ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ನಗುವನ್ನು ಸಾಂಕ್ರಾಮಿಕವಾಗಿಸಿದ ಸುಲೋಚನಾ...

ಬಾಕ್ಸಾಫೀಸ್ ಅಂಕಿ-ಅಂಶ ಇತ್ಯಾದಿಗಳ ಬಗ್ಗೆ ಹೇಳೋ ಅಗತ್ಯ ಇಲ್ಲ. ಬೆರಳೆಣಿಕೆಯಷ್ಟು ಶೋ ಗಳೊಂದಿಗೆ ತೆರೆ ಕಂಡ ಚಿತ್ರ ಎರಡೇ ಎರಡು ದಿನದಲ್ಲಿ ರಾಜ್ಯದ ಎಲ್ಲ ಸ್ಕ್ರೀನುಗಳನ್ನೂ ಬಾಚಿಕೊಂಡು ಬಿಟ್ಟಿತು. ಹಸಿದ ಕನ್ನಡ ಸ್ಕ್ರೀನ್‌ಗಳು ‘ನಂಗೊಂದು ಶೋ ಕೊಡಿ, ನಂಗೊಂದು ಶೋ ಕೊಡಿ’ ಎಂದು ಬೇಡಿ ಪಡೆದವು.

ಪದಸಾಗರ

ಬೆಂಗಳೂರು ಮಾತ್ರ ಅಲ್ಲ, ಇಡೀ ಕರ್ನಾಟಕದಲ್ಲಿ ಎಲ್ಲೇ ಹೋದರೂ ಕಳೆದ ಎರಡು ವಾರದಿಂದ ಒಂದೇ ಮಾತು. ಅಲ್ಲ... ನೀವಂದುಕೊಂಡಂತೆ ಧರ್ಮಸ್ಥಳದ ಮಾತಲ್ಲ. ‘ಸು ಫ್ರಮ್ ಸೋ’ ಎಂಬ ವಿಚಿತ್ರ ಹೆಸರಿನ ಸಿನಿಮಾ ಬಗ್ಗೆ ಮಾತು. ಅಪರೂಪಕ್ಕೆ ಭೇಟಿ ಆದವರು, ಆಫೀಸು, ಕಾಲೇಜು, ಅಂಗಡಿ ಮುಂದೆ, ಜಿಮ್ಮು, ಮದುವೆ ಕಾರ್ಯ, ಕೊನೆಗೆ ಸ್ಮಶಾನಕ್ಕೆ ಹೆಣ ಒಯ್ತಿರೋ ಮೆರವಣಿಗೆ ಯಲ್ಲಿ ಇರೋವ್ರದ್ದೂ ಇದೇ ಮಾತು.. ‘ಸು ಫ್ರಮ್ ಸೋ ನೋಡಿದ್ರಾ?’ ಅಂತ. ‘ಸು ಫ್ರಮ್ ಸೋ’ ನೋಡದವರು ಯಾರಾದರೂ ಇದ್ರೆ ಅವರನ್ನು ಅನ್ಯಗ್ರಹ ಜೀವಿಗಳ ಹಾಗೆ ನೋಡೋ ಸಾಧ್ಯತೆ ಇದೆ.

ಅನ್ಯಗ್ರಹದಲ್ಲಿ ರಿಲೀಸಾದ್ರೂ ಈ ಸಿನಿಮಾ ಹಿಟ್ ಆಗಿ ಬಿಡುತ್ತೇನೋ.. ಯಾರಿಗ್ಗೊತ್ತು! ಒಟ್ಟಾರೆ ‘ಸು ಫ್ರಮ್ ಸೋ’ ನೋಡುವುದು, ಅದರ ಬಗ್ಗೆ ಮಾತನಾಡುವುದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಆ ಸಿನಿಮಾದ ಬಗ್ಗೆ ಮಾತನಾಡುವ ಪ್ರತಿ ಮುಖದಲ್ಲೂ ಒಂದು ಅವರ್ಣನೀಯ ನಗು ಅಥವಾ ಮುಗುಳ್ನಗು ಇದ್ದೇ ಇರುತ್ತದೆ. ಯಾಕಂದ್ರೆ ಇದು ಸಿನಿಮಾ ನೋಡಿ ಬಂದಮೇಲೆ ಮೆಲುಕು ಹಾಕು ವಂತೆ ಮಾಡಿ ನಗು ಮೂಡಿಸುವ ಸಿನಿಮಾ.

ಯಾರೊಂದಿಗಾದ್ರೂ ಈ ಸಿನಿಮಾದ ಬಗ್ಗೆ ಮಾತಾಡಿ, ಪಾತ್ರಗಳ ಬಗ್ಗೆ ಚರ್ಚೆ ಮಾಡಿ ನಗೋಣ ಅನಿಸುವಂತೆ ಮಾಡುತ್ತದೆ. ಮಾತಿಗ್ಯಾರೂ ಸಿಗದೇ ಹೋದರೆ, ಪಾತ್ರಗಳನ್ನು ನೆನೆಸಿಕೊಂಡು, ನಮ್ಮಬ್ಬ ಇಂಥವ್ನಿದ್ದನಲ್ಲ ಎಂದು ಕನೆಕ್ಟ್ ಮಾಡಿಕೊಂಡು ಒಬ್ಬೊಬ್ಬರೇ ಮನಸ ನಗುವಂತ್ ಮಾಡುತ್ತದೆ ಈ ‘ಸು ಫ್ರಮ್ ಸೋ’.

