ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವು ಸಾಧಿಸಿರುವ ಪ್ರಗತಿಯನ್ನು ವಿಶ್ವ ಸಮು ದಾಯದ ಮುಂದೆ ಅನಾವರಣ ಮಾಡಲು ಮಹತ್ತರ ವೇದಿಕೆಯಾಗಿದ್ದ ಸಮ್ಮೇಳನದ ಆವರಣಕ್ಕೆ ಯುವ ಕಾಂಗ್ರೆಸ್ಸಿಗರು ಪ್ರವೇಶಿಸಿ ಪ್ರತಿಭಟನೆ ಮಾಡುವ ಔಚಿತ್ಯ ವೇನಿತ್ತು? ಇದರ ಹಿಂದಿದ್ದುದು ಸರಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶ ಮಾತ್ರವಷ್ಟೇ!
ಎಐ ಇಂಪ್ಯಾಕ್ಟ್ ಶೃಂಗಸಭೆ ನಡೆಯುತ್ತಿದ್ದ ‘ಭಾರತ ಮಂಟಪಂ’ಗೆ ಯುವ ಕಾಂಗ್ರೆಸ್‌ನ ಹತ್ತು ಮಂದಿ ಕಾರ್ಯಕರ್ತರು ನುಗ್ಗಿ ತಮ್ಮ ಶರ್ಟ್ ಮತ್ತು ಬನಿಯನ್ ತೆಗೆದು ಅರೆ ಬೆತ್ತಲೆಯಾಗಿ, ಪ್ರಧಾನಿ ಮೋದಿಯವರ ವಿರುದ್ಧ ಪ್ರತಿಭಟನೆ ಮಾಡಿದರು.
‘ಇಂಡೋ-ಯುಎಸ್ ವ್ಯಾಪಾರ ಒಪ್ಪಂದದ ವಿಷಯದಲ್ಲಿ ಮೋದಿಯವರು ರಾಜಿಯಾಗಿ ದ್ದಾರೆ’ ಎಂದು ಕೂಗುತ್ತಾ ಆವರಣದಲ್ಲಿ ಗೊಂದಲ ಸೃಷ್ಟಿಸಿದರು. ಈ ಹತ್ತು ಜನ ಯುವ ಕಾಂಗ್ರೆಸ್ ಪದಾಧಿಕಾರಿಗಳಲ್ಲಿ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿಗಳು, ರಾಷ್ಟ್ರೀಯ ಸಂಯೋಜಕರು ಹಾಗೂ ಬಿಹಾರ ಮತ್ತು ಯುಪಿ ರಾಜ್ಯಗಳ ಪದಾಧಿಕಾರಿಗಳು ಸೇರಿದ್ದರು.
ಎಐ ಇಂಪ್ಯಾಕ್ಟ್ ಶೃಂಗಸಭೆಗೂ ಇವರು ಕೈಗೊಂಡ ಪ್ರತಿಭಟನೆಯ ವಿಷಯಕ್ಕೂ ಸಂಬಂಧ ವೇ ಇರಲಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಗಾಂಧಿ-ನೆಹರು ಅವರ ಕಾಂಗ್ರೆಸ್ ಪಾರ್ಟಿಯು ಮೋದಿಯವರನ್ನು ವಿರೋಧಿಸುವ ಆತುರದಲ್ಲಿ ಅಂತಾ ರಾಷ್ಟ್ರೀಯ ಸಮ್ಮೇಳನದಲ್ಲಿ ಬಟ್ಟೆ ಬಿಚ್ಚುವ ಕೀಳು ಮಟ್ಟಕ್ಕೆ ತಲುಪಿದ್ದು ದುರದೃಷ್ಟಕರ ಸಂಗತಿ. ಈ ಯುವಕರು ದೇಶ-ವಿದೇಶಗಳಿಂದ ಬಂದಿದ್ದ ಪ್ರತಿನಿಧಿಗಳ ಮುಂದೆ ತಮ್ಮ ಬಟ್ಟೆ ಬಿಚ್ಚಿ ದೇಶದ ಗೌರವಕ್ಕೆ ಮಸಿ ಬಳಿದರು.
