ಶಶಿಧರ ಕೋಸಂಬೆ
(ನಿಕಟಪೂರ್ವ ಅಧ್ಯಕ್ಷರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು)
ಹೆತ್ತವರಿಗೆ ಬೇಡವಾದ ಕಂದಮ್ಮಗಳು ಹಿರೇಮಠದ ಪಾಲಿಗೆ ಸುದೈವಿಗಳು
20 ಸಾವಿರ ಮಕ್ಕಳಿಗೆ ಅಕ್ಷರ ದಾಸೋಹ
ಮಕ್ಕಳು ಭಗವಂತನ ಸ್ವರೂಪ. ಅವರ ನಿಷ್ಕಲ್ಮಶ ಹೃದಯದಲ್ಲಿ ಭಗವಂತ ಅಡಗಿರುತ್ತಾನೆ. ಅವರ ಅಭಿವೃದ್ಧಿಗೆ ಶ್ರಮಿಸುವುದು ಎಂದರೆ ಭಗವಂತನ ನೈಜ ಸೇವೆ ಮಾಡಿದಂತೆ ಎಂದು ಹಿರಿಯರು, ಜ್ಞಾನಿಗಳು, ಅನುಭಾವಿಗಳು ಹೇಳುತ್ತಾರೆ.
ನಮ್ಮ ಅಚ್ಚುಮೆಚ್ಚಿನ ಗುರುಗಳು, ಶೈಕ್ಷಣಿಕ ಕ್ರಾಂತಿಯ ರೂವಾರಿಗಳು, ಅಕ್ಷರದ ಸಂತ, ಕರುಣೆಯ ಸಾಗರ, ಸಾಮಾಜಿಕ, ಧಾರ್ಮಿಕ ಸುಧಾರಣೆಯ ಹರಿಕಾರರು, ಬಸವತತ್ವದ ನಿಜ ವಾರಸುದಾರರು ಎಂಬೆಲ್ಲ ಬಿರುದಾಂಕಿತಗಳಿಗೆ ಅನ್ವರ್ಥ ವಾಗಿ ತಮ್ಮ ಸಾರ್ಥಕ 75 ವರ್ಷಗಳ ಬದುಕನ್ನು ಸಮಾಜ ಕ್ಕಾಗಿ ಮೀಸಲಿಟ್ಟಿರುವ ಪರಮಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಸಹ ಹಿರಿಯರ ವಾಣಿ ಯಂತೆ ದಲಿತರ, ಪರಿತ್ಯಕ್ತ ಮಕ್ಕಳ ಸೇವೆಯಲ್ಲಿಯೇ ದೇವರನ್ನು ಕಂಡ ಮಹಾನ್ ಚೇತನರಾಗಿ ದ್ದಾರೆ.
ಪರಮ ಪೂಜ್ಯರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ದೇಶದ ನಿಜವಾದ ಸಂಪತ್ತು ರಾಷ್ಟ್ರದ ಆರ್ಥಿಕತೆ ಅಲ್ಲ; ಬದಲಾಗಿ ಆ ರಾಷ್ಟ್ರದಲ್ಲಿರುವ ಮಾನವ ಸಂಪನ್ಮೂಲಗಳಾದ ಮಕ್ಕಳ ಸಂಖ್ಯೆಯ ಮೇಲೆ ನಿಂತಿದೆ. ನಿಜಾರ್ಥದಲ್ಲಿ ಮಕ್ಕಳೇ ದೇಶದ ಆಸ್ತಿ. ಪರಿತ್ಯಕ್ತ ಮಕ್ಕಳ ಪೋಷಣೆ: ಒಂದು ದೇಶದ ಸಂಪತ್ತೇ ಆಗಿರುವ ಮಕ್ಕಳಿಗೆ ಬಾಲ್ಯದಿಂದಲೇ ಗುಣಾತ್ಮಕ ಶಿಕ್ಷಣ, ಉತ್ತಮ ಸಂಸ್ಕಾರ, ಮೌಲ್ಯಯುತ ವಾತಾವರಣಗಳನ್ನು ಕಲ್ಪಿಸಿ ಅವರ ವಿಕಾಸಕ್ಕೆ, ಪ್ರಗತಿಗೆ ಶ್ರಮಿಸಿದಲ್ಲಿ ಮಾತ್ರ ಸಮಾಜ, ರಾಜ್ಯ, ರಾಷ್ಟ್ರದ ತ್ವರಿತ ಪ್ರಗತಿ ಸಾಧ್ಯ.