ಇದನ್ನೂ ಓದಿ: Naveen Sagar Column: ದಂಡಕ್ಕೆ ದಾಳಿಗೆ ಹೆದರದ ರಣತುಂಗ ಎಂಬ ರಣಧೀರ !

ಇದರ ದಾಖಲೆ, ಬಾಕ್ಸಾಫೀಸ್ ಅಂಕಿ-ಅಂಶ ಇತ್ಯಾದಿಗಳ ಬಗ್ಗೆ ಹೇಳೋ ಅಗತ್ಯ ಇಲ್ಲ. ಬೆರಳೆಣಿಕೆ ಯಷ್ಟು ಶೋಗಳೊಂದಿಗೆ ತೆರೆ ಕಂಡ ಚಿತ್ರ ಎರಡೇ ಎರಡು ದಿನದಲ್ಲಿ ರಾಜ್ಯದ ಎಲ್ಲ ಸ್ಕ್ರೀನು ಗಳನ್ನೂ ಬಾಚಿಕೊಂಡುಬಿಟ್ಟಿತು. ಹಸಿದ ಕನ್ನಡ ಸ್ಕ್ರೀನ್‌ಗಳು ‘ನಂಗೊಂದು ಶೋ ಕೊಡಿ, ನಂಗೊಂದು ಶೋ ಕೊಡಿ’ ಎಂದು ಬೇಡಿ ಪಡೆದವು.

ಮೊದಲ ದಿನ ಎಪ್ಪತ್ತೆಂಟು ಲಕ್ಷ ಗಳಿಕೆ ಮಾಡಿದ್ದ ಚಿತ್ರ ಕೇವಲ ಹತ್ತು ದಿನಗಳಲ್ಲಿ ಕೂಡಿ ಹಾಕಿರೋ ಮೊತ್ತ, ಸುಮಾರು 35 ಕೋಟಿ. ದಿನದಿಂದ ದಿನಕ್ಕೆ ಕಲೆಕ್ಷನ್ ಕೋಟಿಗಳಲ್ಲಿ ಏರಿಕೆ ಕಾಣುತ್ತಿದೆ. ಬಿಡುಗಡೆಯಾದ ಒಂಬತ್ತನೇ ದಿನ ‘ಸು ಫ್ರಮ್ ಸೋ’ ಗಳಿಸಿದ್ದು ಐದು ಕೋಟಿ. ಅಂಥದ್ದೇನಿದೆ ಈ ಚಿತ್ರದಲ್ಲಿ? ಈ ರೀತಿ ಒಂದು ಮೇನಿಯಾ, ಕ್ರೇಜ್ ಹುಟ್ಟಿಕೊಳ್ಳುವುದಕ್ಕೆ ಕಾರಣ ಏನು? ನೋಡಿ ದವರೇ ಮತ್ತೆ ಮತ್ತೆ ನೋಡಲು ಹೋಗುತ್ತಿರುವುದು ಏಕೆ? ಹಾಡಿಗಾಗಿಯಾ? ಫ್ಲೈಟಿಗಾಗಿಯಾ? ಹೀರೋ-ಹೀರೋಯಿನ್‌ಗಾಗಿಯಾ? ಕ್ಲೈಮ್ಯಾಕ್ಸ್ ಗಾಗಿಯಾ? ಹೀಗೆ ಯಾವ ಪ್ರಶ್ನೆ ಕೇಳಿದರೂ ‘ಹೂಂ’ ಎಂಬ ಉತ್ತರ ಸಿಗುವುದಿಲ್ಲ. ‌

ಆದರೆ ‘ಸು ಫ್ರಮ್ ಸೋ’ ಚಿತ್ರಕ್ಕೆ ಜನಪ್ರವಾಹ ಮಾತ್ರ ಕಮ್ಮಿಯಾಗುತ್ತಲೇ ಇಲ್ಲ. ಕನ್ನಡದಲ್ಲಿ ಸಾಲದು ಅಂತ ಅತ್ತ ಮಲಯಾಳಂ, ಇತ್ತ ತೆಲುಗು ಚಿತ್ರರಂಗಗಳು ‘ಸು ಫ್ರಮ್ ಸೋ’ ಎಂಬ ಈ ಯಶಸ್ವಿ ಚಿತ್ರದ ಹಿಂದೆ ಬಿದ್ದಿವೆ. ಮತ್ತೆ ನನ್ನನ್ನೇ ನಾನು ಕೇಳಿಕೊಳ್ತೀನಿ.. ‘ಸು ಫ್ರಮ್ ಸೋ’ ಅಂಥ ಅದ್ಭುತ ಸಿನಿಮಾನಾ? ಹಿಂದೆಂದೂ ಯಾವ ಚಿತ್ರವೂ ನಗಿಸದಷ್ಟು ಈ ಚಿತ್ರ ನಗಿಸುತ್ತಿದೆಯಾ? ಕನ್ನಡ ಚಿತ್ರರಂಗ ಇಂಥ ಒಂದು ಸಿನಿಮಾವನ್ನು ಇಲ್ಲಿಯವರೆಗೆ ನೋಡಿಯೇ ಇಲ್ವಾ? ‘ಸು ಫ್ರಮ್ ಸೋ’ ಚಿತ್ರದಲ್ಲಿ ಭರಪೂರ ನಗು ಇದೆ.