ಈ ಸಮ್ಮೇಳನವು ಬಿಜೆಪಿಯ ಪಕ್ಷದ್ದಾಗಿರಲಿಲ್ಲ, ಬದಲಿಗೆ ದೇಶದ ಯುವಜನತೆಯ ಭವಿಷ್ಯ ರೂಪಿಸುವ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಮಹತ್ತರ ಹೆಜ್ಜೆ ಇಡುವ ಸಲುವಾಗಿ ಇದನ್ನು ಆಯೋಜಿಸಲಾಗಿತ್ತು. ಈಗಾಗಲೇ ಈ ಕ್ಷೇತ್ರದಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಅಮೆರಿಕ ಮತ್ತು ಚೀನಾದೊಂದಿಗೆ ಸೆಣಸಬೇಕಾಗಿದೆ. ಆದ್ದರಿಂದ ನಮ್ಮ ಸಾಮರ್ಥ್ಯ ತೋರಿಸಲು ಸಮ್ಮೇಳನವು ಯಶಸ್ವಿಯಾಗಬೇಕಿತ್ತು.
ಇದನ್ನೂ ಓದಿ: Prakash Shesharaghavachar Column: ಇನ್ನಾದರೂ ಆತ್ಮಾವಲೋಕನ ಮಾಡಿಕೊಂಡರೆ ಒಳಿತು
ವಿಶ್ವದ ಇದೊಂದು ಬೃಹತ್ ಸಮ್ಮೇಳನವಾಗಿತ್ತು. 2023ರಲ್ಲಿ ನಡೆದ ‘ಯುಕೆ ಎಐ ಸೇಫ್ಟಿ ಸಮಿಟ್’ ಅಥವಾ 2024ರಲ್ಲಿ ನಡೆದ ‘ಎಐ ಸಿಯೋಲ್ ಸಮಿಟ್’ಗಳಂಥ ಹಿಂದಿನ ಜಾಗತಿಕ ಕಾರ್ಯಕ್ರಮಗಳನ್ನು ಮೀರಿಸಿ ಹೊಸ ದಾಖಲೆಗಳನ್ನು ಬರೆಯಿತು. 118 ದೇಶಗಳ ನಿಯೋಗಗಳು, 20ಕ್ಕೂ ಹೆಚ್ಚು ದೇಶಗಳ ಮುಖ್ಯಸ್ಥರು, ಉದ್ಯಮದ ಮುಖಂಡರು, 100ಕ್ಕೂ ಹೆಚ್ಚು ಜಾಗತಿಕ ಸಿಇಒ, ಸಿಎಫ್ಒಗಳು ಮತ್ತು 500ಕ್ಕೂ ಹೆಚ್ಚು ಎಐ ತಜ್ಞರು, ಸ್ಟಾರ್ಟ್ ಅಪ್‌ಗಳು, 600ಕ್ಕೂ ಹೆಚ್ಚು ಉನ್ನತ ಸ್ಟಾಟ್ಅಪ್‌ಗಳು ತಮ್ಮ ಎಐ ಪರಿಹಾರಗಳನ್ನು ಪ್ರದರ್ಶಿಸಿದವು.
2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಚರ್ಚೆಗಳಲ್ಲಿ ಭಾಗವಹಿಸಿದ್ದರು. ಗೂಗಲ್‌ನ ಸುಂದರ್ ಪಿಚೈ, ‘ಓಪನ್ ಎಐ’ನ ಸ್ಯಾಮ್ ಆಲ್ ಮನ್, ಎನ್ವಿಡಿಯಾದ ಜೆನ್ಸನ್ ಹುವಾಂಗ್‌ರಂಥ ಪ್ರಮುಖರು ಭಾಗವಹಿಸಿದ್ದರು. ಈ ಸಮ್ಮೇಳನವು ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ 250 ಬಿಲಿಯನ್ ಡಾಲರ್ ಹೂಡಿಕೆಯ ಭರವಸೆ ಮತ್ತು ಡೀಪ್-ಟೆಕ್ ವೆಂಚರ್ ಕ್ಯಾಪಿಟಲ್ ಗಾಗಿ 20 ಬಿಲಿಯನ್ ಡಾಲರ್ ಹೂಡಿಕೆಗೆ ಸಾಕ್ಷಿಯಾಯಿತು.