ಇದನ್ನು ಚೆನ್ನಾಗಿ ಅರಿತಿರುವ ಡಾ.ಬಸವಲಿಂಗ ಪಟ್ಟದ್ದೇವರು, ಹೆತ್ತವರು ನಾನಾ ಕಾರಣಗಳಿಗಾಗಿ ತಮಗೆ ಬೇಡವೆಂದು ತಿಪ್ಪೆ ಗುಂಡಿಯಲ್ಲಿ, ಗಿಡಗಂಟಿಗಳ ಕೆಳಗೆ, ರಸ್ತೆಗಳ ಅಕ್ಕಪಕ್ಕ, ರೈಲ್ವೆ, ಬಸ್ ನಿಲ್ದಾಣ ಗಳಲ್ಲಿ ಬಿಸಾಡಿ ಹೋದ ಪರಿತ್ಯಕ್ತ ಮಕ್ಕಳನ್ನು ಪಾಲನೆ, ಪೋಷಣೆ ಮಾಡಿ ಬೆಳೆಸಲು ನ್ಯಾಯಾ ಲಯದ ಕಟಕಟೆ ಏರಿ, ಮಕ್ಕಳನ್ನು ತಮ್ಮ ಸುಪರ್ದಿಗೆ ಪಡೆದು ಕರಡ್ಯಾಳದ ದತ್ತು ಕೇಂದ್ರದಲ್ಲಿ ಈ ಮಕ್ಕಳಿಗೆ ಅನ್ನ, ಆಶ್ರಯ, ಗುಣಾತ್ಮಕ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಅವರ ಬಾಳನ್ನು ಬೆಳಗಿದ್ದಾರೆ. ಈ ಮೂಲಕ ಸಮಾಜಕ್ಕೆ ಮಕ್ಕಳ ರೂಪದಲ್ಲಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅನ್ನ, ಆಶ್ರಯ, ಶಿಕ್ಷಣ: ಪರಿತ್ಯಕ್ತ, ನಿರ್ಗತಿಕ ಮಕ್ಕಳ ಪಾಲನೆ, ಪೋಷಣೆ ಮತ್ತು ಈ ಮಕ್ಕಳ ಬದುಕು ರೂಪಿಸಲು ಅವರು ಪಟ್ಟಿರುವಂಥ ಪರಿಶ್ರಮವು ಜಗತ್ತೇ ಮೆಚ್ಚುವಂಥದ್ದು.
ಇದನ್ನೂ ಓದಿ: Lokesh Kayarga Column: ಬೈಕ್ ಟ್ಯಾಕ್ಸಿಗೆ ಬೇಕು ನಿಯಮದ ಲಗಾಮು !
ಹೆತ್ತವರು, ಸಮಾಜವು ತನಗೆ ಬೇಡವೆಂದು ಹೇಳಿ, ಕರುಳ ಬಳ್ಳಿ ಸಂಬಂಧವನ್ನು ಕಡಿದು ವಿವಿಧ ಸ್ಥಳಗಳಲ್ಲಿ ಎಸೆದ ಎಳೆ ಕಂದಮ್ಮಗಳನ್ನು ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿ ಅವರು ಹಿರೇಮಠ ಸಂಸ್ಥಾನದ ಸ್ವದೇಶಿ ದತ್ತು ಕೇಂದ್ರಕ್ಕೆ ನಿಯಮಾನುಸಾರ ಒಪ್ಪಿಸಿದರು. ಈ ಮಕ್ಕಳಿಗೆ ತಮ್ಮಲ್ಲಿ ಇರುವಷ್ಟು ದಿನ ಅನ್ನ, ಆಶ್ರಯ, ಗುಣಾತ್ಮಕ ಶಿಕ್ಷಣ ನೀಡುವುದರ ಮೂಲಕ ಸುಂದರ, ಭವ್ಯ ಬದು ಕು ರೂಪಿಸುತ್ತಿದ್ದಾರೆ ಪರಮಪೂಜ್ಯರು. ಸುದೈವಿ ಮಕ್ಕಳ ಜನ್ಮದಿನ: ಪರಿತ್ಯಕ್ತ ಮಕ್ಕಳ ಬದುಕು ರೂಪಿಸುವುದೇ ನಿಜವಾದ ಮಾನವೀಯ ಕಾರ್ಯ.