ಆದರೆ ಇದು ಕಾಮಿಡಿ ಸಿನಿಮಾ ಅಲ್ಲ. ಇದರಲ್ಲಿ ಬೆಚ್ಚಿ ಬೀಳಿಸುವ ಒಂದೆರಡು ಶಾಟ್‌ಗಳಿವೆ. ಆದರೆ ಇದು ಹಾರರ್ ಚಿತ್ರವೂ ಅಲ್ಲ. ಶುರುವಲ್ಲಿ ಲವ್ವಿನ ಸಣ್ಣದೊಂದು ಮಿಂಚಿದೆ. ಕೊನೆಯಂದು ಅಪರೂಪವೆನಿಸುವ ಪ್ರೀತಿಕತೆ ಇದೆ. ಆದರೆ ಇದು ಲವ್‌ಸ್ಟೋರಿ ಅಲ್ಲ. ಸಾಮಾಜಿಕ ಪಿಡುಗು, ಮೌಢ್ಯ ಇತ್ಯಾದಿಗಳನ್ನು ಸಿನಿಮಾ ಟಚ್ ಮಾಡುತ್ತದೆ. ಆದರೆ ಇದು ಸಂದೇಶ ಕೊಡಲೋಸುಗ ಮಾಡಿರುವ ಚಿತ್ರವಲ್ಲ.

ತಾಯಿ ಸೆಂಟಿಮೆಂಟ್ ಇದೆ. ತಾಯಿಯೇ ಇಲ್ಲ. ಲವ್ ಇದೆಯಾದರೂ ನಾಯಕ ನಾಯಕಿ ಪಾತ್ರಗಳೇ ಇಲ್ಲ. ವಿಲನ್ ಇದ್ದಾರೆ. ಯಾರು ಅಂತ ಹೇಳಲಾಗುವುದಿಲ್ಲ. ನಗಿಸುವವರಿದ್ದಾರೆ. ಆದರೆ ಇಂಥವ್ರನ್ನೇ ಕಾಮಿಡಿಯನ್ ಅನ್ನಲಾಗುವುದಿಲ್ಲ. ಪೋಷಕ ಪಾತ್ರಗಳಿವೆ.. ಆದರೆ ಅವೆಲ್ಲವೂ ಚಿತ್ರಕ್ಕೆ ಪ್ರಮುಖ ಪಾತ್ರಗಳು. ಹಾಗಾದರೆ ಈ ಚಿತ್ರದ ನಾಯಕ ನಾಯಕಿ, ಪಿಲ್ಲರ್ ಯಾರು? ಕಥೆ.. ಕಂಟೆಂಟ್! ಚಿತ್ರರಂಗ ಅರ್ಥ ಮಾಡ್ಕೋಬೇಕು.

ಕಂಟೆಂಟ್ ಅಂದಾಕ್ಷಣ, ಈವರೆಗೆ ಯಾರೂ ಹೇಳಿರದ ಕಥೆಯೊಂದನ್ನು ಹೇಳುವುದೇ ಕಂಟೆಂಟ್ ಅಲ್ಲ. ಯಾರಿಗೂ ಅರ್ಥವಾಗದಂತೆ ಜಟಿಲ ಕಥೆ ಹೇಳುವುದೂ ಕಂಟೆಂಟ್ ಅಲ್ಲ. ಅಂತೆಯೇ ಕೋಟಿ ಕೋಟಿ ಸೆಟ್ ಹಾಕುವುದು, ಗ್ರಾಫಿಕ್ಸ್ ಮಾಡುವುದು, ಫಾರಿನ್ ಶೂಟ್ ಮಾಡುವುದು, ಪ್ರತಿ ಶಾಟ್ ನಲ್ಲೂ ರಿಚ್‌ನೆಸ್ ತೋರಿಸುವುದು‌ ಮೇಕಿಂಗ್ ಅಲ್ಲ.

ಅಸಲಿಗೆ, ಮೇಕಿಂಗ್ ಮತ್ತು ಕಂಟೆಂಟ್ ಅನ್ನೋದು ಕೇವಲ ಹಣ ಮತ್ತು ಅತಿ ಬುದ್ಧಿವಂತಿಕೆಗೆ ಮೀಸಲಾದ ವಿಷಯಗಳಲ್ಲವೇ ಅಲ್ಲ. ‘ಸು ಫ್ರಮ್ ಸೋ’ ಎಲ್ಲರೂ ಹೇಳುವಂತೆ ಕಾಮಿಡಿ ಚಿತ್ರವಲ್ಲ. ಅದು ಹ್ಯೂಮರಸ್ ಚಿತ್ರ. ಕಾಮಿಡಿಗೂ ಹ್ಯೂಮರ್‌ಗೂ ಒಂದು ವ್ಯತ್ಯಾಸವಿದೆ.