‘ಡೆಲ್ಲಿ ಡಿಕ್ಲರೇಷನ್’ ಮೂಲಕ ‘ಜವಾಬ್ದಾರಿಯುತ ಎಐ’ ಕುರಿತು 89 ದೇಶಗಳು ಸಹಿ ಹಾಕಿ ಐತಿಹಾಸಿಕ ಒಮ್ಮತಕ್ಕೆ ಬಂದವು. ಭಾರತದ ಎಐ ಕ್ರಾಂತಿಗೆ ಮುನ್ನುಡಿ ಬರೆಯಲು ಮತ್ತು ಭಾರತವು ಸಾಧಿಸಿರುವ ಪ್ರಗತಿಯನ್ನು ವಿಶ್ವ ಸಮುದಾಯದ ಮುಂದೆ ಅನಾವರಣ ಮಾಡಲು ಇದೊಂದು ಮಹತ್ತರ ವೇದಿಕೆಯಾಗಿತ್ತು.
ಇಂಥ ಸಮ್ಮೇಳನದೊಳಗೆ ಯುವ ಕಾಂಗ್ರೆಸ್ಸಿಗರು ಪ್ರವೇಶಿಸಿ ಪ್ರತಿಭಟನೆ ಮಾಡುವ ಔಚಿತ್ಯ ವೇನಿತ್ತು? ಇದರ ಹಿಂದಿದ್ದುದು ಸರಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶ ಮಾತ್ರ ವಷ್ಟೇ! ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ ಹಾಗೂ ರಾಜಕೀಯ ಪಕ್ಷಗಳ ಹಕ್ಕು ಸಹ.
ಆದರೆ ಪ್ರತಿಭಟನೆ ಮಾಡುವ ಮುನ್ನ ಪೊಲೀಸರ ಅನುಮತಿ ಪಡೆದು ಮಾಡುವುದು, ಅವರು ನಿಗದಿ ಪಡಿಸಿದ ಸ್ಥಳದಲ್ಲಿ ಕೈಗೊಳ್ಳುವುದು ಕಾನೂನಾತ್ಮಕ ನಡೆಯಾಗುತ್ತದೆ. ಆದರೆ ಇವರು ಯಾವ ಅನುಮತಿಯನ್ನೂ ಪಡೆಯದೆ ಸಮ್ಮೇಳನಕ್ಕೆ ನುಗ್ಗಿ ಗೊಂದಲ, ಅರಾಜಕತೆ ಸೃಷ್ಟಿಸಲು ಯತ್ನಿಸಿದರು. ಸಮ್ಮೇಳನದಲ್ಲಿ ಅವಿವೇಕದಿಂದ ಪ್ರತಿಭಟಿಸಿದಾಗ ಅಲ್ಲಿದ್ದ ನಾಗರಿಕರೇ ಯುವಕಾಂಗ್ರೆಸ್ ಪದಾಽಕಾರಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದರು; ಹೌಸ್ ಕೀಪಿಂಗ್ ನೌಕರನಿಂದ ಬೂಟು ಕಾಲಿನಲ್ಲಿ ಒದೆತ ತಿಂದು ಯುವಕಾಂಗ್ರೆಸ್ಸಿಗರು ತಮ್ಮ ಮಾನವನ್ನು ಕಳೆದುಕೊಂಡರು.
ಇವರ ಪ್ರತಿಭಟನೆಗೆ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ‘ಅಂತಾರಾಷ್ಟ್ರೀಯ ಕಾರ್ಯ ಕ್ರಮಗಳಲ್ಲಿ ಘನತೆ ಇರಬೇಕು, ಶಿಸ್ತು ಇರಬೇಕು ಮತ್ತು ಜವಾಬ್ದಾರಿಯ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ಅಸಮ್ಮತಿ ಸೂಚಿಸಿದ್ದಾರೆ.
