ಸಂಪಾದಕೀಯ ಸದ್ಯಶೋಧನೆ
1923ರಲ್ಲಿ ಹೆನ್ರಿ ಲೂಸ್ ಮತ್ತು ಬ್ರಿಟನ್ ಹ್ಯಾಡನ್ ಅವರಿಂದ ಪ್ರಾರಂಭವಾದ ‘ಟೈಮ್’ ನಿಯತ ಕಾಲಿಕೆಯ ಮುಖಪುಟವು (ಕವರ್) ಜಾಗತಿಕ ಪತ್ರಿಕೋದ್ಯಮದ ಇತಿಹಾಸದಲ್ಲಿ ಅತ್ಯಂತ ಪ್ರಭಾವ ಶಾಲಿ ದೃಶ್ಯ ಸಂವಹನ ಮಾಧ್ಯಮವಾಗಿ ಗುರುತಿಸಿಕೊಂಡಿದೆ. ಕೇವಲ ಒಂದು ವಾರ ಪತ್ರಿಕೆಯ ಕವರ್ ಪುಟವಾಗಿ ಉಳಿಯದೇ, ಇಡೀ ಪ್ರಪಂಚದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಮಜಲುಗಳನ್ನು ದಾಖಲಿಸುವ ಐತಿಹಾಸಿಕ ಫಲಕವಾಗಿ ಇದು ರೂಪಾಂತರ ಗೊಂಡಿದೆ.
ಒಂದು ಘಟನೆ ಅಥವಾ ವ್ಯಕ್ತಿಯನ್ನು ಜಾಗತಿಕ ಮಟ್ಟದ ಚರ್ಚೆಯ ಕೇಂದ್ರಬಿಂದುವನ್ನಾಗಿ ಪರಿವರ್ತಿಸುವ ಶಕ್ತಿ ಈ ಮುಖಪುಟಕ್ಕಿದೆ. ‘ಟೈಮ್’ ಮುಖಪುಟದ ದೃಶ್ಯ ವಿನ್ಯಾಸವು ಅತ್ಯಂತ ವಿಶಿಷ್ಟ ಹಾಗೂ ತಕ್ಷಣ ಗುರುತಿಸಬಹುದಾದ ಶೈಲಿಯನ್ನು ಹೊಂದಿದೆ. ಮುಖಪುಟವನ್ನು ಸುತ್ತುವರಿದಿರುವ ಗಾಢ ಕೆಂಪು ಬಣ್ಣದ ಬಾರ್ಡರ್ ನಿಯತಕಾಲಿಕೆಯ ಪ್ರಮುಖ ಗುರುತಾಗಿದೆ.
1927ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಈ ಕೆಂಪು ಚೌಕಟ್ಟು, ಕಿಯಾ ಅಥವಾ ನ್ಯೂಸ್ ಸ್ಟ್ಯಾಂಡ್ಗಳಲ್ಲಿ ನೂರಾರು ಪತ್ರಿಕೆಗಳ ನಡುವೆ ಟೈಮ್ ಮ್ಯಾಗಜೀನ್ ಎದ್ದು ಕಾಣುವಂತೆ ಮಾಡಿತು. ಕಪ್ಪು ಬಣ್ಣದ ಸೆರಿಫ್ ಶೈಲಿಯ ’ TIME’ ಲೋಗೋ ಮತ್ತು ಕೆಂಪು ಚೌಕಟ್ಟಿನ ಸಂಯೋಜನೆಯು ಇಂದಿಗೂ ಜಾಗತಿಕ ಬ್ರ್ಯಾಂಡಿಂಗ್ ಲೋಕಕ್ಕೆ ಶ್ರೇಷ್ಠ ಉದಾಹರಣೆಯಾಗಿದೆ. ಈ ವಿನ್ಯಾಸದಲ್ಲಿ ಕೆಂಪು ಬಣ್ಣವನ್ನು ಬದಲಾಯಿಸುವುದು ಅತ್ಯಂತ ಅಪರೂಪದ ಹಾಗೂ ಗಂಭೀರ ಸಂದರ್ಭಗಳಲ್ಲಿ ಮಾತ್ರ ನಡೆಯುತ್ತದೆ.