ಇಲ್ಲಿ ಪ್ರೇಕ್ಷಕನನ್ನು ನಗಿಸಲೆಂದು ಪಾತ್ರಗಳನ್ನು ಸೃಷ್ಟಿಸಿ, ದೃಶ್ಯ ಬರೆದು, ಡೈಲಾಗ್ ಪೋಣಿಸಿ ನಗಿಸುವ ಪ್ರಯತ್ನ ಮಾಡಿಲ್ಲ. ಗಂಭೀರ ಕಥೆಯ ಮಧ್ಯೆ ರಿಲೀ- ಕೊಡಲೆಂದು ಹಾಸ್ಯದೃಶ್ಯಗಳನ್ನು ಬರೆದಿಲ್ಲ. ಶತಾಯಗತಾಯ ನಗಿಸಬೇಕು ಎಂದು ಹಟ ತೊಟ್ಟೂ ದೃಶ್ಯಗಳನ್ನು ರಚಿಸಿಲ್ಲ. ಆದರೆ ಕರಾವಳಿ ಮಂದಿಯ ಗುಣದಲ್ಲಿ ಹಾಸುಹೊಕ್ಕಾಗಿರುವ ಹಾಸ್ಯಪ್ರಜ್ಞೆಯನ್ನು ಸಂಪೂರ್ಣವಾಗಿ ಕಥೆಯೊಂದಿಗೆ ಬೆರೆಸಿದ್ದಾರೆ ನಿರ್ದೇಶಕರು.

ಪ್ರತಿ ಹಳ್ಳಿಯಲ್ಲೂ, ಮನೆಯಲ್ಲೂ ಇದ್ದೇ ಇರುವ ಕ್ಯಾರಕ್ಟರ್ ಗಳನ್ನು ಈ ಚಿತ್ರದ ಪಾತ್ರವಾಗಿಸಿ ದ್ದಾರೆ. ಸಿನಿಮಾ ಪ್ರಾರಂಭವಾಗಿ ಕೆಲವೇ ನಿಮಿಷಗಳಲ್ಲಿ ಪ್ರೇಕ್ಷಕರನ್ನು ತನ್ನೊಳಗೆ ಎಳೆದುಕೊಂಡು ಬಿಡುತ್ತದೆ. ಪ್ರೇಕ್ಷಕ ದೈಹಿಕವಾಗಿ ಥಿಯೇಟರ್ ಸೀಟಿನಲ್ಲಿರುತ್ತಾನೆ. ಆದರೆ ಮಾನಸಿಕವಾಗಿ ಮರ್ಲೂ ರಿನ (ಸಿನಿಮಾಕಥೆ ನಡೆಯುವ ಹಳ್ಳಿ) ಅಂಗಳದಲ್ಲಿ ನಿಂತು ಬಿಟ್ಟಿರು ತ್ತಾನೆ.

ಸಿನಿಮಾ ಪ್ರೇಕ್ಷಕನಿಗೆ ಇಷ್ಟವಾಗಿರುವುದು ಇಲ್ಲಿ. ಹಾಗಾದರೆ ಸೀಟಿಂದೆ ಕೆಳಗೆ ಬಿದ್ದು ನಗ್ತಾರೋದು.. ಕೈಲಿರುವ ಪಾಪ್‌ಕಾರ್ನ್ ಚೆಡಿ ಹೋಗುವಂತೆ ನಗ್ತಾ ಇರೋದು.. ಉಸಿರಾಡೋಕೂ ಗ್ಯಾಪ್ ಸಿಗದಂತೆ ನಗುತ್ತಿರೋದು ಇವೆಲ್ಲ ನಿಜವಾ? ನಿಜ. ಅಷ್ಟೊಂದು ನಗಿಸುವಂತಿದೆಯಾ ಸಿನಿಮಾ? ಅವರವರ ವೈಯಕ್ತಿಕ ಮನಸ್ಥಿತಿ, ಅಭಿರುಚಿ, ಸೆಲ್ಫ್ ಆಫ್ ಹ್ಯೂಮರ್, ಮೂಡ್, ಇತರ ಚಿತ್ರಗಳೊಂದಿಗೆ ತುಲನೆ, ಇವೆಲ್ಲದರ ಮೇಲೆ ಉತ್ತರ ಬದಲಾಗುತ್ತದೆ. ‌