‘ಇಂಡಿ’ ಮೈತ್ರಿಕೂಟದ ಸಮಾಜವಾದಿ ಪಾರ್ಟಿ, ಉದ್ಧವ್ ಸೇನಾ, ಟಿಎಂಸಿ, ಬಿಆರ್‌ಎಸ್, ಮಾಯಾವತಿ ಎಲ್ಲರೂ ‘ಅಂತಾರಾಷ್ಟ್ರೀಯ ಸಮ್ಮೇಳನ ನಡೆಯುವಾಗ ವಿದೇಶಿ ಅತಿಥಿಗಳ ಮುಂದೆ ನಡೆದಿರುವ ಈ ಪ್ರತಿಭಟನೆ ಸರಿಯಲ್ಲ’ ಎಂದು ಟೀಕಿಸಿದರು. ರಾಹುಲ್ ಗಾಂಧಿ ಯವರು ಜನಾಕ್ರೋಶವನ್ನು ನಿರ್ಲಕ್ಷಿಸಿ ಯಥಾಪ್ರಕಾರ ತಮ್ಮ ಆಕ್ರಮಣಕಾರಿ ವರ್ತನೆ ಯನ್ನು ತೋರಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೈಗೊಂಡ ಬೇಜವಾಬ್ದಾರಿ ಪ್ರತಿಭಟನೆ ಯನ್ನು ಬಲವಾಗಿ ಸಮರ್ಥಿಸಿಕೊಂಡರು, ಗೂಂಡಾ ವರ್ತನೆ ಮಾಡಿ ದೇಶದ ಮಾನ ಕಳೆದ ವರನ್ನು ‘ಬಬ್ಬರ್ ಶೇರ್’ (ಸಿಂಹಗಳು) ಎಂದು ಕರೆದರು.
2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 70 ಸಾವಿರ ಕೋಟಿ ರುಪಾಯಿ ಭ್ರಷ್ಟಾಚಾರವಾಗಿದೆ ಎಂದು ಕ್ರೀಡಾಕೂಟ ಆರಂಭಕ್ಕೆ ಮುನ್ನವೇ ಬಯಲಾ ಗುತ್ತದೆ. ಅಂದಿನ ಪ್ರಮುಖ ವಿರೋಧ ಪಕ್ಷವಾಗಿದ್ದ ಬಿಜೆಪಿ ಇದನ್ನು ಮುಂದಿಟ್ಟುಕೊಂಡು ದೇಶದ ಗೌರವಕ್ಕೆ ಕುಂದು ಬಾರದ ಹಾಗೆ ಪ್ರತಿಭಟನೆ ಮಾಡಿತು.
ಅಂದಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿಯವರು ಈ ಹಗರಣದ ಬಗ್ಗೆ, ಕ್ರೀಡಾ ಕೂಟ ಮುಗಿದು ಕ್ರೀಡಾಪಟುಗಳು ತಮ್ಮ ದೇಶಕ್ಕೆ ವಾಪಸ್ ಆದ ನಂತರ ಪತ್ರಿಕಾಗೋಷ್ಠಿ ಮಾಡಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಸ್ವಾರ್ಥ ರಾಜಕೀಯ ಲಾಭಕ್ಕಾಗಿ ದೇಶದ ಗೌರವಕ್ಕೆ ಮಸಿ ಬಳಿಯುವ ವರ್ತನೆಯನ್ನು ಅಂದು ಬಿಜೆಪಿ ಮಾಡಲಿಲ್ಲ.