ಇದನ್ನೂ ಓದಿ: Vishweshwar Bhat Column: ಇದು ಸಾಹಿತ್ಯ ಲೋಕದ ಅತ್ಯಂತ ದುಬಾರಿ ದೋಷ ತಿದ್ದುಪಡಿ !
ಸೆಪ್ಟೆಂಬರ್ 11, 2001ರ ಭಯೋತ್ಪಾದಕ ದಾಳಿಯ ನಂತರ ಬಿಡುಗಡೆಯಾದ ವಿಶೇಷ ಸಂಚಿಕೆ ಯಲ್ಲಿ ಶೋಕ ಮತ್ತು ಸಂತಾಪದ ಸಂಕೇತವಾಗಿ ಕೆಂಪು ಬಣ್ಣದ ಬದಲಿಗೆ ಕಪ್ಪು ಬಾರ್ಡರ್ ಬಳಸಲಾಗಿತ್ತು. ಪರಿಸರ ಕಾಳಜಿಯ ವಿಶೇಷ ಸಂಚಿಕೆಯಲ್ಲಿ ಹಸಿರು ಬಾರ್ಡರ್ ನೀಡಲಾಗಿತ್ತು. ಇಂಥ ಬದಲಾವಣೆಗಳು ಆಯಾ ಘಟನೆಗಳ ಭೀಕರತೆ ಅಥವಾ ಗಂಭೀರತೆಯನ್ನು ಓದುಗರಿಗೆ ಪದಗಳಿಲ್ಲದೆಯೇ ತಕ್ಷಣ ಮನದಟ್ಟು ಮಾಡಿಕೊಡುತ್ತವೆ.
‘ಟೈಮ್’ ಮುಖಪುಟದ ಕಲಾತ್ಮಕ ವಿಧಾನವು ಕಾಲಾನಂತರದಲ್ಲಿ ವಿಕಸನಗೊಂಡಿದೆ. ಆರಂಭಿಕ ದಶಕಗಳಲ್ಲಿ ಕಪ್ಪು-ಬಿಳುಪು ಮತ್ತು ತೈಲವರ್ಣದ ಭಾವಚಿತ್ರಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ತೀಕ್ಷ್ಣ ಛಾಯಾಗ್ರಹಣ, ಡಿಜಿಟಲ್ ಇಲ್ಲಸ್ಟ್ರೇಷನ್, ಕೊಲಾಜ್ ಹಾಗೂ ಮಿನಿಮಲಿ (ಅತಿ ಕಡಿಮೆ) ಗ್ರಾಫಿಕ್ ವಿನ್ಯಾಸಗಳನ್ನು ಅಳವಡಿಸಿಕೊಳ್ಳಲಾಯಿತು.
ಮುಖಪುಟದಲ್ಲಿ ಬಳಸುವ ಮುಖಭಾವ, ಬೆಳಕು-ನೆರಳಿನ ಸಂಯೋಜನೆ ಮತ್ತು ಮುದ್ರಣಕಲೆ ಕೇವಲ ಆಕರ್ಷಣೆಗೆ ಸೀಮಿತವಾಗದೆ, ಆ ವ್ಯಕ್ತಿ ಅಥವಾ ವಿಷಯದ ಸುತ್ತಲಿನ ನೈತಿಕ, ರಾಜಕೀಯ ಸತ್ಯವನ್ನು ಬಯಲಿಗೆಳೆಯುವಂತೆ ರೂಪಿಸಲಾಗುತ್ತದೆ. ‘ಟೈಮ್’ ಮುಖಪುಟದಲ್ಲಿ ಸ್ಥಾನ ಪಡೆಯುವುದು ಜಾಗತಿಕ ಮಟ್ಟದಲ್ಲಿ ಒಂದು ಮಹತ್ವದ ಮೈಲಿಗಲ್ಲು ಅಥವಾ ಅಧಿಕಾರದ ಮನ್ನಣೆ ಎಂದೇ ಪರಿಗಣಿತವಾಗಿದೆ.