ಕನ್ನಡ ಚಿತ್ರಪ್ರೇಮಿ ಅದ್ಭುತ ಹಾಸ್ಯ ಚಿತ್ರಗಳನ್ನು ನೋಡಿzನೆ. ‘ರಾಮ ಶಾಮ ಭಾಮ’, ‘ಕೋತಿಗಳು ಸಾರ್ ಕೋತಿಗಳು’, ‘ಗಣೇಶನ ಮದುವೆ’, ‘ಗೌರಿ ಗಣೇಶ’, ‘ಭಾಗ್ಯದಾ ಲಕ್ಷ್ಮೀ ಬಾರಮ್ಮ’, ‘ಗೋಲ್‌ ಮಾಲ್ ರಾಧಾಕೃಷ್ಣ’, ‘ಉಲ್ಟಾಪಲ್ಟಾ’, ‘ಅಧ್ಯಕ್ಷ’, ‘ಎದ್ದೇಳು ಮಂಜುನಾಥ’- ಹೀಗೆ ಭಿನ್ನ ಭಿನ್ನ ರೀತಿಯ ಹಾಸ್ಯಚಿತ್ರಗಳನ್ನು ನೋಡಿಕೊಂಡು ಬಂದಿದ್ದಾನೆ. ಹೊಟ್ಟೆ ತುಂಬ ನಕ್ಕು ಎಂಜಾಯ್ ಮಾಡಿzನೆ. ಈ ಚಿತ್ರಕ್ಕಿಂತಲೂ ಹೆಚ್ಚಿನ ಹಾಸ್ಯದ ರಸದೂಟ ಆ ಚಿತ್ರಗಳಲ್ಲಿ ಸವಿದಿದ್ದಾನೆ.

ಆದರೆ ಅದನ್ನೆಲ್ಲ ಮರೆತು ನಾನು ಇಲ್ಲೀತನಕ ಇಷ್ಟೊಂದು ನಕ್ಕೇ ಇಲ್ಲ ಅಂತ ಹೇಳುತ್ತಿರುವುದು ಅತಿರೇಕ ಅನಿಸುತ್ತಿಲ್ಲವೇ? ಹೀಗಂತ ಕೇಳಿದರೆ ಮತ್ತೆ ಗೊಂದಲದ ಉತ್ತರವನ್ನೇ ಕೊಡಬೇಕಾಗುತ್ತದೆ.

ವೈಯಕ್ತಿಕವಾಗಿ ನಾನು ಈ ಚಿತ್ರದ ಅವಧಿಯುದ್ದಕ್ಕೂ ಒಂದು ಕಿರುನಗೆಯನ್ನು ಜಾರಿಯಲ್ಲಿಟ್ಟು ಕೊಂಡಿದ್ದೆ. ಎಲ್ಲಿಯೂ ಗಹಗಹಿಸಿ, ಎದ್ದುಬಿದ್ದು ನಗಲಿಲ್ಲ. ಆದರೆ ಅಲ್ಲಲ್ಲಿ ನಗು ಉಕ್ಕಿದ್ದಂತೂ ಹೌದು. ಈ ಚಿತ್ರ ಮೇಲ್ನೋಟಕ್ಕೆ ನಗಿಸುವ ಸಿನಿಮಾವೇ ಆದರೂ, ಮೆಲ್ಲನೆ ವಿಶ್ಲೇಷಿಸಿದರೆ ಹಲವಾರು ಪದರಗಳನ್ನು ಹೊತ್ತಿದೆ.

ಯುವಕರ ಮನಸ್ಥಿತಿ, ಮೌಢ್ಯ ಮಾಡುವ ಅನಾಹುತಗಳು, ದೈವಮಾನವರ ನಕಲಿತನ, ಪಾಪಪ್ರಜ್ಞೆ, ಗುಣದ ರೂಪಾಂತರ ಹೀಗೆ ಬಹಳಷ್ಟು ಆಯಾಮಗಳನ್ನು ನಮ್ಮ ಸುತ್ತಲಿರುವ ಟಿಪಿಕಲ್ ಪಾತ್ರಗಳ ಮೂಲಕ ನಗಿಸುತ್ತ ನಗಿಸುತ್ತಲೇ ಹೇಳುತ್ತಾ ಹೋಗುತ್ತದೆ ‘ಸು ಫ್ರಮ್ ಸೋ’. ಕೆಲವರಿಗೆ ಕೇವಲ ನಗು ದಕ್ಕುತ್ತದೆ. ಕೆಲವರಿಗೆ ಎಮೋಷ ಟಚ್ ಮಾಡುತ್ತವೆ.

ಇನ್ನು ಕೆಲವರು ಪಾತ್ರಗಳ ಜತೆ ಕಳೆದು ಹೋಗುತ್ತಾರೆ. ರವಿ ಅಣ್ಣ ಪಾತ್ರವಾಗಿ ಉಳಿಯುವುದಿಲ್ಲ. ಆತ ಮುಂದಿನ ಹಲವಾರು ವರ್ಷ ರವಿ ಅಣ್ಣನಾಗಿಯೇ ಹೋಗುತ್ತಾನೆ. ಬಾವ ಕೂಡ ಕರ್ನಾಟಕದ ಬಾವನಾಗಿಯೇ ಪ್ರಚಲಿತನಾಗುತ್ತಾನೆ. ಹೀಗೆ ಸಿನಿಮಾ ತನ್ನದೇ ರೀತಿಯಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಾ ಹೋಗಿದೆ.