ಗಲ್ಫ್ ಗೋತಿಯಾಸ್ ವಿಶ್ವವಿದ್ಯಾಲಯದವರು, ಚೀನಾ ಅಭಿವೃದ್ಧಿಪಡಿಸಿದ್ದ ರೋಬೊ ನಾಯಿಯನ್ನು ತಾವು ಅಭಿವೃದ್ಧಿ ಪಡಿಸಿದ್ದು ಎಂದು ಹೇಳಿಕೊಂಡು ಬಹುದೊಡ್ಡ ವಿವಾದವನ್ನು ಹುಟ್ಟು ಹಾಕಿದರು. ಯಥಾಪ್ರಕಾರ ಕಾಂಗ್ರೆಸ್ ಮತ್ತು ಅದರ Eco cycle
*‘ಮೋದಿ ಸರಕಾರ ಇದಕ್ಕೆ ಹೊಣೆ, ಸಮ್ಮೇಳನವು ವಿಶ್ವಾಸಾರ್ಹತೆಯನ್ನು ಕಳೆದು ಕೊಂಡಿತು’ ಎಂಬಿತ್ಯಾದಿ ಅತಿರೇಕದ ಟೀಕೆಯನ್ನು ಮಾಡಿದವು. ಗಲ್ಫ್ ಗೋತಿ ಯಾಸ್ ವಿಶ್ವವಿದ್ಯಾಲಯದವರಿಗೆ ಶೃಂಗಸಭೆ ಬಿಟ್ಟು ಹೊರಡಲು ಆದೇಶಿಸಿ ಅವರನ್ನು ಹೊರ ಹಾಕಲಾಯಿತು.
ಸಮ್ಮೇಳನಕ್ಕೆ ಐದು ಲಕ್ಷ ಸಂದರ್ಶಕರು ಭೇಟಿ ನೀಡಿದ್ದರು. ಮೊದಲನೆಯ ದಿನ ಹಲವಾರು ಗೊಂದಲ ಮತ್ತು ಸಂಚಾರ ದಟ್ಟಣೆಯಿಂದ ತೊಂದರೆಯಾಯಿತು.
ಐಟಿ-ಬಿಟಿ ಸಚಿವ ಅಶ್ವಿನಿ ವೈಷ್ಣವ್ ರವರು ಇದಕ್ಕಾಗಿ ಕ್ಷಮೆಯಾಚಿಸಿದರು. ಪ್ರಿಯಾಂಕ್ ಖರ್ಗೆಯವರು ಸಮ್ಮೇಳನದ ಭವ್ಯತೆಯ ಬಗೆಗಿನ ತಮ್ಮ ಮನಸ್ಸಿನ ಕಹಿ, ಅಸೂಯೆ ಎಲ್ಲವನ್ನೂ ಒಮ್ಮೆಗೇ ಕಕ್ಕಿದರು. ‘ಸಮ್ಮೇಳನವು ಅವ್ಯವಸ್ಥೆಯ ಆಗರವಾಗಿತ್ತು’ ಎಂದು ಪ್ರತಿಕ್ರಿಯೆ ನೀಡಿ ಅಭಿವೃದ್ಧಿಯ ವಿಚಾರದಲ್ಲೂ ರಾಜಕೀಯವೇ ಇವರಿಗೆ ಮೊದಲ ಆದ್ಯತೆ ಎಂದು ತೋರಿಸಿಕೊಂಡರು.
ನಿರೀಕ್ಷೆ ಮೀರಿ ಜನ ಬಂದಾಗ ವ್ಯವಸ್ಥೆ ಕುಸಿಯುವುದು ಸಹಜ; ಆದರೆ ಸಮ್ಮೇಳನದಲ್ಲಿನ ಅನೇಕ ಸಕಾರಾತ್ಮಕ ವಿಷಯಗಳನ್ನು ಮರೆಮಾಚಿ ಕೇವಲ ಸಣ್ಣಪುಟ್ಟ ಗೊಂದಲವನ್ನೇ ವಿರೋಧಿಗಳು ತಮ್ಮ ಟೀಕೆಗೆ ಆಹಾರವಾಗಿಸಿಕೊಂಡರು. ‘ಸಮ್ಮೇಳನ ವಿಫಲ’ ಎಂದು ಬಿಂಬಿಸುವ ಮೋದಿ-ವಿರೋಽಗಳ ಆತುರ ಬಯಲಾಯಿತು.