ಇದೇ ಶರಣ ಧರ್ಮ ಎಂದರಿತ ಬಸವಲಿಂಗ ಪಟ್ಟದ್ದೇವರು ಈ ಮಕ್ಕಳ ಬಾಳಿನಲ್ಲಿ ‘ನಾನು ಅನಾಥ’ ಎಂಬ ಭಾವ ಯಾವತ್ತೂ ಬರಬಾರದೆಂದು ಪ್ರತಿವರ್ಷ ತಮ್ಮ ಜನ್ಮದಿನವನ್ನು ಸುದೈವಿ ಮಕ್ಕಳ ಜನ್ಮದಿನವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಆದರ್ಶ ಸಂದೇಶ ರವಾನಿಸಿದ್ದಾರೆ.
ಕಾನೂನುಬದ್ಧ ದತ್ತು: ಸರಕಾರದ ಮಾರ್ಗದರ್ಶಿ ಸೂತ್ರಗಳು ಹಾಗೂ ದತ್ತು ಕಾಯಿದೆ ಪ್ರಕಾರ ಸ್ವದೇಶಿ ದತ್ತು ಕೇಂದ್ರದಲ್ಲಿನ ಸುಮಾರು ನೂರು ಮಕ್ಕಳನ್ನು, ಅರ್ಹ ಪೋಷಕರಿಗೆ ನ್ಯಾಯಾಽಶರ ಹಾಗೂ ಜಿಲ್ಲಾಧಿಕಾರಿಯವರ ಮುಖಾಂತರ ನೀಡಿರುವುದು ವಿಶೇಷ. ಅದೇ ರೀತಿ ವಿಶೇಷಚೇತನ ಮಕ್ಕಳ ಉಪಚಾರದ ಜತೆಗೆ ವಿಶೇಷ ಬುದ್ಧಿಮಾಂದ್ಯ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೆಂಗಳೂರಿನ ಖ್ಯಾತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಅವರಿಂದ ಆಪ್ತ ಸಮಾಲೋಚನೆ ಮಾಡಿಸು ತ್ತಿರುವ ಕಾರ್ಯ ಅತ್ಯಂತ ಮಹತ್ವದಾದದ್ದು.
ಈ ಪೈಕಿ ದಿವ್ಯಾಂಜಲಿ ಎಂಬ ಹುಡುಗಿ ಕೆಲ ತಿಂಗಳುಗಳ ಹಿಂದೆ ಝೀ ಟಿವಿಯ ಮಹಾನಟಿ ಸ್ಪರ್ಧೆಗೆ ಆಯ್ಕೆ ಆಗುವ ಮೂಲಕ ಪಟ್ಟದ್ದೇವರ ಸಾಮಾಜಿಕ ಕಾರ್ಯ ಎಷ್ಟೊಂದು ಎತ್ತರದ್ದು ಎನ್ನುವುದಕ್ಕೆ ತಾಜಾ ನಿದರ್ಶನ ಆಗಿದ್ದಾಳೆ.