ಆದರೂ, ಮತ್ತದೇ ಪ್ರಶ್ನೆ. ಸಿನಿಮಾ ಚೆನ್ನಾಗಿದೆ ಅಂತಲೇ ಇಟ್ಕೊಳೋಣ. ಈ ರೀತಿ ಹಿಟ್ ಆಗಿದ್ದು ಹೇಗೆ? ಜನ ಕನ್ನಡ ಸಿನಿಮಾ ನೋಡೋಕೆ ಥಿಯೇಟರ್‌ಗೆ ಬರ್ತಾ ಇಲ್ಲ ಅಂತ ಇಂಡಸ್ಟ್ರಿ ಅಳ್ತಾ ಇದೆ. ಇದಕ್ಕೆ ಈ ರೀತಿ ನುಗ್ಗುತ್ತಿರೋದಾದ್ರೂ ಹೇಗೆ? ಸೆಲೆಬ್ರಿಟಿ ಶೋಗಳನ್ನು ಮಾಡಲಿಲ್ಲ. ಯಾವ ಸ್ಟಾರೂ ಬಂದು ಸಿನಿಮಾದ ಬಗ್ಗೆ ಹೊಗಳಿ, ರೆಕಮೆಂಡ್ ಮಾಡಲಿಲ್ಲ.

ಟ್ರೋಲ್ ಪೇಜ್‌ಗಳು, ಯೂಟ್ಯೂಬ್‌ಗಳು, ಪತ್ರಿಕೆ-ಟಿವಿಗಳು ಪ್ರೊಮೋಟ್ ಮಾಡಲಿಲ್ಲ. ಕೋಟಿ ಗಟ್ಟಲೆ ಹಣ ಹೂಡಿ ಪೋಸ್ಟರ್, ಬ್ಯಾನರ್ ಏನನ್ನೂ ಹಾಕಿಸಲಿಲ್ಲ. ನವಾಜ್, ಅಮುಕುಡುಮುಕು ಗಳ ಕೈಲಿ ಕಿರುಚಾಡಿಸಲಿಲ್ಲ. ಆದರೂ ಹಿಟ್ ಆಗಿದ್ದು ಹೇಗೆ? ‘ಪೇಯ್ಡ್ ಪ್ರೀಮಿಯರ್’ ಮಾಡಿದ್ದು ಇವರೇ ಮೊದಲೇ ನಲ್ಲ.

ಪ್ರಚಾರವೇ ಇಲ್ಲದೇ ಬಂದದ್ದು ಇವರೇ ಮೊದಲೇನಲ್ಲ. ಬೇರೆಯವರು ಕಾಣದ ಗೆಲುವು ಇವರು ಕಂಡಿದ್ದು ಹೇಗೆ? ಬಿದ್ದು ಬಿದ್ದು ನಗುವ ಪ್ರೇಕ್ಷಕರನ್ನು ಸೃಷ್ಟಿ ಮಾಡಿ ಥಿಯೇಟರ್ ಒಳಗೆ ಕಳಿಸಿ ಸಮೂಹಸನ್ನಿ ಉಂಟುಮಾಡಿದರಾ? ನಗುವನ್ನು ಸಾಂಕ್ರಾಮಿಕಗೊಳಿಸುವ ವ್ಯವಸ್ಥಿತ ತಂತ್ರ ನಡೆಯಿತಾ? ಅಲ್ಲಲ್ಲಿ ತಮ್ಮದೇ ಪ್ರೇಕ್ಷಕರನ್ನು ಕೂರಿಸಿ ಪಂಚಿಂಗ್ ಪಾಯಿಂಟ್‌ಗಳಲ್ಲಿ ಬಿದ್ದುಬಿದ್ದು ನಗಲು ಹೇಳಿ, ಅವರ ಮೂಲಕ ಇಡೀ ಥಿಯೇಟರ್‌ಗೆ ನಗು ಹರಡಿಸಲಾಯ್ತಾ? ಈ ಸಿನಿಮಾದ ಗೆಲುವನ್ನು ಡೀಕೋಡ್ ಮಾಡಲಾಗದ ಒಂದಷ್ಟು ಮಂದಿ ಇಂಥ ಸಾಧ್ಯತೆಗಳನ್ನೆಲ್ಲ ಊಹಿಸು ತ್ತಿದ್ದಾರೆ.