ಬೆಂಗಳೂರಿನಲ್ಲಿ ಅನೇಕ ವರ್ಷಗಳಿಂದ ನಡೆಯುವ ಏರೋ ಇಂಡಿಯಾ ಶೋ ಸಂದರ್ಭ ದಲ್ಲಿ ಉಂಟಾಗುವ ವಾಹನ ದಟ್ಟಣೆಯ ವರದಿಯು ಪತ್ರಿಕೆಗಳಲ್ಲಿ ಪುಟಗಟ್ಟಲೆ ತುಂಬಿರು ತ್ತದೆ. ಕಳೆದ ಬಾರಿ ಜರ್ಮನ್ ಪೈಲಟ್‌ಗಳು ವಾಹನ ದಟ್ಟಣೆಯಲ್ಲಿ ಸಿಲುಕಿ ತಾವು ನಡೆಸಿ ಕೊಡಬೇಕಿದ್ದ ವೈಮಾನಿಕ ಪ್ರದರ್ಶನ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಯುವ ಕಾಂಗ್ರೆಸ್ಸಿನವರ ವರ್ತನೆಯಿಂದ ಆಕ್ರೋಶಗೊಂಡಿದ್ದ ಪ್ರಧಾನಿ ಮೋದಿಯವರು “ಬಟ್ಟೆ ಕಳಚಿದ ಕಾಂಗ್ರೆಸ್ಸಿಗರ ವರ್ತನೆಯು, ಅವರು ಬೌದ್ಧಿಕವಾಗಿ ಎಷ್ಟು ದಿವಾಳಿಯಾಗಿ ದ್ದಾರೆ ಎಂಬುದನ್ನು ತೋರಿಸುತ್ತದೆ" ಎಂದು ಕಟುವಾಗಿ ಟೀಕಿಸಿದರು.
ದುರ್ದೈವವೆಂದರೆ, ಬಂಧಿತ ಯುವ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗುವ ಪರಿಣಾಮ ವನ್ನೂ ಯೋಚಿಸದೆ ಕೈಗೊಂಡ ಹೋರಾಟವು ಅವರನ್ನು ಅನೇಕ ಸಂಕಷ್ಟಕ್ಕೆ ದೂಡಿದೆ. ದೆಹಲಿ ಪೊಲೀಸರು ಸ್ವತಃ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯಭಾನು ಚಿಬ್ ಅವರನ್ನು ಬಂಧಿದ್ದಾರೆ.
ಹತ್ತಾರು ಪ್ರಕರಣಗಳು ಇವರೆಲ್ಲರ ಮೇಲೆ ದಾಖಲಾಗಿವೆ. ಹತ್ತು ಜನರ ಪ್ರತಿಭಟನೆಯನ್ನು ಸರಕಾರ ಇಷ್ಟು ಗಂಭೀರವಾಗಿ ತೆಗೆದುಕೊಂಡಿದ್ದು ಎಷ್ಟು ಸರಿ? ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಆದರೆ ಇದನ್ನು ಹಗುರವಾಗಿ ತೆಗೆದುಕೊಂಡರೆ ನಾಳೆ ನಡೆಯುವ ಪ್ರತಿ ಯೊಂದು ಸಮ್ಮೇಳನ ಮತ್ತು ಸರಕಾರಿ ಕಾರ್ಯಕ್ರಮಗಳಲ್ಲೂ ಗೊಂದಲವನ್ನು ಸೃಷ್ಟಿ ಸಲು ಇವರು ಜನರನ್ನು ಕಳುಹಿಸುತ್ತಾರೆ, ತನ್ಮೂಲಕ ಕಾರ್ಯಕ್ರಮವನ್ನು ಹಾಳು ಮಾಡುವ ಪ್ರಯತ್ನವನ್ನು ಮುಂದುವರಿಸುತ್ತಾರೆ.
2020ರಲ್ಲಿ ಡೊನಾಲ್ಡ್ ಟ್ರಂಪ್ ಅವರು ಭಾರತದ ಭೇಟಿಗೆ ಬಂದಾಗ ದೆಹಲಿಯಲ್ಲಿ ಬಹುದೊಡ್ಡ ಕೋಮು ಗಲಭೆಯನ್ನು ಸೃಷ್ಟಿಸಲಾಗಿತ್ತು. ದೆಹಲಿ ಹೊತ್ತಿ ಉರಿಯುವಂತೆ ಮಾಡಲಾಗಿತ್ತು. ಮೊನ್ನೆ ನಡೆದ ಅರೆಬೆತ್ತಲೆ ಪ್ರತಿಭಟನೆಯು ಕೂಡ ದೇಶದ ಗೌರವಕ್ಕೆ ಧಕ್ಕೆ ತರುವ ಷಡ್ಯಂತ್ರದ ಭಾಗವಾಗಿತ್ತು.
