್ಸ್ ಕಮ್ಯುನಿಕೇಷನ್ಸ್‌ ನಂಥ ಮೌಲ್ಯಯುತ ಸ್ವತ್ತು ಅನಿಲ್‌ರ ಪಾಲಾದರೂ ಅವರು ಕೈಗೊಂಡ ತಪ್ಪು ನಿರ್ಧಾರಗಳು, ಕಾನೂನು ತೊಡಕುಗಳು, ಸಾಲದ ಸಮಸ್ಯೆ, ಆಡ್‌ಲ್ಯಾಬ್ಸ್, ಡ್ರೀಮ್‌ವರ್ಕ್‌ನಂಥ ಯೋಜನೆಗಳು ಆದಾಯ ತರಲು ವಿಫಲವಾಗಿದ್ದು ಮುಂತಾದ ಕಾರಣಗಳಿಂದಾಗಿ ಸಂಪತ್ತು ಕರಗಿ, ದಿವಾಳಿತನ ವನ್ನು ಘೋಷಿಸಿಕೊಳ್ಳುವಂತಾಯಿತು.

ಈಗ ಅನಿಲ್‌ರ ಉದ್ಯಮಗಳು ತುಸು ಚೇತರಿಸಿಕೊಂಡಿದ್ದರೂ, ಸಾಲ ಮೋಸ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಅವರ ಮೇಲೆ ಇತ್ತೀಚೆಗೆ ಜಾರಿ ನಿರ್ದೇಶನಾಲಯದ ದಾಳಿ ಕೂಡ ನಡೆದಿದೆ. ಹತ್ತು ವರ್ಷಗಳ ಮೊದಲು ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಮೊಬೈಲ್ ಫೋನ್‌ಗಳ ಪಟ್ಟಿಯಲ್ಲಿ ೨ನೇ ಸ್ಥಾನದಲ್ಲಿದ್ದ ಮೈಕ್ರೋಮ್ಯಾಕ್ಸ್ ಸಂಸ್ಥೆಯ ಮಾರುಕಟ್ಟೆ ಮೌಲ್ಯಗಳು ನಾಟಕೀಯವಾಗಿ ಕುಸಿದಿವೆ.

ಬದಲಾವಣೆಗೆ ಒಗ್ಗಿಕೊಳ್ಳುವಲ್ಲಿ ತಡವಾದುದು, ಚೀನಿ ಕಂಪನಿಗಳ ಜತೆಗೆ ಸ್ಪರ್ಧಿಸುವಲ್ಲಿ ವಿಫಲ ವಾದುದು, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವನ್ನು ನಿರ್ಲಕ್ಷಿಸಿದ್ದು, ಕಳಪೆ ಸೇವಾ ವ್ಯವಸ್ಥೆ ಮುಂತಾದವು ಮೈಕ್ರೋಮ್ಯಾಕ್ಸ್‌ನ ವೈ-ಲ್ಯಕ್ಕೆ ಕಾರಣವಾದವು. ಹೀಗಾಗಿ, ಒಂದು ಕಾಲಕ್ಕೆ 21000 ಕೋಟಿ ರುಪಾಯಿಗಳಷ್ಟು ಮೌಲ್ಯವನ್ನು ಹೊಂದಿದ್ದ ಮೈಕ್ರೋಮ್ಯಾಕ್ಸ್ ಇಂದು ೧೦೫೦ ಕೋಟಿ ರು.ಗಳಿಗೆ ಕುಸಿದಿದೆ.

ವಿದ್ಯಾಭ್ಯಾಸದ ವೇಳೆ, ಉದ್ಯೋಗ ಸಂದರ್ಶನಗಳಲ್ಲಿ ಸಾಕಷ್ಟು ಸಲ ವಿಫಲರಾಗಿದ್ದ ಚೀನಾದ ಉದ್ಯಮಿ ‘ಜ್ಯಾಕ್ ಮಾ’ ಅವರು ಅಲಿಬಾಬಾ, ಆಂಟ್ ಗ್ರೂಪ್ ಮುಂತಾದ ಉದ್ಯಮಗಳನ್ನು ಸ್ಥಾಪಿಸಿ 42 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತಿನ ಅಧಿಪತಿಯಾದ ಯಶೋಗಾಥೆ ಎಲ್ಲೆಡೆ ಪ್ರಚಾರ ದಲ್ಲಿತ್ತು. ಆದರೆ ಇವರು ೨೦೨೦ರಲ್ಲಿ ಚೀನಾದ ಕಮ್ಯುನಿಸ್ಟ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿ, ತಮ್ಮದೇ ಸಂಸ್ಥೆಗಳ ಒಡೆತನವನ್ನೂ ಕಳೆದುಕೊಳ್ಳಬೇಕಾಯಿತು.

ತಮ್ಮ ಯಶಸ್ಸಿಗೆ ಕಠಿಣ ಪರಿಶ್ರಮವೇ ಕಾರಣ ಎಂದು ಯಶಸ್ವಿ ಉದ್ಯಮಿಗಳೆಲ್ಲರೂ ಹೇಳುವು ದುಂಟು. ಆದರೆ ಕೆಲವೊಮ್ಮೆ ಯಶಸ್ಸಿನ ಹಿಂದೆ ‘ಅದೃಷ್ಟ-ದುರದೃಷ್ಟ’ಗಳ ಆಟವೂ ಇರುತ್ತದೆ. ಒಂದಂತೂ ನಿಜ, ಯಶಸ್ಸನ್ನು ಪಡೆದ ಉದ್ಯಮಿಗಳ ಹೆಸರು ಎಲ್ಲ ಕಡೆ ರಾರಾಜಿಸುತ್ತದೆ; ಆದರೆ ಸೋತವರನ್ನು ಕೇಳುವವರೇ ಇರುವುದಿಲ್ಲ. ಜನಸಾಮಾನ್ಯರ ವಿಚಾರದಲ್ಲೂ ಹೀಗಾಗುವುದಿದೆ. ‘ಗೆಲುವಿಗೆ ಸಾವಿರ ಅಪ್ಪಂದಿರು ಇದ್ದರೆ, ಸೋಲು ಮಾತ್ರ ಅನಾಥ’ ಎನ್ನುವುದು ಅದಕ್ಕೇ ಇರಬೇಕು!

(ಲೇಖಕರು ಹವ್ಯಾಸಿ ಬರಹಗಾರರು)