ಇದು ಕರಾವಳಿ ಶೆಟ್ಟರ ಮಾರ್ಕೆಟಿಂಗ್ ತಂತ್ರದಿಂದ ಗೆದ್ದಿರುವುದು ಎಂದು ಗೊಣಗುತ್ತಿದ್ದಾರೆ. ವಾಸ್ತವ ಏನೆಂದರೆ, ಕನ್ನಡ ಚಿತ್ರರಂಗದ ಪ್ರೇಕ್ಷಕ ಹಸಿದಿದ್ದ, ಹತಾಶನಾಗಿದ್ದ. ಅಕ್ಕಪಕ್ಕದ ರಾಜ್ಯ ಗಳಲ್ಲಿ ಬರುತ್ತಿರೋ ಒಳ್ಳೇ ಚಿತ್ರಗಳು ನಮ್ಮಲ್ಯಾಕೆ ಬರುತ್ತಿಲ್ಲ ಎಂದು ಬೇಸರಗೊಂಡಿದ್ದ. ನಕಲಿ ಪ್ರಚಾರಗಳು, ಪ್ಯಾನ್ ಇಂಡಿಯಾ ಹೆಸರಿನಲ್ಲಿ ಬರುವ ಅರ್ಥಹೀನ ರಿಚ್ ಸಿನಿಮಾಗಳು, ಯಾಕೆ ನೋಡಬೇಕು ಎಂಬ ಪ್ರಶ್ನೆಗೆ ಉತ್ತರವೇ ಇಲ್ಲದ ಚಿತ್ರಗಳು, ಇವೆಲ್ಲದರಿಂದ ರೋಸತ್ತು ಬೇಸತ್ತಿದ್ದ ಪ್ರೇಕ್ಷಕ ಒಂದು ಆರ್ಡಿನರಿ ಸರಳ ಸುಂದರ ಚಿತ್ರ ಸಿಕ್ಕರೂ ಸಾಕು ಎತ್ತಿ ಮುದ್ದಾಡಲು ಕಾದಿದ್ದ.

ಕನ್ನಡ ಚಿತ್ರಗಳ ವಿಷಯದಲ್ಲಿ ಅವನ ನಿರೀಕ್ಷೆಯನ್ನೂ ತಗ್ಗಿಸಿಕೊಂಡು‌ ಬಿಟ್ಟಿದ್ದ. ‘ಕಾಂತಾರ’ದ ತನಕ ಇನ್ಯಾವ ಚಿತ್ರದ ಮೇಲೂ ಆತನಿಗೆ ನಿರೀಕ್ಷೆ ಇರಲಿಲ್ಲ. ಜನಾರ್ದನ ರೆಡ್ಡಿ ಮಗನ ‘ಜೂನಿ ಯರ್’ ಬಂದಾಗ ಆತ, ‘ಕನ್ನಡದಲ್ಲಿ ಇಷ್ಟಾದ್ರೂ ಚೆನ್ನಾಗಿರೋ ಸಿನಿಮಾ ಬಂತಲ್ಲ’ ಎಂಬ ಖುಷಿ ತೋರಿಸಿದ್ದ. ಹೀಗೆ ಹಸಿದು ಬರಗೆಟ್ಟಿzಗ ಸಿಕ್ಕ ಚಿತ್ರ ‘ಸು ಫ್ರಮ್ ಸೋ’.

ನಿರೀಕ್ಷೆಯೇ ಇಲ್ಲದ, ಹೆಸರೇ ಕೇಳಿರದಿದ್ದ, ಸ್ಟಾರ್‌ಗಳಿಲ್ಲದ ಒಂದು ಚಿತ್ರ ಸರ್‌ಪ್ರೈಸ್ ಎಂಬಂತೆ ನೋಡಿಸಿಕೊಂಡುಬಿಟ್ಟಿತು. ಪ್ರೇಕ್ಷಕ ಖುಷಿಯಿಂದ ಚೂರು ಅತಿಯಾಗಿಯೇ ರಿಯಾಕ್ಟ್ ಮಾಡಿದ. ಹೆಚ್ಚೇ ಹೊಗಳಿದ. ಪ್ರೇಕ್ಷಕರ ಮಾತನ್ನು ಜನ ನಂಬಿದರು. ‘ವರ್ಡ್ ಆಫ್ ಮೌಥ್ ಪಬ್ಲಿಸಿಟಿ’ ವರ್ಕ್ ಆಯ್ತು.

ಚಿತ್ರ ನಂಬಲಾಗದಂಥ ದೊಡ್ಡ ಗೆಲುವು ಸಾಧಿಸಿ ಬಿಟ್ಟಿತು. ಅದರರ್ಥ ಪ್ರೇಕ್ಷಕ ಚಿತ್ರಮಂದಿರಗಳಿಂದ ದೂರವಾಗಿಲ್ಲ. ಸಿನಿಮಾ ಹುಚ್ಚು ಅವನಲ್ಲಿ ಚೂರೂ ಕಮ್ಮಿ ಆಗಿಲ್ಲ. ಅವನಿಗಿಷ್ಟ ಆಗುವ ಸಿನಿಮಾ ಕೊಡುತ್ತಿಲ್ಲ. ಅವನು ಟ್ರೈ ಕೂಡ ಮಾಡೋಕೆ ಬರಲು ಹೆದರುವಷ್ಟು ಕೆಟ್ಟ ಸಿನಿಮಾ ಕೊಟ್ಟು ಅವನನ್ನು ಥಿಯೇಟರ್‌ಗಳಿಂದ ದೂರ ಇಟ್ಟಿದ್ದಾರೆ.