ಯಾವುದೇ ವ್ಯಕ್ತಿ ಈ ಮುಖಪುಟದಲ್ಲಿ ಕಾಣಿಸಿಕೊಂಡರೆ, ಆತ ಜಾಗತಿಕ ಪ್ರಭಾವ ಹೊಂದಿದ್ದಾನೆ ಎಂದೇ ಭಾವಿಸಲಾಗುತ್ತದೆ. ಮಹಾತ್ಮ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ, ಇಂದಿರಾ ಗಾಂಧಿಯವರಿಂದ ಹಿಡಿದು ಆಧುನಿಕ ತಂತ್ರಜ್ಞಾನ ದಿಗ್ಗಜರಾದ ಸ್ಟೀವ್ ಜಾಬ್ಸ್ ಹಾಗೂ ಎಲಾನ್ ಮಸ್ಕ್ ವರೆಗೆ ಅನೇಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಇದು ಕೇವಲ ಪ್ರಚಾರವಲ್ಲದೆ, ಇತಿಹಾಸದ ಗತಿಯನ್ನು ನಿರ್ಧರಿಸುವ ಶಕ್ತಿಗಳಿಗೆ ಸಿಗುವ ಮನ್ನಣೆಯಾಗಿದೆ. ‘ಟೈಮ್’ ಮುಖಪುಟವು ಕೇವಲ ವ್ಯಕ್ತಿಗಳ ಆರಾಧನೆಗೆ ಸೀಮಿತವಾಗಿಲ್ಲ. ವಿವಾದಾತ್ಮಕ ಮತ್ತು ಐತಿಹಾಸಿಕ ಕ್ಷಣಗಳನ್ನು ನಿಷ್ಠುರವಾಗಿ ಬಿಂಬಿಸಲು ಹೆಸರುವಾಸಿಯಾಗಿದೆ. 1966ರ ’ Is God Dead?’ (ದೇವರು ಸತ್ತಿದ್ದಾನೆಯೇ?) ಎಂಬ ಕವರ್ ಯಾವುದೇ ಚಿತ್ರವಿಲ್ಲದೆ ಕೇವಲ ಕೆಂಪು ಅಕ್ಷರಗಳಿಂದ ಮುದ್ರಿತವಾಗಿ ದೊಡ್ಡ ಧಾರ್ಮಿಕ ಚರ್ಚೆಯನ್ನು ಹುಟ್ಟುಹಾಕಿತ್ತು.
ಅಡಾಲ್ಫ್ ಹಿಟ್ಲರ್, ಒಸಾಮಾ ಬಿನ್ ಲಾಡೆನ್ ಹಾಗೂ ಅಬು ಮುಸಾಬ್ ಅಲ್-ಜರ್ಕಾವಿಯಂಥ ದುಷ್ಟ ಶಕ್ತಿಗಳ ಮುಖದ ಮೇಲೆ ಕೆಂಪು ಕ್ರಾಸ್ (X) ಗುರುತು ಹಾಕಿದ ಮುಖಪುಟಗಳು, ಕ್ರೂರತೆಯ ಅಂತ್ಯ ಮತ್ತು ನ್ಯಾಯದ ವಿಜಯವನ್ನು ಸಾರಿದ ಐತಿಹಾಸಿಕ ಸಂಕೇತಗಳಾಗಿವೆ.
ಪ್ರತಿ ವರ್ಷ ಪ್ರಕಟವಾಗುವ ‘ಪರ್ಸನ್ ಆಫ್ ದಿ ಇಯರ್’ (ವರ್ಷದ ವ್ಯಕ್ತಿ) ಮುಖಪುಟವು ‘ಟೈಮ್’ ನಿಯತಕಾಲಿಕೆಯ ಅತ್ಯಂತ ನಿರೀಕ್ಷಿತ ಆವೃತ್ತಿಯಾಗಿದೆ. 1927ರಲ್ಲಿ ಚಾರ್ಲ್ಸ್ ಲಿಂಡ್ಬರ್ಗ್ ಅವರೊಂದಿಗೆ ಆರಂಭವಾದ ಈ ಸಂಪ್ರದಾಯವು ಒಳ್ಳೆಯದೋ ಅಥವಾ ಕೆಟ್ಟದ್ದೋ, ಆ ವರ್ಷದ ಜಗತ್ತಿನ ವಿದ್ಯಮಾನಗಳ ಮೇಲೆ ಗರಿಷ್ಠ ಪ್ರಭಾವ ಬೀರಿದ ಶಕ್ತಿಯನ್ನು ಗುರುತಿಸುತ್ತದೆ.