ಹಿರೇಮಠ ಸಂಸ್ಥಾನ ವಿದ್ಯಾಪೀಠ: 1992ರಲ್ಲಿ 40 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರಿಂದ ಆರಂಭಿ ಸಿದ ಈ ಶಿಕ್ಷಣ ಸಂಸ್ಥೆಯಲ್ಲಿ ಇಂದು ಸುಮಾರು 20 ಸಾವಿರ ವಿದ್ಯಾರ್ಥಿಗಳು, 2 ಸಾವಿರ ಶಿಕ್ಷಕರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೂಜ್ಯರ ದೂರದೃಷ್ಟಿ, ದೃಢ ಸಂಕಲ್ಪ, ಉದಾತ್ತ ಯೋಚನೆ, ಶೈಕ್ಷಣಿಕ ಕ್ರಾಂತಿಯ ಫಲವಾಗಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಮತ್ತು ಶಿಕ್ಷಕ ಸಿಬ್ಬಂದಿಯ ಪಾಲಿಗೆ ಹಿರೇಮಠ ಸಂಸ್ಥಾನ ವಿದ್ಯಾಪೀಠವು ವರದಾನವಾಗಿ ಪರಿಣಮಿಸಿದೆ. ಸಾವಿರಾರು ಜನ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ದೇಶದ ವಿವಿಧ ಕಡೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪೂಜ್ಯರ ಕಾರ್ಯ ಅಸಂಖ್ಯ: ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಜೀವನದುದ್ದಕ್ಕೂ ಕೈಗೊಂಡಿ ರುವ ಅಸಂಖ್ಯ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಪ್ರಗತಿಪರ, ದಲಿತೋದ್ಧಾರಕ, ಮಾನವೀಯ, ರಚನಾತ್ಮಕ ಕಾರ್ಯಗಳು ಸಮಾಜದ ಸರ್ವರಿಗೂ ಮಾದರಿ. ಬಸವಲಿಂಗ ಪಟ್ಟದ್ದೇವರು ಬಸವಾದಿ ಶರಣರು ತೋರಿರುವ ಮಾರ್ಗ ಮತ್ತು ತತ್ವಗಳಲ್ಲಿ ನಂಬಿಕೆ ಇಟ್ಟು, ಬದುಕುತ್ತಿರುವ ಮಹಾನ್ ಕರುಣಾಮಯಿಗಳು. ಇವರು ಹಿರೇಮಠದ ಪೀಠಾಽಪತಿ ಆದಾಗಿನಿಂದ ಇಲ್ಲಿಯವರೆಗೆ ಕೈಗೊಂಡಿ ರುವ ಸಮಾಜಮುಖಿ ಕಾರ್ಯಗಳು ಅಸಂಖ್ಯ.
ಶ್ರೀಗಳು ಬದುಕಿರುವ ರೀತಿ ಸಮಾಜದ ಸರ್ವರಿಗೂ ಮಾದರಿ. ಪಟ್ಟದ್ದೇವರು ಅವರು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಲ್ಲಿಸಿದ ದಣಿವರಿಯದ ಆದರ್ಶ ಸೇವೆಯನ್ನು ಪರಿಗಣಿಸಿ ರಾಜ್ಯ ಸರಕಾರವು ಅವರ ಜನ್ಮದಿನವಾದ ಆಗಸ್ಟ್ 25ನ್ನು ಪರಿತ್ಯಕ್ತ ಮಕ್ಕಳ ಜನ್ಮದಿನವನ್ನಾಗಿ ಘೋಷಿಸಬೇಕು.
ಹಲವು ಪ್ರಶಸ್ತಿ, ಪುರಸ್ಕಾರ
ಬಸವಲಿಂಗ ಪಟ್ಟದ್ದೇವರ ಸಾಮಾಜಿಕ, ಮೇರು ವ್ಯಕ್ತಿತ್ವದ ಮಾನವೀಯ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ದಲಿತೋದ್ಧಾರಕ, ಪ್ರಗತಿಪರ ಕಾರ್ಯಗಳನ್ನು ಪರಿಗಣಿಸಿ ಗುಲಬರ್ಗಾ ವಿಶ್ವವಿದ್ಯಾ ಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ರಾಜ್ಯ ಸರಕಾರದಿಂದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವ ಪುರಸ್ಕಾರ, ಕರ್ನಾಟಕ ಏಕೀಕರಣ ಪ್ರಶಸ್ತಿ ಲಭಿಸಿವೆ. ಈಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಕೂಡ ಪಟ್ಟದ್ದೇವರಿಗೆ ‘ನಾಡೋಜ’ ಗೌರವ ನೀಡಿ ಆ ಪ್ರಶಸ್ತಿಯ ಘನತೆ ಯನ್ನು ಇನ್ನಷ್ಟು ಎತ್ತರಕ್ಕೆ ಹೆಚ್ಚುವಂತೆ ಮಾಡಿದೆ.