ಬೇರೆ ಭಾಷೆಯ ಸಿನಿಮಾಗಳಿಗೆ ಪ್ರೇಕ್ಷಕ ಥಿಯೇಟರ್‌ಗೆ ಬರುತ್ತಾನೆ ಅಂದ ಮೇಲೆ ಕನ್ನಡಕ್ಕೂ ಬರಲೇಬೇಕಲ್ವಾ? ಇನ್ನು, ದೊಡ್ಡ ಬಜೆಟ್, ರಿಚ್ ಸಿನಿಮಾಗಳನ್ನು ಮಾತ್ರ ಥಿಯೇಟರಲ್ಲಿ ನೋಡ ಬಯಸುತ್ತಾನೆ ಅನ್ನೋದು ಕೂಡ ಶುದ್ಧ ಮಿಥ್! ಆತನಿಗೆ ಬಜೆಟ್, ಮೇಕಿಂಗ್ ಇವ್ಯಾವುದೂ ಮುಖ್ಯವಲ್ಲ.

‘ಸು ಫ್ರಮ್ ಸೋ’ ಚಿತ್ರವನ್ನು ಕಿಲಕಿಲ ನಗುಗಳ ಮಧ್ಯೆ ತುಂಬಿದ ಥಿಯೇಟರ್‌ನಲ್ಲಿ ನೋಡುವ ಮಜವೇ ಬೇರೆ. ಅದು ಒಟಿಟಿಯಲ್ಲಿ ಸಿಗುವುದಿಲ್ಲ. ಕನ್ನಡದ ಸ್ಟಾರ್‌ಗಳ ಬಾಯಿಂದ ಈ ಚಿತ್ರದ ಗೆಲುವಿನ ಬಗ್ಗೆ ಮಾತುಗಳೇ ಬರುತ್ತಿಲ್ಲ. ಒಂದು ಹೊಗಳಿಕೆ ಮೆಚ್ಚುಗೆ ಏನೂ ಇಲ್ಲ. ನಿರ್ಮಾಪಕರೂ ದಂಗಾಗಿzರೆ. ‘ಸು ಫ್ರಮ್ ಸೋ’ ಕನ್ನಡ ಇಂಡಸ್ಟ್ರಿ ಪಾಲಿಗೆ ಒಂದು ಅಧ್ಯಯನದ ವಸ್ತು ಆಗಬೇಕು.

ಅದರರ್ಥ ಎಲ್ಲರೂ ಈಗ ‘ಸು ಫ್ರಮ್ ಸೋ’ ಥರದ ಚಿತ್ರ ತೆಗೆಯಲು ಹೊರಡಬೇಕು ಅಂತಲ್ಲ. ಪ್ಯಾನ್ ಇಂಡಿಯಾ ಭ್ರಮೆ, ಸ್ಟಾರ್ ಭ್ರಮೆ, ಟಿವಿ ಓಟಿಟಿ ಭ್ರಮೆ ಇವೆಲ್ಲದರಿಂದ ಹೊರಬಂದು, ಜನಕ್ಕೆ ಹತ್ತಿರವೆನಿಸುವ, ಎರಡು ಗಂಟೆ ಮೈಮರೆಸುವ ಚಿತ್ರಗಳನ್ನು ಚಿಕ್ಕ ಬಜೆಟ್‌ನಲ್ಲಿ, ಕಮ್ಮಿ ಅವಧಿ ಯಲ್ಲಿ ಗಟ್ಟಿ ಕತೆ-ನಿರೂಪಣೆಯೊಂದಿಗೆ ಮಾಡುವ, ಹೊಸ ಥರದಲ್ಲಿ ಪ್ರಾಮಾಣಿಕ ಪ್ರಚಾರ ಮಾಡುವ ತಂತ್ರಗಳನ್ನು ಕಲಿಯಬೇಕು. ಆಗ ಕನ್ನಡ ಚಿತ್ರರಂಗವು ಮಲಯಾಳಂ ಇಂಡಸ್ಟ್ರಿಗೆ ಸೆಡ್ಡು ಹೊಡೆಯುತ್ತದೆ.

ನಾವು ಹಾಲಿವುಡ್-ಬಾಲಿವುಡ್ ಜತೆ ಸ್ಪರ್ಧಿಸಿ ಏನೂ ಆಗಬೇಕಿಲ್ಲ. ತಮಿಳು-ಮಲಯಾಳಂ ಚಿತ್ರರಂಗಗಳು ಕೊಡುವಂಥ ಮನಮುಟ್ಟುವ ಮನರಂಜನಾ ಚಿತ್ರಗಳನ್ನು ನಮ್ಮಲ್ಲಿ ಮಾಡಬೇಕಿದೆ. ಅಂಥ ಕಥೆ ಹೇರಳವಾಗಿವೆ. ಹಣವಿರುವವರು, ನಟನೆಯ ಹಸಿವಿರುವ ನಟರು, ತಂತ್ರಜ್ಞರು ಒಂದುಗೂಡಬೇಕಷ್ಟೆ. ಸ್ಟಾರ್‌ಗಳು, ಪ್ಯಾನ್ ಇಂಡಿಯಾ ಪ್ರಜೆಗಳು ಅ ಇರಲಿ.

ನವೀನ್‌ ಸಾಗರ್‌

View all posts by this author