ರಾಹುಲ್ ಗಾಂಧಿಯವರ ಹತಾಶೆಯ ಮಟ್ಟ ಅಪಾಯದ ಗಡಿಯನ್ನು ದಾಟಿ ಹೋಗಿದೆ. ಮೊದಲು ‘ಸರೆಂಡರ್’ ಎಂದರು, ಈಗ ‘ಮೋದಿ ಕಾಂಪ್ರಮೈಸ್ ಆಗಿದ್ದಾರೆ’ ಎಂದು ಹೊಸ ವರಸೆಯನ್ನು ಆರಂಭಿಸಿದ್ದಾರೆ. ಇಂಡೋ-ಅಮೆರಿಕ ವ್ಯಾಪಾರ ಒಪ್ಪಂದದ ಪೂರ್ಣ ವಿವರ ಹೊರ ಬರುವ ಮುನ್ನವೇ ‘ರೈತರನ್ನು ಬಲಿ ಕೊಡಲಾಗಿದೆ, ಜವಳಿ ಉದ್ಯಮಕ್ಕೆ ಮಾರಣಾಂತಿಕ ಪೆಟ್ಟು ನೀಡಲಾಗಿದೆ’ ಎನ್ನುತ್ತಾ ಅವರು ವಿವಿಧ ವರ್ಗದವರನ್ನು ಎತ್ತಿ ಕಟ್ಟುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ದೆಹಲಿಯಲ್ಲಿ ಜಿ-20 ಶೃಂಗಸಭೆ ನಡೆದಾಗಲೂ ಕಾಂಗ್ರೆಸ್ ದಿನ ಬೆಳಗಾದರೆ ದುರ್ಬಿನ್ ಹಾಕಿ ಮೋದಿಯವರನ್ನು ಟೀಕಿಸಿ ಸಭೆಯ ಯಶಸ್ಸು ಅವರಿಗೆ ಸಲ್ಲಬಾರದು ಎಂದು ಬಹುವಾಗಿ ಕಸರತ್ತು ಮಾಡಿತು. ಇದೀಗ, ಯುವಜನರ ಭವಿಷ್ಯಕ್ಕೆ ವೇದಿಕೆಯಾಗಿದ್ದ ಎಐ ಸಮ್ಮೇಳನ ವನ್ನು ವಿಫಲಗೊಳಿಸಲು ನಡೆದ ಪಿತೂರಿಗಳು ಮೋದಿಯವರ ಮೇಲಿನ ದ್ವೇಷವನ್ನು ಭಾರತದ ಮೇಲೆ ತಿರುಗಿಸಿವೆ.
ದೇಶದ ಪ್ರಗತಿಯು ಹಾಳಾದರೂ ಪರವಾಗಿಲ್ಲ ಎಂಬ ಕಾಂಗ್ರೆಸ್ಸಿಗರ ಧೋರಣೆ ಮತ್ತು ದೇಶದ ಗೌರವ ಹಾಳಾಗುವುದನ್ನು ಲೆಕ್ಕಿಸದೆ ಸಂಪೂರ್ಣ ವಿವೇಕ ಕಳೆದುಕೊಂಡು ಅವರು ನಡೆದುಕೊಳ್ಳುತ್ತಿರುವ ರೀತಿ ಸರ್ವಥಾ ಸ್ವೀಕಾರಾರ್ಹವಲ್ಲ; ಈ ಅಧಿಕಾರವಿಹೀನರು ಮತ್ತೆ ತಮ್ಮ ಸಾಮ್ರಾಜ್ಯವನ್ನು ಮರುಸ್ಥಾಪಿಸಲು, ತಾವು ಅರಾಜಕತೆಯ ದಾರಿಯಲ್ಲಿ ಸಾಗುವು ದಕ್ಕೂ ಹಿಂಜರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ...
(ಲೇಖಕರು ಬಿಜೆಪಿಯ ವಕ್ತಾರರು)